Wednesday, May 8, 2019

ಬಿಲ್ಲವರ ಗುತ್ತು ಮನೆತನ :ಅಗತ್ತಾಡಿ ದೋಲ ಬಾರಿಕೆ

ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಅಗತ್ತಾಡಿ ದೋಲ ಬಾರಿಕೆ ಮನೆತನವು ಪೆರಾಬೆ ಮತ್ತು ಸುತ್ತ ಮುತ್ತಲಿನ ಊರಿನಲ್ಲಿ ಬಹಳ ಪ್ರಸಿದ್ಧವಾಗಿದ್ದ ಮನೆತನ. ಅರಸೊತ್ತಿಗೆಯ ಕಾಲದಲ್ಲಿ ಬಹಳ ವೈಭವದ ಗತ್ತು ಗಾಂಭೀರ್ಯದೊಂದಿಗೆ ಬಾಳಿ ಬೆಳಗಿದ್ದ ಬಂಗೇರ ಕುಟುಂಬಿಕರ ಮೂಲಸ್ಥಾನ. ಈ ಮನೆತಕ್ಕೆ ಮೂರು ರೀತಿಯ ಗೌರವ ಸಲ್ಲುವುದು ಇದರ ವಿಶೇಷ. ಬಾರಿಕೆಯ ಗೌರವ, ಗರಡಿಯ ಗೌರವ ಹಾಗೂ ಗುತ್ತಿನ ಗೌರವ. ಅಗತ್ತಾಡಿ ದೋಲ ಬಾರಿಕೆಯು ಅಗತ್ತಾಡಿ ಗರಡಿ ಮನೆಯೆಂದೂ, ಇಲ್ಲಿನ ದೈವಗಳ ನುಡಿಯಲ್ಲಿ ಗುತ್ತು ಎಂದು ಕರೆಯಲ್ಪಡುತ್ತದೆ. ಅಗತ್ತಾಡಿ ದೋಲ ಬಾರಿಕೆಯ ನೇತ್ರಾದಿ( ನೇತ್ರಾವತಿ) ಪೇರಮುಂಡ ಬೆಮ್ಮರು ಮತ್ತು ಬೈದೇರುಗಳ ಗರಡಿಯೂ ಬಹಳ ಪ್ರಸಿದ್ಧವಾದ ಕ್ಷೇತ್ರ ವಾಗಿದೆ.

ಹಿಂದೆ ಬಹಳ ದೊಡ್ಡ ಚಾವಡಿ ಸಹಿತ ಮನೆಯನ್ನು ಹೊಂದಿದ್ದ ಅಗತ್ತಾಡಿ ಬಾರಿಕೆಯು ನಂತರದಲ್ಲಿ ಕಾಲಚಕ್ರದ ಉರುಳಿದಂತೆ ಮನೆಯೂ ನಾಶವಾಗಿ ಬರ್ಕೆಯ ಮನೆ ಇದ್ದ ಜಾಗದಲ್ಲಿ ಕುಟುಂಬದವರ ಅನೇಕ ಮನೆಗಳು ಇವೆ. ಸುತ್ತಲೂ ಮನೆಗಳಿದ್ದು ಮಧ್ಯಭಾಗದಲ್ಲಿ ಬೈದೇರುಗಳ ತಾವು ಇದೆ( ಭಂಡಾರ ಚಾವಡಿ) .ಹಿಂದಿನ ವೈಭವ ಮತ್ತೆ ಮರುಕಳಿಸುವ ಭಾಗ್ಯ ಇಲ್ಲಿ ಒದಗಿ ಬರುವ ಲಕ್ಷಣಗಳು ತೋರಿಬರುತ್ತಿದ್ದು ದೊಡ್ದದಾದ ಬರ್ಕೆಮನೆ ಮತ್ತು ಬೋದಿಗೆ ಕಂಬಗಳ ಚಾವಡಿ ನಿರ್ಮಾಣಗೊಳ್ಳಲು ಸಿದ್ಧತೆ ನಡೆಯುತ್ತಿದೆ.ಈ ಮನೆತನಕ್ಕೆ ಸುಮಾರು 800 ಮಡಿ ಗದ್ದೆಗಳನ್ನೊಳಗೊಂಡ ಜಮೀನು ಇದ್ದುದ್ದಲ್ಲದೆ ಗೇಣಿ ಬರುತ್ತಿತ್ತು. ಅವುಗಳಲ್ಲಿ ಅನೇಕವು ಪರಾಧೀನವಾಗಿದೆ. ಅಗತ್ತಾಡಿ ಬರ್ಕೆಗೆ ಆಪಾರ ಭೂ ಸಂಪತ್ತು ಇತ್ತು. ಇವರಿಗೆ ಅತ್ರಿಜಾಲು, ಪುರುಸೊಟ್ಟು, ಕೆನೆತ್ತಿಲ್, ಪೆರಾಬೆ, ಕಲ್ಲುಗುಡ್ಡೆ ಶಿಶಿಲ ಇನ್ನೂ ಅನೇಕ ಕಡೆ ಭೂಮಿ ಇದ್ದವು. ಉಬಾರ್ ನಲ್ಲಿಯೂ ಜಮೀನುಗಳಿದ್ದವು. ಮೂಲದವರು ಮತ್ತು ಕೆಲವು ಒಕ್ಕಲು ಮನೆಗಳೂ ಇದ್ದವು. ಮಡಿವಾಳರಿಗೆ, ಪರವರಿಗೆ, ಸಿಡಿಮದ್ದಿನ ಪೂರೈಕೆಗೆ ಭೂಮಿಯನ್ನು ಉಂಬಳಿ ಬಿಟ್ಟಿದ್ದರು. ಹಾಗೇ ಮೂರ್ತೆದಾರಿಕೆ, ಬೆಲ್ಲ ತಯಾರಿಕೆ ಯನ್ನು ಮಾಡಿಸುತ್ತಿದ್ದರು. ಇಲ್ಲಿ ಊರಿನ ನ್ಯಾಯ ತೀರ್ಮಾನಗಳು ಊರಿನ ಅರಸರ ಸಮ್ಮುಖದಲ್ಲಿ ಈ ಮನೆಯ ನ್ಯಾಯ ಪಂಚಾಯತಿಯ ಮಂಟಮೆಯಲ್ಲೇ ನಡೆಯುತ್ತಿತ್ತು. ಈ ಮಂಟಮೆಯನ್ನು ಈಗಲೂ ನಾವು ನೋಡಬಹುದು. ಇದರ ಪಕ್ಕದಲ್ಲೇ ಸುಮಾರು 200 ವರ್ಷಗಳ ಇತಿಹಾಸವಿರುವ ಬಾವಿ ಇದ್ದು ಇದನ್ನು ಬಹಳ ಪವಿತ್ರ ಬಾವಿ ಎಂದು ನಂಬಲಾಗಿದೆ.

ಊರಿನ ಸೀಮೆ ದೇವಸ್ಥಾನಕ್ಕೆ ಇಲ್ಲಿಂದಲೇ ಧ್ವಜಸ್ತಂಭ (ಕೊಡಿಮರ) ಹೋಗುತ್ತಿತ್ತು. ಈಗ ಸ್ಥಿರವಾದ ಕೊಡಿಮರ ಸ್ಥಾಪನೆಯಾಗಿದೆ. ಅಗತ್ತಾಡಿಯ ಬಾರಿಕೆಯ ಈಗಿನ ಕುಟುಂಬ ಮೂಲತಃ ಬಿಲ್ಲವರ ಬಹಳ ಪ್ರಸಿದ್ಧ ಮನೆತನವಾದ ನೈತಾಡಿಯಿಂದ ಬಂದವರು. ನೈತಾಡಿಯಲ್ಲಿ ಇದ್ದ ನಾಲ್ಕು ಅಕ್ಕ ತಂಗಿಯರಲ್ಲಿ ಒಬ್ಬರು ಕೊಡಿಯಾಡಿ ಮತ್ತೊಬ್ಬಳು ನೈತಾಡಿಯಲ್ಲೇ ಇನ್ನೊಬ್ಬರು ಕೊಡಂಗೆಯಲ್ಲೂ ಮತ್ತೊಂದು ಮಹಿಳೆ ಅಗತ್ತಾಡಿಯಲ್ಲಿ ಬಂದು ನೆಲೆಸಿದರೆಂಬುದು ಇಲ್ಲಿನ ಇತಿಹಾಸ. ಸುಮಾರು 400 ವರ್ಷಗಳ ಹಿಂದೆ ಅಗತ್ತಾಡಿಯಲ್ಲಿ ಒಂದು ಬಿಲ್ಲವ ಕುಟುಂಬ ವಾಸವಾಗಿದ್ದು ಗುತ್ತು ಮನೆಯ ಅಧಿಕಾರವನ್ನು ಹೊಂದಿದ್ದರು. ಒಂದು ದಿನ ಸಂಜೆ ಇಬ್ಬರು ಅವಳಿ ಮಕ್ಕಳು ಈ ಮನೆಗೆ ಬಂದಂತಹ ಸಂದರ್ಭದಲ್ಲಿ ಮನೆಯ ಒಡತಿ ನೀವ್ಯಾರೆಂದು ವಿಚಾರಿಸುತ್ತಾರೆ. ಆಗ ಆಕೆ ನಾವು ದೂರದ ಊರಿನಿಂದ ಬಂತಂಹ ಬಿಲ್ಲವರ ಜಾತಿಯಲ್ಲಿ ಹುಟ್ಟಿದ ಅವಳಿ ಮಕ್ಕಳು, ನಾವು ಒಂದು ಮನೆಯಲ್ಲಿ ಬಾಯಾರಿಕೆಗೆ ನೀರು ಕೇಳಿದಾಗ ಅಗತ್ತಾಡಿ ಗುತ್ತಿನ ಮನೆಯಲ್ಲಿ ನಿಮ್ಮ ಜಾತಿಯವರೇ ಇದ್ದಾರೆ ಅಲ್ಲಿಗೆ ಹೋಗಿ ಎಂದು ಹೇಳಿದರು ಅದಕ್ಕೆ ಇಲ್ಲಿಗೆ ಬಂದೆವು. ನಮಗೆ ಬಾಯಾರಿಕೆಯಾಗುತ್ತಿದೆ ಎಂದು ಹೇಳುತ್ತಾರೆ. ನಿಮಗೆ ಕುಡಿಯಲು ಏನು ಬೇಕು ಎಂದು ಮನೆಯೊಡತಿ ಕೇಳಿದಾಗ ಹಾಲು ಕೊಡಿ ಎಂದು ಕೇಳುತ್ತಾರಂತೆ. ಆಗ ಹಾಲು ಸದ್ಯಕ್ಕೆ. ಇಲ್ಲ.ಹಾಲು ಕರೆಯಬೇಕಷ್ಟೆ ಎಂದು ಹೇಳುತ್ತಾರೆ. ಆಗ ಈ ಅವಳಿ ಮಕ್ಕಳು ಒಳಗೆ ಹೋಗಿ ನೋಡಿ ಹಾಲು ಇದೆ ಎಂದು ಹೇಳುತ್ತಾರೆ. ಅದರಂತೆ ಆಕೆ ಒಳಗೆ ಹೋಗಿ ನೋಡಿದಾಗ ಮನೆಯೊಳಗಿನ ಎಲ್ಲಾ ಪಾತ್ರೆಗಳಲ್ಲಿ ಹಾಲು ತುಂಬಿರುತ್ತದೆ.

ಇದನ್ನು ನೋಡಿ ಕೌತುಕದಿಂದಲೇ ಅವರಿಗೆ ಹಾಲು ಕೊಟ್ಟು ಕುಡಿದ ಪಾತ್ರೆಯನ್ನು ಒಳಗಿಡಲು ಹೋದಾಗ ಯಥಾಸ್ಥಿತಿಯಂತೆ ಪಾತ್ರೆಗಳಲ್ಲಿ ನೀರು ತುಂಬಿರುತ್ತದೆ. ಇದನ್ನು ನೋಡಿ ಆಶ್ಚರ್ಯಗೊಂಡ ಒಡತಿಯು ಹೊರಗಡೆ ಬಂದು ನೋಡಿದಾಗ ಅವಳಿ ಮಕ್ಕಳು ಇರುವುದಿಲ್ಲ. ಅವರು ಕೂತಿದ್ದ ಜಾಗದಲ್ಲಿ ಒಂದು ಸುರಿಯ ಮತ್ತು ಒಂದು ಗಿಂಡೆ ಇರುತ್ತದೆ. ಅದನ್ನು ಕಲ್ಲಕಲೆಂಬಿಯಲ್ಲಿ ಇಡುತ್ತಾಳೆ. ಕಾಲ ಕ್ರಮೇಣ ಆ ಸಂತತಿ ನಾಶವಾಗಿ ತದನಂತರ ಈ ಭೂಮಿ ಬ್ರಾಹ್ಮಣರ ಕೈಗೆ ಬರುತ್ತದೆ. ಅವರಿಂದ ಮುಂದೆ ಗೌಡ ಜಾನಾಂಗಕ್ಕೆ ಬರುತ್ತದೆ. ಅವರಿಂದ.ಮತ್ತೆ ಮುಗ್ಗ ಗುತ್ತಿನ ಬಂಗೇರ ಬಳಿಯ ಬಿಲ್ಲವರಿಗೆ ಬಂತಂಹ ಸಮಯದಲ್ಲಿ ಈಗ ಗರಡಿಯಿರುವ ಪ್ರದೇಶದಲ್ಲಿ ವ್ಯವಸಾಯ ನಿಮಿತ್ತ ನೆಲ್ಲಿಕಾಯಿಯ ಮರ ಕಡಿಯುವ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಗಿಂಡೆ ಹಾಗು ಸುರಿಯ ಸಿಕ್ಕಿತು.ಅದನ್ನು ತಂದು ದೇವರ ಕೋಣೆಯಲ್ಲಿ ಇಡುತ್ತಾರೆ. ರಾತ್ರಿ ಯಜಮಾನರ ಕನಸಲ್ಲಿ ಬಂದ ಕೋಟಿ ಚೆನ್ನಯರು ನಾವು ಬೈದೇರುಗಳು ಇಲ್ಲಿ ನೆಲೆಸಿದ್ದೇವೆ. ನಿಮಗೆ ಸಿಕ್ಕಿರುವ ಸುರಿಯ ಹಾಗು ಗಿಂಡೆ ನಾವು ಒಂದು ಕಾಲದಲ್ಲಿ ಬಿಟ್ಟು ಹೋದವುಗಳು. ನಮ್ಮನ್ನು ಮತ್ತು ಬೆಮ್ಮರನ್ನು ಗರಡಿ ಕಟ್ಟಿ ಅರಾಧಿಸಿಯೆಂದು ಹೇಳುತ್ತಾರೆ.

ಹಾಗೆ ಮಣೆಮಂಚ ಇಟ್ಟು ಆರಾಧಿಸುತ್ತಾರೆ. ತದನಂತರ ಸುಮಾರು 250- 300ವರ್ಷಗಳ ಹಿಂದೆ ಈ ಹಿಂದೆ ಹೇಳಿದಂತೆ ನೈತಾಡಿಯಿಂದ ಬಂದ ಕುನ್ನಿ ಬಂಗೇರ್ತಿ ಅವರ ಕುಟುಂಬ ಇಡೀ ಅಗತ್ತಾಡಿ ದೋಲ ಬಾರಿಕೆಯ ಭೂಮಿಯನ್ನು ಮತ್ತು ಬೈದೇರುಗಳ ಆಭರಣಗಳ ಹಾಗೂ ಭಂಡಾರವನ್ನು ಅವತ್ತಿನ ಕಾಲದ ಬಹುದೊಡ್ಡ ಮೊತ್ತವಾದ ೧೦೦೦ ರುಪಾಯಿಗೆ ಖರೀದಿಸುತ್ತಾರೆ. ತ್ಯಾಂಪಣ್ಣ ಪೂಜಾರಿಯವರನ್ನು ಯಜಮಾನರನ್ನಾಗಿ ಮಾಡಿ ಗರಡಿಮನೆನ್ನು ಬರ್ಕೆ ಮನೆಯನ್ನೂ ನಡೆಸಿಕೊಂಡು ಬರುತ್ತಾರೆ. ಅವರ ನಂತರ ನರಸಿಂಗ ಪೂಜಾರಿ, ರಾಮಣ್ಣ ಪೂಜಾರಿ, ಮುಂಡಪ್ಪ ಪೂಜಾರಿ, ತ್ಯಾಂಪ ಪೂಜಾರಿ ಇವರೆಲ್ಲ ಇಲ್ಲಿ ಯಜಮಾನರಾಗಿ ಪ್ರಸಿದ್ಧರಾದವರು. ಇವರ ನಂತರ ಪ್ರಸ್ತುತ ಸಂಕಪ್ಪ ಪೂಜಾರಿಯವರು ಯಜಮಾನರಾಗಿ ಗರಡಿಯ ಎಲ್ಲಾ ಉತ್ಸವಗಳನ್ನು ಕುಟುಂಬದ ಯವ ಪೀಳಿಗೆಯ ಯುವಕರ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಕೋಟಿ ಚೆನ್ನಯರು ತಮ್ಮ ಜೀವಿತಾವಧಿಯಲ್ಲಿಯೇ ಅಗತ್ತಾಡಿಗೆ ಭೇಟಿ ನಂತರ ಎಣ್ಮೂರಿಗೆ ಹೋಗಿರುವುದರಿಂದ ಎಣ್ಮೂರಿನಲ್ಲಿ ಹೇಳಿದ ಹರಕೆ ಅಗತ್ತಾಡಿಯಲ್ಲಿ ಸಂದಾಯವಾಗುತ್ತದೆ. ಆದರೆ ಅಗತ್ತಾಡಿಯ ಹರಕೆ ಅಗತ್ತಾಡಿಗೆ ಸಲ್ಲಬೇಕು. ಅಗತ್ತಾಡಿಯಲ್ಲಿ ಇಂದಿಗೂ ಬೈದೇರುಗಳು ಬಿಟ್ಟು ಹೋದ ಗಿಂಡೆ ಮತ್ತು ಸುರಿಯವನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬರಲಾಗಿದೆ. ಸುರಿಯವು ಬಹಳ ಶಿಥಿಲವಾಗಿರುವುದರಿಂದ ಬೆಳ್ಳಿಯ ಕವಚ ಹೊದಿಸಲಾಗಿದೆ. ಇದನ್ನು ತೆಗೆಯುವ ವ್ಯವಸ್ಥೆಯೂ ಇದೆ.

ಈ ಊರಿಗೆ ಶೇಕ್ ಗಳು ಅರಸರಾಗಿದ್ದಂತಹ ಸಂದರ್ಭದಲ್ಲಿ ಅವರ ರಾಣಿಯವರಿಗೆ ಬೇಸರ ಕಳೆಯಲು ಈ ಬರ್ಕೆ ಮನೆಯ ಯಜಮಾನಿ ಅಂದರ ಈಗಿನ ಮನೆಯ ಹಿರಿಯವರಾದ ಹೇಮವತಿ ಯಾನೆ ಹೊನ್ನಮ್ಮನವರ ಅಜ್ಜಿ ಹೋಗುತ್ತಿದ್ದರಂತೆ. ಬಹಳ ಶ್ರೀಮಂತರಾಗಿದ್ದ ಶೇಕ್ ನವರಿಗೆ ಬಡತನ ಆವರಿಸಿ ಅರಸೊತ್ತಿಗೆ ನಾಶವಾದ ಸಂದರ್ಭದಲ್ಲಿ ಅವರು ಅಗತ್ತಾಡಿಯ ನ್ಯಾಯ ಪಂಚಾಯಿತಿಯ ಮಂಟಮೆಗೆ ಬಂದು ಹೊನ್ನಮ್ಮನವರ ಅಜ್ಜರಾದ ರಾಮಣ್ಣ ಬೈದ್ಯರ ಕೈಯಲ್ಲಿ ದುಡ್ಡು ಪಡೆದು ಅವರು ಬಾಡಿಗೆಗೆ ಗಾಡಿ ಮಾಡಿಕೊಟ್ಟು ಆ ಶೇಕ್ ಕುಟುಂಬವನ್ನು ಬೆಳ್ತಂಗಡಿಗೆ ಕಳುಹಿಸಿಕೊಟ್ಟರಂತೆ. ಅಂತಹ ರಾಜರಿಗೆ ಬಡತನ ಬಂದಾಗ ಸಹಾಯ ಮಾಡುವಷ್ಟು ಶ್ರೀಮಂತ ಮತ್ತು ಉದಾರ ಕುಟುಂಬ ಇದಾಗಿತ್ತು. ಸುಮಾರು 30 ರಿಂದ 40 ಜನ ಒಂದು ಕಾಲದಲ್ಲಿ ಈ ಮನೆಯಲ್ಲಿ ಕೂಡಿಬಾಳಿದ್ದರು.

ಈ ಮನೆತನದ ರಾಮಣ್ಣ ಪೂಜಾರಿ (ರಾಮಣ್ಣ ಬೈದ್ಯ) ಬಹಳ ಪ್ರಸಿದ್ಧ ನಾಟಿ ವೈದ್ಯರಾಗಿ ಮತ್ತು ಮಂತ್ರವಿದ್ಯೆ ಕಲಿತವರಾಗಿದ್ದರು. ಸಿದ್ದಿ ಮಾಡಲು ನೀರಿನಲ್ಲಿ ಬೆಳಗ್ಗೆ ಮುಳುಗಿದರೆ ಸಂಜೆ ಎದ್ದು ಬರುತ್ತಿದ್ದರಂತೆ. ಇವರು.ಇಚ್ಲಂಪಾಡಿಯ ಬದನೆಗುತ್ತಿನ ದಿ| ಹೊನ್ನಮ್ಮ ಅವರಿಗೆ ನಾಟಿ ವಿದ್ಯೆಯನ್ನು ಕಲಿಸಿದ್ದರು. ಬದನೆ ಗುತ್ತಿನ ಹೊನ್ನಮ್ಮ ಬಹಳ ಪ್ರಸಿದ್ಧ ನಾಟಿ ವೈದ್ಯೆಯಾಗಿದ್ದರು. ಅಗತ್ತಾಡಿಯ ಮಣ್ಣು ಬಹಳ ಪಾವಿತ್ರ್ಯತೆಯಿಂದ ಕೂಡಿದೆ ಎಂದು ಇಲ್ಲಿನವರು ನಂಬುತ್ತಾರೆ. ಹಿಂದೆ ಇಲ್ಲಿ ಬೆಳೆದ ತರಕಾರಿಗಳನ್ನು ಯಾರಾದರೂ ಕದಿಯಲು ಪ್ರಯತ್ನಿನಿಸಿದರೆ ನಾಗರ ಹಾವು ಹೆಡೆ ಎತ್ತಿ ನಿಲ್ಲುತ್ತಿತ್ತಂತೆ. ಇಲ್ಲಿ 44 ಕೋಳಿ ಮತ್ತು 4 ಮೊಟ್ಟೆಗಳ ಅಗೇಲು ಸೇವೆ ಹಿಂದಿನ ಕಾಲದಲ್ಲಿ ನಡೆಯುತ್ತಿಂತೆ. ಅಂದರೆ ೪೪ ದೈವಗಳು ಹಾಗೂ ನಾಲ್ಕು ಮೊಟ್ಟೆಗಳನ್ನು ಬಡಿಸುವ ಒಂದು ದೈವ ಇಲ್ಲಿತ್ತಂತೆ. ಆದರೆ ಈ ಇಲ್ಲಿ ಆ ಎಲ್ಲಾ ದೈವಗಳ ಆರಾಧನೆ ಇಲ್ಲ. ನಾಲ್ಕು ಮೊಟ್ಟೆಯ ಅಗೇಲು ಪಡೆಯುವ ದೈವ ಯಾವುದೆಂಬುದು ಈ ಮನೆಯವರಿಗೆ ತಿಳಿದಿಲ್ಲ.

ಅಗತ್ತಾಡಿಯಲ್ಲಿ ಗ್ರಾಮ ದೈವಗಳ ಭಂಡಾರವಿತ್ತು. ಇಲ್ಲಿಂದಲೇ ಭಂಡಾರ ಹೋಗಿ ನೇಮವಾಗುತ್ತಿತ್ತು.ಕೆಲವು ಕಾರಣಾಂತರಗಳಿಂದ ಗ್ರಾಮದೈವಗಳ ಭಂಡಾರ ಬೇರೆಯೇ ಸೃಷ್ಟಿಯಾಗಿದೆ. ಅಗತ್ತಾಡಿಯಲ್ಲಿ ಈಗ ಅರಸು ಉಳ್ಳಾಕುಲು(ಇಷ್ಟಜಾವದೆ) ,ಕೊಡಮಂದಾಯ, ಮೈಸಂದಾಯ ದೈವಗಳ ಗುಡಿ ಇದೆ. ಇದರ ಎಡ ಭಾಗದಲ್ಲಿ ಬೈದೇರುಗಳ ಗರಡಿ ಇದೆ. ಬಲ ಭಾಗದಲ್ಲಿ ನಾಗ ಬೆಮ್ಮರ ಸುಂದರವಾದ ಗುಡಿ ಇದೆ. ಇದರ ಮುಂದೆ ವಿಶಾಲವಾದ ಬಹುದೊಡ್ಡ ಗದ್ದೆ ಇದ್ದು ಇಲ್ಲಿ ಬೈದೇರುಗಳ ಸೇಟ್ ನಡೆಯುತ್ತದೆ. ನಂತರ ಸ್ವಲ್ಪ ದೂರದಲ್ಲಿ ಬೈದೇರುಗಳ ತಾವು ಇದ್ದು ಪಕ್ಕದಲ್ಲೇ ಕುಟುಂಬಿಕರ ಮನೆ ಇದೆ. ಇಲ್ಲಿನ ಬರ್ಕೆ ಮನೆಯಲ್ಲಿ ಕುಟುಂಬದ ಕಲ್ಲುರ್ಟಿ ಇದ್ದು ಬಹಳ ಪ್ರಾಚೀನ ಮೂರ್ತಿ ಇದೆ. ತಾವಿನ ಒಳಗಡೆ ದೊಡ್ಡದಾದ ಬೈದೇರುಗಳ ಮತ್ತು ಬೆಮ್ಮರ ಪ್ರಾಚೀನ ಮೂರ್ತಿಗಳಿವೆ. ಇದಲ್ಲದೆ ಮಾಯಂದಾಲ್, ಪಂಜುರ್ಲಿ, ಕುಂಟಲ್ದಾಯ, ಮೂವ ಕಲ್ಲುರ್ಟಿ, ಮೂವ ಪಂಜುರ್ಲಿ, ಶೀರಾಡಿ, ಚಾಮುಂಡಿ ಮುಂತಾದ ದೈವಗಳಿವೆ. ಕುಪ್ಲಾಜೆ ಜನನದ ತಂತ್ರಿಗಳು ಇಲ್ಲಿನ ವೈದಿಕ ಕಾರ್ಯಗಳನ್ನು ಅನಾದಿಕಾಲದಿಂದಲೂ ನೆರೆವೇರಿಸಿಕೊಂಡು ಬರುತ್ತಿದ್ದಾರೆ.ಜನವರಿ ತಿಂಗಳಿನಲ್ಲಿ ಬೈದೇರುಗಳ, ಮಾಯಂದಾಲ್, ಉಳ್ಳಾಕುಲು, ಕೊಡಮಣಿತ್ತಾಯ, ಮೈಸಂದಾಯ, ಮತ್ತು ಜೋಗಿ ಪುರುಷ ದೈವಗಳ ವಿಜೃಂಬಣೆಯ ನೇಮೋತ್ಸವ ನಡೆಯುತ್ತದೆ. ಇಲ್ಲಿನ ಯುವಕರು ಬಹಳ ಆಸಕ್ತಿಯಿಂದ ಈ ಗರಡಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇದಲ್ಲದೆ ಸುಮಾರು 25 ವರ್ಷಗಳ ಕಾಲ ಕಾರಣಾಂತರಗಳಿಂದ ನಿಂತು ಹೋಗಿದ್ದ ನೇಮವನ್ನು ಇಲ್ಲಿನ ಕುಟುಂಬದ ಯುವಕರೇ ಮುಂದೆ ನಿಂತು ಆರಂಭಿಸಿ ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಕುಟುಂಬದ ಯುವಕ ಶೈಲೇಶ್ ಪೂಜಾರಿಯವರು ಬೈದೇರುಗಳ ಬಗ್ಗೆ ಅಪಾರ ನಂಬಿಕೆ ಮತ್ತು ಅದರ ಕ್ರಮ ನಿಯಮಗಳ ಬಗ್ಗೆ ತಿಳಿದವರಾಗಿದ್ದು ತಾವೇ ಮುಂದೆ ನಿಂತು ಎಲ್ಲಾ ವಿಧಿ ವಿಧಾನಗಳನ್ನು ಚ್ಯುತಿ ಬಾರದಂತೆ ನಡೆಸಿಕೊಂಡು ಬರುತ್ತಿರುತ್ತಿದ್ದಾರೆ.ಇದು ಈಗಿನ ಯುವ ಪೀಳಿಗೆಗೆ ಒಂದು ಮಾದರಿ ಎನ್ನಬಹುದು.

ಗರಡಿಗೆ ಕಮಿಟಿ ರಚಿಸಲಾಗಿದ್ದು ಅಧ್ಯಕ್ಷ ರಾಗಿ ರಮೇಶ್ ಬಿ.ಸ್, ಗೌರವಾದ್ಯಾಕ್ಷರಾಗಿ ಕಂಕನಾಡಿ ಗರಡಿಯ ಚಿತ್ತರಂಜನ್ .ಕೆ ಅವರು ಇದ್ದಾರೆ. ಬೈದೇರುಗಳಿಗೆ ಹಾಗೂ ಇತರ ದೈವಗಳಿಗೆ ಆಪಾರ ಬೆಳ್ಳಿ ಬಂಗಾರಗಳು ಕುಟುಂಬದವರಿಂದ ಮತ್ತು ಭಕ್ತರ ಹರಕೆಯಿಂದ ಬಂದಿವೆ.ಪ್ರತೀ ತಿಂಗಳು ಸಂಕ್ರಮಣ ಪೂಜೆ ನಡೆಯುತ್ತಿದ್ದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ. ಮಾಹಿತಿ :- ಹೇಮಾವತಿ ಯಾನೆ ಹೊನ್ನಮ್ಮ ಮತ್ತು Shailesh Birwa ಅಗತ್ತಾಡಿ ದೋಲ ಬಾರಿಕೆ. ಬರಹ :ಸಂಕೇತ್ ಪೂಜಾರಿ.

0 comments: