ಕೋಟಿ ಚೆನ್ನಯರ ಕಥಾನಕದಲ್ಲಿ ಅಲ್ಲಲ್ಲಿ ಮಿಂಚಿ ಮರೆಯಾಗುವ ಪಾತ್ರಗಳಲ್ಲಿ ಅತ್ಯಂತ ನಿಗೂಢವಾದ ಪಾತ್ರ ಬೊಂಬೆ ನಾಡಿನ ಬೊಂಬೆ ಮುದರು. ಈಕೆಯ ಪಾತ್ರ ಹೊರ ಜಗತ್ತಿಗೆ ತೆರೆದುಕೊಳ್ಳಲಾಗದಷ್ಟು ಮುಚ್ಚಿಹೋಗಿರುವ ಮರ್ಮ ಮಾತ್ರ ಅರ್ಥವಾಗದೆ ಹೋಗಿರುವಂತಹುದು. ಕಾಣದ ಕೈಗಳ ಆಟ ಎಷ್ಟೊಂದು ಬಲಿಷ್ಟವಾಗಿತ್ತೆನ್ನುವುದಕ್ಕೆ ಈಕೆಯ ಪಾತ್ರ ಸಾಕ್ಷಿ. ಉಳ್ಳವರ ಮತ್ತು ಇಲ್ಲದವರ ಏಣಿ ಆಟದಲ್ಲಿ ಬಹುಷ ಬಲಿಪಶುವಾಗಿದ್ದು ಇದೇ ಮುದರು(ಮದರು). ಪಡುಮಲೆ(ಪೆರ್ಮಲೆ) ಬಲ್ಲಾಳ ಕುಜುಂಬ ಮುದ್ಯರ ಪಟ್ಟದರಸಿ(ಅಬ್ಬೆ) ಕಿನ್ಯಕ್ಕೆ ರಾಣಿಯ ಅಂತರಂಗದ ದಾಸಿ(ಸಗ್ಮಲ್ ಪೊಣ್ಣು). ಒಂದೊಮ್ಮೆ ಕುಜುಂಬ ಮುದ್ಯ ಬಲ್ಲಾಳ ಮೋಸದಿಂದ ಪಗಡೆಯಾಟದಲ್ಲಿ ಕಿನ್ಯಕ್ಕೆ ಬಲ್ಲಾಳ್ತಿಯನ್ನು ಸೋಲಿಸಲ್ಪಟ್ಟಾಗ ಆಕೆ ಕೋಪಗೊಂಡು ತನ್ನ ತವರು ಮನೆಗೆ ಹೋದಾಗ ಇದೇ ಮುದರು ಸಮಾಧಾನಿಸಿ ಆಕೆಯನ್ನು ಕರೆತರುತ್ತಾಳೆ.
ದೇಯಿ ಬೈದೆತಿ ಪ್ರಸವಿಸಿದಾಗ ಇದೇ ಮುದರು ಆಕೆಯ ಸೇವೆಯನ್ನು ಮಾಡುತ್ತಾಳೆ. ದೇಯಿ ಬೈದೆತಿಗೆ ಪ್ರಸವದ ನೋವು ಬರುತಿರಲು ಮುದರು ಹೊಟ್ಟೆಗೆ ಎಣ್ಣೆ ಹುಯ್ದಾಗ ಅದು ಕವಲಾಗಿ ಎರಡು ಕಡೆ ಹರಿಯುತ್ತದೆ ಅದನ್ನು ನೋಡಿ ಓ ಬಲ್ಲಾಳೆರೆ ತರೆ ನೀರ್ ನರಿಂಡ್ ದೇಯಿ ಬೈದೆತಿನ ಬಂಜಿಡ್ ರಡ್ಢ್ ಜೋಕುಲು ಉಲ್ಲೆರಿಯೆ ಎಂದು ಮೊದಲಾಗಿ ತಿಳಿಸಿದವಳು ಇದೇ ಮುದರು. ಅದೇ ರೀತಿ ದೇಯಿ ಬೈದೆತಿ ಮತ್ತು ಕುಜುಂಬದ ಮುದ್ಯನ ರಕ್ತ ಸಂಬಂಧದ ಬಗ್ಗೆ ಅಲ್ಲಲ್ಲಿ ಗೋಜಲು ಗೋಜಲಾಗಿ ಮಾತನಾಡುತ್ತಾಳೆ ಆದರೆ ಉಳ್ಳವರು ಅಲ್ಲಿಯೆ ಆಕೆಯ ಸದ್ದನ್ನು ಅಡಗಿಸುತ್ತಾರೆ. ಲೇಖಕನ್ನು ಆಕೆಯ ಮಾತಿಗೆ ಕಿವಿಯಾಗುವುದಿಲ್ಲ ಆಕೆಯ ಅಂತ್ಯದೊಂದಿಗೆ ಒಂದು ಸತ್ಯವು ಸಮಾಧಿಯಾಗುತ್ತದೆ. ಆಕೆ ಇಡೀ ಕಥಾನಕದಲ್ಲಿ ಕುಜುಂಬದ ಮುದ್ಯನನ್ನು ದ್ವೇಷಿಸುತ್ತಲೆ ಬರುತ್ತಾಳೆ ಯಾಕೆ ಆಕೆಗೆ ಅವನ ಮೇಲೆ ಸಿಟ್ಟೆಂಬುದರ ಬಗ್ಗೆ ಯಾರು ಪ್ರಶ್ನೆ ಮಾಡಲು ಹೋಗುವುದಿಲ್ಲ. ಇಲ್ಲಿ ಕುಜುಂಬದ ಮುದ್ಯನು ಕೂಡ ಆಕೆಯ ಬಗ್ಗೆ ಸ್ವಲ್ಪ ಹೆದರಿದವನಂತೆ ಮತ್ತು ಆದಷ್ಟು ಆಕೆಯೊಂದಿಗೆ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನ ಪಟ್ಟಂತೆ ಕಂಡುಬರುತ್ತಾನೆ. ಕಿನ್ಯಕ್ಕೆ ಅಬ್ಬೆಯ ಸಾವಿನ ನಂತರ ಈಕೆ ಅರಸೊತ್ತಿಗೆಯ ಮೇಲೆ ಸಿಡಿದು ಏಳುತ್ತಾಳೆ, ನ್ಯಾಯ ಅನ್ಯಾಯ ತೂವಂದಿ ಅರಸು, ಪಿಲಿ ಪತ್ತಿ ಗಡಸು ಎಂದು ಅಲ್ಲಲ್ಲಿ ಬಡಬಡಿಸುತ್ತಾ ಇರುವ ಆಕೆ ನಂತರ ಅರ್ಧದಲ್ಲಿ ಆಕೆಯ ಸ್ಥಿತಿ ಏನಾಯಿತು ಎಂದು ಯಾರಿಗು ತಿಳಿಯುವುದೇ ಇಲ್ಲ. ಕೆಳವರ್ಗದ ಮಹಿಳೆಯಾಗಿದ್ದು ಕಿನ್ಯಕ್ಕೆ ರಾಣಿಯ ಅಂತರಂಗದ ಸಖಿಯಾಗಿ, ದೇಯಿ ಬೈದೆತಿಗೆ ತಾಯಿ ಸ್ಥಾನದಲ್ಲಿ ನಿಂತವಳಾಗಿ ಅದೇ ರೀತಿಯಲ್ಲಿ ಅನ್ಯಾಯದ ವಿರುದ್ದ ಪ್ರತಿಭಟಿಸಿದ ದಿಟ್ಟೆ ಕಡೆಗೆ ನಿಗೂಢವಾಗಿ ಕಣ್ಮರೆಯಾಗುತ್ತಾಳೆ. ಆಕೆಯ ಸಾವಿಗೆ ನ್ಯಾಯ ಸಿಗುವುದೇ ಇಲ್ಲ, ಬಹುಷ ಕೆಲವರ್ಗದಲ್ಲಿ ಹುಟ್ಟಿ ಯಾರ ಬೆಂಬಲ ಇಲ್ಲದಿದ್ದುದ್ದೇ ಆಕೆಗೆ ಮಾರಕವಾಗಿರಬೇಕು. ಆಕೆಯ ನಾಪತ್ತೆ ನಿಗೂಢವಾಗಿರುವುದು ಲೇಖಕನ ತಾತ್ಸಾರವೇ ಸರಿ. ಇದೀಗ ಕಾವ್ಯ ಪೂಜಾರಿಯವರ ಸಾವು ಕೂಡ ಇದೇ ಪರಿಸ್ಥಿತಿಯಲ್ಲಿದೆ. ಇಲ್ಲು ಕೂಡ ಆಗಿರುವುದು ಆಕೆಗೆ ಹಣಬಲ ಮತ್ತು ರಾಜಕೀಯ ಬೆಂಬಲ ಇಲ್ಲದಿರುವುದೇ ಒಂದು ಕಾರಣ ಇರಬಹುದು. ಇತಿಹಾಸದ ಮುದರುವಿನಂತೆ ಕಾವ್ಯಳ ಸಾವು ಕೂಡ ನಿಗೂಢತೆಯ ಹಾದಿಯಲ್ಲಿ ಹೋಗುತ್ತಿದೆ ಅನಿಸುತ್ತೆ. ಇತಿಹಾಸದಲ್ಲಿ ಕೆಳವರ್ಗದ ಮಹಿಳೆಯರು ಮೇಲ್ವರ್ಗದವರ ಆಕ್ರಮಣಕ್ಕೆ ಒಳಗಾಗಿ ನಿಗೂಢವಾಗಿ ಮರೆಯಾದವರೆ ಹೆಚ್ಚು. ಮುದರು ಎನ್ನುವ ಪಾತ್ರ ಕೋಟಿ ಚೆನ್ನಯರ ಕಥಾನಕದಲ್ಲಿ ಮಿಂಚಿ ಮರೆಯಾದ ನ್ಯಾಯ ಸಿಗದ ಪಾತ್ರ, ಸರಿಯಾಗಿ ಕಿವಿಕೊಟ್ಟರೆ ಆಕೆ ಗೋರಿಯೊಳಗಿಂದ ಸಣ್ಣಗೆ ಬಿಕ್ಕುತ್ತಿರುವ ಧ್ವನಿ ಕೇಳಲು ಬಹುದು. -ಲೇಖನ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ
0 comments: