ಎಲ್ಲರನ್ನು ಎಲ್ಲಾ ಕಾಲಕ್ಕು ಮಾತಿನಲ್ಲಿ ಸಂತೋಷ ಪಡಿಸಲು ಆಗುವುದಿಲ್ಲ ಅವರ ಕೆಲಸಗಳಿಂದ ಅವರು ಜನಮಾನಸದಲ್ಲಿ ಅಮರರಾಗುತ್ತಾರೆ. ಒಬ್ಬ ಮಾಡಿದ ಒಳ್ಳೆಯ ಕೆಲಸಗಳು ಎದುರಾಳಿಯ ಮನಸ್ಸು ಕೆಡಿಸುವುದಂತು ನಿಶ್ಚಿತ ಆದರು ಅವೆಲ್ಲವನ್ನು ಮೀರಿ ಬೆಳೆಯುವವನೇ ನಿಜವಾದ ನಾಯಕ. ತನ್ನ ಕಠೋರ ಮಾತುಗಳಿಂದ ತತ್ವ ಸಿದ್ದಾಂತಗಳನ್ನು ಮೀರದೆ ತನ್ನದೇ ಆದ ಅಭಿಮಾನಿ ವರ್ಗವನ್ನು ಪಡೆದವರು ಶ್ರೀಯುತ ಜನಾರ್ಧನ ಪೂಜಾರಿಯವರು. ನಾನು ಕೂಡ ಬೆಳೆಯುವಾಗ ಅವರ ಬಗ್ಗೆ ಕೇಳಿದ್ದು ಒಳ್ಳೆಯ ಮಾತುಗಳಿಗಿಂತ ದೂಷಣೆಯ ಮಾತುಗಳೆ ಹೆಚ್ಚು. ನಾನು ಕೂಡ ಅದು ಸತ್ಯವೆಂದೆ ತಿಳಿದು ಬದುಕಿದವನು. ಅವರ ಬಗ್ಗೆ ದಿನಕ್ಕೊಂದು ಕುಚೋದ್ಯ, ಹಾಸ್ಯಗಳನ್ನು ನಾವು ಬಾಯಿ ಚಪ್ಪರಿಸಿಕೊಂಡು ಓದಿದ್ದೆ ಹೆಚ್ಚು. ಅದೇ ರೀತಿಯಲ್ಲಿ ಮಾನ್ಯ ರಾಮಪ್ಪ ಪೂಜಾರಿಯವರ ಜೊತೆ ಜನಾರ್ಧನ ಪೂಜಾರಿಯವರನ್ನು ತಳಕು ಹಾಕಿಕೊಂಡು ಹುಟ್ಟಿಸಿದ ಹಾಸ್ಯ ತುಣುಕುಗಳು ನಮಗೆ ರಸಗವಳ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಅವರ ಬಗ್ಗೆ ವಸ್ತು ಚಿತ್ರಣಗಳು ಬರಲು ಪ್ರಾರಂಭವಾದಾಗ ಅವರ ಬಗ್ಗೆ ಮೊದಲಿಗಿದ್ದ ಭಾವನೆಗಳು ಬದಲಾಗಿ ಗೌರವ ಮೊಳಕೆ ಹೊಡೆಯಲು ಪ್ರಾರಂಭವಾಯಿತು. ನನ್ನ ಸ್ನೇಹಿತರೊಬ್ಬರು ಹೇಳುತ್ತಾ ಇದ್ದರು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾನ್ಯ ಜನಾರ್ಧನ ಪೂಜಾರಿಯವರು ನಿಂತಾಗ ಸುಳ್ಯದ ಕಡೆ ಒಂದು ಹಳ್ಳಿಯಲ್ಲಿ ಕಾಲೋನಿಯಲ್ಲಿ ಚುನಾವಣಾ ಪ್ರಚಾರ ಮಾಡುವಾಗ ನನ್ನ ಸ್ನೇಹಿತರನ್ನು ತೋರಿಸಿ ಇವರು ಪೂಜಾರಿಯವರ ಸಂಬಂಧಿಕರು ಎಂದಾಗ ಎಲ್ಲರು ಇವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಪ್ರಾರಂಭಿಸಿದಾಗ ಇವರು ವಸ್ತು ಸ್ಥಿತಿ ಕೇಳಲು ಅವರು ಹೇಳಿದ ಮಾತು " ಬ್ಯಾಂಕ್ ಏನೆಂದೆ ಗೊತ್ತಿರದ ನಮಗೆ ಬ್ಯಾಂಕ್ ಕಡೆ ಬರುವಾಗೆ ಮಾಡಿದವರು ಅವರೆ, ಕೈಯಲ್ಲಿ ಕಾಸು ಹಿಡಿಯುವಾಗೆ ಮಾಡಿದವರೆ ಅವರು ಇಂದು ಅವರ ಸಂಬಂಧಿಕರು ಅಂದಾಗ ಅವರನ್ನೇ ಕಂಡ ಭಾವ ನಮಗಾಗುತ್ತಿದೆ ಎಂದು" ಎಂತಹ ತುಂಬಿದ ಮನಸ್ಸಿನ ಅಭಿಮಾನದ ಮಾತು. ಇದು ಅವರು ನಿಜವಾಗಿ ಸಂಪಾದಿಸಿದ ಹೆಸರು.
ನಾನು ಯಾವತ್ತು ಅವರನ್ನು ಭೇಟಿಯಾಗಿದ್ದು ಇಲ್ಲ ಅವರೊಂದಿಗೆ ಮಾತ ನಾಡಿದ್ದು ಇಲ್ಲ ಆದರೆ ಅವರನ್ನು ಹತ್ತಿರದಿಂದ ನೋಡಲು ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದು ದಸರ ಸಮಯದಲ್ಲಿ ಕುದ್ರೋಳಿಯಲ್ಲಿ. ನಾವು ಸ್ವಯಂ ಸೇವಕರಾಗಿ ದುಡಿಯುತ್ತಿದ್ದ ಸಮಯದಲ್ಲಿ. ಅವರನ್ನು ಭೇಟಿಯಾಗಲು ನಮ್ಮೆಲ್ಲ ಸ್ನೇಹಿತರು ಹೋಗಿದ್ದ ಸಮಯದಲ್ಲಿ ನಮ್ಮನ್ನು ಗೌರವಯುತವಾಗಿ ಸಂಭೋದಿಸಿ ಮಾತನಾಡಿ ಆಶೀರ್ವದಿಸಿದ ಮೇಲೆ ನಾವು ಹೊರಡಲು ಅಣಿಯಾದಾಗ ನಮ್ಮೊಂದಿಗೆ ಇದ್ದ ಒಬ್ಬ ಸ್ನೇಹಿತರನ್ನು ಹತ್ತಿರ ಕರೆದು ಹೇಳಿದ ಮಾತು ಯಾವೊಬ್ಬ ಮನೋವೈದ್ಯರಿಗು ಸಾಟಿಯಿಲ್ಲದ ಮಾತು. ಈ ವಯಸ್ಸಿನಲ್ಲು ಕೂಡ ಅವರು ಬಂದಂತಹ ಎಲ್ಲರನ್ನು ಗಮನಿಸುತ್ತಾರೆ ಎನ್ನುವುದಕ್ಕೆ ಆ ಸಂದರ್ಭ ಸಾಕ್ಷಿ. ಅವರು ಹತ್ತಿರ ಕರೆದು ಹೇಳಿದ್ರು ನೋಡು ನೀನು ಇಲ್ಲಿ ಇರುವ ಎಲ್ಲರ ಹಾಗೆ ಇಲ್ಲ ನಿನ್ನಲ್ಲಿ ನಾನು ಎಂಬ ಭಾವನೆ ಇದೆ ಅದನ್ನು ಬಿಡು ನೀನು ಅದೆಷ್ಟೋ ದೊಡ್ಡ ವ್ಯಕ್ತಿಯಾಗಲು ಇದೆ ಆದರೆ ವಿನಯವಂತಿಗೆ ಮುಖ್ಯ ಎಂದು ವಿವರಿಸಿ ಅಜ್ಜ ಮೊಮ್ಮಗನಿಗೆ ಹೇಳುವ ರೀತಿ ಪ್ರೀತಿಯ ಗದರಿಗೆ ಮಾಡಿದರು.ನಾವೋ ಏನು ಹೇಳುವ ಸ್ಥಿತಿಯಲಿಲ್ಲ ಯಾಕೆಂದರೆ ಆ ಬುದ್ದಿ ಹೇಳಿಸಿಕೊಂಡ ಸ್ನೇಹಿತ ಅವರದೇ ಆದ ಒಂದು ತತ್ವ ಸಿದ್ದಾಂತದೊಂದಿಗೆ ಬದುಕಿದವರು ಬಹುಷ ಇಲ್ಲಿವರೆಗೆ ಅವರು ಕೂಡ ಪೂಜಾರಿಯವರನ್ನು ಭೇಟಿಯಾಗಿದ್ದು ಇಲ್ಲ ಮತ್ತು ಪೂಜಾರಿಯವರ ವಿಚಾರಧಾರೆಯನ್ನು ಒಪ್ಪಿಕೊಂಡವರು ಅಲ್ಲ ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ನಮ್ಮೊಂದಿಗೆ ಬಂದವರು ಮನಸ್ಸಿಲ್ಲದ ಮನಸ್ಸಿನಿಂದ ನಮ್ಮ ಜೊತೆಗೂಡಿದವರು.
ಆದರೆ ಇಷ್ಟು ಬೇಗ ಅವರ ಮನಸ್ಸನ್ನು ಪೂಜಾರಿಯವರು ಓದುತ್ತಾರೆ ಎಂದು ನಾವಂದು ಕೊಂಡಿಲ್ಲ . ಅವರು ಹೇಳಿದ ಬುದ್ದಿ ಮಾತು ವಾಸ್ತವಕ್ಕೆ ಹತ್ತಿರವಾಗಿದ್ದು ಅವರ ಅನುಭವದಷ್ಟು ವಯಸ್ಸು ನಮಗೆ ಆಗಿಲ್ಲ ಅವರ ಮುಂದೆ ನಿಂತು ಮಾತನಾಡುವಷ್ಟು ಯೋಗ್ಯತೆಯು ನಮಗಿಲ್ಲ ಆದರು ಅವರು ನಮ್ಮ ಮನಸ್ಸನ್ನು ಓದುವ ಪರಿ ಅದ್ಬುತ. ಒಬ್ಬ ಮನೋವೈದ್ಯನು ಕೂಡ ಒಂದೇ ಭೇಟಿಯಲ್ಲಿ ಮನಸ್ಸನ್ನು ಓದಲು ಆಸಾಧ್ಯ ಆದರೆ ಪೂಜಾರಿಯವರಿಗೆ ಅವರ ಅನುಭವ ಅವರನ್ನು ನಿಂತ ನಿಲುವಿನಲ್ಲಿಯೆ ಒಬ್ಬರ ಬಗ್ಗೆ ಹೇಳುವ ಚಾಕಚಕ್ಯತೆ ಬಂದಿದೆ. ಇವತ್ತು ಮಂಗಳೂರು ದಸರ ಇಷ್ಟು ವೈಭವೋತವಾಗಿ ನಡೆಯಲು ಕಾರಣ ಪೂಜಾರಿಯವರೆ. ಮಹಿಳಾ ಅರ್ಚಕಿಯರಾಗಿ ನೇಮಕ, ವಿಧವೆಯರ ಪಾದ ಪೂಜೆ, ಮಹಿಳೆಯರಿಂದ ರಥವನ್ನು ಎಳೆಸಿದ್ದು, ಇದರ ಮುಂದುವರಿದ ಭಾಗವಾಗಿ ಸಮಾಜದ ಎಲ್ಲಾ ಹಿಂದುಳಿದ ವರ್ಗದವರಿಗೆ ವಿದ್ಯಾದಾನ ನಿಧಿ ಅನ್ನಧಾನ ನಿಧಿ, ಸಾಮಾಜಿಕ ನಿಧಿ, ಸಾಮೂಹಿಕ ಮದುವೆಗಳಂತಹ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಿದ ರುವಾರಿ ಈ ಪೂಜಾರಿಯವರು. ಇವರ ಆಶಯಗಳು ಫಲಪ್ರದಯವಾಗಲಿ ಎಂದು ಆಶಿಸುತ್ತಾ ಅವರಿಗೆ ದೇವರು ಆಯುಷ್ಯ ಆರೋಗ್ಯವನ್ನು ಕರುಣಿಸಲಿ ಎಂದು ಆಶಿಸುತ್ತಾ ಈ ಬರವಣಿಗೆಗೆ ವಿರಾಮ ನೀಡುತ್ತಿದ್ದೇನೆ.
ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ
0 comments: