Monday, May 6, 2019

ಕೋಟ ಶ್ರೀ ಅಮೃತೇಶ್ವರೀ ಅಮ್ಮನವರ ದೇವಸ್ಥಾನ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಕೇಂದ್ರದಿಂದ ಸರಿಸುಮಾರು 10ರಿಂದ 15ಕಿ.ಮಿ ಅಂತರದಲ್ಲಿರುವ ಅಪೂರ್ವ ಶಕ್ತಿಪೀಠಗಳ್ಲಲಿ ಕೋಟ ಶ್ರೀ ಅಮೃತೇಶ್ವರೀ ಅಮ್ಮನವರ ದೇವಸ್ಥಾನವು(Kota Shree Amrutheshwari Ammanavara Temple)ಒಂದು. ಈ ಕ್ಷೇತ್ರವು ಕಲಿಯುಗದಲ್ಲಿ ಭಕ್ತರು ಕಣ್ಣಾರೆ ಕಾಣಬಹುದಾದ ದೇವಿಯ ಪವಾಡ ಸಾನ್ನಿಧ್ಯದಲ್ಲಿ ಒಂದು. ಏಕೆಂದರೆ ಇಲ್ಲಿ ನಾವು ದೇವಿಯ ಮಕ್ಕಳು ಲಿಂಗರೂಪದಲ್ಲಿ ಉದ್ಭವವಾಗುವುದನ್ನು ಕಾಣಬಹುದು. ಇಲ್ಲಿ ಅಮ್ಮನವರ ದೇವಳದ ಗರ್ಭಗುಡಿಯ ಸುತ್ತಲೂ ವಿವಿಧ ಆಕಾರದ ಲಿಂಗಗಳು ಇರುವುದನ್ನು ಕಾಣಬಹದು. ಇಲ್ಲಿ ಜೋಗಿ ಸಮಾಜದರಿಂದ ಪೂಜಾದಿಗಳು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ದೇವಾಲಯವು ಜೋಗಿ ಸಮಾಜಕ್ಕೆ ಸೇರಿದ ದೇವಾಲಯವಾಗಿದ್ದು, ಇವರು ಚೊಕ್ಕಟವಾಗಿ ಅಮ್ಮನವರ ಪೂಜಾದಿಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ದೇವಾಲಯವು ಪುನರ್ ನಿರ್ಮಾಣಗೊಂಡು ಕಾಣಲು ದೇವಿಯ ಮಣಿದ್ವೀಪವೆಂಬಂತೆ ಭಾಸವಾಗುತ್ತದೆ.

ಕ್ಷೇತ್ರ ಪುರಾಣದಂತೆ ಹಿಂದೆ ರಾವಣನ ಬಂಧುವಾದ ಖರನೆಂಬ ಮಹಾಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಕೂಡಿಕೊಂಡು ತನ್ನ ಆಣ್ಣನಾದ ರಾವಣನ ಅಪ್ಪಣೆಯಂತೆ ಲಂಕಾನಗರಿಗೆ ಉತ್ತರದಿಕ್ಕಿನ ಈ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು.ಈ ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಠನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು. ಈತನ ಪತ್ನಿಯಾದ ಕುಂಭಮುಖಿಯೂ ಸಹ ಪತಿವ್ರತಾ ಪಾರಾಯಣಳು, ಸಾಧು ಸ್ವಭಾವದವಳು ಆಗಿದ್ದು ಸದಾ ಕಾಲ ತನ್ನ ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು.

ಹೀಗಿರಲು ಒಮ್ಮೆ ವಿಹಾರಕ್ಕಾಗಿ ಶೂರ್ಪನಖಿಯನ್ನು ಕೂಡಿಕೊಂಡು ಕುಂಭಮುಖಿಯು ವನದಲ್ಲಿ ಸಂಚಾರ ಮಾಡುತ್ತಿರಲು ಮಧುಮಾಸದ ವನಸಿರಿಗೆ ಮನಸೋತ ಅವರೀರ್ವರು ಪುಷ್ಪ ಸಂಗ್ರಹ ಹಾಗೂ ಮಧು ಸಂಗ್ರಹ ಮಾಡುತ್ತಾ ಬೇರೆ ಬೇರೆ ಮಾರ್ಗದಲ್ಲಿ ಹೋದರು. ಆಗ ಇದೇ ಮಾರ್ಗದಲ್ಲಿ ಏಕಮುಖಿ ಮಹರ್ಷಿಗಳ ಪತ್ನಿಯಾದ ಅತಿಪ್ರಭೆ ಎನ್ನುವವಳು ತನ್ನ ಪತಿಯು ನಿಧನ ಹೊಂದಿದುದರಿಂದ ವೈರಾಗ್ಯದಿಂದ ಕೂಡಿದವಳಾಗಿ, ಪ್ರಾಯ ಪ್ರಬುದ್ದನೂ, ಸುಂದರನೂ, ವಿದ್ಯಾವಂತನೂ ಆದ ತನ್ನ ಮಗ ಬಹುಶ್ರುತ ಎಂಬವನೊಂದಿಗೆ ತೀರ್ಥಯಾತ್ರೆಗಾಗಿ ಕಾಶಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಿದ್ದಳು.

ಹೀಗಿರಲು ಬಾಲವಿಧವೆಯೂ, ಸ್ವಭಾವತಃ ಅತಿ ಕಾಮುಕಳೂ ಆಗಿರುವ ಶೂರ್ಪನಖಿಯು ಅತಿಪ್ರಭೆಯ ಮಗನಾದ ಆ ಋಷಿ ಕುಮಾರನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ, ಆತನು ಒಪ್ಪದಿರಲು ಶೂರ್ಪನಖಿಯು ಬಲತ್ಕಾರದಿಂದ ಆತನನ್ನು ಸಂಹರಿಸಿದಳು. ತನ್ನ ಏಕಮಾತ್ರ ಪುತ್ರನ ಮರಣದಿಂದ ಅತಿಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ,ಈ ಶಬ್ಧವನ್ನು ಕೇಳಿದ ಕುಂಭಮುಖಿಯು ಅಲ್ಲಿಗೆ ಬಂದಳು. ಶೋಕಾಂಧಳಾದ ಅತಿಪ್ರಭೆಯು ಈ ಕುಂಭಮುಖಿಯನ್ನೇ ತನ್ನ ಮಗನನ್ನು ಸಂಹರಿಸಿದ ಶೂರ್ಪನಖಿ ಎಂದು ತಿಳಿದು, ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಾಪ ಕೊಟ್ಟಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು, ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ “ಎಲೈ ಶೂರ್ಪನಖಿಯೇ! ನೀನು ಪುನಃ ರೂಪವಂತನನ್ನು ಮೋಹಿಸಿ ಮಾನಭಂಗ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯ ಸ್ವರೂಪಳಾಗೆಂದು“ ಶಾಪಕೊಟ್ಟು ಸಮೀಪದಲ್ಲಿರುವ ಪ್ರಪಾತಕ್ಕೆ ಹಾರಿ ಪ್ರಾಣ ಕಳೆದುಕೊಂಡಳು. ಈ ರೀತಿ ಯಷಿ ಪತ್ನಿಯ ಶಾಪದಿಂದ ದುಃಖತಪ್ತಳಾದ ಕುಂಭಮುಖಿಯು ನಡೆದ ವಿಚಾರವನ್ನು ತನ್ನ ಪತಿಯಾದ ಖರನಿಗೆ ತಿಳಿಸಿದಳು. ಖರಾಸುರನು ತನ್ನ ಪತ್ನಿಯಾದ ಕುಂಭಮುಖಿಯನ್ನು ಅನೇಕ ವಿಧವಾಗಿ ಸಂತೈಸಿ, ಈ ಶಾಪವು ನಿವಾರಣೆಯಾಗಿ ಮಕ್ಕಳನ್ನು ಪಡೆಯಲು ಮುಂದೇನು ಮಾಡಬೇಕೆಂದು ಯೋಚಿಸಿ ತನ್ನ ಕುಲ ಪುರೋಹಿತರಾದ ಶುಕ್ರಾಚಾರ್ಯರಲ್ಲಿ ಮೊರೆಹೋದನು. ವಿಷಯವನ್ನು ತಿಳಿದ ಶುಕ್ರಾಚಾರ್ಯರು ಎಲೈ ಖರಾಸುರನೇ, ನೀನು ಮಾಯಾಸುರನಿಂದ ನಿರ್ಮಿತವಾದ ಜ್ಯೇಷ್ಥ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಆ ಲಿಂಗವನ್ನು ಪೂಜಿಸಬೇಕೆಂದು, ನಿನ್ನ ಪತ್ನಿಯಾದ ಕುಂಭಮುಖಿಯು ಕೂಡಾ ನಿಷ್ಠೆಯಿಂದ ಜಗದಂಬಿಕೆಯಾದ ಅಮ್ರತೇಶ್ವರೀ ದೇವಿಯನ್ನು ಪೂಜಿಸಬೇಕೆಂದು ತಿಳಿಸಿದರು.

ಖರಾಸುರನು ಮಾಯಾಸುರನಿದ್ದಲ್ಲಿಗೆ ಹೋಗಿ ಶುಕ್ರಚಾರ್ಯರು ಹೇಳಿದ ಆ ಜ್ಯೇಷ್ಠ ಲಿಂಗವನ್ನು ತಂದು, ಮನೋಹರವಾದ ಶುಕಪುರ ಎಂಬ ಸ್ಥಳದಲ್ಲಿ (ಗಿಳಿಯಾರು, ಹರ್ತಟ್ಟು) ಪ್ರತಿಷ್ಠಿಸಿದನಲ್ಲದೇ ಸಮೀಪದಲ್ಲಿಯೇ ಜಗನ್ಮಾತೆಯಾದ ಅಮೃತೇಶ್ವರೀ ದೇವಿಯನ್ನು ಪ್ರತಿಷ್ಠಿಸಿ ದಂಪತಿಗಳೀರ್ವರು ಶುಕ್ರಚಾರ್ಯರು ತಿಳಿಸಿದಂತೆ ಉಮಾಮಹೇಶ್ವರರನ್ನು ಪೂಜಿಸುತ್ತಿದ್ದರು. ನಿದ್ರಾಹಾರಗಳನ್ನು ತ್ಯಜಿಸಿ ಅತ್ಯಂತ ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ದಂಪತಿಗಳಿಗೆ ಶಿವನು ಪ್ರತ್ಯಕ್ಷನಾಗಿ ಜ್ಞಾನೋಪದೇಶ ಮಾಡಿದನಲ್ಲದೇ “ ಕೆಲವು ಕಾಲಗಳ ನಂತರ ಶ್ರೀ ಮಹಾವಿಷ್ಣುವಿನ ಅವತಾರ ರೂಪನಾದ ಶ್ರೀ ರಾಮಚಂದ್ರನು ಈ ದಂಡಕಾರಣ್ಯಕ್ಕೆ ಬಂದಾಗ ಅವನೊಡನೆ ಯುದ್ಧ ಮಾಡಿ ಮುಕ್ತಿ ಹೊಂದುವಿ ” ಎಂದು ವರವನ್ನು ಅನುಗ್ರಹಿಸಿ, “ ಅಲ್ಲಿಯವರೆಗೆ ಇದೇ ಸ್ಥಳದಲ್ಲಿ ನೀನು ಪ್ರತಿಷ್ಠಿಸಿದ ಜ್ಯೇಷ್ಠಲಿಂಗವನ್ನು ಅರ್ಚಿಸುತ್ತಾ ಇರು.ಅಲ್ಲದೇ ನಿನ್ನ ನಿತ್ಯಕರ್ಮಾನುಷ್ಠಾನಗಳ ಅನುಕೂಲಕ್ಕಾಗಿ ಸರ್ವತೀರ್ಥ ಸಾನಿಧ್ಯ ಉಳ್ಳ ಸರೋವರವನ್ನು ನಿರ್ಮಿಸುತ್ತೇನೆಂದು ತಿಳಿಸಿದನಲ್ಲದೇ ಈ ಸರೋವರದಲ್ಲಿ ಗಂಗಾದಿ ಸಕಲ ತೀರ್ಥಗಳು ಸನ್ನಿಹಿತವಾಗಿರುತ್ತವೆ. ಇನ್ನು ಮುಂದೆ ಈ ಸರೋವರವು “ ವರುಣ ತೀರ್ಥವೆಂದು ಪ್ರಸಿದ್ಧವಾಗಲಿ “ ಎಂದು ಹರಸಿ ಅಂತರ್ಧಾನ ಹೊಂದಿದನು.

ಇದೇ ರೀತಿ ಕುಂಭಮುಖಿಯ ತಪಸ್ಸಿಗೆ ಮೆಚ್ಚಿದ ಅಮೃತೇಶ್ವರಿಯು ಮನೋಹರವೂ, ಕಾಂತಿಯುಕ್ತವೂ ಆದ ರೂಪಾತಿಶಯದಿಂದ ಆಕೆಗೆ ಪ್ರತ್ಯಕ್ಷಳಾಗಿ “ ಕುಂಭಮುಖಿಯೇ! ಬೇಕಾದ ವರಗಳನ್ನು ಕೇಳು “ ಎನ್ನಲು ದೇವಿಯ ದಿವ್ಯಸ್ವರೂಪ ದರ್ಶನದಿಂದ ಉಂಟಾದ ಸಂತೋಷಾತಿಶಯದಿಂದಲೂ ಋಷಿ ಪತ್ನಿಯ ಶಾಪ ಪ್ರಭಾವದಿಂದಲೂ ಭಾಂತಳಾಗಿ “ ತಾಯೇ ನೀನು ನಿತ್ಯ ಯೌವನೆಯಗಿ ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ” ಎಂದು ಬೇಡಿದಳು. ಮಂದಸ್ಮಿತೆಯಾದ ಅಮೃತೇಶ್ವರೀ ದೇವಿಯು ತಥಾಸ್ತು ಎಂದಳು. ಅಲ್ಲದೇ ಎಲೈ ಕುಂಭಮುಖಿಯೇ ! ಋಷಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯ ಇಲ್ಲ. ಆ ಕಾರಣದಿಂದಲೇ “ ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು “ ಎಂದು ಕೇಳುವ ಬದಲು “ ನೀನು ಮಕ್ಕಳನ್ನು ಪಡೆ” ಎಂದು ಕೇಳಿಕೊಂಡಿರುತ್ತೀ. ಆದರೂ ಚಿಂತಿಸಬೇಡ. ಇನ್ನು ಕೆಲವೇ ಸಮಯದ ನಂತರ ಇಲ್ಲಿಗೆ ಆಗಮಿಸುವ ಶ್ರೀ ರಾಮಚಂದ್ರನಿಂದ ನಿನ್ನ ಪತಿಯಾದ ಖರಾಸುರನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆಗ ನೀನು ಕೂಡಾ ಅನಾಯಾಸವಾಗಿ ಇಲ್ಲಿಯೇ ನೆಲೆಸಿರುವ ನನ್ನಲ್ಲಿ ಐಕ್ಯವನ್ನು ಹೊಂದುವಿ. ಅನಂತರ ಇದೇ ಸ್ಥಳದಲ್ಲಿ ಶಿವಲಿಂಗ ಸದೃಶ್ಯವಾದ ಲಿಂಗಗಳು ಆಗಾಗ ಉತ್ಪತ್ತಿಯಾಗುತ್ತವೆ. ಇವರೇ ನಿನ್ನ ಮಕ್ಕಳೆಂತ ತಿಳಿ. ಅನಂತರ ನಾನು “ಹಲವು ಮಕ್ಕಳ ತಾಯಿ”(Halavu makkala thayi)ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ “ ಎಂದು ತಿಳಿಸಿ ಅಲ್ಲಿಯೇ ಅಂತರ್ಧಾನ ಹೊಂದಿದಳು. ಕೆಲವು ಕಾಲಗಳ ನಂತರ ಸೀತಾ ಸಹಿತನಾದ ಶ್ರೀ ರಾಮಚಂದ್ರನು ವನವಾಸಕ್ಕೆ ಬಂದಾಗ ಶೂರ್ಪನಖಿಯ ನಿಮಿತ್ತವಾಗಿ ಖರಾಸುರನಿಗೂ ಶ್ರೀ ರಾಮನಿಗೂ ಯುದ್ಧವಾಯಿತು. ಶಿವನ ವರಪ್ರಸಾದದಿಂದ ಶ್ರೀ ರಾಮನೇ ಮಹಾವಿಷ್ಣುವಿನ ಅವತಾರವೆಂದು ತಿಳಿದು ಖರಾಸುರನು ಯುದ್ಧ ಮಾಡಿ ಮುಕ್ತಿಯನ್ನು ಹೊಂದಿದನು. ಕುಂಭಮುಖಿಯು ಶ್ರೀ ದೇವಿಯನ್ನು ಧ್ಯಾನ ಮಾಡುತ್ತಾ ಅಮೃತೇಶ್ವರೀ ದೇವಿಯಲ್ಲಿ ಐಕ್ಯ ಹೊಂದಿದಳು. ಅಂದಿನಿಂದ ಶ್ರೀ ಅಮೃತೇಶ್ವರೀ ದೇವಿಯ ಸನ್ನಿಧಿಯಲ್ಲಿ ಶಿವಲಿಂಗವು ಉದ್ಭವಿಸತೊಡಗಿತು. ಆದುದರಿಂದ ಶ್ರೀ ಅಮೃತೇಶ್ವರೀ ದೇವಿಯನ್ನು“ಹಲವು ಮಕ್ಕಳ ತಾಯಿ “ ಎಂದು ಕರೆಯಲಾರಂಭಿಸಿದರು. ಈಗ ಈ ಹೆಸರೇ ಪ್ರಸಿದ್ಧವಾಗಿದೆ.

ಶ್ರೀ ರಾಮಚಂದ್ರನು ದಂಡಕಾರಣ್ಯದಲ್ಲಿದ್ದ ಖರ ದೂಷಣಾದಿ ರಾಕ್ಷಸರನ್ನು ಸಂಹರಿಸಿದ ನಂತರ ಋಷಿಮುನಿಗಳು ನಿರ್ಭೀತರಾಗಿ ಅಲ್ಲಲ್ಲಿ ಆಶ್ರಮಗಳನ್ನು ಸ್ಥಾಪಿಸಿಕೊಂಡು ಯಜ್ಞಯಾಗಾದಿ ಕರ್ಮಗಳನ್ನು ಮಾಡಿಕೊಂಡಿದ್ದರು. ಆಗ ಶೂರ್ಪನಖಿಯಿಂದ ಅಕಾಲ ಮರಣಕ್ಕೆ ತುತ್ತಾದ ಅತಿಪ್ರಭೆಯ ಮಗನಾದ ಬಹುಶ್ರುತನು ಪೂರ್ವಾಜಿತ ಪಾಪಶೇಷಗಳಿಂದ ಬ್ರಹ್ಮರಾಕ್ಷಸನಾಗಿ ಇದೇ ಸ್ಥಳದಲ್ಲಿದ್ದು ಇಲ್ಲಿನ ಋಷಿಗಳನ್ನು, ಬ್ರಾಹ್ಮಣರನ್ನು ಪೀಡಿಸುತ್ತಾ ಇದ್ದನು. ಒಮ್ಮೆ ಶ್ರೀ ಅಮೃತೇಶ್ವರೀ ಸನ್ನಿಧಿಯಲ್ಲಿ ಋಷಿಗಳು ಯಜ್ಞವನ್ನು ನಡೆಸುತ್ತಿರುವಾಗ ಮಾಯಾರೂಪದಿಂದ ಬಂದು ಯಜ್ಞಶಿಷ್ಟವನ್ನು ಅಪಹರಿಸಿಕೊಂಡು ಹೋದನು. ತಮ್ಮ ಯಾಗಾದಿಗಳು ಈ ರೀತಿ ಹಾಳಾಗಿ ಹೋಗುವುದನ್ನು ನೋಡಿದ ಋಷಿಗಳು ಬ್ರಹ್ಮರಾಕ್ಷಸನ ಕೃತ್ಯವೇ ಇರಬಹುದೆಂದು ಊಹಿಸಿ ಈ ಬ್ರಹ್ಮರಾಕ್ಷಸನ ಸಂಹಾರಕ್ಕೆ ಶ್ರೀ ದೇವಿಯು ಸಮರ್ಥಳೆಂದು ತಿಳಿದು ಅನೇಕ ವಿಧವಾಗಿ ಶ್ರೀ ಅಮೃತೇಶ್ವರಿಯನ್ನು ಸ್ತೋತ್ರ ಮಾಡಿದರು. ಋಷಿಗಳ ಭಕ್ತಿಗೆ ಮೆಚ್ಚಿದ ಶ್ರೀ ದೇವಿಯು ಪ್ರತ್ಯಕ್ಷಳಾಗಿ “ ನಿಮಗೆ ಬೇಕಾದ ವರಗಳನ್ನು ಕೇಳಿರಿ “ ಎಂದು ಹೇಳಿದಳು. ಆಗ ಋಷಿಗಳು ’ಹೇ ದೇವಿಯೇ, ನಮ್ಮ ಯಜ್ಞಯಾಗಾದಿಗಳನ್ನು ನಾಶ ಮಾಡುವ ಈ ಬ್ರಹ್ಮರಾಕ್ಷಸನನ್ನು ನೀನು ಸಂಹರಿಸಿ ನಮಗೆ ರಕ್ಷಣೆಯನ್ನುಂಟು ಮಾಡಬೇಕು “ ಎಂದು ಪ್ರಾರ್ಥಿಸಿಕೊಂಡರು. ಆಗ ದೇವಿಯು ಋಷಿಗಳಿಗೆ ಅಭಯವನ್ನು ನೀಡುತ್ತಾ “ ಈ ಬ್ರಹ್ಮರಾಕ್ಷಸನನ್ನು ನಾನು ಮಹಾಮಾರಿ ಸ್ವರೂಪಿಣಿಯಾಗಿ ನಾಶಪಡಿಸಿ ನಿಮ್ಮ ಯಜ್ಞ ಯಾಗದಿಗಳನ್ನು ಸಾಂಗವಾಗಿ ನೆರವೇರುವಂತೆ ಅನುಗ್ರಹಿಸುತ್ತೇನೆ. ನೀವು ಇನ್ನು ಮುಂದೆ ಮಹಾ ’ ಮಾರೀ’(Maari) ಸ್ವರೂಪಳಾದ ನನ್ನನ್ನು ಮದ್ಯ ಮಾಂಸಾದಿಗಳಿಂದ ಅರ್ಚಿಸಿರಿ. ನಾನು “ಸಾತ್ವಿಕರೂಪಿಣಿಯಾದ “ಅಮೃತೇಶ್ವರೀಯಾಗಿಯೂ “, “ ತಾಮಸರೂಪಿಣಿಯಾದ ಮಾರಿಯಾಗಿಯೂ “ಇಲ್ಲಿ ನೆಲೆಸಿ ಇಲ್ಲಿಯ ಜನರ ಸಕಲ ಸಂಕಷ್ಟಗಳನ್ನು ಪರಿಹರಿಸುತ್ತಾ ಇರುತ್ತೇನೆಂದು “ ಅಭಯಕೊಟ್ಟು ಅಂತರ್ಧಾನ ಹೊಂದಿದಳು.

ಶ್ರೀ ದೇವಿಯು “ಮಾರಿ” ಸ್ವರೂಪದಿಂದ ಬ್ರಹ್ಮರಾಕ್ಷಸನನ್ನು ನಾಶ ಮಾಡಿ ಅದಕ್ಕೆ ಮುಕ್ತಿಯನ್ನು ಕರಣಿಸಿ ಇದೇ ಸನ್ನಿಧಿಯಲ್ಲಿ ನೆಲೆಸಿ ಭಕ್ತರ ಸಮಸ್ತ ರೋಗಾದಿಗಳನ್ನು ಭೂತಪ್ರೇತಾದಿ ಬಾಧೆಗಳನ್ನು ಪರಿಹರಿಸುತ್ತಾ ಜಗತ್ತಿಗೆ ಮಂಗಲವನ್ನುಂಟುಮಾಡುತ್ತಾ ಒಂದಂಶದಿಂದ“ಮಾರಿ” ದೇವತೆಯಾಗಿಯೂ, ಇನ್ನೊಂದಂಶದಿಂದ “ಅಮೃತೇಶ್ವರೀ” ಯಾಗಿಯೂ ವಿರಾಜಿಸುತ್ತಾಳೆ. ದೇವಿಯ ಮುಂಭಾಗದಲ್ಲಿ “ಶ್ರೀ ರಕ್ತೇಶ್ವರೀ” ಯ ಶಿಲಾ ಮೂರ್ತಿ ಇದೆ. ಪರಿವಾರ ದೇವತೆಗಳಾದ “ವೀರಭದ್ರನ ಗುಡಿ” ಹಾಗೂ“ನಾಗ”ನ ಶಿಲಾಮೂರ್ತಿ ಮತ್ತು ಕಾಷ್ಠ ಶಿಲ್ಪದ ಮೂರ್ತಿಗಳಾದ “ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು, ನಂದಿ” ಹಾಗೂ “ಪಂಜುರ್ಲಿ” ದೈವಗಳ ಗುಡಿ ಅತೀ ಸನಿಹದಲ್ಲೇ ಇದೆ. ವರುಣ ತೀರ್ಥವು ದಕ್ಷಿಣದಲ್ಲಿದೆ. ಇದರ ನಡುವೆ “ಅಮೃತೇಶ್ವರೀ“ಯು ವಿರಾಜಮಾನಳಾಗಿದ್ದಾಳೆ “ರಾಜಶೇಖರ” ಮತ್ತು “ಹಿರೇ ಮಹಾಲಿಂಗೇಶ್ವರ ದೇವಸ್ಥಾನಗಳು” ಅನತಿ ದೂರದಲ್ಲಿಯೇ ಇವೆ.ಧರ್ಮನಾಥಿ ಪಂಥದ ಜೋಗಿ ಜನಾಂಗದವರು ದೇವಿಯ ನಿತ್ಯ ಪೂಜೆಯನ್ನು ಅನಾದಿ ಕಾಲದಿಂದ ನಡೆಸಿಕೊಂಡು ಬರುತ್ತಿರುವುದು ಕ್ಷೇತ್ರದ ವೈಶಿಷ್ಟ್ಯ..!!

ಹೀಗೆ ನಿತ್ಯ ಯೌವ್ವನೆಯಾಗಿ ಕಂಗೊಳಿಸುವ ಸರ್ವಮಂಗಳೆ ಶಿವನರಸಿ ಶ್ರೀ ಅಮೃತೇಶ್ವರೀ ಅಮ್ಮನವರನ್ನು ನಿವೂ ಕೂಡಾ ಒಮ್ಮೆ ಕಂಡು ಪುನೀತರಾಗಿ. ಶ್ರೀ ದೇವಿಯ ಕೃಪೆಗೆ ಪಾತ್ರರಾಗಿ. ದಾರಿಯ ವಿವರ : ಉಡುಪಿ- ಕುಂದಾಪುರದ ಮೂಲಕ ಕೋಟಕ್ಕೆ ಬಂದರೆ ಈ ದೇವಿಯ ಸನ್ನಿಧಿ ಪಶ್ಚಿಮಕ್ಕೆ ಕಾಣುತ್ತದೆ. ಕೋಟ ಬಸ್ಸು ನಿಲ್ದಾಣದಲ್ಲಿ ಇಳಿದು ಅಮ್ಮನ ಸನ್ನಿಧಾನಕ್ಕೆ ಹೋಗಬಹುದು.

ವಿಳಾಸ :-ಶ್ರೀ ಕೋಟ ಅಮೃತೇಶ್ವರಿ ಅಮ್ಮನವರು, ಕೋಟ, ಉಡುಪಿ-ತಾ & ಜಿಲ್ಲೆ.ಕೃಪೆ :ನಮ್ಮ ತುಳುನಾಡು

0 comments: