Sunday, January 21, 2018

ಬಿಲ್ಲವರ ಗುತ್ತು ಮನೆತನಗಳು (ಮೂಡಾಯಿ ಬರ್ಕೆ)

ಮೂಡಬಿದ್ರೆಯ ಮಾರ್ಪಾಡಿಯಲ್ಲಿ ಮೂಡಾಯಿ ಬರ್ಕೆ ಇದೆ. ಈ ಬರ್ಕೆಯ ಯಜಮಾನರಾದ ಬೋಜ ಕೋಟ್ಯಾನರು ಮೂಡಬಿದ್ರೆಯ ಪುರ ಸಭೆಯ ಮಾಜಿ ಅಧ್ಯಕ್ಷರಾಗಿದ್ದರು. ನಿಷ್ಠಾವಂತ ಸಮಾಜ ಸೇವಕರಾಗಿ ಜನಾನುರಾಗಿ ಪುರಸಭೆಗೆ ಮೂರು ಬಾರಿ ಸದಸ್ಯರಾಗಿ ಆಯ್ಕೆ ಆದವರು. ಬೋಜ ಕೋಟ್ಯಾನರು ಆತ್ಮೀಯವಾಗಿ ನಮ್ಮ ಸಂದರ್ಶನ ತಂಡವನ್ನು ಬರಮಾಡಿಕೊಂಡರು. ಇವರೊಂದಿಗೆ ದೇಜು ಪೂಜಾರಿಯವರು ಮನೆಯತನದ ಬಗ್ಗೆ ಮಾಹಿತಿ ನೀಡುದುದಲ್ಲದೆ ಇನ್ನೊ ಕೆಲವು ಮನೆತನಗಳಿಗೆ ಕರೆದುಕೊಂಡು ಹೋದರು

ಇವರು ನ್ಯಾಯ ತೀರ್ಮಾನ ಮಾಡುವುದರಲ್ಲಿ ಬಹಳ ಪ್ರಸಿದ್ಧರಾಗಿದ್ದರು. ಅನೇಕ ಉಪಯುಕ್ತ ಮಾಹಿತಿಗಳು ಇವರಲ್ಲಿದ್ದು ನಮ್ಮೊಂದಿಗೆ ಹಂಚಿಕೊಂಡರು. ಬೋಜ ಕೋಟ್ಯಾನರು ನೀಡಿದ ಬರ್ಕೆಯ ಇತಿಹಾಸದ ಮಾಹಿತಿಯಂತೆ ಕ್ರಿ.ಶ 1600 ರಲ್ಲಿ ಇಲ್ಲಿ ಆಳಿದ ಚೌಟ ಅರಸರಿಗೆ ಈ ಬರ್ಕೆಯ ಲಿಂಗಣ್ಣ ಪೂಜಾರಿಯವರು ದಳಪತಿಯಾಗಿದ್ದರಂತೆ. ಅರಸರ ಪರಮ ಆಪ್ತರಾಗಿದ್ದರಂತೆ. ಆ ಕಾಲದಲ್ಲಿ ಮೂಡಾಯಿ ಬರ್ಕೆ ಹೆಸರಾಂತ ಪರಾಕ್ರಮಿ ದಂಡನಾಯಕರ ಮನೆಯಾಗಿತ್ತಂತೆ. ಪ್ರಖ್ಯಾತ ಸೇನಾಧಿಪತಿಯ ಮನೆಯಾಗಿ ಶ್ರೀಮಂತಿಕೆಯಿಂದ ಕೂಡಿದ್ದು ಊರು ಪರವೂರುಗಳಲ್ಲಿ ಈ ಮನೆತನ ಹೆಸರನ್ನು ಪಡೆದಿತ್ತು.

ಸೇನಾಧಿಪತಿ ಲಿಂಗಣ್ಣ ಪೂಜಾರಿಯವರ ನಂತರ ಅಂದರೆ ಸುಮಾರು ಮುನ್ನೂರು ವರ್ಷಗಳ ಹಿಂದೆ ಇದು ಬರ್ಕೆಯಾಗಿ ಹೆಸರು ಪಡೆದು ಎರಡು ಪಾಲಾಗಿ ಮೂಡಾಯಿ ಬರ್ಕೆ ಮತ್ತು ಪಡ್ಡಾಯಿ ಬರ್ಕೆ ಎಂದು ಹೆಸರು ಪಡೆದವು. ಈ ಮೂಡಾಯಿ ಬರ್ಕೆ ೧೬ ಮಾಗಣೆಯ ಬಿಲ್ಲವರ ಸಮಾಜದಲ್ಲಿ ೧ ನೇ ಗೌರವ ಸ್ಥಾನದ ಮನೆಯಾಗಿದೆ. ಇದು ಅಂಚನ್ ಬಳಿಯವರಿಗೆ ಸೇರಿದ ಮೂಲಸ್ಥಾನವಾಗಿದೆ.

ಲಿಂಗಣ್ಣ ಪೂಜಾರಿಯವರನ್ನು ಹಿಂಬಾಲಿಸಿ ಕೊಡಮಣಿತ್ತಾಯ ದೈವ ಈ ಬರ್ಕೆಗೆ ಬರುತ್ತದೆ. ನಂತರ ಅವರೇ ಈ ದೈವಕ್ಕೆ ಗಡಿ ಹಿಡಿಯುತ್ತಾರೆ. ಈ ಗ್ರಾಮದ ಗಡುಪಾಡಿ ಜಾಗಗಳಾದ ದಂಡಿಕಾನ, ಜಲಗೋಳಿ, ಮಾರಿಗುಡಿ, ಪುಳ್ಳುಲ, ನಾಗರ ಕಟ್ಟೆ ಮುಂತಾದ ಸ್ಥಳಗಳಿಗೆ ಈ ಬರ್ಕೆ ಮನೆಯಿಂದಲೇ ಭಂಡಾರ ಹೋಗಿ ನೇಮವಾಗುತ್ತಿತ್ತು. ಆದರೆ ಈಗ ಮಾರಿಗುಡಿ ಮತ್ತು ನಾಗರ ಕಟ್ಟೆಗಳಲ್ಲಿ ಮಾತ್ರ ನೇಮ ನಡೆಯುತ್ತದೆ. ಸುಮಾರು ೯೦ ವರ್ಷಗಳ ಹಿಂದೆ ಮುತ್ತಪ್ಪ ಪೂಜಾರಿಯವರು ಪಾತ್ರಿಯಾಗಿದ್ದರು. ಸಂಜೀವ ಪೂಜಾರಿ ಮತ್ತು ಮುಂಡಪ್ಪ ಪೂಜಾರಿಯವರು ಮೂಡಾಯಿ ಬರ್ಕೆಯ ನಾಯಕತ್ವ ವಹಿಸಿದ್ದರು. ಆಗ ನೇಮ ಸಮಯದಲ್ಲಿ ಈ ಬರ್ಕೆಯವರಿಗೆ ಆಗದ ಕೆಲವು ವ್ಯಕ್ತಿಗಳು ಷಡ್ಯಂತ್ರದ ಮೂಲಕ ಕೊಡಮಣಿತ್ತಾಯ ದೈವದ ಭಂಡಾರ ಬಂದು ನೇಮವಾಗುವುದನ್ನು ನಿಲ್ಲಿಸಿದರು.

ಬೇರೊಂದು ದೈವದ ಭಂಡಾರ ತಂದು ನೇಮ ಮಾಡಿದರಂತೆ. ನಂತರ ದೋಷ ಕಾಣಿಸಿಕೊಂಡ ಪರಿಣಾಮವಾಗಿ ಹಲವು ವರ್ಷಗಳ ಬಳಿಕ ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಂತೆ ಮೂಡಾಯಿ ಬರ್ಕೆಗೆ ಬಂದು ತಪ್ಪು ಕಾಣಿಕೆ ಹಾಕಿ ಪರಿಹಾರ ಸೂಚಿಸಲಾಗಿ ನೇಮ ಮಾಡಲಾಯಿತು. ಇಲ್ಲಿನ ಪ್ರಧಾನ ದೈವ ಕೊಡಮಣಿತ್ತಾಯ ಮತ್ತು ದೈವಂತಿ. ಲಿಂಗಣ್ಣ ಪೂಜಾರಿಯವರು ಪ್ರಭಾವಿ ಪುರುಷರಾದುದರಿಂದ ಅವರನ್ನು ದೈವ ಸಂಭೂತರೆಂದು 'ಹಿರಿಯಾಯ' ದೈವವಾಗಿ ಆರಾಧಿಸುತ್ತಾರೆ. ಇವರ ಸುಂದರವಾದ ಮೂರ್ತಿ ಚಾವಡಿಯಲ್ಲಿ ಇದೆ. ಈ ಬರ್ಕೆಗೆ ಸುಮಾರು ೧೦೦ ಎಕ್ರೆಯಷ್ಟು ಭೂಮಿ ಇತ್ತು.

ಮೂಡಾಯಿ ಬರ್ಕಗೆ ಪೊಸ ಇಲ್ಲ್, ತಿರ್ತ ಇಲ್ಲ್, ಪಣೆ ಮುಖ, ಪುಣ್ಕೆದಡಿ, ಪಾದೆ, ನೆಲ್ಲಿಂಜ ಮೊದಲಾದ ಕಡೆಯಲ್ಲಿ ಕವಲುಗಳಿವೆ. ಈ ಕುಟುಂಬದ ಮೂಲ ಅಳಿಯೂರು ಎಂಬಲ್ಲಿ ಇದ್ದ ಅಕ್ಕ ತಂಗಿಯರು ಪಾಲಾಗಿ ಅಕ್ಕನ ಸಂತತಿಯವರು ಇಲ್ಲಿನ ಅರಸನ ಜೊತೆ ನಿಂತರು. ತಂಗಿಯ ಸಂತತಿಯವರು ಮಂತ್ರಿಯ ಜೊತೆ ನಿಂತರು. ಹೀಗೆ ಸ್ಥಳೀಯ ಪಾಳೆಗಾರರ ರಾಜಕಾರಣದಲ್ಲಿ ಈ ಅಕ್ಕ ತಂಗಿಯರ ಕುಟುಂಬದವರು ಅಪರಿಚಿತರಂತೆ ದೂರವಾಗುವಂತಾದ್ದು ಕೌಟಿಂಬಿಕ ಮತ್ತು ಚಾರಿತ್ರಿಕ ದುರಂತ ಎನ್ನುಬಹುದು.

ಇಲ್ಲಿಯ ಆರಾಧನೆಯ ದೈವಗಳು ಜುಮಾದಿ-ಬಂಟ, ಮೈಸಂದಾಯ, ಸೂಕತ್ತೇರಿ, ಒರ್ತೆ ಪಂಜುರ್ಲಿ, ಪೊಸ ಭೂತ, ಜೋಡು ಪಂಜುರ್ಲಿ, ಅರಸು ದೈವ, ಕೊಡಮಣಿತ್ತಾಯ, ರಾವು-ಗುಳಿಗ ಮತ್ತು ದೈವಂತಿ ಇದೆ. ಈ ದೈವಕ್ಕೆ ಸಂಬಂಧಿಸಿದ ಐತಿಹ್ಯವನ್ನು ಭೋಜ ಕೋಟ್ಯಾನರು ವಿವರಿಸಿದರು. ರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ಸೋಲಿಸಿದ ಬಳಿಕ ಮೂಡಬಿದಿರೆಗೆ ಬರುವ ದಾರಿಯಲ್ಲಿ ಕಾಯರ್ ನ ಮರಗಳಿರುವ ಕಡೆ ಸೈನಿಕರ ಸಮೇತ ವಿಶ್ರಮಿಸಿದಳು.

ದೈವಂತಿ ಅವಳ ಕನಸಿನಲ್ಲಿ ಬಂದು "ನನ್ನನ್ನು ನಂಬಿ ಆರಾಧನೆ ಮಾಡಿದರೆ ನಿನ್ನನು ರಕ್ಷಿಸುತ್ತೇನೆ" ಎಂದು ಹೇಳುತ್ತದೆ. ಆ ಸ್ಥಳದಲ್ಲಿ ಕಾಯರ್ ನ ಕಾಯಿ ಬಿದ್ದಿದ್ದನ್ನು ಇವರುಗಳು ಹೆಕ್ಕಿ ತಿಂದಾಗ ಅದು ಕಹಿಯ ಬದಲು ಸಿಹಿಯಾಗಿತ್ತು. ಇಂತಹ ವಿಚಿತ್ರ ಸಂಗತಿಯನ್ನು ನೋಡಿ ರಾಣಿ ಆಶ್ಚರ್ಯಪಟ್ಟಳು. ಇಲ್ಲಿ ದೈವಸ್ಥಾನ ಕಟ್ಟಿದರೆ ಉಳ್ಳಾಲದಲ್ಲಿರುವ ತನಗೆ ಪ್ರಸಾದ ಲಭಿಸುವುದು ಕಷ್ಟವಾಗಬಹುದು ಎಂದು ತಿಳಿದು ಆ ಸ್ಥಳದಲ್ಲಿ ಒಂದು ಅರಮನೆ ಕಟ್ಟಿದಳು. ಕಾಯರ್ ಮಂಜ ಎಂಬ ಸ್ಥಳದಲ್ಲಿ ಹುಲಿ ಮತ್ತು ದನ ಒಟ್ಟಿಗೆ ಇದ್ದುದನ್ನು ಕಂಡರು. ಅವುಗಳು ಇವರನ್ನು ಕಂಡು ದನವು ಮೂಡು ದಿಕ್ಕಿಗೆ ಹೋಗಿ ಮಾಯವಾಯಿತೆಂದೂ ಹುಲಿಯು ಪಡು ದಿಕ್ಕಿಗೆ ಹೋಗಿ ಮಾಯವಾಯಿತೆಂದೂ ಆ ಸ್ಥಳವನ್ನು ಈಗಲೂ ಗುರುತಿಸಬಹುದು ಎಂದೂ ಹೇಳುತ್ತಾರೆ. ಮೂಡಾಯಿ ಬರ್ಕೆಯಲ್ಲಿ ಹಿಂದೆ ತಮ್ಮ ಸಮುದಾಯದವರು ಯಾರಾದರೂ ಸಮಾಜದ ಕಟ್ಟುಕಟ್ಟಳೆಗಳಿಗೆ ವಿರುದ್ಧವಾಗಿ ನಡೆದರೆ ಅವರನ್ನು ಜಾತಿಯಿಂದ ಬಹಿಷ್ಕರಿಸುತ್ತಿದ್ದರಂತೆ. ಕರಿಯ ಗುರಿಕಾರರು ಜೀವಿಸದ್ದ ಕಾಲದಲ್ಲಿ ಒಬ್ಬನನ್ನು ಜಾತಿಯಿಂದ ಬಹಿಷ್ಕರಿದ್ದರಂತೆ.

ಮುಂದೆ ಕೆಲವು ವರ್ಷಗಳ ನಂತರ ಅವನು ತಪ್ಪು ಕಾಣಿಕೆ ಸಲ್ಲಿಸುವ ಮುಖಾಂತರ ತನ್ನ ತಪ್ಪು ಒಪ್ಪಿಕೊಂಡ ಮೇಲೆ ಮತ್ತೆ ಅವನನ್ನು ಜಾತಿಗೆ ಸೇರಿಸಲಾಯಿತಂತೆ. ಇಲ್ಲಿ ಬಿಲ್ಲವ ಸಮುದಾಯದವರನ್ನು ಬಿಲ್ಲವರ ಪ್ರತಿಷ್ಠಿತ ಗುತ್ತು ಬರ್ಕೆಗಳು ನಿಯಂತ್ರಿಸುತ್ತಿದ್ದವು ಎಂಬುವುದು ನಮಗೆ ತಿಳಿಯುಲು ಅವಕಾಶಗಳಿವೆ. ಸಂಪ್ರದಾಯ, ಕಟ್ಟು ಕಟ್ಟಳೆಗಳನ್ನು ಸಮಾಜದವರು ಮೀರದಂತೆ ಗುತ್ತು ಬರ್ಕೆಗಳು ಎಚ್ಚರವಹಿಸುತ್ತಿದ್ದವು. ಇಂತಹವುಗಳಲ್ಲಿ ಮೂಡಾಯಿ ಬರ್ಕೆಯೂ ಒಂದಾಗಿದೆ.

ಸಂಪೂರ್ಣ ಸಹಕಾರ- ದೇಜು ಪೂಜಾರಿ (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) -ಸಂಕೇತ್ ಪೂಜಾರಿ

0 comments: