Thursday, April 25, 2019

ಬಡತನದ ಬೇಗೆಯಲ್ಲಿಯೂ ಅರಳಿದ ಪ್ರತಿಭೆ

ಮನೆಯವರೊಂದಿಗೆ ಕೂಡಿಕೊಂಡು ಸಂಸಾರದ ನೊಗ ಹೊರಲು ನೆರವಾಗುವುದರೊಂದಿಗೆ ಕಲಿಕೆಯಲ್ಲೂ ಮುಂದಿದ್ದ ವಿದ್ಯಾರ್ಥಿನಿಯೋರ್ವರು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೬೦೦ರಲ್ಲಿ ೫೮೯ ಅಂಕಗಳಿಸಿ ರಾಜ್ಯಕ್ಕೆ ಆರನೇ ಸ್ಥಾನ ಗಳಿಸುವ ಮೂಲಕ ಛಲವಿದ್ದರೆ ಯಾವುದೇ ಸೌಲಭ್ಯವಿಲ್ಲದೆಯೂ ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಪುತ್ತೂರಿನ ಅಂಬಿಕಾ ವಿದ್ಯಾಲಯದ ದ್ವಿತೀಯ ಪಿಯುಸಿ ಪಿಸಿಎಂಬಿ ವಿದ್ಯಾರ್ಥಿನಿ, ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ನಾಗೇಶ್ ಮತ್ತು ವನಜಾ ದಂಪತಿಯ ಪುತ್ರಿ ಸ್ನೇಹಾ ಎಂಬಾಕೆಯೇ ಬಡತನದಲ್ಲೂ ಅರಳಿದ ಹೂ. ಈಕೆಯ ತಂದೆ ನಾಗೇಶ್ ಬೀಡಿ ಫ್ಯಾಕ್ಟರಿಯಲ್ಲಿ ಕಾರ್ಮಿಕ. ತಾಯಿ ವನಜಾ ಗೃಹಿಣಿ. ಬರುವ ಆದಾಯ ಕುಟುಂಬ ನಿರ್ವಹಣೆಗೆ ಸಾಕಾಗದು ಎನ್ನುವುದಕ್ಕೆ ಮನೆಯಲ್ಲಿ ಬೀಡಿಗೆ ಲೇಬಲ್ ಹಾಕುವ ಹೆಚ್ಚುವರಿ ಕಾಯಕ ಇವರದ್ದು. ಪೋಷಕರ ಈ ಕಾಯಕದಲ್ಲಿ ಮನೆಯ ಮಕ್ಕಳೂ ಕೈ ಜೋಡಿಸಿ ಸಹಕರಿಸುವುದರಿಂದ ಸಂಸಾರ ರಥ ಅಲ್ಲಿಂದಲ್ಲಿಗೆ ತೃಪ್ತಿದಾಯಕವಾಗಿ ಸಾಗುತ್ತಿದೆ.

ಮಗಳ ಸಾಧನೆ ತೃಪ್ತಿ ತಂದಿದೆ: ಈಕೆಯ ಸಾಧನೆಯ ಬಗ್ಗೆ ಅಭಿಮಾನದಿಂದಲೇ ಮಾತನಾಡಿದ ಈಕೆಯ ತಂದೆ ನಾಗೇಶ್‌ರವರು, ಮನೆಯಲ್ಲಿ ಬಡತನವಿತ್ತು. ಮಗಳು ಕಲಿಕೆಯಲ್ಲಿ ಮುಂದಿದ್ದಳು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 94.8 ಶೇ. ಅಂಕ ಗಳಿಸಿದ್ದರಿಂದ ಆಕೆಯ ಆಪೇಕ್ಷೆಯ ಮೇರೆಗೆ ಪುತ್ತೂರಿನ ಅಂಬಿಕಾ ವಿದ್ಯಾಲಯಕ್ಕೆ ಪಿಯುಸಿ ಗೆ ಸೇರಿಸಿದೆ. ಅಲ್ಲಿನ ಶಿಕ್ಷಣ ಶುಲ್ಕ ಭರಿಸಲು ಸ್ವಲ್ಪ ಕಷ್ಟವಾದರೂ ಮಕ್ಕಳ ಹಿತಕ್ಕಾಗಿ ಅವರಿವರ ಸಹಕಾರ ಪಡೆದು ಶಿಕ್ಷಣ ಶುಲ್ಕವನ್ನು ಹೊಂದಿಸಿದೆ. ಈಗ ಮಗಳ ಸಾಧನೆ ರಾಜ್ಯಕ್ಕೆ 6ನೇ ಸ್ಥಾನ ಪಡೆದಿರುವುದು ಕಂಡು ತುಂಬಾ ಖುಷಿಯಾಗಿದೆ ಎನ್ನುತ್ತಾರೆ.

ತಂದೆ ತಾಯಿಯರೊಂದಿಗೆ ಸ್ನೇಹಾ ಬೆಳಗೆದ್ದು ಕಾಲೇಜಿಗೆ ಹೋಗುವ ಸ್ನೇಹಾ ಸಾಯಂಕಾಲ ಮನೆಗೆ ಬಂದ ಬಳಿಕ ಹೋಂ ವರ್ಕ್ ಕಡೆಗೆ ಗಮನ ಹರಿಸುವಳು. ರಾತ್ರಿ 8.30ರಿಂದ ಬೀಡಿ ಲೇಬಲ್ ಹಾಕುವ ಕಾರ್ಯಕ್ಕೆ ತೊಡಗಿಸಿ ರಾತ್ರಿ ಸುಮಾರು 11 ಗಂಟೆವರೆಗೆ ದುಡಿಯುತ್ತಿದ್ದಳು. ಬಳಿಕ ನಿದ್ರಿಸುವ ಅವಳು ನಸುಕಿನ ವೇಳೆ ೫.೩೦ ರ ಸುಮಾರಿಗೆ ಎದ್ದು ಓದುವಳು. ಕಾಲೇಜಿಗೆ ಹೋಗುವ ವೇಳೆ ಅವಳ ಸಹಪಾಠಿಗರೆಲ್ಲಾ ಅವರವರ ಹೆತ್ತವರ ವಾಹನದಲ್ಲಿ ಬಸ್ ನಿಲ್ದಾಣದವರೆಗೆ ಕರೆದೊಯ್ಯಲ್ಪಟ್ಟರೆ ಈಕೆ ಮಾತ್ರ ನಡೆದುಕೊಂಡೇ ಬಸ್ ನಿಲ್ದಾಣಕ್ಕೆ ತಲುಪುತ್ತಿದ್ದಳು. ಆಕೆಗೆ ಸವಲತ್ತು ಕೊಡುವ ಸೌಭಾಗ್ಯ ನಮಗೊದಗಲಿಲ್ಲ. ಆದರೆ ಆಕೆ ಶ್ರದ್ಧೆಯಿಂದ ಓದಿ ಉತ್ತಮ ಅಂಕ ಗಳಿಸಿರುವುದು ಆಕೆಗೆ ದೇವರೇ ಸೌಭಾಗ್ಯವನ್ನು ಒದಗಿಸಿದಂತಿದೆ ಎಂದು ಆಕೆಯ ತಂದೆ ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿದ್ಯಾ ಸಂಸ್ಥೆಗೆ, ಪೋಷಕರಿಗೆ ಸಮರ್ಪಿಸುವೆ: 98.3 ಶೇ ಅಂಕದೊಂದಿಗೆ ರಾಜ್ಯಕ್ಕೆ ಆರನೇ ಸ್ಥಾನ ಗಳಿಸಿದ ತಮ್ಮ ಕಲಿಕಾ ಸಾಧನೆಯ ಬಗ್ಗೆ ಏನನಿಸುತ್ತಿದೆ? ಎಂದು ಪ್ರಶ್ನಿಸಿದಾಗ ನನ್ನ ಈ ಸಾಧನೆಗೆ ನನಗೆ ಉತ್ತಮ ಶಿಕ್ಷಣ ನೀಡಿದ ಅಂಬಿಕಾ ವಿದ್ಯಾಲಯವೇ ಪ್ರಮುಖ ಕಾರಣ. ಇಂತಹ ವಿದ್ಯಾ ಸಂಸ್ಥೆಗೆ ಆರ್ಥಿಕವಾಗಿ ಬಡವಳಾದ ನನ್ನಂತವಳನ್ನು ಸೇರಿಸಲು ಮುಂದಾದ ನನ್ನ ಪೋಷಕರು ನನ್ನ ಸಾಧನೆಯ ಮೂಲ ಪ್ರೇರಕರು. ಅಂದು ಹತ್ತನೇ ತರಗತಿಯಲ್ಲಿ ಶೇ 94.8 ಅಂಕ ಗಳಿಸಿದ್ದಕ್ಕೆ ಅಪ್ಪ ಮುಂದಕ್ಕೆ ಎಲ್ಲಿ ಕಲಿಯುತ್ತೀಯ ಎಂದು ಕೇಳಿದಾಗ ಅಂಬಿಕಾ ವಿದ್ಯಾಲಯದಲ್ಲಿ ಕಲಿಯುವ ಆಸೆ ಇದೆ ಎಂದು ತಿಳಿಸಿದ್ದೆ. ಆ ಸಂಧರ್ಭದಲ್ಲಿ ಶೇ.98ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಿಗೆ ಅಲ್ಲಿ ಉಚಿತ ಶಿಕ್ಷಣದ ಸೌಲಭ್ಯವಿತ್ತು. ನನಗಾಗ ಅ ಮಟ್ಟದ ಅಂಕವಿರಲಿಲ್ಲ. ಹೀಗಾಗಿ ಪೂರ್ಣ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆಯ ನಡುವೆ ನನ್ನ ತಂದೆ ಅವರ ಸಂಕಷ್ಟವನ್ನೂ ಕಡೆಗಣಿಸಿ ನನ್ನನ್ನು ಅಂಬಿಕಾ ವಿದ್ಯಾಲಯಕ್ಕೆ ಸೇರಿಸಿದ್ದರು. ಹೆತ್ತವರು ತೋರಿದ ಈ ಧೈರ್ಯ ನನ್ನ ಪಾಲಿಗೆ ವರದಾನವಾಗಿದೆ. ಅದಕ್ಕಾಗಿ ನನ್ನ ಶ್ರೇಯಸ್ಸು ನನ್ನ ವಿದ್ಯಾಲಯಕ್ಕೆ ಮತ್ತು ಹೆತ್ತವರಿಗೆ ಸಮರ್ಪಿಸುವೆ ಎಂದರು.

ಲೇಬಲ್ ಕಾಯಕದಲ್ಲಿ ತೊಡಗಿರುವ ಸ್ನೇಹಾ ನಾಲ್ವರು ಸದಸ್ಯರಿರುವ ನನ್ನ ಮನೆಯಲ್ಲಿ ನಾನು ಮತ್ತು ನನ್ನ ಅಣ್ಣನ ಶಿಕ್ಷಣದ ಹೊಣೆ ಹೆತ್ತವರ ಮೇಲಿತ್ತು. ತಂದೆಯ ಸಂಪಾದನೆ ಕುಟುಂಬ ನಿರ್ವಹಣೆಗೆ ಸಾಲದೇ ಇದ್ದಾಗ ಮನೆಯಲ್ಲಿ ಬೀಡಿ ಲೇಬಲ್ ಹಾಕುವ ಕೆಲಸಕ್ಕೆ ಮುಂದಾದೆವು. ಮನೆಗೆ ಬಂದು ಹೋಂವರ್ಕ್ ಮುಗಿಸಿ ನಾನು ಬೀಡಿ ಲೇಬಲ್ ಹಾಕುತ್ತಿದ್ದೆ. ಹೆತ್ತವರು ನಮಗಾಗಿ ಶ್ರಮಿಸುತ್ತಿರುವಾಗ ಹೆತ್ತವರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿತ್ತು. ಅದನ್ನು ಮಾಡುತ್ತಿದ್ದೆ. ಈಗಲೂ ಮನೆಯಲ್ಲಿ ಬೀಡಿ ಲೇಬಲ್ ಹಾಕುತ್ತಿದ್ದೇನೆ.

ಮೆಡಿಕಲ್ ಕಲಿಯುವಾಸೆ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿರುವ ನಿಮ್ಮ ಕನಸೇನು? ಎಂದು ಪ್ರಶ್ನಿಸಿದಾಗ ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಮೆಡಿಕಲ್ ಓದುವೆ. ಇಲ್ಲವಾದರೆ ವೆಟರ್ನರಿ ಅಥವ ತೋಟಗಾರಿಕಾ ಕ್ಷೇತ್ರದತ್ತ ಗಮನ ಹರಿಸುವೆ ಎಂದು ಸ್ನೇಹಾ ತಿಳಿಸಿದ್ದಾರೆ. via :http://puttur.suddinews.com

0 comments: