Thursday, September 12, 2019

ಜಗದ್ಗುರು ಬ್ರಹ್ಮಶ್ರೀನಾರಾಯಣಗುರು‬ ,ಬದುಕು ಸಾಧನೆ ಮಹಿಮೆ‬

ನಮ್ಮ ಭಾರತದ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಹಲವಾರು ಶತಮಾನಗಳಿಂದ ವಿದೇಶಿರ ಆಕ್ರಮಣಗಳಿಂದ ಆರ್ಥಿಕ, ರಾಜಕೀಯ, ಸಾಮಾಜಿಕ, ಧಾರ್ಮಿಕ ಪಿಡುಗುಗಳಿಂದ, ಗುಲಾಮಗಿರಿ, ಜಾತಿಪದ್ಧತಿ, ಅಸ್ಪೃಶ್ಯತೆ, ಸತಿ ಸಹಗಮನ ಬಾಲ್ಯ ವಿವಾಹ, ಅನಕ್ಷರತೆ – ಇತ್ಯಾದಿಗಳಿಂದ ದೇಶವು ಜರ್ಜರಿತವಾಗಿತ್ತು. ಇಂತಹ ಕಾಲಘಟ್ಟದಲ್ಲಿ ಅನೇಕಾನೇಕ ಮಹಾಪುರುಷರುಗಳು, ಸಮಾಜ ಸುಧಾರಕರುಗಳು ಜನ್ಮತಾಳಿ, ಒಬ್ಬೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಅಂತಹ ಪಿಡುಗು, ಕಷ್ಟ ಕೋಟಲೆಗಳು, ದುಷ್ಟಪದ್ಧತಿಗಳಿಂದ ಜನತೆಯನ್ನು ಉದ್ಧರಿಸಲು ತಮ್ಮ ಜೀವಿತವನ್ನು ನಿಸ್ವಾರ್ಥ ಬುದ್ಧಿಯಿಂದ ಸವೆಯಿಸಿದ್ದಾರೆ. ಅಯಾಯ ಕ್ಷೇತ್ರಗಳಲ್ಲಿ ಸುಧಾರಣೆ ತರಲು ಯತ್ನಿಸಿ, ನಮ್ಮ ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿ ಮಹದೋಪಕಾರ ಮಾಡಿದ್ದಾರೆ.

ನಾರಾಯಣ ಗುರುಗಳು ಹುಟ್ಟುವ ಕಾಲದಲ್ಲಿ ಕೇರಳದಲ್ಲಿ ಅಸ್ಪೃಶ್ಯತೆ, ಜಾತೀಯತೆ ಎಂಬ ಭಯಂಕರ ರೋಗ ತೀವ್ರ ಘಟ್ಟದಲ್ಲಿತ್ತು. ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಕೇರಳದ ಅಸ್ಪೃಶ್ಯ ಜಾತಿಯವರು ಎಂದು ಮೇಲ್ಜಾತಿ ಯವರು ಕರೆಯುತ್ತಿದ್ದವರಲ್ಲಿ ಪ್ರಮುಖವಾದ ಸಮಾಜ ಈಳವ, (ತೀಯಾ, ಚೋವನ್, ಬಿಲ್ಲವ) ಎಂದು ಕರೆಯಲ್ಪಡುವ ಜಾತಿಯಲ್ಲಿ ಆಕಸ್ಮಿಕವೋ ಎಂಬಂತೆ ಜನಿಸಿದ್ದರು. ಕೇರಳದಲ್ಲಿ ಸುಮಾರು 30% ಆ ಜನಾಂಗದವರಿದ್ದರು. ಈಳವ ಜಾತಿಯವರನ್ನಲ್ಲದೆ, ಸಮಸ್ತ ಅಸ್ಪೃಶ್ಯ, ನಿಮ್ನ ವರ್ಗದವರನ್ನು ಎಲ್ಲಾ ಸ್ತರಗಳಲ್ಲೂ ಮೇಲೆ ತರಲು ಮಾಡಿದ ಶತಪ್ರಯತ್ನವನ್ನು ವಿಶ್ವದ ಮಾನವರೆಲ್ಲರೂ ಸದಾ ಸ್ಮರಿಸಲೇಬೇಕು. ಅವರನ್ನು ಒಂದು ನಿರ್ಧಿಷ್ಟ ಜಾತಿಯ ಗುರುವೆಂದು ಭಾವಿಸುವುದು ಅಜ್ಞಾನದ ಸಂಕುಚಿತ ಮನೋಭಾವದ ಪ್ರತೀಕವೆನಿಸುವುದು. ಪ್ರಾಚೀನ ಮೌಲ್ಯಾದರ್ಶಗಳನ್ನು, ಸತ್ಯವನ್ನು ಅರಸಿಕೊಂಡು ಮನೆಯನ್ನು ತ್ಯಜಿಸಿ, ಯಾರಿಗೂ ಸುಳಿವಿಲ್ಲದಂತೆ ಏಕಾಂತದಲ್ಲಿದ್ದುಕೊಂಡು ತಪಸ್ಸು ಮಾಡುತ್ತಾ ಗುಡ್ಡ, ಗಿರಿ, ಕಂದರ, ಅಡವಿ, ಗುಹೆ, ಪರ್ಣಶಾಲೆಗಳಲ್ಲೆಲ್ಲಾ ಅನೇಕ ವರ್ಷ ಸಾಧನೆ ಮಾಡಿದರು. ಜೀವನದ ಸಂಕೀರ್ಣವಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡ ಬಳಿಕ ವಿಶ್ವಕ್ಕೆ ಅದನ್ನು ತಿಳಿಸುವ ಸಲುವಾಗಿ ಏಕಾಂತತೆಯನ್ನೊಡೆದು ಜನ ಸಮೂಹದ ಬಳಿಗೆ ಬಂದು ಸಾರಿದ ಸಂದೇಶ, ತೋರಿದ ಬೆಳಕು, ತಾನು ಹೇಳಿದಂತೆ ನಡೆದು ಆಚರಿಸಿದ ಕಾರ್ಯಗಳು ಅಮೋಘವಾಗಿತ್ತು. ಹೀಗೆ ಸಮಾಜದ ಎಲ್ಲಾ ಸ್ತರದ ಜನರನ್ನೂ ಆಕರ್ಷಿಸಿದರು.

ಗುರುಗಳ ಸಮಾಧಿಯ ಬಳಿಕ, ಥಿಯೋಸೋಫಿಕಲ್ ಸೊಸೈಟಿಯ ಮುಖ್ಯಸ್ಥೆಯಾಗಿದ್ದ ಡಾ! ಅನಿಬೆಸಂಟರು, ಸೊಸೈಟಿಯ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದರು.“ನಾರಾಯಣ ಗುರುಗಳು ಸನಾತನ ಧರ್ಮದಂತಿದ್ದು ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ತಪ್ಪು ದೋಷಗಳಿರದ ಜನಪರ ಕಾಳಜಿ ಇತ್ತು. ಇತ್ತೀಚೆಗಿನ ಶತಮಾನಗಳಲ್ಲಿ ಇಂತಹ ಗೌರವ, ಮಾನ್ಯತೆಗಳನ್ನು ಪಡೆದು ಸ್ವಾಮಿಗಳು ಯಾರೂ ಇರಲಿಲ್ಲ. ಯೋಗದಲ್ಲಿ ಅವರು ಪತಂಜಲಿ, ಜ್ಞಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲಿ ಯೇಸುಗಳೆಲ್ಲರಂತಿದ್ದು, ಅವರೊಬ್ಬ ದೇವರ ಅವತಾರವೇ ಆಗಿದ್ದರು. ಭವಿಷ್ಯದಲ್ಲಿ ಭಾರತ ಅವರನ್ನು ದೇವರೆಂದು ಆರಾಧಿಸುವುದು”.

ಕೇರಳದ ಜಾತಿಪದ್ಧತಿ ಐದನೆಯ ಶತಮಾನದ ಪೂರ್ವಾರ್ಧದಿಂದ ಉತ್ತರಭಾರತದಿಂದ ವಲಸೆ ಬಂದ ಬ್ರಾಹ್ಮಣರು, ಸುಮಾರು ಎಂಟನೆಯ ಶತಮಾನದ ತನಕವೂ ಬರುತ್ತಿದ್ದು, ಕೇರಳ ರಾಜ್ಯದಲ್ಲಿ ಆರ್ಯ ಸಂಸ್ಕೃತಿಯನ್ನು ಬಿತ್ತಿ ಬೆಳೆಸಿ, ಬ್ರಾಹ್ಮಣ ಸಮಾಜವನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ಗಟ್ಟಿಯಾಗಿ ತಳವೂರುವಂತೆ ಮಾಡಿದರು. ಅಲ್ಲಿಂದಲೇ ಮುಖ್ಯವಾದ ಎರಡು ಜಾತಿಪದ್ಧತಿಯು ಜಾರಿಗೆ ಬಂತು. ಉತ್ತಮ ವರ್ಗದ ಹಿಂದುಗಳು ಅಥವಾ ಸವರ್ಣೀಯರು ಹಾಗೂ ನಿಮ್ನ ವರ್ಗದ ಹಿಂದುಗಳು ಅಥವಾ ಅವರ್ಣೀಯರು.

ಸವರ್ಣೀಯರಲ್ಲಿ ನಂಬೂದಿರಿಗಳು ಅಥವಾ ಕೇರಳ ಬ್ರಾಹ್ಮಣರು ಮೇಲಿನ ಸ್ಥರದಲ್ಲಿದ್ದು, ಕ್ಷತ್ರಿಯರು ಅಥವಾ ರಾಜರುಗಳು, ಶೂದ್ರರು ಅಥವಾ ನಾಯರರು ಕೆಳಮಟ್ಟದಲ್ಲಿದ್ದು. ಅವರ್ಣೀಯರಲ್ಲಿ ಈಳವ (ತೀಯಾ, ಚೋವನ್) ಮೇಲಿನಮಟ್ಟದಲ್ಲಿದ್ದು, ಪುಲಯ, ಪರಯ ಇತ್ಯಾದಿ ಜಾತಿಗಳು ಕೆಳಮಟ್ಟದಲ್ಲಿತ್ತು. ನಡಿಯಾ ಜಾತಿಯು ಇನ್ನೂ ಕೆಳಮಟ್ಟದ್ದಾಗಿತ್ತು. ಅವರ್ಣೀಯರನ್ನು ಶೂದ್ರರಿಗಿಂತಲೂ ಕೆಳಹಂತದಲ್ಲಿ ವಿಭಾಗಿಸಿದ್ದರು. ಈ ಸವರ್ಣ ಮತ್ತು ಅವರ್ಣ ರೀತಿಯ ವಿಭಜನೆಯಿಂದ, ವ್ಯಕ್ತಿಗಳು ನಡೆಸುತ್ತಿದ್ದ ಉದ್ಯೋಗಗಳ ಮೇಲೂ ತೀವ್ರವಾದ ಪರಿಣಾಮ ಬಿದ್ದಿತ್ತು. ದರ್ಜಿಗಳು, ಕ್ಷೌರಿಕರು, ಮಡಿವಾಳರು ಇತ್ಯಾದಿ ವರ್ಗಗಳು ಕೂಡಾ ವರ್ಣೀಯರಿಗೆ ಹಾಗೂ ಅವರ್ಣೀಯರಿಗೆ ಬೇರೆ ಬೇರೆಯೇ ಇರುವಂತಾಗಿತ್ತು ಹಾಗೂ ವರ್ಣೀಯರ ಉದ್ಯೋಗಿಗಳು ಅವರ್ಣೀಯರಿಗೂ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತಿರಲಿಲ್ಲ.

ಕೇರಳದಲ್ಲಿ ಇನ್ನೂ ಒಂದು ವಿಶಿಷ್ಟವಾದ ವಿಷಯವೆಂದರೆ ಅಲ್ಲಿ ವೈಶ್ಯ ಜಾತಿಯು ಇದ್ದಿರಲಿಲ್ಲ. ಅದಕ್ಕೆ ಎರಡು ಮುಖ್ಯವಾಗಿ ಎರಡು ಕಾರಣಗಳಿದ್ದವು. ಒಂದನೆಯದಾಗಿ, ಅರ್ಯನರು ವಲಸೆ ಬರುವ ಸಮಯದಲ್ಲಿ, ವ್ಯವಸಾಯ ಮತ್ತು ವ್ಯಾಪಾರ ಸ್ಥಳೀಯ ಜನರೇ ಉತ್ತಮ ರೀತಿಯಲ್ಲಿ ನೆರವೇರಿಸುತ್ತಿದ್ದು, ವರ್ಣಪದ್ದತಿಯನ್ನು ನಿರಾಕರಿಸಿದ್ದರು. ಆಗಿನ ಆರ್ಥಿಕ ಪರಿಸ್ಥಿತಿಯಲ್ಲಿ, ಆ ಬ್ರಾಹ್ಮಣರು ಮೂಗು ತೂರಿಸಿದ್ದರೆ, ಅವರ ಅಸ್ತಿತ್ವಕ್ಕೆ ಮುಳುವಾಗುತ್ತಿತ್ತು. ಹಾಗಾಗಿ ಬಹಳ ಬುದ್ಧಿವಂತಿಕೆಯಿಂದ, ಆಗಿನ ಸಮಾಜದ ಪದ್ಧತಿಯಲ್ಲಿ, ಅಡೆತಡೆ ಉಂಟಾಗದ ರೀತಿಯಲ್ಲಿ ಎಲ್ಲದಕ್ಕೂ ತಾವೇ ಯಜಮಾನರೆಂಬಂತಹ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡರು.

ಎರಡನೆಯದಾಗಿ, ಆರ್ಯ ಬ್ರಾಹ್ಮಣರಿಗೆ, ತಮ್ಮ ಸೇವೆ, ಚಾಕರಿ, ಕೆಲಸ ಕಾರ್ಯಗಳನ್ನು ಮಾಡಲು, ಸ್ವಂತ ವ್ಯವಹಾರ ಮಾಡುವವರಿಂದಲೂ, ಸೇವಕ ವರ್ಗಬೇಕಾಗಿತ್ತು. ಹಾಗೆ ಮಾಡಲು ತಯಾರಿದ್ದ ಜನರ ವರ್ಗವನ್ನು ಶೂದ್ರ ವರ್ಗಕ್ಕೆ ಸೇರಿಸಿ, ತಯಾರಿಲ್ಲದ ಜನರ ವರ್ಗವನ್ನು ಅಸ್ಪೃಶ್ಯರು ಎಂದು ನಾಮಾಂಕಿತ ಮಾಡಿ, ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಂಡರು.

ಉತ್ತಮ ವರ್ಗದವರೆಂದು ಪರಿಗಣಿಸಲ್ಪಟ್ಟ ನಂಬೂದಿರಿಗಳು, ದೇವಸ್ಥಾನದ ಒಳಗೆ ಹೋಗಿ, ದೇವರ ಮೂರ್ತಿಗಳನ್ನು ಮುಟ್ಟುವ, ಪೂಜೆ ಮಾಡುವ ಇತ್ಯಾದಿ ಕೆಲಸ ಕಾರ್ಯಗಳಲ್ಲಿ ಪ್ರವೃತ್ತರಾಗುತ್ತಿದ್ದರು. ಕ್ಷತ್ರಿಯರಿಗೂ, ಈ ಕೆಲಸ ಕಾರ್ಯಗಳನ್ನು ಮಾಡುವ ಹಕ್ಕುಗಳಿದ್ದಿರಲಿಲ್ಲ.

ಅಂದಿನ ರಾಜವಂಶದವರೂ, ಬ್ರಾಹ್ಮಣರಿಗೆ ವಿಶೇಷ ಗೌರವವನ್ನು ನೀಡುತ್ತಿದ್ದರಲ್ಲದೆ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಬ್ರಾಹ್ಮಣರು ತೆಗೆದುಕೊಂಡ ಕ್ರಮಗಳಿಗೆ ವಿಧಿಸಿದ ನಿಯಮಗಳಿಗೆ, ಅನುಮೋದನೆ ನೀಡಿ ಪ್ರೋತ್ಸಾಹಿಸಿದರು. ಈ ಎಲ್ಲಾ ಬೆಳವಣಿಗೆಗಳಿಂದ ಕಟ್ಟಕಡೆಗೆ ರಾಜರುಗಳನ್ನುಳಿದು, ಯಾರಿಗೂ ದೇವಸ್ಥಾನಗಳಿಗೆ ಪ್ರವೇಶವೇ ಇಲ್ಲದಂತಾಯಿತು. ಕೆಲವು ವರ್ಗದ ಸ್ಥಳೀಯರು, ಇದನ್ನು ತೀವ್ರವಾಗಿ ಪ್ರತಿಭಟಿಸಿದರು. ಕುಶಾಗ್ರಮತಿಗಳಾದ ಬ್ರಾಹ್ಮಣರು ಜನಾಂಗೀಯ ವಿಭಾಗಗಳನ್ನು ಮಾಡಲು ‘ವರ್ಣ’ ಎಂಬ ಅಸ್ತ್ರವನ್ನು ಪ್ರಯೋಗ ಮಾಡಿ, ತಮ್ಮ ಉದ್ದೇಶಿತ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.

ನಂಬೂದಿರಿಗಳಲ್ಲಿ ಹಿರಿಯ ಮಗ ಮಾತ್ರ ತಂದೆಯ ಆಸ್ತಿಯಲ್ಲಿ ಅಧಿಕಾರವನ್ನು ಹೊಂದುವ ನಿಯಮವನ್ನು ಅನುಸರಿಸುತಿದ್ದರು. ಆಸ್ತಿಯು ಪರಭಾರೆಯಾಗದಂತೆ, ಮಕ್ಕಳಲ್ಲಿ ಜೇಷ್ಠ ಪುತ್ರ ಮಾತ್ರ ತಮ್ಮ ಜಾತಿಯ ಕನ್ಯಯನ್ನು ಮಾಡಿಕೊಳ್ಳುವ ನಿಯಮವನ್ನು ಜಾರಿಗೆ ತಂದರು. ಕಿರಿಯ ಮಕ್ಕಳ ಸೌಕರ್ಯ, ಲೈಂಗಿಕ ಸುಖಕ್ಕಾಗಿ ಒಂದು ವಿಚಿತ್ರ ರೀತಿಯ “ಸಂಬಂಧಂ” ಎಂಬ ಪದ್ಧತಿಯನ್ನು ಅನುಸರಿಸಿ, ಅದರ ಪ್ರಕಾರ, ನಾಯರ್‍ ಮತ್ತು ಕ್ಷತ್ರಿಯ ಜನಾಂಗಕ್ಕೆ ಸೇರಿದ ಹೆಣ್ಣುಗಳನ್ನು ಹೆಂಡತಿಯನ್ನಾಗಿ ತರುತ್ತಿದ್ದರು. ಅಂತಹ ಹೆಂಗಸರಿಗೆ ಸಾಮಾಜಿಕವಾಗಿ ಪತ್ನಿಯ ಸ್ಥಾನಮಾನವಿರಲಿಲ್ಲ. ಇವರಿಂದ ಹುಟ್ಟುವ ಮಕ್ಕಳಿಗೂ ಇವರ ಬ್ರಾಹ್ಮಣ ತಂದೆಗೂ ಸಂಬಂಧವೇ ಇರಲಿಲ್ಲ. ಹಾಗೆ ಸ್ಪರ್ಶಿಸಿದರೆ, ಬ್ರಾಹ್ಮಣ ತಂದೆ ಅಶುದ್ಧನಾಗುವನೆಂಬ ಭಾವನೆಯಿತ್ತು. ತಂದೆಯ ಆಸ್ತಿಯಲ್ಲಿ ಈ ರೀತಿ ಹುಟ್ಟಿದ ಮಕ್ಕಳಿಗೆ ಯಾವುದೇ ರೀತಿಯ ಹಕ್ಕುಬಾಧ್ಯತೆಗಳಿರಲಿಲ್ಲ. ನಾಯರ್‍ ಮತ್ತು ಕ್ಷತ್ರಿಯರಲ್ಲಿದ್ದ ‘ಅಳಿಯ ಸಂತಾನ’ ಪದ್ಧತಿಯು ಬ್ರಾಹ್ಮಣರ ‘ಸಂಬಂಧ’ ವ್ಯವಸ್ಥೆಗೆ ಪೂರಕವಾಗಿದ್ದು, ನಾಯರ್‍ ಮತ್ತು ಕ್ಷತ್ರಿಯರಲ್ಲಿ ಸೋದರ ಮಾವಂದಿರು ಇಂತಹ ಮಕ್ಕಳ ರಕ್ಷಕರಾಗಿದ್ದರು. ಕುಯುಕ್ತಿಯಿಂದ ಬ್ರಾಹ್ಮಣರು ಹೆಂಡತಿ ಮಕ್ಕಳ ರಕ್ಷಣೆಯ ಹೊರೆಯನ್ನು ತಪ್ಪಿಸಿಕೊಂಡಿದ್ದರು. ಪ್ರೊ. ಎಸ್. ಎನ್. ಸದಾಶಿವನ್ ಎಂಬವರು ತನ್ನ ಗ್ರಂಥದಲ್ಲಿ “ಇದೊಂದು ಬೇಜಾವಾಬ್ದಾರಿಯುತ ಲೈಂಗಿಕ ಭೋಗ ಜೀವನ” ಎಂದು ಬರೆದಿರಿವರು. ನಾಯರ್‍ ಕುಲದವರು ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಒಪ್ಪಿ, ಬ್ರಾಹ್ಮಣರಿಗೆ ಸೇವೆ ಸಲ್ಲಿಸುವುದು ತಮ್ಮ ಕರ್ತವ್ಯವೆಂದೂ, ನಾಯರ್‍ ಹೆಂಗಸರು ಬ್ರಾಹ್ಮಣನೊಬ್ಬನನ್ನು ಪ್ರೀತಿಸಿ, ಈ “ಸಂಬಂಧಂ” ವ್ಯವಸ್ಥೆಗೆ ಗುರಿಯಾಗುವುದು ಒಂದು ಸುಯೋಗವೆಂದು ಭಾವಿಸಿದ್ದರು. ಕ್ಷತ್ರಿಯರೂ ಕೂಡ ಬ್ರಾಹ್ಮಣರ ವೀರ್ಯಸತ್ವ ಒಳ್ಳೆಯ ಸಮರ್ಥ ರಾಜರನ್ನು ಉತ್ಪಾದಿಸಬಲ್ಲುದೆಂದು ನಂಬಿದ್ದರು. ಬ್ರಾಹ್ಮಣರ ಈ ರೀತಿಯ ಲೈಂಗಿಕ ಸುಖಭೋಗ, ದೌರ್ಜನ್ಯ, ಶೋಷಣೆಯು, ತಪ್ಪು, ಅನಾಗರಿಕ ಎಂದು ಅರ್ಥವಾಗಲು ನೂರಾರು ವರ್ಷಗಳೇ ಬೇಕಾಯಿತು. ಇಂತಹ ಲಜ್ಜಾಸ್ಪದವಾದ ಕೆಟ್ಟ ಪದ್ಧತಿಯಿಂದ ಬ್ರಾಹ್ಮಣರು ತಪ್ಪಿಸಿಕೊಳ್ಳಲಾಗಲಿಲ್ಲ. ಈ ಪದ್ಧತಿಯಿಂದಾಗಿ, ಬ್ರಾಹ್ಮಣ ಮಹಿಳೆಯರನೇಕರು ಮದುವೆಯಾಗದೆ ಕುಮಾರಿಯರಾಗಿಯೇ ಉಳಿಯಬೇಕಾಯಿತು. ಯಾಕೆಂದರೆ ಒಂದು ಬ್ರಾಹ್ಮಣ ಕುಟುಂಬದಲ್ಲಿ ಒಬ್ಬ ಗಂಡಸು ಮಾತ್ರ ಮದುವೆಯಾಗಬಹುದಿತ್ತು. ಹೀಗಾಗಿ, ಹಲವಾರು ಬ್ರಾಹ್ಮಣ ಕನ್ಯೆಯರು ತನ್ನ ತಂದೆಗೋ, ಅಜ್ಜನಿಗೋ ಸರಿಯಾಗಬಲ್ಲ ವಯಸ್ಸಿನವನ್ನು ಮದುವೆಯಾಗುತ್ತಿದ್ದುದರಿಂದ ನಂಬೂದಿರಿ ಕುಟುಂಬಗಳಲ್ಲಿ ವಿಧವೆರನ್ನು ಸಾಮಾನ್ಯವಾಗಿ ಕಾಣಬಹುದಿತ್ತು. ಅಥವಾ ಒಬ್ಬ ಗಂಡಸಿಗೆ ಕೆಲವು ಪತ್ನಿಯರ ಪೈಕಿ, ಒಬ್ಬಳಾಗಿರುವ ಸಂದರ್ಭ ಉಂಟಾಗುತ್ತಿತ್ತು.

ನಂಬೂದರಿ ಮತ್ತು ಕ್ಷತ್ರಿಯ ಯಾ ನಾಯರ್‍ ಮಿಲನದಿಂದ ಹುಟ್ಟಿದ ಸಂಕರ (ಬೆರೆಕೆ) ಜಾತಿಗಳೇ ಮೆನನ್, ವಾರಿಯರ್‍, ಮಾರರ್‍, ವಿಶಾರಾಡಿ ಮೊದಲಾದ ಹೆಸರಿನಿಂದ ಗುರುತಿಸಲ್ಪಟ್ಟರು. ಇಂತವರಿಗೆ, ಸಂಖ್ಯೆ ಹೆಚ್ಚಿದಂತೆ, ದೇವಸ್ಥಾನದ ಆಡಳಿತದಲ್ಲಿ, ಬ್ರಾಹ್ಮಣರ ಅಧೀನಕ್ಕೊಳಪಟ್ಟಂತೆ ಅಧಿಕಾರವನ್ನು ನಿರ್ವಹಿಸಲು ಅವಕಾಶವನ್ನು ಕಲ್ಪಿಸಿದರು.ಈ ಎಲ್ಲಾ ವ್ಯವಸ್ಥೆ/ ಪದ್ಧತಿಗಳಿಂದಾಗಿ, ಅವರ್ಣೀಯರ ಪಾಡಂತೂ ಅತ್ಯಂತ ಕರುಣಾಜನಕವಾಗಿತ್ತು. ಆರ್ಥಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿಯೂ, ಎಲ್ಲಾ ರೀತಿಯ ಸೌಕರ್ಯಗಳಿಂದ ವಂಚಿತರಾಗಿ, ಪ್ರಾಣಿಗಳಿಗಿಂತಲೂ ಕೀಳುಮಟ್ಟದಲ್ಲಿ, ವರ್ಣೀಯರಿಂದ ಪರಿಗಣಿಸಲ್ಪಟ್ಟರು. ಹದಿನೇಳನೆಯ ಶತಮಾನದ ಕೊನೆಯ ಭಾಗದಲ್ಲಿ ಜಾತಿಪದ್ಧತಿ, ನಿಯಮಗಳು ಅತ್ಯಂತ ಭಯಂಕರ, ಕ್ರೂರ, ಸ್ಥಿತಿಗೆ ತಲುಪಿ ಕೆಳ ಜಾತಿಯವರ ಪಾಡಂತೂ ಹೇಳತೀರದಂತಹ ಹಂತಕ್ಕೆ ಬಂದು ನಿಂತಿತ್ತು.

ಆ ಕಾಲದಲ್ಲಿ “ಆವರ್ಣೀಯ” ರಿಗೆ ಸುಮಾರು 300 ರೀತಿಯ ತೆರಿಗೆಗಳನ್ನು ವಿಧಿಸಿದ್ಧರು. ಅವುಗಳು ಹಾಸ್ಯಾಸ್ಪದ ಹಾಗೂ ಅತ್ಯಂತ ನೀಚರೀತಿಯದಾಗಿದ್ದು, ವರ್ಣೀಯರು ಅದೆಷ್ಟು ಕ್ರೂರರಾಗಿದ್ದರು ಎಂಬುದನ್ನು ತೋರಿಸುವಂತಿತ್ತು. ಉದಾಹರಣೆಗಳು ಹೀಗಿವೆ. ತರಿವಾರಿ – ಕೈಮಗ್ಗದ ಕೆಲಸಕ್ಕೆ ತೆರಿಗೆ ವಲಯಾರ – ಮೀನುಗಾರಿಕೆಗೆ ತೆರಿಗೆ ಚಕ್ಕುವಾರಿ – ಗಾಣದಿಂದ ಎಣ್ಣೆ ತೆಗೆಯುವುದಕ್ಕೆ ತೆರಿಗೆ ತಲವಾರಿ – ತಲೆಯ ಕೂದಲು ಬೆಳೆಸಿದ್ದರೆ ಅದಕ್ಕೆ ತೆರಿಗೆ ಮುಲಕಾರಂ – ಮಹಿಳೆಯರ ಎದೆ ಹಾಗೂ ಸ್ತನದ ಅಳತೆಗೆ ಅನುಸಾರವಾಗಿ ತೆರಿಗೆ ಚಿತ್ತುಕಾರಂ – ಶೇಂದಿ ಇಳಿಸುವ ಕೆಲಸಕ್ಕೆ ತೆರಿಗೆ.

ಈ ಅನಾಗರಿಕ, ಅಮಾನವೀಯ, ನಾಚಿಕೆಗೇಡಿನ, ತೆರಿಗೆಗಳನ್ನು ತಿರುವಾಂಕೂರಿನ ರಾಣಿ ಲಕ್ಷ್ಮೀಬಾಯಿ ಎಂಬವರು 1851ರಲ್ಲಿ ರದ್ದುಪಡಿಸಿ, ಪುಣ್ಯ ಕಟ್ಟಿಕೊಂಡರು. ಈ ತೆರಿಗೆಗಳು ರದ್ದಾದರೂ, ಸಾಮಾಜಿಕವಾಗಿ ವಿಧಿಸಿದ ಅಸ್ಪೃಶ್ಯತೆ ಮತ್ತಿತರ ಕಟ್ಟುಪಾಡು, ನಿಯಮಗಳು, ಕಟ್ಟುನಿಟ್ಟಾಗಿ ನಡೆಯುತ್ತಲೇ ಇತ್ತು. ಬ್ರಾಹ್ಮಣರು ಹೊರತು ಪಡಿಸಿದ, ಸವರ್ಣೀಯರಿಗೂ, ಈ ನಿಯಮಗಳು ಅನ್ವಯವಾಗಿತ್ತು. ಕ್ಷತ್ರಿಯರು, ಬ್ರಾಹ್ಮಣರಿಂದ 2 ಅಡಿ ದೂರ ನಿಲ್ಲಬೇಕಾಗಿತ್ತು ಹಾಗೂ ದೇವಸ್ಥಾನದ ಒಳಗೂ ಪ್ರವೇಶಿಸುವಂತಿರಲಿಲ್ಲ. ಇದೇ ರೀತಿ ಉಳಿದ ಅವರ್ಣೀಯರು – ನಾಯರ್‍ – 16 ಅಡಿ ಈಳವ – 32 ಅಡಿ ಪುಳಯ ಮತ್ತು ಪರಯ – 64 ಅಡಿ ದೂರ ಕಾದಿರಿಸಿಕೊಳ್ಳಬೇಕಾಯಿತು. ನಾಯಡಿ – ಬ್ರಾಹ್ಮಣರ ನಂಬೂದರಿಗಳ ದೃಷ್ಟಿಗೂ ಈಳಬಾರದು. ಒಂದು ವೇಳೆ ನೋಟಕ್ಕೆ ಬಿದ್ದರೆ, ನಂಬೂದಿರಿ ತನ್ನ ಶುದ್ಧೀಕರಣಕ್ಕೆ ಒಳಪಡಬೇಕಾಗಿತ್ತು.

ಇವಿಷ್ಟಲ್ಲದೆ ಸಾಮಾಜಿಕ ಗುಂಪುಗಳು ಕೂಡಾ, ನಿಶ್ಚಯಿಸಿದ ದೂರವನ್ನು ಕಾಪಾಡಿಕೊಳ್ಳಬೇಕಾಗಿತ್ತು. ಸಾರ್ವಜನಿಕ ಹೆದ್ದಾರಿಯಲ್ಲಿ ನಡೆದಾಡುವುದು, ಅವರ್ಣೀಯರಿಗೆ ಬಹಿಷ್ಕರಿಸಲ್ಪಟ್ಟಿತ್ತು. ಹಾಗೇನಾದರೂ, ಶುಭ್ರತೆಯನ್ನು ಕಾಪಾಡಬೇಕಾದ ದೂರದಿಂದ, ತಪ್ಪಿ ನಡೆದರೆ, ಕ್ರೂರ ಶಿಕ್ಷಗೆ ಒಳಪಡಬೇಕಾಗಿತ್ತು. ಅಂತಹ ಜಾತಿಗಳನ್ನು ಗುರುತಿಸಿಕೊಳ್ಳುವುದಕ್ಕೆ, ಅವರ್ಣೀಯ ಹೆಂಗಸರಿಗೂ ಅನ್ವಯಿಸುತ್ತಿತ್ತು. ವರ್ಣೀಯರಿಗೆ ಗೌರವ ಸೂಚಿಸಲಿಕ್ಕೂ, ಹೆಂಗಸರು ಸೊಂಟದ ಮೇಲ್ಗಡೆ ಬೆತ್ತಲೆಯಾಗಿರಬೇಕಾಗಿತ್ತು.

ಪಾದರಕ್ಷೆ, ಉತ್ತಮ ವಸ್ತ್ರ, ಆಭರಣಗಳನ್ನು ಧರಿಸುವುದು ಅವರ್ಣೀಯರಿಗೆ ನಿಷಿದ್ಧವಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಕೊಡೆಗಳನ್ನು ಹಿಡಿಯುವಂತಿರಲಿಲ್ಲ. ಬ್ರಾಹ್ಮಣರು ಮತ್ತು ರಾಜರುಗಳು ಮಾತ್ರ ಕೊಡೆ ಹಿಡಿಯಬಹುದಾಗಿತ್ತು. ಅವರ್ಣೀಯರು ಮಳೆ ಬಂದರೆ ಬಾಳೆ ಎಲೆ ಅಥವಾ ಕೆಸುವಿನ ಎಲೆಯಿಂದ ರಕ್ಷಣೆ ಪಡೆಯಬೇಕಾಗಿತ್ತು. ಈ ವಿಷಯಗಳನ್ನೆಲ್ಲಾ ವಿವರಿಸುವಾಗ ಶ್ರೀ ನಾರಾಯಣ ಗುರುಗಳ ಶಿಷ್ಯರಾಗಿದ್ದ ಶ್ರೀ ಟಿ. ಕೆ. ಮಾಧವನ್ ತನ್ನ ಕೃತಿಯಲ್ಲಿ ನೆನಪಿಸಿಕೊಂಡ, ಅವರ ಅನುಭವವನ್ನು ಬರೆಯಬೇಕೆನಿಸುತ್ತದೆ. ಶ್ರೀ ಮಾಧವನ್ ರವರು ವಿದ್ಯಾರ್ಥಿಯಾಗಿದ್ದಾಗ, ಕಾಯಂಕುಲಂ ಊರಿನ ತನ್ನ ತಂದೆಯ ಪೂರ್ವ ಬಜಾರಿನ ಆಸ್ತಿಯಲ್ಲಿ, ಆಗ ಮಳೆಗಾಲವಾದುದರಿಂದ ಮರದ ಚಪ್ಪಲಿಗಳನ್ನು ಧರಿಸಿ ಹೋಗುತ್ತಿದ್ದಾಗ ಕೆಲವರು ಅವರನ್ನು ಮುತ್ತಿಕೊಂಡು “ಎಲೇ ಈಳವ, ಮರದ ಚಪ್ಪಲಿಗಳನ್ನು ಹಾಕಿಕೊಂಡು ನಡೆದಾಡಲು ನಿನಗೆಷ್ಟು ದುರಹಂಕಾರ” ಎಂದು ಕೇಳಿ ಬಲತ್ಕಾರದಿಂದ ಅದನ್ನು ತೆಗೆಸಿದರು. ಜಾತಿಭೇದಗಳಲ್ಲಿ ನಂಬಿಕೆಯಿರಿಸದ, ಅನ್ಯಧರ್ಮೀಯರೆಂದುಕೊಂಡವರ ದೌರ್ಜನ್ಯವೂ ವಿಚಿತ್ರ ಹಾಗೂ ವಿಪರ್ಯಾಸವಾಗಿತ್ತಂತೆ.

ಅವರ್ಣೀಯರು ತಮ್ಮ ಸ್ವಂತ ಮನರಗಳನ್ನು ಕಟ್ಟಿಸುವಾಗಲೂ ಕಟ್ಟಡದ ವಿಸ್ತೀರ್ಣ, ಎತ್ತರ, ಕಿಟಕಿ – ಬಾಗಿಲುಗಳ ಸಂಖ್ಯೆ ಇತ್ಯಾದಿಗಳ ನಿರ್ಬಂಧ ಹೇರಲಾಗುತಿತ್ತು. ಇದಕ್ಕೆ ಶ್ರೀ ನಾರಾಯಣ ಗುರುಗಳು ಜನ್ಮ ತಳೆದ, ಚೆಂಪಜಂತಿ/ ಚೆಂಬಳಂತಿಯ, ‘ವಯರ್‍ ಲಾಲ್’ ಮನೆಯು ಜ್ವಲಂತ ಸಾಕ್ಷಿಯಾಗಿದ್ದು, ಈಗಲೂ ಅಲ್ಲಿಗೆ ಹೋಗುವ ತೀರ್ಥಯಾತ್ರಿಕರು ಕಾಣಬಹುದಾಗಿದೆ.

ಉತ್ತಮ ಕುಲದವರೆನಿಸಿಕಂಡವರಿಡನೆ, ಮಾತುಕತೆ ನಡೆಸುವಾಗಲೂ ಅವರ್ಣೀಯರು, ಕೆಲವು ನಿಯಮಗಳನ್ನು ಪಾಲಿಸಬೇಕಗಿತ್ತು. ತಮ್ಮನ್ನು ತಾವೇ ಉದ್ದೇಶಿಸಿಕೊಳ್ಳುವಾಗ ನಾನು ಎನ್ನದೆ ತಮ್ಮ ಗುಲಾಮ ಅಥವಾ ಸೇವಕನೆನ್ನಬೇಕು.ಮಾತನ್ನು ಆರಂಭಿಸುವ ಮೊದಲು ತಮ್ಮ ಗುಲಾಮನಿಗೆ ಮಾತನಾಡಲು ಅವಕಾಶವಿದೆಯೇ ಎಂದು ವಿನಂತಿಸಿಕೊಳ್ಳಬೇಕು.ಮಾತನಾಡುವಾಗ, ತಮ್ಮ ಉಸಿರು ಹೊರಹೋಗದಂತೆ ಬಾಯಿಗೆ ಅಡ್ಡವಾಗಿ ಕೈಹಿಡಿಯಬೇಕು.ತಮ್ಮ ದೇಹದ ಭಾಗಗಳಾದ ಕಣ್ಣು, ಕಿವಿ, ಇತ್ಯಾದಿಗಳನ್ನು ಉದ್ದೇಶಿಸುವಾಗ ಹಳೆಯ ಇಂಬ ವಿಶೇಷಣವನ್ನು ಸೇರಿಸಬೇಕು. ತಮ್ಮ ಮಕ್ಕಳ ಕುರಿತಾಗಿ ಹೇಳವುದಿದ್ದರೆ ಕರು ಅಥವಾ ಮಂಗ ಎನ್ನಬೇಕು ತಾವು ತಿನ್ನುವ ಆಹಾರವನ್ನು ಕೊಳಕು ಅಂಬಲಿ ಯಾ ಗಂಜಿ ಎಂದು ಹೇಳಬೇಕು. ನಾಯರ್‍ಗಳನ್ನು ‘ಯಜಮಾನ’ ಎಂದು ಸಂಬೋಧಿಸಬೇಕು. ಇವಿಷ್ಟು ಕೆಲವು ಉದಾಹರಣೆಗಳು ಮಾತ್ರ.

ಹೀಗೆ ನರಿ, ನಾಯಿಗಿಳಿಗಿಂತಲೂ ಕಡೆಯಾಗಿ ಹೊಟ್ಟೆಗೆ ಕೋಳಿಲ್ಲದೆ, ಮಾನ ಮುಚ್ಚಲು ಅರಿವೆಯಿಲ್ಲದೆ ಕಾಲಕಸವಾಗಿ ಬದುಕನ್ನು ಸಾಗಿಸುತ್ತಿದ್ದವರನ್ನು ಉದ್ಧಾರ ಮಾಡುವವರಾದರೂ ಯಾರು? ಈ ಅವರ್ಣೀಯರ, ಶೂದ್ರರ, ಪರೆಯರ ಜೀವನದ ಸ್ಥಿತಿಗಳನ್ನು ಮೇಲೆತ್ತುವವರಾದರೂ ಯಾರು? ಪ್ರಾರಬ್ಧ ಕರ್ಮವೆಂದು ಸುಮ್ಮನ್ನಿದ್ದು, ಈ ಕ್ರೂರ ಪದ್ಧತಿಯನ್ನು ಅನುಸರಿಸಿ ಬಾಳು ಸಾಗಿಸಿವುದೇ ಸಮಂಜಸವೇ? ಅವರೇನು ಮಾಡಬಲ್ಲರು? ಸಾಮಾನ್ಯ ಮಾನವನೊಬ್ಬನಿಂದ, ಇವರ ಉದ್ಧಾರದ ಬಗ್ಗೆ ಉಸಿರೆತ್ತುವೂದೂ ಸಾಧ್ಯವಿದ್ದಿರಲಿಲ್ಲ. ಈ ದುಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಅಸಾಮಾನ್ಯ ವ್ಯಕ್ತಿಯೇ ಜನಿಸಿ ಬರಬೇಕಾಗಿತ್ತು.

ನಾರಾಯಣ ಗುರುಗಳು – ಜನ್ಮ ವೃತ್ತಾಂತ ತಿರುವನಂತಪುರ (ತ್ರಿವಾಂಡ್ರಮ್ನ) ಉತ್ತರಕ್ಕೆ ಸುಮಾರು 12 ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿಗೆ ಬೆಟ್ಟಗುಡ್ಡಗಳ ಸಂದುಗೊಂದುಗಳಲ್ಲಿ ಹೋದರೆ ಸಿಗುವುದೇ ಜೆಂಪಜಂತಿ. ತೆಂಗು, ಕಂಗು, ಮಾವು, ಬಾಳೆ, ಮುಂತಾದ ಹಲವಾರು ಮರಗಿಡಗಳಿಂದೊಡಗೂಡಿದ, ಆ ಹಳ್ಳಿಯು ಪ್ರಕೃತಿ ಸೌಂದರ್ಯದ ಮೆರುಗಿನಿಂದ ಶೋಭಿಸುತ್ತಿದ್ದು, ನವ ನಾಗರಿಕತೆಯನ್ನು ನಾಚಿಸುವಂತಹ ನಿಸರ್ಗ ಸೌಂದರ್ಯದ ಖನಿಯಂತಿತ್ತು. ಅಲ್ಲೇ ಹತ್ತಿರದ ನೀರು ತುಂಬಿದ ಗದ್ದೆಗಳಲ್ಲಿ, ಆ ಮರಮಟ್ಟುಗಳ ಪ್ರತಿಬಿಂಬವು ಬಿದ್ದು, ಮೇಲೆ ಕೆಳಗಾಗಿ ಗೋಚರಿಸಿ, ಇದಾವುದೋ ಅದ್ಭುತ ಲೋಕವನ್ನೇ ಪ್ರತಿಬಿಂಬಿಸುವಂತಿತ್ತು. ಮುಂಗಾರು ಮಳೆಯ ಅಬ್ಬರವು ಆಗಷ್ಟೇ ಕಡಿಮೆಯಾಗಿದ್ದು, ಕೆರೆ ತೊರೆಗಳು ತುಂಬಿ ತುಳುಕುತ್ತಿದ್ದ ದೃಶ್ಯವಂತೂ ಅವರ್ಣನೀಯ. ರೈತರಲ್ಲಿ ನವಚೈತನ್ಯವನ್ನು ತುಂಬುತ್ತಿದ್ದ ಕಾಲವದು. ತಿರುವಾಕೂರಿನ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದ ಜೆಂಪಜಂತಿ ವಂಶದ ಅರಸರ ಸ್ಥಳವಾದುದರಿಂದ, ಪ್ರಕೃತಿ ಸೌಂದರ್ಯದ ಆ ಹಳ್ಳಿಗೆ ಜೆಂಪಜಂತಿ ಎಂಬ ಹೆಸರೇ ಬಂದಿತು. ಅಲ್ಲಿಯ ಸಮೀಪದಲ್ಲಿ “ವಯಲ್ ವಾರಂ” ಎಂಬ ಹೆಸರಿನ ಮನೆ. ಮನೆ ಗದ್ದೆಗಳ ಬದಿಯಲ್ಲಿದ್ದುದರಿಂದ ಅದಕ್ಕೆ “ವಯಲ್ ವಾರಂ” ಎಂಬ ಹೆಸರು ಬಂದಿತ್ತು.

ಆ ಮನೆಯಾದರೂ ಸುಣ್ಣ ಕಾಣದ, ಮಣ್ಣಿನ ಗೋಡೆಯದ್ದಾಗಿದ್ದು ಮಾಡಿಗೆ ಮಡಲಿನ (ತೆಂಗಿನ ಗರಿಗಳ) ಹೊದಿಕೆಯಿತ್ತು. ನೆಟ್ಟಗೆ ನಿಲ್ಲಲೂ ಆಗದಷ್ಟು ಎತ್ತರ (ಸುಮಾರು 4.5 ಅಡಿ) ಕಿಟಕಿಗಳೂ ಇಲ್ಲದ ಗುಡಿಸಲಿನ ಉದ್ದ ಸುಮಾರು 20 ಅಡಿ ಅಗಲ 8 ಅಡಿ ಗುಡಿಸಲಿನ ಮುಖ್ಯ ಪ್ರವೇಶ ದ್ವಾರದಲ್ಲಿ ಮಧ್ಯ ಸಣ್ಣ ಚಾವಡಿಯಿದ್ದು, ಎಡ ಬಲಗಳಲ್ಲಿ ಚಿಕ್ಕದಾದ ಎರಡು ಕೊಠಡಿಗಳು. ಅಂದು ಶತಭಿಶಾ ನಕ್ಷತ್ರ, ಅನಂತನ ವ್ರತದ ಶುಭ ದಿನ. ಓಣಂ ಹಬ್ಬದ ರಸಭರಿತವಾದ ನವಾನ್ನ ಭೋಜನ. ರಾತ್ರಿ ಹಿಟ್ಟು ಚೆಲ್ಲಿದಂತೆ ಬೆಳಕು ಹರಡಿತ್ತು. ಕೇರಳದಲ್ಲಿ ಸ್ತ್ರೀ ಪುರುಷರೆಲ್ಲ ಸಂಭ್ರಮದಿಂದ ಹಬ್ಬವನ್ನು ಆಚರಿಸಿ ಆಹ್ಲಾದಚಿತ್ತರಾಗಿದ್ದರು.ಆ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮಾಡನ್ ಆಸನ್ ಮತ್ತು ಕುಟ್ಟಿಯಮ್ಮ ದಂಪತಿಯರಿಗೆ 26-8-1856 ರಂದು ಒಂದು ಪುತ್ರರತ್ನ ಜನ್ಮ ತಾಳಿತು. ಆ ಶಿಶು ವಿಶ್ವಶಕ್ತಿಯ ಜ್ಯೋತಿರ್ಮಯಿ ಚಿದಂಶದ ಜನ್ಮಧಾರಣೆ ಎಂದು ಯಾರೊಬ್ಬನೂ ಚಿಂತನೆಯನ್ನು ಮಾಡಿರಲಿಕ್ಕಿಲ್ಲ. ಮಾನವ ಕೋಡಿಯನ್ನು ಉದ್ಧಾರ ಮಾಡುವ ದಿವ್ಯತೇಜಸ್ಸುಳ್ಳ, ಜಗವನ್ನೇ ಬೆಳಗಿಸುವ ಪುತ್ರರತ್ನ ಅದೆಂದು ಯಾರೂ ಊಹಿಸಿರಲಿಲ್ಲ. ಅದುದರಿಂದಲೋ ಎಂಬಂತೆ, ಆ ದಿವ್ಯಶಕ್ತಿಯ

ಜನನ ದಿನಾಂಕದಲ್ಲಿ ಒಮ್ಮತವಿಲ್ಲದ ವ್ಯತ್ಯಾಸಗಳನ್ನು ಬೇರೆ ಬೇರೆ ಗ್ರಂಥ, ಪುಸ್ತಕಗಳಲ್ಲಿ ಕಾಣಬಹುದಾಗಿದೆ. ಕೆಳತರಗತಿಯ ಬಡ ಕುಟುಂಬದಲ್ಲಿ ಜನಿಸಿ ಲೌಕಿಕವಾದ ಯಾವ ಅನುಕೂಲತೆಯೂ ಇಲ್ಲದೆ ಮನುಷ್ಯಾತೀತವಾದ ಉತ್ಕೃಷ್ಟ ಪದವಿಯನ್ನು ಹೊಂದಿ ಸರ್ವಜನ ಸಮ್ಮತನಾಗಿ ಯಾರಿಂದಲೂ ದ್ವೇಶಿಸಲ್ಪಡದವನಾಗಿ ಅನೇಕ ಲಕ್ಷ ಜನಗಳಿಂದ ಜೀವಿತ ಕಾಲದಲ್ಲಿಯೇ ಆರಾಧಿಸಲ್ಪಟ್ಟ ಈ ಮಹಾಮಹಿಮನು ಯಾರಾಗಿರಬಹುದು?

ಪರಮಾರ್ಥ ವಿಚಾರ ಸಾರದೋ- ಳ್ತಿರುಳೋ? ಭೂತದಯಾಕ್ಷ ಮಾಭ್ದಿಯೋ? ಸರಳಾದ್ವಯ ಭಾಷ್ಯಕಾರನೀ ಗುರುದೇವಂ ತಿರೆಯೊಳೆ ದಯಾಘನಂ ಪುರುಷಾಕೃತಿ ವೆತ್ತ ದೈವವೋ? ನರದಿವ್ಯಾಕೃತಿ ತೆಳೆದ ಧರ್ಮವೋ? ಪರಮೇಶನ ಪವಿತ್ರ ಪುತ್ರನೋ? ಕರುಣಾಪೂರಿತ ಮುತ್ತು ರತ್ನವೋ?

ಈತನು ಸಾಕ್ಷಾತ್ ಸರ್ವೇಶ್ವರನ ಅವತಾರ. ಅಂಧತೆಯಲ್ಲಿಯೂ, ಅಸ್ವಾತಂತ್ಯ್ರದಲ್ಲಿಯೂ ಜೀವಿಸಿಕೊಂಡಿರುವ ಲಕ್ಷೋಪಲಕ್ಷ ಮಾನವರಿಗೆ ರಕ್ಷಾಕವಚವನ್ನೂ ಮೋಕ್ಷ ಮಾರ್ಗವನ್ನು ತೋರಿಸುವುದಕ್ಕಾಗಿ ಈಶ್ವರನೇ ಗುರುವಾಗಿ ಅವತರಿಸಿದುದಾಗಿರಬಹುದು.

ಕುಟುಂಬ: ತಂದೆ : ಮಾಡನ್ ಆಸನ್ ತಂದೆ ಮಾಡನ್ ಆಸನ್ ಪ್ರತಿಷ್ಠಿತ ವಂಶದವರಾಗಿದ್ದು, ಕುಟುಂಬದ ಯಜಮಾನನಾಗಿದ್ದ. ಎತ್ತರದ ಮೈಕಟ್ಟಿನ ವ್ಯಕ್ತಿತ್ವದವನಾಗಿದ್ದು. ಯಾವಾಗಲೂ ಶುಭ್ರವಾದ ಬಿಳಿ ವಸ್ತ್ರವನ್ನೇ ಧರಿಸುತ್ತಿದ್ದ. ಉತ್ತಮ ಕೃಷಿಕ ಮಾತ್ರವಲ್ಲದೆ, ಜೋತಿಷ್ಯ, ಆಯುರ್ವೇದ ಪಂಡಿತನು ಆಗಿದ್ದ. ಹಳ್ಳಿಯ ಶಾಲೆಯ ಅಧ್ಯಾಪಕನಾಗಿದ್ದುದರಿಂದ ಆಸನ್ ಎಂಬ ನಾಮಾಂಕಿತವೂ ಬಂದಿತು. ಮಕ್ಕಳಿಗೆ ಸಂಸ್ಕೃತ, ಮಲಯಾಳಂನ ಪಾಠ ಹೇಳಿಕೊಡುತ್ತಿದ್ದನು. ಊರಿನಲ್ಲೇನಾದರೂ ಭೂಮಿ, ಇನ್ನಿತರ ವಿಷಯಗಳಲ್ಲಿ ವ್ಯಾಜ್ಯ ತಕರಾರುಗಳಿದ್ದರೆ, ಬೇಕಾದ ಮಾರ್ಗದರ್ಶನ, ಸಲಹೆಗಳನ್ನು ನೀಡುತ್ತಿದ್ದನು. ಬೈನಿ ಮರದ ಎಲೆಯಿಂದ ಮಾಡಿದ ಛತ್ರಿಯನ್ನು ಹಿಡಿದು, ಕಾಲ್ನಡಿಗೆಯಲ್ಲಿ ವಾರಕ್ಕೊಂದಾರ್ತಿ ತಿರುವನಂತಪುರಕ್ಕೆ ಪ್ರಯಾಣ ಬೆಳೆಸುತ್ತಿದ್ದನು. ಪುರಾಣ, ರಾಮಾಯಣ, ಮಹಾಭಾರತಗಳಂತಹ ಗ್ರಂಥಗಳನ್ನು ಪ್ರವಚನ ಮಾಡಿ, ಜನರ ಜ್ಞಾನದಾಹವನ್ನು ಇಂಗಿಸುವ ಪ್ರಯತ್ನ ಮಾಡುತಲಿದ್ದು ಅಕ್ಕಪಕ್ಕದ ಗ್ರಾಮಸ್ಥರಿಂದ ಗೌರವಗಳನ್ನು ಪಡೆಯುತ್ತಿದ್ದ.

ತಾಯಿ : ಕುಟ್ಟಿಅಮ್ಮ (ಕುಟ್ಟಿಯಮ್ಮಾಳ್) ಸಾದ್ವಿ ಶರೋಮಣಿ, ಮಗುವಿನಂತಹ ಮುಗ್ಧ ಮನಸ್ಸಿನ ಸರಳ ನಡವಳಿಕೆಯ. ತಾಯಿಯ ಗುಣಗಳೇ ‘ನಾಣು’ ವಿನಲ್ಲಿ ರಕ್ತಗತವಾಗಿ ಬಂದಿತ್ತು. ‘ನಾಣು’ವಿಗೆ ಸುಮಾರು 20 ವರ್ಷ ಪ್ರಾಯವಾದಾಗ ತಾಯಿ ಸ್ವರ್ಗಸ್ಥಳಾದಳು. ತಂದೆ ಮಾಡನ್ ಆಸನ್ ಮತ್ತು ಕುಟ್ಟಿಯಮ್ಮಳದ್ದು ಮಧ್ಯಮ ವರ್ಗದ ಬದುಕು. ಈಳವ ಕುಟುಂಬದವರಾಗಿದ್ದು, ಹೊಳಗದ್ದೆಗಳನ್ನು ಉತ್ತು ಬಿತ್ತಿ ಬೆಳೆಸಿದ ಫಸಲಿನಿಂದ ಕುಟುಂಬ ಪೂಷಣೆ, ನಿರ್ವಹಣೆ ಮಾಡಿತ್ತಿದ್ದರು.

ಈ ಕುಟುಂಬದವರಲ್ಲಿ ವಿದ್ಯಾವಂತರು, ಸುಸಂಸ್ಕೃತರು, ವೈದ್ಯಕೀಯ ಸಾಹಿತ್ಯ ಮತ್ತು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪಾರಂಗತನೂ ಇದ್ದರು. ಕುಟ್ಟಿಯಮ್ಮನ ಸೋದರ ಮಾವ ಈ ವಂಶದಲ್ಲಿ ಓರ್ವ ಮಹಾಪುರುಷನಾಗಿದ್ದನು. ಈತ ಬ್ರಹ್ಮಚಾರೊಯಾಗಿದ್ದು, ಅನೇಕ ಗ್ರಂಥಗಳನ್ನು ಬರೆದವನಾಗಿದ್ದನು. ಇವನು ಬರೆದ ತಾಳೆಗರಿ ಗ್ರಂಥಗಳು ತಿರುವನಂತಪುರ ಹಾಗೂ ಸುತ್ತಮುತ್ತಲ ಪ್ರಮುಖ ವಿದ್ವಾಂಸರುಗಳ ಮನೆಗಳಲ್ಲಿ ಈಗಲೂ ಕಾಣಬಹುದಾಗಿದೆ. ಈತನೂ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದು ಮನೆತನಕ್ಕೆ ಹೆಸರು ತಂದವನು. ಈತನನ್ನು ಕೇರಳ ಕಾಳಿದಾಸನೆಂದೂ ಸಂಬೋಧಿಸುತ್ತಿದ್ದರು.ಕುಟ್ಟಿಯಮ್ಮನ ತಂದೆ ತಿರುವಾಂಕೂರಿನ ರಾಜನ ಆಸ್ಥಾನದಲ್ಲಿ ವ್ಯಾಯಾಮ ಶಿಕ್ಷಕನಾಗಿದ್ದು, ಕುಸ್ತಿ, ಬೇಟೆಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದ. ದೀರ್ಘಕಾಯ, ಗೌರವರ್ಣ, ಸುಂದರ ರೂಪದ ಆ ಅಜ್ಜನಂತೆಯೇ ನಾಣುವಿನ ರೂಪ ಇತ್ತೆಂದು ಹೇಳುವರು. ನಾಣು ಹುಟ್ಟುವ ಎರಡು ವರ್ಷಗಳ ಮೊದಲೇ ಆ ಅಜ್ಜ ತೀರಿಹೋಗಿದ್ದರು, ಮುಂದುವರಿಯುವುದು.

0 comments: