ಹುಟ್ಟುವ ಮಗುವಿನ ಬಗ್ಗೆ ಜಾತಕ ಪಕ್ಷಿಯಂತೆ ಕಾಯುವುದೆ ಹೆಚ್ಚು. ಅದೇ ರೀತಿಯಲ್ಲಿ ನಾಮಕರಣವನ್ನು ಇದೇ ರೀತಿಯಲ್ಲಿ ಮಾಡಬೇಕೆನ್ನುವ ಮಹದಾಸೆಯೆ ಹೆಚ್ಚಾಗಿರುತ್ತೆ. ಅನಾದಿ ಕಾಲದಲ್ಲಿ ಬಿಲ್ಲವ ಸಮುದಾಯದಲ್ಲಿ ಮಗುವಿನ ನಾಮಕರಣ ಶಾಸ್ತ್ರವು ಅತ್ಯಂತ ಕ್ರಮಪ್ರಕಾರವಾಗಿ ಮತ್ತು ಒಂದು ಸೀಮಿತ ಚೌಕಟ್ಟಿನಲ್ಲಿ ನಡೆಯುತ್ತಿತ್ತು ಮತ್ತು ಅದ್ದೂರಿಗಿಂತ ಸಂಪ್ರದಾಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಆದರೆ ಇಂದು ಬರುಬರುತ್ತಾ ಅದ್ದೂರಿ ಸಂಪ್ರದಾಯದ ಸ್ಥಾನವನ್ನು ಆಕ್ರಮಿಸಿದೆ. ಅನಾಧಿಯಲ್ಲಿ ಮಗುವಿನ ನಾಮಕರಣಕ್ಕೆ ದಿನ ನೋಡುವ ಕ್ರಮವಿಲ್ಲ ಹುಟ್ಟಿದ 15 ನೇ ದಿನದಂದು ಮಗುವಿನ ತೊಟ್ಟಿಲ ಶಾಸ್ತ್ರ. ಅದು ಒಂದು ರೀತಿಯ ನಿಗದಿತ ಸಮಯ. ಹಿಂದೆ ಎಲ್ಲ ಹೊಸ ತೊಟ್ಟಿಲನ್ನು ಕಟ್ಟುವ ಕ್ರಮವಿಲ್ಲ ಮನೆಯಲ್ಲಿದ್ದ ಹಳೆ ತೊಟ್ಟಿಲ್ಲನ್ನೆ ಕಟ್ಟುವ ಕ್ರಮ ಅಂದರೆ ಹೆಚ್ಚು ಮಕ್ಕಳು ಮಲಗಿದ ತೊಟ್ಟಿಲಲ್ಲಿ ಮಗು ಮಲಗಿದರೆ ಆಯುಸ್ಯ ಹೆಚ್ಚು ಎನ್ನುವ ಜಾನಪದ ನಂಬಿಕೆ. ಅದೇ ರೀತಿಯಲ್ಲಿ ಹಿಂದೆಲ್ಲ ಬೆತ್ತದಿಂದ ಹೆಣೆದ ಮತ್ತು ಹಲಸಿನ ಮರದಿಂದ ಮಾಡಿದ ತೊಟ್ಟಿಲುಗಳೆ ಹೆಚ್ಚು. ತೊಟ್ಟಿಲು ಕಟ್ಟೊದಿಕ್ಕಂತಲೆ ಅನೇಕ ಬಿಲ್ಲವ ಗುತ್ತು ಬಾರಿಕೆ ಮನೆಗಳಲ್ಲಿ ವ್ಯವಸ್ಥೆಗಳನ್ನು ನೋಡಬಹುದು.
ತೊಟ್ಟಿಲು ಕಟ್ಟಿದ ಮೇಲೆ ತೊಟ್ಟಿಲ ನಾಲ್ಕು ಕಡೆಗಳಲ್ಲಿ ಸೆಗಣಿಯ ಮುದ್ದೆಯ ಮೇಲೆ ಗರಿಕೆ ಹುಲ್ಲನ್ನು ಇಡುತ್ತಿದ್ದರು. ಅದೇ ರೀತಿಯಲ್ಲಿ ತೊಟ್ಟಿಲ ತಳದಲ್ಲಿ ಕಾಸರಕನ ಮರದ ಸಣ್ಣ ತುಂಡು, 5 ಕಾಸರಕನ ಎಲೆಯ ಕಟ್ಟು ಅಥವ ಮೂರು ತೆಂಗಿನ ಮರದ ಪೊರಕೆ ಕಡ್ಡಿ ಕಟ್ಟಿ ಇಡುತ್ತಾರೆ. ಇದೆಲ್ಲ ಮಗುವಿನ ಆಗಬಹುದಾದ ದುಷ್ಟ ಶಕ್ತಿಗಳ ಸೋಂಕಿನಿಂದ ತಡೆಯಲು ಇಡುವ ನಂಬಿಕೆಯ ರಕ್ಷಣೆ. ಅದರೊಂದಿಗೆ ತಲೆಯ ಬದಿಯಲ್ಲಿ ಒಂದು ಪುಸ್ತಕ ಮತ್ತು ಪೆನ್ನು ಇಡುತ್ತಿದ್ದರು. ಇದು ಮಗುವಿಗೆ ವಿಧ್ಯೆ ಒಳಿಯಲಿ ಎಂಬ ನಂಬಿಕೆಯಿಂದ. ಮಗುವಿನ ತಲೆ ನೇರವಾಗಿ ನಿಲ್ಲಲು ರಾಗಿಯ ದಿಂಬು ಮಾಡುತ್ತಿದ್ದರು. ಇದು ಮಗುವಿನ ತಲೆಯ ಆಕೃತಿಯ ಬೆಳವಣಿಗೆಗೆ ಸಹಕಾರಿ ಎಂಬ ಭಾವನೆಯಿಂದ. ತದನಂತರ ಮಗುವನ್ನು ಮಲಗಿಸುವ ಕ್ರಮ. ಇಲ್ಲಿ ಮಗುವಿನ ತಂದೆಯ ತಾಯಿ ಮತ್ತು ತಾಯಿಯ ತಾಯಿ ಅಥವ ಮಗುವಿನ ಅತ್ತೆಯಂದಿರು ಅಥವ ಚಿಕ್ಕಮ್ಮ ದೊಡ್ಡಮ್ಮಂದಿರು ಆಗಬಹುದು ತೊಟ್ಟಿಲ ಆಚೆ ಈಚೆ ನಿಲ್ಲಬೇಕು ಮೊದಲಿಗೆ ಕಲ್ಲು ಪುಡಿ ಮಾಡುವ ಕಲ್ಲನ್ನು (ಪುಡಿಂಕಲ್ಲ್ ) ಇಬ್ಬರು ಅಜ್ಜಿಯಂದಿರು ತೊಟ್ಟಿಲ ಅಡಿಯಿಂದ ಕೊಟ್ಟು ಅಲ್ಲಿಂದ ಆಚೆ ಕಡೆಯವರು ನಿಂತವರು ತಗೊಂಡು ತೊಟ್ಟಿಲಲ್ಲಿ ಇಟ್ಟು ಪುನಃ ಮೊದಲಿನಂತೆ ಮೂರು ಸಲ ಮಾಡಬೇಕು, ತದನಂತರ ಮಗುವನ್ನು ಈ ರೀತಿಯಾಗಿ ಮೂರು ಸಲ ಮಾಡಿ ಮಲಗಿಸಬೇಕು.
ಇಲ್ಲಿ ಮಗುವನ್ನು ತೊಟ್ಟಿಲ್ಲಲ್ಲಿ ಮಲಗಿಸುವವರು ಐದು ಬಳಿಯ(ಬರಿ) ಹೆಂಗಸರು . ಕಲ್ಲನ್ನು ಮೊದಲಿಗೆ ತೊಟ್ಟಿಲಲ್ಲಿ ಮಲಗಿಸುವ ಉದ್ದೇಶ ಮಗುವನ್ನು ಮೊದಲಿಗೆ ಮಲಗಿಸುವಾಗ ಬರಬಹುದಾದ ದುಷ್ಟ ಶಕ್ತಿಗಳ ತೊಂದರೆ ಕಲ್ಲಿನ ಮೇಲೆ ಬಡಿದು ಹೋಗಲಿ ಎನ್ನುವ ಉದ್ದೇಶ. ತದನಂತರ ಮಗುವಿನ ತಂದೆಯ ತಾಯಿ ಮಗುವಿನ ಕಿವಿಯಲ್ಲಿ ಮೂರು ಸಲ ಹೆಸರಿಡಿದು ಕೂಗುತ್ತಾರೆ. ತದನಂತರ ಮಗುವಿಗೆ ಬಂಗಾರದ ವಸ್ತುವಿನಿಂದ ಹಾಲು ಉಣಿಸುತ್ತಾರೆ. ಬಂದವರೆಲ್ಲ ಮಗುವಿನ ಕೈಯಲ್ಲಿ ಮುಯ್ಯಿ ಮಾಡುತ್ತಾರೆ. ತದನಂತರ ಬಂದವರಿಗೆಲ್ಲ ಕೋಳಿಯೂಟ. ತೊಟ್ಟಿಲ ಶಾಸ್ತ್ರ ಕೋಟಿ ಚೆನ್ನಯರಿಗೆ ಮಾಡಿದ ಬಗ್ಗೆ ಉಲ್ಲೇಖ ಪಾರ್ಧನದಲ್ಲಿದೆ. ಎಂಕ್ಲೆನ ಅಪ್ಪೆ ದೇಯಿ ಬೈದೆತಿ ಪೆದಿಯೆರ್ ಪುಟ್ಟಿ ಕುಲತ ಕುಲ ಪಂಡೆರ್ ಕಂಟ ಪತ್ಯೆರ್ ಪುರ್ಪ ದೆತ್ತೆರ್ ಬೊಂಡ ಕೊಡತೆರ್ ಶುದ್ದ ಮಂಡಲ ಮನ್ಪದೆರ್ ಎಂಕ್ಲೆ ಅಪ್ಪೆ ದೇಯಿ ಬೈದೆತಿಗ್ ಗೆಂದ ತಾರೆದ ಮಡಲ್ ಬೂರ್ದು ಅಂತರ ಬತ್ತ್ಂಡೆ ಸಮ್ಮಲೆ ಸಾಯನ ಬೈದ್ಯೆರ್ ಅಪ್ಪೆ ಇಜ್ಜಂದಿ ಜೋಕುಲೆಗ್ ತೊಟ್ಟಿಲ್ ಪಾಡೊಡು ಪಂಡೆರ್ ಬಾರೆಪಾಡಿ ಬಾಕಿತ್ತಿಮಾರ್ ಕಟ್ಟಪುನಿಟ್ ಒಂಜಿಲ ಕಂಡ ಪೆಲತ್ತಮರ ಉಂತದೆರ್ ಒಂಜಿ ತೊಟ್ಟಿಲ ತೋಡಾದೆರ್ ಎಂಕ್ ಪುದರ್ ಮಿಸಿರ್ ಬಲ್ಲಾಳೆ ಕೊಡಂಗೆಡ್ ಮಲ್ಲೆ ಕೋಟಿಸಾರ ದೇವೆರೆ ಪುದರ್ ಧರ್ಮದ ಜೀವ ಪಾಪದ ಮಗೆ ಕೋಟಿಂದೇರ್ ಎನ್ನ ಮೆಗ್ಯಗ್ ಪುದರ್ ದೀಯೆರ್ ಚೆನ್ನಾದೋಟು ದೇವೆರೆ ಪುದರ್ ಮಾಣಿ ಕೆಂಗುಡೆ ಕೋರಿ ಕೆಂಗುಡೆ ಕೋಪದ ಮಗೆ ಮೆಗ್ಯೆ ಚೆನ್ನಯೆ ಪುದರ್ ದೀಯೆರ್ ಒಕ್ಕಾನೂಲು ಕಟ್ಟಾದೆರ್ ಪೇರಾ ನೀರ ಕೊರ್ಪಾದೇರ್ ತುಲಾಭಾರ ತೂಕದೇರ್. ಈ ರೀತಿಯಲ್ಲಿ ಸಾಯನ ಬೈದ್ಯರು ಕೊಟಿ ಚೆನ್ನಯರಿಗೆ ಮಾಡಿದ ತೊಟ್ಟಿಲ ಶಾಸ್ತ್ರದ ಬಗ್ಗೆ ವಿವರಿಸಿದ್ದಾರೆ.
ಇಂದೆಲ್ಲ ಸಂಪ್ರದಾಯದ ಪ್ರಕಾರವಾಗಿ ಇದು ನಡೆಯುತ್ತಿತ್ತು ಇಂದು ಅದು ಅನುಕೂಲ ಶಾಸ್ತ್ರವಾಗಿ ನಡೆಯುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಂಡೊಯ್ಯುವ ಪ್ರಯತ್ನವನ್ನು ಮಾಡಬೇಕಾಗಿದೆ. ಸಂಪ್ರದಾಯಗಳಿಲ್ಲದ ಬದುಕು ಉಪ್ಪಿಲ್ಲದ ಅಡುಗೆಯಿದ್ದಂತೆ. ಎಲ್ಲವು ನಡೆಯುತ್ತೆ ಎನ್ನುವುದು ಈಗಿನವರ ಜಾಯಮಾನದಲ್ಲಿ ಎಲ್ಲವು ಗೋಜಲು ಗೋಜಲು. ಪ್ರಯತ್ನವನ್ನು ಮಾಡಬೇಕು ಫಲದ ಅಪೇಕ್ಷೆ ಬೇಡ. ಮಾಹಿತಿ: ಹೇಮಾವತಿ ಯಾನೆ ಹೊನ್ನಮ್ಮ ಅಗತ್ತಾಡಿ ದೋಲ ಬಾರಿಕೆ ಲೇಖನ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ
ತೊಟ್ಟಿಲ ಶಾಸ್ತ್ರ ಕೃಷ್ಣನ ಕಾಲದಿಂದಲೂ ಇದೆ
ReplyDelete