ಗಡಿ ಪಟ್ಟ ಭಾಮದಾ ಪಟ್ಟ ಇವೆಲ್ಲ ಒಂದು ರೀತಿಯಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಗಳು ಅದೇ ರೀತಿಯಲ್ಲಿ ಧಾರ್ಮಿಕ ನಂಬಿಕೆಗಳನ್ನು ಮುಂದುವರೆಸುವ ಮತ್ತು ಮುಂದಾಳತ್ವ ವಹಿಸಿಕೊಂಡು ನಡೆಸಲು ಧಾರ್ಮಿಕತೆಯ ಒಳ ಚೌಕಟ್ಟಿನಲ್ಲಿ ರೂಪು ಗೊಂಡ ಬುನಾದಿಗಳು. ಶ್ರದ್ದಾ ಭಕ್ತಿಯಿಂದ ಅದೇ ರೀತಿ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ಈ ಎಲ್ಲಾ ಆಚರಣೆಗಳು ಮುಕುಟಪ್ರಾಯವಾಗಿ ಮುಂದುವರೆಯುತ್ತಿದೆ. ಕೆಲವೊಂದು ದೈವಗಳೆ ನೇಮಿಸಿದ ಗಡಿ ಪಟ್ಟಗಳಾದರೆ ಇನ್ನು ಕೆಲವು ಗ್ರಾಮದ ದೈವಾರಾಧನೆಯಲ್ಲಿ ರೂಪುಗೊಂಡಿರುವಂತಹುದು. ಬಿಲ್ಲವ ಸಮಾಜದಲ್ಲೂ ಕೂಡ ಕೆಲವೊಂದು ಅರಸು ಪಟ್ಟಕ್ಕೆ ಸಮಾನವಾದ ಗಡಿ ಪಟ್ಟಗಳಿವೆ. ಬಗ್ಗ ತೋಟ ಬಗ್ಗ ಪೂಜಾರಿ ಪಟ್ಟ, ಎರ್ಮಾಲ್ ಗರಡಿ ನಾಯ್ಗೆರ್, ಕೊಲ್ಲೂರು ಗುಡ್ಡೆಸಾನ ಅಂತಪ್ಪ ನಾಯ್ಗೆರ್, ಹಳೆಯಂಗಡಿ ಕೊಪ್ಪಲ ಬಂಕಿ ನಾಯ್ಗೆರ್, ಮಾಂಗದಡಿ ಕಾರ್ನಾಡ್ ಧರ್ಮಸಾನ ಗೋಪಾಲ ನಾಯ್ಗೆರ್ ಇವೆಲ್ಲ ಇತಿಹಾಸವುಳ್ಳ ಮತ್ತು ಅತ್ಯಂತ ಗೌರವಯುತವಾದ ಗಡಿ ಪಟ್ಟಗಳೇ ಆಗಿದೆ.
ಇದರಲ್ಲಿ ಬೈದೇರುಗಳ ವಿಷಯಕ್ಕೆ ಬಂದಾಗ ಬಗ್ಗ ತೋಟದ ಬಗ್ಗ ಪೂಜಾರಿ (ಮೈಂದ ಪೂಜಾರಿ) ಪಟ್ಟವು ಅತ್ಯಂತ ಪವಿತ್ರವಾದ ಮತ್ತು ಗೌರವಯುತವಾದ ಪಟ್ಟ ಆಗಿದೆ. ಅನಾಧಿಯಲ್ಲಿ ಅರಸು ಪಟ್ಟವಿರುವಾಗ ಅರಸರ ವಾಲಗವಿರುವಾಗ ಮುಖ್ಯಸ್ಥರಾಗಿ ಬಗ್ಗಪೂಜಾರಿಯನ್ನ ಮುಂದಿಟ್ಟುಕೊಂಡು, ಬಗ್ಗಪೂಜಾರಿ ಮುಂದೆ ಅವರ ಹಿಂದೆ ಅರಸರು ಹೋಗುವಂತಹ ಪರಿಪಾಠವಿತ್ತು. ಅರಸರಿಗೆ ಆಗುವ ಅಮೆ ಸೂತಕ ಗಡಿಯಾದ ಬಗ್ಗಪೂಜಾರಿಗು ಕೂಡ ಅನ್ವಯವಾಗುತ್ತಿತ್ತು. ಅರಸೊತ್ತಿಗೆ ಸಮಯದಲ್ಲಿ ಹಿಂದೆ ಬಗ್ಗ ಪೂಜಾರಿ ಪಟ್ಟವಾಗುವ ಸಮಯದಲ್ಲಿ ವೀಳ್ಯದೆಲೆಯ ಚಪ್ಪರ ನೂಲಿನಿಂದ ಪಟ್ಟದುಂಗುರ ಇಡುವ ಕ್ರಮ ಇತ್ಯಾದಿ ವಿಧಿವಿಧಾನ ಪೂರ್ವಿಕವಾಗಿ ಇತ್ತು. ಆದರೆ ಈಗ ಬದಲಾವಣೆಯ ಈ ಕಾಲ ಘಟ್ಟದಲ್ಲಿ ಅರಸು ಪಟ್ಟಾಭಿಷೇಕ ನಿಂತು ಹೋಗಿದೆ. ಪ್ರಸ್ತುತ ಕುತ್ಯಾರು ಕೇಂಜ ಗರೋಡಿ ಯಲ್ಲಿ ಬ್ರಹ್ಮ ಬೈದೇರುಗಳ ದರ್ಶನಾವೇಶದ ನುಡಿಯ ಪ್ರಕಾರ ಗಡಿ ಪ್ರಧಾನವನ್ನು ಮಾಡಲಾಗುತ್ತಿದೆ
ಮೊದಲಿನ ಬಗ್ಗಪೂಜಾರಿ ಯವರು ವಯೋವೃದ್ಧರಾಗಿ ದೈವಂಗತರಾದಾಗ ತದನಂತರ ಬಗ್ಗಪೂಜಾರಿ ಮನೆತನ ಅರಾಧಿಸಿಕೊಂಡು ಬಂದ ದೈವವನ್ನು ಆವೇಶ ಭರಿಸಿ ಈ ದೈವಗಳ ದರ್ಶನ ಆವೇಶದಲ್ಲಿ ಇನ್ನು ಮುಂದೆ ತಲೆತಲಾಂತರಗಳಿಂದ ಪರಂಪರೆಯಿಂದ ಬಂದಿರುವಂತಹ ಬಗ್ಗ ಪಟ್ಟದ ಮುಂದಿನ ವಾರಸುದಾರ ಯಾರು ಎಂದು ದೈವ ಕುಟುಂಬಿಕರಲ್ಲಿ ಕೇಳಿದಾಗ ಎರಡು-ಮೂರು ವ್ಯಕ್ತಿಗಳನ್ನು ಸೂಚಿಸಿದಾಗ ಅದರಲ್ಲಿ ದೈವ ತಾನು ದೃಷ್ಟಿ ನೆಟ್ಟ ವ್ಯಕ್ತಿ ಯಾರೆಂದು ದೈವ ಪ್ರಸಾದ ಮೂಲಕ ತೋರ್ಪಡಿಸಿ ನಂತರ ಗರಡಿಯಲ್ಲಿ ಬೈದೇರುಗಳಲ್ಲಿ ಅರಿಕೆ ಮಾಡಿ ಶ್ರೀಬೈದೇರುಗಳ ನುಡಿ ಪ್ರಕಾರ ಪ್ರಸಾದ ನೋಡಿ ತೀರ್ಥ ಕ್ಷೇತ್ರ, ಆದಿ ಗರಡಿ ಹಾಗೂ ಸೀಮೆಯ ಗರೋಡಿ ಆದಿಸ್ಥಾನ ಇತ್ಯಾದಿಗಳಿಗೆ ಭೇಟಿ ನೀಡಿ, ಹಿರಿಯರ ಪಾದ ಪೂಜೆ ಮಾಡಿ ಸೀಮೆ,ಗ್ರಾಮ ದೇವಸ್ಥಾನ ಗಳಿಗೆ ಸೇವೆ ಕೊಟ್ಟು, ಗರೋಡಿ ಯಲ್ಲಿ ಬೈದೇರುಗಳಿಗೆ ಅತೀ ಪ್ರೀಯವಾದ ಅಗೇಲು ನೈವೇದ್ಯ,ದರ್ಶನ ಸೇವೆಸಲ್ಲಿಸಿ ಧರ್ಮ ಚಾವಡಿಯಲ್ಲಿನ ದೈವಗಳಿಗೆ ಧರ್ಮ ನೇಮ,ಸೀಮೆಯ ಜನರಿಗೆ ಹಾಲು ಪಾಯಸ ತಾಂಬೂಲಾದಿ ಸೇವೆ ನೀಡಿ ಗಡಿ ಪಟ್ಟಕ್ಕೆ ದಿನ ಗೊತ್ತು ಪಡಿಸಿ ಗರೋಡಿಯಲ್ಲಿ ಸೀಮೆಯ 21 ಗುತ್ತು ಬಾರಿಕೆ ಮತ್ತು 10 ಸಮಸ್ತರ ಕೂಡುವಿಕೆಯಿಂದ ಗಡಿ ಪಟ್ಟವಾಗುವ ವ್ಯಕ್ತಿಯ ಕುಟುಂಬಿಕರು ಇನ್ನು ಮುಂದೆ ಈ ವ್ಯಕ್ತಿ ನಿಮಗೆ ಸೇರಿದ್ದು ನಿಮ್ಮ ಸೇವೆಗೆ ಸಂಬಂಧ ಪಟ್ಟವರು ಎಂದು ಬೈದೇರುಗಳಿಗೆ ಮಾತು ನೀಡಿ ಬಿಟ್ಟು ಕೊಡುತ್ತಾರೆ.
ತದನಂತರ ಬೈದೇರುಗಳು ನೀಡಿದ ವೀಳ್ಯ ಸ್ವೀಕರಿಸಿ ಕಳಶ ಸ್ನಾನ ಮಾಡಿ ಬ್ರಹ್ಮರ ಗುಂಡವಿರುವ ಗರ್ಭ ಗುಡಿ ಪ್ರವೇಶಿಸಿ ದೇವರಿಗೆ ನಮಸ್ಕರಿಸಿದ ಬಳಿಕ ತಲೆಗೆ ಅರಸು ಮುಂಡಾಸು ಕಟ್ಟಿ 16 ಮೊಳದ ಬಿಳಿ ಪಂಚೆಯನ್ನು ಕಚ್ಚೆಯಾಗಿ ಉಟ್ಟು ಮೈಗೆ ಉತ್ತರಿಯವನ್ನು ಧರಿಸಿ ಸಿಂಗರಿಸಿಕೊಂಡು ಮೂರು ಸಲ ಬೈದೇರುಗಳು ಕರೆಯುವ ಬಗ್ಗ ಪೂಜಾರಿಯೆಂಬ ಹೆಸರಿಗೆ ಓಗೊಟ್ಟು ಬಳಿಕ 10 ಸಮಸ್ತರ ಸಮ್ಮುಖದಲ್ಲಿ ಬಗ್ಗಪೂಜಾರಿ ಯನ್ನು ಮೂರು ಕಾಲಿನ ಬಗ್ಗ ಪೀಠದಲ್ಲಿ ಪಟ್ಟಾಭಿಷಿಕ್ತರನ್ನಾಗಿ ಮಾಡಿ ಈ ಮೂಲಕ ಎಲ್ಲೂರು ಸೀಮೆಯ 6 ಮಾಗಣೆಯ ಬಿಲ್ಲವ ಜ್ಯೇಷ್ಠನಾಗಿ ಬಗ್ಗಪೂಜಾರಿ ಪೀಠರೋಹನ ನಡೆಯುತ್ತದೆ. ತದನಂತರ ಅಲ್ಲಿ ದೈವ ದೇವರುಗಳ ಸೇವೆಗಳು ಇವರ ಆನತಿಯಂತೆ ಇವರ ಮುಂದಾಳತ್ವದಲ್ಲಿ ನಡೆಯುತ್ತದೆ. ಬೈದೇರುಗಳು ಏನೇ ನುಡಿ ಹೇಳುವುದಿದ್ದರು ಅದನ್ನು ಬಗ್ಗ ಪೂಜಾರಿಯನ್ನು ಸಂಭೋದಿಸಿಯೆ ಹೇಳುತ್ತಾರೆ. ಅದೇ ರೀತಿಯಲ್ಲಿ ಯಾರೆ ಏನೆ ಹರಿಕೆ ಮಾಡುವುದಿದ್ದರು ಅದು ಬಗ್ಗ ಪೂಜಾರಿಯ ಮುಖಾಂತರನೆ ಮಾಡುತ್ತಾರೆ. ಅಂದರೆ ಇಲ್ಲಿ ದೈವಗಳೊಂದಿಗೆ ನೇರವಾಗಿ ಮಾತನಾಡುವ ಹಕ್ಕು ಬಗ್ಗ ಪೂಜಾರಿಗೆ ಮಾತ್ರ ಇರುತ್ತದೆ. ಬಗ್ಗ ಪೂಜಾರಿಯ ಅಧಿಕಾರ ವ್ಯಾಪ್ತಿಗೆ 7 ಗರಡಿಗಳು ಒಳಗೊಂಡಿದೆ. 66 ಗರಡಿ ಮತ್ತು 33 ತಾವುಗಳಿಗೆ (ಕೋಟೆ) ಬಗ್ಗ ಪುಜಾರಿಯವರು ಹೋದರೆ ಅವರಿಗೆ ಮೊದಲ ಪ್ರಾಸಸ್ತ್ಯ ಗೌರವ ಎನ್ನುವ ಉಲ್ಲೇಖ ಪಾರ್ದನಲ್ಲಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಬಗ್ಗ ಪೂಜಾರಿಯಾಗಿ ಮಿತಭಾಷಿ ಉಮೇಶ್ ಎನ್ ಕೋಟ್ಯಾನ್ ಇವರಿಗೆ ಪಟ್ಟವಾಗಿದ್ದು ಹಿರಿಯರು ಹಾಕಿಕೊಟ್ಟ ಆಚರಣೆಗಳಿಗೆ ಸ್ವಲ್ಪವು ಚ್ಯುತಿ ಬರದ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದು ತನ್ನೆಲ್ಲ ಜೀವನವನ್ನು ಬೈದೇರುಗಳ ಆಶಯದಂತೆ ಮುಡಿಪಾಗಿಟ್ಟಿದ್ದಾರೆ.
ಇದು ಬಿಲ್ಲವ ಸಮಾಜವೆ ಹೆಮ್ಮೆ ಪಡುವಂತ ವಿಷಯ. ಈ ವಿಷಯಗಳು ಕಾಲದ ಹೊಡೆತದಲ್ಲಿ ಮತ್ತು ಪಟ್ಟಭದ್ರ ಹಿತಾಶಕ್ತಿಗಳ ಹಿಡಿತದಲ್ಲಿ ಮರೆಯಾಗಿದ್ದು ಈಗಲಾದರು ನಾವು ತಿಳಿದುಕೊಂಡು ಬಿಲ್ಲವ ಸಮಾಜದ ಹಿರಿಮೆಯನ್ನು ನಾವು ಕೊಂಡಾಡಬೇಕಿದೆ. ಪ್ರತಿ ಒಬ್ಬ ಬಿಲ್ಲವ ಯುವಕರು ಇದರ ಬಗ್ಗೆ ತಿಳಿದುಕೊಂಡು ನಮ್ಮ ಹಿಂದಿನಿಂದ ಬರುವ ಪೀಳಿಗೆಗೆ ಮುಟ್ಟಿಸುವ ಪ್ರಯತ್ನ ಮಾಡಬೇಕಿದೆ. ಯಾರದೋ ಯಾವುದೋ ಆಮೀಷಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು ನಮ್ಮ ಹಿರಿಯರ ಭವ್ಯತೆಯನ್ನು ನೆನಪಿಸಿಕೊಂಡು ಇಂತಹ ಪಟ್ಟಾಭಿಷಿಕ್ತರ ಆದರ್ಶಗಳನ್ನು ಮೈಗೂಡಿಸಿಗೊಂಡು ಮನ್ನಡೆಯಬೇಕು ಅದೇ ರೀತಿ ಬೇರೆ ಜಾತಿಗಳ ಬಗ್ಗೆ ವೈಶಮ್ಯ ಬೀಜ ಬಿತ್ತದೆ ಇತರ ಜಾತಿಗಳಿಗೆ ಗೌರವ ನೀಡಿ ದೈವದ ಕೃಪಕಟಾಕ್ಷಕ್ಕೆ ಒಳಗಾದ ಬಗ್ಗ ಪೂಜಾರಿಗಳು ಹುಟ್ಟಿದ ಬಿಲ್ಲವ ಜಾತಿಯಲ್ಲಿ ನಾವು ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು. ಲೇಖನ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ ಸಹಕಾರ : ಪೂಜ್ಯ ಬಗ್ಗ ಪೂಜಾರಿ, ಕೇಂಜ ಕುತ್ಯಾರ್ ಗರಡಿ
0 comments: