Monday, January 22, 2018

ಬಿಲ್ಲವರ ಗುತ್ತು ಮತ್ತು ಐತಿಹಾಸಿಕ ಮನೆತನಗಳು (ಮಾಗಂದಡಿ ನಾಯ್ಗರ ಮನೆ)

ಸುಮಾರು 14ನೇ ಶತಮಾನದ ಉತ್ತರಾರ್ಧದಿಂದ 18ನೇ ಶತಮಾನದ ಕೊನೆಯ ತನಕ ಮುಲ್ಕಿ ಸೀಮೆಯನ್ನು ಸಾಮಂತ ಅರಸರು ಆಳುತ್ತಿದ್ದರು. ಸಾಮಂತರಸರ ಕಾಲದಲ್ಲಿ ಮುಲ್ಕಿ ಸೀಮೆಯ ನಾಯ್ಗರು ಕೃಷಿ, ದಂಡನಾಯಕತ್ವ, ಪ್ರಧಾನಿತನ, ಧಾರ್ಮಿಕ ಕ್ಷೇತ್ರದ ಪ್ರಮುಖತನ, ಸೈನ್ಯ ತರಬೇತಿಯ ಗರಡಿಯ ಗುರುಗಳಾಗಿ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದರು. ಕಾರ್ನಾಡು ಧರ್ಮಸ್ಥಾನದ ಭಂಡಾರಮನೆಯೂ ಆಗಿರುವ ಈ ಮಾಗಂದಡಿ ನಾಯ್ಗರ ಮನೆ ಅಂತಹ ಮುಖ್ಯವಾದವುಗಳಲ್ಲಿ ಒಂದು. ಸಾಮಂತರಸರ ಕಾಲದಲ್ಲಿ ವರಪಾಡಿ ಗುಡ್ಡೆ ನಾಯ್ಗ, ಮಾಗಂದಡಿ ತಂಕರನಾಯ್ಗ, ಹಳೆಯಂಗಡಿ ಬಂಕಿ ನಾಯ್ಗ ಈ ಮೂವರು ಸಾಮಂತರಸರ ರಾಜ್ಯಾಡಳಿತದಳಿತದಲ್ಲಿ ಪ್ರಮುಖರಾಗಿದ್ದರು.

ನಾಯ್ಗರು ಗುತ್ತು ಬರ್ಕೆಗಳ ಯಜಮಾನರಾಗಿ, ದಂಡನಾಯಕರಾಗಿ, ಸೇನಾ ತರಬೇತಿಗಾರರಾಗಿ, ನ್ಯಾಯ ತೀರ್ಮಾನದ ಪ್ರಮುಖರಾಗಿ ರಾಜ್ಯಾಡಳಿತದ ವಿಭಿನ್ನ ವಿಭಾಗಗಳ ಮುಖ್ಯಸ್ಥರಾಗಿದ್ದರು. ಮೂಲ್ಕಿ ಸಾವಂತ ಅರಸ ಚಂದ್ರ ಬಳ್ಳಾರರ ಹೆಂಡತಿ ಪುಲ್ಲು ಪೆರ್ಗಡತಿಗೆ ಸಂತಾನ ಆಗದಿದ್ದಾಗ ಸುರತ್ಕಲಿನ ಕಜೇರಿ ಮನೆತನದ ಆಚು ಬೈದ್ಯತಿಯನ್ನು ದತ್ತು ಪಡೆಯುತ್ತಾರೆ.ದತ್ತು ಮಗಳು ಆಚು ಬೈದ್ಯೆತಿ ಚಂದ್ರ ಬಳ್ಳಾಲರ ಅರಮನೆಯಲ್ಲಿ ಬೆಳೆದಳು. ಅವಳ ವರಪಾಡಿ ಕುಂದಯ ಬಾರೆಯೊಡನೆ ಮಾಡಿದರು. ಆಚು ಬೈದ್ಯತಿ ಮತ್ತು ಕುಂದಯ ಬಾರೆ ದಂಪತಿಗಳಿಗೆ ಕಾಂತಬಾರೆ ಬೂದಬಾರೆರೆಂಬ ಅವಳಿ ವೀರರು ಹುಟ್ಟುತ್ತಾರೆ. ಹೆರಿಗೆಯಲ್ಲೇ ಆಚು ಬೈದ್ಯೆತಿ ತೀರಿಕೊಳ್ಳಲು ಆ ಮಕ್ಕಳನ್ನು ಪುಲ್ಲು ಪೆರ್ಗಡ್ತಿ ಅಕ್ಕರೆಯಿಂದ ತನ್ನ ಮಕ್ಕಳಂತೇ ಸಾಕಿದರು. ಬಾರೆಯರು ಸಸಿಹಿತ್ಲು ಸಾಮಂತ ಗರಡಿಯಲ್ಲಿ ಓದು ಬರಹ, ಅಂಗ ಸಾಧನೆ ಕಲಿತು ಸಕಲ ವಿದ್ಯಾ ಪಾರಂಗತರಾಗುತ್ತಾರೆ. ನಂತರದಲ್ಲಿ ಪುಲ್ಲು ಪೆರ್ಗಡ್ತಿಗೆ ಮಂಜಮ್ಮ(ದುಗ್ಗು) ಮಗಳು ಮತ್ತು ಚೆನ್ನರಾಯ ಎಂಬ ಮಗ ಹುಟ್ಟುತ್ತಾರೆ.

ನಂತರ ಹಲವಾರು ಯುದ್ದಗಳಲ್ಲಿ ಬಾರೆಯರು ಸಾಮಂತರಸರಿಗೆ ಗೆಲುವು ತಂದು ಕೊಟ್ಟು ರಾಜ್ಯ ಪಾಲನೆ ಮಾಡುತ್ತಾರೆ. ಚಂದ್ರ ಬಳ್ಳಾಲ ಮರಣ ನಂತರ ಬಾರೆಯರು ಶಿಮಂತೂರಿನ ಅರಮನೆಯಲ್ಲಿ ಚೆನ್ನರಾಯನಿಗೆ ಪಟ್ಟಾಭಿಷೇಕ ಮಾಡಿಸುತ್ತಾರೆ. ತಮ್ಮ ತಂದೆ ಕುಂದಯ ಬಾರೆಯ ಮನೆತನವಾದ ಕೊಲ್ಲೂರು ಗುಡ್ಡೆಸಾನದ ಮನೆಯ ಮರ್ದ ಬೈದ್ಯರಿಗೆ ನೂರು ಮುಡಿ ಹುಟ್ಟುವಳಿ ಭೂಮಿ ಸಹಿತ ಗಡಿ ಪಟ್ಟ ಕೊಡಿಸುತ್ತಾರೆ. ಊರ ಪ್ರಮುಖರು,ಪರವೂರ ಗಣ್ಯರು, ರಾಜ ಪ್ರಮುಖರು ಮತ್ತು ಸಾಮಂತರ ಸಮ್ಮುಖದಲ್ಲಿ ಮರ್ದ ಬೈದ್ಯರಿಗೆ 'ನಾಯ್ಗ' ಎಂಬ ಪ್ರಾಚೀನ ಅಳುಪರ ಪಟ್ಟದ ಬಿರುದಾವಳಿಯೊಂದಿಗೆ ಗಡಿ ಪಟ್ಟವಾಗುತ್ತದೆ. ಇಲ್ಲಿಯ ಗಡಿ ಪಟ್ಟ ಮೂಲ್ಕಿ ಅರಸರ ಸಮಕ್ಷಮದಲ್ಲಿ ಪ್ರಾಚೀನ ಪರಂಪರೆಯಂತೆ ಇಂದಿಗೂ ನಡೆಯುತ್ತಿದೆ.

ಈಗ ಗುಡ್ಡೆಸಾನದಲ್ಲಿ ಅನಂತ ನಾಯ್ಗರು ಪಟ್ಟದಲ್ಲಿದ್ದಾರೆ. ಮೂಲ್ಕಿ ಅರಸರ ಮತ್ತು ಈ ನಾಯ್ಗ ಮನೆತನದವರ ಬಳಿ ಕುಂದರ್. ಪಟ್ಟದ ಸಾಮಂತರು ಮರಣಹೊಂದಿದರೆ ಗುಡ್ಡೆಸಾನದ ನಾಯ್ಗರಿಗೂ, ಗುಡ್ಡೆ ಸಾನದ ನಾಯ್ಗರು ಮರಣ ಹೊಂದಿದರೆ ಸಾಮಂತರಸರಿಗೂ ಹದಿನಾರು ದಿನಗಳ ಸೂತಕವಿದೆ. ಇವರಿಬ್ಬರ ಬಳಿ ಒಂದೇ ಅಗಿದ್ದು ಪಟ್ಟದವರ ಸಾವಿನ ಸೂತಕ ಕೌಟುಂಬಿಕ ಸಂಬಂಧವನ್ನು ಸೂಚಿಸುವಂತಿದೆ. ಸಾಮಂತರಸರು ಬಾರೆಯರನ್ನು ನಾಯ್ಗರೆಂದು ಕರೆಯುತ್ತಿದ್ದರು. ಸಾಮಂತರು ತಮ್ಮ ರಾಜಧಾನಿಯನ್ನು ಮುಲ್ಕಿ ಕೋಟೆಕೇರಿಗೆ ಸ್ಥಳಾಂತರಿಸಿದಾಗ ರಾಜಕಾರಣ ನಿಮಿತ್ತ ಮಾಗಂದಡಿಯಲ್ಲಿ ನಾಯ್ಗ ಮನೆತನ ನೆಲೆಸಿತು.ಈ ಮಾಗಂದಡಿ ನಾಯ್ಗ ಮನೆತನದ ಮೂಲ ಪುರುಷ ಶಂಕರ ನಾಯ್ಗರು.

ಮುಲ್ಕಿಯ 9 ಮಾಗಣೆಗಳಲ್ಲಿ 5 ಗ್ರಾಮಗಳ ದೈವಗಳಿಗೆ ಭಂಡಾರದ ಮನೆ ಇದು. ಊರಿಗೆ ಗೌರವದ ಮತ್ತು ನ್ಯಾಯ ತೀರ್ಮಾನದ ಮನೆ ಇದಾಗಿತ್ತು. ಮಾಗಂದಡಿ ತಂಕರ ನಾಯ್ಗರ ಪರಂಪರೆಯ ಕೋಟ್ಯಾನ್ ಬಳಿಯ ಗೋಪಾಲ ನಾಯ್ಗರಿಗೆ 1979ರಲ್ಲಿ ಗಡಿಪಟ್ಟವಾಗಿ 'ನಾಯ್ಗ' ಗೌರವಾಧಿಕಾರಕ್ಕೆ ಪಾತ್ರರಾಗಿದ್ದಾರೆ. ಮೂಲ್ಕಿಯ 9 ಮಾಗಣೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾಗಂದಡಿ ನಾಯ್ಗರಿಗೆ ಪ್ರಮುಖ ಸ್ಥಾನವಿದೆ. 1962ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಗೋಪಾಲ ಕೊಟ್ಯಾನರು ಸೆಂಟ್ರಲ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದು ನಿವೃತ್ತರಾದ ಮೇಲೆ ವಂಶಪಾರಂಪರ್ಯದ ಗಡಿ ಪಟ್ಟ ಪಡೆದು ನಾಯ್ಗರಾಗಿ ಇಲ್ಲಿ ನೆಲೆಸಿದ್ದಾರೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವ ಕಾಲಕ್ಕೆ ಈ ನಾಯ್ಗರ ಉಪಸ್ಥಿತಿ ಬೇಕೆಂಬ ಸಂಪ್ರದಾಯವಿದೆ. ಐದು ಗ್ರಾಮದಗಳ ಒಂದನೇ ಗುರಿಕಾರರು ಈ ನಾಯ್ಗರು.

ಈ ಮಾಗಂದಡಿ ಮನೆಯ ಪೂರ್ವಕ್ಕೆ ತೋಟದೊಳಗೆ ಧರ್ಮಸ್ಥಾನವಿದೆ. ಇಲ್ಲಿನ ಉಳ್ಳಾಯ ಗುಡಿಯ ಮೂಡು ಬದಿಯಲ್ಲಿ ಒಂದು ಶಿಲಾ ಪೀಠವಿದ್ದು ಇಲ್ಲಿ ನಾಯ್ಗರು ಉತ್ಸವದ ಸಮಯದಲ್ಲಿ ಆಸೀನರಾಗುತ್ತಾರೆ. ಉಳ್ಳಾಯ ಗುಡಿಯ ದಕ್ಷಿಣದಲ್ಲಿ ದೇಬೆಯ ಗುಡಿ ಇದೆ. ಈ ದೈವವನ್ನು ಪೇಜಾವರದ ಬಳಿ ಉಳ್ಳಾಯ ಮಾಯ ಮಾಡಿದನೆಂದು ನಂತರ ಆಕೆಗೆ ಇಲ್ಲಿ ಸ್ಥಾನ ಕಟ್ಟಿಸಿದರೆಂದು ಹೇಳುತ್ತಾರೆ. ಕಾಂತೇರಿ ಜುಮಾದಿ, ಸರಳ ಜುಮಾದಿ, ಮರ್ಲು ಜುಮಾದಿ, ಜಾರಂದಾಯ ಮತ್ತು ಅಣ್ಣಪ್ಪ ಪಂಜುರ್ಲಿ ಇಲ್ಲಿಯ ಪ್ರಧಾನ ದೈವಗಳು. ಮಾಗಂದಡಿಯ ಮನೆಯ ಸುತ್ತುಮುದಲಿನ ಹೆಬ್ಬಾಗಿಲು ಬಿದ್ದು ಹೋಗಿದ್ದು ಈಗ ಕುರುಹು ಮಾತ್ರ ಇದೆ. ಮರದ ಸುಂದರ ಚಾವಣಿ, ಕಲಾ ಕುಸುರಿಯ ಕಂಬಗಳು ಜೀರ್ಣಾವಸ್ಥೆಯಲ್ಲಿದೆ. ಮಾಗಂದಡಿ ಮನೆಗೆ ಸುಮಾರು 100 ಕ್ಕೂ ಹೆಚ್ಚು ಎಕರೆಗಳಷ್ಟು ಭೂಮಿ ಇದ್ದಿತಂತೆ. ಒಕ್ಕಲು ಮನೆಗಳೂ ಇದ್ದವು. ಈಗ 8 ಎಕ್ರೆ ಭೂಮಿ ಮಾತ್ರ ಉಳಿದಿದೆ. ಮನೆಯ ಮುಂದಿನ ಗದ್ದೆ ತೋಟಗಳ ಮಧ್ಯೆ ಮೂರು ಕೆರೆಗಳಿಗೆ. ಅದರಲ್ಲಿ ಒಂದು ತಂಕರ ನಾಯ್ಗರ ಕೆರೆ ವಿಶಾಲವಾಗಿದೆ. ಧರ್ಮಸ್ಥಾನದ ಉತ್ಸವಕ್ಕೆ ಈ ಕೊಳದಲ್ಲಿ ಮೀನು ಬೇಟೆಯ ಸಂಪ್ರದಾಯವಿದೆ.

ನಮಗೆ ಮಾಹಿತಿ ನೀಡಿದಂತಹ ಶ್ರೀಯುತ ಗೋಪಾಲ ನಾಯ್ಗರು ಮೂಲ್ಕಿಯ ಪಾರಂಪರಿಕ ರೂಡಿ, ಸಂಪ್ರದಾಯ, ನಿಯಮಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿದವರಾಗಿದ್ದಾರೆ. ಅಜಾನುಬಾಹು ಸರಳ ಸಜ್ಜನಿಕೆಯ ಇವರು ಊರಿನವರ ಗೌರವಕ್ಕೆ ಪಾತ್ರರಾದವರು. ಇವರು ಇಡೀ ದಿನ ನಮ್ಮೊಂದಿಗಿದ್ದು ನಮಗೆ ಮಾರ್ಗದರ್ಶನಮಾದಿದವರು ಎಂದರೆ ಅವರ ಸರಳ ಸಜ್ಜನಿಕೆಗೆ ಬೇರೆ ಉದಾಹರಣೆ ಬೇಕಾಗಲಾರದು.

(ಸಂಗ್ರಹ- ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ)

0 comments: