Thursday, February 7, 2019

ಮುಂಡಕಾಸುರ ಮರ್ಧಿನಿ ಮುಂಡ್ಕೂರು ಪುರವಾಸಿನಿ ಶ್ರೀ ದುರ್ಗಾಪರಮೇಶ್ವರಿ ಅಮ್ಮ ನವರ ಸ್ಥಳ ಪುರಾಣ

ಮುಂಡ್ಕೂರು ದುರ್ಗಾಪರಮೇಶ್ವರಿ ಉಡುಪಿ ಜಿಲ್ಲೆಯ ಮುಂಡ್ಕೂರಿನ ದುರ್ಗಾ ಪರಮೇಶ್ವರಿ ದೇವಸ್ಥಾನ ಅತ್ಯಂತ ಪ್ರಾಚೀನವಾದುದು. ಇದು ನವ ದುರ್ಗೆಯರ ದೇವಸ್ಥಾನಗಳಲ್ಲಿ ಒಂದು ಎಂಬ ಅಭಿಪ್ರಾಯವಿದೆ. ಸ್ಕಂದ ಪುರಾಣದಲ್ಲಿ  ಪ್ರಸ್ತಾಪವಾಗಿರುವ ಮುಂಡಾಸುರ ಎಂಬ ರಾಕ್ಷಸನನ್ನು ದುರ್ಗೆ ಇದೇ ಜಾಗದಲ್ಲಿ ಸಂಹರಿಸಿದಳು ಎಂಬ ಐತಿಹ್ಯವಿದೆ. ಅದರಿಂದಾಗಿಯೇ ಈ ಊರಿಗೆ ಮುಂಡ್ಕೂರು ಎಂಬ ಹೆಸರನ್ನು ಬಂತು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ.ಈ ಸ್ಥಳದ ಮಹಿಮೆ ಅರಿತ `ಭಾರ್ಗವ~ ಋಷಿಯು ಸುರಫ ಎಂಬ ರಾಜನ ಸಹಾಯದಿಂದ ಮಹಿಷ ಮರ್ಧಿನಿಯ ವಿಗ್ರಹವನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರಂತೆ. ಎಂಟನೇ ಶತಮಾನದಲ್ಲಿ ಇದು ನಿರ್ಮಾಣವಾಯಿತು ಎನ್ನಲಾಗಿದೆ. ಈ ದೇವಸ್ಥಾನದ ಆಸುಪಾಸಿನ ಒಂಬತ್ತು ಹಳ್ಳಿಗಳಲ್ಲಿ ಇದು ಅತ್ಯಂತ ಪ್ರಾಚೀನ ಹಾಗೂ ಕಾರಣಿಕದ ದೇವಸ್ಥಾನ.

ಹಿನ್ನೆಲೆ: ಶಾಂಭವಿ ನದಿಯ ದಡದಲ್ಲಿ ಉಳೇಪಾಡಿ ಗ್ರಾಮದ ಗುಡ್ಡೇ ಸ್ಥಾನ ಎಂಬಲ್ಲಿ ಕಾಂತಬಾರೆ, ಬುಧಬಾರೆ ಎಂಬ ವೀರ ಸೋದರರು ಇದ್ದರು. ದುರ್ಗೆಯ ಆರಾಧಕರಾಗಿದ್ದ ಅವರು ನಿತ್ಯ ಮುಂಡ್ಕೂರಿನ ಅಮ್ಮನ ದರ್ಶನ ಮಾಡಿ ಪ್ರಸಾದ ಸ್ವೀಕರಿಸುವ ಪರಿಪಾಠ ಬೆಳೆಸಿಕೊಂಡಿದ್ದರು. ಇದನ್ನು ಸಹಿಸದ ಆ ಭಾಗದ ದೊರೆ ವೀರವರ್ಮನು ದೋಣಿಗರಿಗೆ ಬಾರೆ ಸೋದರರನ್ನು ನದಿ ದಾಟಿಸಿ ಕ್ಷೇತ್ರಕ್ಕೆ ಕರೆತರಬಾರದೆಂದು ಆಜ್ಞೆಯನ್ನು ಹೊರಡಿಸಿದನಂತೆ.ಇದರಿಂದ ಚಿಂತಿತರಾದ ಬಾರೆ ಸೋದರರು ನದಿ ತಟದಲ್ಲೇ ಕುಳಿತು ದೇವಿಯನ್ನು ಪ್ರಾರ್ಥಿಸಿದರು. ನದಿ ಇಬ್ಭಾಗವಾಗಿ ದೇವಸ್ಥಾನಕ್ಕೆ ಹೋಗಲು ದಾರಿ ಮಾಡಿಕೊಟ್ಟಿತಂತೆ. ಇದರಿಂದ ಕೆರಳಿದ ವೀರವರ್ಮನು ಕೇರಳದ ಮಾಂತ್ರಿಕನನ್ನು ಕರೆಸಿ ಪಶ್ಚಿಮಾಭಿಮುಖವಾಗಿದ್ದ ದೇವಿಯ ವಿಗ್ರಹವನ್ನು ಪೂರ್ವ ದಿಕ್ಕಿಗೆ ತಿರುಗಿಸಿ ಬಿಂಬದ ಕೆಳಗಿದ್ದ ರತ್ನಾಭರಣವನ್ನು ದೋಚಿದನಲ್ಲದೆ ಬಾರೆ ಸೋದರರಿಗೆ  ಕಬ್ಬಿನ ಕಟ್ಟೊಂದನ್ನು ನೀಡಿ ಕತ್ತಿಯಿಂದ ಒಂದೇ ಬಾರಿಗೆ ತುಂಡರಿಸುವ ಪಂಥ ಒಡ್ಡಿದನಂತೆ. ಆಗ ಕಾಂತಬಾರೆ, ಬುಧಬಾರೆ ಸೋದರರು `ಕಲ್ಲಕಾಂಡ~ ಎಂಬಲ್ಲಿ ಮಹಿಷ ಮರ್ಧಿನಿಯನ್ನು ಕುರಿತು ಧ್ಯಾನಿಸಿದರು. ಆಗ ಪ್ರತ್ಯಕ್ಷಳಾದ ದೇವಿ ಹರಿತವಾದ ಖಡ್ಗವನ್ನು ಕರುಣಿಸಿದಳಂತೆ. ಆ ಖಡ್ಗದಿಂದ ಕಬ್ಬಿಣದ ಸರಳೂಗಳೂ ತುಂಡಾಗಿ ಬಿದ್ದವಂತೆ. ಜತೆಗೆ ದುಷ್ಟ ರಾಜ ವೀರವರ್ಮನೂ ಖಡ್ಗಕ್ಕೆ ಬಲಿಯಾದ.

ಬಾರೆ ಸಹೋದರರು ಫಲಭರಿತ ತೆಂಗಿನ ತೋಟವೊಂದನ್ನು ದೇವಸ್ಥಾನದ ನಂದಾದೀಪದ ಖರ್ಚಿಗಾಗಿ ದತ್ತಿ ನೀಡಿ ಮೂಡಬಿದಿರೆಯ ಚೌಟ ಅರಸರಿಗೆ ಅದರ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಟ್ಟರು ಎಂಬ ಐತಿಹ್ಯವನ್ನು ವಿವರಿಸುವ ತುಳು ಪಾಡ್ದನವೊಂದು ಪ್ರಚಲಿತವಿದೆ.ಭಾರ್ಗವ ಗೋತ್ರದ ಬ್ರಾಹ್ಮಣರು, ಬಿಲ್ಲವರು, ದೇವಾಡಿಗರು, ಬಂಟರು ಮತ್ತಿತರ ಸಮುದಾಯಗಳ ಕುಲದೇವತೆಯೂ ಆಗಿರುವ ದುರ್ಗಾಪರಮೇಶ್ವರಿಗೆ ಮಲ್ಲಿಗೆ ಹೂವೆಂದರೆ ಬಹಳ ಪ್ರೀತಿಯಂತೆ. ಇಲ್ಲಿಗೆ ಬರುವ ಭಕ್ತರು ಮಲ್ಲಿಗೆ ಹೂಗಳನ್ನು ತಂದು ಅಮ್ಮನಿಗೆ ಅರ್ಪಿಸುತ್ತಾರೆ. ಹೀಗಾಗಿ ದೇವಸ್ಥಾನದ ಗರ್ಭಗುಡಿಯಿಂದ ಮಲ್ಲಿಗೆ ಪರಿಮಳ ಹೊರಬಂದು ಇಡೀ ವಾತಾವರಣ ಆಹ್ಲಾದಕರವಾಗಿರುತ್ತದೆ.ಕ್ಷೇತ್ರದಲ್ಲಿ ಮಹಾ ಗಣಪತಿ, ನವಗ್ರಹ, ನಾಗ, ಮೊದಲಾದ ಪರಿವಾರ ದೇವತೆಗಳು ಹಾಗೂ ಧೂಮಾವತಿ, ಪಿಲಿಚಂಡಿ, ವಾರಾಹಿ ಪಂಜುರ್ಲಿ ಮೊದಲಾದ ದೈವಗಳಿಗೂ ಇಲ್ಲಿ ಪೂಜೆ ಸಲ್ಲುತ್ತದೆ. ಹೂವಿನ ಪೂಜೆ, ರಂಗ ಪೂಜೆ, ದುರ್ಗಾ ನಮಸ್ಕಾರ, ಚಂಡಿಕಾ ಹೋಮ ಮುಂತಾದ ವೈವಿಧ್ಯಮಯ ಸೇವೆಗಳು ಇಲ್ಲಿ ನಡೆಯುತ್ತವೆ.

ಮುಂಡ್ಕೂರು ಕಾರ್ಕಳ ತಾಲ್ಲೂಕು ವ್ಯಾಪ್ತಿಯಲ್ಲಿದೆ. ಉಡುಪಿಯಿಂದ ಅಲ್ಲಿಗೆ 18 ಕಿ.ಮೀ,  ಕಾರ್ಕಳದಿಂದ 26ಕಿ. ಮೀ ದೂರದಲ್ಲಿದೆ. ಮೂಡಬಿದ್ರೆ, ಉಡುಪಿ, ಕಾರ್ಕಳಗಳಿಂದ ಅಲ್ಲಿಗೆ ಹೋಗಿ ಬರಲು ಬಸ್‌ಗಳ ಸೌಕರ್ಯವಿದೆ. ಮುಂಡ್ಕೂರು ಸಣ್ಣ ಊರು. ಸಮೀಪದ ಪಟ್ಟಣ ಉಡುಪಿಯಲ್ಲಿ ಉಳಿದುಕೊಳ್ಳಲು ಸಾಕಷ್ಟು ವಸತಿ ಗೃಹಗಳು, ಹೊಟೇಲ್‌ಗಳಿವೆ. ಕಾರ್ತಿಕ ಮಾಸದಲ್ಲಿ ಮುಂಡ್ಕೂರು ದೇವಸ್ಥಾನದಲ್ಲಿ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಫೆಬ್ರ್ರುವರಿ 13  ರಿಂದ 18ರ ತನಕ ಜಾತ್ರೆ ನಡೆಯುತ್ತದೆ. ಅಲ್ಲದೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಶ್ರೀ ಕ್ಷೇತ್ರದಲ್ಲಿ ವಿಜ್ರಂಭನೆಯಿಂದ ಫೆಬ್ರವರಿ 6 ರಿಂದ 11ನಡೆಯಲಿದೆ.ಮಾಹಿತಿಗೆ ದೇವಸ್ಥಾನದ ಸಂಪರ್ಕಕ್ಕೆ ದೂರವಾಣಿ- ನಂಬರ್-  08258 267967

0 comments: