Sunday, February 4, 2018

ಕೋಮು ದ್ವೇಷಕ್ಕೆ ಬಿಲ್ಲವರ ಬಳಕೆ?

ಜನವರಿ 3ರ ಮಧ್ಯಾಹ್ನ ಸುರತ್ಕಲ್ ಕಾಟಿಪಳ್ಳದಲ್ಲಿ ದೀಪಕ್ ರಾವ್ (30) ಎಂಬ ಯುವಕನನ್ನು ಮುಸ್ಲಿಂ ಪಾತಕಿಗಳ ಗುಂಪೊಂದು ಕೊಚ್ಚಿ ಕೊಲೆ ಮಾಡಿತು. ಶವವನ್ನು ಎ.ಜೆ.ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಸುದ್ದಿ ಕಾಳ್ಗಚ್ಚಿನಂತೆ ಕರಾವಳಿಯನ್ನು ಆವರಿಸಿಕೊಂಡಿತು. ಮೃತ ದೇಹ ನೋಡಲು ಬಂದ ಸಂಘ ಪರಿವಾರ ಮತ್ತು ಬಿಜೆಪಿಯ ಕೆಲವು ಮುಖಂಡರು, 'ದೀಪಕ್ ಸಾವು ವ್ಯರ್ಥ ಆಗಲು ಬಿಡುವುದಿಲ್ಲ' ಎಂದು ಶಪಥ ಮಾಡಿ ಹೊರನಡೆದಿದ್ದರು.

ಅದೇ ದಿನ ರಾತ್ರಿ ಸುರತ್ಕಲ್ನ ಗೋವಿಂದದಾಸ್ ಕಾಲೇಜಿನ ಬಳಿ ಮುಬಶ್ಶೀರ್ ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಯಿತು. ಅದಾದ ಕೆಲವೇ ಹೊತ್ತಿನಲ್ಲಿ ಎಂದಿನಂತೆ ತನ್ನ ಫಾಸ್ಟ್ಫುಡ್ ಮಳಿಗೆಯ ಬಾಗಿಲು ಮುಚ್ಚಿಕೊಂಡು ಆಕಾಶಭವನದ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ಅಬ್ದುಲ್ ಬಶೀರ್ ಎಂಬುವವರನ್ನು ಕೊಟ್ಟಾರ ಚೌಕಿ ಬಳಿ ಬೈಕ್ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ತಲವಾರುಗಳಿಂದ ಕೊಚ್ಚಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಶೀರ್ ಅವರನ್ನು ಹಿಂದೂ ಯುವಕರಿಬ್ಬರು ಆಸ್ಪತ್ರೆಗೆ ಕೊಂಡೊಯ್ದಿದ್ದರು. ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಬಶೀರ್ ಜ.7ರಂದು ಮೃತಪಟ್ಟಿದ್ದರು.

ದೀಪಕ್ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಮುಖ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಬಶೀರ್ ಕೊಲೆ ಮತ್ತು ಮುಬಶ್ಶೀರ್ ಮೇಲಿನ ದಾಳಿಯ ಆರೋಪಿಗಳಿಗಾಗಿ ಶೋಧ ಆರಂಭಿಸುತ್ತಾ ಸಾಗಿದ ಪೊಲೀಸರಿಗೆ ದಿಗ್ಭ್ರಮೆ ಕಾದಿತ್ತು. ಒಂದೇ ಜಾತಿಯ ಹೆಚ್ಚಿನ ಯುವಕರು ಧರ್ಮ ರಕ್ಷಣೆ ಮತ್ತು ಪ್ರತೀಕಾರದ ಹೆಸರಿನಲ್ಲಿ ಕತ್ತಿ ಹಿಡಿದು ನೆತ್ತರು ಹರಿಸುತ್ತಿರುವುದು ಅವರನ್ನು ಆತಂಕಕ್ಕೂ ತಳ್ಳಿಬಿಟ್ಟಿತು.

ಬಶೀರ್ ಸಾಯುವ ಮುನ್ನವೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅವರೆಲ್ಲರೂ ಜನಸಂಖ್ಯೆಯ ದೃಷ್ಟಿಯಿಂದ ಜಿಲ್ಲೆಯ ಪ್ರಬಲ ಸಮುದಾಯವಾಗಿರುವ ಬಿಲ್ಲವ ಜಾತಿಯವರಾಗಿದ್ದರು. ತನಿಖೆ ಮುಂದುವರಿದು ಈವರೆಗೆ 11 ಮಂದಿಯ ಬಂಧನವಾಗಿದೆ. ಈ ಪೈಕಿ 10 ಮಂದಿ ಬಿಲ್ಲವರು. ಇನ್ನೊಂದೆಡೆ ಮುಬಶ್ಶೀರ್ ಮೇಲಿನ ದಾಳಿ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದೆ. ಅವರಲ್ಲಿ ಒಬ್ಬಾತ ಬಿಲ್ಲವ!

ದೀಪಕ್ ಕೊಲೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡುವ ಸಂಚು ಮಂಗಳೂರು ಜೈಲಿನಲ್ಲಿ ಮೊಳಕೆಯೊಡೆದಿತ್ತು. ಅಲ್ಲಿದ್ದ ಮಿಥುನ್ ಪೂಜಾರಿ ಕಲ್ಲಡ್ಕ ಎಂಬಾತನನ್ನು ಅದೇ ದಿನ ಭೇಟಿ ಮಾಡಿದ್ದ ಹಂತಕರು, ಸಂಚು ರೂಪಿಸಿದ್ದರು.

ಈ ಎರಡು ಪ್ರಕರಣಗಳಲ್ಲಿ ಮಾತ್ರವಲ್ಲ; ಕರಾವಳಿಯಲ್ಲಿ ಮತೀಯ ದ್ವೇಷದಲ್ಲಿ ನಡೆಯುವ ಬಹುಪಾಲು ಹಿಂಸಾಕೃತ್ಯಗಳಲ್ಲಿ ಬಿಲ್ಲವ ಸಮುದಾಯದ ಯುವಕರ ಪಾತ್ರ ಎದ್ದು ಕಾಣುತ್ತಿದೆ.

'ಮಂಗಳೂರು ನಗರ ಪೊಲೀಸ್ ಕಮಿಷನರೇಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಿಂದುತ್ವ ಸಂಘಟನೆಗಳ ಗುಂಪುಗಳು ಮತೀಯ ದ್ವೇಷದಲ್ಲಿ ನಡೆಸುವ ಕೊಲೆ, ಹಲ್ಲೆ, ದೊಂಬಿ, ಗಲಭೆ ಪ್ರಕರಣಗಳ ಆರೋಪಿಗಳಲ್ಲಿ ಶೇಕಡ 70ಕ್ಕೂ ಹೆಚ್ಚು ಮಂದಿ ಬಿಲ್ಲವರೇ ಇರುತ್ತಾರೆ. 2012ರಲ್ಲಿ ಮಂಗಳೂರಿನ ಪಡೀಲ್ನಲ್ಲಿ ನಡೆದಿದ್ದ ಹೋಂ ಸ್ಟೇ ಮೇಲಿನ ದಾಳಿಯಲ್ಲಿ ಭಾಗಿಯಾದ 44 ಮಂದಿಯಲ್ಲಿ ಬಹುಪಾಲು ಮಂದಿ ಬಿಲ್ಲವರೇ ಆಗಿದ್ದರು ಎಂಬುದು ಇದಕ್ಕೊಂದು ನಿದರ್ಶನ' ಎಂದು ಅವಳಿ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಅಂಕಿ ಅಂಶ ನೀಡುತ್ತಾರೆ.

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 300 ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿ ವ್ಯಾಪ್ತಿಯಲ್ಲಿ 413 ಮತೀಯ ಗೂಂಡಾಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಹೆಚ್ಚಿನವರು ಬಿಲ್ಲವರೇ ಆಗಿದ್ದಾರೆ ಎಂದೂ ಪೊಲೀಸರು ಹೇಳುತ್ತಾರೆ.

ಹಿಂದುತ್ವ ಸಂಘಟನೆಗಳ ಮುಂಚೂಣಿಯಲ್ಲಿ ನಿಂತು, ಕಾಲಾಳುಗಳಾಗಿ ಕಾದಾಡಿ ಕೊಲೆಯಾದವರಲ್ಲೂ ಬಿಲ್ಲವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಾರೆ. ಕ್ಯಾಂಡಲ್ ಸಂತು, ಪೊಳಲಿ ಅನಂತು, ಉದಯ ಪೂಜಾರಿ, ಕಲ್ಲಡ್ಕ ರಾಜೇಶ್ ಪೂಜಾರಿ, ಅರ್ಕುಳ ಜಗದೀಶ್ ಪೂಜಾರಿ, ಮೂಡುಬಿದಿರೆ ಪ್ರಶಾಂತ್ ಪೂಜಾರಿ... ಹೀಗೆಯೇ ಸಾಗುತ್ತದೆ ಉದ್ದದ ಪಟ್ಟಿ.

'1992ರ ಕೋಮು ಗಲಭೆಗಳ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮೊಗವೀರ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಕೆಲವು ವರ್ಷಗಳ ಬಳಿಕ ಪರಿಸ್ಥಿತಿ ಬದಲಾಯಿತು. ಈಗ ಮತೀಯ ದ್ವೇಷದ ಹಿಂಸಾಕೃತ್ಯಗಳಲ್ಲಿ ಭಾಗಿಯಾಗುವ ಮೊಗವೀರ ಯುವಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಬಿಲ್ಲವರ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದೆ. ಅವರೊಂದಿಗೆ ಒಂದಷ್ಟು ಪ್ರಮಾಣದಲ್ಲಿ ಕುಂಬಾರ, ಕೊಟ್ಟಾರಿ ಮತ್ತಿತರ ಹಿಂದುಳಿದ ಜಾತಿಗೆ ಸೇರಿದ ಯುವಕರು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ' ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

ಕೋಮುಹಿಂಸೆಯಲ್ಲಿ ಬಿಲ್ಲವರು ಬಲಿಪಶುಗಳಾಗಲು ಅವರು ಬಹುಸಂಖ್ಯಾತರಾಗಿರುವುದಷ್ಟೇ ಕಾರಣವೇ ಅಥವಾ ಆರ್ಥಿಕ, ಸಾಮಾಜಿಕ, ರಾಜಕೀಯ ಕಾರಣಗಳು ಇದರ ಹಿಂದೆ ಇದೆಯೇ ಎಂಬ ಪ್ರಶ್ನೆಯೂ ಇದೆ.

ಹೀಗೆ ಮತೀಯ ದ್ವೇಷದ ಹಿಂಸಾಕೃತ್ಯಗಳಲ್ಲೂ ಈ ಪರಿಯ ಜಾತಿ ಧ್ರುವೀಕರಣ ಆಗಲು ಏನು ಕಾರಣ? ಅದು ಹೇಗೆ ಆಗುತ್ತಿದೆ? ಎಂಬ ಪ್ರಶ್ನೆಗಳು ಪೊಲೀಸರು, ಜಿಲ್ಲಾಡಳಿತ, ಸಮಾಜವನ್ನು ಕಾಡತೊಡಗಿವೆ. ಇದಕ್ಕೆ ಕಾರಣವನ್ನು ಪತ್ತೆ ಹಚ್ಚಲು ಹೊರಟರೆ ಬಿಲ್ಲವ ಜಾತಿಯ ಹೆಚ್ಚಿನ ಯುವಕರು ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆಯಂತಹ ಹಿಂದುತ್ವ ಸಂಘಟನೆಗಳಲ್ಲಿ ಸಕ್ರಿಯವಾಗಿರುವುದು ಎದ್ದು ಕಾಣುತ್ತಿದೆ. ಈ ಸಂಘಟನೆಗಳ ಬಲವೇ ಅವರನ್ನು ಮುಸ್ಲಿಮರ ವಿರುದ್ಧ ಕತ್ತಿ ಹಿರಿಯುವಂತೆ, ಪ್ರತೀಕಾರದ ಹೆಸರಿನಲ್ಲಿ ನೆತ್ತರು ಹರಿಸುವಂತೆ ಪ್ರಚೋದಿಸುತ್ತಿದೆ ಎಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಕೋಮು ವಿಷ ಬಿತ್ತುವಲ್ಲಿ ಮೇಲ್ಜಾತಿಯವರಿದ್ದರೆ ಅದನ್ನು ಅನುಷ್ಠಾನ ಮಾಡುವವರು ಬಿಲ್ಲವರೇ ಆಗಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಇತಿಹಾಸವೊಂದು ತೆರೆದುಕೊಳ್ಳುತ್ತದೆ.

ಶಿಕ್ಷಣದ ಕೊರತೆ, ನಿರುದ್ಯೋಗ: ಬಿಲ್ಲವ ಯುವಕರಲ್ಲಿ ಹೆಚ್ಚುತ್ತಿರುವ ಅಪರಾಧಿ ಪ್ರವೃತ್ತಿ ಕುರಿತು ಅಧ್ಯಯನ ನಡೆಸುತ್ತಿರುವ ಲೇಖಕಿ ಬಿ.ಎಂ.ರೋಹಿಣಿ, 'ಮಂಗಳೂರಿನ ಜೈಲಿನಲ್ಲಿರುವ ಕೈದಿಗಳಲ್ಲಿ ಶೇಕಡ 60ರಷ್ಟು ಮಂದಿ ಬಿಲ್ಲವರು ಮತ್ತು ಮುಸ್ಲಿಮರೇ ಇದ್ದಾರೆ. ಇವರಲ್ಲಿ ಬಹುಪಾಲು ಮಂದಿ ಮತೀಯ ದ್ವೇಷದ ಹಿಂಸಾ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೊತ್ತು ಸೆರೆಮನೆಗೆ ಬಂದವರು' ಎಂದು ಅವರು ಹೇಳುತ್ತಾರೆ.

'ನಾನು ಜೈಲಿನ ಕಡತಗಳನ್ನು ಅಧ್ಯಯನ ಮಾಡಿದ್ದೇನೆ. 1992ರಿಂದ ಈಚೆಗೆ ಬಿಲ್ಲವ ಯುವಕರು ಈ ಬಗೆಯ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಹೆಚ್ಚುತ್ತಿದೆ. ಆರೋಪ ಹೊತ್ತು ಜೈಲು ಸೇರಿರುವವರಲ್ಲಿ ಹೆಚ್ಚಿನ ಮಂದಿ ಪ್ರೌಢ ಶಿಕ್ಷಣವನ್ನೂ ಪೂರೈಸಿಲ್ಲ. ಕೆಲವರಷ್ಟೇ ಪಿಯುಸಿ ಓದಿದವರು. ತಕ್ಷಣದ ಐಷಾರಾಮಿ ಕನಸು ಕಾಣುತ್ತಾ ಅಪರಾಧಕ್ಕೆ ಇಳಿದವರು, ಮುಂದೆ ವಿವಿಧ ಸಂಘಟನೆಗಳ ದಾಳವಾಗಿ ಬಳಕೆಯಾಗಿದ್ದಾರೆ ಎಂಬ ಸತ್ಯ ಅಲ್ಲಿ ಎದ್ದು ಕಾಣುತ್ತದೆ' ಎಂದು ಅವರು 'ಪ್ರಜಾವಾಣಿ'ಗೆ ವಿವರಿಸಿದರು.

ಸಂಸ್ಕೃತಿಯ ಹೆಸರಿನಲ್ಲಿ ಹಳೆಯ ಸಂಗತಿಗಳೆಲ್ಲವನ್ನೂ ಪುನಃ ಆವಾಹನೆ ಮಾಡಿಕೊಳ್ಳುವ ಮನೋಭಾವ ಬಿಲ್ಲವರಲ್ಲಿ ದಟ್ಟವಾಗಿದೆ. ಈ ಕಾರಣಕ್ಕಾಗಿಯೇ ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ಏನನ್ನು ಹೇಳಿದರೂ ಅವರು ನಂಬುತ್ತಾರೆ. ಅದರ ರಕ್ಷಣೆಗೆ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಬಹುಬೇಗ ಉದ್ವಿಗ್ನಗೊಳ್ಳುವ ಮನಸ್ಥಿತಿಯೂ ಅವರಲ್ಲಿದೆ. ಈ ಕಾರಣಕ್ಕಾಗಿ ಮತೀಯ ಸಂಘಟನೆಗಳು ಅವರನ್ನೇ ಆಯ್ದು ಬಳಕೆ ಮಾಡುತ್ತಿರುವುದನ್ನು ಕಾಣಬಹುದು ಎಂದರು.

ಮತೀಯ ದ್ವೇಷದ ಹಿಂಸೆಯಲ್ಲಿ ಬಿಲ್ಲವರ ಪಾತ್ರ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುವ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ ಚಂದ್ರ ಸುವರ್ಣ, 'ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರೇ ಬಹುಸಂಖ್ಯಾತರು. ಸಣ್ಣ ಹಿಡುವಳಿಯ ಕೃಷಿಕರಾಗಿರುವುದಲ್ಲದೇ ಉಪವೃತ್ತಿಯಾಗಿ ಬೇರೆ ಕೆಲಸವನ್ನೂ ಮಾಡುತ್ತಾರೆ. ಅಧಿಕಾರದಲ್ಲಿದ್ದ ವಿವಿಧ ಪಕ್ಷದ ಜನರು ನಮ್ಮ ಸಮಾಜವನ್ನು ಉಪಯೋಗಿಸಿಕೊಂಡರೇ ವಿನಃ ಅಧಿಕಾರದಲ್ಲಿ ಹೆಚ್ಚಿನ ಸ್ಥಾನ ನೀಡಿಲ್ಲ. ಈ ಕಾರಣಕ್ಕೆ ಕೆಲವು ವ್ಯಕ್ತಿಗಳು, ಸಂಘಟನೆಗಳು ವಿವಿಧ ರೀತಿಯ ಆಮಿಷ ಒಡ್ಡಿ ದಾರಿ ತಪ್ಪಿಸುವ ಕೆಲಸ ಮಾಡಿದರು. ಹಿಂಸೆಯಲ್ಲಿ ಭಾಗಿಯಾಗುವಂತೆ ಅವರನ್ನು ಪ್ರೇರೇಪಿಸಲಾಗಿದೆ. ಕೊಲೆಗೀಡಾಗುವವರ ಸಂಖ್ಯೆಯಲ್ಲೂ ನಮ್ಮವರೇ ಜಾಸ್ತಿಯಿದ್ದಾರೆ' ಎಂದು ಹೇಳುತ್ತಾರೆ.

'ಬಳಕೆ' ಅಲ್ಲಗಳೆವ ಪರಿವಾರ: ಕರಾವಳಿಯಲ್ಲಿ ಸಂಘಪರಿವಾರದ ಪ್ರಮುಖ ಸೂತ್ರಧಾರಿ ಎಂದೇ ಗುರುತಿಸಿಕೊಳ್ಳುವ ಕಲ್ಲಡ್ಕ ಪ್ರಭಾಕರ್ ಭಟ್ ಭಿನ್ನವಾಗಿಯೇ ಇದನ್ನು ಪ್ರತಿಪಾದಿಸುತ್ತಾರೆ. 'ಮಹಾರಾಷ್ಟ್ರದಿಂದ ಆರ್‌ಎಸ್‌ಎಸ್ , ವಿಶ್ವಹಿಂದೂ ಪರಿಷತ್ತು ಇಲ್ಲಿಗೆ ಬಂದಾಗ ಹಿಂದುಳಿದ ವರ್ಗದವರು ಅದರ ಜತೆಗೆ ಗುರುತಿಸಿಕೊಂಡಿರಲಿಲ್ಲ. ಹವ್ಯಕರು, ಗೌಡ ಸಾರಸ್ವತ ಬ್ರಾಹ್ಮಣರು, ಗೌಡರು, ಬಂಟರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಲವ್ ಜಿಹಾದ್, ಗೋಸಾಗಣೆ ಹೆಚ್ಚಾಗತೊಡಗಿದಾಗ ಇಲ್ಲಿನ ಬಹುಸಂಖ್ಯಾತರಾದ ಬಿಲ್ಲವರು ಮುಂಚೂಣಿಗೆ ಬಂದರು. ಇಡೀ ಸಮಾಜದ ವಿಚಾರ ಅವರನ್ನು ಆವರಿಸಿತು. ಕೋಮು ಹಿಂಸೆಯಲ್ಲಿ ಈ ಸಮುದಾಯದವರೇ ಹೆಚ್ಚಾಗಿ ಕೊಲೆಯಾಗ ತೊಡಗಿದಾಗ ಅವರು ನಮ್ಮ ಜತೆ ನಿಂತರು' ಎನ್ನುತ್ತಾರೆ.

'ಬಿಲ್ಲವರನ್ನು ಕಾಲಾಳುಗಳನ್ನಾಗಿ ಮಾತ್ರ ಬಳಸುತ್ತೇವೆ ಎಂಬುದು ಒಪ್ಪತಕ್ಕ ವಿಷಯವೇ ಅಲ್ಲ. ನಾವೂ ಕೂಡ ರುಕ್ಮಯ್ಯ ಪೂಜಾರಿ, ಸುನೀಲ್ ಕುಮಾರ್, ಪದ್ಮನಾಭ ಕೊಟ್ಟಾರಿ ಅಂತಹ ನಾಯಕರನ್ನು ಬೆಳೆಸಿ ಶಾಸಕರನ್ನಾಗಿ ಮಾಡಿದೆವು. ನಾವು ಯಾರನ್ನೂ 'ಬ್ರೈನ್ ವಾಶ್' ಮಾಡಿಲ್ಲ. ಹಿಂದೂ ಹುಡುಗಿಯರನ್ನು ಮುಸ್ಲಿಮರು ಓಡಿಸಿಕೊಂಡು ಹೋದಾಗ ಅವರ 'ಬ್ರೈನ್' ತಿರುಗಿತು. ತಿರುಗಿ ಕೊಟ್ಟರೆ (ಏಟು) ಮಾತ್ರ ಅವರು(ಮುಸ್ಲಿಂ) ತಹಬಂದಿಗೆ ಬರುತ್ತಾರೆ ಎಂಬ ಕಾರಣಕ್ಕೆ ಅವರು ನಿಂತರು. ಹಾಗಂತ ನನ್ನ ಮೇಲೂ ಹಲವಾರು ಕೇಸಿದೆ, ನಾನೂ ನನ್ನ ಹೆಂಡತಿ ಕೂಡ ಜೈಲಿಗೆ ಹೋಗಿ ಬಂದಿದ್ದೇವಲ್ಲ' ಎಂಬ ವಾದ ಮುಂದಿಡುತ್ತಾರೆ.

ಸದ್ಯ ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ, ಸ್ವತಃ ಬಿಲ್ಲವರಾದ ಸತ್ಯಜಿತ್ ಸುರತ್ಕಲ್, 1998ರ ಸುರತ್ಕಲ್ ಗಲಭೆಯಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿದ್ದವರು. ಅವರನ್ನು ಈ ಬಗ್ಗೆ ಕೇಳಿದರೆ, 'ಶಿವಾಜಿ ಮಹಾರಾಜರ ಜತೆ ಹಿಂದವಿ ಸಮಾಜ ನಿಂತಿತ್ತು. ದೇಶ ಕಟ್ಟುವ, ಅನ್ಯಾಯದ ವಿರುದ್ಧ ಸೆಣಸುವ ಮನಸ್ಸು ನಮ್ಮ ಸಮುದಾಯದ ಯುವಕರಲ್ಲಿ ಬಂದು ಬಿಟ್ಟಿದೆ. ಒಮ್ಮೆ ಹೀಗೆ ಮನಸ್ಸು ಬಂದ ಮೇಲೆ ಹಿಂದುತ್ವದ ಜತೆ ಬಿಲ್ಲವರು ಬಲವಾಗಿ ನಿಂತಿದ್ದಾರೆ. 1998ರ ಬಳಿಕ ಇದು ಇನ್ನಷ್ಟು ಪ್ರಬಲವಾಗಿದೆ' ಎಂದರು.

ಕರಾವಳಿಯ ವಿಷಮ ಸ್ಥಿತಿ ಬಗ್ಗೆ ಅಧ್ಯಯನ ನಡೆಸಿರುವ ಸಾಮಾಜಿಕ ಚಿಂತಕ ಪ್ರೊ.ಕೆ. ಫಣಿರಾಜ್ ಪ್ರಕಾರ, 'ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಪ್ರಮುಖರು ಮನೆಮನೆಗೆ ಪ್ರಚಾರ ಮಾಡಿದರು. ಬ್ರಾಹ್ಮಣೇತರರನ್ನು ಸೇರಿಸಿಕೊಳ್ಳಬೇಕು ಎಂಬ ತತ್ವ ಇದರ ಹಿಂದೆ ಕೆಲಸ ಮಾಡಿದೆ. 1998ರ ಸುರತ್ಕಲ್ ಗಲಭೆ ಹೊತ್ತಿಗೆ ಇದು ಫಲ ಕೊಟ್ಟಿತು. 'ಮಿಲಿಟೆಂಟ್ ಫೋರ್ಸ್' ಆಗಿರುವ ಬಿಲ್ಲವರು ಸೇರಿದಂತೆ ಶೂದ್ರರು, ಹಿಂಜಾವೇ, ಬಜರಂಗದಳದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಬ್ರಾಹ್ಮಣರಿಗಿಂತ ಹೆಚ್ಚಾಗಿ ಶೂದ್ರರನ್ನು ನಂಬಿಸಲಾಗಿದೆ. ಈ ಕಾರಣಕ್ಕಾಗಿಯೇ ಬಿಲ್ಲವರು, ಕೊಟ್ಟಾರಿ, ಕೆಲವು ಕಡೆ ಮೊಗವೀರರು ಹೆಚ್ಚಿನ ಸಂಖ್ಯೆಯಲ್ಲಿ ಮತೀಯ ದ್ವೇಷದ ಕೃತ್ಯಗಳಲ್ಲಿ ಸಕ್ರಿಯರಾಗಿದ್ದಾರೆ' ಎಂದು ಹೇಳುತ್ತಾರೆ.

ಹಿಂದುತ್ವ ಸಂಘಟನೆಗಳ ಹೆಸರಿನಲ್ಲಿ ಅಪರಾಧ ಎಸಗುತ್ತಿರುವವರ ಪೈಕಿ ಮಿಥುನ್ ಕಲ್ಲಡ್ಕ ಈಗ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು. ಕಲ್ಲಡ್ಕದಲ್ಲಿ ನಡೆದ ಗಲಭೆಯಲ್ಲಿ ಬಂಧಿತನಾಗಿದ್ದ ಈತ ಮಂಗಳೂರು ಜೈಲಿನಲ್ಲೇ ಕುಳಿತು ಬಶೀರ್ ಕೊಲೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದಾನೆ. ಈ ಬಗ್ಗೆ ಆತನ ತಾಯಿ ಲಲಿತಾ ಪೂಜಾರಿ ಅವರನ್ನು ಕೇಳಿದರೆ, 'ನನ್ನ ಮಗ ಯಾವತ್ತೂ ಅಪರಾಧ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ನನಗೆ ಗೊತ್ತೇ ಇಲ್ಲ. ಮನೆಯಲ್ಲಿ ಹಾಲು ಕರೆಯುವುದು, ಕೋಳಿ ಸಾಕಣೆ ಮಾಡುತ್ತಿದ್ದ. ಬಜರಂಗದಳದಲ್ಲಿ ಇದ್ದುದು ನಿಜ. ಅಲ್ಲಿ ಒಳ್ಳೆಯ ಕೆಲಸ ಮಾತ್ರ ಮಾಡುತ್ತಿದ್ದ. ಆತನ ವಿರುದ್ಧ ಮಸಲತ್ತು ನಡೆಯುತ್ತಿದೆ' ಎಂದರು. -prajavaani

0 comments: