Friday, November 3, 2017

ಬಿಲ್ಲವರೆ ನಾವ್ಯಾಕೆ ನಮ್ಮ ದೃಷ್ಟಿ ಕೋನಗಳನ್ನು ಬದಲಾಯಿಸಬಾರದು


ಎಲ್ಲವು ಇದ್ದು ಏನಿಲ್ಲವೆನ್ನುವ ಮನಸ್ಥಿತಿಯಲ್ಲಿ ನಾವಿರಲು ‌ಕಾರಣ ನಮ್ಮಲ್ಲಿ ಇಲ್ಲದ ಇಚ್ಛಾಶಕ್ತಿ. ಹೇಗಾದರು ಜೀವನ ನಡೆದರೆ ಸಾಕೆನ್ನುವ ನಮ್ಮ ಉದಾಸೀನ ಮನೋಭಾವ ನಮ್ಮನ್ನು ಏನು ಸಾಧಿಸಲು ಬಿಡದೆ ಜಡ್ಡುಕಟ್ಟಿಸಿದೆ. ಇನ್ನೊಬ್ಬರ ಹಿಂದೆ ಬಹುಪರಾಕ್ ಹಾಕಿಕೊಂಡು ಹೋಗಿ ನಾವು ಸಾಧಿಸಿರುವುದಾದರು ಏನು. ನಾರಾಯಣ ಗುರುಗಳು ದೂರದೃಷ್ಟಿ ಇಟ್ಟುಕೊಂಡು ವಿದ್ಯೆಯಿಂದ ಸ್ವತಂತ್ರರಾಗಿ ಎನ್ನುವ ಸಾರ್ವಕಾಲಿಕ ಮಾತು ನಾವು ಅರ್ಥೈಸಿಕೊಳ್ಳದ್ದು ನಮ್ಮ ದೌರ್ಭಾಗ್ಯ. ಬಿಲ್ಲವರು ತಮ್ಮ ಗತವೈಭವ, ಅಂತಸ್ತನ್ನು ಕಳೆದುಕೊಂಡಿರುವುದು ವಿಧ್ಯೆಯಿಲ್ಲದೆ. ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡರೆ ನಮ್ಮಲ್ಲಿ ಅದೆಷ್ಟು ಮಂದಿ IAS, IPS ಅಧಿಕಾರಿಗಳಿದ್ದಾರೆ, ಅದೆಷ್ಟು ಉದ್ಯಮಿಗಳಿದ್ದಾರೆ, ಅದೆಷ್ಟು ಉನ್ನತ ಶ್ರೇಣಿಯ ಅಧಿಕಾರಿಗಳಿದ್ದಾರೆ ? ಒಂದು ವೇಳೆ ಇದ್ದರು ಕೂಡ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಇದ್ದಾರ ಎನ್ನುವುದನ್ನು ನಾವಿಲ್ಲಿ ಮಂಥಿಸಿ ಕೊಳ್ಳಬೇಕಾಗಿರುವ ಪಕ್ವ ಸಮಯವು ಆಗಿದೆ. ನಮಗೆ ಅಧಿಕಾರ ಬೇಕು ಆದರೆ ಅದನ್ನು ಯಾಕೆ ಬೇರೆಯವರ ಕೈ ಕಾಲು ಇಡಿದು ಪಡೆಯಬೇಕು ನಮ್ಮ ಸ್ವ ಪ್ರಯತ್ನದಿಂದ ವಿದ್ಯೆ ಪಡೆದು ಯಾಕೆ ನಮಗೆ ಸಾಧಿಸಲು ಸಾಧ್ಯವಿಲ್ಲ. ಸಿವಿಲ್ ಸರ್ವೀಸ್ ತರಭೇತಿಗಳಿಗೆ ಬಿಲ್ಲವರಾದ ನಾವು ನಮ್ಮ ಮಕ್ಕಳನ್ನು ಎಷ್ಟು ತಯಾರು ಮಾಡಿದ್ದೇವೆ. ನಮ್ಮ ಬಿಲ್ಲವ ಸಂಘಟನೆಗಳು ಈ ನಿಟ್ಟಿನಲ್ಲಿ ಅದೆಷ್ಟು ಕಾರ್ಯಪ್ರವೃತವವಾಗಿದೆ. ಬೆಂಗಳೂರಿನ ಕ್ರೈಸ್ತ ಸಮಾಜ ಸೇವಾ ಸಂಸ್ಥೆಯು ರಾಜ್ಯದಾದ್ಯಂತ ಇರುವ ತಮ್ಮ ಸಮುದಾಯದ 40 ಯುವಕರನ್ನು ಆಯ್ಕೆ ಮಾಡಿಕೊಂಡು IAS, IPS ನಂತವುಗಳ ಬಗ್ಗೆ ಒಂದು ವರ್ಷದ ತರಭೇತಿಯನ್ನು ನೀಡುತ್ತಿವೆ. ಶೇಕಡ 10 ರಷ್ಟು ಶಿಬಿರಾರ್ಥಿಗಳು ಉನ್ನತ ದರ್ಜೆಗೆ ಆಯ್ಕೆಯಾಗುತ್ತಿದ್ದಾರೆ ಅದೇ ರೀತಿ ಉಳಿದವರು ರಾಜ್ಯ ಸೇವೆಗಳಿಗೆ ಮತ್ತು ಬ್ಯಾಂಕಿಂಗ್ ಸೇವೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಅಂದರೆ ಅಲ್ಲಿ ಕೊಡುತ್ತಿರುವ ತರಬೇತಿಗಳು ಅಷ್ಟೇ ಪರಿಣಾಮಕಾರಿಯಾಗಿದೆ ಎಂದರ್ಥ. ಹಾಗಾದರೆ ಅವರಿಗೆ ಆಗುವಂತದ್ದು ನಮ್ಮ ಸಂಘಟನೆಗಳಿಗೆ ನಮ್ಮ ಸಮುದಾಯವರಿಗೆ ಯಾಕೆ ಆಗುತ್ತಿಲ್ಲ.

ನಮ್ಮ ಮಕ್ಕಳಿಗೆ ವಿದ್ಯೆಯೆ ಮೃಷ್ಟಾನ ಭೋಜನವಾಗಬೇಕು ಹೊರತು ಸುಖದ ಅಮಲು ಅಲ್ಲ. ಶ್ರೀ ಗುರು ಚಾರಿಟೇಬಲ್ ಟ್ರಸ್ಟ್, ದುಬೈ ಬಿಲ್ಲವಾಸ್, ಅಭುದಾಬಿ ಬಿಲ್ಲವಾಸ್, ಮಸ್ಕತ್ ಬಿಲ್ಲವಾಸ್ ಸಂಘಟನೆಗಳು ತಾವು ದುಡಿದ ಒಂದು ಪಾಲನ್ನು ತಮ್ಮ ಸಮಾಜದ ಮತ್ತು ಇತರ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿದ್ದಾರೆ ಎಂದಾದರೆ ಅವರ ಉದ್ದೇಶ, ನಾವು ಸಾಧಿಸಲು ಆಗದ್ದನ್ನು ನಮ್ಮ ಮುಂದಿನ ಪೀಳಿಗೆ ಮಾಡಲಿ ಎನ್ನುವ ತುಡಿತ. ಆದರೆ ನಮ್ಮ ಸಮಾಜ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದೆ ಮತ್ತು ಇಂತಹ ಸಂಘಟನೆಗಳಿಗೆ ನಾವು ಕೊಡುವ ಸಹಕಾರವು ಅಷ್ಟರಲ್ಲೇ ಇದೆ. ಇತರ ಸಮುದಾಯದ ಜನರು ಉನ್ನತ ಶ್ರೇಣಿಗಳಲ್ಲಿ ಇದ್ದಾರೆ ಎಂದಾದಲ್ಲಿ ಅದು ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ ಅದನ್ನು ನೋಡಿ ನಾವು ಕಲಿತು ನಾವು ಅದಕ್ಕಿಂತ ಮೇಲಕ್ಕೆ ಏರಬೇಕೆ ಹೊರತು ಬೇರೆಯವರಿಂದ ನಮ್ಮ ಸಮಾಜ ದೌರ್ಜನ್ಯಕ್ಕೆ ಒಳಗಾಗಿದೆ ಎಂದು ವ್ಯರ್ಥ ಪ್ರಲಾಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ರಾಜಕೀಯದಲ್ಲಿ ನಮಗೆ ಸ್ಥಾನಮಾನವಿಲ್ಲ ನಮಗೆ ಸರಿಯಾದ ಪ್ರಾತಿನಿದ್ಯ ಸಿಕ್ಕಿಲ್ಲವೆನ್ನುವುದು ನಮ್ಮೆಲ್ಲರ ನೋವು ನಾವ್ಯಾಕೆ ಕಿಂಗ್ ಮೇಕರ್ ಆಗಬಾರದು. ನಾರಾಯಣ ಗುರುಗಳು ಹೇಳಿದ್ದಾರೆ ಕಾರ್ಖಾನೆಗಳಿಂದ ಆರ್ಥಿಕ ಪ್ರಗತಿಯನ್ನು ಹೊಂದಿ ನಾವ್ಯಾಕೆ ನಮ್ಮದೇ ಉದ್ಯಮಗಳನ್ನು ಬೆಳೆಸಬಾರದು. ಯಾವುದೇ ಪಕ್ಷಕ್ಕು ಪಾರ್ಟಿ ಫಂಡ್ ಬೇಕೆ ಬೇಕು, ಅವರೆಲ್ಲ ನೆಚ್ಚಿಕಂಡಿರುವುದು ಉದ್ಯಮಿಗಳನ್ನು , ನಾವ್ಯಾಕೆ ಅದೇ ಉದ್ಯಮಿಗಳಾಗಿ ಕಿಂಗ್ ಮೇಕರ್ ಆಗಬಾರದು. ಬಿಲ್ಲವರೆ ಯೋಚಿಸಿ ಪಾರ್ಟಿ ಸೂಚನೆಯಂತೆ ನಮ್ಮ ತನವನ್ನು ಬಿಟ್ಟು ಬದುಕುವುದಕ್ಕಿಂತ ನಾವ್ಯಾಕೆ ಇನ್ನೊಬ್ಬರನ್ನು ಆಳುವ ದೊರೆಗಳಾಗಬಾರದು ಸ್ವಲ್ಪ ಯೋಚಿಸಿ. ರಾಜಕೀಯಕ್ಕೆ ಎಲ್ಲರಿಗೂ ಬರಲು ಸಾಧ್ಯವಿಲ್ಲ ಬಂದವರೆಲ್ಲ ಉನ್ನತ ಹುದ್ದೆಗಳಿಗೆ ಏರುತ್ತಾರೆ ಎನ್ನುವ ಧೈರ್ಯವಿಲ್ಲ. ಅದೇ ನಾವು ಕಲಿತ ವಿಧ್ಯೆ ನಮ್ಮನ್ನು ಎಷ್ಟು ಎತ್ತರಕ್ಕು ಬೆಳೆಸಬಲ್ಲುದು ಅದು ಯಾರಿಂದಲು ಕಸಿದುಕೊಳ್ಳಲು ಆಗದ ವಸ್ತು ಆದರೆ ಅದರ ಕಡೆಗೆ ನಮ್ಮ ಮಕ್ಕಳಿಗೆ ಯಾಕೆ ಆಸಕ್ತಿಯಿಲ್ಲ. ಬಿಲ್ಲವ ಗಂಡು ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಿಂತ ಪಕ್ಷಗಳ ಧ್ವಜ ಹಿಡಿಯುವುದರಲ್ಲೇ ಆಸಕ್ತಿ ಆದರೆ ಹೆಣ್ಣು ಮಕ್ಕಳು ಸ್ವಲ್ಪ ಮಟ್ಟಿಗೆ ವಾಸಿ. ಕೇವಲ 10% ಯುವಕರು ಮಾತ್ರ ಉನ್ನತ ವ್ಯಾಸಂಗದತ್ತ ಆಕರ್ಷಿತರಾಗುತ್ತಾರೆ. ಹೆತ್ತವರು ಇನ್ನಾದರು ಯೋಚಿಸಬೇಕು ಯುವಕರು ಇನ್ನಾದರು ತಿಳಿದುಕೊಳ್ಳಬೇಕು ವಿದ್ಯೆಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ ಅದು ಇದ್ದವನಿಗೆ ಮಾತ್ರ ಸಮಾಜದಲ್ಲಿ ಮನ್ನಣೆ. ಇನ್ನಾದರು ಅರ್ಥ ಮಾಡಿಕೊಳ್ಳಿ ನಮಗೆ ಸ್ಥಾನಮಾನ ಸಿಕ್ಕಿಲ್ಲ ನಾವು ರಾಜಕೀಯ ಶೋಷಿತರು ಎಂದೆಲ್ಲ ಬಡಬಡಿಸುವುದಕ್ಕಿಂತ ವಿಧ್ಯೆಯನ್ನು ಪಡೆಯುವಲ್ಲಿ ಮತ್ತು ನಮ್ಮ ಯುವ ಪೀಳಿಗೆಯನ್ನು ಅದರತ್ತ ಮುಖ ಮಾಡಿಸುವಲ್ಲಿ ಪ್ರವೃತ್ತರಾಗೋಣ. ಪ್ರತಿಯೊಬ್ಬ ತಂದೆತಾಯಿಯು ತಮ್ಮ ಮಕ್ಕಳ ಅಭ್ಯುದಯದತ್ತ ಮುಖ ಮಾಡಿ ಉನ್ನತ್ತ ವಿದ್ಯಾಭ್ಯಾಸ ನೀಡುವಲ್ಲಿ ಆಸಕ್ತಿ ವಹಿಸಬೇಕು. ನಾವು ನಮ್ಮ ದೃಷ್ಟಿ ಕೋನವನ್ನು ಬದಲಾಯಿಸಿಕೊಳ್ಳೋಣ ಕಳೆದುಕೊಂಡಿರುವುದನ್ನು ಮತ್ತು ಇಲ್ಲದಿರುವುದನ್ನು ನಮ್ಮ ಸ್ವ ಪ್ರಯತ್ನದಿಂದ ಪಡೆದುಕೊಂಡು ಯಾರೊಬ್ಬರ ಹಂಗಿಗು ಬೀಳದೆ ಸಮಾಜದ ಮುಖ್ಯ ವಾಹಿನಿಗೆ ಬರೋಣ. ನಾರಾಯಣ ಗುರುಗಳು ಹೇಳಿದಂತೆ ನಮ್ಮ ಬೀಳಿಗೆ ಇತರರನ್ನು ದೂಷಿಸದೆ ನಮ್ಮ ಶಕ್ತಿಯನ್ನು ಒರೆಗೆ ಹಚ್ಚೋಣ ಹೊಸ ಯುಗದತ್ತ ಸಾಗೋಣ.

0 comments: