Thursday, November 2, 2017

ಈ ಬದಲಾವಣೆ ಅಗತ್ಯವೇ ?

ಸಂಸ್ಕೃತಿ ಯಾವುದೇ‌ ಇರಲಿ ಅದರಲ್ಲಿ ಬದಲಾವಣೆಗಳು‌ ಕಾಲಕಾಲಕ್ಕೆ ಅಗುವುದು ಸಾಮಾನ್ಯ‌. ಆದರೆ‌ ಅಂತಹ‌ ಬದಲಾವಣೆಗಳು ಅ‌‌ ಸಂಸ್ಕೃತಿಯನ್ನು ‌ಮತ್ತಷ್ಟು ಶ್ರೀಮಂತಗೊಳಿಸಬೇಕೇ‌ ಹೊರತು ಅದರ‌ ಮೂಲವನ್ನೇ‌ ನಾಶಮಾಡುವಂತಿದ್ದರೆ ಅಂತಹ‌ ಬದಲಾವಣೆ‌ ಅಗತ್ಯವೇ? ಇನ್ನು ಬದಲಾವಣೆಯ ಗಾಳಿ ಬೀಸುವುದಾದರೆ ಅದಕ್ಕೆ ಕಾರಣಗಳು ಮತ್ತು ಸಮಂಜಸಗಳು ಉತ್ತಮವಾಗಿರಬೇಕು. ಎಲ್ಲರ ಒಪ್ಪಿಗೆ ಮತ್ತು ರೀತಿ ರಿವಾಜುಗಳು‌ ಬೇಕು. ಇವೆಲ್ಲಾ ಬಿಟ್ಟು ವಯಕ್ತಿಕವಾಗಿ ತಮಗೆ ಬೇಕಾದ ಹಾಗೇ‌ ಬದಲಾವಣೆ ಮಾಡಿದರೆ ವಿಷಯ‌ ಬುಡಮೇಲು ಆಗುವುದು‌ ಖಂಡಿತ. ಇಷ್ಟಕ್ಕೂ ಇಲ್ಲಿ ಹೇಳುತ್ತಿರುವ ಬದಲಾವಣೆ‌ಯ ವಿಷಯ ಬೆರ್ಯಾವುದರ ಬಗ್ಗೆಯೂ ಅಲ್ಲ. ದೈವಾರಾಧನೆಯನ್ನು ಬುಡ ಮೇಲು ಮಾಡುತ್ತಿರುವ ನಾಮಾಂತರ‌ ಹಲ್ಲೆಯ ಬಗ್ಗೆ.

ದೈವಾರಾಧನೆಯ ಚೌಕಟ್ಟಿನಲ್ಲಿ ಅನೇಕ ಬದಲಾವಣೆಗಳು ಆಗಿರುವಂತದ್ದು ಒಪ್ಪಲೇ ಬೇಕು. ಆದರೇ ಅನೇಕ ವರ್ಷಗಳ‌ ಹಿಂದೆ ಆದಂತಹ ಬದಲಾವಣೆಗಳಿಂದ ದೈವಾರಾಧನೆಗೆ‌ ಇಷ್ಟೊಂದು‌ ಪೆಟ್ಟು ಬಿದ್ದಿಲ್ಲ ಆದರೆ ಈಗ ಅಗುತ್ತಿರುವ ವೈದಿಕ ಪ್ರಭಾವದ ಬದಲಾವಣೆ ನಿಜಕ್ಕೂ ದೈವಾರಾಧನೆಯ ಮೂಲ ನೆಲೆಗಟ್ಟನ್ನು ಅಲುಗಾಡಿಸಿದೆ. ಈಗ ಕೊಡಮಂದಾಯ ಕೊಡಮಣಿತ್ತಾಯಿ ಆಯಿತು, ಲೆಕ್ಕೇಸಿರಿಯು‌ ರಕ್ತೇಶ್ವರಿ, ಜುಮಾದಿ ಹೋಗಿ‌ ದೂಮಾವತಿ, ಗುಳಿಗನು ಗುಳಿಗೇಶ್ವರ, ಕುಕ್ಕಿನಂದಾಯ ಕುಕ್ಕಿನಂತಾಯಿ, ಕನಪಾಡಿದಾಯನು ಕನಪಾಡಿ ತಾಯೇಶ್ವರಿ ಆದಳು, ಪೊಸ ಭೂತವು ಹೊಸಮ್ಮವಾಗಿ,‌ದುಗ್ಗಲಾಯ ತಾನು ದುರ್ಗಾಲಯನಾದ, ಪಂಜುರ್ಲಿ‌ಯು ವಾರಾಹಿ ಆದ, ಅಬ್ಬಗ- ದಾರಗರು ಅರ್ಬಕ್ಕ ದಾರಕೇಶ್ವರಿ ಆದರು, ಪಿಲಿಚಾವಂಡಿಯು ವ್ಯಾಘ್ರ ಚಾಮುಂಡಿಯಾಗಿ ಬದಲಾಯಿತು‌‌. ಉಳ್ಳಾಯನು ವೈಷ್ಣವರಿಗೆ‌ ವಿಷ್ಣುಮೂರ್ತಿ‌ಯಾದ, ಮಲೆರಾಯನಿಗೆ ಮಲರಾಯಿ‌ ಎಂಬ ಹೊಸ ನಾಮಕರಣ, ಜಾವದೆಗಳು ದೇವತೆಗಳಾದವು, ಕುರಿಯಾಡಿತ್ತಾಯನು‌ ತಾಯಿ ಆಗಿ ಕುರಿಯಾಡಿತ್ತಾಯಿ ಆಯಿತು. ಕೊನೆಯದಾಗಿ ಉಳಿದಿದ್ದ ಒಂದು ದೈವ ಜಾರಂದಾಯನೂ ಕಳೆದ ಒಂದು ವರ್ಷದ ಹಿಂದೆ ಸ್ರ್ತೀ ರೂಪ ಧರಿಸಿಕೊಂಡು ಜಾರಂತಾಯಿ ಆದ. ಹೀಗೆ ಇನ್ನು ಹಲವಾರು ನಾಮಾಂತರಗಳು ಹಲ್ಲೆ ನಡೆಯುತ್ತಲೇ ಇದೆ. ಒಂದು ಚೂರು ಚಿಂತಿಸದೇ ನಮ್ಮ ಹಿರಿಯರು ಹೆಸರು ಇಟ್ಟು ಆರಾಧಿಸಿಕೊಂಡು ಬಂದಂತ ಈ‌ ಆನಾದಿ ದೈವಗಳ ಹೆಸರುಗಳನ್ನು‌ ಬದಲಾಯಿಸಲು‌ ನಮಗೆ ಅಧಿಕಾರವನ್ನು ಕೊಟ್ಟವರಾದರೂ ಯಾರು?

ತುಳುನಾಡಿನ ದೈವಗಳು ಅವೈದಿಕ ಮೂಲದ ಶಕ್ತಿಗಳು. ಅವುಗಳ ಆರಾಧನೆಗೆ ಕಾರಣಗಳ ಸಹಿತವಾದ‌ ಪಾರ್ದನವೆಂಬ ಅಮೂಲ್ಯ ಮೌಖಿಕ ದಾಖಲೆಗಳಿವೆ. ಅವುಗಳ ಹೆಸರಿಗೂ ಅದರದೇ ಆದ ಅರ್ಥವಿದೆ‌ ಕಾರಣವಿದೆ. ಇದನ್ನೆಲ್ಲಾ ಗಾಳಿಗೆ ತೂರಿ ದೈವಗಳನ್ನಲ್ಲಾ ಸನಾತನ ದೇವತೆಗಳ ಅಡಿಯಾಳುಗಳನ್ನಾಗಿ ಮಾಡಿ ವೈದಿಕ ಕ್ರಿಯೆಗಳನ್ನು ಮಾಡಿಸಿ ಅದರ‌ ಮೂಲವನ್ನೇ ನಾಶಮಾಡಿ ಅದಕ್ಕೆ ಪುರಾಣದ ಕತೆಗಳನ್ನು ಸೃಷ್ಟಿಸಿ ಅವುಗಳ ಹೆಸರನ್ನೇ ಬದಲಾಯಿಸಿ‌‌ ನಮ್ಮದು ತುಳುನಾಡ ವಿಶಿಷ್ಟ‌ ಸಂಸ್ಕೃತಿ ಎಂದು ಬೊಬ್ಬೆ ಹೊಡೆಯಲು‌ ನಮಗೆ ನಾಚಿಕೆ ಆಗುವುದಿಲ್ಲವೇ? ವೈದಿಕ ದೇವರನ್ನು ಅವೈದಿಕ ದೈವಗಳನ್ನು ಒಂದೇ‌ ತಕ್ಕಡಿಯಲ್ಲಿ ತೂಗಿ ಎರಡಕ್ಕೂ ಒಂದೇ ರೀತಿಯ ಆರಾಧನೆ ಮಾಡಿದರೆ ಇತರ ಸಂಸ್ಕೃತಿಗೂ ನಮ್ಮದಕ್ಕೂ ಎಲ್ಲಿದೆ ವ್ಯತ್ಯಾಸ? .

ಇನ್ನು ಇದನ್ನು ಪ್ರಶ್ನೆ ಮಾಡಿದರೆ ಬರುವ ಉತ್ತರ ದೇವರೆ ದೈವಗಳಾಗಿ ಇಲ್ಲಿ ನೆಲೆಸಿರುವುದು ಮತ್ತು ದೈವಗಳೆಲ್ಲವೂ ದೇವರ ಗಣಗಳು ಎಂದು‌‌. ಒಂದು‌ ಪಕ್ಷ ಇದನ್ನು ಒಪ್ಪುವುದಾದರೆ ದೈವಗಳು ಮತ್ತು ಅರಾಧನ ಕ್ರಮಗಳು ತುಳುನಾಡಿನಲ್ಲಿ ಮಾತ್ರ ಯಾಕೆ? ಕನ್ನಡ ನಾಡಿನಲ್ಲೂ ಅನೇಕ ದೇವರುಗಳಿದ್ದಾರಲ್ಲವೇ? ಅಲ್ಲಿ ಏಕೆ ದೇವರು ದೈವಗಳ‌ ರೂಪ ತಾಳಲಿಲ್ಲ. ಕನ್ನಡ ನಾಡಿನಲ್ಲಿ ದೇವರ ಅವತಾರವೆಂಬ ಅನೇಕ ರೀತಿಯ ಗ್ರಾಮದೇವತೆಗಳಿವೆ ಆದರೆ ಅವುಗಳು ಯಾವುದೂ ಗಣಗಳಲ್ಲ.

ಇಲ್ಲಿ ದೇವರನ್ನು ದೂರುವ ಪ್ರಯತ್ನವಾಗಲಿ ವೈದಿಕತೆಯ ವಿರೋಧವಾಗಲಿ ಮಂಡಿಸಲಾಗಿಲ್ಲ. ತುಳುನಾಡಿನ ಜನರು ದೇವರನ್ನೂ ನಂಬುವವರೇ ಆದರೆ ನಮಗೆ ಮಿಶ್ರಿತ ಆರಾಧನೆ ಬೇಡ. ದೇವರಿಗೆ ಅದರದೇ ಆದ ಆರಾಧನೆ ಇದೆ. ದೇವರ ಪ್ರತಿಷ್ಠೆಗೆ ಪೂಜೆಗೆ ಅದರದ್ದೇ ಆದ ನಿಯಮಗಳಿವೆ. ಹಾಗೇ ದೈವಗಳಿಗೆ ಅದರದ್ದೇ ಆದ‌ ವಿಧಿವಿಧಾನಗಳಿವೆ. ಒಂದು ದೈವವನ್ನು ನಂಬುವುದಕ್ಕೂ ಅದರದ್ದೇ ಕ್ರಿಯೆಗಳಿವೆ. ಅವುಗಳೆಲ್ಲವನ್ನೂ ತಿರಸ್ಕರಿಸಿ ದೇವರಿಗೆ ಮಾಡುವ ಬ್ರಹ್ಮ ಕಲಸ, ಪ್ರತಿಷ್ಠೆ, ಅಭಿಶೇಕ, ಚಂಡಿಕಯಾಗ, ರಂಗ ಪೂಜೆ, ಹೂವಿನ ಪೂಜೆಗಳನ್ನು ದೈವಗಳಿಗೆ ಮಾಡಿದರೆ ಇದಕ್ಕೆ ಅರ್ಥವುಂಟೇ? . ದೈವಗಳಿಗೆ ನಿತ್ಯ ಪೂಜೆ ನಮ್ಮ ಹಿರಿಯರು ಮಾಡಿದ್ದಾರೆಯೆ? ಮೇಲೆ ಹೇಳಿದ ಪೂಜೆಗಳನ್ನು ನಮ್ಮ ಹಿಂದಿನ ಹಿರಿಯ ತಲೆಮಾರು ಮಾಡಿದ್ದರೆ? ಅದಕ್ಕೆ ಅವಕಾಶ ಇತ್ತೇ? ಅ ವಿಧಿವಿದಾನಗಳನ್ನು ಮಾಡುವವರು ದೈವಾರಾಧನೆಯ ಚೌಕಟ್ಟಿನಲ್ಲಿ ಇದ್ದರೂ ಕೂಡ ಅವರು ಅದನ್ನು ಮಾಡುತ್ತಿರಲ್ಲ‌. ಆದರೆ ಈಗ ಒಂದು ದೈವವನ್ನು ನಂಬ ಬೇಕಾದರೆ ಲಕ್ಷಗಟ್ಟಲೆ ಖರ್ಚು ಮಾಡಿ ಸ್ಥಳದಲ್ಲಿ ಇದ್ದ ದೋಷ ಅದು ಇದೂ ಎಲ್ಲವನ್ನೂ ತೆಗೆಯಬೇಕು. ಹೋಮ ಹವನ ಮಾಡಿ ನಂತರ ಬ್ರಹ್ಮ ಕಲಶ ಮಾಡಿ ದೈವ ಪ್ರತಿಷ್ಠೆ ಮಾಡಬೇಕು‌‌ . ದೇವರಿಗೆ ಪ್ರತಿಷ್ಠೆ ಸರಿ ಆದರೆ ದೈವಗಳು ಯಾವತ್ತೂ ಚರ. ಅಂದರೆ ದೈವಗಳನ್ನು ಯಾವುದೇ ರೂಪದಲ್ಲಿ ನಂಬಬಹುದು‌. ಅವುಗಳಿಗೆ ಪ್ರತಿಷ್ಠೆ ಎಂಬ ಪರಿಕಲ್ಪನೆಯೇ ಇಲ್ಲ. ನಮ್ಮ ಹಿರಿಯರು ದೈವಗಳನ್ನು ಕಲ್ಲಿನಲ್ಲಿ , ಕೂಚಿಯ ನೀರಿನಲ್ಲಿ, ಪ್ರಕೃತಿದತ್ತ ವಸ್ತುಗಳಲ್ಲಿ ಕಂಡವರು. ತಮ್ಮ ಆತ್ಮ ಭಕ್ತಿಗೆ ನಿರಾಳವಾಗಿ ನಂಬಿದಂತಹ ದೈವಗಳು ಅವರು ಯಾವ ಪರಿಯಲ್ಲಿ ಆರಾಧಿಸಿದರೂ ಒಲಿದು ಬಂದು ಕೈಹಿಡಿದು ಕಾಪಾಡಿವೆ. ಅಂದು ಹರಿವ ತೋಡಿನ ನೀರಿನಿಂದ ಆರಾಧಿಸಿದ ದೈವಗಳ ಚೈತನ್ಯ ಕಾರಣಿಕಗಳು ಈಗಿನ ಬ್ರಹ್ಮ ಕಲಸ ಆದ ದೈವಗಳಲ್ಲಿ ಇದೇಯೇ ? ಇದು ನಿಜವಾಗಲೂ ಯೋಚಿಸಬೇಕಾದ ಸಂಗತಿ. ದೇವರ ಚೈತನ್ಯ ಮತ್ತು ಅದರ ಅಷ್ಠಬಂಧವನ್ನು ಗಟ್ಟಿಮಾಡಲು ೧೨ ವರ್ಷಗಳಿಗೊಮ್ಮೆ ಬ್ರಹ್ಮ ಕಲಸ ಮಾಡುವುದು ವೈದಿಕ ಸಂಪ್ರದಾಯದ ಒಂದು ವಿದಿ. ಆದರೆ ಅಷ್ಠಬಂಧವೇ ಇಲ್ಲದ ದೈವಗಳಿಗೆ ಯಾವ ಬ್ರಹ್ಮ ಕಲಸ? ೫೦೦ ರಿಂದ ಸಾವಿರ ವರ್ಷಗಳ ಹಿಂದಿನಿಂದಲೂ ಅರಾಧಿಸಿಕೊಂಡು ಬಂದ ತುಳುನಾಡಿನ ದೈವಗಳ ಚೈತನ್ಯ ಈಗ ಕಡಿಮೆಯಾಗಲು ಶುರುವಾಯಿತೇ? . ಚಿಂತಿಸುವ ಅಗತ್ಯವಿದೆ‌.

ಯಾವಾಗ ದೈವಗಳ ಹೆಸರಿನಲ್ಲಿ ತ್ತಾಯಿ‌ ಮತ್ತು ಈಶ್ವರ ಸೇರಿಕೊಳ್ಳಲು ಶುರುವಾಯಿತೋ ಅಂದರೊಂದಿಗೆ ಅವುಗಳ ಆರಾಧನೆಯೂ ಬದಲಾಯಿತು. ತುಳುನಾಡಿನ ಅತೀ ಪ್ರಾಚೀನ ದೈವ ಬೆಮ್ಮೆರ್ ಬ್ರಹ್ಮನಾಗಿ ಹೋದ. ವೈದಿಕದ ಚತುರ್ಮುಖ ಬ್ರಹ್ಮನಿಗೆ ಗುಡಿ ಗೋಪುರಗಳು ಪೂಜೆ ಪುರಸ್ಕಾರಗಳು ಬಹಳವೇ ಕಮ್ಮಿ.

ಆದರೆ ಈಗ ಆತನ ಹೆಸರು ತುಳುನಾಡಿನ‌ ಬೆಮ್ಮೆರೊಂದಿಗೆ ಸೇರಿ ಈಗ ಬೆಮ್ಮೆರ್ ಎಂದರೆ ಬ್ರಹ್ಮ ದೇವನೇ ಎಂದಾಗಿದೆ.

ದೈವಗಳ ಹೆಸರನ್ನು ಬದಲಾಯಿಸಲು ಹಲವು ಕಾರಣಗಳಿವೆ. ಇದರಲ್ಲಿ ಮುಖ್ಯವಾಗಿ ಅಷ್ಟಮಂಗಲ ಪ್ರಶ್ನೆಯೂ ಒಂದು. ಜನರು ದೈವವು ಕೊಡಿಯಡಿಯಲ್ಲಿ‌ ಕೊಡುವ ನುಡಿಗೆ ಬೆಲೆಕೊಡದೇ ಅದೇ ದೈವದ‌ ಬಗ್ಗೆ ಕೇಳಲು ಅಷ್ಠಮಂಗಲದ ಮೊರೆ ಹೋಗುವುದುನ್ನು ನೋಡಿ ನಗುವುದೋ ಅಳುವುದೋ ಗೊತ್ತಾಗುತ್ತಿಲ್ಲ. ಇನ್ನು ದೈವಗಳೇ‌ ತನ್ನ ಆರಾಧನೆಗಳ ಬಗ್ಗೆ ತಾನು ಕೊಡ ಬೇಕಾದ ‌ನ್ಯಾಯ ತೀರ್ಪುಗಳ ಬಗ್ಗೆ ಪ್ರಶ್ನೆಯಲ್ಲಿ ಕೇಳಿ ಎಂದು ನೇಮದಲ್ಲಿ ನುಡಿಕೊಡುವುದು ವಿಪರ್ಯಾಸವೇ ಸರಿ. ಇನ್ನೂ ಪ್ರಶ್ನೆ ಇಡುವ‌ ವೈದಿಕ ಸಂಪ್ರದಾಯವನ್ನು ಆಚರಿಸುವ ಜನಗಳೂ ಕೂಡ ದೈವಗಳನ್ನು ದೇವರ ಅಂಶ‌ಮಾಡುವುದೂ‌ ಇದೆ. ಇಲ್ಲಿ ತಪ್ಪು ಒಬ್ಬರದ್ದಲ್ಲ. ಎಲ್ಲರಿಗೂ ತಪ್ಪು ಸಮನಾಗಿ ಹಂಚಿಹೋಗಿದೆ.

ಬಂಧುಗಳೇ ದೈವಗಳ ಹೆಸರನ್ನು ಬದಲಾಯಿಸುವ ಮುನ್ನ‌ ಸ್ವಲ್ಪ ನಿಮ್ಮ ಬುದ್ಧಿಗೆ ಕೆಲಸಕೊಡಿ. ಪ್ರತಿಯೊಂದು ದೈವಕ್ಕೂ ಅದರದ್ದೇ ಆದ ಚರಿತ್ರೆ ಮತ್ತು ಚರಿತ್ರೆಗೆ ತಕ್ಕಂತೆ ಹೆಸರಿದೆ. ಅದನ್ನು ಮೊದಲು ತಿಳಿದುಕೊಳ್ಳಿ.

ನಾವು ಈಗ ಮಾಡುತ್ತಿರುವ "ತ್ತಾಯಿ" ಎಂಬ ಶಬ್ಧಕ್ಕೆ ತುಳು ಭಾಷೆಯಲ್ಲಿ ಅರ್ಥವೇ ಇಲ್ಲ. ತ್ತಾಯಿ ಎಂಬುದ್ದಕ್ಕೆ "ತ್ತಾಯ" ಎಂಬುದು ಪುಲ್ಲಿಂಗ ಅಥವಾ ಪುರುಷರೂಪ ಪದ ಅಲ್ಲ. ತ್ತಾಯ ಎಂಬುದು ಕನ್ನಡೀಕರಣ ಪ್ರಭಾವದ ಅರ್ಥವಿಲ್ಲದ ಪದ. "ತ್ತಾಯ" ಎಂಬ ಪದ ತುಳುವಿನ "ದಾಯೆ" ಎಂಬ ಪದದಿಂದ ಬಂದಿದೆ. ಹಾಗಾದರೆ ದಾಯೆ ಎಂದರೆ ಏನು? ಇದಕ್ಕೆ ಉತ್ತರ ಇದೆ. ದಾಯೆ ಎಂಬ ಪದಕ್ಕೆ ನಾಮ ಪದ ಸೇರಿದಾದ ಅರ್ಥ ಬರುತ್ತದೆ. ನನ್ನ ಊರು ಅಲೆತ್ತೂರು, ನನ್ನಲ್ಲಿ ಒಬ್ಬರು ಬಂದು "ನೀನು ಎಲ್ಲಿಯವನು?" ಎಂದು ಕೇಳಿದಾಗ ನಾನು ತುಳುವಿನಲ್ಲಿ "ಯಾನ್" ಅಲೆತ್ತೂರುದಾಯೆ" ಎಂದು ಹೇಳುತ್ತೇನೆ. ಇದೇ ಪ್ರಕ್ರಿಯೆ ದೈವಗಳ ಹೆಸರಲ್ಲಿ ಇರುವಂತಹದ್ದು. ಕನಪಾಡಿ ಎಂಬ ಪ್ರದೇಶದಲ್ಲಿ ಬಟ್ಟೆಡುಲ್ಲಾಯ ಎಂಬ ಜೈನ ವ್ಯಕ್ತಿಯು ತಾನು ನಂಬಿದ ಅರಸು ದೈವಕ್ಕೆ ಮಾಡ ಕಟ್ಟುತ್ತಾರೆ. ದೈವವನ್ನು ಒಕ್ಕಲು ಮಾಡುವಾಗ ಹೆಸರು ಕರೆಯುವ ಸಂಧರ್ಭದಲ್ಲಿ ಅವರು ಕನಪಾಡಿದಾಯ ಎಂದು ಹೇಳಿ ಒಕ್ಕಲು ಮಾಡಿಸುತ್ತಾರೆ. ಈ ದೈವ ಮಾಗಣೆಗೆ ಅರಸು ದೈವವಾಗುತ್ತದೆ. ಅಂದರೆ ಕನಪಾಡಿಯಲ್ಲಿ ನೆಲೆಯಾದವನು ಕನಪಾಡಿಯವನು. ಇದನ್ನು ತುಳುವಿನಲ್ಲಿ ಕನಪಾಡಿದಾಯೆ ಎಂದು ಕರೆದರು ಅದು ದೈವಕ್ಕೆ ಹೆಸರಾಯಿತು. ಇದನ್ನು ಕನಪಾಡಿತ್ತಾಯಿ ಮಾಡಿದರೆ ತುಳುವಿನಲ್ಲಿ ಇದಕ್ಕೆ ಅರ್ಥವೇ ಇಲ್ಲ. ದಾಯೆ ಎಂದರೆ ಅಲ್ಲಿಯವನು ಎಂದು ಅರ್ಥ. ಕುಕ್ಕುದ(ಮಾವಿನ) ಮರದ ಕೆಳಗೆ ಪ್ರಕಟಗೊಂಡ ದೈವ ಕುಕ್ಕಿನಂದಾಯ, ಹಾಗೇ ಕೊಡಮಣಿದಾಯೆ ಎಂದರೆ ಕೊಡಮಣಿ ಬರ್ಕೆಯ ಮನೆಯಲ್ಲಿ ಆರಾಧನೆ ಪಡೆದ ದೈವ. ಆ ಊರಿನ ಪ್ರಧಾನ ದೈವವಾದ್ದರಿಂದ ಕೊಡಮಣಿದಾಯೆ ಎಂದು ಕರೆದರು. ಜಾರದ ಬರ್ಕೆಗೆ ಬಂದವನು ಜಾರಂದಾಯ, ಕುರಿಯ ಕಡಂಬಿಲಕ್ಕೆ ಬಂದ ದೈವ ಕುರಿಯಾಡಿದಾಯ/ ಕುರಿಯಾಡಿದಾರ್. ಇಂತಹ ಅರ್ಥಪೂರ್ಣ ಹೆಸರುಗಳು ನಮ್ಮ ದೈವಗಳಿಗೆ ಇರುವಾಗ ಯಾವುದೋ ಅರ್ಥವಿಲ್ಲದ ಪದ ಬಳಸಿ ಕರೆಯಲು ನಮಗೆ ಏನು ಅನ್ನಿಸುವುದಿಲ್ಲವೇ?. ಪುರುಷ ಗಣಗಳಾಗಿರುವ ರಾಜನ್ ದೈವಗಳು ಕೂಡ ಈಗ ಸ್ರ್ತೀ ಗಣಗಳಾಗಿವೆ.

ಇನ್ನು ನಮ್ಮ ಹಿರಿಯರು ಹೆಣ್ಣು ದೈವಗಳಿಗೆ ಉಲ್ಲಾಲ್ದಿ ಎಂದು ಕರೆದು ಅದನ್ನು ಬೇರೆಯೇ ವಿಂಗಡಿಸಿದ್ದಾರೆ. ಉಲ್ಲಾಲ್ದಿಯೂ ಕೂಡ ಹೆಸರಲ್ಲ ಅದೂ ಕೂಡ ಮೇಲಿನ ದೈವಗಳ ಹೆಸರಿನಂತೆ ಒಂದು ಸೂಚಕ‌. ಮುಂದಕ್ಕೆ ಅದುವೇ ಹೆಸರಾಗಿ ಪರಿಣಮಿಸಿದೆ ಅಷ್ಟೇ, ಉಲ್ಲಾಲ್ದಿ ಎಂದರೆ ಯಜಮಾನ್ದಿ, ಅನಂತಾಡಿಯ‌ ಉಲ್ಲಾಲ್ದಿ‌ ಎಂದರೇ ಅನಂತಾಡಿಯ ಯಜಮಾನ್ದಿ‌ ಎಂದೂ ಮಾಣಿ ಉಲ್ಲಾಲ್ದಿ ಎಂದರೆ ಮಾಣಿಯ ಯಜಮಾನ್ದಿ ಎಂದೂ ಅರ್ಥ. ಗ್ರಾಮ ದೈವಗಳು ಆಯಾ ಗ್ರಾಮಗಳ ಅರಸ ಅಥವಾ‌ ಯಜಮಾನ ಯಜಮಾನ್ದಿ ಅಂದರೆ‌ ಒಡೆಯ ಒಡತಿಗೆ ಸಮ ಎಂಬ‌ ಕಲ್ಪನೆ ನಮ್ಮ ಹಿರಿಯರದ್ದು. ಇದು ಒಂದು ವರ್ಗದ ದೈವಗಳ ಕತೆಯಾದರೆ ಇನ್ನು ಮಾನವ ರೂಪದ ದೈವಗಳ ಕಥೆಗಳಂತೂ ಚಿಂತಾಕ್ರಾಂತವಾಗಿದೆ. ನಮ್ಮ ಭೂತಾರಾಧನೆಗೆ ಮೂಲ ಹಿರಿಯರ ಆರಾಧನೆಯಿಂದ ಪ್ರಾರಂಭವಾಯಿತು. ನಮ್ಮ ಹಿರಿಯರು ಅವರ ಗತಿಸಿ ಹೋದ ಹಿರಿಯರನ್ನು ಆರಾಧಿಸುತ್ತಿದ್ದರು. ಇದಕ್ಕೆ ಇಂದಿಗೂ ನಿದರ್ಶನಗಳಿವೆ. ಗುತ್ತು ತರವಾಡು ಮನೆಗಳಲ್ಲಿ ಅದರಲ್ಲೂ ಬಿಲ್ಲವರ ಗುತ್ತು ಮನೆತನಗಳಲ್ಲಿ ಇಂದಿಗೂ ಸಾಲು ಸಾಲಾಗಿ‌ ಮಣೆಮಂಚದಲ್ಲಿಟ್ಟ ಮನೆತನದ ಹಿರಿಯ ವ್ಯಕ್ತಿಗಳ ಕಂಚಿ ಮೂರ್ತಿಗಳನ್ನು ನೋಡಬಹುದು‌‌. ಹಲವು ಕಡೆಗಳಲ್ಲಿ ಇವುಗಳಿಗೆ ಕೋಲ ನೇಮ‌ ಅಗುವುದಿದೆ. ಇದು ಪ್ರಾಚೀನ ಭೂತಾರಾಧನೆಯ ಪಳೆಯುಳಿಕೆಗಳೆಂದು ತೋರುತ್ತದೆ. ಇಂತಹ ಆರಾಧನೆಗಳೇ ಮುಂದುವರಿದು ಕೊರಗ ತನಿಯ, ಕಲ್ಕುಡ-‌ಕಲ್ಲುರ್ಟಿ, ಕೊರತಿ, ಮುಂತಾದ ಮಾನವ ಮೂಲದ ದೈವಗಳು ಅರಾಧನ ಚೌಕಟ್ಟಿನಲ್ಲಿ ಹೆಚ್ಚು‌ ಪ್ರಸಿದ್ದವಾದವು. ಇನ್ನು ಕೆಲವು ದೈವಗಳು ನಂತರದ‌ ಇನ್ನೊಂದು ರೀತಿಯಲ್ಲಿ ಪ್ರಚಾರ‌ ಪಡೆಯಿತು. ಆದರೆ ನಿಜವಾಗಿಯೂ ದುಃಖದ ಸಂಗತಿಯೆಂದರೆ ಒಬ್ಬ ಕೊರಗ ಸಮುದಾಯ ವ್ಯಕ್ತಿಯಾದ ಕೊರಗ ತನಿಯನು ಸಮಾಜದ ಮೇಲಿನ ದೌರ್ಜನ್ಯವನ್ನು ಮೆಟ್ಟಿ ವಿರೋಧಿಸಿ ಮರಣ ಅಪ್ಪಿ ದೈವತ್ವ ಪಡೆದು ಜನರು ಅವನನ್ನು ಆದರ್ಶ ವ್ಯಕ್ತಿಯಂತೆ ಕಂಡು ಆರಾಧಿಸಿಕೊಂಡು ಬರುತ್ತಿರುವಾಗ ಆತನನ್ನು ಈಶ್ವರನ ಅಂಶ ಮಾಡಿ ಅವನ ಮೂಲ ಚರಿತ್ರೆಗೆ ಕೊಡಲಿ ಏಟು ಕೊಟ್ಟು ವೈದಿಕಗೊಳಿಸಿದ್ದು. ಕೊರಗ ತನಿಯ ಮೈರಕ್ಕೆ ಬೈದ್ಯದಿಯ ಪ್ರೀತಿಯ ಸಾಕು ಮಗ. ಆತ ಪರ ಜಾತಿಯಾದರೂ ತಂದೆ ತಾಯಿ ಇಲ್ಲದ ಆತನನ್ನು ಸಾಕಿ ಬೆಳೆಸಿದವಳು ಆಕೆ. ಆದರೆ ಆತ ಸಣ್ಣ ಪ್ರಾಯದಲ್ಲೇ ದುರಂತ ಮರಣವನ್ನಪ್ಪಿದಾಗ ಅದನ್ನು ಆ ತಾಯಿ ಹೇಗೆ ತಾನೆ ಸಹಿಸಿಯಾಳು. ಇನ್ನು ತನ್ನೊಳಗೆ ಆಸೆ ಆಕಾಂಕ್ಷೆಗಳನ್ನಿಟ್ಟುಕೊಂಡ ತನಿಯನೂ ಕೂಡ ತಾನು ಇಷ್ಟು ಬೇಗ ಕಾಯ ಬಿಡುತ್ತೇನೆಂದು ತಿಳಿದಿರಲಿಕ್ಕಿಲ್ಲ.

ಅವರ ಆ ಅತೃಪ್ತ ಮನಸ್ಸು ಮತ್ತು ಆತ್ಮ ದೈವತ್ವ ಎಂಬ ಗುಡಿಗೆ ಪ್ರವೇಶಮಾಡಿತು‌‌. ಇತ್ತ ಮೈರಕ್ಕೆ ಬೈದೆದಿಯೂ ತಾನು ಪ್ರೀತಿಯಿಂದ ಸಾಕಿದ ಮಗನ್ನು ಕಳೆದುಕೊಂಡ ನಂತರ ಅವನ ನೆನಪಿಗಾಗಿ ತುಳುನಾಡಿನ ಸಂಪ್ರದಾಯದಂತೆ ಆತನಿಗೆ ಎಡೆ ಹಾಕಿ ಹಿರಿಯರಿಗೆ ಬಡಿಸುವ ಕ್ರಮದಂತೆ ಬಡಿಸಿರಬೇಕು. ತುಳುನಾಡಿನ ನಂಬಿಕೆಯಂತೆ ಇಲ್ಲಿ ಸ್ವರ್ಗ ನರಕದ ಕಲ್ಪನೆ ಇಲ್ಲ. ಸತ್ತ ಹಿರಿಯರು ತಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ನಮ್ಮ ತುಳುವರದ್ದು ಅದಕ್ಕೆ ಪೂರಕವಾಗಿ ಸತ್ತವರನ್ನು ಮನೆಯ ಒಳಗೆ ಕರೆಯುವ( ಉಲಾಯಿ ಲೆಪ್ಪುನ) ಕ್ರಮ ಇಂದಿಗೂ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ. ಇದೇ ಪರಿಕಲ್ಪನೆಯಲ್ಲಿ ಕೊರಗ ತನಿಯನು ತನ್ನ ಸಾಕು ತಾಯಿ ಹಾಕಿದ ಅಗೇಲನ್ನು ಸ್ವೀಕರಿಸಿ ದೈವತ್ವದ ಸಂಕೇತವಾಗಿ ನಂಬಿದವರನ್ನು ಸಲಹುವ ಕಾರ್ಯಮಾಡಿ ತುಳುನಾಡಿನಲ್ಲಿ ಪ್ರಸಿದ್ದಿಗೊಳ್ಳುತ್ತಾನೆ. ಇಂತಹ ಉದಾಹರಣೆ ಭಾರತದ ಹಲವು ಕಡೆಗಳಲ್ಲಿ ಇವೆ. ಕೊರಗ ತನಿಯನ ಹಾಗೇ ಇತರ ಪ್ರಚೀನ ಮಾನವ ಮೂಲದ ದೈವಗಳೂ ಕೂಡ ಹೀಗೆ ರೂಪು ಪಡೆದವುಗಳು. ಇಂತಹ ದೈವಗಳನ್ನು ದೇವರಿಗೆ ಸಮೀಕರಿಸಿ ಆ ದೇವರ ಅಂಶ ಈ ದೇವರ ಅಂಶವೆಂದೆಲ್ಲಾ ಹೇಳಿಕೊಂಡು ಅದರ ಆರಾಧನೆಯನ್ನು ಬದಲಿಸುವ ಪ್ರಯತ್ನವನ್ನು ಮಾಡುತ್ತಿರುವ ನಾವು ನಿಜಕ್ಕೂ ಮೂರ್ಖರು. ಇಷ್ಟು ವರ್ಷಗಳಿಂದ ನಾವು ನಮ್ಮ ಹಿರಿಯರು ನಂಬಿಕೊಂಡು ಬಂದ ರೀತಿಯಲ್ಲಿಯೇ ದೈವಗಳನ್ನು ನಂಬಿಕೊಂಡು ಬಂದಿರುವಾಗ ಇನ್ನು ದೈವಗಳು ಯಾರ ಅಂಶ ಎಂಬ ಸಂಶೋಧನೆ ಬೇಕೆ? ದೈವಗಳಿಗೆ ಪಾರ್ದನವೇ ಎಲ್ಲಾ.‌ ಮೂಲ ಪ್ರಾಚೀನ ಪಾರ್ದನವನ್ನು ನೋಡಿಕೊಂಡು ಆಚರಣೆ ಮಾಡಬೇಕೆ ಹೊರತು ಹೊಸತನ್ನು ಹುಡುಕಿ ದೈವಗಳ ನೆಲೆಗಟ್ಟನ್ನು ಹಾಳುಗೆಡವುದನ್ನು ದಯವಿಟ್ಟು ನಿಲ್ಲಿಸೋಣ.

ದೈವ ಹೆಣ್ಣೊ ಗಂಡೊ ಎಂಬ ವಿತಂಡ‌ ವಾದ ನಮಗೆ‌ ಬೇಡ. ನಮಗೆ‌ ನಮ್ಮ ದೈವ ಯಾವುದೆಂದು ಅದರ ಹೆಸರೇನೆಂಬುದನ್ನು ಅನಾದಿ ಕಾಲದಿಂದಲೂ ನಮ್ಮ ಹಿರಿಯರು ತಿಳಿಸಿಕೊಟ್ಟಿದ್ದಾರೆ. ಅದೇ ಹೆಸರಿನಲ್ಲಿ ಅದೇ ರೂಪದಲ್ಲಿ ನಾವು ಆರಾಧಿಸೊಣ.‌ ಅರ್ಥವಿಲ್ಲದ ಹೆಸರನ್ನಿಟ್ಟು ಕರೆದು ನಮ್ಮ ದೈವಗಳಿಗೆ ನಾವೇ ಅಪಮಾನ ಮಾಡುವುದು ನಿಜಕ್ಕೂ ಸರಿಯಲ್ಲ.ನಾವೇ ನಮ್ಮ‌ತನವನ್ನು ಮಾರಿ ಕೊಂಡು ದೈವಗಳನ್ನು ವೈದಿಕ ಜಗತ್ತಿಗೆ ದೂಡುತ್ತಿದ್ದೇ‌ವೆ. ಇದರಲ್ಲಿ ವೈದಿಕ ಜನಾಂಗವನ್ನಾಗಲಿ ಅಥವಾ ವೈದಿಕ ಕ್ರಿಯೆ‌ ಮಾಡುವ ಇತರ ಜನಾಂಗಗಳನ್ನಾಗಲಿ ದೂರುವುದು ಸರಿಯಲ್ಲ. ನಾವು ನಮ್ಮ ದೈವಗಳ ಕಾರ್ಯಮಾಡುವುದನ್ನು ಬಿಟ್ಟು ಅದನ್ನು‌ ಹೊರಗಿನವರಿಗೆ ನಾವೇ ಕರೆದು ಕೊಟ್ಟಿದ್ದೇವೆ. ತಂತ್ರಿಗಳಾಗಲಿ ಬ್ರಾಹ್ಮಣ ಅರ್ಚಕರಾಗಲಿ ದೈವಾರಾಧನೆಯ ಚೌಕಟ್ಟಿನಲ್ಲಿ ಅವರಿಗೇ ಸೀಮಿತವಾಗಿ ದೈವಗಳ ಕೆಲವೊಂದು ಕಾರ್ಯವನ್ನು ಮಾಡಿ ಹೋಗುವುದು ಬಿಟ್ಟರೆ ಉಳಿದೆಲ್ಲವನ್ನು ಅವೈದಿಕರೇ ಮಾಡುತ್ತಿದ್ದರು‌. ಈಗ ದೈವದ ಕಾರ್ಯಗಳಿಗೆ ಅದರ ಪೂಜೆಗಳಿಗೆ ಯಾರು ಮುಂದೆ ಬರದೇ ನಾವು ದೇವರ ಪೂಜೆ ಮಾಡುವ ವೈದಿಕ ಅರ್ಚಕರನ್ನು ಕರೆಸುತ್ತೇವೆ‌. ಅವರು ದೈವಗಳಲ್ಲಿ ದೇವರನ್ನು ನೋಡುತ್ತಾರೆ‌. ತಮಗೆ ಗೊತ್ತಿರುವ ವೈದಿಕ ಕ್ರಿಯೆಗಳನ್ನೇ ದೈವಗಳಿಗೂ ಮಾಡುತ್ತಾರೆ. ಪಾಪ ಅವರು ತಾನೇ ಏನು ಮಾಡಿಯಾರು. ಅವರಿಗಿದೊಂದೇ ದಾರಿ. ಅವರು ಮಾಡುವ ಪೂಜೆಗಳೇ ಮುಂದುವರಿದು ದೈವಗಳ ಮೂಲ‌ ಆಚರಣೆ ನೆಲಸಮವಾಗುತ್ತದೆ. ಇದನ್ನು ತುಳುನಾಡಿನ ಜನ ಇದನ್ನು ಅರ್ಥಮಾಡಿಕೊಳ್ಳಬೇಕು‌.

ಇಲ್ಲಿ ನಾನು ಹೇಳಿರುವ ಎಲ್ಲಾ ವಿಷಯಗಳನ್ನು ಈ ಹಿಂದೆ ಅನೇಕ ಮಂದಿ ತಮ್ಮ ಬರವಣಿಗೆ‌ ಮೂಲಕ ಬರೆದು ನಮ್ಮಲ್ಲಿ ಎಚ್ಚರಿಗೆ ಮೂಡಿಸಿದ್ದಾರೆ ಆದರೆ ನಾವು ಬದಲಾಗಿಲ್ಲ. ಮತ್ತೆ ಮತ್ತೆ ದೈವಗಳ ಮೇಲೆ ವೈದಿಕ ಪರಂಪರೆಯನ್ನು ನಾವೇ ಎಳೆದು ಹಾಕುತ್ತಿದ್ದೇವೆ. ಇದರಿಂದ ನಮ್ಮ ಕುಟುಂಬದ ದೈವಗಳ ಕೋಣೆಗಳಿಗೆ ನಾವೇ ಪ್ರವೇಶಮಾಡಲಾಗದಂತಹ ಪರಿಸ್ಥಿತಿ ಬಂದಿದೆ. ನಮ್ಮ ಹಿರಿಯರು ಕಲ್ಲು ಹಾಕಿ ನಂಬಿದ ನಾಗನಿಗೂ ಕೂಡ ನಾವು ಮೈಲಿಗೆಯವರಾಗಿದ್ದೇವೆ. ನಮ್ಮ ನಾಗ ಬನದ ಕಟ್ಟೆಯ ಒಳಗೆ ನಮಗೇ ಪ್ರವೇಶವಿಲ್ಲ. ಇದು ಹೀಗೆ ಮುಂದುವರಿದರೆ ದೈವಾರಾಧನೆ ಮತ್ತು ದೇವಾತಾರಾಧನೆಗೆ ವ್ಯತ್ಯಾಸವಿಲ್ಲದಂತಾಗುತ್ತದೆ ಮಾತ್ರವಲ್ಲ ಮುಂದೊಂದು ದಿನ ನಮ್ಮ ಕುಟುಂಬದ ನಮ್ಮ ಹಿರಿಯರು ಕಟ್ಟಿದ ದೈವಸ್ಥಾನದ ಒಳ ಪ್ರವೇಶಕ್ಕೆ ನಾವೇ ಹೋರಾಟ ಮಾಡುವ ಸನ್ನಿವೇಶ ಎದುರಾಗುವುದು ಖಂಡಿತ.

ಬರಹ- ಸಂಕೇತ್ ಪೂಜಾರಿ

0 comments: