Tuesday, January 23, 2018

ಬಿಲ್ಲವರ ಗುತ್ತು ಮನೆತನಗಳು ( ಕಲಾಯ ಗುತ್ತು / ಕಲಾಯ ದೊಡ್ಡ ಮನೆ)

ಬೆಳ್ತಂಗಡಿಯ ಪುತ್ತಿಲ ಗ್ರಾಮದಲ್ಲಿದೆ ಕಲಾಯ ಗುತ್ತು. ಬಹು ದೊಡ್ಡದಾದ ಈ ಗುತ್ತಿನ ಮನೆಯನ್ನು ಕಂಡು ಜನ ದೊಡ್ಡ ಮನೆಯೆಂದು ಕರೆದರು. ಆದ್ದರಿಂದ ಇದು ಕಲಾಯ ಗುತ್ತು ದೊಡ್ಡ ಮನೆ ಎಂದು ಹೆಸರಾಗಿದೆ.

ಈ ಗುತ್ತಿನ ಎದುರುಗಡೆಯಲ್ಲಿ ಎಕ್ರೆಗಟ್ಟಲೆಯ ಬಹುವಿಶಾಲವಾದ ಬಾಕಿಮಾರು ಗದ್ದೆ ಇದೆ. ಬಹಳ ಎತ್ತರವಾಗಿ ಈ ಮನೆ ಇದ್ದು ಹಲವು ಮೆಟ್ಟಿಲುಗಳನ್ನು ಹತ್ತಿ ಸುತ್ತಮುದಲಿನ ಮನೆಯೊಳಗೆ ಹೋಗ ಬೇಕು. ಇದು ಸಾಲ್ಯಾನ್ ಬಳಿಯವರ ಮನೆಯಾಗಿದ್ದು ಜಾರಪ್ಪ ಪೂಜಾರಿಯವರು ಈಗಿನ ಯಜಮಾನರಾಗಿದ್ದಾರೆ. ಇವರಿಗೆ ಅರಸು ದೈವದ ಮತ್ತು ಕೊಡಮಣಿತ್ತಾಯ ದೈವದ ಗಡಿ ಪಟ್ಟವಾಗಿದೆ. ಈ ಕುಟುಂಬದ ಮೋನಪ್ಪ ಪೂಜಾರಿಯವರು ದೈವದ ಪಾತ್ರಿ ಯಾಗಿದ್ದಾರೆ. ನಾಲ್ಕು ಸುತ್ತಿನ ವಿಶಾಲವಾದ ಈ ಗುತ್ತಿನ ಮನೆಯನ್ನು ಹೊರಗಿನಿಂದ ನೋಡುವಾಗ ಪ್ರಾಚೀನಕಾಲದ ಅರಮನೆಯಂತೆ ತೋರುತ್ತದೆ.

ಗುತ್ತಿನ ಹೆಬ್ಬಾಗಿಲು ಎತ್ತರದಲ್ಲಿದ್ದು ಬಹು ಸುಂದರವಾಗಿ ಭವ್ಯವಾಗಿದೆ. ಮನೆಯ ಒಳಾಂಗಣವನ್ನು ಪ್ರವೇಶಿಸಲು ಎತ್ತರದ ಹೆಬ್ಬಾಗಿಲನ್ನು ಹೊಕ್ಕು ದಾಟಿ ಮುಂದಕ್ಕೆ ಸಾಗಬೇಕು. ಹಾಗೆ ಪ್ರವೇಶಿಸಿದಾಗ ಕಲಾಗಾರಿಕೆಯ ಚಿತ್ರಗಳಿಂದ ಸಿಂಗಾರಗೊಂಡ ಸುಂದರ ಬೋಧಿಗೆ ಕಂಬಗಳಿರುವ ವಿಶಾಲವಾದ ಚಾವಡಿ ಇದೆ. ಉಪ್ಪರಿಗೆಯಲ್ಲೂ ವಿಶಾಲವಾಗಿದ ಕೋಣೆಗಳಿವೆ. ಅಗಲವಾದ ಮೆಟ್ಟಿಲುಗಳು ಉಪ್ಪರಿಗೆಗೆ ಹೋಗಲು ಇವೆ. ಸುಮಾರು ೪೦೦ ವರ್ಷಗಳಷ್ಟು ಹಳೆಯದಾದ ಈ ಗುತ್ತು ಮನೆಗೆ ಹಿಂದೆ ಮುಳಿ ಹುಲ್ಲಿನ ಹೊದಿಕೆ ಇತ್ತು. ಈ ಮನೆಯು ಎರಡು ಬಾರಿ ಬೆಂಕಿ ಆಕಸ್ಮಿಕಕ್ಕೆ ಗುರಿಯಾಗಿತ್ತು. ಇದೀಗ ಸುಮಾರು ೨೫ ವರ್ಷಗಳಿಂದೀಚೆ ಹಂಚು ಹೊದಿಸಲಾಗಿದೆ.

ಈ ಮನೆತನಕ್ಕೆ ಅನೇಕ ಭೂಸಂಪತ್ತು ಇದ್ದು ಹಿಂದೆ ಅನೇಕ ಆಳುಕಾಳುಗಳಿದ್ದರು. ೧೯೯೮ರ ಫೆಬ್ರುವರಿ ಒಂದನೇ ತಾರೀಕಿನಂದು ಈ ಗುತ್ತಿನಲ್ಲಿ ಧರ್ಮನೇಮ ನಡೆದಿತ್ತು. ಕೊಡಮಣಿತ್ತಾಯ ದೈವದ ಭಂಡಾರ ಬಂದು ಇಲ್ಲಿ ಧರ್ಮನೇಮ ಸಂದಿತ್ತು. ಆಗ ೨೭೪ ಕುಟುಂಬ ಸದಸ್ಯರು ಸೇರಿದ್ದರು. ೧೯೮೦ ರಲ್ಲಿ ಕುಟುಂಬದ ಆಸ್ತಿ ಪಾಲಾಗಿದೆ. ಈಗ ಈ ಗುತ್ತು ಮನೆಯಲ್ಲಿ ಕುಟುಂಬದ ೫ ಕವಲಿನವರು ವಾಸವಿದ್ದಾರೆ. ಮನೆಯ ಯಜಮಾನರಾದ ಜಾರಪ್ಪ ಪೂಜಾರಿಯವರು ಯಕ್ಷಗಾನ ಮತ್ತು ನಾಟಕಗಳಲ್ಲಿ ಪಾತ್ರವಹಿಸಿದ ಅನುಭವ ಉಳ್ಳವರು.

ಗುತ್ತಿನಲ್ಲಿ ಪ್ರತೀಶುಕ್ರವಾರ ಭಜನೆಯ ಕಾರ್ಯಕ್ರಮ ಇರಿಸಿಕೊಂಡಿದ್ದಾರೆ. ಗುತ್ತಿನಲ್ಲಿ ಗಡಿಪಟ್ಟ ಆದವರ ಕೆಲವು ಸುಂದರ ಮೂರ್ತಿಗಳು ಇಲ್ಲಿದ್ದು ಹಿರಿಯಾಯ ಎಂಬ ನೆಲೆಯಲ್ಲಿ ಆರಾಧನೆಗೊಳ್ಳುತ್ತಿದೆ. ಸುಮಾರು ೫-೬ ತಲೆಮಾರುಗಳ ಹಿಂದೆ ಇದ್ದವರು ಕರ್ಗ ಪೂಜಾರಿ, ನಂತರ ಚೆನ್ನಯ ಪೂಜಾರಿ, ಅವರ ಬಳಿಕ ದುಗ್ಗ ಪೂಜಾರಿ, ತುಕ್ರ ಪೂಜಾರಿಯ ಹಾಗೂ ಮುಂತಾದ ಹಿರಿಯರು ಈ ಗುತ್ತಿನ ಏಳಿಗೆಯಲ್ಲಿ ಬಹುವಾಗಿ ಶ್ರಮಿಸಿದವರು ಎಂದು ಈಗಿನ ಯಜಮಾನರಾದ ಜಾರಪ್ಪ ಪೂಜಾರಿಯವರು ಹೇಳುತ್ತಾರೆ. ಆ ಹಿರಿಯರ ಸಾಹಸ ಕೆಲಸಗಳನ್ನು ನೆನಪಿಸುತ್ತಾರೆ. ಊರಿನಲ್ಲಿ ಯಾವುದೇ ವಿಶೇಷ ಕಾರ್ಯಕ್ರಮ ಆಗುವುದಿದ್ದರೆ ಈ ಮನೆತನಕ್ಕೆ ವಿಶೇಷವಾದ ಗೌರವದ ಹೇಳಿಕೆ ಇರುತ್ತದೆ.

ಈ ಪರಿಸರದಲ್ಲಿ ಎಲ್ಲಿಯಾದರೂ ನೇಮವಾಗುವುದಿದ್ದರೆ ಅಲ್ಲಿ ಈ ಗುತ್ತಿನ ಯಜಮಾನರಿಗೆ ವಿಶೇಷ ಗೌರವ ಹಾಗೂ ಜೋಡು ಸಿಹಿಯಾಳ ಕೊಡುವ ಸಂಪ್ರದಾಯ ಇದೆ. ಇಲ್ಲಿ ಒಕ್ಕಲಿಗಿಂತಲೂ ಹೆಚ್ಚಾಗಿ ಕುಟುಂಬದ ಕವಲುಗಳೇ ಸುತ್ತ ಮುತ್ತ ವಾಸಿಸುತ್ತಿದ್ದರು. ಆಸ್ತಿಯು ೧೫ ಕವಲಿಗೆ ಭಾಗವಾಗಿದೆ. ಜುಮಾದಿ -ಬಂಟ ಈ ಗುತ್ತಿನ ಪ್ರಧಾನ ದೈವ. ಇಲ್ಲಿ ಅರಸು ದೈವ ಇದ್ದು ಇದಕ್ಕೆ ಕೊಡ್ಯ, ಕುತ್ತಿಲ, ಕರ್ತೊಡಿ, ಕಂರ್ಬಡ್ಕ ಎಂಬ ಸ್ಥಳಗಳ ಸಂಬಂಧವಿದೆ. ಚಾವಡಿಯಲ್ಲಿ ಜುಮಾದಿ - ಬಂಟ, ಅರಸು, ಲೆಕ್ಕೇಸಿರಿ, ವರ್ಷದ ಪಂಜುರ್ಲಿ, ಮೈಸಂದಾಯ ದೈವಗಳಿವೆ. ಹಾಗೂ ಹಿರಿಯರ ಮೂರ್ತಿಗಳಿವೆ.

ಮನೆಯ ಬಲಭಾಗದಲ್ಲಿ ದೈವಸ್ಥಾನವಿದೆ. ಚಾವಡಿಯ ಎಡ ಭಾಗದಲ್ಲಿರುವ ಪ್ರತ್ಯೇಕ ಕೋಣೆಗಳ ಒಂದರಲ್ಲಿ ಧರ್ಮಜಾವತೆ ದೈವ ಇದೆ. ಇನ್ನೊಂದರಲ್ಲಿ ಕುಪ್ಪೆಟ್ಟು ದೈವಗಳಿವೆ. ಇದಲ್ಲದೆ ಕಲ್ಲುರ್ಟಿ - ಪಂಜುರ್ಲಿ, ಕಲ್ಕುಡ- ಕಲ್ಲುರ್ಟಿ, ಮಾಲದ ಕೊರಗ, ಮೊಡ ಚಾಮುಂಡಿ, ಗುಳಿಗ ದೈವಗಳು ಹೊರಗಿನಿಂದ ಇವೆ. ಇಲ್ಲಿನ ಚಾವಡಿಯಿಂದ ಭಂಡಾರಹೋಗಿ ದೈವಸ್ಥಾನದಲ್ಲಿ ಪರ್ವಗಳು ನಡೆಯುತ್ತದೆ. ಚಾವಡಿಯಲ್ಲಿ ಹರ್ಸಾಯ ನಡೆಯುತ್ತದೆ. ಈ ಮನೆಯ ಹಿರಿಯವರಾದ ಮಂಜು ಬೀರ ಬೈದ್ಯರು ಬಹಳ ಪ್ರಸಿದ್ಧ ನಾಟಿ ವೈದ್ಯರಾಗಿದ್ದರು.

ಅದಲ್ಲದೆ ಕಾರಣಿಕ ಪುರುಷರೂ ಆಗಿದ್ದರು. ಹಿಂದೆ ಶಿರ್ಲಾಲು ಮಠದ ಎಲ್ಯಣ ಶೆಟ್ಟಿಗಾರ ಆದು ಶೆಟ್ಟಿಗಾರ, ದುಗ್ಗು ಶೆಟ್ಟಿಗಾರ, ಆದಪ್ಪ ಶೆಟ್ಟಿಗಾರ, ದುಗ್ಗಪ್ಪ ಶೆಟ್ಟಿ ಗಾರರ ಮನೆತನಕ್ಕೆ ಔಷಧ ಈ ಮನೆಯಿಂದಲೇ ನಡೆಯುತ್ತಿತ್ತು. ದುಗ್ಗಣ್ಣ ಶೆಟ್ಟಿಗಾರರ ಮಗ ಮಾಲಿಂಗ ಶೆಟ್ಟಿಗಾರರಿಗೆ ಬಾವು ಬಂದು ಬೇನೆ ಹೆಚ್ಚಾದಾಗ ಮಂಜುಬೀರ ಬೈದ್ಯರು ಅದನ್ನು ಗುಣಪಡಿಸಿದ್ದರು.

ಕಲಾಯ ಗುತ್ತು ಮನೆಯ ಅರಸು ದೈವವು ಜೈನಮನೆತನದೊಂದಿಗೆ ಸೇರಿಕೊಂಡಿರುವುದು ಈ ಮನೆತನಕ್ಕೂ ಜೈನರಿಗೂ ಇರುವ ಸಂಬಂಧವನ್ನು ಸೂಚಿಸುತ್ತದೆ. ಮಂಜು ನೀರು ಬೈದ್ಯರು ವೈದ್ಯಕೀಯವನ್ನು ಮೆಚ್ಚಿ ಬಹುಮಾನ ನೀಡಲು ಬಂದಾಗ ಅವನು ಬೆಳ್ಳಿ ಬಂಗಾರ ಕೊಟ್ಟರೆ ಮಾರಿ ಹೋದೀತು, ಆಸ್ತಿ ಕೊಟ್ಟರೆ ಪರರ ಪಾಲಾದೀತು. ಆದ್ದರಿಂದ ಅದ್ಯಾವುದು ಬೇಡ, ಕೊಡುವುದಾದರೆ ನಿಮ್ಮ ಅರಸು ದೈವವನ್ನು ಕೊಡಿ ಎಂದು ಕೇಳುತ್ತಾರೆ.

ಬಹಳ ಶ್ರೀಮಂತನಾಗಿದ್ದ ಮಂಜುಬೀರರ ಅಂತಸ್ತನ್ನು ಕಂಡು ಕಂಡು ಆ ದೈವವನ್ನು ಅವರಿಗೆ ನೀಡುತ್ತಾರೆ. ಬೈದ್ಯರನ್ನು ಹಿಂಬಾಲಿಸಿಕೊಂಡು ಬಂದ ಅರಸು ದೈವ ಕೂಡ್ಯ, ಕುತ್ತಿಲ, ಕತ್ತೋಡಿ, ಕಂರ್ಬಡ್ಕಗಳಲ್ಲಿ ನೆಲೆಯೂರುತ್ತಾ ನಂತರ ಕಲಾಯ ಗುತ್ತಿಗೆ ಬಂತು. ಇವೆಲ್ಲ ಬಿಲ್ಲವರ ಮನೆಗಳು. ಕುತ್ತೋಡಿ ಮಾತ್ರ ಜೈನರ ಮನೆ.

ಈ ಮನೆಯ ನಾಗ ಬನವು ಮನೆಯ ಪೂರ್ವಕ್ಕೆ ಇದೆ. ಪ್ರತೀ ವರ್ಷ ನಡೆಯುವ ತಂಬಿಲಕ್ಕೆ ಸುಮಾರು ೫೦೦ ಜನ ಸೇರುತ್ತಾರೆ.ತನಿಯ ಪೂಜಾರಿಯವರು ಮನೆಯ ಪುನರ್ನಿಮಾಣ ಮಾಡಿದವರು. ಅವರ ಮಗ ನಿವೃತ್ತ ತಹಸಿಲ್ದಾರ ಕೃಷ್ಣಪ್ಪ ಪೂಜಾರಿಯವರು. ಈ ಗುತ್ತಿನಲ್ಲಿ ಈಗಲೂ ಪನೆಯ ಮೂಲಕ ನೀರು ತೆಗೆಯತ್ತಾರೆ. ಹಲವು ವಿಶೇಷತೆಗಳುಳ್ಳ ಮತ್ತು ಚರಿತ್ರೆಯುಳ್ಳ ಈ ಗುತ್ತು ಮನೆಯು ತನ್ನ ಹಳೆಯ ಸಂಪ್ರದಾಯದ ಮತ್ತು ಸಂಸ್ಕೃತಿಯನ್ನು ಈಗಲೂ ಉಳಿಸಿಕೊಂಡು ಪೋಷಿಸಿಕೊಂಡು ಬಂದಿದೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ , ಸಂಕೇತ್ ಪೂಜಾರಿ) ಸಂಕೇತ್ ಪೂಜಾರಿ. PC - Prasad kumar parnda guttu

0 comments: