Thursday, July 11, 2019

ದೈವದ ಮೂರ್ತಿಯಲ್ಲಿನ ಬದಲಾವಣೆ ಮೋಸಕ್ಕೆ ದಾರಿಯಾಗದಿರಲಿ!!!

ದೈವಾರಾಧನೆಯಲ್ಲಿ ಆದಷ್ಟು ಬದಲಾವಣೆಗಳು ಬೆರ್ಯಾವುದರಲ್ಲೂ ಅಗಿರಲಿಕ್ಕಿಲ್ಲ. ಹೊಸದಾಗಿ ದೈವ ನಂಬುವುದರಿಂದ ಹಿಡಿದು ನೇಮ, ಕೋಲ ಮತ್ತು ಅಗೇಲು ಪರ್ವ ನಡೆಸುವುದರಲ್ಲೂ ಹಲವಾರು ಬದಲಾವಣೆಗಳು ಅಗುತ್ತಲೇ ಇವೆ. ಪರಿವರ್ತನೆ ಜಗದ ನಿಯಮವೆಂಬತೆ ಇದನ್ನು ತಡೆಯಲೂ ಸಾಧ್ಯವಿಲ್ಲ. ಆದರೆ ಬದಲಾವಣೆಗಳ ಕಾರಣ ಮತ್ತು ಅದರ ಉದ್ದೇಶ ನಮಗೆ ತಿಳಿದರೆ ಉತ್ತಮ ಎಂಬುದು ನನ್ನ ಅನಿಸಿಕೆ. ನಾನೀಗ ಹೇಳಹೊರಟಿರುವ ವಿಷಯ ಕಲ್ಲುರ್ಟಿ ಮತ್ತು ಮಂತ್ರಜಾವದೆ ದೈವಗಳ ಮೂರ್ತಿಯಲ್ಲಿರುವ ಗೊಂದಲಗಳ ಬಗ್ಗೆ. ಈ ಎರಡು ದೈವಗಳು ಒಂದೇ ಶಕ್ತಿಗಳೆಂಬ ನಂಬಿಕೆ ಇದ್ದರೂ ಎರಡೂ ದೈವಗಳ ಕಥೆ ಸಂಪೂರ್ಣ ಭಿನ್ನವಾಗಿದೆ. ಅದಲ್ಲದೇ ಕೊರತಿ, ಮೈಯೊಂತಿ, ಪೊಸ ಭೂತ, ತೂ ಕತ್ತೇರಿ ಇವುಗಳನ್ನೆಲ್ಲವೂ ಕಲ್ಲುರ್ಟಿಯ ಅಂಶವೆಂದು ಹೇಳುವ ಪರಿಪಾಠ ಇತ್ತೀಚಿಗೆ ಬಹಳ ಹೆಚ್ಚಾಗಿದೆ. ಒಂದು ರೀತಿ ಶ್ರೀ ದೇವಿಯ ಅವತಾರಗಳನ್ನು ಬಿಂಬಿಸಿದಂತೆ. ಆದರೆ ಕೊರತಿ, ಮೈಯೊಂತಿ ಗಳ ಕಥೆಗಳು ಭಿನ್ನವಾಗಿದೆ ಮತ್ತು ಇವರು ತುಳುನಾಡಿನಲ್ಲಿ ಮಾನವರಾಗಿ ಬದುಕಿ ಬಾಳಿದ ಸ್ತ್ರೀಯರು. ಕಲ್ಲುರ್ಟಿ ಮತ್ತು ಮಂತ್ರಜಾವದೆಗಳು ಒಂದೇ ಶಕ್ತಿಯೋ ಅಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಈ ಎರಡೂ ದೈವಗಳ ಮೂರ್ತಿಗಳು ಅಥವಾ ಪಾಪೆಗಳು ಹಿಂದೆ ಒಂದೇ ರೀತಿಯಲ್ಲಿ ಇತ್ತು. ಇದು ಸತ್ಯ ಸಂಗತಿ. ಕೆಲವು ದಶಕಗಳ ಹಿಂದೆ ಮೂರ್ತಿಗಳು ಬಹಳ ಕಡಿಮೆ ಇದ್ದವು ಹೆಚ್ಚಾಗಿ ಈ ದೈವಗಳಿಗೆ ಬೆಳ್ಳಿಯ ಪಾಪೆ ಬಳಸುತ್ತಿದ್ದರು ಆದರೆ ಈಗ ಮೂರ್ತಿಯ ಉಪಯೋಗ ಹೆಚ್ಚಾಗಿದೆ. ಪಾಪೆಯಲ್ಲಿ ಮತ್ತು ಮೂರ್ತಿಯಲ್ಲಿ ಕಲ್ಲುರ್ಟಿಗೆ ಮತ್ತು ಮಂತ್ರಜಾವದೆಗೆ ಒಂದೇ ರೀತಿಯ ಆಕಾರಗಳಿದ್ದವು ಯಾವುದೇ ವ್ಯತ್ಯಾಸಗಳಿರಲಿಲ್ಲ. ಒಂದು ಕೈಯಲ್ಲಿ ನಾಗಬೆತ್ತ ಮತ್ತೊಂದು ಕೈಯಲ್ಲಿ ದೊಂದಿ ಹಿಡಿದ ಮೂರ್ತಿ ಇದಾಗಿದ್ದು ಮಂತ್ರಜಾವದೆಯ ಮೂರ್ತಿಯೂ ಇದೇ ರೀತಿ ಇತ್ತು.

ಇಂದಿಗೂ ದೊಂದಿ ಮತ್ತು ನಾಗ ಬೆತ್ತ ಹಿಡಿದ ಮಂತ್ರಜಾವದೆಯ ಅನೇಕ ಪಾಪೆ ಮತ್ತು ಮೂರ್ತಿಗಳು ಇವೆ. ಆದರೆ ಈಗ ಮಂತ್ರ ಜಾವದೆಯ ಮೂರ್ತಿಯ ಎಡ ಕೈಯಲ್ಲಿ ದೊಂದಿಯ ಬದಲು ಘಂಟಾಮಣಿಯನ್ನು ನೀಡಿ ಕಲ್ಲುರ್ಟಿ ಮತ್ತು‌ ಮಂತ್ರಜಾವದೆಯ ಮೂರ್ತಿಗಳಿಗೆ ವ್ಯತ್ಯಾಸಗಳನ್ನು ಮಾಡಲಾಗಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಯಾಕೆಂದರೆ ಒಂದು ಮನೆಯಲ್ಲಿ ಅನೇಕ ದೈವಗಳಿದ್ದರೆ ಈ ಮೂರ್ತಿಗಳಿಂದ ಗುರುತು ಹಿಡಿಯಲು ಸುಲಭ. ಆದರೆ ಈ ಒಂದು ಬದಲಾವಣೆಗಳಿಂದ ಅನೇಕ ಕುಟುಂಬಗಳು ಮೋಸ ಹೋಗಿವೆ ಮತ್ತು ಮೋಸಹೋಗುತ್ತಿವೆ. ಇದರಿಂದ ಮಂತ್ರಜಾವದೆಯೊಟ್ಟಿಗೆ ಕಲ್ಲುರ್ಟಿ ದೈವವು ಉಚಿತವಾಗಿ ಆರಾಧನೆ ಪಡೆಯುವಂತಾಗಿದೆ. ಹೌದು, ಒಂದು ಮನೆಯಲ್ಲಿ ಮಂತ್ರಜಾವದೆ ದೈವವನ್ನು ಹೊಸದಾಗಿ ನಂಬುವ ಸಂದರ್ಭದಲ್ಲಿ ಮನೆಯವರು ತಮಗೆ ತಿಳಿದಂತೆ ದೊಂದಿ ಮತ್ತು ನಾಗಬೆತ್ತ ಹಿಡಿದ ಮೂರ್ತಿಯನ್ನು ತಂದರು. ಅದನ್ನು ಮನೆಯಲ್ಲಿ ಇಟ್ಟು ಅದಕ್ಕೆ ಬೇಕಾದ ವಿಧಿವಿಧಾನಗಳನ್ನು ಮಾಡಿ ದೈವವನ್ನು ನಂಬಲಾಯಿತು. ನಂತರ ಮನೆಯಲ್ಲಿ ಯಾವುದೋ ಕಾರಣಕ್ಕೆ ಸಮಸ್ಯೆ ಬಂದಾಗ ದೈವ ದರ್ಶನ ಅಥವಾ ಪ್ರಶ್ನೆ ಇಟ್ಟಾಗ ಅಲ್ಲಿ ಅವರು ಹೇಳುವುದು ನೀವು ಮಂತ್ರಜಾವದೆಯ ಮೂರ್ತಿಯ ಬದಲು ಕಲ್ಲುರ್ಟಿಯ ಮೂರ್ತಿ ಇಟ್ಟಿದ್ದೀರಿ ಅದ್ದರಿಂದ ಕಲ್ಲುರ್ಟಿ ದೈವ ಬಂದಿದೆ ಮಂತ್ರಜಾವದೆಯೊಂದಗೆ ಕಲ್ಲುರ್ಟಿಯನ್ನೂ ನಂಬಬೇಕೆಂದು. ಇಂತಹ ಘಟನೆ ಅನೇಕ ಕಡೆ ನಡೆದಿವೆ. ನಡೆಯುತ್ತಿವೆ. ದೈವಗಳ ಬಗ್ಗೆ ಅವುಗಳ ಅರಾಧನೆಯ ಬಗ್ಗೆ ಸರಿಯಾಗಿ ತಿಳಿಯದೇ ಮನೆಯವರು ಇದಕ್ಕೆ ತಲೆ ಅಲ್ಲಾಡಿಸುತ್ತಾರೆ. ಕೆಲವೊಂದು ನಿರ್ದಿಷ್ಟ ದೈವಗಳ ಮೂರ್ತಿಗಳಿಗೆ ಅದರದೇ ಆದ ವ್ಯತ್ಯಾಸಗಳು ಬಿಟ್ಟರೆ ಉಳಿದೆಲ್ಲವೂ ನಂಬಿದಂತಹ ವ್ಯಕ್ತಿ ತನ್ನ ಕಲ್ಲನೆಗನುಸಾರವಾಗಿ ಎರಕಹೊಯ್ದ ಮಾಡಿಸಿರುವ ಮೂರ್ತಿಗಳಾಗಿವೆ. ಈಗ ಎಲ್ಲವೂ ರೆಡಿ ಮೇಡ್ ಅಚ್ಚು ಮಾಡಿದ ಮೊಗ ಮೂರ್ತಿಗಳಾಗಿರುವುದರಿಂದ ಹಿಂದಿನ ಆ ಪ್ರಾಚೀನ ಮತ್ತು ವಿಭಿನ್ನ ಮೂರ್ತಿಗಳು ನೋಡಲು ಅಪರೂಪ. ಒಂದು ಗುತ್ತಿನ ಮನೆಯಲ್ಲಿ ಇದ್ದ ಜುಮಾದಿಯ ಮೊಗ ಇನ್ನೊಂದು ಗುತ್ತಿನ ಮನೆಗಾಗುವಾಗ ಬೇರೆಯೇ ರೀತಿಯಲ್ಲಿ ಇರುತ್ತದೆ.

ಈಗಲೂ ಇಂತಹ ಹಲವು ರೀತಿಯ ಮೊಗ ಮೂರ್ತಿಗಳು ನಮಗೆ ಬೇರೆ ಬೇರೆ ಕ್ಷೇತ್ರದಲ್ಲಿ ಕಾಣ ಸಿಗುತ್ತವೆ. ಕಾರಣ ಇಷ್ಟೇ. ಹಿಂದೆ ಪ್ರತಿಷ್ಠಿತ ಮನೆತನಗಳು ತಮ್ಮ ಮನೆಗೆ ಮುಗ ಮೂರ್ತಿಮಾಡಿಸುವವರನ್ನು ಕರೆಸಿ ತಮ್ಮ ಕಲ್ಪನೆಗೆ ಅನುಸಾರವಾಗಿ ಮೂರ್ತಿ ಮಾಡಿಸುತ್ತಿದ್ದರು. ಅದ್ದರಿಂದ ಒಂದೇ ದೈವದ ಮೊಗ ಮೂರ್ತಿಗಳು ಬೆರೊಂದು ಪ್ರದೇಶಕ್ಕಾಗುವಾಗ ಭಿನ್ನವಾಗಿ ಕಾಣುತ್ತವೆ. ಇದರಲ್ಲಿ ಒಂದು ರೀತಿಯ ವೈವಿಧ್ಯತೆ ಇತ್ತು. ಕುಪ್ಪೆಟ್ಟು ಬರ್ಕೆಗೆ ಸಂಭಂದಿಸಿದ ಹೆನ್ನೂರು ಬರ್ಕೆ ಮನೆಯಲ್ಲಿ ಕುಪ್ಪೆಟ್ಟು ಪಂಜುರ್ಲಿ ದೈವದ ಮೊಗವು ತಿಬಾರಿನ ಕೊಡಮಂದಾಯನ ಮುಗವನ್ನು ಹೋಲುತ್ತದೆ. ಹಿಂದೆ ಈ ಮನೆಯ ಹಿರಿಯರು ತಿಬಾರಿನ ಕೊಡಮಂದಾಯನ ಜಾತ್ರೆಗೆ ಹೊಗಿದ್ದಾಗ ಅಲ್ಲಿ ಮುಗವನ್ನು ನೋಡಿ ಕುಷಿ ಪಟ್ಟು ಅದೇ ರೀತಿಯ ಮುಗವನ್ನು ತನ್ಮ ಮನೆಯ ಪ್ರಧಾನ ದೈವ ಕುಪ್ಪೆಟ್ಟು ಪಂಜುರ್ಲಿಗೆ ಮಾಡಿಸಿದರಂತೆ. ಇದು ಈ ಮನೆಯ ಸಂದರ್ಶನಕ್ಕೆ ಹೊದಾಗ ಅಲ್ಲಿಯ ಹಿರಿಯರೊಬ್ನರು ಹೇಳಿದ್ದ ನೆನೆಪು. ಇದೇ ರೀತಿ ಕಲ್ಲುರ್ಟಿ ಮಂತ್ರಜಾವದೆಯ ಮೂರ್ತಿಗಳಲ್ಲಿ ಯಾವುದೇ ವ್ಯತ್ಯಾಸಗಳಿರಲಿಲ್ಲ. ಎಲ್ಲವೂ ಅವರರ ಕಲ್ಪನೆಗನುಸಾರವಾಗಿ ಮಾಡಿದ್ದು. ಇದನ್ನೆ ನೆಪ ಹೇಳಿ ಜನರನ್ನು ಮೋಸಗೊಳಿಸುವ ಬಗ್ಗೆ ತುಳುವರು ಎಚ್ಚರ ವಹಿಸಬೇಕು. ಈಗ ಅನೇಕ ಕಡೆ ಮಂತ್ರಜಾವದೆಯ ಮೂರ್ತಿಯು ಘಂಟಾಮಣೆ ಹಿಡಿದ ಮೂರ್ತಿಗೆ ಬದಲಾಗಿದ್ದರೂ ಕೂಡ ದೊಂದಿ ಮತ್ತು ನಾಗ ಬೆತ್ತ ಹಿಡಿದ ಮಂತ್ರಜಾವದೆಯ ಮೂರ್ತಿ ಇಂದಿಗೂ ಇದೆ ಅರಾಧನೆಗೊಳ್ಳುತ್ತಿವೆ. ✍🏻ಸಂಕೇತ್ ಪೂಜಾರಿ

0 comments: