Tuesday, January 30, 2018

ಬಿಲ್ಲವರ ಗುತ್ತು ಮನೆತನಗಳು ( ಪಿಲ್ಕಾಜೆ ಗುತ್ತು)

ಬಂಟ್ವಾಳ ತಾಲೂಕು ಕೊಯಿಲ ಗ್ರಾಮದ ಎಂಟು ಗುತ್ತು ಮನೆಗಳಲ್ಲಿ ಪಿಲ್ಕಾಜೆ ಗುತ್ತು ಪ್ರಧಾನ ಮನೆಯಾಗಿದೆ. ಸುಮಾರು ೪೦೦ ವರ್ಷಗಳ ಇತಿಹಾಸವಿರುವ ಈ ಗುತ್ತಿನ ಮನೆಗೆ ಹಿಂದೆ ಜೈನ ವಂಶದ ರಾಜಾಶ್ರಯವಿತ್ತು. ರಾಜಾಶ್ರಯದ ವೈಭವದಿಂದ ಮೆರೆದ ಗುತ್ತಿನ ಮನೆ ಇದು. ಕಾಲಕ್ರಮೇಣ ರಾಜಾಶ್ರಯ ತಪ್ಪಿ ಏಳು ಕುಟುಂಬಗಳ ಆಡಳಿತದಲ್ಲಿ ಕೈಬದಲಾಯಿಸುತ್ತಾ ಈಗ ಅಂಚನ್ ಸಹೋದರರ ವಶಕ್ಕೆ ಬಂದು ಅದ್ಭುತವಾಗಿ ಸಂಪೂರ್ಣ ಜೀರ್ಣೋದ್ಧಾರಗೊಂಡಿದೆ.

ಬಂಟ್ವಾಳದಿಂದ ಸುಮಾರು ಏಳು ಕಿ.ಮೀ ದೂರದಲ್ಲಿ ಗೋವಿದೊಂಟ್ಟು ರಸ್ತೆಯಲ್ಲಿ ಮುಂದೆ ಸಾಗಿದರೆ ಸಸ್ಯ ಶಾಮಲೆ ಯಾದ ಪ್ರಕೃತಿಯ ರಮ್ಯ ತಾಣದಲ್ಲಿ ಪಿಲ್ಕಾಜೆ ಗುತ್ತಿನ ಮನೆ ಇದೆ. ಈ ಗುತ್ತಿಗೆ ಬರಲು ಗುಡ್ಡ ಕಡಿದು ರಸ್ತೆ ಮಾಡಿದ್ದಾರೆ. ಹಸಿರು ಹೊದ್ದ ಗುಡ್ಡ ಬೆಟ್ಟಗಳ ಮಧ್ಯದಲ್ಲಿ ವಿಶಾಲ ಅಂಗಳದಲ್ಲಿ ಈ ಗುತ್ತಿನ ಧರ್ಮಚಾವಡಿ ನಿರ್ಮಾಣಗೊಂಡಿದೆ. 2014ರ ಮೇ ತಿಂಗಳಲ್ಲಿ ಈ ಧರ್ಮಚಾವಡಿಯನ್ನು ದೈವಗಳನ್ನು ಸಾನಿಧ್ಯಗಳಿಂದ ಪ್ರತಿಷ್ಠೆ ಮಾಡಲಾಗಿದೆ. ಶ್ರಿಮತಿ ವಸಂತಿ - ಕೊರಗಪ್ಪ ದಂಪತಿಗಳ ಮಕ್ಕಳಲ್ಲಿ ಶೇಖರ ಅಂಚನ್, ಪ್ರಕಾಶ್ ಅಂಚನ್ ಮತ್ತು ಪುರುಷೋತ್ತಮ ಅಂಚನ್ ಇವರು ಬಂಟ್ವಾಳದಲ್ಲಿ ಜವಳಿ ಉದ್ಯಮಿಗಳಾಗಿ ಪ್ರಸಿದ್ಧರು. ಸುಮಾರು 200 ವರ್ಷಗಳ ಹಿಂದೆ ಈ ಗುತ್ತಿನ ಮನೆಯ ಜೈನ ವಂಶದಲ್ಲಿ ಆತಂರಿಕ ಕೌಟುಂಬಿಕ ಕಲಹ ಉಂಟಾಗಿ ದೈವಗಳಿಗೆ ಆರಾಧನೆ ನಿಂತು ಹೋಗಿತ್ತು.

ಇದರಿಂದಾಗಿ ಊರಲ್ಲಿ ಹಲವಾರು ತೊಂದರೆಗಳು, ಆಪತ್ತುಗಳು ಪದೇ ಪದೇ ಕಾಣಿಸಿಕೊಳ್ಳತೊಡಗಿತ್ತಂತೆ. ನಂತರ ಈ ಗುತ್ತು ಮನೆ ಮತ್ತು ಜಮೀನು ಮಾರಾಟವಾಗುವ ಸಂದರ್ಭದಲ್ಲಿ ಅಂಚನ್ ಸಹೋದರಲ್ಲಿ ಒಬ್ಬರಾದ ಶೇಖರ ಅಂಚನ್ ರವರು ಕೃಷಿಯಲ್ಲಿ ಆಸಕ್ತಿಹೊಂದಿದವರಾಗಿದ್ದರಿಂದ ಈ ಭೂಮಿಯನ್ನು ಸಹೋದರರ ಸಹಕಾರದೊಂದಿಗೆ ಖರೀದಿಸಿದ್ದಾರೆ.

ಪ್ರಶ್ನಾಚಿಂತನೆಯಲ್ಲಿ ಇಲ್ಲಿನ ದೈವಗಳಿಗೆ ಪೂಜೆ ಪುರಸ್ಕಾರಗಳು ನಿಂತು ಹೋಗಿದ್ದು ಅಜೀರ್ಣ ಸ್ಥಿತಿಯಲ್ಲಿರುವುದು ಕಂಡು ಬಂತು. ದೈವಗಳ ಮೇಲೆ ಅಪಾರ ನಂಬಿಕೆ ವಿಶ್ವಾಸವನ್ನುನ್ನಿಟ್ಟಿದ್ದ ಶೇಖರ ಅಂಚನ್ ರವರು ದೈವಗಳ ಜೀರ್ಣೋದ್ಧಾರ ಕೆಲಸಕ್ಕೆ ದೃಢ ನಿರ್ಧಾರದಿಂದ ಸಿದ್ಧರಾಗಿ ಸಹೋದರರ ಸಹಕಾರದೊಂದಿಗೆ ಬಹಳ ಸುಂದರವಾದ ಗುತ್ತಿನ ಚಾವಡಿಯನ್ನು ದೈವಗಳ ಗುಡಿಯನ್ನು ಪುನರ್ ನಿರ್ಮಾಣಗೊಳಿಸಿದ್ದಾರೆ. ಇಲ್ಲಿ ದೈಯ್ಯೊಂಕುಲು, ಜುಮಾದಿ, ಮೈಸಂದಾಯ, ಕೊಡಮಂದಾಯ, ಕಲ್ಲುರ್ಟಿ- ಪಂಜುರ್ಲಿ ದೈವಗಳು ಗುತ್ತಿನ ಚಾವಡಿಯಲ್ಲಿವೆ. ಪಿಲಿಚಾಮುಂಡಿ ದೈವದ ಸುಂದರ ಗುಡಿ ಗುತ್ತಿನ ಬಲ ಭಾಗದಲ್ಲಿದೆ. ಇಲ್ಲಿರುವ ಕೆರೆಯಲ್ಲಿ ಏಳ್ವರು ಸಿರಿಗಳು ಮತ್ತು ಬಬ್ಬರ್ಯ ಕಳಕಳಿ ಮಾಡುತ್ತಿದ್ದರೆಂಬ ಐತಿಹ್ಯವಿದೆ.

ಅಂಚನ್ ಸಹೋದರರು ಈ ಗುತ್ತಿನ ಮನೆಯನ್ನು ಖರೀದಿಸಿದಾಗ ಹಲವರು ಅವರ ಮನಸ್ಸನ್ನು ವಿಚಲಿತಗೊಳಿಸಲು ಪ್ರಯತ್ನಿಸಿದರಂತೆ. ಆದರ ಇವರ ದೃಢ ಸಂಕಲ್ಪದ ಮುಂದೆ ಅದು ಯಾವುದೂ ಅಡ್ಡಿಯಾಗದೆ ಅತೀ ಶೀಘ್ರಗತಿಯಲ್ಲಿ ಜೀರ್ಣೋದ್ಧಾರ ಕೆಲಸ ಮುಕ್ತಾಯಗೊಂಡಿತು. 2014 ನೇ ಮೇ ತಿಂಗಳಿನಲ್ಲಿ ಎರಡು ಮತ್ತು ಮೂರನೇ ತಾರೀಕಿನಂದು ದೈವ ಪ್ರತಿಷ್ಠಾಪನೆಯ ಕಾರ್ಯ ನೆರೆವೇರಿಸಿ ದೈವಗಳಿಗೆ ನೇಮೋತ್ಸವವನ್ನು ಮಾಡಿಸಿದರು. ಗುತ್ತಿನ ಮನೆಯ ಪಕ್ಕದಲ್ಲಿಯೇ ವಾಸಕ್ಕೆ ಮನೆಯನ್ನು ಕಟ್ಟಿದ್ದಾರೆ. ಇದರ ಪಕ್ಕದ ಗುಡ್ಡದಲ್ಲಿ ಕಲ್ಲುರ್ಟಿ ಪಂಜುರ್ಲಿ ಗುಡಿ ಇದೆ. ಧರ್ಮಚಾವಡಿಯ ಪಕ್ಕದಲ್ಲಿ ಪ್ರಾಚೀನ ತೀರ್ಥ ಬಾವಿ ಇದೆ. ಅದರ ಪಕ್ಕದಲ್ಲಿ ಪವಿತ್ರವಾದ ಶಮೀ ವೃಕ್ಷವಿದೆ. ಅದರಾಚೆಗೆ ತೆಂಗು, ಅಡಿಕೆಗಳ ತೋಟವಿದೆ. ಐತಿಹಾಸಿಕ ಮಹತ್ವವುಳ್ಳ ಮನೆಯನ್ನು ಖರೀಸಿದಿಸಿದ ಶೇಖರ ಅಂಚನ್ ಅವರು ಮಣ್ಣಿನ ದೈವಗಳಿಗೆ ನಿತ್ಯ ಸೇವೆ ಸಲ್ಲಿಸುವ ಜಾತಕದಲ್ಲಿ ನಿರತರಾಗಿದ್ದಾರೆ. ಪಿಲ್ಕಾಜೆ ಗುತ್ತಿನ ಹೆಸರನ್ನು ಮತ್ತೆ ಜೀವಂತವಿರಿಸಲು ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ನಮ್ಮ ಸಂಶೋಧನೆಯ ಈ ಅಧ್ಯಯನದಲ್ಲಿ ಅನೇಕ ಗುತ್ತುಗಳು ಯಾರದ್ದೋ ಗುತ್ತು ಯಾರಿಗೋ ಕೈಸೇರಿದ ಕತೆಗಳು ಸಾಕಷ್ಟು ಇವೆ. ಅವುಗಳಲ್ಲಿ ಪಿಲ್ಕಾಜೆ ಗುತ್ತು ಒಂದಾಗುತ್ತದೆ. ನಮ್ಮ ಸಂದರ್ಶನದ ಸಂದರ್ಭದಲ್ಲಿ ಸಮಯದಲ್ಲಿ ಶೇಖರ ಅಂಚನ್ ಅವರು ನಮ್ಮೊಂದಿಗಿದ್ದು ಮಾಹಿತಿ ನೀಡಿ ಸಹಕರಿಸಿದರು. ಈ ಗುತ್ತನ್ನು ಇನ್ನಷ್ಟು ಸಮೃದ್ಧಿಗೊಳಿಸಬೇಕೆಂಬ ಮಹದಾಸೆ ಅವರಿಗಿದೆ. ಅದನ್ನು ಗುತ್ತಿನ ದೈವಗಳು ನೆರೆವೇರಿಸುತ್ತವೆ ಎಂಬ ಅವರ ನಂಬಿಕೆ ಬಲವಾದದ್ದು. ಅವರ ವಿಶ್ವಾಸವನ್ನು ದೈವಗಳು ಉಳಿಸಿ ಕಾಪಾಡಲಿ ಎಂಬುದು ನಮ್ಮ ಹಾರೈಕೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ.) - ಸಂಕೇತ್ ಪೂಜಾರಿ

0 comments: