ಕೊಲ್ಲೂರು ದೇವಸ್ಥಾನದ ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಸ್ಥಗಿತಗೊಂಡಿರುವ ಉಚಿತ ಊಟವನ್ನು ಮುಂದುವರೆಸಬೇಕೆಂದು ಪಟ್ಟುಹಿಡಿದ ಬಿಜೆಪಿ ಸದಸ್ಯರು ವಿಧಾನ ಪರಿಷತ್‌ನಲ್ಲಿ ಮಂಗಳವಾರ ಧರಣಿ ನಡೆಸಿದರು.ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿಯವರು ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅವರು ನೀಡಿದ ಉತ್ತರಕ್ಕೆ ತೃಪ್ತರಾಗದೆ, ಬಿಜೆಪಿ ಸದಸ್ಯರು ಧರಣಿ ನಡೆಸುವ ಮೂಲಕ ಶಾಲೆಯ ಬಡಮಕ್ಕಳಿಗೆ ಊಟ ಮುಂದುವರೆಸಬೇಕೆಂದು ಆಗ್ರಹಪಡಿಸಿದರು.
ಪ್ರಶ್ನೆ ಕೇಳಿದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಕಳೆದ 9 ವರ್ಷಗಳಿಂದ ಶ್ರೀರಾಮ ಶಾಲೆಯ ಬಡಮಕ್ಕಳಿಗೆ ಉಚಿತ ಊಟವನ್ನು ನೀಡಲಾಗಿತ್ತು. ಕಲ್ಲಡ್ಕ ಹಾಗೂ ಶ್ರೀರಾಮ ಶಾಲೆ ಎಂಬ ಕಾರಣಕ್ಕಾಗಿ ಹಾಲುಗಲ್ಲದ ಮಕ್ಕಳಿಗೆ ಊಟ ನಿಲ್ಲಿಸುವ ಯೋಚನೆಯಾದರೂ ಏಕೆ ಬಂತು? ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಆಗ ಮಧ್ಯೆ ಪ್ರವೇಶಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು, ನಾನೇ ಸಚಿವನಾಗಿದ್ದಾಗ ಊಟದ ವ್ಯವಸ್ಥೆಯನ್ನು ಮಂಜೂರು ಮಾಡಿದ್ದೆ. ಈಗ ಅದು ಮುಂದುವರೆಸುವುದರಲ್ಲಿ ತಪ್ಪೇನೂ ಇಲ್ಲ. ನಾಲ್ಕು ವರ್ಷಗಳ ಆಡಳಿತದ ನಂತರ ಏಕಾಏಕಿ ನಿಲ್ಲಿಸಿದ್ದು ಏಕೆ ಎಂದು ಪ್ರಶ್ನಿಸಿದರು.ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಊಟದ ವಿಚಾರದಲ್ಲಿ ರಾಜಕೀಯ ಬೇಡ. ಚುನಾವಣೆಯಲ್ಲಿ ರಾಜಕೀಯ ಮಾಡೋಣ. ಈ ಶಾಲೆಗೆ ಎಂದಿನಂತೆ ಉಚಿತ ಊಟದ ವ್ಯವಸ್ಥೆಯನ್ನು ಮುಂದುವರೆಸಿ ಎಂದು ಒತ್ತಾಯಿಸಿದರು.
ಸಭಾನಾಯಕ ಸೀತಾರಾಮ್ ಅವರು ಕಲ್ಲಡ್ಕ ಶ್ರೀರಾಮ ಶಾಲೆ ಸೇರಿದಂತೆ, ಹಲವು ಖಾಸಗಿ ಶಾಲೆಗಳಿಗೆ ಸ್ಥಗಿತಗೊಳಿಸಿರುವ ಊಟದ ವ್ಯವಸ್ಥೆಯನ್ನು ಮುಂದುವರೆಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚರ್ಚೆ ನಡೆಸಲಾಗುವುದು.ಪ್ರಸಕ್ತ ಬಜೆಟ್ ಅಧಿವೇಶನದೊಳಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಇದರಿಂದ ತೃಪ್ತರಾದ ಬಿಜೆಪಿ ಸದಸ್ಯರು ಧರಣಿಯನ್ನು ವಾಪಸ್ ಪಡೆದರು.
0 comments: