Thursday, February 15, 2018

ಬಿಲ್ಲವರ ಗುತ್ತು ಮನೆತನಗಳು (ಸರ್ವೆದೋಲ ಗುತ್ತು)

ಪುತ್ತೂರು ಸರ್ವೆ ಗ್ರಾಮದಲ್ಲಿರುವ ಸರ್ವೆದೋಲ ಗುತ್ತಿನವರು ಮೂಲ್ಯಣ್ಣ ಬಳಿಯವರು. ವಿಶಾಲವಾದ ಸುತ್ತು ಮುದಲಿನ ಮನೆಯ ಒಂದು ಭಾಗ ಮಾತ್ರ ಈಗ ಉಳಿದಿದೆ. ಹಿಂದಿನ ಕಾಲದಲ್ಲಿ ೮೦೦ ಮುಡಿ ಅಕ್ಕಿ ಆಸ್ತಿ ಇದ್ದ ಶ್ರೀಮಂತ ಗುತ್ತು ಮನೆ. ಈಡೀ ಗ್ರಾಮದಲ್ಲಿ ಈ ಮನೆತನದ ಭೂಮಿ ಹರಡಿತ್ತು. ಈಗ ಕುಟುಂಬದೊಳಗೆ ಜಮೀನು ಪಾಲು ಪಟ್ಟಿಯಾಗಿ ಹಂಚಿ ಹೋಗಿದೆ. ಇದರ ಭೂಮಿಗೆ ಪ್ರವೇಶಿಸುವಾಗಲೇ ವಿಶಾಲವಾದ ಜೋಡು ಕಂಬಳ ಗದ್ದೆಗಳು ಎದುರಾಗುತ್ತದೆ. ಹಿಂದೆ ವಿಜೃಂಭಣೆಯಿಂದ ಕಂಬಳ ನಡೆಯುತ್ತಿತ್ತು. ಪ್ರಾಚೀನ ತುಳುನಾಡಿನಲ್ಲಿ ನೂರಾರು ಬಿಲ್ಲವರ ಗುತ್ತುಗಳು, ಬರ್ಕೆ, ನಟ್ಟಿಲ್ಲು ಗಳು ಜನನ ಗಳು ಕಂಬಳವನ್ನು ನಡೆಸುತ್ತಿದ್ದವು. ಇಂದೂ ಕೂಡ ಮೂಲ್ಕಿಯ ಅರಸು ಪಟ್ಟದ ಕಂಬಳಕ್ಕೆ ಬ್ರಹ್ಮಾವರ ಸಮೀಪದ ಚೇರ್ಕಾಡಿಯ ಕಂಬಳ ಗದ್ದೆಗೆ ಬಿಲ್ಲವರ ಕೋಣಗಳೇ ಮೊದಲು ಇಳಿಯಬೇಕೆಂಬ ಸಂಪ್ರದಾಯ ಇದೆ. ದೈವದ ಪಟ್ಟದ ಕಂಬಳ ಇದ್ದಲ್ಲಿ ಅದು ಯಾವುದೇ ಜಾತಿಗೆ ಸೇರಿರಲಿ ಕಂಬಳದ ದೈವವಾದ ಕಂಬಳತ್ತಾಯನು ಬಿಲ್ಲವರ ಮನೆಗೆ ಬಂದು ವೇಷದರಿಸುವುದು ಸಂಪ್ರದಾಯ. ಇದಕ್ಕೆ ಅನೇಕ ಉದಾಹರಣೆಗಳು ನಮಗೆ ಸಿಗುತ್ತದೆ. ಇದು ಬಿಲ್ಲವರ ಅಧಿಕೃತ ಬೇಸಾಯತನವನ್ನು ಪ್ರತಿನಿಧಿಸುವಂತಿರ ಬೇಕು.

ಸರ್ವೆದೋಲ ಗುತ್ತಿಗೆ ಈಗ ಯಜಮಾನರಾಗಿರುವ ಬಾಬು ಪೂಜಾರಿಯವರು ಈ ಗುತ್ತಿನ ಮಾಹಿತಿ ನೀಡಿದರು.ಹಿರಿಯ ತಲೆಮಾರಿನ ಎಲ್ಯಣ್ಣ, ಬಾಲಪ್ಪ, ಅಕ್ಕಿ, ವೆಂಕಪ್ಪ ಪೂಜಾರಿಯವರು ಈ ಮನೆತನದ ಪ್ರಸಿದ್ಧ ವ್ಯಕ್ತಿಗಳು. ಬಾಲಜ್ಜನ ಕಾಲದಲ್ಲಿ ಈ ಗುತ್ತಿನಲ್ಲಿ ಸುಮಾರು ೫೦ ಮಂದಿ ಕುಟುಂಬ ಸದಸ್ಯರು ಇದ್ದರು. ಈಗ ಒಮ್ಮತದಿಂದ ಗುತ್ತಿನ ಆಸು ಪಾಸುಗಳಲ್ಲಿ ವಾಸಿಸುತ್ತಿದ್ದಾರೆ. ಈ ಗುತ್ತಿನ ಚೆನ್ನಕ್ಕೆ ಪ್ರಸಿದ್ಧ ನಾಟಿ ವೈದ್ಯೆಯಾಗಿದ್ದರು. ಜೋಡು ಕಂಬಳ ಇದ್ದಂತೆ ಜೋಡು ನಾಗ ಬನ ಇದೆ. ಒಂದು ಕುಟುಂಬದ ನಾಗ ಇನ್ನೊಂದು ಜಾಗದ ನಾಗ. ದೈವಗಳ ಕೊಡಿಯಡಿ ಎಂಬ ಮುಖ ಮಂಟಪ ಭವ್ಯವಾಗಿದೆ.

ಇದರಲ್ಲಿ ಉಳ್ಳಾಕುಲು, ಶಿರಾಡಿ, ವರ್ಣರ ಪಂಜುರ್ಲಿ, ಪಿಲಿ ಭೂತ, ಲೆಕ್ಕೇಸಿರಿ, ಬವನ, ಕಲ್ಲುರ್ಟಿ - ಪಂಜುರ್ಲಿ ಸತ್ಯಜಾವದೆ ದೈವಗಳಿವೆ.ಸರ್ವೆ ಗ್ರಾಮದ ಮೊದಲ ಗೌರವದ ಮನೆ ಇದಾಗಿದ್ದು ಗ್ರಾಮ ದೈವ ಶಿರಾಡಿ ಇಲ್ಲಿನ ಪ್ರಮುಖ ದೈವ. ವಿಶೇಷವೆಂದರೆ ಗುತ್ತು, ದೋಲ,ಬಾರಿಕೆ ಎಂಬ ಮೂರು ಗೌರವ ಮತ್ತು ಅಧಿಕಾರ ಈ ಒಂದೇ ಕುಟುಂಬಕ್ಕೆ ಸಿಕ್ಕಿರುವುದು. ಮರಕ್ಕೂರು ಜನನ ಹಾಗು ಈ ಗುತ್ತಿನವರು ಅಕ್ಕ ತಂಗಿಯವರೆಂದು ಹೇಳಲಾಗುತ್ತಿದ್ದು ಇದಕ್ಕೆ ಸಾಕ್ಷಿಯೆಂಬತೆ ದೈವ ನೇಮದಂದು ನುಡಿ ಕೊಡುವಾಗ " ಮೂಡಾಯಿ ಸರ್ವೆದ ಗುತ್ತು ಪಡ್ಡಾಯಿ ಮರಕ್ಕೂರು ಜನನ, ಏಳಿಲ್ಲ್ ದ ದೋಳ ಗುತ್ತಿಲ್ಲದ ಬಾರಿಕೆ" ಎಂದು ಹೇಳುತ್ತದೆ.

ಹಿಂದೆ ಯಜಮಾನರಾಗಿದ್ದ ಎಸ್.ಡಿ. ತಿಮ್ಮಪ್ಪ ಪೂಜಾರಿಯವರು ಅತ್ಯಂತ ಹೆಸರುವಾಸಿಯಾಗಿದ್ದರು. ಇವರು ಮುಂಡೂರು ಪಂಚಾಯತ್ ನ ಮೊದಲ ಅಧ್ಯಕ್ಷರಾಗಿದ್ದರು.ದೈವಗಳ ಚಾವಡಿಯಲ್ಲಿ ಹಳೆಯ ಪಂಚಾಯಿತಿ ಕಛೇರಿ ಇದ್ದು ನ್ಯಾಯ ತೀರ್ಮಾನಗಳು ನಡೆಯುತ್ತಿತ್ತು. ದೈವಗಳ ಸೇವೆಗೆಂದೇ ಸುಮಾರು ೪.೫ ಎಕರೆ ಭೂಮಿಯನ್ನು ಮೀಸಲಿರಿಸಿದ್ದಾರೆ. ಹಿಂದೆ ಹರಿ ಸೇವೆ ನಡೆಯುತ್ತಿತ್ತು. ಈಗ ಭಟ್ರು ಬಂದು ಮಣೆ ಪೂಜೆ ಮಾಡುತ್ತಾರೆ. ಹಲವು ವರ್ಷಗಳ ಕಾಲ ನಿಂತಿದ್ದ ದೈವಗಳ ನೇಮ ಈಗ ೧೪ ವರ್ಷಗಳಿಂದ ಮನೆಯ ಯಜಮಾನರ ಮುಂದಾಳ್ತನದಲ್ಲಿ ನಡೆಯುತ್ತಿದೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ.) ಸಂಕೇತ್ ಪೂಜಾರಿ PC - @kamalesh servedola guttu

0 comments: