ಪಾಡ್ದನಗಳು ತುಳುನಾಡಿನ ಅಮೂಲ್ಯ ಸಂಪತ್ತು. ಇವು ಶತಮಾನ ಕಾಲದಿಂದಲೂ ತುಳುನಾಡಿನ ವೈಭವವನ್ನು ಸಾರುತ್ತಾ ಜೀವನ ಮೌಲ್ಯಗಳನ್ನೂ ಬೆಸೆಯುತ್ತಾ ಬಂದಿವೆ. ತುಳುನಾಡಿನ ದೈವಾರಾಧನೆಗೆ ಈ ಪಾಡ್ದನಗಳೇ ಭದ್ರ ಬುನಾದಿ. ಸಾಮಾನ್ಯವಾಗಿ ದೈವಾರಾಧನೆಯ ಮುಖ್ಯಭಾಗವಾಗಿರುವ ದೈವಗಳ ಕಥಾಸಾರವನ್ನು ಹಾಡುವ ಪದ್ಯ ರೂಪದ ಸಾಲುಗಳನ್ನು ಪಾಡ್ದನವೆಂದು ಹೇಳಿದರೂ ಇವುಗಳಲ್ಲಿ ಬೇರೆ ಬೇರೆ ವಿಂಗಡಣೆಗಳಿವೆ.
ಒಂದು ದೈವದ ಹುಟ್ಟಿನ ಬಗೆಗಿನ ಪದ್ಯವನ್ನು ಹೆಚ್ಚಾಗಿ ಪಾಡ್ದನವೆಂದು ಹೇಳಲಾಗುತ್ತದೆ. ಅದೇ ದೈವ ನಂತರದಲ್ಲಿ ಬೇರೆ ಬೇರೆ ಗ್ರಾಮಗಳಲ್ಲಿ ತಮ್ಮ ಕಾರಣೀಕಗಳನ್ನು ತೋರಿಸಿ ಅಲ್ಲಿ ತಮ್ಮ ನೆಲೆ ಮತ್ತು ಆರಾಧನೆಗಳನ್ನು ಕಂಡುಕೊಳ್ಳುವ ಪದ್ಯದ ಭಾಗವನ್ನು ಬೀರ ಎಂದು ಹೇಳುತ್ತಾರೆ. ಅಂದರೆ ಇಲ್ಲಿ ದೈವದ ಸಾಹಸ ಮತ್ತು ವೀರತ್ವದ ಉಲ್ಲೇಖವಿರುತ್ತದೆ. ಅದ್ದರಿಂದ ವೀರ ಶಬ್ಧದ ತುಳು ಪದ ಬೀರ ಎಂಬುದೇ ಇಲ್ಲಿ ಮುಖ್ಯ ನಾಮವಾಗಿದೆ. ಇನ್ನು ಸಂಧಿ ಎಂಬ ವಿಧ ವಿದ್ದು ಇದೂ ಕೂಡ ಬೀರದಂತೆಯೇ ಇರುತ್ತದೆ.
ಪಂಜುರ್ಲಿ ದೈವದ ಉದಾಹರಣೆ ತೆಗೆದುಕೊಂಡರೆ ಪಂಜುರ್ಲಿಯ ಹುಟ್ಟಿನ ಬಗೆಗಿನ ಕಥೆಯಾದಂತಹ ಎರಡು ಹಂದಿ ಮರಿಗಳ ಉಗಮ, ಈಶ್ವರ ದೇವರ ಹೂದೋಟದ ಉಲ್ಲೇಖ, ನಂತರದ ಸುಬ್ರಾಯ ದೇವರ ಬೇಟಿ. ಕೊನೆಗೆ ತುಳುನಾಡಿನಲ್ಲಿ ದೈವವಾಗಿ ನೆಲೆಯಾಗುವುದು. ಇದಲ್ಲವೂ ಪಾಡ್ದನದ ವಿಭಾಗದಲ್ಲಿ ಬರುತ್ತವೆ. ಇನ್ನು ತುಳುನಾಡಿನಲ್ಲಿ ನೆಲೆಯಾದ ನಂತರ ಬೇರೆ ಬೇರೆ ಗ್ರಾಮ, ಮಾಗಣೆಯಲ್ಲಿ ಗುತ್ತು ಬಾರಿಕೆಗಳಲ್ಲಿ, ಒಬ್ಬ ಮುಖ್ಯ ವ್ಯಕ್ತಿಯ ಮುಖಾಂತರವಾಗಿ ಅಲ್ಲಿ ಹಲವು ಸನ್ನಿವೇಶಗಳಿಗೆ ಎಡೆಮಾಡಿಕೊಟ್ಟು ಒಂದು ಕಾರಣಿಕದ ಘಟನೆಗೆ ಕಾರಣವಾಗಿ ನಂತರ ಆ ಗ್ರಾಮದಲ್ಲಿ ಗ್ರಾಮ ದೈವವಾಗಿ ನೆಲೆಯಾಗುವ ಕಥೆಯನ್ನು ಪದ್ಯದ ರೂಪದಲ್ಲಿ ಹಾಡುವುದಕ್ಕೆ ಬೀರ ಎಂದು ಕರೆಯುತ್ತಾರೆ. ಇದರ ವ್ಯತ್ಯಾಸ ಹೆಚ್ಚಿನ ಕಡೆಗಳಲ್ಲಿ ತಿಳಿಯದೇ ಇರುವುದರಿಂದ ಎಲ್ಲವೂ ಪಾಡ್ದನ ಎಂಬ ಪದದಿಂದಲೇ ಗುರುತಿಸಿಕೊಂಡಿವೆ. ಇನ್ನು ಕೆಲವೆಡೆ ಪ್ರದೇಶಿಕ ವ್ಯತ್ಯಾಸಗಳೂ ಇರಬಹುದು.
ದೈವಾರಾಧನೆಯ ಚೌಕಟ್ಟಿನಲ್ಲಿ ಬರುವ ಪಾಡ್ದನಗಳಲ್ಲಿ ಬಿಲ್ಲವ ಜನಾಂಗದ ಉಲ್ಲೇಖ ಬಹಳಷ್ಟರಲ್ಲಿವೆ. ಅದೇನೋ ಅವಿನಾಭಾವ ಸಂಬಂಧ ಬಿಲ್ಲವರಿಗೂ ಮತ್ತು ದೈವಾರಾಧನೆಗು. ಬಿಲ್ಲವ ವ್ಯಕ್ತಿಗಳ ಉಲ್ಲೇಖವಿರುವಷ್ಟು ಬೇರೆ ಜನಾಂಗದ ಉಲ್ಲೇಖ ಪಾಡ್ದನಗಳಲ್ಲಿ ಕಡಿಮೆ ಎಂದೆನ್ನಬಹುದು. ಅದರಲ್ಲೂ ಮಾತೃಮೂಲ ಪದ್ಧತಿಯ ತುಳುನಾಡಿನಲ್ಲಿ ಬಿಲ್ಲವ ಮಹಿಳೆಯರ ಉಲ್ಲೇಖ ಬಹಳಷ್ಟು ಬೀರ ಪಾಡ್ದನಗಳಲ್ಲಿವೆ. ಮಾತೃ ಮೂಲ ಪದ್ಧತಿಗೆ ಇವರೆಲ್ಲ ಕೈಗನ್ನಡಿಯಾದವರು. ಬಿಲ್ಲವರ ಶ್ರೀಮಂತಿಕೆಯೂ ಇಂತಹ ಪಾರ್ದನಗಳಲ್ಲಿ ತಿಳಿದು ಬರುತ್ತದೆ. ಅಂತಹ ಪ್ರಸಿದ್ಧಿ ಪಡೆದವರ ಬಗೆಗೆ ಒಂದೊಂದಾಗಿ ತಿಳಿದುಕೊಳ್ಳೊಣ.
(ತುಳುನಾಡಿನ ಪ್ರಸಿದ್ಧ ಅವಳಿ ವೀರರ ತಾಯಿ ದೇಯಿ ಬೈದ್ಯೆದಿ, ಬಾರೆಯರ ತಾಯಿ ಆಚು ಬೈದ್ಯೆದಿ ಮತ್ತು ಮಾಯಂದಾಲ್ ಅವರ ಬಗ್ಗೆ ಹಲವಾರು ಲೇಖನ ಮತ್ತು ಸಂಶೋಧನೆಗಳು ಆಗಿರುವುದರಿಂದ ಇತರ ಮಹಿಳೆಯರ ಬಗ್ಗೆ ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.)
1. ಸುಜೀರು ಭಂಡಾರ ಮನೆಯ ದೇಯಿ ಬೈದೆತಿ. ಅಸಮಾನ್ಯ ವೀರಳಾಗಿ ಮೆರೆದೆ ಸುಜೀರು ಭಂಡಾರ ಮನೆ ದೇಯಿ ಬೈದ್ಯೆದಿಯು ವೈದ್ಯನಾಥ ದೈವದ ಪರಮ ಭಕ್ತಳಾಗಿದ್ದಳು. ಸುಜೀರು ನಲ್ಲಿ ಇರುವ ಉಪ್ಯನ್ನ ಬಳಿಯ ಈ ಮನೆತನಕ್ಕೆ ಕಿರೋಡಿ ಬನ್ನಾಕುಲೆ ಬರ್ಕೆ ಎಂಬ ಉಲ್ಲೇಖ ಹಲವು ಪಾಡ್ದನದಲ್ಲಿವೆ. ಈ ಬರ್ಕೆಯ ಮೂಲ ಮಹಿಳೆಯಾಗಿ ಮೆರೆದ ತಾಯಿ ದೇಯಿ ಬೈದ್ಯೆತಿಗೆ ವೈದ್ಯನಾಥ ದೈವದ ಮೊಗವು ನದಿಯ ನೆರೆಯಲ್ಲಿ ಸಿಗುತ್ತದೆ. ಆಕೆ ಅದನ್ನು ತಂದು ಹೆಸರಿಲ್ಲ ಮರದ ಕೆಳಗೆ ನಂಬಿ ಆರಾಧಿಸುತ್ತಾಳೆ. ನಂತರ ಸುಜೀರು ಗುತ್ತಿನ ಜೈನರಸ ವೈದ್ಯನಾಥ ದೈವದ ಪ್ರಭಾವಕ್ಕೊಳಗಾಗುತ್ತಾನೆ. ನಂತರ ದೈವಸ್ಥಾನ ನಿರ್ಮಾಣವಾಗುತ್ತದೆ. ಬಂಗರಸರು ತಮಗೆದುರಾದ ಯುದ್ಧವನ್ನು ಜಯಗಳಿಸಿ ಕೊಡಲು ಬೈದ್ಯೆದಿಯ ಸಹಾಯ ಪಡೆಯುತ್ತಾನೆ. ಆಕೆ ವೈದ್ಯನಾಥ ದೈವದ ಅನುಗ್ರಹದಿಂದ ಮತ್ತು ತನ್ನ ಬುದ್ಧಿವಂತಿಕೆಯಿಂದ ತಂತ್ರ ಹೂಡಿ ಜಯ ಒದಗಿಸಿಕೊಟ್ಟು ಅರಸನಿಂದ ಉಂಬಳಿ ಪಡೆದು ನಂತರ ವೈದ್ಯನಾಥ ದೈವದ ಗ್ರಾಮ ಮಟ್ಟದ ಆಚರಣೆಗೆ ಕಾರಣಳಾಗುತ್ತಾಳೆ. ಕೊನೆಗೆ ತಾನು ಒಂದು ದಿನ ದಿವ್ಯ ಶಕ್ತಿಯಾಗಿ ಬೆಳಗಿ ದೈವವಾಗಿ ಮೂಲ ಮನೆಯಲ್ಲಿ ಆರಾಧನೆ ಪಡೆಯುತ್ತಾಳೆ. ಒಂದು ಕೈಯಲ್ಲಿ ಗೆಜ್ಜೆ ಕತ್ತಿ ಮತ್ತೊಂದು ಕೈಯಲ್ಲಿ ಕಲಸ ಹಿಡಿದು ನಿಂತಿರುವ ದೇಯಿ ಬೈದ್ಯೆದಿಯ ಮೂರ್ತಿ ಈ ಮನೆಯಲ್ಲಿದೆ.
2. ನಡ್ಲಾಯ ಬರ್ಕೆಯ ಒತ್ತು ಕುಂದು ದೇವು ಬೈದ್ಯೆತಿ. ಈಕೆ ಕಾಲಾದ್ರಿ ದೈವದ ಆರಾಧನೆಗೆ ಮುಖ್ಯ ಕಾರಣಕರ್ತಳು. ಈಕೆಯ ಮೂಲ ಮನೆ ನಡ್ಲಾಯ ಬರ್ಕೆ ಎಲ್ಲಿದೆ ಎಂಬುವುದು ತಿಳಿದು ಬಂದಿಲ್ಲ. ಕಾರಿಂಜ ಎಂಬ ಮಾಹಿತಿ ಇದೆ. ಪಾಡ್ದನ ಪ್ರಕಾರ ಈಕೆ ತನಗೆ ಸಂತಾನ ಇಲ್ಲದ ಕಾರಣ ಕದಿರೆಯ ದೇವರಿಗೆ ಹರಕೆ ಹೇಳಿ ನಂತರ ಆ ಹರಕೆ ತೀರಿಸುವ ಸಲುವಾಗಿ ಕದಿರೆಗೆ ಹೋಗಿ ಬರುವಾಗ ಕದಿರೆಯಲ್ಲಿದ್ದ ಕಾಲಾದ್ರಿ ದೈವವು ಈಕೆಯನ್ನು ಹಿಂಬಾಲಿಸಿ ಅವಳ ಮನೆಯಲ್ಲಿ ಆರಾಧನೆ ಪಡೆದು ನಂತರದಲ್ಲಿ ತುಳುನಾಡಿನ ಹಲವೆಡೆ ಪ್ರಸರಣಗೊಳ್ಳುತ್ತದೆ
3. ಪಿಲವೂರು ಕೊಟ್ಯ ಜಾಯಿಲಪ್ಪೆ ಬೈದ್ಯೆದಿ ಪಿಲವೂರು ಕೊಟ್ಯದ ಜಾಯಿಲಪ್ಪೆ ಬೈದ್ಯೆದಿಗೆ ಜಠಾಧರಿ ದೈವವು ಒಲಿದು ಬಂತು. ದೈವವು ಘಟ್ಟದಿಂದ ಹಾವಿನ ರೂಪದಲ್ಲಿ ಇಳಿದು ಬಂದು ಪಿಲವೂರು ಕೊಟ್ಯದಲ್ಲಿ ಜಾಯಿಲಪ್ಪೆ ಬೈದ್ಯೆದಿಯ ಮುಖಾಂತರ ಆರಾಧನೆಗೊಳಪಟ್ಟು ಪಿಲವೂರು ಕೊಟ್ಯವನ್ನು ಮೂಲಸ್ಥಾನವೆಂದು ಹೇಳಿಸಿಕೊಳ್ಳುತ್ತದೆ.
4. ಜಾರದ ಮನೆ ಅಬ್ಬು ಬೈದ್ಯೆದಿ. ಕುಡ್ಲ ಮತ್ತು ಉಡುಪಿ ಭಾಗದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿರುವ ದೈವ ಜಾರಂದಾಯನ ಮೂಲಸ್ಥಾನ ಜಾರದ ಮನೆ. ಈ ದೈವ ಮೂಲತಃ ಬೇರೆ ಹೆಸರಿನಿಂದ ಬೇರೆ ಕಡೆಯಿಂದ ಇಲ್ಲಿಗೆ ಪ್ರಸರಣಗೊಂಡಿದ್ದರೂ ಕೂಡ ಜಾರಂದಾಯ ಎಂಬ ಹೆಸರು ಬರಲು ಕಾರಣ ಜಾರದ ಮನೆ. ಕೆಡ್ಡಸದ ಕೋಲು ಬೋಂಟೆಗೆ ಹೋಗಿದ್ದ ಜಾರದ ಮನೆಯ ಒಡತಿ ಅಬ್ಬು ಬೈದ್ಯೆದಿಯು ನದಿ ದಡದಲ್ಲಿ ಸಿಕ್ಕಿದ ಸಣ್ಣ ಚಪ್ಪಟೆಯಾಕಾರದ ಕಲ್ಲನ್ನು ತನ್ನ ಮಗ ಜತ್ತಿ ಬೈದ್ಯನಿಗೆ ಚಟ್ನಿ ಅರೆಯಲಿಕ್ಕಾಗಬಹುದು ಎಂದು ಹೇಳಿ ಅದನ್ನು ಮನೆಗೆ ತರುತ್ತಾಳೆ. ಆದರೆ ಅದು ಮನಿಯಂದಾಯ ದೈವದ ಕಲ್ಲಾಗಿರುತ್ತದೆ. ನಂತರದಲ್ಲಿ ದೈವದ ಇರುವಿಕೆ ತೋರಿ ಬಂದ ಮೇಲೆ ಜಾರದ ಮನೆಯಲ್ಲಿ ಆ ದೈವವನ್ನು ಆರಾಧಿಸಲಾಗುತ್ತದೆ. ಜಾರದ ಮನೆಯಲ್ಲಿ ಆರಾಧನೆ ಪಡೆದ ದೈವ ಜಾರಂದಾಯನಾಗಿತ್ತಾನೆ. ಇಲ್ಲಿ ಜಾರಂದಾಯನ ಆರಾಧನೆಗೆ ಮೂಲ ಕಾರಣಕರ್ತೆ ತಾಯಿ ಅಬ್ಬು ಬೈದ್ಯೆದಿ. ಜಾರದ ಮನೆಯ ಬೆಳಕಾಗಿ ಆ ಮನೆಗೆ ಜಾರಂದಾಯನ್ನು ತಿಳಿದೋ ತಿಳಿಯದಯೋ ತಂದು ಅರಾಧಿಸಿ ಜಾರದ ಮನೆಗೆ ಹೆಸರು ತಂದ ಮಾತೆ. ಅದೇ ಜಾರದ ಮನೆ ಇಂದು ತುಳುನಾಡಿನಾದ್ಯಂತ ಪ್ರಸಿಧ್ದಿ ಪಡೆದಿದೆ. ಆ ಕಾರಣಕ್ಕೋ ಏನೋ ಜಾರದ ಮನೆಯಲ್ಲಿ ತಾಯಿ ಅಬ್ಬು ಬೈದ್ಯೆದಿ ದೈವತ್ವಕ್ಕೇರಿಸಲ್ಪಟ್ಟು ನೇಮ ಪಡೆಯುತ್ತಿದ್ದಾಳೆ. ಈಕೆಯನ್ನು ಅಲ್ಲಿ ಮಾಯಂದಾಲ್ ಎಂದೂ ಕರೆಯುತ್ತಾರೆ. ಮಾಯದ ಅಲೌಕಿಕ ಜಗತ್ತಿಗೆ ಸೇರಿದವಳು ಮಾಯಂದಾಲ್ ಆಗಿದ್ದಾಳೆ.
5. ಅಪ್ಪೆ ಮೈರಕ್ಕೆ/ಬೈರಕ್ಕೆ ಬೈದ್ಯೆದಿ. ಈಕೆಯ ಮೂಲ ಮನೆಯ ಬಗ್ಗೆ ಮಾಹಿತಿ ಇಲ್ಲ. ಈಕೆ ತುಳುನಾಡಿನ ಪ್ರಸಿದ್ಧ ದೈವ ಕೊರಗ ತನಿಯನ ಸಾಕು ತಾಯಿ. ಸುವರ್ಣ ಬಳಿಯ ಈಕೆಯು ಬಾಲಕನಾಗಿದ್ದ ಕೊರಗ ತನಿಯನು ತನ್ನ ಎಲ್ಲಾ ಬಂದುಗಳನ್ನು ಕಳೆದುಕೊಂಡು ಅನಾಥನಾಗಿ ದಾರಿ ಬದಿಯಲ್ಲಿ ಇದ್ದಂತಹ ಸಂದರ್ಭದಲ್ಲಿ ಅವನಿಗೆ ಆಶ್ರಯ ಕೊಟ್ಟು ತನ್ನ ಸ್ವಂತ ಮಗನಂತೆ ಸಾಕಿದ ಮಹಾ ತಾಯಿ. ಅವಳು ತೋರಿದ ಪ್ರೀತಿಗೆ ತನಿಯನ ತ್ಯಾಗ ಮತ್ತು ಮಮಕಾರ ಜಾತಿಯನ್ನೂ ಮೀರಿದ ಬಾಂಧವ್ಯಕ್ಕೆ ಬೆಳಕಾಗಿತ್ತು. ತುಳನಾಡಿನ ಜನತೆಯ ಮಾನವೀಯತೆಯ ಗುಣ ಮೈರಕ್ಕೆ ಮತ್ತು ತನಿಯನ ನಡುವಿನ ಮಾತೃ ಪ್ರೇಮದ ಮೂಲಕ ಹೊರಬಂದುದು ಬಹಳ ಗಮನೀಯ. ಕೇವಲ ಆರಾಧನೆಯ ಭಾಗವಾಗಿ ಮಾತ್ರ ಬಳಕೆಯಾಗುವ ಇಂತಹ ಪಾಡ್ದನದಲ್ಲಿ ಅದೆಷ್ಟೋ ಸಾತ್ವಿಕ ಗುಣಗಳ ಮತ್ತು ಜೀವನ ಮೌಲ್ಯಗಳ ವಿಷಯಾಧಾರಿತ ಉಲ್ಲೇಖಗಳು ಗಮನಕ್ಕೆ ಬಾರದಿರುವು ಒಂದು ವಿಷಾದ.
6. ಕೌಡೋಡಿ ಗುತ್ತು ಬೊಳ್ಳಕ್ಕು ಬೈದ್ಯೆದಿ. ಕೌಡೋಡಿ ಗುತ್ತಿನಲ್ಲಿ ಲೆಕ್ಕೇಸಿರಿ ದೈವದ ಆರಾಧನೆಗೆ ಕಾರಣಳಾದವಳು ದಳವಾಯಿ ಬೊಳ್ಳಕ್ಕು ಬೈದ್ಯೆದಿ. ಈಕೆ ದಂಡು ಸಾಧಿಸಿ ಗೆದ್ದ ಬಗೆಗೆ ಇಲ್ಲಿ ಹೆಚ್ಚು ಪ್ರಚಾರವಿದೆ. ಕೌಡೋಡಿ ಗುತ್ತಿನಲ್ಲಿ ಸೇನಾನಾಯಕರು ಎಲ್ಲರೂ ತಿರುಪತಿಯ ಮುಡಿಪು ಸಂದಾಯಕ್ಕೆ ಹೋಗಿರುವ ಸಂದರ್ಭದಲ್ಲಿ ಮನೆಯಲ್ಲಿ ಬೊಳ್ಳಕ್ಕು ಬೈದ್ಯೆದಿ ಮತ್ತು ಕೆಲವರು ಮಾತ್ರ ಇರುತ್ತಾರೆ. ಅರುವದ ಅರಸರ ಸೇನಾ ದಂಡನಾಯಕರ ಮನೆಯಾಗಿದ್ದ ಕೌಡೋಡಿ ಗುತ್ತಿಗೆ ಅರುವದರಸರ ಓಲೆ ಬರುತ್ತದೆ. ನಂದಾವರದ ಅರಸರ ದಂಡು ನಮ್ಮ ರಾಜ್ಯಕ್ಕೆ ಬಂದಿದ್ದು ಅವರನ್ನು ಹಿಮ್ಮೆಟ್ಟಿಸಲು ನಮ್ಮ ದಂಡಿಗೆ ದಳವಾಯಿಯಾಗಿ ಯುದ್ಧದ ನಾಯಕತ್ವ ವಹಿಸುವಂತೆ ಕೌಡೋಡಿ ಗುತ್ತಿಗೆ ಆಜ್ಞೆಯಾಗುತ್ತದೆ. ಆಗ ಸೇನಾನಾಯಕರ ಅನುಪಸ್ಥಿತಿಯಲ್ಲಿ ಕೌಡೋಡಿ ಗುತ್ತಿನವರು ಆತಂಕಗೊಳ್ಳುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೊಳ್ಳಕ್ಕು ಬೈದೆದಿ ತಾನು ದಂಡಿನ ನೇತೃತ್ವವಹಿಸಿ ಯುದ್ಧಕ್ಕೆ ಸಿದ್ಧಳಾಗುತ್ತಾಳೆ. ಕುದುರೆ ಏರಿ ಹೊರಟ ಬೊಳ್ಳಕ್ಕು ಪಂಜಿಕಲ್ಲು ದಂಡೆಕೋಡಿ ಎಂಬಲ್ಲಿ ಬಂದಾಗ ಲೆಕ್ಕೇಸಿರಿ ದೈವದ ನೇಮವಾಗಿ ಅದರ ಅಣಿಯನ್ನು ಮರಕ್ಕೆ ಸಿಕ್ಕಿಸಿ ಹಾಕಿದ್ದರನ್ನು ನೋಡಿ ಅಲ್ಲೇ ಮನಸ್ಸಿನಲ್ಲಿ ದೈವವನ್ನು ನೆನೆದು ದಂಡು ಸಾಧಿಸಿ ಜಯಗಳಿಸಿದರೆ ಕೌಡೋಡಿ ಗುತ್ತಿನಲ್ಲಿ ಲೆಕ್ಕೇಸಿರಿಯನ್ನು ಆರಾಧಿಸುತ್ತೇನೆ ಎಂದು ಪ್ರಾರ್ಥನೆಮಾಡುತ್ತಾಳೆ. ಕೊನೆಗೆ ದಂಡು ಸಾಧಿಸಿ ಅರಸರಿಂದ ಹಲವು ಬಿರುದಾವಳಿಗಳನ್ನು ಪಡೆದು, ಅರಸರು ಕೊಟ್ಟ ಯುದ್ದದ ಕತ್ತಿಯನ್ನು ಪಡೆದು ಕೌಡೋಡಿ ಗುತ್ತಿಗೆ ಬಂದು ದೈವವನ್ನು ನಂಬಿ ಆರಾಧಿಸುತ್ತಾಳೆ. ಬೊಳ್ಳಕ್ಕು ಬೈದ್ಯೆದಿಯ ಯುದ್ದದ ಕತ್ತಿ ಮತ್ತು ಆಕೆಯ ತಲೆಕೂದಲನ್ನು ಈಗಲೂ ಕೌಡೋಡಿ ಗುತ್ತಿನಲ್ಲಿ ಸಂರಕ್ಷಿಸಿ ಇಡಲಾಗಿದೆ. ಬಿಲ್ಲುಗಾರಿಕೆಗೆ ಮತ್ತು ಸೇನಾನಾಯಕತ್ವಕ್ಕೆ ಹೆಸರಾದ ಬಿಲ್ಲವರಲ್ಲಿ ಮಹಿಳಾ ಸೇನಾನಿಯಾಗಿ ಮೆರೆದು ಬಂದವರಲ್ಲಿ ಬೊಳ್ಳಕ್ಕು ಪ್ರಮುಖಳು. ಮಹಿಳಾ ಸ್ವಾತಂತ್ರ್ಯ ಕಡಿಮೆ ಇದ್ದ ಆ ಕಾಲದಲ್ಲಿ ಬೊಳ್ಳಕ್ಕುವಿನ ಸಾಧನೆ ನಿಜಕ್ಕೂ ಶ್ಲಾಘನೀಯ. ಇಂತಹ ಅದೆಷ್ಟೋ ಮಹಿಳಾ ಸೇನಾನಿಗಳು ಪ್ರಚಾರಕ್ಕೆ ಬಾರದಿರುವುದು ಬೇಸರದ ಸಂಗತಿ.( ಬೊಳ್ಳಕ್ಕು ಬೈದ್ಯೆದಿಯ ಸಂಪೂರ್ಣ ವಿಷಯ ಮತ್ತು ಕೌಡೋಡಿ ಗುತ್ತಿನ ಇತಿಹಾಸ ಬಿಲ್ಲವ ಗುತ್ತು ಮನೆತನಗಳ ಪೇಜ್ ನಲ್ಲಿ ಇದೆ.)
7. ಗಾಣದಪಡ್ಪು ಗುರಿಕಾರ ಮನೆಯ ತಿರುಮಲೆ. ಬಿ.ಸಿ ರೋಡಿನ ಪಕ್ಕದ ಗಾಣದಪಡ್ಪು ಗುರಿಕಾರ ಮನೆಯ ಮೂಲ ಮಹಿಳೆ ತಿರುಮಲೆ ಪಾಡ್ದನದಲ್ಲಿ ಉಲ್ಲೇಖವಾಗದಿದ್ದರೂ ಇತಿಹಾಸದ ಪುಟದಲ್ಲಿ ದಾಖಲಾಗಿರುವಾಕೆ. ಗಾಣದ ಪಡ್ಪು ಮನೆಗೆ ಇರುವ ಇಂದಿನ ಗೌರವಾದಿಗಳ ಕೀರ್ತಿ ಈ ತಾಯಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ವಾಹನ ಸೌಕರ್ಯಗಳಿಲ್ಲದ ಅಂದಿನ ಸುಮಾರು ೨೦೦ -೩೦೦ ವರ್ಷಗಳಿಂಗತಲೂ ಹಿಂದೆ ಸತತ ೧೮ ಬಾರಿ ತಿರುಪತಿಗೆ ಹೋಗಿ ಮುಡಿಪು ಸಂದಾಯ ಮಾಡಿರುವ ತಿರುಮಲೆ ಅವರ ಸಾಹಸ ಮೆಚ್ಚುವಂತದ್ದು. ಇವರ ಈ ದೈವ ಭಕ್ತಿಯನ್ನು ಮೆಚ್ಚಿ ತಿರುಪತಿ ದೇವಸ್ಥಾನದವರು ಇವರಿಗೆ ವೆಂಕಟರಮಣ ದೇವರ ಮೂರ್ತಿ ಮತ್ತು ಒಂದು ಬೆತ್ತವನ್ನು ಕೊಟ್ಟು ನಿಮ್ಮ ಮನೆಯಲ್ಲಿಯೇ ವೆಂಕಟರಮಣ ದೇವರನ್ನು ಆರಾಧಿಸಿ ಎಂದು ಹೇಳುತ್ತಾರೆ. ಈಕೆಯೆ ಈ ದೈವ ಭಕ್ತಿಯ ಬಲದಿಂದ ಗಾಣದಪಡ್ಪು ಮನೆಯಲ್ಲಿ ತಿರುಪತಿಯ ದೇವರು ನೆಲೆಸುವಂತಾಯಿತು. ತಿರುಮಲೆ ಎಂಬ ಹೆಸರು ಅಜರಾಮರವಾಯಿತು. (ಹೆಚ್ಚಿನ ಮಾಹಿತಿ ಗುತ್ತುಮನೆತನಗಳ ಪೇಜ್ ನಲ್ಲಿದೆ.)
8.ಮಲರಾಯ ದೈವದ ಪಾಡ್ದನದಲ್ಲಿ ಬರುವ ಆಚು ಬೈದ್ಯೆದಿ. ಮಲಾರ ಬೀಡಿನಿಂದ ಪ್ರಸರಣಗೊಂಡ ಮಲರಾಯ ದೈವವು ಆಚು ಬೈದ್ಯದಿಯ ಅರಮನೆಗೆ ಬರುವ ಉಲ್ಲೇಖ ಇದೆ. ಆಚು ಬೈದ್ಯದಿಯು ಮಲರಾಯ ದೈವವನ್ನು ತನ್ನ ಅರಮನೆಯಲ್ಲಿ ನಂಬಿ ಆರಾಧಿಸುತ್ತಾಳೆ. ಕಾಲಾಂತರದಲ್ಲಿ ಆಚು ಬೈದ್ಯೆದಿ ಇದ್ದ ಊರು ಅಳಿಯಂತ್ರವಾಗಿ ನಾಶವಾಗುವ ಕಾಲ ಬರುತ್ತದೆ. ಆಗ ಒಬ್ಬಂಟಿ ಆಚು ಬೈದ್ಯದಿ ದೈವದ ಮುಗವನ್ನು ಸೆರಗಿನಲ್ಲಿ ಕಟ್ಟಿಕೊಂಡು ತಾನಿದ್ದ ಅರಮನೆ ಬಿಟ್ಟು ಅದೆಷ್ಟೋ ದೂರ ಕ್ರಮಿಸುತ್ತಾಳೆ. ಮಳೆ ಬಿಸಿಲೆನ್ನದೆ ನಡೆಯುತ್ತಾಳೆ. ಕೊನೆಗೆ ಕೊಪ್ಪರಿಗೆದ ಬಾಳಿಕೆ ಬೈರಿಕೊಳದಲ್ಲಿ ದೈವದ ಅಪ್ಪಣೆಯಾಗಿ ಅಲ್ಲಿ ನೆಲೆಸುತ್ತಾಳೆ. ಇಲ್ಲಿ ಆಚು ಬೈದ್ಯೆದಿಯ ನಂಬಿಕೆ ಎಷ್ಟಿತ್ತು ಎಂಬುದು ತಿಳಿದು ಬರುತ್ತದೆ. ಭಕ್ತಿಯ ಛಾಯೆ ತನ್ನ ಪರಿಧಿಯನ್ನು ಕಡಿಮೆಗೊಳ್ಳಿಸುತ್ತಿರುವ ಈ ಕಾಲಕ್ಕೆ ಆಚು ಬೈದ್ಯೆದಿ ನಿಜವಾದ ಮಾದರಿ. ತನ್ನ ಎಲ್ಲಾ ಮನೆ ಮತ್ತು ಸಂಪತ್ತುಗಳನ್ನು ಕಳೆದುಕೊಂಡರೂ ಕೂಡ ತಾನು ನಂಬಿದ ದೈವ ತನ್ನ ಕೈಬಿಡುವುದಿಲ್ಲ ಎಂಬ ಆಚಲ ನಂಬಿಕೆಯೊಂದಿಗೆ ಅವಳು ದೈವದ ಮುಗವನ್ನು ಸೆರಗಿನಲ್ಲಿ ಕಟ್ಟಿ ಊರೂರು ತಿರುಗಿ ಕೊನೆಗೆ ನೆಲೆ ಕಂಡುಕೊಂಡಳು.ಅವಳ ದೃಢ ಭಕ್ತಿ ಅವಳನ್ನು ಕೊನೆಗೂ ಕೈಬಿಡಲಿಲ್ಲ.
9.ಕೋಟೆಕಾರು ತಂಕರು ಬೈದ್ಯೆದಿ ಜೋಗಿಪುರುಷರ ಮೂಲಕ ಗಿಂಡಿಕೆರೆಯಲ್ಲಿ ಮೊದಲು ನೆಲೆಗೊಂಡ ವೈದ್ಯನಾಥ ದೈವವು ನಂತರ ಪ್ರಸರಣಗೊಂಡು ಹಲವಾರು ಕಡೆ ಬಿಲ್ಲವ ಮನೆತನಗಳಲ್ಲಿ ನೆಲೆಗೊಂಡು ಜೋಗಿ ಪುರುಷರ ಮೂಲಕವೇ ಕೋಟೆಕಾರಿನ ತಂಕರು ಬೈದ್ಯೆದಿ ಮನೆಗೆ ಬರುತ್ತದೆ. ತಂಕರು ಬೈದ್ಯೆದಿ ಮನೆಯಲ್ಲಿ ಜೋಗಿ ಪುರಷರು ಬಿಡಾರ ಹೂಡಿ ಮರುದಿನ ಎದ್ದು ಹೋಗುವಾಗ ತಂಕರು ಬೈದ್ಯೆದಿಯಲ್ಲಿ ನಿನ್ನ ಮಗನಿಗೆ ನಾವು ಹಿಂತಿರುಗಿ ಬರುವವರೆಗೆ ಮದುವೆ ಮಾಡಬೇಡ ಎಂದು ಹೇಳುತ್ತಾರೆ. ಇದಕ್ಕೆ ತಂಕರು ಬೈದ್ಯದಿ ಒಪ್ಪುತ್ತಾಳೆ. ಆದರೆ ಊರಿನವರ ಒತ್ತಾಯ ಸಹಿಸಲಾರದೆ ತನ್ನ ಮಗ ಸಿದ್ಧಮರ್ದ ಬೈದ್ಯನಿಗೆ ಮದುವೆ ಮಾಡುತ್ತಾಳೆ. ಆ ವರ್ಷವೇ ಜೋಗಿಪುರುಷರು ಹಿಂತಿರುಗಿ ಬಂದಾಗ ಮದುವೆ ವಿಷಯ ತಿಳಿದು ಕೋಪಗೊಂಡು ಹಿಂತಿರುಗಿ ಹೋಗುತ್ತಾರೆ. ಆಗ ತಂಕರು ಬೈದ್ಯದಿ ಅವರನ್ನು ಕಾಡಿ ಬೇಡಿ ತನ್ನ ತಪ್ಪನ್ನು ಒಪ್ಪಿ ಕ್ಷಮೆಯಾಚಿಸುತ್ತಾಳೆ. ನಂತರ ಸಿದ್ಧಮರ್ದ ಬೈದ್ಯರಿಗೆ ದೀಕ್ಷೆಯಾಗುತ್ತದೆ. ವೈದ್ಯನಾಥ ದೈವಕ್ಕೆ ಆರಾಧನೆ ಕೋಟೆಕಾರಿನಲ್ಲಿ ಆರಂಭವಾಗುತ್ತದೆ. ಇದಕ್ಕೆ ಮೂಲ ಕಾರಣ ತಂಕರು ಬೈದ್ಯೆದಿಯೇ ಆಗಿರುತ್ತಾಳೆ.
10. ಕನಕರಬೆಟ್ಟು ಕಂರ್ಬಿ ಬೈದ್ಯೆದಿ. ಕಂರ್ಬಿಸ್ಥಾನದ ವೈದ್ಯನಾಥನ ಆರಾಧನೆಗೆ ಮೂಲಕಾರಣಳಾದವಳು ಕಂರ್ಬಿ ಬೈದ್ಯದಿ. ಈಕೆಗೆ ವೈದ್ಯನಾಥ ದೈವವು ಒಲಿದು ಬರುತ್ತದೆ. ಕರ್ಗಲ್ಲ ಕೋಟೆ ಎಂಬಲ್ಲಿ ದೈವವು ಕಂರ್ಬಿ ಬೈದ್ಯೆದಿಗೆ ತನ್ನ ಕಾರಣಿಕ ತೋರಿಸಿದ ಹಿನ್ನೆಲೆಯಲ್ಲಿ ಸದ್ರಿ ದೇವಸ್ಥಾನಕ್ಕೆ ಕಂರ್ಬಿಸ್ಥಾನವೆಂಬ ಹೆಸರು ಪ್ರಚಲಿತದಲ್ಲಿದೆ.
11. ಪಾದೆ ಮನೆ ಉಗಣ ಬೈದ್ಯದಿ ಕಲ್ಕುಡ ಕಲ್ಲರ್ಟಿ ದೈವಗಳ ಪಾಡ್ದನದಲ್ಲಿ ಪಾದೆಮನೆ ಉಗಣ ಬೈದ್ಯೆದಿಯ ಉಲ್ಲೇಖವಿದೆ. ಕಲ್ಕುಡ ಕಲ್ಲುರ್ಟಿಯ ಮೂಲಸ್ಥಾನ ಉಬಾರ ಕಡಪು ಬಹಳ ಪ್ರಸಿದ್ಧಿ ಪಡೆದುದು. ಇದು ಪುತ್ತೂರು ಏಳ್ನಾಡು ಸೀಮೆಗೆ ಮತ್ತು ಸುತ್ತ ಮುತ್ತಲಿಗೆ ಮೂಲ ಸ್ಥಳವಾದರೆ ಮಂಗಳೂರು ಸೀಮೆಗೆ ಬೋಳೂರು ಕಡಪು ಪ್ರಮುಖವಾದ ಕ್ಷೇತ್ರ. ಬೋಳೂರು ಕಡಪಿನ ಪಾದೆಮನೆಯ ಉಗಣ ಬೈದ್ಯೆದಿಯು ಮೊದಲಾಗಿ ಈ ಪ್ರದೇಶದಲ್ಲಿ ಕಲ್ಕುಡ ಕಲ್ಲುರ್ಟಿಯರನ್ನು ಆರಾಧಿಸಿದವಳು. ಪಾದೆಮನೆಯ ಗೋಸಂಪಗೆ ಮರದ ಬುಡದಲ್ಲಿ ಉಗಣ ಬೈದ್ಯೆದಿಯು ಕಲ್ಲು ಹಾಕಿ ನಂಬಿದಳು ಎಂಬ ಉಲ್ಲೇಖ ಪಾಡ್ದನದಲ್ಲಿ ಇದೆ.
ಹೀಗೆ ಹಲವು ಪಾಡ್ದನಗಳಲ್ಲಿ ಬಿಲ್ಲವ ಮಹಿಳೆಯರ ಉಲ್ಲೇಖಗಳಿವೆ. ಕೆಲವೊಂದಕ್ಕೆ ಬದಲಾವಣೆಯ ಗಾಳಿ ಬೀಸಿದೆ ಇನ್ನು ಕೆಲವು ಅಳಿದು ಹೋಗಿವೆ. ಪ್ರಾದೇಶಿಕ ಪಾಡ್ದನಗಳಲ್ಲಿ ಅಲ್ಲಿನ ಒಬ್ಬ ವ್ಯಕ್ತಿಯ ಮತ್ತು ಆತನ ಮನೆತನದ ಇತಿಹಾಸ ಅಡಗಿರುತ್ತದೆ. ಆದರೆ ಇಂತಹ ಪ್ರಾದೇಶಿಕ ಪಾಡ್ದನಗಳ ಸಂರಕ್ಷಣೆ ಆಗದಿರುವುದು ದೈವಾರಾಧನ ಲೋಕಕ್ಕೆ ತುಂಬಲಾರದ ಬಹುದೊಡ್ಡ ನಷ್ಟ.
0 comments: