Monday, June 17, 2019

‘ಜನಸೇವೆಯೇ ಜನಾರ್ಧನ ಸೇವೆ’ ಎಂದು ನಂಬಿರುವ ತುಳುಕೂಟ ಕುವೈಟ್

‘ಜನಸೇವೆಯೇ ಜನಾರ್ಧನ ಸೇವೆ’ ಎಂದು ನಂಬಿರುವ ತುಳುಕೂಟ ಕುವೈಟ್ ಬಡ ಹಾಗೂ ಕೆಳ ವರ್ಗದ ಜನರ ಅಭಿವೃದ್ಧಿಗಾಗಿ ಸದಾ ಸನ್ನದ್ಧವಾಗಿರುತ್ತದೆ. ಅದರಲ್ಲೂ ಸಮಾಜದಲ್ಲಿ ಪ್ರಾಥಮಿಕ ಸೌಲಭ್ಯಗಳಿಂದ ವಂಚಿತರಾಗಿ ಬದುಕುತ್ತಿರುವವರಿಗೆ ತನ್ನ ಸಂಪೂರ್ಣ ಸಹಾಯ ನೀಡುವ ನಿಟ್ಟಿನಲ್ಲಿ ತುಳುಕೂಟ ಕುವೈಟ್ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ಪ್ರಸಕ್ತ ವರ್ಷದಲ್ಲಿ ಆರಂಭಗೊಂಡ ಹೊಸ ಯೋಜನೆಯೇ ’ಆಶ್ರಯ ಯೋಜನೆ’. ಇದರಲ್ಲಿ ನಿರಾಶ್ರಿತರಿಗೆ ಹೊಸ ಮನೆಯನ್ನು ನಿರ್ಮಿಸಿ ಅವರ ಬದುಕಿಗೆ ಆಸರೆಯಾಗುವ ನಿರ್ಧಾರವೊಂದನ್ನು ತುಳುಕೂಟ ತೆಗೆದುಕೊಂಡಿದೆ.2019 ರ ತುಳುಕೂಟ ರಸಮಂಜರಿ ಕಾರ್ಯಕ್ರಮದಂದು ನೀಡಿದ ಮಾತಿನಂತೆ ಈಗಾಗಲೇ 2 ಮನೆಗಳು ನಿರ್ಮಾಣವಾಗಿ ಮಳೆಗಾಲಕ್ಕೂ ಮುಂಚೆಯೇ 2 ಬಡ ಕುಟುಂಬಗಳಿಗೆ ಸೂರು ಕಲ್ಪಿಸಲಾಗಿದೆ.2019 ಮೇ 9 ರಂದು ತುಳುಕೂಟ ಕುವೈಟ್ ನ ಅಧ್ಯಕ್ಷರಾದ ಶ್ರೀ ರಮೇಶ್ ಎಸ್. ಭಂಡಾರಿಯವರು ಬಜ್ಪೆ, ಎಡಪದವಿನ ಶ್ರೀಮತಿ ಕಲ್ಯಾಣಿ ಎಂಬುವವರಿಗೆ ಸುಸಜ್ಜಿತವಾದ ಸುಂದರ ಮನೆಯೊಂದನ್ನು ಹಸ್ತಾಂತರಿಸಿದರು. ಈ ಮನೆ ನಿರ್ಮಾಣಕ್ಕಾಗಿ ತುಳುಕೂಟ ಕುವೈಟ್ ಸುಮಾರು 1.5 ಲಕ್ಷ ಸಹಾಯಧನ ನೀಡಿದೆ. ಈ ಮನೆಯ ಫಲಾನುಭವಿಯಾದ ಶ್ರೀಮತಿ ಕಲ್ಯಾಣಿಯವರು ಗೃಹನಿರ್ಮಾಣದ ವೆಚ್ಚ ಭರಿಸಿ ತನಗೆ ಹೊಸ ಜೀವನ ಕಲ್ಪಿಸಿದ್ದಕ್ಕಾಗಿ ತುಳುಕೂಟ ಕುವೈಟ್ ಗೆ ತುಂಬು ಹೃದಯದ ಧನ್ಯವಾದ ಸಲ್ಲಿಸಿದ್ದಾರೆ.

ಇದರೊಂದಿಗೆ ತುಳುಕೂಟ ಕುವೈಟ್ ಮೇ 10, 2019 ರಂದು ‘ಹ್ಯುಮಾನಿಟಿ’ ಸಂಸ್ಥೆಯ ಸಹಯೋಗದೊಂದಿಗೆ ಇನ್ನೊಂದು ಸುಂದರ ಸುಸಜ್ಜಿತವಾಗಿ ನಿರ್ಮಾಣಗೊಂಡ ಮನೆಯನ್ನು ಮಂಗಳೂರು, ಕಡಂದಲೆ, ಬೋಳಂತೆಯ ಶ್ರೀಮತಿ ರತ್ನಾ ಪುರುಷ ಮತ್ತು ಕುಟುಂಬಕ್ಕೆ ಹಸ್ತಾಂತರಿಸಿತು. ತುಳುಕೂಟ ಕುವೈಟ್ ನ ಅಧ್ಯಕ್ಷರಾದ ಶ್ರೀ ರಮೇಶ್ ಭಂಡಾರಿ ಹಾಗೂ ಕೂಟದ ಸಲಹೆಗಾರರಾದ ಶ್ರೀ ಐಕಳ ಸುಧಾಕರ ಶೆಟ್ಟಿಯವರ ಉಪಸ್ಥಿತಿಯಲ್ಲಿ ನೂತನ ಮನೆಯ ಗೃಹಪ್ರವೇಶವನ್ನೂ ನಡೆಸಲಾಯಿತು. ’ಹ್ಯುಮಾನಿಟಿ’ ಸಂಸ್ಥೆಯ ಶ್ರೀ ರೋಶನ್ ಬೆಳ್ಮಣ್ ಅವರ ಮೂಲಕ ಈ ಬಡ ಕುಟುಂಬದ ಪರಿಸ್ಥಿತಿಯ ಮಾಹಿತಿ ಪಡೆದ ತುಳುಕೂಟ ಈ ಮನೆ ನಿರ್ಮಾಣದ ಸಂಪೂರ್ಣ ವೆಚ್ಚವನ್ನು(5 ಲಕ್ಷ ರುಪಾಯಿಗಳು) ಭರಿಸಿ ತನ್ನ ಉದಾತ್ತತೆಯನ್ನು ಮೆರೆದಿದೆ. ಈ ಮನೆಯ ಫಲಾನುಭವಿಯಾದ ಶ್ರೀಮತಿ ರತ್ನಾ ಹಾಗೂ ಅವರ ಮಗಳು ತಮಗೆ ಸೂರು ನೀಡಿ ಬದುಕನ್ನು ಸುಂದರವಾಗಿಸಿದ ತುಳುಕೂಟ ಹಾಗೂ ಹ್ಯುಮಾನಿಟಿ ಸಂಸ್ಥೆಗೆ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಫಾದರ್ ಮಾರ್ಕ್ ವಾಲ್ಡರ್ ಹಾಗೂ ಕೆಲವು ಪಂಚಾಯತ್ ಮುಖಂಡರ ಸಮ್ಮುಖದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದಂದು ಮಾನವೀಯ ಕಳಕಳಿಯ ತುಳುಕೂಟ ಕುವೈಟ್ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.ಎರಡು ಬಡಕುಟುಂಬಗಳಿಗೆ ಆಶ್ರಯ ನೀಡಿ ಹೊಸ ಆಶಾಕಿರಣ ಮೂಡಿಸುವಲ್ಲಿ ಯಶಸ್ವಿಯಾದ ಈ ಹೊಸ ಯೋಜನೆಗೆ ಸಂಪೂರ್ಣ ಬೆಂಬಲ ನೀಡಿದ ತನ್ನ ಎಲ್ಲಾ ಕೊಡುಗೈದಾನಿಗಳಿಗೆ, ಸದಸ್ಯರಿಗೆ, ಹಿತೈಷಿಗಳಿಗೆ ತುಳುಕೂಟ ಕುವೈಟ್ ತನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

0 comments: