ಮೂಲ ತುಳುವರಲ್ಲಿ ಬಿಲ್ಲವರು ಒಬ್ಬರು, ವಿಶಿಷ್ಟವಾದ ಆರಾಧನೆ ಮತ್ತು ಆಚರಣೆಯ ಮುಖಾಂತರ ತಮ್ಮದೇ ಆದ ಸಂಪ್ರದಾಯಗಳನ್ನು ನಡೆಸಿಕೊಂಡು ಬಂದವರು. ಇವರ ಅನಾಧಿಯ ಮದುವೆ ಸಂಪ್ರದಾಯಗಳು ಕೂಡ ತಮ್ಮದೇ ಆದ ಚೌಕಟ್ಟಿನಲ್ಲಿ ನಡೆಸಿಕೊಂಡು ಬಂದವರು. ಬಿಲ್ಲವರ ಮದುವೆಗಳೆಲ್ಲವು ಜಾತಿಯ ಗುರಿಕಾರ ಅಥವ ಬೋಂಟ್ರನ ಮುಂದಾಳತ್ವದಲ್ಲಿ ನಡೆಯುತ್ತಿತ್ತು. ಇಲ್ಲಿ ಆತನ ತೀರ್ಮಾನವೆ ಅಂತಿಮವಾಗಿತ್ತು. ಮದುವೆಯ ಮುಂಚಿನ ದಿವಸ ಬೆಳಿಗ್ಗೆ ಗರಡಿಯಲ್ಲಿ ಗಂಡಿಗೆ ಮತ್ತು ಹೆಣ್ಣಿಗೆ ಕಳಶ ಸ್ನಾನವನ್ನು ಮಾಡಿಸುತ್ತಿದ್ದರು. ಗರಡಿಯ ತುಳಸಿ ಕಟ್ಟೆಯ ಮುಂದೆ ಮಡಿವಾಳ ಜನಾಂಗದ ಹೆಂಗಸು ಮರದ ಮಣೆಯನ್ನು ಇಟ್ಟು ಬಿಳಿಬಟ್ಟೆ ಹಾಸಿ ಆಸನ ಸಿದ್ದ ಪಡಿಸಿಡುತ್ತಾರೆ. ಗರಡಿ ಅರ್ಚಕರು ಕಳಶ ನೀರನ್ನು ತಂದು ಇಡುತ್ತಾರೆ. ಗುರಿಕಾರನ ಹೆಂಡತಿಯ ಮುಂದಾಳತ್ವದಲ್ಲಿ 5 ಜನ ಸುಮಂಗಲಿಯರು ಆಕೆಗೆ ಕಳಶದ ನೀರನ್ನು ಎರೆಯುತ್ತಾರೆ.
ಮದುವೆಯ ಮುಂಚಿನ ದಿವಸ ಗಂಡಿನ ಮನೆಯಲ್ಲಾದರೆ ಮುಹೂರ್ತ ಕಂಬವನ್ನು ಬೋಂಟ್ರರಿಂದ ಹಾಕಿಸಲ್ಪಡುತ್ತಾರೆ. ಅದಕ್ಕಿಂತ ಮುಂಚೆ ಮಡಿವಾಳ ಜನಾಂಗದ ವ್ಯಕ್ತಿ ಬಂದು ತುಳಸಿಕಟ್ಟೆಯ ಮುಂದೆ ಮಂಡಲ ಬಿಡಿಸಿ ಎಲೆ ಹಾಕಿ ಅದರ ಮೇಲೆ ಒಂದು ಸೇರು ಕುಚಲಕ್ಕಿ ಹಾಕಿ ಅದರ ಮೇಲೆ ಜುಟ್ಟು ಇದ್ದ ತೆಂಗಿನಕಾಯಿ ಇಟ್ಟು 5 ವೀಳ್ಯದೆಲೆ ಒಂದು ಅಡಿಕೆ ಇಟ್ಟು ತಯಾರಿ ಮಾಡಿಕೊಳ್ಳುತ್ತಾನೆ. ತದನಂತರ ಮನೆಯ ಹಿರಿಯರು ಗುರಿಕಾರನ ಮುಂದಾಳತ್ವದಲ್ಲಿ ದೈವದೇವರುಗಳಿಗೆ ಪ್ರಾರ್ಥನೆ ಮಾಡುತ್ತಾರೆ. ತದನಂತರ ಮಡಿವಾಳ ಜನಾಂಗದ ವ್ಯಕ್ತಿ ಮುಹೂರ್ತ ಕಂಬದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕಳಶ ಇಡುತ್ತಾರೆ. ಅದನ್ನು ಸಾಲಿಯಾನ್, ಮೂಲ್ಯಾನ್, ಬಂಗೇರ್ ಮತ್ತು ಕೋಟ್ಯಾನ್ ಬಳಿಯ(ಬರಿಯ) ಸುಮಂಗಲಿ ಹೆಣ್ಣು ಮಕ್ಕಳು ಎತ್ತಿಕೊಂಡು ತೋರಣ ಕಂಬಕ್ಕೆ ಮೂರು ಸುತ್ತು ಬರಬೇಕು ತದನಂತರ ಅದರಲ್ಲಿದ್ದ ನೀರನ್ನು ತೆಂಗಿನ ಬುಡಕ್ಕೆ ಚೆಲ್ಲುವುದು. ತದನಂತರ ಗುರುಕಾರ್ನವರಿಗೆ( ಮನೆಯಲ್ಲಿ ಗತಿಸಿಹೋದವರಿಗೆ) 3 ಅಥವ 7 ಎಲೆ ಹಾಕಿ ನೀರ್ ದೋಸೆ( ತೆಲ್ಲಾವು) ಮತ್ತು ಕೋಳಿ ಮನೆಯ ಹೆಂಗಸರು ಬಡಿಸುವುದು. ಬಡಿಸಿದ ಎಲೆಗಳ ಮುಂದೆ ಮದುಮಗನ ಮತ್ತು ಮದುಮಗಳ ಹೊಸ ಬಟ್ಟೆಯನ್ನು ಇಟ್ಟು ಪ್ರಾರ್ಥಿಸುವುದು. ತದನಂತರ ಬಂದವರಿಗೆಲ್ಲ ಊಟ ನೀಡುವುದು. ತದನಂತರ ಬೈದೇರುಗಳ ಸಂಧಿಯನ್ನು ಹಾಡಿ ಬಂದಂತಹ ಜನರ ಮನಸ್ಸಿಗೆ ಮುದನೀಡುತ್ತಿದ್ದರು. ಇದು ಮದುಮಗನ ಮನೆಯಲ್ಲಾದರೆ ಮದುಮಗಳ ಮನೆಯಲ್ಲಿ ಮುಹೂರ್ತ ಕಂಬ ಒಂದು ಬಿಟ್ಟು ಬೇರೆಲ್ಲ ಕ್ರಮಗಳು ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಬೆಳಗ್ಗೆ ಮದುಮಗನನ್ನು ಹತ್ತಿರದ ಹೊಳೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸುತ್ತಾರೆ. ಇಲ್ಲಿ ಮುಖ್ಯವಾದ ಅಂಶವೆಂದರೆ ಮಡಿವಾಳ(ದಲ್ಯಂತ ಮಾನಿ) ಜನಾಂಗದ ವ್ಯಕ್ತಿ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಾರೆ.
ಬಿಲ್ಲವರ ಹುಟ್ಟು ಸಾವು ಶುಭ ಸಮಾರಂಭದಲ್ಲಿ ಇವರು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದರು. ಅವರು ಬೇಗನೆ ಬಂದು ಮದುವೆ ಮಂಟಪದ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ತೆಂಗಿನ ಮಡಲಿನಿಂದ ಮಾಡಿದ ಮಂಟಪದ ಮೇಲಕ್ಕೆ ಬಿಳಿ ಬಟ್ಟೆಯಿಂದ ಕೊಡಿನಾಡು ಕಟ್ಟಿ ಮಧ್ಯಕ್ಕೆ ತೆಂಗಿನಕಾಯಿ ವೀಳ್ಯದೆಲೆ ಅಡಿಕೆ ಕಟ್ಟುತ್ತಾರೆ. ತದನಂತರ ಮಾವಿನ ಸೊಪ್ಪಿನಿಂದ ಮಂಟಪ ಅಲಂಕರಿಸುತ್ತಾರೆ. ತದನಂತರ ಅಲ್ಲಿ ಎರಡು ಮರದ ಮಣೆಗಳನ್ನು ಇಟ್ಟು ಅದರ ಮೇಲೆ ಬಿಳಿ ಹಾಸನ್ನು ಹೊದಿಸಿ ಆಸನಗಳನ್ನು ಸಿದ್ದಪಡಿಸುತ್ತಾರೆ. ಮರದ ಮಕ್ಕಾಲಿಗೆಯ ಮೇಲೆ ದೀಪ ಉರಿಸಿಡುತ್ತಾರೆ. ಕೈ ಧಾರೆಗೆ ಕೊಂಬಿನಗಿಂಡೆ ಅಲಂಕರಿಸಿ ತೆಂಗಿನಕಾಯಿ ಇಟ್ಟು ಸಿದ್ದಮಾಡಿರುತ್ತಾರೆ. ತದನಂತರ ಅಲಂಕರಿಸಿದ ಮದುಮಗನ ಕೈಯಲ್ಲಿ 5 ವೀಳ್ಯದೆಲೆ ಒಂದು ಅಡಿಕೆಯನ್ನು ಕೊಟ್ಟು ತುಳಸಿಕಟ್ಟೆಯ ಮುಂದೆ ನಿಲ್ಲಿಸಿ ಒಂದು ಎಲೆಯ ಮೇಲೆ ಎರಡು ಸೀಯಾಳವನ್ನು ಇಟ್ಟು ಗ್ರಾಮ ದೇವರನ್ನು ಪ್ರಾರ್ಥಿಸುತ್ತಾರೆ. ಹೆಣ್ಣಿನ ಮನೆಯಲ್ಲಿ ಹೆಣ್ಣನ್ನು ಗುರಿಕಾರನ ಹೆಂಡತಿಯ ಮಂದಾಳತ್ವದಲ್ಲಿ ಅಲಂಕರಿಸುತ್ತಾರೆ. ತದನಂತರ ಹೆಣ್ಣಿನ ಕೈಯಲ್ಲಿ ರಕ್ಷಣೆ ಮತ್ತು ದೃಷ್ಟಿ ನಿವಾರಣ ಭಾಗವಾಗಿ ಗೆಜ್ಜೆಕತ್ತಿಯನ್ನು ಕೊಡುತ್ತಾರೆ.
ತದನಂತರ ಹೆಣ್ಣಿನ ತಾಯಿ ಮಗಳಿಗೆ ತಾಳಿಯನ್ನು ಕಟ್ಟುತ್ತಾರೆ ಮದುಮಗಳ ಮಾವನ ಮಗಳು ಕಾಲುಂಗುರವನ್ನು ತೊಡಿಸುತ್ತಾರೆ. ಮದುಮಗನ ಮನೆಗೆ ಮದುಮಗಳ ದಿಬ್ಬಣ ಬರುತ್ತದೆ. ಅಲ್ಲಿ ಎರಡು ಕಡೆಯವರು ಆರತಿ ಎತ್ತಿ ಅಕ್ಕಿ ಹಾರಿಸಿ ಕುಂಕುಮ ನೀಡಿ ಒಬ್ಬರನೊಬ್ಬರು ಬರಮಾಡಿಕೊಳ್ಳುತ್ತಾರೆ. ಎರಡು ಕಡೆಯ ಗುರಿಕಾರರು ಒಬ್ಬರನೊಬ್ಬರು ಆಲಂಗಿಸಿಕೊಳ್ಳುತ್ತಾರೆ. ತದನಂತರ ಗುರಿಕಾರರ ಮುಂದಾಳತ್ವದಲ್ಲಿ ಸೋದರಮಾವಂದಿರು ಧಾರೆ ಎರೆದು ಕೊಡುತ್ತಾರೆ. ತದನಂತರ ಎರಡು ಕಡೆಯವರು ಕಂಚಿ( ಕಂಚಿನ ಹರಿವಾಣ ) ಏರಿಸಿ ಬಂದವರೆಲ್ಲ ಮುಯ್ಯಿ( ಹಣ ಇಡುವುದು) ಮಾಡುತ್ತಾರೆ. ತದನಂತರ ಹೆಣ್ಣುಮಗಳನ್ನು ಗಂಡಿನ ಮನೆಯವರಿಗೆ ನೀಡುವ ಕಾರ್ಯಕ್ರಮವನ್ನು ಗುರಿಕಾರ ಹಿತನುಡಿಗಳನ್ನು ಆಡಿ ಹೆಣ್ಣು ಮಗಳು ಯಾವ ರೀತಿ ಬೆಳೆದಿದ್ದಾಳೆ ಇನ್ನು ಮುಂದಕ್ಕೆ ನೀವೆ ಅವಳಿಗೆ ಆಧಾರ ಎಂದು ಅತ್ತೆಯ ಕೈಗೆ ಅವಳ ಕೈಯನ್ನು ಇಟ್ಟು ಒಪ್ಪಿಸುತ್ತಾರೆ. ಇಲ್ಲಿ ಹೆಂಗಸರು ಶೋಭಾನೆ ಹಾಡು ಹಾಡುತ್ತಾರೆ. ತದ ನಂತರ ಬಂದವರಿಗೆಲ್ಲ ಔತಣದ ಊಟ. ಈ ರೀತಿಯಾಗಿ ಮದುವೆಯು ಮಡಿವಾಳ ಜನಾಂಗದ ಪೌರೋಹಿತ್ಯದಲ್ಲಿ ಗುರಿಕಾರರ ಮಂದಾಳತ್ವದಲ್ಲಿ ಅತೀ ಆಚಾರಬದ್ಧವಾಗಿ ನಡೆಯುತ್ತಿತ್ತು. ಕೆಲವೊಂದು ಆಚರಣೆಗಳು ಆಯಾಯ ಸ್ಥಳಕ್ಕೆ ಅನುಗುಣವಾಗಿ ವ್ಯತ್ಯಾಸವಿದೆ. ಆದರೆ ವೈದಿಕ ಸಂಪ್ರದಾಯಗಳಾದ ಗಣಹೋಮ ಲಾಜ ಹೋಮ ಸಪ್ತಪದಿಗಳಿಗೆ ಮನಸೋತು ಜನರು ಮೂಲ ಆಚರಣೆಗಳನ್ನು ಬದಿಗೊತ್ತಿ ಆಧುನಿಕತೆಯ ಹಿಂದೆ ಹೆಜ್ಜೆ ಹಾಕಿದ್ದಾರೆ. ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ.
0 comments: