Tuesday, August 6, 2019

ಸಂಭ್ರಮದ ವೇದಿಕೆಗಳಿಗೆ ಮಾತಿನ ಶೃಂಗಾರ ಈ ಶರ್ಮಿಳಾ ಅಮೀನ್

ಅವರಿಗೆ ಮಾತೇ ಬಂಡವಾಳ, ಭಾಷೆಯ ಮೇಲಿನ ಹಿಡಿತವೇ ಅವರ ನಿರೂಪಣೆಯ ಜೀವಾಳ....ಅರಳು ಹುರಿದಂತೆ ಮಾತನಾಡುತ್ತಾ ಗುಳಿ ಕೆನ್ನೆಯ ನಗು ಚೆಲುತ್ತಲ್ಲೇ ಆ ಹುಡುಗಿ ವೇದಿಕೆಯೇರಿದ್ರೆ ಸಾಕು ಅಲ್ಲೊಂದು ಹೊಸ ಲೋಕವೇ ಸೃಷ್ಟಿಯಾಗಿ ಬಿಡುತ್ತೆ. ನಿರರ್ಗಳ ಮಾತು, ಅಸ್ಖಲಿತ ಭಾಷೆ, ಮನಸ್ಸಿಗೆ ಮುದ ನೀಡೋ ಪದ ಕಟ್ಟುವ ಕಲೆ, ಕಂಚಿನ ಧ್ವನಿಗೆ ಹೇಳಿ ಮಾಡಿಸಿದ ಸೌಂದರ್ಯ..ವೇದಿಕೆಯ ಸಂಭ್ರಮಕ್ಕೆ ಮಾತಿನ ಚೌಕಟ್ಟು ನಿರ್ಮಿಸಿ ನೆರೆದಿದ್ದ ಪ್ರೇಕ್ಷಕರಿಗೆ ಆಪ್ತವಾಗುವ ಕಲೆ ಈ ಹುಡುಗಿಗೆ ಕರಗತ. ಹೀಗೆ ನಿರೂಪಣೆಯ ಜಗತ್ತಿನಲ್ಲಿ ದಿನೇದಿನೇ ಎತ್ತರಕ್ಕೇ ಏರುತ್ತಿರೋ ಕುಡ್ಲದ ಹುಡುಗಿ ಶರ್ಮಿಳಾ ಅಮೀನ್..ಸಣ್ಣ ವಯಸ್ಸಲ್ಲೇ ನಿರೂಪಣೆಯ ಜಗತ್ತಿಗೆ ಕಾಲಿಟ್ಟ ಶರ್ಮಿಳಾ ಸದ್ಯ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ನೂರಾರು ಕಾರ್ಯಕ್ರಮಗಳ ನಿರೂಪಣೆ ಮಾಡಿ ಗೆದ್ದಿದ್ದಾರೆ. ಕಣ್ಣಿಗೆ ಸರಳ ಅನಿಸೋ ನಿರೂಪಣೆಯ ಜಗತ್ತಿನ ಆಳ, ಹರವು ದೊಡ್ಡದು. ಇಲ್ಲಿ ಮಾತಿನ ಮಂಟಪ ಕಟ್ಟಿ ಗೆಲ್ಲೋದು ಸುಲಭದ ಮಾತಲ್ಲ. ನಿತ್ಯ ಮಾತಿನ ಮಳೆ ಸುರಿಸುವವರಿಗೂ ವೇದಿಕೆ ಮೇಲೆ ಪದಗಳು ಮರೆತು ಹೋಗುತ್ತೆ, ಲಕ್ಷಾಂತರ ಜನರ ಮಧ್ಯೆ ಮೈಕ್ ಹಿಡಿದಾಗ ಕೈ ನಡುಗುತ್ತೆ...ಇಂಥವುಗಳ ಮಧ್ಯೆ ಎಲ್ಲಾ ಅಂಜಿಕೆಗಳನ್ನು ಬದಿಗಿಟ್ಟು ನಿರೂಪಣಾ ಕ್ಷೇತ್ರದಲ್ಲಿ ಈಜಿ ಗೆದ್ದವರು ಕುಡ್ಲದ ಹುಡುಗಿ ಶರ್ಮಿಳಾ ಅಮೀನ್.

ಐಪಿಎಲ್ ಕ್ರಿಕೆಟರ್ಸ್ ಜೊತೆಗಿನ ಸಂಭ್ರಮ, ಕನ್ನಡ-ತುಳು ಸಿನಿಮಾ ತಾರೆಯರ ಸಂದರ್ಶನ, ಕಾಪೋರೇಟ್ ಕಂಪೆನಿಗಳ ಸಮಾರಂಭ, ಡ್ಯಾನ್ ಶೋ, ರಿಯಾಲಿಟಿ ಶೋ, ಅವಾರ್ಡ್ ಸಮಾರಂಭ, ಸ್ಟಾರ್ ನೈಟ್...ಹೀಗೆ ಶರ್ಮಿಳಾ ಅಮೀನ್ ಕಾಲಿಡದೇ ಕ್ಷೇತ್ರವೇ ಇಲ್ಲ ಎನ್ನುವಂತಾಗಿದೆ. ಮಂಗಳೂರು, ಉಡುಪಿ, ಬೆಂಗಳೂರು ಸೇರಿ ರಾಜ್ಯವಷ್ಟೇ ಅಲ್ಲದೇ ನಿರೂಪಕಿಯಾಗಿ ದೇಶ ಸುತ್ತಿದ ಕೀರ್ತಿ ಶರ್ಮಿಳಾರದ್ದು. ಕರಾವಳಿಯ ಟಿವಿ ಮಾಧ್ಯಮ ಮತ್ತು ನಿರೂಪಣೆ ಕ್ಷೇತ್ರದಲ್ಲಿ ಸದ್ಯ ಶರ್ಮಿಳಾ ಅನ್ನೋ ಹೆಸರು ಈಗಾಗಲೇ ಚಾಲ್ತಿಯಲ್ಲಿದೆ. ನೂರಾರು ವೇದಿಕೆಗಳಲ್ಲಿ ಅದ್ದೂರಿ ಕಾರ್ಯಕ್ರಮಗಳ ಸಂಭ್ರಮ ಹೆಚ್ಚಿಸಿರೋ ಶರ್ಮಿಳಾ ಅಮೀನ್, ಕರಾವಳಿಯ ಟಿವಿ ಮಾಧ್ಯಮದಲ್ಲೂ ತನ್ನ ಮಾತಿನ ಮೂಲಕವೇ ಮಿಂಚಿನ ಸಂಚಲನ ಮೂಡಿಸಿದ್ದಾರೆ. ಕೈಗೆ ಮೈಕ್ ಸಿಕ್ಕರೆ ಸಾಕು ಪಟಪಟನೇ ಮಾತನಾಡುತ್ತಾ ಸಂಭ್ರಮದ ವಾತಾವರಣಕ್ಕೆ ಅರ್ಥಪೂರ್ಣ ಭಾಷ್ಯ ಬರೆಯುವ ಈ ಹುಡುಗಿ ಹುಟ್ಟಿದ್ದು ಮಂಗಳೂರಿನ ಸುಸಂಸ್ಕೃತ ಬಿಲ್ಲವ ಮನೆತನದಲ್ಲಿ. ಮಂಗಳೂರಿನ ಶೇಖರ್ ಮತ್ತು ಕಮಲಾಕ್ಷಿ ದಂಪತಿಯ ಮೊದಲ ಪುತ್ರಿಯಾಗಿ ಜನಿಸಿದ ಶರ್ಮಿಳಾ ಅಮೀನ್, ತಂದೆ-ತಾಯಿಯ ಮುದ್ದಿನ ಮಗಳು. ಜೊತೆಗೆ ತಂಗಿ ಲಿಖಿತಾ ಅಮೀನ್ ಅವರ ಅಕ್ಕರೆಯ ಅಕ್ಕ. ಸದ್ಯ ಈಶಾನ್ ಎಸ್.ಅಂಚನ್ರ ನಲ್ಮೆಯ ಮಡದಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಪಾಸ್ಪೋರ್ಟ್ ಸಂಸ್ಥೆಯಲ್ಲಿ ಟೀಮ್ ಲೀಡರ್ ಆಗಿ ವೃತ್ತಿ ಬದುಕು ಸಾಗಿಸ್ತಿರೋ ಶರ್ಮಿಳಾ ಅಮೀನ್ ಮಂಗಳೂರಿನ ಪ್ರತಿಷ್ಠಿತ ಎಸ್ಡಿಎಂ ಕಾಲೇಜಿನ ಎಂ.ಬಿ.ಎ ಪದವೀಧರೆ. ತನ್ನ ವೃತ್ತಿಯ ಜೊತೆಗೆ ನಿರೂಪಣೆಯನ್ನ ಪ್ರವೃತ್ತಿ ಮಾಡಿಕೊಂಡಿರೋ ಶರ್ಮಿಳಾಗೆ ಚಿಕ್ಕ ವಯಸ್ಸಲ್ಲೇ ಮೌನ ಎನ್ನುವುದು ಹತ್ತಿರ ಸುಳಿದೇ ಇಲ್ಲ. ಶಾಲಾ ದಿನಗಳಲ್ಲೇ ಮಾತಿನ ಮಂಟಪ ಕಟ್ಟಿಕೊಂಡೇ ಬೆಳೆದ ಹುಡುಗಿ ಸದ್ಯ ಏರಿದ ಎತ್ತರ ಗಮನಾರ್ಹ. ಶಾಲಾ ದಿನಗಳ ತರಗತಿ ಕೊಠಡಿಗಳಲ್ಲಿ ಹುಟ್ಟಿದ ಮಾತುಗಳು ಬಳಿಕ ಶಾಲಾ ಸಂಭ್ರಮದ ವೇದಿಕೆಗಳಲ್ಲಿ ಶರ್ಮಿಳಾರ ನಿರೂಪಣೆಯ ಹಾದಿಗೆ ಮುನ್ನುಡಿ ಬರೆಯಿತು. ಆಗೆಲ್ಲಾ ಅಂಜಿಕೆ, ಅಳುಕಿಲ್ಲದೇ ವೇದಿಕೆಯೇರಿ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದೇ ಸದ್ಯ ಶರ್ಮಿಳಾರನ್ನ ಕರಾವಳಿಯ ಪ್ರಖ್ಯಾತ ನಿರೂಪಕಿಯಾಗಿ ಬೆಳೆಯುವ ಹಂತಕ್ಕೆ ತಂದು ನಿಲ್ಲಿಸಿದೆ ಎನ್ನುವುದು ಅತಿಶಯೋಕ್ತಿಯಲ್ಲ.

ಶಾಲಾ ದಿನಗಳಲ್ಲಿ ನಿರೂಪಣೆಯ ಮಹಾನ್ ಸಾಹಸಕ್ಕೆ ಇಳಿದ ಶರ್ಮಿಳಾ ಬಳಿಕ ತಿರುಗಿ ನೋಡಿದ್ದೇ ಇಲ್ಲ. ಕಾಲೇಜು ದಿನಗಳಲ್ಲಿ ಯೂನಿವರ್ಸಿಟಿ ಲೆವೆಲ್ ಕಾರ್ಯಕ್ರಮಗಳ ನಿರೂಪಣೆಯ ವೇಳೆ ಮಾತಿನ ಮುತ್ತು ಪೋಣಿಸಿ ಆಗಲೇ ಸಾವಿರಾರು ಜನರ ಮನಸ್ಸು ಗೆದ್ದಿದ್ದರು ಈ ಗುಳಿ ಕೆನ್ನೆ ಹುಡುಗಿ. ಹೀಗೆ ಕಾಲೇಜು ಬದುಕಿನಲ್ಲೇ ಇವರ ಈ ನಿರರ್ಗಳ ಮಾತು ಟಿವಿ ಮಾಧ್ಯಮದತ್ತ ಇವರನ್ನ ಸದ್ದಿಲ್ಲದೇ ಸೆಳೆದಿತ್ತು. ಹೀಗಾಗಿ ವರ್ಷಗಳ ಹಿಂದೆ ಕರಾವಳಿಯ ಪ್ರಖ್ಯಾತ ವಾಹಿನಿಯಾಗಿ ಗುರುತಿಸಿಕೊಂಡಿದ್ದ ಸಹಾಯ ಟಿವಿಯಲ್ಲಿ ಮೊದಲ ಬಾರಿಗೆ ಕ್ಯಾಮಾರ ಎದುರಿಸಿದ್ದರು. ತನ್ನ ಅಸ್ಖಲಿತ ಮಾತಿನ ಮೂಲಕವೇ ಗುರುತಿಸಿಕೊಂಡಿದ್ದ ಶರ್ಮಿಳಾಗೆ ಟಿವಿ ವಾಹಿನಿಯ ಮಾತುಗಾರಿಕೆ ಹೊಸ ಸಾಹಸವಾದ್ರೂ ಈ ಕ್ಷೇತ್ರದಲ್ಲೂ ಇವರ ಮಾತು ಗೆದ್ದಿತ್ತು. ಪರಿಣಾಮ ಆಗಲೇ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಶರ್ಮಿಳಾ ಮನೆ-ಮನಗಳನ್ನು ತಲುಪಿದ್ದರು. ಇದಾದ ಬಳಿಕ ಇವರ ಬದುಕಿಗೆ ಮತ್ತೊಂದು ಹೊಸ ಟರ್ನಿಂಗ್ ಪಾಯಿಂಟ್ ಕೊಟ್ಟು ಮಗದೊಂದು ಐಡೆಂಟಿಟಿ ನೀಡಿದ್ದು ಕರಾವಳಿ ಕರ್ನಾಟಕದ ಹೆಮ್ಮೆಯ ವಾಹಿನಿ ದಾಯ್ಜಿವರ್ಲ್ಡ್. ಈ ವಾಹಿನಿಯ ನ್ಯೂಸ್ ಕ್ಲೋಸ್ ಅಪ್ ಅನ್ನೋ ಕಾರ್ಯಕ್ರಮದಲ್ಲಿ ಶರ್ಮಿಳಾ ವಾರ್ತಾ ವಾಚಕಿಯಾಗಿ ಕಾಣಿಸಿಕೊಂಡರು. ಆ ಬಳಿಕ ಪ್ರತೀ ಮನೆಯ ಟಿವಿಗಳಲ್ಲಿ ಶರ್ಮಿಳಾ ಕಾಣಿಸಿಕೊಳ್ಳುವುದು ಮಾಮೂಲಿಯಾಗಿತ್ತು. ಹೀಗೆ ದಾಯ್ಜಿವರ್ಲ್ಡ್ ವಾಹಿನಿಯ ಅದೆಷ್ಟೋ ವಿಶೇಷ ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಂಡ ಶರ್ಮಿಳಾ, ಹಲವು ಕಾರ್ಯಕ್ರಮಗಳಿಗೆ ಧ್ವನಿ ನೀಡೋ ಮೂಲಕ ಅನೇಕ ಎಪಿಸೋಡ್ಗಳಿಗೆ ತನ್ನ ಕಂಚಿನ ಕಂಠದಿಂದಲೇ ಜೀವಂತಿಕೆ ತುಂಬಿದ್ದಾರೆ. ಈ ಮಧ್ಯೆ ಪಾಸ್ಪೋರ್ಟ್ ಕೇಂದ್ರದಲ್ಲಿ ಟೀಮ್ ಲೀಡರ್ ವೃತ್ತಿಯನ್ನ ಮುಂದುವರೆಸುತ್ತಲೇ ತಮ್ಮ ನಿರೂಪಣೆಯ ಪ್ರವೃತ್ತಿಯನ್ನ ಮುನ್ನಡೆಸಿಕೊಂಡು ಹೋಗಿದ್ದು ವಿಶೇಷ. ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯವಾಗಿ ಹಲವಾರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ ಹೆಗ್ಗಳಿಗೆ ಶರ್ಮಿಳಾರದ್ದು. ವೃತ್ತಿ ಬದುಕಿನ ಮಧ್ಯೆಯೇ ನಿರೂಪಣೆಯ ಜಗತ್ತಿನಲ್ಲಿ ಸದ್ಯ ಶರ್ಮಿಳಾ ಹೆಮ್ಮರವಾಗಿ ಬೆಳೆದಿದ್ದಾರೆ. ಇವರ ಸಾಧನೆಯ ಬದುಕಿನ ಹೆಜ್ಜೆಗಳನ್ನು ಅವಲೋಕಿಸಿದ್ರೆ ಇವರು ಏರಿದ ಎತ್ತರ ಅರಿವಿಗೆ ಬರುತ್ತೆ. ಶರ್ಮಿಳಾ ನಿರೂಪಣೆಗೆ ಸಾಕ್ಷಿಯಾದ ಕೆಲ ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳ ವಿವರ ಹೀಗಿದೆ.

ಮೀಟ್ ದಿ ಗ್ರೀಟ್ ಆಫ್ ಕೊಲ್ಕತ್ತಾ ನೈಟ್ ರೈಡರ್ಸ್(ಐಪಿಎಲ್ 2019)Meet and Greet of Kolkata Knight riders, ರಾಜ್ಯ ಮಟ್ಟದ ದಾಯ್ಜಿವರ್ಲ್ಡ್ ಶಾರ್ಟ್ ಫಿಲ್ಮ್ ಅವಾರ್ಡ್, ರಾಷ್ಟ್ರ ಮಟ್ಟದ ಅರೇನಾ ಶಾರ್ಟ್ ಫಿಲ್ಮ್ ಅವಾರ್ಡ್, ದಾಯ್ಜಿವರ್ಲ್ಡ್ ಸ್ಟುಡಿಯೋ ವಾಯ್ಸ್ ಅಂಡ್ ಸಿಂಗಿಂಗ್ ರಿಯಾಲಿಟಿ ಶೋ, ಜ್ಯೂನಿಯರ್ ಮಸ್ತಿ ಸೀಝನ್-2 ಡ್ಯಾನ್ಸ್ ರಿಯಾಲಿಟಿ ಶೋ, ಕನ್ನಡ ಮತ್ತು ತುಳು ಚಿತ್ರರಂಗದ ಖ್ಯಾತ ಸಿನಿತಾರೆಯರ ಸಂದರ್ಶನ, ಲಗೋರಿ ಪ್ರೀಮಿಯರ್ ಲೀಗ್, ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್, ರೆನಾಲ್ಟ್ ಕ್ವಿಡ್, ರೆನಾಲ್ಟ್ ಡಸ್ಟರ್, ದಟ್ಸಬ್ ರೆಡಿ ಗೋ ಲಾಂಚ್, ಸಿನಿಮಾ, ಧಾರವಾಹಿ ಮತ್ತು ಆಡಿಯೋ ರಿಲೀಸ್ ಕಾರ್ಯಕ್ರಮಗಳ ನಿರೂಪಣೆ, ಐಟಿಸಿ, ಯು.ಬಿ ಗ್ರೂಪ್, ಬಿರ್ಲಾ ಗ್ರೂಪ್, ಅಸ್ಟ್ರಾಲ್ ಪೈಪ್ಸ್ ಸೇರಿ ಹತ್ತು ಹಲವು ಕಾರ್ಪೋರೇಟ್ ಸಂಸ್ಥೆಗಳ ಕಾರ್ಯಕ್ರಮ, ಕರ್ನಾಟಕದಾದ್ಯಂತ ಸ್ಟಾರ್ ನೈಟ್, ಮತ್ತು ಡ್ಯಾನ್ಸ್ ಶೋಗಳ ನಿರೂಪಣೆ, ಸಂಭ್ರಮ ಶಾರ್ಟ್ ಫಿಲ್ಮ್ ಅವಾರ್ಡ್, ರೆಡ್ ಎಫ್.ಎಂ ತುಳು ಸಿನಿಮಾ ಅವಾರ್ಡ್ ಸೇರಿ ನೂರಾರು ಪ್ರಖ್ಯಾತ ಕಾರ್ಯಕ್ರಮಗಳ ಮೂಲಕ ನಿರೂಪಣೆಯ ಜಗತ್ತಿನಲ್ಲಿ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ಸಂಚರಿಸಿದ ಹೆಗ್ಗಳಿಕೆ ಶರ್ಮಿಳಾ ಅಮೀನ್ರದ್ದು.

ಈಗಲೂ ತನ್ನ ಪುಟ್ಟ ಕುಟುಂಬದ ಜೊತೆಗೆ ವೃತ್ತಿ ಬದುಕಿನ ತೃಪ್ತಿಯ ಮಧ್ಯೆಯೇ ವರವಾಗಿ ಬಂದ ಮಾತುಗಾರಿಕೆಯ ಪ್ರವೃತ್ತಿಯನ್ನೂ ಮರೆತಿಲ್ಲ. ಹಲವು ಕಾರ್ಯಕ್ರಮಗಳ ನಿರೂಪಕಿಯಾಗಿ, ಅನೇಕ ಕಾರ್ಯಕ್ರಮಗಳಿಗೆ ಧ್ವನಿಯಾಗಿ ಸಂಭ್ರಮದ ಮೆರುಗು ಹೆಚ್ಚಿಸುತ್ತಲೇ ಇದ್ದಾರೆ. ಇವರ ಈ ಹಾದಿ ಹೀಗೆಯೇ ಮುಂದುವರೆಯಲಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದು ಎಲ್ಲರ ಆಶಯ.

0 comments: