ಪುತ್ತೂರಿನ ಪಡ್ನೂರು ಗ್ರಾಮದ ಕೊಡಂಗೆ ಗುತ್ತಿನವರು ಸಾಲ್ಯಾನ್ ಬಳಿಯವರು. ಸುತ್ತ ಗುಡ್ಡಗಳಿಂದ ಆವೃತವಾದ ಹಚ್ಚ ಹಸುರಿನ ಕಂಗು-ತೆಂಗು ತೋಟದ ಮಧ್ಯದಲ್ಲಿ ಈ ಗುತ್ತು ಇದೆ. ಈ ಗುತ್ತಿಗೆ ಸುಮಾರು ೪೦೦ ವರ್ಷಗಳ ಇತಿಹಾಸವನ್ನು ಗುತ್ತಿನ ಮನೆಯ ಯಜಮಾನರಾದ ವಾಸು ಪೂಜಾರಿಯವರು ಹೇಳುತ್ತಾರೆ. ಎತ್ತರದ ಚಾವಡಿ ಮತ್ತು ಜಗಲಿ ಗುತ್ತಿಗೆ ಗಾಂಭೀರ್ಯವನ್ನು ತಂದಿದೆ. ಈ ಗುತ್ತು ಮತ್ತು ಆರುವಾರ ಗುತ್ತು ಅಕ್ಕ ತಂಗಿಯ ಗುತ್ತುಗಳು. ಅಕ್ಕ ಅಬ್ಬಕ್ಕ ಕೊಡಂಗೆ ಗುತ್ತಿನಲ್ಲಿ ನೆಲೆ ನಿಂತರು. ಅಬ್ಬಕ್ಕನ ತಂಗಿ ಅರುವಾರ ಮತ್ತು ನೆಲಪ್ಪಾಲಿನಲ್ಲಿ ವಾಸಮಾಡಿದರು.
ಭೂಮಿಯ ದಾಖಲೆಯಲ್ಲೂ ಆರುವಾರ ಕೊಡಂಗೆ ಎಂದಿದೆ. ಈ ಗುತ್ತಿನ ಇನ್ನೊಂದು ಕವಲು ಕಡಬದ ಕುದುಂಬೂರಿನಲ್ಲಿದೆ. ಅಲ್ಲಿಗೆ ಕೇವಲ ೧ ಎಕ್ರೆ ಜಾಗ ಉಳಿದಿದ್ದು ೨೨ ದೈವಗಳಿವೆ. ಕೊಡಂಗೆ ಗುತ್ತಿನಲ್ಲಿ ಈ ಕುಟುಂಬ ನೆಲೆಯಾಗುದಕ್ಕೆ ಕಾರಣ ಒಂದನ್ನು ಮನೆಯವರು ಹೇಳುತ್ತಾರೆ. ಸುಮಾರು ೪೦೦ ವರ್ಷಗಳ ಹಿಂದೆ ಈ ಕುಟುಂಬದವರು ಮುಲ್ಕಿಯ ಪಲಂತೂರು(ಪಯ್ಯೊಟ್ಟು) ಎಂಬಲ್ಲಿ ಇದ್ದರು. ಈ ಮನೆತನಕ್ಕೆ ಸಂಬಂಧಿಸಿದ ದೈವಗಳ ಕಾರ್ಯಗಳು ಪಯ್ಯೊಟ್ಟಿನಲ್ಲಿ ನಡೆಯುತ್ತಿತ್ತು. ಅಲ್ಲಿಗೆ ಹೋಗಲು ಬೇರೊಬ್ಬರ ಗದ್ದೆಯ ಕಟ್ಟಣೆ ಹಾದು ಹೋಗಬೇಕಿತ್ತು. ಇದಕ್ಕೆ ಆ ಗದ್ದೆಯ ಒಡೆಯ ಪ್ರತಿಬಂಧಿಸಿದನು.
ಇದರಿಂದ ಮನೆತನದ ಯಜಮಾನಿ ಅಬ್ಬಕ್ಕ ಬಹಳ ಬೇಸರಗೊಂಡು ತಕರಾರಿನ ಬಗ್ಗೆ ಕುಟುಂಬದವರೊಳಗೆ ಚರ್ಚಿಸಿದರು.ಇನ್ನು ಮುಂದೆ ನಮ್ಮ ದೈವಗಳ ಸನ್ನಿಧಿಗೆ ಬೇರೆಯವರ ಗದ್ದೆಗಳನ್ನು ದಾಟಿ ಬರುವಂತಾಗಬಾರದು ಎಂದು ನಿರ್ಧರಿಸಿ ಆ ದೈವಗಳೊಂದಿಗೆ ಊರನ್ನೇ ಬಿಟ್ಟರು .ಬಟ್ಟೆಯಲ್ಲಿ ದೈವಗಳ ಪೂಜಾ ಸಾಮಗ್ರಿಗಳನ್ನು ಕಟ್ಟಿ ಕುಟುಂಬದವರೊಂದಿಗೆ ಪೂರ್ವದಿಕ್ಕಿಗೆ ಪ್ರಯಾಣ ಮಾಡಿ ಪುತ್ತೂರಿನ ಪಡ್ನೂರು ಗ್ರಾಮಕ್ಕೆ ತಲುಪಿ ಅಲ್ಲೇ ಆಶ್ರಯವನ್ನು ಹುಡುಕ ತೊಡಗಿದರು. ಅಲ್ಲಿನ ಬ್ರಾಹ್ಮಣ ಸಮಯದಾಯದವರೊಬ್ಬರು ಆಸ್ತಿ ಮಾರಾಟ ಮಾಡುತ್ತಾರೆಂಬ ಸುದ್ದಿ ತಿಳಿದು ಅವರಲ್ಲಿಗೆ ಹೋದರು. ಆ ಬ್ರಾಹ್ಮಣರಿಂದ ೧೦೦ ಮುಡಿ ಭತ್ತ ಬೆಳೆಯುವ ಜಮೀನನ್ನು ಖರೀದಿಸಿ ಅಲ್ಲೇ ನೆಲೆನಿಂತರು.
ದೊಡ್ಡ ಮನೆ ಕಟ್ಟಿ ದೈವಗಳನ್ನು ನೆಲೆಗೊಳಿಸಿದರು. ಕ್ರಮೇಣ ಮನೆತನಕ್ಕೆ ಗುತ್ತಿನ ಸ್ಥಾನಮಾನಗಳು ಹೆಚ್ಚಾದವು. ಕುಟುಂಬದ ಅರ್ಧದಷ್ಟು ಬಂಧುಗಳನ್ನು ಇಲ್ಲೇ ನೆಲೆಗೊಳಿಸಿ ತಂಗಿಯನ್ನು ಆರುವಾರ ಮತ್ತು ನೆಲಪಾಲು ಎಂಬಲ್ಲಿ ವಾಸಮಾಡುವ ವ್ಯವಸ್ಥೆ ಮಾಡಿದರೆಂದು ಕುಟುಂಬದ ಹಿರಿಯರಾದ ದಾಸರಮೂಲೆ ಹೊನ್ನಮ್ಮ ಪೂಜಾರ್ತಿಯವರು ಹೇಳಿದರು. ಈಗ ಕುಟುಂಬದ ೩೦೦೦ ಕ್ಕೂ ಹೆಚ್ಚು ಮಂದಿ ಮನೆತನದ ದೈವಗಳ ವಾರ್ಷಿಕ ಪೂಜೆಯಲ್ಲಿ ಭಾಗವಹಿಸುತ್ತಾರೆ. ೨೦೧೩ ರ ಏಪ್ರಿಲ್ ತಿಂಗಳಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಬಹ್ಮ್ರ ಕಲಶ ಮತ್ತು ನೇಮೋತ್ಸವಗಳು ವಿಜೃಂಭಣೆಯಿಂದ ನಡೆದವು.
ಇಲ್ಲಿ ಜುಮಾದಿ-ಬಂಟ, ಮೈಸಂದಾಯ, ವರ್ಣರ ಪಂಜುರ್ಲಿ, ಹಿರಿಯಾಯ, ಕುಟುಂಬದ ಕಲ್ಲುರ್ಟಿ, ಕಲ್ಲುರ್ಟಿ ಪಂಜುರ್ಲಿ, ಮಂತ್ರಜಾವದೆ, ಸತ್ಯಜಾವದೆ, ಜಾಗದ ಲೆಕ್ಕೇಸಿರಿ, ಬವನ, ರಾವು ಗುಳಿಗ, ಮುಳಿಬೂತ( ಪೊಟ್ಟು ಜುಮಾದಿ), ಕೊರಗ ತನಿಯ ಮತ್ತು ಬೈರವ ಹಾಗು ಮುಂತಾದ ದೈವಗಳಿವೆ.
ಕುಟುಂಬದ ಹಿರಿಯರಾದ ಮಾಯಿಲ ಪೂಜಾರಿ, ತಿಮ್ಮಪ್ಪ ಪೂಜಾರಿ ಮಂತ್ರವಾದಿಗಳಾಗಿದ್ದರು. ಬಾಬು ಪೂಜಾರಿಯವರು ಮುಂಬಯಿಯಲ್ಲಿ ಟೈಲರ್ ಆಗಿದ್ದರಾರೆ. ದೈವಗಳ ನೇಮದಂದು ದೈವ ಇವರುಗಳನ್ನು ಕರೆಯುತ್ತವೆ. ಹಿಂದೆ ಈ ಗುತ್ತಿನಲ್ಲಿ ಕೆಲವು ತಂಟೆ ತಕರಾರುಗಳು ತೀರ್ಮಾನವಾಗುತ್ತಿತ್ತು. ಊರ ಶುಭಕಾರ್ಯಗಳಿಗೆ ಇಲ್ಲಿ ವೀಳ್ಯಕೊಟ್ಟು ಕರೆಯುವ ಸಂಪ್ರದಾಯವಿದೆ. ದಾಸರ ಮೂಲೆ ಸದಾನಂದರು ಈ ಗುತ್ತು ಕುಟುಂಬದವರು. ಈ ಕುಟುಂಬದ ಪಟ್ಲ ಅರಲ ಪೂಜಾರಿಯವರು ಕೆಎಸ್ ಆರ್ ಟಿ ಸಿ ಯಲ್ಲಿ ನೌಕರರಾಗಿದ್ದಾರೆ. ರಾಧಾ ಅವರು ಪೊಲೀಸ್ ಇಲಾಖೆಯಲ್ಲಿ, ಅಣ್ಣು ಪೂಜಾರಿಯವರು ಮುಂಬಯಿಯಲ್ಲಿ ಹೋಟೆಲ್ ಉದ್ಯಮಿಯಾಗಿ, ಯೋಗೀಶ್ ಅವರು ಗೋಕರ್ಣನಾಥ ಕಾಲೇಜಿನಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಗುತ್ತಿನ ಹೆಸರನ್ನು ಅಂತರ್ಜಾಲದಲ್ಲಿ ಕಂಡು ನಮ್ಮ ತಂಡಕ್ಕೆ ಇತ್ತೀಚೆಗೆ ಸೇರಿಕೊಂಡ ಯುವಕ ಸಂಕೇತ್ ಪೂಜಾರಿಯವರು ಈ ಗುತ್ತಿನ ಸಂದರ್ಶನಕ್ಕೆ ಎಡೆಮಾಡಿದರು. (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ.) -ಸಂಕೇತ್ ಪೂಜಾರಿ.
0 comments: