Thursday, May 2, 2019

ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯ

ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಚಿತ್ತೂರಿನ ಬಳಿ ಇರುವ ಪುರಾಣ ಪ್ರಸಿದ್ಧ ಕ್ಷೇತ್ರವೇ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯ. ದೇವಿ ಮೂಕಾಂಬೆಯಿಂದ ಮೂಕಾಸುರನು ಹತನಾದ ಕ್ಷೇತ್ರ ಮಾರಣಕಟ್ಟೆಯಾಗಿ ಲಕ್ಷಾಂತರ ಭಕ್ತರನ್ನೊಳಗೊಂಡು ಪ್ರಸಿದ್ಧಿ ಪಡೆದಿದೆ. ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದ ಮೂಕಾಸುರ ದೇವಿಯಿಂದ ವರ ಪಡೆದು ಕಾರಣೀಕ ದೈವ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆಸಿದ್ದಾನೆ.

ಪಶ್ಚಿಮ ಘಟ್ಟದ ತಪ್ಪಲು ಕರಾವಳಿಯ ಪೂರ್ವ ಭಾಗ ಮಲೆನಾಡು-ಮಲೆನಾಡಿಗೆ ಸೇರಿಕೊಂಡ ಪ್ರದೇಶ. ಉತ್ತರ ದಕ್ಷಿಣವಾಗಿ ಹಬ್ಬಿದಂತಹ ದೊಡ್ಡ ಕಾಡು. ಇಲ್ಲಿ ಲೋಕಕಲ್ಯಾಣಕ್ಕೂ, ಸ್ವಯಂ ಶ್ರೇಯಸ್ಸಿಗೂ ತಪಸ್ಸು ಮಾಡುತ್ತಿದ್ದ ಋಷಿಗಳ ವಾಸ ಹಾಗೇ ಈ ದಟ್ಟಾರಣ್ಯದಲ್ಲಿ ಕಂಹಾಸುರ ಎನ್ನುವ ರಾಕ್ಷಸನಿದ್ದನಂತೆ ಆತನು ಕ್ರೂರಿಯು ಆಗಿದ್ದನಂತೆ. ಕೋಲಮುನಿ ಹಾಗೂ ಮೊದಲಾದ ಋಷಿಗಳ ತಪಸ್ಸಿಗೆ ಭಂಗವನ್ನು ತರುತ್ತಿದ್ದ ಕಂಹಾಸುರ ಅಂತೆ ಜನಸಾಮಾನ್ಯರನ್ನು ಪೀಡಿಸುತ್ತಿದ್ದನಂತೆ ಋಷಿಗಳ ಮತ್ತು ಜನಸಾಮಾನ್ಯರ ರೋಧನ ಹಾಗೂ ಪ್ರಾರ್ಥನೆ ಮೂಕಾಂಬಿಕೆಗೆ ಕೇಳಿಸಿತು. ಜಗಜ್ಜನನಿಯಿಂದ ಸಾಂತ್ವಾನ, ಕಂಹಾಸುರನಿಗೆ ದೇವಿಯಿಂದ ಶಿಕ್ಷೆ ಮೂಕನಾದ, ದೇವಿಯ ಭಕ್ತನಾಗಬೇಕೆಂಬ ತುಡಿತದಿಂದ ಭಕ್ತನಾದ.ದೇವಿಯನ್ನು ಸೇರಬೇಕು, ಮೋಕ್ಷ ಪಡೆಯಬೇಕೆಂಬ ಹಂಬಲ , ತಾಯಿಯನ್ನು ಮಹಾತ್ವಾಕಾಂಕ್ಷೆಯಿಂದ ವಿರೋಧಿಸಿ ಕುಕೃತ್ಯ ಎಸಗಿದ. ಕುಪಿತಳಾದ ಮಾತೆ ಬುದ್ಧಿಯ ಮಾತು ಕೇಳದ ಅಸುರನೊಂದಿಗೆ ಮಹಾರಣ. ರಾಕ್ಷಸ ಅಸುನೀಗಿದ ಈ ಸ್ಥಳವೇ ಮಾರಣಕಟ್ಟೆ . ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಶ್ರೀ ಬ್ರಹ್ಮಲಿಂಗೇಶ್ವರನೆಂಬ ನಾಮವನ್ನಿತ್ತು, ಭಕ್ತ ಪೋಷಕನಾಗಿ ಅಭಯದಾತನಾಗುವಂತೆ ಹರಸಿದಳು. ಅಂತಹ ಮಹಾಸ್ಥಳವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿಧಿ.

ಮುಂದೆ ಕೊಲ್ಲೂರಿಗೆ ಬಂದ ಶ್ರೀ ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದರು. ಮಹಾ ಪುರುಷರ ಪಾದದೂಳಿಯಿಂದಾಗಿಯೂ, ಪೂಜ್ಯರಿಂದ ಬರೆಯಲ್ಪಟ್ಟ ಶ್ರೀ ಚಕ್ರದಿಂದಾಗಿಯೂ ಮಹಾನ್ ಶಕ್ತಿಯೊಂದಿಗೆ ಪುಣ್ಯಕ್ಷೇತ್ರವಾಗಿ ಭಕ್ತರ ಯಾತ್ರಾ ಸ್ಥಳವಾಯಿತು. ಅಲ್ಲದೇ ಜನಪದಗಳಲ್ಲಿದ್ದಂತೆ ಬಾಯಿಂದ ಬಾಯಿಗೆ ಬಂದ ಜನರ ಮಾತಿನಂತೆ ಚಿತ್ತೂರು ಗುಡಿಕೇರಿ ಸಂಸ್ಥಾನ ಮನೆಯ ಚಂದಯ್ಯ ಶೆಟ್ಟಿ ಯವರ ಮನೆಯಲ್ಲಿ ದನಕಾಯುವ ಮಂಜನು ದನ ಕರುಗಳನ್ನು ಮೇಯಿಸಲು ತನ್ನ ಸಂಗಡಿಗರೊಂದಿಗೆ ಬ್ರಹ್ಮ ಗುಂಡಿಯ ಕಾಡಿನ ಕಡೆಗೆ ಹೋಗುತ್ತಾರೆ. ಆ ದನ ಕರುಗಳ ಗುಂಪಿನಲ್ಲಿ ಕಪಿಲೆಯೆಂಬ ದನವು ಪ್ರತಿ ದಿನ ಬ್ರಹ್ಮ ಗುಂಡಿಯ ಬಳಿ ಬಂದು ಶಿಲೆಯ ಮೇಲೆ ಹಾಲು ಸುರಿದು ಹೋಗುತ್ತಿತ್ತು. ಅದನ್ನು ಒಂದು ದಿನ ದನ ಕಾಯುವ ಮಂಜ ಕಪಿಲೆ ದನ ಹಿಂಡನ್ನು ಬಿಟ್ಟು ಕಾಡಿನ ಒಳಗೆ ಹೋಗುವುದನ್ನು ಹಿಂಬಾಲಿಸಿದ. ಆ ದನವು ಮುಂದೆ ಹೋಗಿ ಬ್ರಹ್ಮ ಗುಂಡಿಯ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಸುತ್ತಿರುವುದನ್ನು ನೋಡಿದನಂತೆ ಆ ವಿಷಯವನ್ನು ಮನೆಗೆ ಬಂದು ತನ್ನ ಮಡದಿ ಮಂಜಿಯಲ್ಲಿ ತಿಳಿಸಿದ.ಈ ವಿಚಾರವನ್ನು ಮನೆಯ ಯಜಮಾನರಾದ ಚಂದಯ್ಯ ಶೆಟ್ಟಿಯವರಿಗೆ ತಿಳಿಸುತ್ತಾರಂತೆ. ಅವರಿಗೆ ಇವರ ಮಾತಿನಿಂದ ನಂಬಿಕೆಬಾರದೇ ಅದನ್ನು ನೋಡಬೇಕೆಂದು ದನ ಕಾಯುವ ಮಂಜನೊಂದಿಗೆ ಒಂದು ದಿನ ಆ ಕಾಡಿಗೆ ಹೋಗಿ ಕಪಿಲೆ ದನವನ್ನು ಹಿಂಬಾಲಿಸಿಕೊಂಡು ಹೋಗುತ್ತಾರಂತೆ ಆ ದನವು ಬ್ರಹ್ಮ ಗುಂಡಿ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಯುದನ್ನು ನೋಡಿದರಂತೆ ಅವನು ಮನೆಗೆ ಹಿಂದಿರುಗಿ ಬಂದ ನಂತರ ಬ್ರಾಹ್ಮಣರನ್ನು ಕರೆಸಿ ಅವರಲ್ಲಿ ಈ ವಿಚಾರವನ್ನು ತಿಳಿಸಿದರಂತೆ ಆಗ ಅವರು ಈ ಶಿಲೆ ಇರುವ ಸ್ಥಳವು ಪ್ರಸಿದ್ಧ ಶಕ್ತಿ ಸ್ಥಳವಾಗಿದ್ದು ಈ ಹಿಂದೆ ಶ್ರೀ ದೇವಿಯು ಕಂಹಾಸುರನನ್ನು ವದಿಸಿ ಮೂಕಾಸುರನಾದಾಗ ಶ್ರೀ ದೇವಿಯಲ್ಲಿ ನಿನ್ನ ಭಕ್ತನಾಗಬೇಕೆಂದು ಹಂಬಲಿಸಿದಾಗ ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಹರಸಿದಳು. ಮುಂದೆ ಈ ಕ್ಷೇತ್ರಕ್ಕೆ ಯತಿನ್ವರನೊಬ್ಬ ಬಂದ ನಂತರ ಈ ಕ್ಷೇತ್ರ ಪ್ರಸಿದ್ಧವಾಗುತ್ತದೆ. ಕಟ್ಟೆಯಲ್ಲಿ ಈಶ್ವರಿ ಶಕ್ತಿಯು ಹೊಂದಿದಂತಹ ಈ ಸ್ಥಳವೇ ಬಹಳ ಶಕ್ತಿಯುತವಾದ ಬ್ರಹ್ಮಲಿಂಗೇಶ್ವರ ಎಂದು ಹೇಳುತ್ತಾರಂತೆ. ನೋವು-ನಲಿವು-ದುಖಃಗಳಿಗೆ ಅಭಯಧಾಮವಾದ ಈ ಕ್ಷೇತ್ರವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ.

ಈ ಕ್ಷೇತ್ರದಲ್ಲಿ ಯಕ್ಷೆ, ಚಿಕ್ಕಮ್ಮ, ಹ್ಯಾಗುಳಿ ದೇವರೇ ಮೊದಲಾದ ದೇವತೆಗಳ ಬಳಗವು ಕಂಡುಬರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ವಾಕ್ಯ ಪ್ರಮಾಣದ ತಿರ್ಪು ಸಿಗುತ್ತದೆ. ಆದ್ದರಿಂದ ಮಂಜುನಾಥನ ಸನ್ನಿಧಿ ತೆಂಕಿನ ದೇವರಾದಂತೆ ಈ ಕ್ಷೇತ್ರವು ಬಡಗಿನ ದೇವರೆಂದು ಕರೆಯಲ್ಪಡುತ್ತದೆ. ಧನು ಸಂಕ್ರಮಣದಂದು ದೊಟ್ಟಿಕಾಲು ಚಿಕ್ಕು ದೇವರ ಪಾತ್ರಿ ಚಕ್ರ ಉಪನದಿಯನ್ನು ದಾಟುವುದು ಅಂತೆಯೇ ತುಳುನಾಡಿನಾದ್ಯಂತ ಭಕ್ತರ ಮನೆಯಲ್ಲಿ ಮೈ ದರ್ಶನ ಮಾಡುವುದು, ದರ್ಶನ ಪಾತ್ರಿ ಮಕರ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಹಾಜರಿರುವುದು ಇದರಿಂದ ತುಳು ನಾಡಿಗೂ ಈ ಕ್ಷೇತ್ರಕ್ಕೂ ಇರುವ ಸಂಬಂಧ ಕಂಡುಬರುತ್ತದೆ.

ಪ್ರಾಚೀನತೆಯ ಕುರುಹುವಾಗಿ ಶೇಡಿಮರವೂ ಇದ್ದಿತ್ತು. ಅಂತೇಯೇ ಸನ್ಯಾಸಿ (ಯೋಗಿ)ಯೊಬ್ಬರಿಂದ ಪೂಜಿಸಲ್ಪಡುತ್ತಿತ್ತಂತೆ ಎಂಬುದಕ್ಕೆ ಸಾಕ್ಷಿಯಾಗಿ ಸನ್ಯಾಸಿ ಬೆಟ್ಟು ಎನ್ನುವ ಸ್ಥಳವೂ ಸಮೀಪದಲ್ಲಿದೆ, ಅಂತಹ ಸನ್ಯಾಸಿಗಳು ಪರಿಚಾರಕರಾಗಿದ್ದು ಆದಿ ದ್ರಾವಿಡ ಮೂಲದವರು ಇಂದು ಶ್ರೀ ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿ ಬಂದು ನೆಲೆಸಿದ್ದಾರೆ. ಅವರ ಪೂರ್ವಜರ ಬಾಯಿಯಿಂದ ಬಾಯಿಗೆ ಬಂದ ನಾಡಿಗರ ಮಾತು ಈಗಲೂ ನಾವು ಕೇಳಬಹುದು. ಈ ಕ್ಷೇತ್ರದಲ್ಲಿ ದೈನಂದಿನ ವಿಧಿ ವಿಧಾನಗಳಿಗೆ ಪೂಜಾ ಅರ್ಚಕ ಕುಟುಂಬ ಮತ್ತು ಇತರ ಕೆಲಸಗಳಿಗೆ ಹೆಬ್ಬಾರರು, ಹುಟ್ಟಿನ ದೇವಾಡಿಗರು, ಮಡಿವಾಳರು, ಮೊಗವೀರರು, ವಿಶ್ವಕರ್ಮರು-ಕ್ಷೌರಿಕ ವರ್ಗದವರು ಇದ್ದಾರೆ. ಪೂರ್ವಕಾಲದಿಂದ ಶ್ರೀ ದೇವರ ಕೈಂಕರ್ಯ ದಲ್ಲಿ ತೊಡಗಿದ ವರ್ಗವಿದೆ. ಆಡಳಿತವನ್ನು ಚಿತ್ತೂರು ಗುಡಿಕೇರಿ ಮನೆಯವರು ಅನುವಂಶಿಕವಾಗಿ ಆಡಳಿತವನ್ನು ನೆಡೆಸುತ್ತಿದ್ದಾರೆ. ತಮ್ಮ ಕುಟುಂಬದ ಆಸ್ಥಿಯಲ್ಲಿ ದೇವಸ್ಥಾನಕ್ಕೆ ಉಂಬಳಿಗಾಗಿ ಬಿಟ್ಟಿರುತ್ತಾರೆ. ಈ ಕ್ಷೇತ್ರದ ದೇವಸ್ಥಾನ ಮತ್ತು ಹೆಬ್ಬಾಗಿಲನ್ನು ಕಟ್ಟುವಾಗ ಗುಡಿಕೇರಿಮನೆಯವರು ಸ್ವಂತ ನಗದು ಹಣ ಕೊರತೆಯಾಗಿ ಹಲ್ಸ್ ನಾಡು ಮನೆಯವರಿಗೆ ಭೂಮಿ ಅಡಮಾನ ಮಾಡಿದ ಲಿಖಿತ ಸರಕಾರಿ ದಾಖಲೆಗಳು ಪುಷ್ಟಿ ನೀಡುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತರ ಚಿಕ್ಕ- ಪುಟ್ಟ ದೇವಸ್ಥಾನಗಳು ಅಂದರೆ ಕೋಬಿಚಿಕ್ಕು, ವನದುಗರ್ಾದೇವಿ, ಹಿಜಾಣ ಚಿಕ್ಕು, ಕುಂಜ್ಞಾಡಿ ಹೈಗುಳಿ ಮೊದಲಾದ ದೇವತಾಸ್ಥಳಗಳೂ ಇವೆ. ತುಳುವ , ಕೊಂಕಣಿ, ಕನ್ನಡಿಗ, ಮಲೆಯಾಳಿ, ಮರಾಠಿ, ಹಿಂದಿ, ಅನೇಕ ಭಾರತೀಯ-ಎಲ್ಲಾ ಮತಗಳವರ ಅಭಯ ತಾಣವಾಗಿದೆ.

ವಾರ್ಷಿಕ ಉತ್ಸವ:ದೇವರ ಉತ್ಸವವು ಮಕರ ಸಂಕ್ರಾಂತಿಯಂದು ಪ್ರತಿ ವರ್ಷ ನೆಡೆಯುತ್ತದೆ. ಸನ್ನಿಧಿಗೆ ಪ್ರೀತಿಯ ಹರಕೆಗಳಾದ ಯಕ್ಷಗಾನ ಬಯಲಾಟ, ರಂಗಪೂಜೆ, ಚರುವಿನ ಪೂಜೆ, ಹೂವಿನ ಪೂಜೆ, ಮಂಗಳಾರತಿ, ಹರಿವಾಣ ನೈವೇದ್ಯ ಮೊದಲಾದ ಪೂಜೆ ದೇವರಿಗೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೇರವೇರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಯಕ್ಷೆ, ಹೈಗುಳಿ, ಚಿಕ್ಕು ದೇವತೆಗಳ ದರ್ಶನವಿದ್ದು ಈ ಮೈ ದರ್ಶನದಲ್ಲಿ ದೇವಸ್ಥಾನದ ಅನುವಂಶಿಕ ಮುಕ್ತೇಸರರ ಉಪಸ್ಥಿತಿಯಲ್ಲಿ ವಾಕ್ ತೀರ್ಮಾನ ಸಿಗುತ್ತದೆ. ಅಲ್ಲದೇ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ಪಡೆಯುತ್ತಾರೆ.ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ 2 ವಾರದ ಮುನ್ನ ದೇವರ ವಿಗ್ರಹವನ್ನು ವಿಸರ್ಜನೆ ಮಡಿ ಮಕರ ಸಂಕ್ರಾಂತಿಯಂದು ಪುನರ್ ಪ್ರತಿಷ್ಟೆ ಮಾಡಲಾಗುತ್ತದೆ. ಮಕರ ಸಂಕ್ರಾಂತಿಯಂದು ಮಧ್ಯಾಹ್ನ 12.00 ಘಂಟೆಗೆ ಅಬಿಜನ್ ಮುಹೂರ್ತದಲ್ಲಿ ಮಹಾಮಂಗಳಾರತಿಯೊಂದಿಗೆ ವಾರ್ಷಿಕ ಉತ್ಸವ ಜರುಗುತ್ತದೆ. ಹಾಲಬ್ಬದಲ್ಲಿ ಘಂಟೆ 10.30ಕ್ಕೆ ಕೆಂಡಸೇವೆ ಜರುಗುತ್ತದೆ. ಕೆಂಡಸೇವೆ ಆದ ಕೂಡಲೇ ದೇವರ ಮುಖ ಮಂಟಪದಲ್ಲಿ ದರ್ಶನ ಪಾತ್ರಿಗಳು ಕುಳಿತು ಕೆಂಡ ಕಾಣಿಕೆ ಲೆಕ್ಕ ಮಾಡಿ ದೇವಸ್ಥಾನದ ಅರ್ಚಕರಿಗೂ, ಸೇವಕರಿಗೂ, ಮಾಗಣಿಯವರಿಗೂ, ಪ್ರಸಾದ ಹಂಚುವಾಗ ಬೆಳ್ಳಿ ಕಾಣಿಕೆ ಹಾಕಿ ಕೊಡುವುದು ಮಾಮೂಲು ಪದ್ಧತಿ. ಇದಾದ ಕೂಡಲೇ ದೇವಸ್ಥಾನದ ಮೂಡುಬಾಗಿಲಿನಲ್ಲಿ ಆಡಳಿತದಾರನು ಬ್ರಾಹ್ಮಣರಿಗೆ, ಬ್ರಾಹ್ಮಣೇತರರಿಗೆ ಧರ್ಮ ಮಾಡುವುದು ವಾಡಿಕೆ. ಇದಾದ ನಂತರ ದಶಾವತಾರ ಮೇಳದವರಿಂದ ಸೇವೆ ನೆಡೆಯುತ್ತದೆ. ಜನವರಿ 15ರ ಬೆಳಿಗ್ಗೆ 10.00 ಘಂಟೆಗೆ ಮಂಡಲ ಸೇವೆ ನೆಡೆಯುತ್ತದೆ. ಅಲ್ಲದೇ ಚಿಕ್ಕು ದರ್ಶನದಲ್ಲಿ ಪಡುದಿಕ್ಕಿನಲ್ಲಿ ಕಡಕಟ್ಟುವಿನಲ್ಲಿ ಕುಳಿತು ಮುಕ್ತೇಸರರ ಉಪಸ್ಥಿತಿಯಲ್ಲಿ ಸನ್ನಿಧಾನದಿಂದ ನಂಬಿದ ಗಣಕ್ಕೆ ಪುಷ್ಪ ಕೊಡುವುದು ವಿಶೇಷ. ಅಲ್ಲದೇ ತುಲಾಭಾರ ಸೇವೆ ನೆಡೆಯುತ್ತದೆ. ಜನವರಿ 16ರಂದು ಬೆಳಗ್ಗೆ 10.00ಘಂಟೆಗೆ ಮಂಡಲ ಸೇವೆ ಆದ ನಂತರ ತುಲಾಭಾರ ಸೇವೆ ನೆಡೆಯುತ್ತದೆ. ನಂತರ ಪ್ರಸಾದ ವಿತರಣೆ ರಾತ್ರಿ ಕಡಬಿನ ಪೂಜೆ . ಜಾತ್ರೆಯಾದ ಒಂದು ವಾರದಲ್ಲಿ ಸಂಪ್ರೋಕ್ಷಣೆ. ಅಲ್ಲದೇ ಆಡಳಿತದಾರನ ಮನೆಯಲ್ಲಿ ಮೂರುದೇವರ ದರ್ಶನ ಉಂಟು ಮಾಡಿ ಅಲ್ಲಿ ಹಬ್ಬದಲ್ಲಿ ಕೆಲಸ ಮಾಡಿದ ಸಿಬ್ಬಂದಿಯವರಿಗೆ ಸಂಬಳ ಬಟವಾಡೆ ಮಾಡುವುದು ವಾಡಿಕೆ. ಅಲ್ಲದೇ ಬ್ರಾಹ್ಮಣರಿಗೂ, ಕುಟುಂಬದ ಸದಸ್ಯರಿಗೂ ಕಾಣಿಕೆ ನೀಡುವುದು ಮಾಮೂಲು ಪದ್ಧತಿ.

ದೀಪೋತ್ಸವ:ಕಾರ್ತೀಕ ಮಾಸ ಕೃಷ್ಣ ಚತುರ್ದಶಿಯಂದು ದೇವಸ್ಥಾನದಲ್ಲಿ ದೀಪೋತ್ಸವ. ದೇವಸ್ಥಾನದ ಆದಿ ದೇವಸ್ಥಾನ ವೆಂಕಟರಮಣ ದೇವಸ್ಥಾನದಿಂದ ಈ ದೇವಸ್ಥಾನದವರೆಗೆ ದೀಪಾಲಂಕೃತಗೊಳಿಸಲಾಗುತ್ತದೆ, ಮೇಷ ಮಾಸ, ಸಿಂಹ ಮಾಸ, ವೃಶ್ಚಿಕ ಮಾಸಗಳಲ್ಲಿ ಚರುವಿನ ಪೂಜೆ , ಸೋಣೆ ತಿಂಗಳು ಸಿಂಹ ಮಾಸದಲ್ಲಿ ಸೋಣೆ ಆರತಿ ನೆಡೆಯುತ್ತದೆ.

ಕುಂಭ ಸಂಕ್ರಮಣದಂದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ ವಾಕ್ ತಿರ್ಮಾನಗಳನ್ನು ದೇವರದರ್ಶನದಲ್ಲಿ ಮಾಡಿಕೊಂಡು ಹೋಗುವುದು ವಿಶೇಷ. ವಶ್ಚಿಕ ಸಂಕ್ರಮಣದ ಮರುದಿನ ದೇವರ ತಾರಂಕುಲಕ್ಕೆ ಅನುಸಾರವಾಗಿ ದೇವಸ್ಥಾನದ ವತಿಯಿಂದ ದಶಾವತಾರ ಯಕ್ಷಗಾನ ಮೇಳ ಪ್ರಾರಂಭವಾಗಿ ಈ ಕ್ಷೇತ್ರದಲ್ಲಿ ಪ್ರಥಮ ಸೇವೆ ನೆಡೆಯುತ್ತದೆ. ಅದರ ಮರುದಿನ ಆಡಳಿತದಾರನ(ಗುಡಿಕೇರಿ) ಮನೆಯಲ್ಲಿ ಸೇವೆ ಆಟ ನೆಡೆಯುವುದು ಸ್ಥಳ ಪದ್ಧತಿ. ವೆಂಕಟರಮಣ ದೇವಸ್ಥಾನದಲ್ಲಿ ಸಿಂಹ ಮಾಸ, ಶುಕ್ಲ ಪಕ್ಷದ ಶ್ರಾವಣ ನಕ್ಷತ್ರದಂದು ಸೌರ ಋಗ್ ಉಪಕರ್ಮ ಆಚರಣೆ ಮಾಡಿ ನಂತರ ಅಲ್ಲಿ ಪೂಜಿಸಲ್ಪಟ್ಟ ಉಪವೀತವನ್ನು ಬ್ರಹ್ಮಲಿಂಗೇಶ್ವರ ದೇವರಿಗೆ ಹಾಕುವುದು ವಾಡಿಕೆ.

ದೇವರ ಗುಡಿಗಳು:-ಶ್ರೀ ಚಕ್ರ ಪೀಠ:ಬ್ರಹ್ಮಲಿಂಗೇಶ್ವರ, ಯಕ್ಷಿ, ಮಲಿಯಾಳಿ ಯಕ್ಷಿ, ದೊಟ್ಟೆಕಾಲು ಚಿಕ್ಕು, ಪಲ್ಲಕ್ಕಿ ನಾಯಕ ಹಾಗೂ ಚಿಕ್ಕು ಪರಿವಾರ ದೇವರು ಹೊಸಿ ಹೈಗುಳಿ ಹಾಗೂ ಪರಿವಾರ ದೇವರು ಮತ್ತು ಹುಲಿ ದೇವರು. ಹಸಲು ತಿಮ್ಮ ಈ ದೇವರಿಗೆ ಬೇಸಾಯ ಮತ್ತು ಜಾನುವಾರುಗಳ ಬಗ್ಗೆ ಪೂಜೆಯನ್ನು ನೀಡುತ್ತಾರೆ. ಕಟ್ಟೆಯ ಮುಲಸ್ಥಾನದಲ್ಲಿ ಶ್ರೀ ಚಕ್ರ ಪೀಠ ಇದ್ದು ಆದಿ ಶಂಕರಾಚಾರ್ಯರಿಂದ ಪ್ರತಿಷ್ಟಾಪಿಸಲ್ಪಟ್ಟ ಸ್ಥಳ. ದೇವರಿಗೆ ದಶಾವತಾರ ಮೇಳ ಅಂದರೆ ಬಹಳ ಪ್ರೇಮ. ಅಲ್ಲದೇ ರಂಗಪೂಜೆ, ರುದ್ರಾಭಿಷೇಕ, ತುಲಾಭಾರ, ಹೂವಿನ ಪೂಜೆ ಇಲ್ಲಿಯ ವಿಶೇಷ ಪೂಜೆಗಳು.

ಉತ್ಸವಾದಿಗಳು: 1. ಮಕರಸಂಕ್ರಮಣ(ಜಾತ್ರೆ)ನಂತರ ಎರಡು ದಿನ ಮಂಡಲ ಉತ್ಸವ (ಜನವರಿ). 2.ಕುಂಭ ಸಂಕ್ರಮಣ(ಕಿರುಜಾತ್ರೆ)(ಫೆಬ್ರವರಿ). 3. ವರ್ಷದ ಮೂರು ಕಾಲದಲ್ಲಿ ಚರುವಿನಪೂಜೆ (ವೃಷ್ಚಿಕ ಮಾಸ, ಮೇಷ ಮಾಸ, ಸಿಂಹ ಮಾಸ). 4.ಸಂಪ್ರೋಕ್ಷಣೆ (ಜಾತ್ರೆಯ ನಂತರ). 5. ಸೌರಮಾನ ಯುಗಾದಿ(ಮೇಷ ಸಂಕ್ರಮಣದ ಮರುದಿನ). 6. ಸಿಂಹಮಾಸದಲ್ಲಿ ಸೋಣೆ ಆರತಿ(1 ತಿಂಗಳು. 7. ನವರಾತ್ರಿಯಲ್ಲಿ ಕದಿರು ಕಟ್ಟುವುದು. 8. ದೀಪಾವಳಿ 9. ದೀಪೋತ್ಸವ(ಕಾರ್ತಿಕ ಮಾಸ ಕೃಷ್ಣ ಚತುರ್ದಶಿ)

ಸಂಪರ್ಕ:ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮಾರಣಕಟ್ಟೆ, ಅಂಚೆ ಮಾರಣಕಟ್ಟೆ, ಚಿತ್ತೂರು ಗ್ರಾಮ, ಕುಂದಾಪುರ ತಾಲ್ಲೂಕು ಉಡುಪಿ ಜಿಲ್ಲೆ-576233 ಕಛೇರಿ: 08254-239231

ಮಾರ್ಗ: ಕುಂದಾಪುರದಿಂದ ಕೊಲ್ಲೂರಿಗೆ ಹೊಗುವ ಮಾರ್ಗ ಮಧ್ಯೆ ಮಾರಣಕಟ್ಟೆ ಕ್ಷೇತ್ರವನ್ನು ಸಂದರ್ಶಿಸಬಹುದಾಗಿದೆ.

0 comments: