ಬೆಳ್ತಂಗಡಿಯ ಅರಸಿನಮಕ್ಕಿಯ ಗುರುಪ್ರಕಾಶ್ ಕರ್ಕೇರ ಅವರ ಲೀಥಿಯಮ್-ಆಕ್ಸಿಜನ್ ಬ್ಯಾಟರಿ ಕುರಿತ ಸಂಶೋಧನೆಗೆ ಅಕಾಡೆಮಿ ಆಫ್ ಸೈಂಟಿಫಿಕ್ ಆಂಡ್ ಇನ್ನೋವೇಟಿವ್ ರಿಸರ್ಚ್ (ಎಸಿಎಸ್‌ಐಆರ್) ಡಾಕ್ಟರೆಟ್ ನೀಡಿದೆ.ಪ್ರಧಾನ ಮಂತ್ರಿ ಅಧ್ಯಕ್ಷರಾಗಿರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್‌ಐಆರ್)ನ ಅಂಗಸಂಸ್ಥೆ ತಮಿಳುನಾಡಿನ ಕಾರೈಕುಡಿಯಲ್ಲಿರುವ ಸೆಂಟ್ರಲ್ ಇಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಇಸಿಆರ್‌ಐ)ನ ಚೆನ್ನೈ ಕ್ಯಾಂಪಸ್‌ನಲ್ಲಿ ಗುರುಪ್ರಕಾಶ್ ಕಳೆದ ಐದು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದರು. Development of efficient oxygen electrocatalysts and electrolytes for Li-O2 batteries ಎಂಬ ಥೀಸಿಸ್‌ಗೆ ಈಗ ಮಾನ್ಯತೆ ಲಭಿಸಿದೆ. ಎರಡು ಭಾರತೀಯ ಪೇಟೆಂಟ್‌ಗಳಲ್ಲಿ ಸಂಶೋಧಕರಾಗಿ ಹಾಗೂ ಆರು ಅಂತಾರಾಷ್ಟ್ರೀಯ ಸೈಂಟಿಫಿಕ್ ಜರ್ನಲ್‌ಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ.ಅರಸಿನಮಕ್ಕಿಯ ಕೆರೆಕೋಡಿ ದಿ.ದಾಸಪ್ಪ ಪೂಜಾರಿ- ದೇಜಮ್ಮ ದಂಪತಿಯ ಪುತ್ರರಾಗಿರುವ ಗುರುಪ್ರಕಾಶ್ ಈಗ ಇಲೆಕ್ಟ್ರೋಕೆಮಿಕಲ್ ಎನರ್ಜಿ ಸ್ಟೋರೇಜ್ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸುವ ಜರ್ಮನಿಯ ಹೆಲ್ಮ್‌ಹೋಟ್ಜ್ ಇನ್‌ಸ್ಟಿಟ್ಯೂಟ್ ಉಲ್ಮ್ (ಎಚ್‌ಐಯು) ಸಂಸ್ಥೆಗೆ ಸಂಶೋಧಕರಾಗಿ ಆಯ್ಕೆಯಾಗಿದ್ದಾರೆ.
ಏನಿದು ಬ್ಯಾಟರಿ?: ಪ್ರಸಕ್ತ ಮೊಬೈಲ್ ಸಹಿತ ಇಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು ಹಾಗೂ ವಿದ್ಯುತ್ ಚಾಲಿತ ವಾಹನಗಳಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಬಳಕೆಯಲ್ಲಿದೆ. ಆದರೆ ಈ ಬ್ಯಾಟರಿಗಳ ಸಾಮರ್ಥ್ಯ ಕಡಿಮೆ. ಇದಕ್ಕೆ ಹೋಲಿಸಿದರೆ ಲೀಥಿಯಂ ಆಕ್ಸಿಜನ್ ಬ್ಯಾಟರಿಗಳ ಸಾಮರ್ಥ್ಯ ಹೆಚ್ಚು. ಅಂದರೆ, ಲೀಥಿಯಂ ಅಯಾನ್ ಬ್ಯಾಟರಿ ಅಳವಡಿಸಿದ ಒಂದು ವಾಹನ 150 ಕಿ.ಮೀ. ಕ್ರಮಿಸಿದ ಬಳಿಕ ಅದನ್ನು ಚಾರ್ಜ್ ಮಾಡಬೇಕಾಗುತ್ತದೆ. ಲೀಥಿಯಂ ಆಕ್ಸಿಜನ್ ಬ್ಯಾಟರಿ 500 ಕಿ.ಮೀ. ಕ್ರಮಿಸಬಹುದು. ಹಾಗಾಗಿ ಇದು ಪೆಟ್ರೋಲ್‌ಗೆ ಸಮರ್ಥ ಪರ್ಯಾಯ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಲೀಥಿಯಂ ಆಕ್ಸಿಜನ್ ಬ್ಯಾಟರಿ ಇನ್ನೂ ಬಳಕೆಯಲ್ಲಿಲ್ಲ. ಬ್ಯಾಟರಿ ಜೀವಿತಾವಧಿ ಸಹಿತ ಒಂದಷ್ಟು ನಕಾರಾತ್ಮಕ ಅಂಶಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಮುಂದುವರಿದಿದೆ. ಈ ನಿಟ್ಟಿನಲ್ಲಿ ಗುರುಪ್ರಕಾಶ್ ನಡೆಸಿರುವ ಸಂಶೋಧನೆ ಮಹತ್ತರವಾದದ್ದು.
via :vijayavani
0 comments: