Tuesday, May 28, 2019

ಬಿಲ್ಲವರಲ್ಲಿದ್ದ ಬಾಣಂತಿ ತಾಯಿಯ ನೆತ್ತಿಗೆ ಎಣ್ಣೆ ಹಾಕುವ ಸಂಪ್ರದಾಯ

ತುಳುನಾಡು ಎಂದಾಕ್ಷಣ ಅಲ್ಲಿ ದಿನಕ್ಕೊಂದು ಹಬ್ಬ ದಿನಕ್ಕೊಂದು ಸಂಪ್ರದಾಯ ಅದೇ ರೀತಿ ಅಲ್ಲಿ ನೆಲೆಸಿರುವ ಎಲ್ಲಾ ಜಾತಿಗೂ ಅವರದೇ ಆದ ರೀತಿ ರೀವಾಜು ಮತ್ತು ಸಂಪ್ರದಾಯಗಳು. ಇಲ್ಲಿ ಒಂದು ಜಾತಿಯ ಸಂಪ್ರದಾಯ ಇನ್ನೊಂದು ಜಾತಿಯನ್ನು ಯಾವತ್ತು ಮೆಟ್ಟಿ ನಿಂತದ್ದು ಇಲ್ಲ ಅವರವರ ಪಂಗಡದೊಳಗೆ ಅದು ಆಚರಣೆಯಾಗುತ್ತಿತ್ತು. ಯಾವ ಆಚರಣೆಯಲ್ಲೂ ಗೊಂದಲವಿಲ್ಲ‌ ಅದರಷ್ಟಕ್ಕೆ ಅದು ನಡೆದು ಹೋಗುತ್ತಿತ್ತು. ಸಾಮಾನ್ಯವಾಗಿ ಈ ಅಳಿಯ ಕಟ್ಟಿನ( ತಾಯ ಕಟ್ಟು) ಸಂಪ್ರದಾಯ ರೂಡಿಸಿಕೊಂಡವರ ಸಂಪ್ರದಾಯಗಳು ತಕ್ಕ ಮಟ್ಟಿಗೆ ಒಂದೇ ರೀತಿ ಇರುತ್ತೆ. ಅದೇ ರೀತಿಯಲ್ಲಿ ಬಿಲ್ಲವ ಸಮುದಾಯದಲ್ಲೂ ಕೂಡ ಅವರದೇ ಆದ ಸಂಪ್ರದಾಯಗಳು ಆಚರಣೆಗಳು ಬೆಳೆದು ಬಂದಿದೆ. ಈ ಮುಂದೆ ಬೇರೆಲ್ಲಾ ಆಚರಣೆಗಳನ್ನು ತಿಳಿಸಿದ ಹಾಗೆ ಬಿಲ್ಲವರಲ್ಲಿ ಬಾಣಂತಿಯ ತಲೆಗೆ ಎಣ್ಣೆ ಹಾಕುವ ಸಂಪ್ರದಾಯವು ಕೂಡ ವೈಶಿಷ್ಟ್ಯ ಪೂರ್ಣವಾಗಿರುವಂತಹುದು. ಹೆರಿಗೆಯಾದ ತಾಯಿಯ ಬಾಣಂತನದ ಸಮಯದಲ್ಲಿ ಆಕೆಯ ದೇಹ ಪ್ರಕೃತಿ ತುಂಬಾ ಸೂಕ್ಷ್ಮವಾಗಿರುವಂತಹುದು. ಆಕೆಗೆ ಶೀತ ಭಾದೆಯಾದರೆ ಅದು ಎದೆ ಹಾಲು ಕುಡಿಯುವ ಮಗುವಿಗೂ ತಟ್ಟುತ್ತೆ ಎನ್ನುವ ಭಯದಿಂದ ಆಕೆಗೆ ತನ್ನೀರ ಸ್ನಾನ, ತಣ್ಣೀರು ಕುಡಿಯಲು ಕೊಡುವುದು, ತಣ್ಣಗಿನ ಅಹಾರ ತಿನ್ನಲು ಕೊಡುವುದು ಅದೇ ರೀತಿ ಎಣ್ಣೆ ನೀರಿನ ಸ್ನಾನ ವ್ಯರ್ಜ. ಆಕೆಗೆ ಇವೆಲ್ಲವು ಏನಿದ್ದರೂ ಅತ್ತೆ ಮನೆಗೆ ಹೋದ ಮೇಲೆನೆ ಅಥವ ಮೂರು‌ ತಿಂಗಳ ನಂತರವೆ. ತಿಂಗಳು ಕಳೆದು ಪೂರ್ವ ಕ್ರಮಗಳನ್ನು ಮುಗಿಸಿ ಅತ್ತೆ ಮನೆಗೆ ತೊಟ್ಟಿಲ ಸಮೇತ ಮಗುವಿನೊಂದಿಗೆ ಬಂದ ದಿವಸ ಅತ್ತೆ ಅಥವ ಸುಮಂಗಲಿ ಹೆಣ್ಣು ಮಕ್ಕಳು ಆರತಿ ಎತ್ತಿ ತಾಯಿ ಮಗುವನ್ನು ಮನೆಯೊಳಗೆ ಕರೆಸಿಕೊಂಡು ತದನಂತರ ಅತ್ತೆ ಸೊಸೆಗೆ ಹಾಲಿಗೆ ಸಿಹಿ ಹಾಕಿ ಕುಡಿಯಲು ಕೊಟ್ಟು ನಂತರ ನೆತ್ತಿಗೆ ಎಣ್ಣೆ ಹಾಕಿ ತಟ್ಟಿ ತಲೆಗೆ ಹೂ ಮುಡಿಸುತ್ತಾರೆ. ಇದರ ಅರ್ಥ ಇಷ್ಟೆ ಬಾಣಂತಿ ಸಮಯದಲ್ಲಿ ಶೀತ ಹಾಗುತ್ತೆ ಎನ್ನುವ ದೃಷ್ಟಿಯಿಂದ ತಲೆಗೆ ಎಣ್ಣೆ ಹಾಕಿರುವುದಿಲ್ಲ ಆದುದರಿಂದ ಅಷ್ಟು ಸಮಯದಿಂದ ಆಕೆಯ ನೆತ್ತಿಗೆ ಎಣ್ಣೆ ಹಾಕದೆ ಉರಿಯುತ್ತಿರಬಹುದೆಂಬ ದೃಷ್ಟಿಯಿಂದ ಸೊಸೆಗೆ ಅತ್ತೆಯಾದವಳು ನೆತ್ತಿ ತಂಪಾಗಲಿ ಎಂಬ ಉದ್ದೇಶದಿಂದ ಎಣ್ಣೆ ಹಚ್ಚಿ ಹೂ‌ ಮುಡಿಸುತ್ತಿದ್ದರಂತೆ. ಈ ಬಗ್ಗೆ ಮಾಯಂದಾಲ್ ಸಂಧಿಯಲ್ಲೂ ಕೂಡ ಉಲ್ಲೇಖವಿದೆ. ಕಳತ್ತ ಜುಮಾದಿಯು ಪಾಂಗೊಲ್ಲ ಬನ್ನಾರ ರೂಪದಲ್ಲಿ ಆಲಿಬಾಗ ನಾಯಗನ ಮನೆಗೆ ಹೋಗಿ ಆಕೆಯ ಸೊಸೆಯಾದ ಮಾಣಿಯ ಹತ್ತಿರ ಬೆಂಕಿ ಕೇಳಲು‌ ತನ್ನ ಸ್ಥಿತಿಯನ್ನು ಈ ರೀತಿಯಾಗಿ ವಿವರಿಸುತ್ತಾಳೆ. ಯಾನ್ ಪೆದುದು ಆಜಿ ಮೂಜಿ ದಿನ ‌ಆತಿಜಿ, ನೀಟ ತುತ್ತಿ ಕುಂಟು ಅಡ್ಡ ತುತ್ತಿಜಿ, ನೆತ್ತಿಗ್ ಎಣ್ಣೆ ಪಾರ್ದಿಜಿ ಬುಡಿನ ಕೂಜಲ್ ನೆಯ್ತಿಜಿ ತರೆಗ್ ಪೂ ಮುಡಿತಿಜಿ ಅಂತ ಹೇಳುತ್ತಾಳೆ ( ತಾನು ಮಗುವನ್ನು ಹೆತ್ತು ಆರು ಮೂರು ದಿವಸ ಆಗಿಲ್ಲ, ಉದ್ದ ಉಟ್ಟ ಬಟ್ಟೆಯನ್ನು ಅಡ್ಡ ಉಟ್ಟಿಲ್ಲ, ನೆತ್ತಿಗೆ ಎಣ್ಣೆಯನ್ನು ಹಚ್ಚಿಲ್ಲ, ತಲೆ ಕೂದಲು ಹೆಣೆದಿಲ್ಲ, ಹೂ ಮುಡಿದಿಲ್ಲ). ಅಂದರೆ ಇಲ್ಲಿ ಸಂಪ್ರದಾಯ ಎನ್ನುವುದು ಬಾಣಂತಿ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತದ್ದಾಗಿರುತ್ತದೆ. ಹಿರಿಯರ ಎಲ್ಲಾ ಸಂಪ್ರದಾಯಗಳು ಕೂಡ ಅದರದೇ ಆದ ವೈಜ್ಞಾನಿಕ ಸತ್ಯಗಳನ್ನು ಹೊಂದಿದೆ. ಕಾಲದ ಹೊಡೆತ ಮತ್ತು ಬದಲಾಗುತ್ತಿರುವ ಜನಜೀವನದಲ್ಲಿ ಎಲ್ಲೋ ಕೆಲವೊಂದು ಕಡೆ ಇವೆಲ್ಲಾ ಇನ್ನೂ ಜೀವಂತವಾಗಿ ಉಳಿದಿದೆ.ಬರಹ:- ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

0 comments: