Friday, November 3, 2017

ಬೈದೇರುಗಳ ಆರಾಧನೆಯಲ್ಲಿ ಕೆಲವೊಂದು ವಸ್ತುಗಳ ವ್ಯರ್ಜ

ಬೈದೇರುಗಳ ನೇಮದ ಆಚರಣೆಯು ಬಹು ವಿಸ್ತಾರವಾದದ್ದು ಮತ್ತು ಅಷ್ಟೇ ಶುಧ್ದಾಚಾರದ ನಿಯಮಗಳೆ ಹೆಚ್ಚು ಇರುವಂತದ್ದು. ನನ್ನ ಹಿರಿಯರು ಮತ್ತು ಸೇವಾ ಪಾತ್ರಿಗಳು ತಿಳಿಸಿದ ಮತ್ತು ನಾವು ನಡೆದುಕೊಂಡು ಬಂದಿರುವ ಕೆಲವೊಂದು ಆಚರಣೆಗಳ ಬಗ್ಗೆ ಇಲ್ಲಿ ತಿಳಿಸಲು ಇಷ್ಟ ಪಡುತ್ತೇನೆ. ಪುತ್ತೂರು ತಾಲೂಕು ಮತ್ತು ಕೆಲವೊಂದು ಕಡೆ ಇವತ್ತಿಗು ಬೈದೇರುಗಳ ಉತ್ಸವ ಸಮಯದಲ್ಲಿ ತರಕಾರಿಗಳಾದ ಬದನೆ, ಬಸಳೆ, ತೊಂಡೆಕಾಯಿ, ನೆಲ್ಲಿಕಾಯಿ ಇವೆಲ್ಲದರ ಬಳಕೆ ವ್ಯರ್ಜ್ಯ ಎನ್ನುವ ನಂಬಿಕೆಯಿದೆ. ಅದಕ್ಕೆ ನಂಬಿಕೆಯ ಕಾರಣವು ಇದೆ. ಹಿಂದೆ ಒಮ್ಮೆ ನೇಮದ ಸಮಯದಲ್ಲಿ ಬೈದೇರುಗಳ ಪಾತ್ರಿಗಳು ನೇಮದ ಕಟ್ಟಳೆಯ ಭಾಗವಾಗಿ ಸುರಿಯವನ್ನು ಹೊಟ್ಟೆಗೆ ಚುಚ್ಚಿಕೊಂಡು ಹೊರಗೆ ತೆಗೆದಾಗ ಸುರಿಯದ ತುದಿಯಲ್ಲಿ ತೊಂಡೆಕಾಯಿಯ ತುಂಡು ಚುಚ್ಚಿಕೊಂಡಿದ್ದು ಅದು ಸುರಿಯಗೆ ಮೈಲಿಗೆಯಾದುದರಿಂದ ಇನ್ನು ಮುಂದಕ್ಕೆ ಆರಾಧನೆಯ ಸಮಯದಲ್ಲಿ ತೊಂಡೆಕಾಯಿ ಸೇವನೆ ನಿಶಿದ್ದ ಎನ್ನುವ ನಂಬಿಕೆ ಬೆಳೆಯಿತು.

ಅದೇ ರೀತಿ ಇನ್ನೊಮ್ಮೆ ಇದೇ ರೀತಿಯಲ್ಲಿ ಸುರಿಯ ಹೊಟ್ಟೆಗೆ ಹಾಕಿ ತೆಗೆದಾಗ ಬಸಳೆ ದಂಟುಗಳು ಕೆಳಗೆ ಬಿತ್ತಂತೆ ಹಾಗಾಗಿ ಇದು ಕೂಡ ಆರಾಧನ ಸಮಯದಲ್ಲಿ ಸೇವನೆಗೆ ನಿಶಿದ್ದ ಎನ್ನುವ ನಂಬಿಕೆ ಬೆಳೆಯಿತು. ಯಾಕೆಂದರೆ ಕೋಟಿ ಚೆನ್ನಯರು ಮಲ್ಲಯ್ಯ ಬುದ್ಯಂತನನ್ನು(ಮಂತ್ರಿ) ಗದೆಯ ಬದಿಯಲ್ಲಿ ಕೊಂದಾಗ ಅವನ ದೇಹದಿಂದ ಹೊರಟ ರಕ್ತ ಅಲ್ಲೇ ಇದ್ದ ಬಸಳೆ ಮತ್ತು ತೊಂಡೆಕಾಯಿ ಬುಡಕ್ಕೆ ಹೋಯಿತಂತೆ ಆದುದರಿಂದಲೆ ಅವೆರಡು ಬಳಕೆಗೆ ನಿಷಿದ್ದವಾಗಿದ್ದು ಎನ್ನುವ ನಂಬಿಕೆಯಿದೆ. ಅದೇ ರೀತಿಯಲ್ಲಿ ಬದನೆ ಸೇವನೆ ಮಾಡಿದ ದೈವ ನರ್ತಕರಿಗೆ ಮತ್ತು ಪಾತ್ರಿ ವರ್ಗದವರಿಗೆ ಮೈಯೆಲ್ಲ ತುರಿಕೆ ಪ್ರಾರಂಭವಾಯಿತಂತೆ ಅದರ ನಂತರ ಇದರ ಬಳಕೆಯು ನಿಶಿದ್ದವಾಯಿತು.

ಅದೇ ರೀತಿಯಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿಯ ಬಳಕೆ ಇದರ ಹಿಂದೆ ಒಂದು ರೋಚಕ ಕಥೆಯಿದೆ. ಕೋಟಿ ಚೆನ್ನಯರು ಪಡುಮಲೆ ಕುಜುಂಬ ಮುದ್ಯ ಬಲ್ಲಾಳನ ಮೇಲೆ ಕೋಪಿಸಿಕೊಂಡು ಗಡು ಇಟ್ಟು ಬೋಧಿಗೆ ಕಂಬದ ಮೇಲೆ ಇದರ ನಿಮಿತ್ತ ಗುರುತು ಮಾಡಿ ಚಾವಡಿ ಇಳಿದು ಬಂದಾಗ ಅನ್ಯಾಯದಿಂದ ಇವರ ಮೇಲೆ ಕೆಲವರು ಕೈ ಎತ್ತಲು ಬಂದಾಗ ದಾರಿಯುದ್ದಕ್ಕೂ ಅವರನ್ನು ತಮ್ಮ ಸುರಿಯದಿಂದ ಸವರಿಕೊಂಡೇ ಬರುತ್ತಾರೆ. ಇಷ್ಟಾದರು ಚೆನ್ನಯ ಬೈದ್ಯರ ಕೋಪ ಮಾತ್ರ ತನಿದಿರುವುದಿಲ್ಲ ಆಗ ಕೋಟಿ ಬೈದ್ಯರು ಹೇಳುತ್ತಾರೆ ತಮ್ಮ ನಿನ್ನ ಕೋಪವನ್ನು ಇದರ ಮೇಲೆ ತೀರಿಸಿಕೋ ಎಂದು ನೆಲ್ಲಿಕಾಯಿಯನ್ನು ಮೇಲಕ್ಕೆ ಹಾರಿಸುತ್ತಾರೆ ಆಗ ಚೆನ್ನಯ ಬೈದ್ಯರು ಮೇಲೆ ಹಾರಿಸಿದ ನೆಲ್ಲಿಕಾಯಿಯನ್ನು ಸುರಿಯದಿಂದ ಹದಿನಾರು ತುಂಡು ಮಾಡಿ ಕೋಪವನ್ನು ನೀಗಿಸಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಪಂಜದ ಗಡಿಯ ನೆಲ್ಲಿಕಾಯಿ ಕಾಡನ್ನು ಹೊಕ್ಕಾಗ ಅವರಿಗೆ ಪಂಜದ ಕೇಮರ ಬಲ್ಲಾಳನ ಜನರು ತಮ್ಮನ್ನು ಹಿಡಿಯಲು ಮರದ ಮೇಲೆ ಅಡಗಿದ್ದಾರೆ ಎನ್ನುವ ವಿಷಯ ಗೊತ್ತಾಗಿ ಒಂದು ನೆಲ್ಲಿಕಾಯಿ ಹಾರಿಸಿ ಹದಿನಾರು ತುಂಡು ಮಾಡಿ ಅದರಿಂದಲೆ ಮರದ ಮೇಲೆ ಕುಳಿತ್ತಿದ್ದ ಶತ್ರು ಸೈನಿಕರನ್ನು ಕೆಳಗೆ ಬೀಳಿಸುತ್ತಾರೆ.

ಈ ರೀತಿಯಾಗಿ ಕೋಟಿ ಚೆನ್ನಯರು ಕೋಪವನ್ನು ತೀರಿಸಿಕೊಂಡ ನೆಲ್ಲಿಕಾಯಿ ಅವರ ಆರಾಧನೆಯ ಸಮಯದಲ್ಲಿ ನಿಶಿಧ್ದ ಎನ್ನುವ ನಂಬಿಕೆ ತಲೆಯಿಂದ ತಲೆಗೆ ಬೆಳೆಯಿತು. ಇವತ್ತಿಗು ಕೂಡ ಪುತ್ತೂರು ತಾಲೂಕಿನ ಗರಡಿ ಮನೆಯವರು ನೆಲ್ಲಿಕಾಯಿಯ ಉಪ್ಪಿನಕಾಯಿಯನ್ನು ಮನೆಯಲ್ಲಿ ಹಾಕುವುದು ಇಲ್ಲ ಮತ್ತು ಬಳಕೆ ಮಾಡುವುದು ಇಲ್ಲ. ಅದೇ ರೀತಿಯಲ್ಲಿ ಒಡಿಪು(ಉಡುಪಿ) ಕಾರ್ಕಳ( ಕಾರ್ಳ) ಮತ್ತು ಮೂಡುಬಿದ್ರೆ (ಬೆದ್ರ) ಕಡೆಗಳಲ್ಲಿ ಇವತ್ತಿಗು ಸೀಯಾಳದ ಬಳಕೆ ಗರಡಿ ಆರಾಧನೆಯಲ್ಲಿ ನಿಶಿದ್ದ. ಹಿಂದೆ ಕೋಟಿ ಬೈದ್ಯರು ಎಣ್ಮೂರ ಯುದ್ದ ಭೂಮಿಯಲ್ಲಿ ಎದೆಗೆ (ಅಲ್ಲೆ) ಬಿಲ್ಲು ತಾಗಿಸಿಕೊಂಡು ಬಿದ್ದಿರಲು ಜೀವ ಹೋಗುತ್ತಿರುವ ಸಮಯದಲ್ಲಿ ಬಾಯಾರಿಕೆ ತಣಿಸಲು ಅಲ್ಲೇ ಕೈಯಲ್ಲಿ ಸೀಯಾಳ ಹಿಡಿದುಕೊಂಡು ಹೋಗುತ್ತಿರುವ ದಾರಿಹೋಕನಲ್ಲಿ ಕೇಳಲು ಆತ ಹೇಳುತ್ತಾನೆ ಇದು ದೇವರ ಅಭಿಷೇಕಕ್ಕೆ ಕೊಂಡೊಯ್ಯುತ್ತಿರುವುದು ನಿಮಗೆ ಕೊಡಲು ಸಾಧ್ಯವಿಲ್ಲ ಎನ್ನುವ ಉದ್ದಟನದ ಮಾತು ಬರುತ್ತದೆ.

ಆದುದರಿಂದ ಸೀಯಾಳ ಬೈದೇರುಗಳ ಆರಾಧನೆಯಲ್ಲಿ ನಿಶಿದ್ದ ಸ್ಥಾನ ಪಡೆಯಿತು. ಅದೇ ರೀತಿ ಸುಗ್ಗಿ ಕಾಲದಲ್ಲಿ ಬೆಳೆದ ಭತ್ತವು ಕೂಡ ಬೈದೇರುಗಳ ಆರಾಧನೆಯಲ್ಲಿ ನಿಶಿದ್ದ ಯಾಕೆಂದರೆ ಸುಗ್ಗಿ ಸಮಯದಲ್ಲೇ ಕೋಟಿ ಚೆನ್ನಯರಿಗು ಮತ್ತು ಮಲ್ಲಯ್ಯ ಬುದ್ಯಂತನಿಗು ಮನಸ್ತಾಪವಾಗಿ ಆತನ ಹತ್ಯೆಯಾಗಿರುವುದು ಹಾಗಾಗಿ ಸುಗ್ಗಿ ಸಮಯದಲ್ಲಿ ಬೆಳೆದ ಭತ್ತ ಉಡುಪಿ, ಕಾರ್ಕಳ ಮತ್ತು ಬೆದ್ರ ಕಡೆಗಳಲ್ಲಿ ನಿಶಿದ್ದ. ಈ ರೀತಿಯಾಗಿ ಇವೆಲ್ಲ ಅಷ್ಟೆ ನಿಯಮ ನಿಷ್ಟೆಯಿಂದ ನಡೆಯುವ ಪ್ರಕ್ರಿಯೆಗಳು ಎಲ್ಲವನ್ನು ಯಾವುದೇ ಚ್ಯುತಿ ಬರದಂತೆ ಆಚರಣೆಯ ಸಮಯದಲ್ಲಿ ನಡೆಸಿಕೊಂಡು ಹಿರಿಯರು ಬರುತ್ತಿದ್ದಾರೆ. ಕಿರಿಯರಾದ ನಾವು ಕೂಡ ಹಿರಿತನದ ನಂಬಿಕೆ ಮತ್ತು ಮಾರ್ಗದಲ್ಲೇ ನಡೆಯಬೇಕಾಗಿರುವುದರಿಂದ ನಮ್ಮ ಮುಂದಿನ ಪೀಳಿಗೆಗೆ ಮುಟ್ಟಿಸುವ ಪ್ರಯತ್ನ ಮಾಡೋಣ.

ಲೇಖನ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

ಸಹಕಾರ : ದೀಪಕ್, ಬೋಳೂರು ಮರ್ಣೆ ಗರಡಿ

2 comments:

  1. Dear sir,

    please contact person and post padunanchina option korle or post nikleg send malthd accept malthd upload malpunachina option deele

    By viji sanils

    ReplyDelete
  2. Becouse Yedde Yedde Post ithnda share malpoli athe biruvereg SO,

    ReplyDelete