Saturday, January 5, 2019

ಹೊಸವರ್ಷದ ಸಂಭ್ರಮಕ್ಕೆ ಮುಗ್ಧಪ್ರಾಣಿಗಳ ಬಲಿ :ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಮಂಗಳೂರು :ಹೊಸವರ್ಷದ ಸಂಭ್ರಮಕ್ಕೆ ತಯಾರಿಸಿದ ಟನ್‌ಗಟ್ಟಲೆ ಬಿರಿಯಾನಿ, ಚಿಕನ್ ಕಬಾಬ್ ಮಾತ್ರವಲ್ಲದೆ ಇನ್ನಿತರ ಖಾದ್ಯವನ್ನು ಎಲ್ಲೆಂದರಲ್ಲಿ ಸುರಿದಿರುವ ಪರಿಣಾಮ ಅದನ್ನು ಸೇವಿಸಿದ ಮುಗ್ಧಪ್ರಾಣಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಗರದ ಹೊರವಲಯದ ಕೂಳೂರು ‘ಗೋಲ್ಡ್ ಫಿಂಚ್ ಸಿಟಿ’ಯಲ್ಲಿ ನಡೆದಿದೆ. ಈ ಬಗ್ಗೆ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಫೊಟೋ ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜನಸಾಮಾನ್ಯರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎನ್ನುವ ಜಿಲ್ಲಾಡಳಿತದ ನಿಲುವು ಪ್ರಶ್ನಾರ್ಹ ಎಂದು ಸಾರ್ವಜನಿಕರಿಂದ ಅಭಿಪ್ರಾಯ ವ್ಯಕ್ತವಾಗಿದೆ.

ಕೂಳೂರು ೪ನೇ ಮೈಲಿನಲ್ಲಿರುವ ‘ಗೋಲ್ಡ್ ಫಿಂಚ್ ಸಿಟಿ’ ಮೈದಾನದಲ್ಲಿ ಡಿ.೩೧ರ ಸಂಜೆಯಿಂದ ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಹೆಸರಾಂತ ಡಿಜೆಗಳನ್ನೂ ಈ ಕಾರ್ಯಕ್ರಮಕ್ಕೆ ಕರೆಸಲಾಗಿತ್ತು. ನಗರದ ವಿವಿಧ ಕಾಲೇಜ್‌ಗಳ ಯುವಕ-ಯುವತಿಯರಲ್ಲದೆ ಹೊರಗಿನಿಂದಲೂ ಸಾವಿರಾರು ಸಂಖ್ಯೆಯ ಯುವಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೋಜು ಮಸ್ತಿಯಲ್ಲಿ ತೊಡಗಿತ್ತು. ಆದರೆ ಮರುದಿನ ಕಾರ್ಯಕ್ರಮದ ಆಯೋಜಕರು ಖಾಲಿಯಾಗದೇ ಉಳಿದ ಬಿರಿಯಾನಿ, ಚಿಕನ್ ಕಬಾನ್ ಮತ್ತಿತರ ಖಾದ್ಯವಸ್ತುಗಳನ್ನು ವಿಲೇವಾರಿ ಮಾಡದೆ ಅಲ್ಲೇ ಸುರಿದುಹೋಗಿದ್ದರು. ಇದನ್ನು ತಿಂದ ದನಕರುಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿವೆ, ಪರಿಸರ ಕೊಳೆತು ಗಬ್ಬುನಾತ ಬೀರುತ್ತಿದ್ದು ಈ ಅವ್ಯವಸ್ಥೆಗೆ ಹೊಣೆ ಯಾರು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

0 comments: