Thursday, February 1, 2018

ಬಿಲ್ಲವರ ಗುತ್ತು ಮನೆತನಗಳು ( ಎಳ್ಕಾಜೆ ಗುತ್ತು)

ಬಿಲ್ಲವರ ಪುರಾತನ ಪ್ರಮುಖ ಗುತ್ತು ಗಳಲ್ಲಿ ಎಳ್ಕಾಜೆ ಗುತ್ತೂ ಒಂದು. ನಾಲ್ಕೂರು ಗುತ್ತಿಗೂ ಎಳ್ಕಾಜೆ ಗುತ್ತಿಗೂ ನಿಕಟ ಸಂಬಂಧವಿದೆ. ನಾಲ್ಕೂರು ಗುತ್ತಿನ ಮೂಲ ಪುರುಷ ಬೊಲ್ಲ ಬೈದ್ಯರ ತಮ್ಮ ದೇರೆ ಬೈದ್ಯರ ಮನೆಯೇ ಈ ಎಳ್ಕಾಜೆ ಗುತ್ತು. ಸಹೋದರರಾದ ಬೊಲ್ಲ ಬೈದ್ಯ ಮತ್ತು ದೇರ ಬೈದ್ಯರು ಸೇರಿ ಬಂಗರಸರೊಂದಿಗೆ ನಡೆದ ಯುದ್ಧದಲ್ಲಿ ಜಯಗಳಿಸಿದ ಶೂರರು. ಅದಕ್ಕೆ ಅಮರ ಮಾಗಣೆಯ ಬಳುವಳಿಯಾಗಿ ನೂರಾರು ಎಕ್ರೆ ಭೂಮಿ ಜಮೀನುಗಳು ಉಂಬಳಿ ಬಂದಿದ್ದವು. ಈ ಎರಡು ಗುತ್ತುಗಳ ಚಾರಿತ್ರಿಕ ಮಹಾಪುರುಷರಾಗಿ ಈ ಇಬ್ಬರು ಸುತ್ತಮುತ್ತಲ ಊರಿನಲ್ಲಿ ಪ್ರಸಿದ್ದರಾಗಿದ್ದರು.

ಎಳ್ಕಾಜೆ ಗುತ್ತಿನ ಯೋಧ ಸೈನಿಕರು ವೇಣೂರಿನ ಅರಸರ ಸೇನಾಧಿಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆಂದು ಮನೆತನದ ಚರಿತ್ರೆ ಹೇಳುತ್ತದೆ. ಒಂದು ಕಾಲದಲ್ಲಿ ಎಳ್ಕಾಜೆ ಗುತ್ತು ಮತ್ತು ನಾಲ್ಕೂರು ಗುತ್ತುಗಳು ಬಿಲ್ಲವ ಸಮಾಜದ ಪ್ರತಿಷ್ಠೆ, ಗೌರವಗಳ ಸಂಕೇತವಾಗಿ ವೈಭವದಿಂದ ಮೆರೆದವುಗಳು.ನೂರಾರು ಎಕ್ರೆ ಕೃಷಿ ಭೂಮಿ, ಕಾಡುಮೇಡು ಮೊದಲಾದ ಒತ್ತುವರಿ ಭೂಮಿಯನ್ನು ಗಿಡಗಳನ್ನು ಹೊಂದಿದ ಮನೆತನಗಳು ಊರಿನ ರಾಜಕೀಯ, ಸಾಮಾಜಿಕ, ನ್ಯಾಯದಾನ ಮುಂತಾದ ಆಡಳಿತ ವಿಭಾಗದ ಕೇಂದ್ರವಾಗಿತ್ತು. ಗ್ರಾಮವಾಸಿಗಳು ನಾನಾ ಕೆಲಸ, ಅಗತ್ಯಗಳಿಗಾಗಿ ಈ ಗುತ್ತಿನಲ್ಲಿ ಮೆರೆಯುತ್ತಿದ್ದರು. ಸೈನ್ಯಕ್ಕೆ ಬೇಕಾದ ಯೋಧರ ತರಬೇತಿಯನ್ನು ಕೂಡ ಈ ಮನೆತನದ ಅಧೀನದಲ್ಲಿ ನಡೆಯುತ್ತಿದ್ದವು. ನಾಲ್ಕೂರು ಗುತ್ತಿನಂತೆ ಎಳ್ಕಾಜೆ ಗುತ್ತು ಕೂಡ ಸೈನಿಕರಿಗಾಗಿ ಹೋರಾಡಬಲ್ಲ ಯೋಧರನ್ನು ಹೊಂದಿತ್ತು. ನಾಲ್ಕೂರು ಗುತ್ತು ಮನೆಗಿಂತ ಎಳ್ಕಾಜೆ ಗುತ್ತಿನ ಕಟ್ಟಡ ಉತ್ತಮ ಸ್ಥಿತಿಯಲ್ಲಿದೆ.

ಮರದ ಭವ್ಯ ಕೆತ್ತನೆಯ ಭೀಮ ಗಾತ್ರದ ಕಂಬಗಳು, ಛಾವಣಿ ತೊಲೆ, ಹಲಗೆಗಳಿಂದಲೂ, ವಿಶಾಲ ಚಾವಡಿಯು ಈ ಗುತ್ತಿಗೆ ಆಡಳಿತಾತ್ಮಕ ಗಾಂಭೀರ್ಯ ಒದಗಿಸಿವೆ. ನೂರಾರು ಜನರು ಒಮ್ಮೆಲೇ ಸೇರಬಹುದಾದ ಅಂಗಳ, ಉತ್ತರಾಭಿಮುಖವಾಗಿರುವ ಮನೆಯ ಎತ್ತರದ ಹೆಬ್ಬಾಗಿಲಿನಿಂದ ಒಂಬತ್ತು ಮೆಟ್ಟಿಲು ಕೆಳಗಿಳಿದರೆ ವಿಶಾಲ ಬಾಕ್ಯಾರಿನಿಂದ ಕೂಡಿದ ಬೈಲು, ಬಯಲಿನಲ್ಲಿ ನಿಂತು ನೋಡಿದರೆ ಹೆಬ್ಬಾಗಿಲಿನ ಎರಡೂ ಬದಿಗಳಿಗೆ ಉದ್ದಕ್ಕೆ ಚಾಚಿಕೊಂಡಿರುವ ಈ ಸುತ್ತುಮುದಲಿನ ಗುತ್ತು ಪುರಾತನ ಕೋಟೆಯಂತೆ ತೋರುತ್ತದೆ.

ಎತ್ತರವಾದ ಹೆಬ್ಬಾಗಿಲು ಹಂಪೆಯ ವಿರೂಪಾಕ್ಷ ಮಂದಿರದ ಹೆಬ್ಬಾಗಿಲಿನ ಚಿಕ್ಕ ಪ್ರತಿಮೆಯಂತೆ ತೋರುತ್ತದೆ. ಭದ್ರವಾಗಿ ಕೋಟೆಯಂತೆ ಕಟ್ಟಲ್ಪಟ್ಟ ಭವ್ಯವಾದ ಉಪ್ಪರಿಗೆಯನ್ನು ಹೊಂದಿದ ಈ ಗುತ್ತು ಮನೆ ನೂರಾರು ವರ್ಷಗಳ ನಂತರವೂ, ಅಲ್ಪ ಸ್ವಲ್ಪ ಶಿಥಿಲಗೊಂಡಿದ್ದರೂ ವ್ಯವಸ್ಥಿತವಾಗಿ ಉಳಿದುಕೊಂಡಿದೆ. ತಿರುಪತಿ ಹುಂಡಿ ಇರಿಸಿದ್ದ ದೊಡ್ಡ ಕಲೆಂಬಿ ಭದ್ರವಾಗಿದೆ. ಈ ಮನೆತನದ ಆಸ್ತಿಪಾಸ್ತಿಗಳ ಪಾಲಾಗಿ ವಾರಸುದಾರರಾಗಿ ಒಂದು ಕವಲಿನವರು ಈಗ ಇಲ್ಲಿ ವಾಸ್ತವ್ಯವಿದ್ದಾರೆ. ತಲೆಗೆ ಮುಂಡಾಸು, ಕೈಯಲ್ಲಿ ಕೋಲು ಹಿಡಿದ ಮನೆತನದ ಮೂಲ ಪುರುಷ ಬೊಲ್ಲ ಬೈದ್ಯರ ಕಂಚಿನ ಮೂರ್ತಿ ಹಿರಿಯವನೆಂಬ ಗೌರವ ಭಯ ಭಕ್ತಿಯೊಂದಿಗೆ ನಂಬಿದ ದೈವಗಳೊಂದಿಗೆ ಪೂಜೆಗೆ ಒಳಗಾಗಿದೆ. ಎರಡೂ ಗುತ್ತುಗಳಲ್ಲಿ ಬೊಲ್ಲ ಬೈದ್ಯನ ಮೂರ್ತಿ ದೈವದ ಕೋಣೆಯ ಮಂಚದ ಮೇಲೆ ಪ್ರತಿಷ್ಠಾಪನೆಗೊಂಡಿದೆ.

ದೀಪಾವಳಿಯ ಸಂದರ್ಭಗಳಲ್ಲಿ ಮತ್ತು ವಾರ್ಷಿಕ ನೆಮ್ಮದಿ ಸಂದರ್ಭದಲ್ಲಿ ಬೊಲ್ಲ ಬೈದ್ಯನಿಗೆ ಮೊದಲು ಪೂಜೆ ಸಲ್ಲಿಸಿ ಮುಂದಿನ ಕಾರ್ಯಕ್ರಮ ನಡೆಸುವುದು ಸಂಪ್ರದಾಯದ.ಹೆಬ್ಬಾಗಿಲು ಸ್ವಲ್ಪ ಶಿಥಿಲಗೊಂಡಿದ್ದರೂ ಚಾವಡಿಯ ಬೋದಿಗೆಯ ಕಂಬಗಳು ಮೇಲ್ಭಾಗದ ಮುಚ್ಚಿಗೆ, ದೈವದ ಭಂಡಾರದ ಕೋಣೆ ಇವೆಲ್ಲವೂ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿದೆ. ಚಾವಡಿಯಲ್ಲಿ ನ್ಯಾಯ ತೀರ್ಮಾನ ಮತ್ತು ಪ್ರಮಾಣ ವಚನ ಮಾಡುತ್ತಿದ್ದ ಮರದ ಹಲಗೆ ಗತಕಾಲವನ್ನು ಮೆಲುಕು ಹಾಕುತ್ತಾ ಮಲಗಿರುವಂತಿದೆ. ಚಾವಡಿಗಳನ್ನು ಪೂರ್ವದಲ್ಲಿ ವಿಶಾಲವಾದ ಅಡುಗೆ ಮನೆಗೆ ತಾಗಿ ಹೆರಿಗೆ ಕೋಣೆ, ಚಾವಡಿಯ ಪಶ್ಚಿಮದಲ್ಲಿ ಉಪ್ಪರಿಗೆಗೆ ಹೋಗಲು ಮಣ್ಣಿನ ಮೆಟ್ಟಿಲುಗಳಿವೆ,

ಮಾಳಿಗೆಯಲ್ಲಿ ಅಕ್ಕಿ, ಭತ್ತ ಸಂಗ್ರಹಿಸಲು ವಿಶಾಲ ಕೋಣೆಗಳಿವೆ. ಅಡಿಗೆ ಮನೆಯ ಮೇಲ್ಭಾಗದಲ್ಲಿ ವಿಶಾಲ ಕುತ್ತಟ್ಟದಲ್ಲಿ ಅಕ್ಕಿ ಸಂಗ್ರಹದ ಕೋಣೆ ಮನೆತನದ ಹಿಂದಿನ ಸಿರಿತನಕ್ಕೆ ಸಾಕ್ಷಿಯಾಗಿದೆ. ಮಾಳಿಗೆಯ ಮೇಲಿನ ಕೋಣೆಗಳ ಹಲಗೆಯ ಮುಚ್ಚಿಗೆಗಳು ಸುಸ್ಥಿತಿಯಲ್ಲಿವೆ. ಮನೆಯ ಪೂರ್ವದಲ್ಲಿ ದನಕರುಗಳ ಕೊಟ್ಟಿಗೆಗಳಿವೆ. ಇದರ ಎಡಭಾಗದಲ್ಲಿ ಇದರ ಎಡಭಾಗದಲ್ಲಿ ಒಂದು ದೊಡ್ಡ ಕೊಟ್ಯವಿದ್ದು ಹಳೆಯ ಕಾಲದ ಸಾಮಾನುಗಳ ಸಂಗ್ರಹವಿದೆ. ಹಿಂದಿನ ಕಾಲದಲ್ಲಿ ಗುತ್ತಿನ ಕೃಷಿ ಕೆಲಸಕ್ಕೆ ,ಪಶುಪಾಲನೆಗೆ ಕೆಲಸಗಾರರಾಗಿ ಆರು ಒಕ್ಕಲು ಮನೆಗಳಿದ್ದವು. ಒಕ್ಕಲು ಮಸೂದೆ ಜಾರಿಗೆ ಬಂದ ಮೇಲೆ ಗುತ್ತಿನ ಜಮೀನುಗಳು ಕ್ಷಯಗೊಂಡವು. ಉಳಿದ ಭೂಮಿ ಕುಟುಂಬದಲ್ಲಿ ಪಾಲುಗೊಂಡವು. ಗುತ್ತಿನ ಎದುರುಗಡೆ ವಿಶಾಲವಾದ ಬಯಲು, ತೋಟ ಅಂತೆಯೇ ಮನೆಯ ದಕ್ಷಿಣ ಭಾಗದಲ್ಲಿ ಸುಂದರ ವನಸಿರಿ ಹಿಂದಿನ ತಲೆಮಾರಿನನವರ ಪ್ರಕೃತಿ ಉಪಾಸನೆಗೆ ನಿದರ್ಶನವಾಗಿದೆ.

ಹಿಂದಿನ ಕಾಲದಲ್ಲಿ ಇಲ್ಲಿ ವೈಭವದ ಕಂಬಳ ನಡೆಯುತ್ತಿತ್ತು. ಕಾರ್ಕಳದ ಅರಸರ ಬಾಕ್ಯಾರಿನಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ಈ ಗುತ್ತಿನ ಮನೆಯ ಕೋಣಗಳು ಮೊದಲು ಇಳಿಯುವುದು ಈ ಮನೆತನಕ್ಕೆ ಸಲ್ಲುವ ಗೌರವವಾಗಿತ್ತು. ಈಗ ಅವೆಲ್ಲ ನೆನಪು ಮಾತ್ರ.ಈ ಗುತ್ತಿನ ನಾಗಬ್ರಹ್ಮ ಮತ್ತು ಅಣ್ಣಪ್ಪ ಪಂಜುರ್ಲಿಯ ಗುಡಿ ಸಮೀಪವೇ ಇದೆ.

ಚಾವಡಿಯಲ್ಲಿ ಲೆಕ್ಕೇಸಿರಿ, ಕಲ್ಲುರ್ಟಿ, ಮೈಸಂದಾಯ ಹಾಗೂ ಗುಳಿಗ ಮುಂತಾದ ದೈವಗಳಿವೆ. ಈ ಮನೆಯಲ್ಲಿನ ಹಬ್ಬ ಹರಿದಿನಗಳಲ್ಲಿ ನಾಲ್ಕೂರು ಗುತ್ತಿನವರಿಂದಲೇ ತೀರಬೇಕೆಂದು ನಿಯಮವಿತ್ತು. ಈಗ ಕುಟುಂಬ ಹಂಚಿಹೋಗಿರುವುದರಿಂದ ನಿಯಮ ಸಡಿಲವಾಗಿವೆ. ಸುತ್ತ ಹಸಿರು ಹೊದ್ದ ಈ ಗುತ್ತುನಲ್ಲಿ ವಾಸವಾಗಿರುವ ಲಲಿತ ಮತ್ತವರ ಕುಟುಂಬ ಹಳೆ ಗುತ್ತು ಮನೆಯನ್ನು ಬಿಡಲಾರದೇ ಬೇಸಾಯವನ್ನೇ ಅವಲಂಬಿಸಿಕೊಂಡಿದೆ. ಈ ಕುಟುಂಬಕ್ಕೆ ಸುಮಾರು 300 ಎಕ್ರೆ ಭೂಮಿ ಇದ್ದು ಇದೆಲ್ಲಾ ಪಾಲು ಪಟ್ಟಿಯಾಗಿದೆ. ಈಗ ಇದು ತನ್ನ ಪ್ರಾಚೀನ ಗತವೈವವವನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಮೂಖವಾಗಿ ಮೌನದಿಂದ ಕೂತಿದೆ.

PC- Prashanth Salian (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ.) - ಸಂಕೇತ್ ಪೂಜಾರಿ

0 comments: