Thursday, November 2, 2017

ಬಿಲ್ಲವರ ಕುಲ ಕಸುಬು ಯಾವುದು? ತುಳುನಾಡಿನ ಅಮೃತವೇ?

ಜಗತ್ತಿನಲ್ಲಿರುವ ಅನೇಕ ಜಾತಿಗಳು ಅಯಾ ಜನಾಂಗದ ಕುಲಕಸುಬುಗಳಿಂದ ಗುರುತಿಸಿಕೊಂಡಿದೆ. ಅದರಲ್ಲೂ ತುಳುನಾಡಿನ ಜಾತಿ ವ್ಯವಸ್ಥೆಯಲ್ಲಿ ಇದಕ್ಕೆ ಹಲವಾರು ನಿದರ್ಶನಗಳಿವೆ.‌ ಹಾಗೆಯ ಜಾತಿ ನಾಮಗಳೂ ಕೂಡ ಕುಲ ಕಸುಬುನಿನ‌ ಹೆಸರಿನೊಂದಿಗೆ‌ ಗುರುತಿಸಿ‌ ಕೊಂಡಿರುವುದೇ ಹೆಚ್ಚು‌. ಇದನ್ನು ಗಣನೆಗೆ ತೆಗೆದುಕೊಂಡರೆ ಕುಂಬಾರರು ಕುಂಬಾರಿಕೆಗೆ ಪ್ರಸಿದ್ದರು, ಗಾಣಿಗರು ಗಾಣಕ್ಕೆ ನಿಪುಣರು,‌ ಕಂಚಿನ ಕೆಲಸಕ್ಕೆ ಕಂಚಿಕಾರರು, ಮಡಿಗೆ ಮಡಿವಾಳರು, ಇವೆಲ್ಲದರಂತೆ ಬಿಲ್ಲಿಗೆ ಬಿಲ್ಲವರು. ಅಂದರೆ ತುಳುವಿನಲ್ಲಿ ಬಿರು ಪಗರಿಗೆ‌ *ಬಿರುವೆರ್*. ಹಾಗಾದರೆ ಇಲ್ಲಿ ಯಾವುದು ಮೂಲ ವೃತ್ತಿ? ಜಾತಿ ಗುರುತಿಸಿಕೊಂಡ ಬಗೆ‌‌ ಹೇಗೆ?.

ತುಳುನಾಡಿನ ಬಗ್ಗೆ ಸಮಗ್ರ ಅಧ್ಯಯನ ನಡೆಸಿರುವ ಮಹಾನ್ ವಿದ್ವಾಂಸರಾದ‌‌ ದಿ||ಪಾದೂರು ಗುರುರಾಜ ಭಟ್ಟರು ತುಳುನಾಡಿನ ಮೂಲ ಪರುಷರ ಪಟ್ಟಿಯಲ್ಲಿ ಬಿಲ್ಲವರಿಗೆ ಮತ್ತು ಮುಗೇರರಿಗೆ ಅಗ್ರಸ್ಥಾನ‌ ನೀಡಿದ್ದಾರೆ. ಇವರ ಮಹಾ ಗ್ರಂಥ "Studies of Tuluva History and Culture" ಮತ್ತು "ತುಳು ನಾಡು" ಕೃತಿಯಲ್ಲಿ ಇದರ ಉಲ್ಲೇಖ ವಿವರವಾಗಿ ‌ಇದೆ. ಇದರಲ್ಲದೇ ತುಳುನಾಡಿನ ಪ್ರಾಚೀನ ಇತಿಹಾಸಕ್ಕೆ‌ ಕೈಗನ್ನಡಿಯಾದ ದೈವಾರಾಧನೆಯಲ್ಲಿಯೂ ಕೂಡ ಬಿಲ್ಲವರದ್ದೇ ಮೇಲು ಗೈ. ಅತ್ಯಂತ ಪ್ರಾಚೀನ ದೈವಗಳ ಪಾಡ್ದನದಲ್ಲೂ ಬಿಲ್ಲವರ ಉಲ್ಲೇಖವಿದೆ. ಬಿಲ್ಲವರ ಮುಖಾಂತರ ‌ಬಂದಂತಹ ದೈವಗಳ ಪಟ್ಟಿ ಬೇರೆ ಯಾವ ಜಾತಿಯಲ್ಲಿನ ಇತಿಹಾಸ‌ ಕೆದಕಿದರೂ ಸಿಗುವುದಿಲ್ಲ. ದೈವಗಳ ಆರಾಧನೆಗೆ‌ ಮೊದಲ ಹೆಜ್ಜೆಯೇ ಬಿಲ್ಲವರು ಅದ್ದರಿಂದ ಆಡಳಿತಶಾಹಿ‌ ವ್ಯವಸ್ಥೆ ತುಳುನಾಡಿನಲ್ಲಿ ಬರುವ ಮುನ್ನ ದೈವಗಳ ಅರಾಧನೆ ಯಾವುದೇ ಒತ್ತಡವಿಲ್ಲದೆ ನಡೆಯುತ್ತಿತ್ತು ಮತ್ತು ಸ್ವತಂತ್ರತೆ ಇತ್ತು. ಇಲ್ಲಿ ದೈವಗಳ ಪೂಜೆಯೆ ಮುಖ್ಯವಾಗಿತ್ತು. ಅದನ್ನು ಆರಂಭಿಸಿ ಬಿಲ್ಲವರು‌ ಪೂಜಾರಿಗಳಾದರು.

ದೈವಾರಾಧನೆ ತುಳುನಾಡಿನಲ್ಲಿ ಪ್ರಧಾನವಾದುದರಿಂದ ಈ ಪೂಜೆಯ ಕರ್ತೃಗಳಾದ ಬಿಲ್ಲವರಿಗೆ ಪೂಜಾರಿ ಎನ್ನುವುದು ಜಾತಿಯ ಹೆಸರಾಗಿ ಪ್ರಸಿದ್ಧವಾಯಿತು. ಅದರೆ ಬಿಲ್ಲವ ಎಂಬ ಮೂಲ ಹೆಸರು ಪ್ರಧಾನವಾಗಿಯೇ ಉಳಿಯಿತೇ ಹೊರತು ಹೆಸರಿನೊಂದಿಗೆ ಗುರುತಿಸಿಕೊಂಡಿದ್ದು ಕಡಿಮೆ. ನಾಗರೀಕತೆ ಬೆಳೆದಂತೆ‌ ಆಹಾರದ ಬೇಟೆಗಾಗಿ ಬಳಸುತ್ತಿದ್ದ ಬಿರು ಪಗರಿಗಳು ಕಾಲಾಂತರದಲ್ಲಿ ರಕ್ಷಕ ಆಯುಧಗಳಾಗಿ ಬದಲಾದವು‌. ಕಾಡು ಪ್ರಾಣಿಗಳ ಹಾವಳಿಗೆ ಬೇಟೆಯ ಪ್ರಮುಖರಾಗಿ ನಿಂತ ಬಿಲ್ಲವರಿಗೆ ಆಗ‌ ಬಂದಂತಹ ಹೆಸರೇ ಬೋಂಟ್ರ. ಇದು ಬಿಲ್ಲವ ಪದಕ್ಕೆ ಜಾತಿ ನಾಮವಾಗಿ ಬಂದ ಪರ್ಯಾಯ ಪದ‌ ಎಂದರೆ ತಪ್ಪಾಗಲಾರದು. ಹಲವಾರು ಬೋಂಟ್ರ ಮನೆತನಗಳು ಬೆಳ್ತಂಗಡಿ, ಕಾರ್ಕಳ ಮುಂತಾದ ಕಡೆಗಳಲ್ಲಿ ಇದ್ದು ಪಟ್ಟದ ಹೆಸರಾಗಿಯೂ ಜಾತಿ‌ನಾಮವಾಗಿಯೂ‌ ಪ್ರಚಲಿತದಲ್ಲಿದೆ. ಆಯಾ ಮನೆತನಕ್ಕೆ ವಿಶೇಷವಾಗಿ ಬಿಲ್ಲವರಿಗೆ ಮಾತ್ರ ಇರುವ ಈ ಪದ ಮನೆತನದ ಸದಸ್ಯರಿಗೆ ಮುಂದುವರಿಯುತ್ತದೆ. ನಾಗರೀಕತೆ ಬೆಳೆದು ಬಂದಂತೆ ಕೃಷಿಯ ಅನ್ವೇಷಣೆ ಆದ‌ ಕಾಲಘಟ್ಟದಲ್ಲಿ ಬಿಲ್ಲವರು ಬಿರು ಪಗರಿಯನ್ನು ತಮ್ಮ ರಕ್ಷಣೆಯ ಆಯುಧಗಳಾಗಿಟ್ಟುಕೊಂಡು ಕೃಷಿಯನ್ನು‌ ಮುಖ್ಯ ‌‌ಕಸುಬಾಗಿ ಮಾಡಿಕೊಂಡರು. ಇದರೊಂದಿಗೆ ದೇಹಕ್ಕೆ ಅಂಟುವ ರೋಗಕ್ಕೆ ಔಷದೋಪಚಾರದ‌ ಶೋಧನೆ ಬಿಲ್ಲವರಿಂದ ತುಳುನಾಡಿನಲ್ಲಿ ಆರಂಭಗೊಂಡಿತ್ತು. ಇದರ ಫಲವಾಗಿ ಬಿಲ್ಲವರು ವೈದ್ಯ ವೃತ್ತಿಯ ಬೈದ್ಯರಾಗಿ ಪ್ರಸಿದ್ಧಿಗೊಂಡರು.

ಭತ್ತದ ಕೃಷಿಯಲ್ಲಿ ನಾಟಿಯು ಬಹಳ ಮುಖ್ಯ ಭಾಗ ಅದರಲ್ಲಿ ಪಳಗಬೇಕಾದರೆ ಕೃಷಿ ಮಾಡಿ ತಿಳಿದಿರಬೇಕು. ಕೃಷಿಯನ್ನೇ ಅವಲಂಬಿಸಿದ್ದ ಬಿಲ್ಲವರು ನಾಟಿ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಅಂತಹ ಬಿಲ್ಲವರ ಮನೆಗಳಿಗೆ ನಟ್ಟಿಲ್ಲು ಎಂಬ ವಿಶೇಷ ನಾಮಧೇಯ ಲಭಿಸಿತ್ತು. ನಟ್ಟಿಲ್ಲು ಎಂದರೆ ನಾಟಿ ಮಾಡುವ ಮನೆ. ಇದು ಬಿಲ್ಲವರಿಗೆ ಮಾತ್ರ ಇರುವಂತಹ ಮನೆ. ಹಾಗಾದರೆ ನಾಟಿಯ ಅನ್ವೇಷಕರು ಯಾರು? ಮತ್ತೆ ವಿವರಣೆ ಬೇಡ. ಇಂತಹ ಕೃಷಿ ಪ್ರಧಾನ ನಟ್ಟಿಲ್ಲುಗಳು ಅಧಿಕೃತ ‌ಬೇಸಾಯಗಾರರ‌ ಮುಖ್ಯ ಮತ್ತು ಪ್ರತಿಷ್ಠಿತ ‌ಮತೆತನಗಳಾಗಿ‌ ಗುರುತಿಸಿಕೊಂಡವು. ಈ ಬಗ್ಗೆ ಹಲವು ಬಿಲ್ಲವ ಇತಿಹಾಸಕಾರರು ತಮ್ಮ ಕೃತಿಯಲ್ಲಿ ಗುರುತಿಸಿದ್ದಾರೆ. ಆಡಳಿತ ವ್ಯವಸ್ಥೆ ತುಳುನಾಡಿನಲ್ಲಿ ‌ಬಲಗೊಂಡ ಸಮಯದಲ್ಲಿ ಹುಟ್ಟಿಕೊಂಡ ಅರಮನೆ, ಬೀಡು, ಗುತ್ತು, ಬರ್ಕೆ, ಬಾವ, ಪರಾರಿಗಳು ನಟ್ಟಿಲ್ಲಿನ‌ ಸ್ಥಾನಕ್ಕಿಂತ ಮೆಲ್ಪಟ್ಟು ನಟ್ಟಿಲ್ಲು ಇವುಗಳಲ್ಲಿ ಕೊನೆಯ ಸ್ಥಾನಕ್ಕಿಳಿದುದಲ್ಲದೆ ಬಿಲ್ಲವರ ಸ್ಥಾನಮಾನ ಮತ್ತು ಅವರ ಅಧಿಕೃತ ಭೂಮಿಯೂ ಪರಭಾರೆಯಾಗತೊಡಗಿತು. ಆರ್ಥಿಕವಾಗಿ ಮತ್ತು ಭೌತಿಕವಾಗಿ ಬಲಗೊಂಡಿದ್ದ ಬಿಲ್ಲವರಿಗೆ ಗುತ್ತು ಬರ್ಕೆಗಳ‌ ಸ್ಥಾನಮಾನ ಸಿಕ್ಕಿವೆ. ಗುತ್ತುಗಳು ಆಯಾ ಊರಿನ ಬಲಿಷ್ಠ ಮನೆತನಗಳಿಗೆ ಸಿಕ್ಕಿರುವುದರಿಂದಲೇ ಗುತ್ತುಗಳು ಹಲವು ಜಾತಿಗಳಲ್ಲಿ ಹಂಚಿಹೋಗಿವೆ. ಈ ಆಡಳಿತ ವ್ಯವಸ್ಥೆಯಲ್ಲಿ ಬಿಲ್ಲವರಿಗೆ ಮತ್ತೊಂದು ಬಿರುದು ಸಿಕ್ಕಿದ್ದು 'ನಾಯ್ಗ' ಎಂಬ ಪದದಿಂದ‌. ನಾಯಕ ಪದವೇ ತುಳುವಿನಲ್ಲಿ ನಾಯ್ಗವಾಗಿದೆ. ಇದು ಪಟ್ಟದ ಹೆಸರಾಗಿಯೂ ಬಳಕೆಯಲ್ಲಿವೆ. ಜಮೀನಿನ ಪರಭಾರೆಯ ಪ್ರಭಾವದಿಂದಾಗಿ ಕೃಷಿ ಬಹಳವಾಗಿ ಕೈತಪ್ಪಿತು, ವೈದ್ಯ ವೃತ್ತಿಗೆ, ನಾಟಿ ವೃತ್ತಿಗೆ ಮತ್ತು‌ ದೈವದ ಪೂಜಾರಿಯಾಗಿದ್ದ ಬಿಲ್ಲವರಿಗೆ ಅದರಲ್ಲೂ ಇತರ ವರ್ಗಗಳ ಪ್ರವೇಶವಾಗಿ ಎಲ್ಲದಕ್ಕೂ ಪೈಪೋಟಿಗಳು ಮೇಲಿಂದ ಮೇಲೆ ಬಂದವು‌. ಇಂತಹ ಸಂದರ್ಭದಲ್ಲಿ ಬೈದ್ಯರಾಗಿದ್ದ ಬಿಲ್ಲವರು ಔಷದೋಪಚಾರಕ್ಕೆ ಹೆಚ್ಚಾಗಿ ಬಳಸುತ್ತಿದ್ದ ಶೇಂದಿ ಯಾ ಕಳ್ಳು ಮದ್ಯಪಾನಕ್ಕೆ‌ ಪ್ರಚಾರ‌ ಪಡೆದಾಗ‌ ಅದರ‌ ಉತ್ಪಾದನೆಗೆ ಹೆಚ್ಚು ಒತ್ತುಕೊಟ್ಟರು. ಪ್ರಾರಂಭದಲ್ಲಿ ‌ಇದು ಯಾರಿಗೂ ಕೀಳಾಗಿ ಕಾಣಿಸಲಿಲ್ಲ. ಕಾಣಿಸುವಂತಹ ಅಸಹ್ಯ ವೃತ್ತಿಯಾಗಲೀ ಅಥವಾ ಪದಾರ್ಥವಾಗಲೀ ಇದಾಗಿರಲಿಲ್ಲ. ಬಿಲ್ಲವರು ವೈದ್ಯ ವೃತ್ತಿಯನ್ನು ಬಹಳವಾಗಿ ಪಳಗಿಸಿಕೊಂಡಿದ್ದರಿಂದ ಯಾವ ಗಿಡದಲ್ಲಿ ಯಾವ ಔಷಧೀಯ ಗುಣ‌ ಇದೆ‌ ಎಂಬುದನ್ನು ‌ತಿಳಿದಿದ್ದರು. ಅದ್ದರಿಂದಲೇ ಮೂರ್ತೆದಾರಿಕೆ ಅವರ‌ ಸ್ವಂತ ಸ್ವತ್ತಾಗಿ ಇಂದಿಗೂ ಉಳಿದಿದೆ. ಅದರೆ‌ ಯಾವಾಗ‌ ಪುರೋಹಿತ ಶಾಹಿ ವರ್ಗದ ಶ್ರೇಣೀಕೃತ ವ್ಯವಸ್ಥೆ ತುಳುನಾಡಿನಲ್ಲಿ ಬಲಗೊಂಡಿತೋತುಳುನಾಡನ್ನು ಕಟ್ಟಿದ ಬಿಲ್ಲವರು ಶೂದ್ರರಾದರು ಮತ್ತು ತುಳುನಾಡಿನ ಅಮೃತವಾಗಿದ್ದ‌ ಶೇಂದಿ ಅಮಲು ಪದಾರ್ಥವಾಗಿ ಮೌಲ್ಯ ಕಳೆದುಕೊಂಡಿತು. ಇದರಿಂದ ಬಿಲ್ಲವರ ಸ್ಥಿತಿ ಮತ್ತಷ್ಟು ಹೀನಾಯವಾಯಿತು. ಅದೆಷ್ಟೋ ಮತಾಂತರಗಳಿಗೆ ಇದು‌ ಕಾರಣವಾಯಿತು.

ತುಳುನಾಡಿನಲ್ಲಿ ಪ್ರಬಲ ಜನಾಂಗವಾಗಿದ್ದ ಬಿಲ್ಲವನ್ನು ಮಾನಸಿಕವಾಗಿ‌ ಕುಗ್ಗಿಸಲು ಶೇಂದಿಯನ್ನು ಬಿಲ್ಲವರ ಕುಲ ಕಸುಬನ್ನಾಗಿ ಮಾಡಿದರು. ಇದು ಮುಂದುವರಿದು ಇಂದಿನ ತನಕವೂ ಬಿಲ್ಲವರೆಂದರೆ ಶೇಂದಿ ತಯಾರಕರು ಎಂದು ಹೇಳುವ ಪರಿಸ್ಥಿತಿ.‌ ಒಂದು ವೇಳೆ ಶೇಂದಿ ತಯಾರಿಕೆಯೇ ಬಿಲ್ಲವರ ಕುಲಸುಬಾಗಿದ್ದರೆ ಆ‌ ಕುಲಕಸುಬಿನಿಂದ ಒಂದು ಜಾತಿ ನಾಮ‌ ಬರಬೇಕಿತ್ತಲ್ಲವೇ? ಮೂರ್ತೆ ಎಂಬ ಪದವು ಶೇಂದಿ ತಯಾರಿಕೆ‌ ತುಳುವಿನಲ್ಲಿ ಇರುವ ಪರ್ಯಾಯ ‌ಪದ. ಆದರೆ ಅದು‌ ಇದು ವರೆಗೂ ಜಾತಿ‌‌ ಪದವಾಗಿ ಗುರುತಿಸಿಕೊಂಡಿಲ್ಲ. ಹಾಗಾದರೆ ಶೇಂದಿ ಇಳಿಸುವುದು ಬಿಲ್ಲವರ‌ ಉಪವೃತ್ತಿ ಆಯಿತಲ್ಲವೇ. ಅನೇಕ ವಿದ್ವಾಂಸರು ‌ಇದನ್ನು ಒಪ್ಪಿಕೊಂಡಿದ್ದಾರೆ. ಆದರೆ ಅನ್ಯ‌ ಜಾತಿಯ ಕೆಲವರು ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಅದು ನಮಗೂ ಅಗತ್ಯವಿಲ್ಲ. ನಾವು ಮೊದಲಾಗಿ ಮಾಡ ಬೇಕಾದ ಕಾರ್ಯ ನಮ್ಮ‌ ಕುಲ ಕಸುಬು ಮೂರ್ತೆ‌ ಎಂದು ಹೇಳುವುದುನ್ನು ಬಿಡುವುದು. ನಾನು ಶೇಂದಿ ಇಳಿಸುವುದು ತಪ್ಪು ಎಂದಾಗಲೀ ಅಥವಾ ಅದು ಕೆಟ್ಟ ಪದಾರ್ಥ ಎಂದಾಗಲೀ ಹೇಳುತ್ತಿಲ್ಲ. ಆದರೆ ನಮ್ಮನ್ನು ಕುಗ್ಗಿಸಲು ಇದನ್ನು ಅಸ್ತ್ರವನ್ನಾಗಿ ಸಮಾಜದ ದುಷ್ಟ ಶಕ್ತಿಗಳು ಬಳಸುತ್ತಿದೆ. ನಮ್ಮ ಹಿರಿಯರೂ ಕೂಡ‌ ಅನೇಕರು ಕುಲ ಕಸುಬು‌ ಮೂರ್ತೆದಾರಿಕೆ ಎಂದು ಹೇಳುತ್ತಾರೆ. ಇವರಿಗೆ ತಿಳಿಹೇಳುವ ಅಗತ್ಯ ತುಂಬಾ‌ ಇದೆ. ನಾವು ಸಂದರ್ಶನ‌‌ ಮಾಡಿದ ಹಲವು ಪ್ರತಿಷ್ಠಿತ ‌ಮನೆತನಗಳಲ್ಲಿ ವಯಸ್ಸಾದ ಮನೆಯ‌ ಹಿರಿಯರು ಹೇಳುವುದೂ ಇದೇ‌ ಮೂರ್ತೆದಾರಿಕೆ. ಆದರೆ ಮನೆತನದ ಇತಿಹಾಸ ಕೆದಕಿದರೆ ಅವರಿಗೆ ಎಕರೆ ಗಟ್ಟಲೆ ಕೃಷಿ ಭೂಮಿ ಮತ್ತು ಹಟ್ಟಿಯ ತುಂಬಾ ಕೋಣ, ದನ ಕರುಗಳಿದ್ದ ಸಂಗತಿ ನಮಗೆ‌ ಗೊತ್ತಾಗುತ್ತದೆ. ಮೂರ್ತೆಯು ಔಷದೋಪಚಾರವಾಗಿ ಹೆಚ್ಚು ಬಳಕೆಯಲ್ಲಿತ್ತು.

ಹಾಗೇ‌ ಒಂದು ಅರೋಗ್ಯಕರ ಪಾನೀಯ. ಆದರೆ‌ ಅತಿ ಆದರೆ ಅಮೃತವೂ ವಿಷವೆಂಬಂತೆ‌ ತುಳುನಾಡಿನ ಈ ಅಮೃತವೂ ಅತಿಯಾಗಿ ಸೇವಿಸಿದರೆ ಅಮಲೇರುತ್ತದೆ. ತುಳುನಾಡಿನ ದೈವಾರಾಧನೆಯಲ್ಲಿ ಈ‌‌ ಶೇಂದಿಗೆ ಬಹಳ ಮಹತ್ವವಿದೆ. ಇದಕ್ಕೆ‌ ಇದನ್ನು ಈಗಲೂ ಅಮೃತವೆಂದೇ‌ ಕರೆಯುತ್ತಾರೆ. ಆದರೆ ಇದು ಬಿಲ್ಲವರು ಶೂದ್ರರು ಎಂದು‌ ಗುರುತಿಸಿಕೊಂಡಾಗ ಇದನ್ನು ಕೀಳಾಗಿ ನೋಡಲು ಆರಂಭಿಸಿದವರು ಹಲವರು. ಒಂದು ವೇಳೆ ಮೇಲ್ವರ್ಗವೆಂದೆನಿಸಿಕೊಂಡ ಕೆಲವು ಜಾತಿಗಳಲ್ಲಿ ಈ ಶೇಂದಿಯ ತಯಾರಿಕೆ ಆಗುತ್ತಿದ್ದರೆ ಇದರ ಮೌಲ್ಯ ಅದೆಷ್ಟು ಹೆಚ್ಚಿರುತ್ತಿತ್ತೋ?. ಬಹಷಃ‌ ತೀರ್ಥಕ್ಕೂ‌ ಮಿಗಿಲಾಗಿ ಬಳಸಲ್ಪಡುತ್ತಿತ್ತು. ಬಹಳಷ್ಟು ದೈವಗಳ ಪಾರ್ದನದಲ್ಲಿ ಶೇಂದಿಯ ಉಲ್ಲೇಖವಿದೆ. ಈ ಹಿಂದೆ ಹೇಳಿದಂತೆ ಇದು ತುಳುನಾಡಿನ ಅಮೃತ. ಈ ಅಮೃತಕ್ಕೆ ಇಂದಿಗೂ ದಂಡಿಗೆ ಯಾ ಪಲ್ಕಕ್ಕಿಯ ಮರ್ಯಾದೆ‌ ಸಲ್ಲುತ್ತದೆಂದರೆ ಇದರ ಮೌಲ್ಯ ಎಷ್ಟು ಎಂಬುದನ್ನು ತಿಳಿಯಬೇಕು. ಬೆಳ್ತಂಗಡಿ ಉಜಿರೆಯ ಸಮೀಪದ ಮುಂಡಾಜೆಯ ಮೂರ್ತಿಲ್ಲಾಯ ದೈವದ ನೇಮಕ್ಕೆ ಈ ದೈವಕ್ಕೆ ಸಂಬಂಧಪಟ್ಟ ಬೋಂಟ್ರರ ಮನೆಯಿಂದ ಶೇಂದಿಯನ್ನು ತರುತ್ತಾರೆ. ಇದನ್ನು ತರುವುದು ದಂಡಿಗೆಯಲ್ಲಿ ಅಂದರೆ ಪಲ್ಲಕ್ಕಿಯಲ್ಲಿ. ಇಂತಹ ಅಮೂಲ್ಯವಾದ‌ ಈ‌ ಶೇಂದಿಯನ್ನು ತೆಗೆಯುವುದು ‌ಸುಲಭದ ಕಾರ್ಯವಲ್ಲ. ಅದು ಬಿಲ್ಲವರಿಗೇ ಮಾತ್ರ ಸಾಧ್ಯ. ಅದರೆ‌ ಮತ್ತೊಮ್ಮೆ‌ ಹೇಳುಬೇಕು ಅದೇನೆಂದರೆ‌ ಮೂರ್ತೆದಾರಿಕೆ ಬಿಲ್ಲವರ ಕುಲ ಕಸುಬಲ್ಲ ಅದು ಅವರ ಉಪವೃತ್ತಿ. *ಬಿರು‌ ಪಗರಿ ಹಿಡಿದು ಬಿರುವರಾಗಿ, ವೈದ್ಯಕ್ಕೆ ಬೈದ್ಯರಾಗಿ, ಗುತ್ತಿನ‌‌ ಬರ್ಕೆ, ಮಾಗಂದಡಿಗಳ ನಾಯ್ಗರಾಗಿ, ದೈವಾರಾಧನೆ ಮತ್ತು ನಾಟಿಗೆ ನಟ್ಟಿಲ್ಲ ಪೂಜಾರಿಗಳಾಗಿ, ಬೇಟೆಯ ನಿಪುಣತೆಗೆ ಬೋಂಟ್ರರಾಗಿ ಪ್ರಸಿದ್ಧಿ* ಹೊಂದಿದ ಬಿಲ್ಲವರಿಗೆ ಕುಲಕಸುಬು ಯಾವುದು? ನಿರ್ಧಾರ ನಿಮಗೇ‌ ಬಿಟ್ಟದ್ದು. -ಸಂಕೇತ್ ಪೂಜಾರಿ

3 comments:

  1. ಬಿಲ್ಲವ ಏಲ್ಲ ಬಲ್ಲವ

    ReplyDelete
  2. ದೈವಕ್ಕೆ ಪ್ರಿಯವಾದನವನೆ ಬಿಲ್ಲವ

    ReplyDelete
  3. ತುಂಬ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

    ReplyDelete