Sunday, June 2, 2019

ಹಳ್ಳಿ ಮದ್ದಿನಿಂದ ಸಾವಿರಾರು ಜನರನ್ನು ಬದುಕಿಸಿದ ನಾಟಿ ವೈದ್ಯ ಪ್ರೇಮಾ ಪೂಜಾರ್ತಿ

ಇವರು ನಾಟಿ ವೈದ್ಯೆ ಪ್ರೇಮ. ವಿಷಕಾರಕ ಹಾವುಗಳ ಕಡಿತಕ್ಕೆ ಒಳಪಟ್ಟ, ಸರ್ಪಸುತ್ತು, ಅಗ್ನಿಸುತ್ತು ಮತ್ತು ಅಲರ್ಜಿ ಮುಂತಾದ ತೊಂದರೆಗಳಿಗೆ ತುತ್ತಾಗಿ ಪ್ರಾಣಾಪಾಯದಲ್ಲಿದ್ದವರನ್ನು ತಾನು ನೀಡುವ ಹಳ್ಳಿ ಮದ್ದಿನ ಮೂಲಕ ಬದುಕಿಸಿ ಅವರಿಗೆ ಹೊಸ ಬದುಕನ್ನು ನೀಡುತ್ತಿರುವವರು ನಾಟಿ ವೈದ್ಯೆ ಪ್ರೇಮಾ ಪೂಜಾರ್ತಿ.ಕಾರ್ಕಳ ದುರ್ಗದ ಮಲೆಬೆಟ್ಟುವಿನ ದಿ. ಕೃಷ್ಣಪ್ಪ ಪೂಜಾರಿ ದೇಜು ದಂಪತಿಯ 3 ನೇ ಪುತ್ರಿಯಾಗಿ ಜನಿಸಿರುವ ಪ್ರೇಮಾ ಅವರು ಮೂಡುಬಿದಿರೆ ಸಮೀಪದ ಕೆಲ್ಲಪುತ್ತಿಗೆ ಗ್ರಾಮದ ಪೂಲೆದೊಟ್ಟು ನಿವಾಸಿ ಕೃಷ್ಣಪ್ಪ ಪೂಜಾರಿಯನ್ನು ಮದುವೆಯಾಗಿದ್ದು ಇವರಿಗೆ 12 ಮಕ್ಕಳಿದ್ದಾರೆ. 62ರ ಹರೆಯದವರಾಗಿರುವ ಪ್ರೇಮಾ ಅವರು ಕಳೆದ ನಲವತ್ತು ವರ್ಷಗಳಿಂದ ಹಳ್ಳಿ ಮದ್ದನ್ನು ನೀಡುತ್ತಾ ಬರುತ್ತಿದ್ದಾರೆ. ಗಿಡ ಮೂಲಿಕೆ ಮತ್ತು ವಿವಿಧ ಔಷಧೀಯ ಗುಣಗಳನ್ನು ಹೊಂದಿರುವ ಎಲೆಗಳನ್ನು ತಂದು ಕಲ್ಲಿನಲ್ಲಿ ಅರೆದು ಅದನ್ನು ತನ್ನ ಕೈಯಿಂದಲೇ ಲೇಪಿಸಿ ಸಾವಿರಾರು ಜನರನ್ನು ಈವರೆಗೆ ಗುಣಪಡಿಸಿದ್ದಾರೆ.

ತನ್ನ ತಾಯಿ ದೇಜು ಪೂಜಾರ್ತಿ ಅವರಿಂದ ಹಳ್ಳಿಮದ್ದಿನ ಬಗ್ಗೆ ತಿಳಿದುಕೊಂಡಿರುವ ಪ್ರೇಮಾ ಅವರು ತನ್ನ 18ನೇ ವಯಸ್ಸಿನಿಂದಲೇ ಹಳ್ಳಿ ಮದ್ದು ನೀಡಲು ಆರಂಭಿಸಿದ್ದು, ಹಳ್ಳಿ ಮದ್ದಿನ ತಯಾರಿಕೆಯ ಜೊತೆಗೆ ಕೃಷಿಯಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಕೇರಳ ಸಹಿತ ಜಿಲ್ಲೆಯ ಹಲವಾರು ಜನರು ಇವರಿಂದ ಹಳ್ಳಿ ಮದ್ದನ್ನು ಪಡೆದುಕೊಳ್ಳಲು ಬರುತ್ತಿರುವುದು ವಿಶೇಷ. ಹಾವು ಕಡಿತಕ್ಕೊಳಪಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಡಾಕ್ಟರ್‌ಗಳು ತಮ್ಮಿಂದ ಸಾಧ್ಯವಿಲ್ಲವೆಂದು ಹಿಂದೆ ಬಿಟ್ಟಿರುವ ಕೆಲವು ರೋಗಿಗಳನ್ನು ತನ್ನ ಹಳ್ಳಿಮದ್ದಿನ ಮೂಲಕವೇ ಗುಣಪಡಿಸಿದ ಕೀರ್ತಿ ಇವರದ್ದಾಗಿದೆ.ಕೆಲ್ಲಪುತ್ತಿಗೆಯ ಭೂತರಾಜ ಗುಡ್ಡೆ ದೈವಸ್ಥಾನ ಸಮಿತಿ, ಫ್ರೆಂಡ್ಸ್ ವಿಘ್ನೇಶ್ವರ ಮಾರ್ನಾಡ್, ಬಿಲ್ಲವ ಸಂಘ, ಧರೆಗುಡ್ಡೆ ಗಣೇಶೋತ್ಸವ ಸಮಿತಿ, ಮೂಡುಬಿದಿರೆಯ ಜೇಸಿಐ ಕ್ಲಬ್‌ ಹಾಗೂ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿದ್ದಾರೆ.

0 comments: