Friday, November 3, 2017

ಬಿಲ್ಲವರ ಮದುವೆಯಲ್ಲಿ ಮುಹೂರ್ತ ಕಂಬದ ವಿಶೇಷತೆ

ತುಳುನಾಡಿನ ಸಂಪ್ರದಾಯಗಳು ನಂಬಿಕೆ ಮತ್ತು ಬಾಂಧವ್ಯದ ಮೇಲೆ ನಿಂತಿದೆ. ತುಳುವರ ಸಂಪ್ರದಾಯಗಳು ಅವರು ಕಟ್ಟಿಕೊಂಡ ಬದುಕಿನ ಚಿತ್ತಾರಗಳು ಎಲ್ಲವು ಕೂಡ ಶ್ರೀಮಂತಿಕೆಯಿಂದ ಕೂಡಿದೆ ಮತ್ತು ಯಾರು ಪ್ರಶ್ನಿಸಲಾಗದಷ್ಟು ಆಳವಾಗಿ ಬೇರೂರಿ ಬಿಟ್ಟಿದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯಗಳು ಮೂಲೆಗುಂಪಾಗಿ ಹೊಳಪನ್ನು ಕಳೆದುಕೊಳ್ಳುತ್ತಿದೆ. ಅನಾದಿ ಕಾಲದಿಂದಲು ಬಿಲ್ಲವರ ಮದುವೆಗಳು ಗುರಿಕಾರ ಅಥವ ಬೋಂಟ್ರ ಮನೆತನದವರ ಮುಂದಾಳತ್ವದಲ್ಲಿ ನಡೆಯುತ್ತಿತ್ತು. ಮದುವೆಯಲ್ಲಿ ಮುಖ್ಯವಾದ ಮತ್ತು ಮೊದಲ ಅಂಶವಾಗಿ ಮುಹೂರ್ತ ಕಂಬವು ಪ್ರಾಧಾನ್ಯತೆಯನ್ನು ಪಡೆದಿತ್ತು.ಗಂಡಿನ ಮನೆಯಲ್ಲಿ ಮದುವೆ ನಡೆಯುವ ಸಮಯದಲ್ಲಿ ಮೊದಲಿಗೆ ಮುಹೂರ್ತ ಕಂಬದ ನೆಡುವಿಕೆಯ ಮೂಲಕ ಹಬ್ಬದ ವಾತವರಣಕ್ಕೆ ಚಾಲನೆ ನೀಡುತ್ತಿದ್ದರು. ಇದು ಹೆಣ್ಣಿನ ಮನೆಯಲ್ಲಿ ಹಾಕುವಂತಿರಲಿಲ್ಲ. ಮದುವೆಯ ಮುಂಚಿನ ದಿವಸ ಒಂದು ಅಡಿಕೆ ಕಂಬ ಮದುವೆ ಜಪ್ಪರದ ಮಧ್ಯದಲ್ಲಿ ನೆಡುತ್ತಿದ್ದರು.ಬಿಲ್ಲವ ಜಾತಿಯ ಗುರಿಕಾರ ಬಂದು ಸಿಪ್ಪೆ ಸುಳಿಯದ ಎರಡು ತೆಂಗಿನಕಾಯಿಗಳನ್ನು ಅದರ ಜುಟ್ಟಿನಿಂದಲೆ ಪರಸ್ಪರ ಕಟ್ಟಿ ಅದನ್ನು ಅಡಿಕೆ ಕಂಬಕ್ಕೆ ಕಟ್ಟುತ್ತಾರೆ ಅದಕ್ಕೆ ಒಂದು ಹಲಸಿನ ಮರದ ಗೆಲ್ಲನ್ನು ಇಟ್ಟು ಕಟ್ಟುತ್ತಾರೆ.
ಅದರ ಬುಡಕ್ಕೆ ಹಾಲು ಮತ್ತು ತುಪ್ಪವನ್ನು ಸುರಿದು ತೆಂಗಿನಕಾಯಿ ಮೇಲೆ ಒಂದು ಹೊಸ ಬಿಳಿ ವಸ್ತ್ರವನ್ನು ಕಟ್ಟಿ ಅದರ ಮೇಲೆ ಮಾವಿನ ಸೊಪ್ಪನ್ನು ಕಟ್ಟುತ್ತಾರೆ. ತೆಂಗಿನಕಾಯಿಯನ್ನು ಕಟ್ಟುವಾಗ ಗುರಿಕಾರ ಎಲ್ಲರಲ್ಲೂ ಅಪ್ಪಣೆ ಕೇಳುತ್ತಾನೆ. ಮೂಡಾಯಿ ಪಡ್ಢಾಯಿ ತೆನ್ಕಾಯಿ ಬಡಕಾಯಿ ನಾಲ್ ಸೀಮೆದ ಜಾತಿ ಸಂಗತೆರೆಡ ಮದಿಮಾಯಾನ ಇಲ್ಲಡ್ ಪೊರ್ಲ ಕಜ್ಜಗ್ ಜಾಗೆದ ಸತ್ಯಲೆನ್ ದುಂಬು ದೀವೊಂದು ಮುಹೂರ್ತ ಕಂಬ ಪಾಡುವೆ ಅಂತ ಹೇಳುತ್ತಾರೆ ( ಪೂರ್ವ ಪಶ್ಚಿಮ ಉತ್ತರ ದಕ್ಣಿಣ ನಾಲ್ಕು ಸೀಮೆಯ ಜಾತಿ ಬಾಂಧವರಲ್ಲಿ ಮದುಮಗನ ಮನೆಯಲ್ಲಿ ಆಗುವ ಕಲ್ಯಾಣ ಕಾರ್ಯಕ್ಕೆ ಜಾಗದ ದೈವಗಳನ್ನು ಮುಂದೆ ಇರಿಸಿಕೊಂಡು ಮುಹೂರ್ತ ಕಂಬ ಹಾಕುತ್ತೇನೆ ಎಂದು ಹೇಳುತ್ತಾರೆ).
ಅಲ್ಲಿ ಇರುವ ಜನರು ಆವು ಪನ್ಪೆರ್ ( ಆಗಬಹುದು) ಅಂತ ಹೇಳುತ್ತಾರೆ. ಇಲ್ಲಿ ಆಗುವ ಶುಭ ಸಮಾರಂಭಕ್ಕೆ ದೈವದ ಅಪ್ಪಣೆ ಮತ್ತು ಶ್ರೀರಕ್ಷೆಯನ್ನು ಪಡೆದುಕೊಳ್ಳುವ ಉದ್ದೇಶವೆ ಈ ಮುಹೂರ್ತ ಕಂಬ ಅದೇ ರೀತಿ ಆಗುವ ಶುಭ ಲಗ್ನವನ್ನು ಎಲ್ಲರೆದುರು ಸ್ಪಷ್ಟ ಪಡಿಸುವುದು ಆಗಿದೆ. ಆದರೆ ಈಗ ಮಾತ್ರ ಗಣಪತಿ ಸ್ವಸ್ತಿಕ ಇಟ್ಟು ಕೈ ಮುಗಿಯುವ ವೈದಿಕ ಪದ್ದತಿ ಬಂದು ಹಿರಿಯರ ಮೂಲ ಸಂಪ್ರದಾಯಗಳು ಕಾಲದ ಸೆರಗಲ್ಲಿ ಮರೆಯಾಗುತ್ತಿದೆ. ಕಾರ್ಯಕ್ರಮ ಪ್ರಾರಂಭವಾಗಿ ಮದುಮಗಳು ಗಂಡನ ಮನೆಯ ಹೊಸ್ತಿಲನ್ನು ಮೆಟ್ಟಿ ಒಳಗೆ ಬಂದ ಮೇಲೆ ಕಟ್ಟಿದ ತೆಂಗಿನಕಾಯಿಯನ್ನು ಬಿಚ್ಚಿ ಅದನ್ನು ಮನೆ ದೈವಕ್ಕೆ ಅರ್ಪಿಸುವ ವಾಡಿಕೆ. ಇಲ್ಲಿ ನಂಬಿಕೆಯ ಮೇಲೆ ಎಲ್ಲಾ ಕಾರ್ಯಕ್ರಮಗಳು ನಿಂತಿದೆ ಅದೇ ರೀತಿಯಲ್ಲಿ ಶ್ರದ್ದೆಯು ಕೂಡ ಮುಖ್ಯ ಪಾತ್ರ ವಹಿಸುತ್ತೆ. ಎಲ್ಲರನ್ನು ಕಾಪಾಡುವವನು ನೀನು ನಿನ್ನ ಸಾಕ್ಷಿಯಾಗಿ ಈ ಮದುವೆಯನ್ನು ಮಾಡುತ್ತಿದ್ದೇವೆ ಎಂದು ದೈವವನ್ನು ಮುಂದಿಟ್ಟು ಕೊಂಡು ಯಾವುದೇ ವಿಘ್ನ ಬರದಿರಲೆಂದು ಪ್ರಾರ್ಥಿಸಿ ಮುಂದಡಿಯಿಡುವ ಕ್ರಮ .
ಅದೇ ರೀತಿಯಲ್ಲಿ ಶುಧ್ದಾಚಾರದ ಲೆಕ್ಕಾಚಾರದಲ್ಲಿ ಯಾವುದೇ ರೀತಿಯಲ್ಲಿ ಕಟ್ಟಿದ ತೆಂಗಿನಕಾಯಿ ಮೇಲೆ ಅಶುದ್ದ ಆಗದಿರಲೆಂದು ಹೊಸ ಬಿಳಿ ಬಟ್ಟೆಯನ್ನು ಕಟ್ಟುವ ವಾಡಿಕೆ. ಆದರೆ ಇಂತಹ ಸಂಪ್ರದಾಯಗಳು ಎಲ್ಲೋ ಒಂದೆರಡು ಕಡೆ ಅದು ಹಳ್ಳಿಗಳಲ್ಲಿ ಮಾತ್ರ ಜೀವಂತವಾಗಿ ಇದೆ. ಜನರ ಡಿ.ಜೆ ಮತ್ತು ಅಮಲು ಪಾನೀಯದ ರಂಗಿನಲ್ಲಿ ಇಂತಹ ಆಚರಣೆಗಳು ಮಹತ್ವ ಕಳೆದುಕೊಳ್ಳುತ್ತಿದೆ. ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

0 comments: