Thursday, November 2, 2017

ತುಳುನಾಡಿನ ಪಾಡ್ದನ ಇತಿಹಾಸದಲ್ಲಿ ಮೂಡಿ ಬಂದ ಬಿರುವ ಬೈದ್ಯರು.

ದೈವಾರಧನೆಯಲ್ಲಿ ಬಿಲ್ಲವರ ಪಾತ್ರ ಅತೀ ಹೆಚ್ವಾಗಿ ದೊರಕಿದ್ದು, ತುಳುನಾಡಿನ ದೈವದ ನೆಲೆ ಹಿನ್ನಲೆಯ ಪಾರ್ದನಗಳಲ್ಲಿ ಬಿಲ್ಲವ ಬೈದ್ಯರ ಉಲ್ಲೇಖ ಬಹಳಷ್ಟು ಇವೆ. ಅನೇಕ ದೈವಗಳ ನೆಲೆ ಹಿನ್ನೆಲೆ ಮತ್ತು ಆರಾಧನೆಯಲ್ಲಿ ಬಿಲ್ಲವ ಬೈದ್ಯರ ಪಾತ್ರ ಎದ್ದು ಕಾಣುತ್ತದೆ. ಇವುಗಳ ಪಟ್ಟಿ ಮಾಡಲು ಹೊರಟರೆ ಅದು ಮುಗಿಯ ತೀರದು. ಅವುಗಳಲ್ಲಿ ಕೆಲವು ಮುಖ್ಯವಾದ ಮತ್ತು‌ ದಾಖಲಾಗದ ಬೈದ್ಯರ ಹೆಸರು ಮತ್ತು ಸಂಕ್ಷಿಪ್ತ ವಿವರಣೆ ಇಲ್ಲಿ ನೀಡಲಾಗಿದೆ.

1. ಕುದುರೆಬೆಟ್ಟು ಕೊಡಮಾನ ನಟ್ಟಿಲ್ಲು ಮೈಂದಬಾಲೆ ನರಸಿಂಗ ಬೈದ್ಯರು‌. ಬಂಟ್ವಾಳ ತಾಲೂಕು ಕಲ್ಲಡ್ಕದಿಂದ ಸ್ವಲ್ಪ ದೂರಕ್ಕೆ ಕುದುರೆ ಬೆಟ್ಟು ಎಂಬ ಪ್ರದೇಶವಿದೆ. ಈ ಭಾಗದ ಪಂಜುರ್ಲಿ ದೈವದ ಪಾಡ್ದನದಲ್ಲಿ ಬರುವ ಈ ಮೈಂದಬಾಲೆ ನರಸಿಂಗ ಬೈದ್ಯರು ಪ್ರಮುಖ ವ್ಯಕ್ತಿ‌. ಮುಗೇರ ಗುತ್ತಿನಿಂದ ಕಡೇಶಿವಾಲಯಕ್ಕೆ ಬಂದ ಪಂಜುರ್ಲಿ ದೈವವು ಮುಂದಕ್ಕೆ ಮುಗೇರನಾಡು ಸಾವಿರ ಸೀಮೆಯ ಬಾರ್ದಿಲ ಬೀಡಿಗೆ ಬರುವುದು ಈ ಮೈಂದಬಾಲೆ ನರಸಿಂಗ ಬೈದ್ಯರ ಮೂಲಕ. ಬಾರ್ದಿಲ ಬೀಡಿ ಸಾರಕುಳ್ಳಾಯರು ಕಡೇಶ್ವಾಲ್ಯದ ಜಾತ್ರೆಗೆ ಹೋಗುವಾಗ ಅವರ ದಂಡಿಗೆಯನ್ನು ಶೃಂಗರಿಸುವುದು ಈ ಮೈಂದಬಾಲೆ ನರಸಿಂಗ ಬೈದ್ಯರು. ಇಡೀ ಸೀಮೆಯಲ್ಲಿ ದಂಡಿಗೆಯ ಶೃಂಗಾರ ಮಾಡುವ ಕಾರ್ಯದಲ್ಲಿ ಇವರು ನಿಪುಣತೆಯನ್ನು ಪಡೆದಿದ್ದರು. ಅವರಿಗೆ ಓಲೆಮಾಣಿ ಕಳುಹಿಸಿ ಬರಹೇಳಿ, ನಂತರ ಜಾತ್ರೆಗೆ ಹೊರಟು ಅಲ್ಲಿ ದೈವವು ಸಾರಕುಳ್ಳಾಯರನ್ನು‌ ನೋಡಿ ಅವರಿದ್ದ ರಾಜ್ಯಕ್ಕೆ ತಾನು ಬರುವೆನೆಂದು ಹೇಳಿ ನರಸಿಂಗ ಬೈದ್ಯರಲ್ಲಿ ಆವೇಶಗೊಳ್ಳುತ್ತದೆ. ಈಗಲೂ ಬಾರ್ದಿಲ ಬೀಡಿಗೆ ಸಂಭಂದಪಟ್ಟ ಈ ಪಂಜುರ್ಲಿ ದೈವಕ್ಕೆ ದರ್ಶನಪಾತ್ರಿಗಳಾಗಿ ಇದೇ ಮನೆತನ ಭಾಗವಹಿಸುತ್ತದೆ. 2. ಬೀರೊಟ್ಟಿ ಬರ್ಕೆ ಕುಪ್ಪೆಕೋಟಿ ಬೈದ್ಯರು : ಪ್ರಾದೇಶಿಕವಾಗಿ ಹಲವೆಡೆ ಬಿಲ್ಲವರ ಕುಟುಂಬಕ್ಕೆ ಕುಟುಂಬ ದೈವವಾಗಿ ಆರಾಧನೆಗೊಳ್ಳುವ ಕುಪ್ಪೆ ಪಂಜುರ್ಲಿ ದೈವದ ಮೂಲಕ್ಕೆ ಕಾರಣಕರ್ತರು ಈ ಕುಪ್ಪೆ ಕೋಟಿ ಬೈದ್ಯರು. ಮೀನಿನ ರೂಪದಲ್ಲಿ ಸಿಕ್ಕಿದ ದೈವ ಇದಾಗಿದ್ದು‌‌. ಇದಕ್ಕೆ ವಿಸ್ತಾರವಾದ ಪಾರ್ದನದ ಕತೆ ಇದೆ‌. 3. ಕುಪ್ಪೆಟ್ಟು ಬರ್ಕೆ ಕೊರಗ ಬೈದ್ಯರು : ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದಲ್ಲಿ ಕುಪ್ಪೆಟ್ಟು ಪಂಜುರ್ಲಿ ದೈವದ ಮೂಲ ಸ್ಥಳ ಕುಪ್ಪೆಟ್ಟು ಬರ್ಕೆ ಇದೆ. ಪೊನ್ನೆಂಗಿಲ ಗುತ್ತಿನಿಂದ ಕೊರಗಬೈದ್ಯರಿಗೆ ಮದುವೆಯಾಗಿ ಬಂದ ಹೆಣ್ಣಿನೊಂದಿಗೆ ಬಂದ ಪಂಜುರ್ಲಿ ದೈವವು ಕುಪ್ಪೆಟ್ಟು ಬರ್ಕೆಯಲ್ಲಿ ಕೊರಗ ಬೈದ್ಯರನ್ನು ತನ್ನ ಸೇರಿಗೆ ಯಲ್ಲಿ ಸೇರಿಸಿಕೊಂಡು ಕುಪ್ಪೆಟ್ಟು ಪಂಜುರ್ಲಿಯಾಗಿ ತುಳುನಾಡಿನಲ್ಲಿ ಪ್ರಸಿದ್ಧವಾಯಿತು. 4.ಕಡಂಬಾರು‌ ಭಂಡಾರಮನೆ‌ ‌ದೂಮ‌ ಪೂಜಾರಿ : ಮಂಜೇಶ್ವರದ ಕಡಂಬಾರು ಗ್ರಾಮದ ಮಲರಾಯ ಬಂಟ ದೈವದ ಭಂಡಾರ ಮನೆಯ ದೂಮ ಪೂಜಾರಿಯವರ ಉಲ್ಲೇಖ ಈ ದೈವದ ಪಾರ್ದನದಲ್ಲಿ ಇದೆ. ಇವರ ಕಾಲದಲ್ಲಿಯೇ ಮಲರಾಯ ದೈವವು ಕಡಂಬಾರು ಮನೆಗೆ ಪ್ರವೇಶಿಸಿ‌ ಕುಟುಂಬಕ್ಕೆ ಕುಟುಂಬ ದೈವವಾಗಿಯೂ ಗ್ರಾಮಕ್ಕೆ ಗ್ರಾಮ ದೈವವಾಗಿಯೂ ಮೆರೆಯುತ್ತಿದ್ದಾನೆ. 5. ಪೊನ್ನೆಂಗಿಲ ಗುತ್ತು ಬೀರಣ ಬೈದ್ಯರು : ಬಂಟ್ವಾಳ ಪೊನ್ನೆಂಗಿಲ ಗುತ್ತು ಪೊನ್ನೆಂಗಿಲ ಸಾವಿರ ಸೀಮೆಗೆ ಬಹಳ ಪ್ರಸಿದ್ಧವಾಗಿದ್ದ ಮನೆತನ. ಇಲ್ಲಿ ಬೀರಣ ಬೈದ್ಯರು ಖ್ಯಾತಿಯನ್ನು ಪಡೆದಿದ್ದರು. ಈ ಮನೆತನಕ್ಕೆ ಸಂಭಂದಿಸಿದ ವೈದ್ಯನಾಥ ದೈವಸ್ಥಾನ ಬಂಟ್ವಾಳ ಪೇಟೆ ನಂದನಬಿತ್ತಿಲ್ ಎಂಬಲ್ಲಿದೆ. ಇಲ್ಲಿಗೆ ಪೊನ್ನೆಂಗಿಲ ಗುತ್ತಿನಿಂದ ಅರಸು ದೈವದ ಭಂಡಾರ ಬಂದು ನೇಮವಾಗುತ್ತದೆ. ಇಲ್ಲಿನ ಗಡಿನಾಮವೂ ಇದೇ ಆಗಿದೆ. ಕುಪ್ಪೆಟ್ಟು ಪಂಜುರ್ಲಿ ದೈವದ ಪಾರ್ದನದಲ್ಲೂ ಇವರ ಉಲ್ಲೇಖ ಇದೆ. ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಪೆರಾರ ಕಬೆತ್ತಿ ಗುತ್ತಿಗೆ ಮದುವೆ ಮಾಡಿ ಕೊಡುತ್ತಾರೆ. ಇನ್ನೊಬ್ಬಳನ್ನು ಕುಪ್ಪೆಟ್ಟು ಬರ್ಕೆಗೆ ಮದುವೆಮಾಡಿ ಕೊಡುತ್ತಾರೆ. ಆಗ ಪೊನ್ನೆಂಗಿಲ ಗುತ್ತಿನ ಪಂಜುರ್ಲಿ ದೈವವು ಕುಪ್ಪೆಟ್ಟು ಬರ್ಕೆಗೆ ಹೋಗಿ ಕುಪ್ಪೆಟ್ಟು ಪಂಜುರ್ಲಿ ಎಂಬ ಹೆಸರು ಪಡೆಯುತ್ತದೆ. 6. ಅಂಬುಡೇಲು ಗುತ್ತು ದಂಡು ದೇವು ಬೈದ್ಯರು : ಪಾಂಡ್ರಕಲ್ಲು ಸಮೀಪದ ಅಂಬ್ಡೇಲು ಗುತ್ತಿನ ಮೂಲ ಪುರುಷರು ದಂಡು ದೇವು ಬೈದ್ಯರು. ಇವರ ಬಹಳ ಸುಂದರವಾದ ಕಂಚಿನ ಮೂರ್ತಿ ಗುತ್ತಿನ ಚಾವಡಿಯಲ್ಲಿದೆ. ಈ ಮನೆಯಲ್ಲಿ ಅಂಬ್ಡೇಲ್ ಪಂಜುರ್ಲಿ ಎಂಬ ದೈವವಿದ್ದು ಇದು ದಂಡು ದೇವು ಬೈದ್ಯರ ಕಾಲದಲ್ಲಿ ಇಲ್ಲಿ ನೆಲೆಯಾದ ದೈವ. ದಂಡು ದೇವು ಬೈದ್ಯರ ಉಲ್ಲೇಖ ಈ ದೈವದ ಪಾರ್ದನದಲ್ಲಿದೆ. 7. ಕಬೆತ್ತಿ ಗುತ್ತು ದುಗ್ಗಣ್ಣ ಬೈದ್ಯರು : ಪೆರಾರ ಗ್ರಾಮದಲ್ಲಿರುವ ಕಬೆತ್ತಿ ಗುತ್ತು ಒಂದು ಪ್ರಸಿದ್ಧ ಮನೆತನ. ಬೋಳದಿಂದ ಹೊರಟ ದುಗ್ಗಣ್ಣ‌ ಬೈದ್ಯರು ಪೆರಾರದ ಪರಿಸರದಲ್ಲಿ ಗುಡ್ಡ ಪ್ರದೇಶಗಳನ್ನು ಸಮತಟ್ಟುಗೊಳಿಸಿ ಕಬೆತ್ತಿ ಗುತ್ತನ್ನು ಕಟ್ಟಿದರು. ಅವರು ಅಂದು ಗುರುತು ಮಾಡಿಟ್ಟ ತಜಂಕ್ ಎಂಬ ಗಿಡದ ಕುತ್ತಿ ಈಗಲೂ ಗುತ್ತಿನಲ್ಲಿ ಹಾಗೇಯೆ ಇದೆ. ಇದು ಸಾಮಾನ್ಯ ತಂಜಕು ಗಿಡಕಿಂತ ದೊಡ್ಡ ಗಾತ್ರದಲ್ಲಿ ಇದೆ. ದುಗ್ಗಣ ಬೈದ್ಯರ ಮೂರ್ತಿಯೂ ಇಲ್ಲಿದೆ. ಪೆರಾರಕ್ಕೆ ಬಲಾಂಡಿ ದೈವವು ಉಳ್ಳಾಕುಲು ದೈವದೊಂದಿಗೆ ಪ್ರವೇಶ ಮಾಡಿದ್ದು ಇದೇ ದುಗ್ಗಣ ಬೈದ್ಯರ ಕಾಲದಲ್ಲಿ. ಕಬೆತ್ತಿ ಗುತ್ತಿಗೆ ಈ ದೈವಗಳ ಮಾನವರ ರೂಪದಲ್ಲಿ ಬಂದಾಗ ದುಗ್ಗಣ ಬೈದ್ಯರು ಅವರಿಗೆ ಮಧ್ಯಾಹ್ನದ ಊಟದ ಆತಿಥ್ಯಕ್ಕೆ ಅಣಿ ಮಾಡುತ್ತಾರೆ. ಇವರ ಈ ಗುಣಕ್ಕೆ ಮೆಚ್ಚಿದ‌ ದೈವಗಳು ಮಾಯವಾಗಿ ಇನ್ನು ಮುಂದೆ ಪೆರಾರ ಕಿನ್ನಿಮಜಲು ದೇವಸ್ಥಾನದಲ್ಲಿ ನಮ್ಮ ನೇಮದ ನೈವೇದ್ಯಕ್ಕೆ ಕೆಬೆತ್ತಿ ಗುತ್ತಿನಿಂದ ಸಣ್ಣಕ್ಕಿ ಬರಬೇಕು ಎಂಬ ‌ಕಟ್ಟು ಮಾಡುತ್ತಾರೆ. ಇದು ಪೆರಾರ ಬಲಾಂಡಿ ದೈವದ ಪಾರ್ದನದಲ್ಲಿ ಉಲ್ಲೇಖವಿದೆ. 8. ಕುಂಟಲಜೆ ಬರ್ಕೆ ಸಾಸ್ರ‌ ನಾಡು‌ ಬೈದ್ಯರು : ತನ್ನ ಅತ್ತೆಯ ಚಾಡಿಮಾತಿಗೆ ಬಲಿಯಾಗಿ ತನ್ನ ಸೋದರಮಾವನ ಕೈಯಲ್ಲಿ ‌ದುರಂತ ಮರಣವನ್ನಪ್ಪಿದ ಕುಂಟಲಜೆ ಬರ್ಕೆಯ ಸಾಸ್ರ‌ನಾಡು ಬೈದ್ಯ‌ ತನ್ನ ಸೇಡನ್ನು‌ ಅಲೌಕಿಕ ಜಗತ್ತಿನಲ್ಲಿ ತೀರಿಸಿ ಮುಂದಕ್ಕೆ ಕುಂಟಲ್ದಾಯ ದೈವನಾಗಿ‌ ಪ್ರಸಿದ್ದಿ ಪಡೆಯುತ್ತಾನೆ. ಈ ದೈವದ ನೇಮವು ಬಹಳ ವಿಶೇಷ. 9. ನಾಲ್ಕೂರು ಗುತ್ತು ಬೊಲ್ಲ‌ ಬೈದ್ಯರು- ವೇಣೂರು ಪ್ರದೇಶದ ನಾಲ್ಕೂರು ಗುತ್ತಿನ‌ ಬೊಲ್ಲ ಬೈದ್ಯರ ಇತಿಹಾಸ‌ ವಿಸ್ತಾರವಾದದ್ದು. ಇದು‌ ಪಾರ್ದನ ರೂಪದಲ್ಲಿದೆ. ಸುಮಾರು ವರ್ಷಗಳ ಹಿಂದೆ‌ ಇಲ್ಲಿ ಇವರಿಗೆ‌ ನೇಮ ನಡೆಯುತ್ತಿತ್ತು. ಊರಿನ ಅರಸರ ದಳವಾಯಿಯಾಗಿದ್ದ‌ ಇವರು ಯುದ್ದ ಜಯಿಸಿ‌ ನಾಲ್ಕೂರು ಗುತ್ತು , ಏಳ್ಕಾಜೆ‌ ಗುತ್ತು ಗಳನ್ನು ಪಡೆದು ಪ್ರಸಿದ್ಧರಾಗಿ‌ ಮೆರೆದವರು. ನಾಲ್ಕೂರು ಗುತ್ತಿನಲ್ಲಿ ಮತ್ತು ಏಳ್ಕಾಜೆ ಗುತ್ತಿನಲ್ಲಿ ಬೊಲ್ಲ ಬೈದ್ಯರಿಗೆ ಆರಾಧನೆ ಇದೆ. ಇವರ ಬಗೆಗಿನ ದಳವಾಯಿ ಬೊಲ್ಲ ಬೈದ್ಯ ಎಂಬ ಯಕ್ಷಗಾನ ಪ್ರಸಂಗವೂ ನಡೆದಿತ್ತು ಎನ್ನುತ್ತಾರೆ. ‌ 10. ರೆಂಜಾಳ‌ ಬರ್ಕೆ‌ ಕಾಂತು‌ ಬೈದ್ಯರು : ಗಿಡಿರಾಂತ ದೈವದ ಆರಾಧನೆಗೆ ಮೂಲ‌ ಕಾರಣಕರ್ತರು. ಈ ದೈವವು ಮೂಲತಃ ಪಂಜುರ್ಲಿ ‌ದೈವವಾಗಿದ್ದು ಗಿಡುಗನ ರೂಪದಲ್ಲಿ ಕಾರಣಿಕ ಮೆರೆದು ರೆಂಜಾಳ ಬರ್ಕೆಯಲ್ಲಿ ನೆಲೆಯಾದ‌ ದೈವ. ಇದಕ್ಕೆ‌ ವಿಸ್ತಾರವಾದ ಪಾರ್ದನ ಇದೆ. 11. ಮುಕ್ಕ ಭಂಡಾರ ಮನೆ ಬಡಂಗ ಬೈದ್ಯರು- ಸುರತ್ಕಲ್ ಸಮೀಪ ಇರುವ ಪ್ರಸಿದ್ಧ ಪಡ್ರೆ ಜುಮಾದಿ ದೈವಸ್ಥಾನದ ಜುಮಾದಿ ಪಾರ್ದನದಲ್ಲಿ ಬಡಂಗ ಬೈದ್ಯರ ಉಲ್ಲೇಖ ಇದೆ. ಈ ಪಡ್ರೆ‌ ಜುಮಾದಿಯು ಇಲ್ಲಿ ನೆಲೆಗೊಳ್ಳಲು ಮೂಲ ಕಾರಣ ಈ ಬಡಂಗ ಬೈದ್ಯರು. ಅವರನ್ನು‌ ಹಿಂಬಾಲಿಸಿ‌ ಬಂದ ಜುಮಾದಿ‌ ದೈವವು‌ ಅವರ ಮನೆಯಲ್ಲಿ ಸ್ಥಾನ‌ ಪಡೆದು ನಂತರ‌ ಪಡ್ರೆಯಲ್ಲಿ ದೈವಸ್ಥಾನ ಕಟ್ಟಿಸಿಕೊಂಡು ಮೆರೆಯುತ್ತದೆ. 12. ಕೆದ್ದೇಲ್ ಗುತ್ತು ಪಾಂಡಿ ಪೂಜಾರಿ : ಪಾಣೇರ್‌(ಪಾಣೆಮಂಗಳೂರು)ನ ನರಿಕೊಂಬು ಸಮೀಪ ಕೆದ್ದೇಲು ಮನೆತನವಿದೆ. ಇಲ್ಲಿ ನಾಲ್ಕೈತ್ತಾಯ ಚಾವಡಿ‌ ದೈವ. ಮತ್ತು‌ ನರಿಕೊಂಬು ಗ್ರಾಮ ದೈವ. ಸಜೀಪ ಮಾಗಣೆಯಿಂದ ಹೊರಟ ನಾಲ್ಕೈತ್ತಾಯ ದೈವ ಪಾಣೇರ್ ಗೆ ಬಂದು ನಂತರ ಕೆದ್ದೇಲು ಮನೆತನದ ಪಾಂಡಿ ಪೂಜಾರಿಯವರ ಮೂಲಕ ಕೆದ್ದೇಲು ಮನೆಯಲ್ಲಿ ‌ನೆಲೆಯಾಗುತ್ತದೆ. ಕೆದ್ದೇಲು ಮನೆಯಲ್ಲಿ ಪಾಂಡಿ ಪೂಜಾರಿಯವರ ಪೀಠ ಇದೆ. ಇವರನ್ನು ಪಾಂಡಿ ಅಜ್ಜೆರ್‌ ಎಂದು ಹಿರಿಯಾಯನ ರೂಪದಲ್ಲಿ ‌ಆರಾಧಿಸುತ್ತಾರೆ. 13. ನಡ್ಸಾಲ್ ದೊಡ್ದ ಮನೆ ತೆನ್ನಾಯ ಪೂಜಾರಿ : ಇರುವೈಲಿನಿಂದ ತಿಬಾರಿಗೆ ಪ್ರಸರಣಗೊಂಡ ಕೊಡಮಂದಾಯ ದೈವವು ನಂತರದಲ್ಲಿ ನಡ್ಸಾಲು ದೊಡ್ಡ ಮನೆಯಲ್ಲಿ ನೆಲಗೊಳ್ಳುತ್ತದೆ. ನಡ್ಸಾಲು ದೊಡ್ಡಮನೆಯ ತೆನ್ನಾಯ ಪೂಜಾರಿ ಅವರು ತಿಬಾರು ಕ್ಷೇತ್ರದ ನೇಮವನ್ನು ನೋಡಲು ಹೋದಾಗ ದೈವ ಕೊಡಮಂದಾಯನು ತೆನ್ನಾಯ ಪೂಜಾರಿಯವರನ್ನು ನೋಡಿ ನಂತರ ಅವರನ್ನು ಹಿಂಬಾಲಿಸಿ ಅವರ ಮನೆಯಲ್ಲಿ ಪ್ರಧಾನ ದೈವವಾಗಿ ನೆಲೆಯಾಗುತ್ತದೆ. ಇದು ಕೊಡಮಂದಾಯ ಪಾರ್ದನದಲ್ಲಿ ಉಲ್ಲೇಖವಿದೆ. 14. ಕಳೆಂಜ ತಿರ್ತ ಬರ್ಕೆ ಅಗ್ಗ ಬೈದ್ಯ: ಪೆರ್ನೆ ಬಿಳಿಯೂರು ಗ್ರಾಮದ ಒಂದು ಭಾಗಕ್ಕೆ ಗ್ರಾಮ ದೈವವಾಗಿ ಆರಾಧನೆ ಪಡೆಯುವ ಕಳೆಂಜ ಗುತ್ತಿನ ಒಟೆಚಾರಾಯ ದೈವ‌ವು ಕಳೆಂಜ ತಿರ್ತ ಬರ್ಕೆಯ ಅಗ್ಗ‌ ಬೈದ್ಯರ ಭಕ್ತಿಗೆ ಮೆಚ್ಚಿ ತಿರ್ತ‌ ಬರ್ಕೆ‌ಮನೆಯಲ್ಲೂ ನೆಲಯಾಗುತ್ತದೆ. ತನ್ನ ಪವಿತ್ರ ‌ಮುಗವನ್ನು ನೇಮದ ಸಂದರ್ಭದಲ್ಲಿ ಹಿಡಿಯುವ ಅಧಿಕಾರವನ್ನು ತಿರ್ತ ಬರ್ಕೆ ಮನೆತನಕ್ಕೆ ನೀಡುತ್ತದೆ. ಇವರ ಉಲ್ಲೇಖ ಈ ದೈವದ ಪಾರ್ದನದಲ್ಲಿ ಇದೆ. 15. ಅತ್ತಾವರ ಭಂಡಾರ‌ಮನೆ ತಿಮ್ಮ‌ ಬೈದ್ಯರು : ಅತ್ತಾವರ ಭಂಡಾರಮನೆ‌ಯನ್ನು ಚಿನ್ನತ್ತೂರು ಗುತ್ತು‌ ಎಂದೂ ಕರೆಯುತ್ತಾರೆ. ಇಲ್ಲಿನ ತಿಮ್ಮ ಬೈದ್ಯರು‌ ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು‌‌. ಅತ್ತಾವರ ವೈದ್ಯನಾಥ ದೈವದ ಅರಾಧನೆಗೆ ಇವರೇ ಮೂಲ‌ ಕಾರಣ. ಇವರ ಉಲ್ಲೇಖ ವೈದ್ಯನಾಥ ಪಾರ್ದನದಲ್ಲಿ ಇದೆ. 16. ಜಾನು ಬೈದ್ಯರು : ವೈದ್ಯನಾಥ ದೈವದ ಸೇರಿಗೆ ದೈವವಾಗಿ ಅರಾಧನೆ ಪಡೆಯುವ ಜಾನು ಬೈದ್ಯರ ಬಗ್ಗೆ ಹೆಚ್ವಿನ ಮಾಹಿತಿ ಲಭ್ಯವಿಲ್ಲ.ಇವರು ಸುಜೀರು ಭಂಡಾರಮನೆಯ ಮೂಲ ಪುರುಷ ಎಂದು ಒಂದು ಕಡೆ ಹೇಳಲಾಗಿದೆ. ಬಹುಶಃ ಇಲ್ಲಿಂದ ಬೇರೆಡೆ ಪ್ರಸರಣಗೊಂಡಿರುವ ಕಡೆಗಳಲ್ಲಿ ಜಾನು‌ಬೈದ್ಯರಿಗೆ‌ ಆರಾಧನೆ ಶುರುವಾಗಿರಬಹುದು. ಸುಜೀರು ಅಲ್ಲದೆ ಬಾಕಿಲ ಮುಂತಾದ ಕೆಲವೆಡೆ ಜಾನು ಬೈದ್ಯರಿಗೆ ಆರಾಧನೆ‌ ಇದೆ. ಇದಲ್ಲದೆ ಇನ್ನೂ ಹಲವಾರು ಇಂತಹ ಬಿಲ್ಲವ ಮಹಾಪುರುಷರ ‌ಉಲ್ಲೇಖ ಪಾರ್ದನಗಳಲ್ಲಿ ಇದ್ದು ಇದರ ಸಮಗ್ರ ಅಧ್ಯಯನ ಇನ್ನು ಮುಂದಿನ ದಿನಗಳಲ್ಲಿ ಆಗಲಿದೆ. -ಸಂಕೇತ್ ಪೂಜಾರಿ

1 comment:

  1. ತುಳುನಾಡಿನ ಅದೆಷ್ಟೊ ದೈವಗಳು ಬಿಲ್ಲವರಿಗೆ ಒಲಿದು ಬಂದಿದೆ. ಅದೆಷ್ಟೊ ಗ್ರಾಮ ದೈವಗಳಿಗೆ ಬಿಲ್ಲವರು ಪಾತ್ರಿಗಳಾಗಿದ್ದಾರೆ. ಅಂತಹ ಹೆಸರಾಂತ ಬಿಲ್ಲವರ ನೆಲೆಯನ್ನು ತಿಳಿಸುವಿರಾ??? ಸಜಿಪದ ನಾಲ್ಕೈತ್ತಾಯ ದೈವದ ಪಾತ್ರಿ ಶಂಕರ ಯಾನೆ ಕೋಚ ಪೂಜರಿಯವರು. ಕುತ್ತರಿನ ಪಂಜಂದಾಯ ದೈವದ ಪಾತ್ರಿ ಕೃಷ್ಣಪ್ಪ ಪೂಜರಿಯವರು ಹೀಗೆ ಹಲವಾರು ದೈವ ಪೂಜಾರಿಗಳ ಬಗ್ಗೆ ಅವರಿಗೆ ದೈವ ಒಲಿದ ಬಗ್ಗೆ ಅಧ್ಯಯನ ನಡೆಸಬಹುದೆ.

    ReplyDelete