Wednesday, November 15, 2017

ದೈವದ ಗಡಿ ಪ್ರಧಾನರಿಂದ ನಾಗನಿಗೆ ತನು ಸೇವೆ - ಕಡಂಬಾರು ಭಂಡಾರಮನೆ‌

ತುಳುನಾಡಿನ‌ ಮೂಲ‌ ಸಂಸ್ಕೃತಿ ಇಂದು ವೈದೀಕರಣಕ್ಕೆ ಒಗ್ಗಿಕೊಂಡು ಅವೈದಿಕ‌ ಪದ್ಧತಿ ನಾಶವಾಗಿ ವಿಭಿನ್ನ‌‌ ಪರಂಪರೆಗಳಾದ‌ ಭೂತಾರಾಧನೆ, ದೈವಾರಾಧನೆ‌, ನಾಗಾರಾಧನೆಗಳೆಲ್ಲ ತನ್ನ ಮೂಲ‌ ಆರಾಧನಾ ಪದ್ದತಿಗಳನ್ನು ಬದಲಾಯಿಸಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಂತಹ ವಿಚಾರ. ತುಳುವರೇ‌ ತಮ್ಮ ಸಂಸ್ಕ್ರತಿಗಳನ್ನು ಕಡೆಗಣಿಸಿ ಇಂದು ಇಂತಹ ಸ್ಥಿತಿಗೆ‌ ಕಾರಣರಾದರೆಂದರೆ ತಪ್ಪಾಗಲಾರದು. ನಾಗಾರಾಧನೆಗೆ‌ ತುಳುನಾಡಿನಲ್ಲಿ ವಿಶೇಷವಾದ ಮಹತ್ವ ಮತ್ತು ಇತಿಹಾಸ‌‌ ಇದೆ. "ನಾಗನೂ ಒಂದು ಭೂತ‌. ನಾಗನಿಗೂ ತಂಬಿಲ, ಕೋಲಗಳು ನಡೆಯುತ್ತವೆ " ಎಂಬ ಒಂದು ಸಾಲು‌‌ ಯಾವುದೋ ಒಂದು ಜಾನಪದ ಕೃತಿಯಲ್ಲಿ ಓದಿದ್ದ ನೆನಪು. ಇದಕ್ಕೆ ಪೂರಕವಾಗಿ ಸುಳ್ಯಪರಿಸರದಲ್ಲಿ ನಡೆಯುವ ಬಾಕುಡರ ಸರ್ಪ ಕೋಲ, ಕಾಸರಗೋಡು, ಕುಂದಾಪುರ ಕಡೆಗಳಲ್ಲಿ ನಡೆಯುವ ‌ಕಾಡ್ಯನಟ ಬಹಳ ವಿಶೇಷವಾದದ್ದು‌. ಹೌದು ಭೂತಾರಾಧನೆಯಲ್ಲಿ ನಾಗನಿಗೂ ಸ್ಥಾನ‌ವಿತ್ತು. ನಾಗನಿಗೆ‌ ತಂಬಿಲ ನಡೆಯುವುದು ತುಳುನಾಡಿನಲ್ಲಿ ಮಾತ್ರ. ಆದರೆ‌ ತಂಬಿಲ ಸೇವೆ‌ ನಡೆಯುವು ದೈವಗಳಿಗೆ‌ ಮಾತ್ರ. ಹಾಗಾದರೆ ‌ನಾಗನಿಗೆ‌ ತಂಬಿಲ? ಯಾಕೆ ? ಹೇಗೆ? . ಇದಕ್ಕೆ ಸಮರ್ಥನೆ ಅಗತ್ಯ ವಿಲ್ಲವೆಂದೆನಿಸುತ್ತದೆ. ತುಳುವರ ನಾಗನು‌ ಬ್ರಾಹ್ಮಣನಾಗಿದ್ದು ಪುರಾಣದ ಕತೆಗಳ ಪ್ರಭಾವದಿಂದ. ಅದು‌ ತುಳುನಾಡಿಗೆ‌ ಲಗ್ಗೆ‌ ಇಡುವ ಮೊದಲು ತುಳುನಾಡಿನ ನಾಗ‌ ಪ್ರಕೃತಿಯ ವಿಶೇಷ ಶಕ್ತಿಯಾಗಿ ಪ್ರಾಣಿ ಮೂಲದ‌ ದೈವಗಳ ಸಾಲಿನಲ್ಲಿ ‌ಇದ್ದ. ಅದರೂ‌ ಅಲ್ಲಿ ಕೆಲವು ವಿಶೇಷ ಆಚರಣೆಗಳಿದ್ದವು. ಆದರೆ ಈಗ ನಾಗನು ವೈದಿಕರಿಗೆ ಮಾತ್ರ ಪೂಜಾರ್ಹ. ಶೂದ್ರರೆಂದಿನಿಸಿದವರು ಅವರ ಮೂಲ ನಾಗನಿಗೂ ಪೂಜೆ ಬಿಡಿ‌,‌ ಬನದೊಳಗೆ ಪ್ರವೇಶಿಸುವಂತಿಲ್ಲ. ತುಳುವರಿಗೆ‌ ಅವರವರ ಬಳಿಗನುಸಾರವಾಗಿ ಕುಟುಂಬದ ಮೂಲ‌ ನಾಗ‌ವೆಂಬುದಿರುತ್ತವೆ. ಆ ನಾಗನಿಗೆ ಪತ್ತನಾಜೆಯ(ಹತ್ತನೆ‌ ಅವಧಿ) ಅಂದರೆ‌ ಮೇ ತಿಂಗಳ‌ಕೊನೆಯ ವಾರದಲ್ಲಿ ಬರುವ ಈ ದಿನದಂದು ಅಥವಾ ಪಗ್ಗು ಸಂಕ್ರಮಣದಂದು ಅಂದರೆ ತುಳುವರ ಯುಗಾದಿಯಾದ ಬಿಸು ಹಬ್ಬದ ಮುಂಚಿನ ದಿನ ತನು‌ ಎರೆಯುವ ಅಂದರೆ‌ ಹಾಲೆರೆದು ಪೂಜಿಸುವ ‌ಕ್ರಮ ಹಿಂದೆ‌ ಇತ್ತು. ಬೇಸ್ಯ ತಂಬಿಲ ಎಂಬ ಆಚರಣೆ ಇತ್ತು. ಈ ದಿನಗಳಲ್ಲಿ ಹಾಲೆರೆಯಲು ಕಾರಣವಿದೆ. ಅದು ಸುಡುಬಿಸಿಲಿನ ಸಮಯ. ಬಿಸಿಲ ಬೇಗೆಗೆ ನಾಗನನ್ನು‌ ತಂಪು ಮಾಡಿ ಸಂತೃಪ್ತಿಗೊಳಿಸುವ ನಮ್ಮ ಹಿರಿಯರ ಕಲ್ಪನೆ ಅರ್ಥಪೂರ್ಣವಾಗಿತ್ತು. ಆದರೆ ಈಗ ನಾಗರ ಪಂಚಮಿಯ ದಿನ ಇದನ್ನು ‌ಮಾಡುತ್ತಾರೆ. ಈಗ ಜಡಿಮಳೆಯ ಸಮಯದಲ್ಲಿ ‌ಹಾಲೆರೆಯುದರ‌ ಅರ್ಥ‌ ತಿಳಿದಿಲ್ಲ. ಇರಲಿ, ಆದರೆ ಇಲ್ಲಿ ಮುಖ್ಯವಾಗಿ‌ರುವ ವಿಷಯವೆಂದರೆ‌ ನಾಗನಿಗೆ ಹಾಲೆರೆಯುವ ವ್ಯಕ್ತಿ ‌ಅಯಾ‌ ಕುಟುಂಬದ ಹಿರಿಯ ವ್ಯಕ್ತಿ ಆಗಿದ್ದ. ನಾವು ನಂಬಿದ ತಮ್ಮ‌ಹಿರಿಯರು ನೆಲೆಗೊಟ್ಟು ಪೂಜಿಸಿದ ಕುಟುಂಬದ ನಾಗನಿಗೆ ತಾವೇ ಹಾಲೆರೆಯುವುದು ನಿಜವಾದ‌ ಪದ್ಧತಿಯೂ ಹೌದು. ಆದರೆ ಈಗ ನಾಗನಿಗೆ ತನ್ನನ್ನು ನಂಬಿದ‌ ಕುಟುಂಬಿಕರೇ ಬೇಡವಾದರು. ಅವರು ಮುಟ್ಟಿದರೆ ಅಶುದ್ದವೆಂಬ ಕಳಂಕ ಹುಟ್ಟಿತ್ತು. ಇದರ ಪರಿಣಾಮ ನಾಗ ಬನಗಳಿಗೆ ಪ್ರವೇಶ‌‌ ನಿಷೇಧವಾಯಿತು. ಪ್ರವೇಶ‌ ಕೇಲವ ವೈದಿಕರ‌ ಪಾಲಾಯಿತು. ಈಗ‌ ತುಳುನಾಡಿನ ಬಹುಪಾಲು ನಾಗಬನಗಳ‌ ಸ್ಥಿತಿ‌ ಇದೇ ಅಗಿದೆ. ಆದರೆ ಕೆಲವೊಂದು ಭಾಗಗಳಲ್ಲಿ ಮೂಲ ಪರಂಪರೆ ಈಗಲೂ ‌ನಡೆದುಕೊಂಡು ಬರುತ್ತಿದೆ. ಅವುಗಳಲ್ಲಿ ಈಗ‌ ಕೇರಳಕ್ಕೆ‌ ಸೇರಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಂಬಾರು‌ ಭಂಡಾರಮನೆಯ ಕುಟುಂಬವೂ ಒಂದು. ನನ್ನ ಕುಟುಂಬದ ಮೂಲ‌ ಮನೆಯಾಗಿರುವ ಕಡಂಬಾರು ಭಂಡಾರ ‌ಮನೆಗೆ‌ ಸುಮಾರು 500 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಇದೆ‌. ಬಿಲ್ಲವ ಸಮಾಜದ ಉಪ್ಯಾನ್‌/ಕಿರೋಡಿಯನ್‌ ಬಳಿಗೆ‌ ಸೇರಿದ ಈ ಕುಟುಂಬದ ಮನೆಯೂ‌ ಕಡಂಬಾರು ಗ್ರಾಮದ ಮಲರಾಯ ಬಂಟ ದೈವಗಳ ಮೂಲ ಭಂಡಾರಮನೆಯೂ ಹೌದು.‌ ಭಂಡಾರಮನೆಯ ಎಡಭಾಗದಲ್ಲಿ ಗ್ರಾಮ ದೈವಸ್ಥಾನವೂ ಇದೆ‌. ವರ್ಷಂಪ್ರತಿ ವಿಜೃಂಭಣೆಯ ನೇಮವೂ ನಡೆಯುತ್ತಾ‌ ಬರುತ್ತಿದೆ. ಸ್ವಲ್ಪದೂರದಲ್ಲಿ‌ ನಾಗಬನವಿದೆ. ಈ ನಾಗಬನವೂ ನವೀಕರಣಕ್ಕೂ ಮೊದಲು‌ ದಟ್ಟವಾದ‌ ಮರಗಳಿಂದ ಕೂಡಿತ್ತು. ಮರಕಡಿಯಲು ಪ್ರಶ್ನಾಚಿಂತನೆಯಲ್ಲೂ‌ ನಿಷೇಧ ತೋರಿಬಂತು. ಆದರೆ ನಾಗನ ಕಲ್ಲುಗಳು ಕೆಲವು‌ ಬಗ್ನವಾಗಿದಲ್ಲದೆ ಇನ್ನು‌ ಕೆಲವು‌ ಮಣ್ಣಿನಡಿಯಲ್ಲಿ ಹೂತು‌ ಹೋಗಿದ್ದವು. ಇದು ಬಹಳ ಪ್ರಾಚೀನವಾದ ನಾಗನ ಕಲ್ಲುಗಳಾಗಿದ್ದವು. ಅನಿವಾರ್ಯವಾಗಿ ನವೀಕರಣ ‌ಮಾಡಿ‌ ಮತ್ತೆ ಅದೇ ರೀತಿಯ ಬನದ ರಚನೆಗಾಗಿ‌ ಮರಗಳನ್ನು ನೆಡಲಾಯಿತು. 6 ನಾಗನ ಕಲ್ಲುಗಳಿದ್ದು ಒಂದರಲ್ಲಿ ಎರಡು ನಾಗನ ಕೆತ್ತನೆಗಳಿವೆ. ಪ್ರಾಚೀನ ಕಲ್ಲುಗಳು ಹೇಗಿದ್ದವೋ ಅದೇ ರೀತಿಯಲ್ಲಿ ಕಲ್ಲುಗಳ ಕೆತ್ತನೆ ಮಾಡಿ ಪ್ರತಿಷ್ಠಾಪನಾ ಕಾರ್ಯನಡೆದಿದೆ. ಎರಡು ಕನ್ಯೆಯ ರೂಪದ‌ ಕಲ್ಲುಗಳಿದ್ದು‌ ಇಂದು‌ ನಾಗಯಕ್ಷಿ‌ ಮತ್ತೊಂದು ನಾಗ ಕನ್ಯೆ ಎಂಬ ಮಾತಿದೆ. ಒಂದು ನಾಗಬೆರ್ಮರ ಮೂರ್ತಿ,‌ ಒಂಟಿನಾಗ, ಜೋಡಿನಾಗ ಮತ್ತೊಂದು ನಾಗನ‌ಕಲ್ಲು ಮತ್ತು ಅದರ ಹಿಂಬದಿ ಮಾನವಾಕೃತಿಯ ನಿಂತ‌ ಭಂಗಿಯ ವಿನ್ಯಾಸವಿದೆ. ಇದು ನೋಡಲು ವಿಶೇಷವಾಗಿದ್ದು ಅಪರೂಪವಾಗಿದೆ. ಆದರೆ ಇದೇನೆಂಬುದು‌ ತಿಳಿದು‌ ಬಂದಿಲ್ಲ. ಮತ್ತು ‌ಕಟ್ಟೆಯ ಒಳಗಡೆ ಎರಡು‌ ಕಡೆಗಳಲ್ಲಿ ಗುಳಿಗ ಸಾನಿಧ್ಯವಿದೆ. ಕಡಂಬಾರಿನ‌ಲ್ಲೂ ನಾಗರಪಂಚಮಿಗೆ ಹಾಲೆರೆಯುವ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ‌ ಇಲ್ಲಿನ ಒಂದು ವಿಶೇಷವೆಂದರೆ ನಾಗ‌ನಿಗೆ ಹಾಲೆರಯುವುದು ಯಾವುದೇ ವೈದಿಕ ಅರ್ಚಕರಲ್ಲ. ಕುಟುಂಬದ ಹಿರಿಯ ವ್ಯಕ್ತಿಯೇ ಇಲ್ಲಿ ನಾಗನಿಗೆ ಹಾಲೆರೆದು‌ ಪೂಜೆ‌ ನಡೆಸುತ್ತಾರೆ. ಇಲ್ಲಿ ಮಲರಾಯ ದೈವಕ್ಕೆ ಗಡಿಪಟ್ಟವಾದ ವ್ಯಕ್ತಿಯು ಹಾಲೆರೆಯುತ್ತಾರೆ. ಈಗ ಗಡಿ ಪ್ರಧಾನರಾಗಿರುವ ದೂಮ(ದೂಮಪ್ಪ)ಪೂಜಾರಿಯವರು ನಾಗನಿಗೆ ಹಾಲೆರೆಯುವ ಸೇವೆಯನ್ನು ‌ನಡೆಸಿಕೊಂಡು ಬರುತ್ತಿದ್ದಾರೆ. ಕುಟುಂಬದ ಹಿರಿಯ ವ್ಯಕ್ತಿ ಇಲ್ಲಿ‌ ಹಾಲೆರೆಯುವುದು ಆನಾದಿಕಾಲದಿಂದಲೂ ನಡೆದುಕೊಂದು ಬಂದಿರುವ ಪದ್ದತಿ. ಗಡಿ‌ ಪ್ರದಾನರಿಗೆ ಕುಟುಂಬದಲ್ಲಿ,‌ ಗ್ರಾಮದಲ್ಲಿ ವಿಶೇಷ‌ ಸ್ಥಾನಮಾನಗಳಿವೆ.‌ ಇವರಿಗೆ ಅನೇಕ‌ ಕ್ರಮ ನಿಯಮ‌ ಕಟ್ಟು ಪಾಡುಗಳಿವೆ. ಅದ್ದರಿಂದ ಇವರ ಮೂಲಕ‌ ಇಲ್ಲಿ‌ ತನು ಸೇವೆ‌ ನಡೆಯುತ್ತದೆ. ಇವರೊಂದಿಗೆ ಕುಟುಂಬದ ಯುವಕರು‌ ಸಹಾಯಕರಾಗಿ ನಿಲ್ಲುತ್ತಾರೆ. ಇಲ್ಲಿನ ನಾಗ‌ಬನದ‌ ನಾಗನ ಕಟ್ಟೆಯೊಳಗೆ‌ ಕುಟುಂಬದ ಎಲ್ಲರಿಗೂ ಮುಕ್ತ ಪ್ರವೇಶ. ಯಾವುದೇ ಅಶುದ್ದದ‌ ಮಾತಿಲ್ಲ‌. ದೂಮ ಪೂಜಾರಿ ಯವರು ಮೊದಲಿಗೆ ನಾಗನ ಕಲ್ಲುಗಳನ್ನು ನೀರಿನಿಂದ ಶುಚಿಗೊಳಿಸಿ ನಂತರ ಹೂಗಳಿಂದ ಅಲಂಕರಿಸಿ, ಪನಿಯಾರ ಹಾಕಿ ಅದರ ಮೇಲೆ ಸಿಪ್ಪೆ ತೆಗೆದ ಎಳನೀರನ್ನಿಟ್ಟು ಪೂಜೆ ಮಾಡುತ್ತಾರೆ. ನಂತರ ಮತ್ತೆ ಎಲ್ಲವನ್ನೂ ತೆಗೆದು ಶುಚಿಗೊಳಿಸಿ‌ ಹಾಲು‌ ಮತ್ತು ಎಳನೀರನ್ನು ಎರೆಯುತ್ತಾರೆ. ನಂತರ ಪುನಃ ಪೂಜೆ‌ ಮಾಡುತ್ತಾರೆ. ನಂತರ ಕುಟುಂಬಕ್ಕೆ ಸಂಭಂದಪಟ್ಟ ಇನ್ನೊಂದು ಸಣ್ಣ ನಾಗಬನಕ್ಕೆ‌ ಹೋಗಿ‌ ಅಲ್ಲಿ ಹಾಲೆರೆಯುತ್ತಾರೆ‌. ಇದಾದ ನಂತರ‌ ಗಡಿ ಪ್ರಧಾನರಾದ ದೂಮ ಪೂಜಾರಿಯವ ಹಸ್ತದಿಂದಲೇ ನಾಗ‌ಬನದಲ್ಲಿ ಎಲ್ಲರಿಗೂ ತಂಬಿಲದ ಪ್ರಸಾದವಿತರಣೆಯಾಗುತ್ತದೆ. ಇಲ್ಲಿ ನಾಗನಿಗೆ‌ ಬ್ರಾಹ್ಮಣ ಅರ್ಚಕರಿಂದಲೇ‌ ಹಾಲೆರೆಯಬೇಕೆಂಬ‌ ಮಾತು‌ ಕೆಲವು ಅವಿದ್ಯಾವಂತರಿಂದ‌ ಕೇಳಿ ಬಂದಿತ್ತು. ಹಾಗೆಯೇ ಇಲ್ಲಿನ ಗಡಿ ಪ್ರಧಾನರ ಅಸೌಖ್ಯದ ಸಂದರ್ಭದಲ್ಲಿಯೂ ಇಲ್ಲಿ‌ ಹಾಲೆರೆಯುವ ಬಗ್ಗೆ‌ ಕೆಲವು ಚರ್ಚೆಗಳಾಗಿದ್ದವು. ಈ ಸಂದರ್ಭದಲ್ಲಿ ಇಲ್ಲಿ ಅಷ್ಟಮಂಗಳ ಪ್ರಶ್ನೆ‌ ಇಡಲಾಯಿತು. ಆಗ ಅದರಲ್ಲಿ ತೋರಿ ಬಂದ ವಿಚಾರವೆಂದರೆ ಇಲ್ಲಿ ಕುಟುಂಬದ ವ್ಯಕ್ತಿಯೇ ಹಾಲೆರೆಯಬೇಕು. ಇವರ ಹೊರತು‌‌ ಬೆರ್ಯಾರು‌‌ ನಾಗನಿಗೆ ಹಾಲೆರೆಯಬಾರದು ಎಂದು. ಮುಂದೆ‌‌ ಸಹಾಯಕರನ್ನು ಕುಟುಂಬಸ್ಥರಲ್ಲೇ ನೇಮಿಸಿ ಹಿಂದಿನ‌ ಸಂಪ್ರದಾಯವನ್ನು ಆಚರಿಸಲಾಯಿತು. ಇಲ್ಲಿಯ ಮತ್ತೊಂದು ವಿಶೇಷವೆಂದರೆ ‌ಇಲ್ಲಿಯ ನಾಗನಿಗೆ‌ ದೈವಗಳಿಗೆ ನಡೆಯುವಂತೆ ‌ಚೌತಿ,‌ ದೀಪಾವಳಿ ಪರ್ವಗಳ ಸೇವೆ‌‌ ನಡೆಯುತ್ತವೆ. ಪನಿಯಾರ ಹಾಕಿ ಎಡೆ ಬಡಿಸಿ ಗಡಿ ಪ್ರಧಾನರು ಪೂಜೆ‌ ನಡೆಸುತ್ತಾರೆ. ‌ಈ ನಾಗನ ಕಟ್ಟೆಯ ಒಳಗೆ ಗುಳಿಗ ಸಾನಿದ್ಯವೂ ಇದೆ‌. ಹೀಗೆ ತುಳುನಾಡಿನ ಪ್ರಾಚೀನ ನಾಗಾರಾಧನೆಯನ್ನು ಕಡಂಬಾರು ಭಂಡಾರಮನೆ‌ ನಡೆಸಿಕೊಂಡು ಬರುತ್ತಿದೆ. ಕಡಂಬಾರು ಭಂಡಾರಮನೆಯ ಉಪ್ಯಾನ್ ಕುಟುಂಬಕ್ಕೆ ಕುಟುಂಬ ದೈವವಾಗಿ ಮತ್ತು ಗ್ರಾಮದ‌ ದೈವವಾಗಿ ಮಲರಾಯ ಬಂಟ‌‌ ದೈವಗಳಿವೆ. ಧರ್ಮದೈವವಾಗಿ‌ ಜುಮಾದಿ‌‌ ಇದೆ. ಇದಲ್ಲದೇ ‌ಕಲ್ಲುರ್ಟಿ ಪಂಜುರ್ಲಿ, ‌ಒತ್ತೆ ಕಲ್ಲುರ್ಟಿ, ಕೊರತಿ, ಮುಗೇರ್ಲು, ಆರು ಗುಳಿಗ ಸಾನಿದ್ಯಗಳಿವೆ. ಬರಹ-ಸಂಕೇತ್ ಪೂಜಾರಿ

0 comments: