Tuesday, November 28, 2017

ಬಿಲ್ಲವರು ಬಲ್ಲವರಾಗುವ ಅಗತ್ಯವಿದೆ

ಬಿಲ್ಲವರು ಬಲ್ಲವರಾಗಲೇ ಇಲ್ಲ ಬರಹ 📝: ಮಹೇಶ್ ಪೂಜಾರಿ ಮುಲ್ಕಿ ಬಿಲ್ಗಾರರೊಮ್ಮೆ ಹಿಂತಿರುಗಿ ಬೆನ್ನು ನೋಡಿ, ಬತ್ತಳಿಕೆ ಬಾಣವಿಲ್ಲದೆ ಬತ್ತಿ ಹೋಯಿತೇ? ಕಾಡು ಬೀಡು ಅಲೆದು ಬೇರು-ಸೊಪ್ಪು ಚಚ್ಚಿ ಮದ್ದು ಕೊಟ್ಟ ಗಿಡಮೂಲಿಕೆಯ ಬೈದ್ಯರಿಗೆ ಭ್ರಮನೀರಸವೇ? ಜೀಟಿಗೆ ಹಿಡಿದು ಮುಕ್ಕಾಲು ಮೂರು ಗಳಿಗೆ ದೈವವನ್ನು ಮೈ ಮೇಲೆ ಬರಿಸಿಕೊಂಡ ಪೂಜಾರಿಯ ನುಡಿಕಟ್ಟ ನಾಲಿಗೆಯ ಪವರಿಗೆ ಭಯ ಭಕ್ತಿ ಆಚಾರ ನಂಬಿಕೆಗಳು ತುಳುನಾಡಿನ ಮಣ್ಣಿನಾಳಕ್ಕಿಳಿಸಿದ ಮೂಲ ನಿವಾಸಿಗಳೇಕೆ ಮಂಕಾಗಿದ್ದಾರೆ? ಆಶ್ಚರ್ಯ! ಬಿಲ್ಲವರೆನಿಸಿಕೊಂಡ ನೀವು ಯಾವತ್ತೂ ಬಲ್ಲವರಾಗಲೇ ಇಲ್ಲ.. ಕೇರಳದಲ್ಲಿ ಅಸ್ಪೃಶ್ಯತೆ, ಜಾತೀಯತೆ ನರಕ ತಾಂಡವವಾಡುತ್ತಿದ್ದ ಕಾಲದಲ್ಲಿ ಹುಟ್ಟಿ ಬಂದ ಒಬ್ಬ ಅವಧೂತ ಗುರು ನಾರಾಯಣರನ್ನು ತಮ್ಮ ಕುಲಗುರುವನ್ನಾಗಿ ಮಾಡಿಕೊಂಡ ಬಿಲ್ಲವರು ಅವರ ತತ್ವಗಳನ್ನು ಗಾಳಿಗೆ ತೂರಿದ್ದೇಕೆ? ಗಲ್ಲಿ ಗಲ್ಲಿಗಳಲ್ಲಿ ಗುಡಿ, ಮೇಲೆ ನೈವೇಧ್ಯ, ವಿಭೂತಿ, ಹತ್ತಾರು ಹಾರ, ಸಿಂಗಾರ ಬಂಗಾರ! ಯಾವ ಆಡಂಬರಕ್ಕೆ?

ಯಾರು ನನಗೆ ಗುಡಿ ಕಟ್ಟಿ ಪೂಜಿಸಿ ಎಂದಿದ್ದಾರೆ? ಗುರು ನಾರಾಯಣರೇ? ಮೂಢ ಮನವೇ!! ಮೂರ್ತಿ ಇಡುವ ಜಾಗದಲ್ಲಿ ಕನ್ನಡಿಯನಿಟ್ಟು ನಿನ್ನೊಳಗಿರುವ ದೇವನನ್ನು ಬಡಿದೆಬ್ಬಿಸು ಎಂದ ಆ ಮಹಾನ್ ಚೇತನಕ್ಕೆ ಮೂರ್ತಿ ಕಟ್ಟಿ , ದೊಂಬರಾಟ ಮಾಡಿ, ಅಪಮಾನ ಮಾಡುತ್ತಿರುವಿರೇನು? ಬಿಲ್ಲವರೇ ಎಚ್ಚೆತ್ತುಕೊಳ್ಳಿ !! ಅಸ್ಪೃಶ್ಯತೆಯ ಉರಿಯಲ್ಲಿ ಬಳಲಿ ಬೆಂಡಾದ ನೀವು ಇನ್ನೊಬ್ಬರನ್ನು ಯಾವ ರೀತಿ ನೋಡಿಕೊಳ್ಳುತ್ತೀರಿ? ಬ್ರಾಹ್ಮಣರು ದೂರ ನಿಲ್ಲು ಎಂದರು! ಗುರುಗಳು ಒಂದಾಗಿ ಎಂದರು! ಆದರೆ ನೀವ್ಯಾಕೆ ಕೊರಗರನ್ನು ಮುಟ್ಟಲು ಹಿಂಜರುಯುವಿರಿ?? ಮಾನವ ಜಾತಿ ತಾನೊಂದೆ ವಲಂ ಎಂದ ಗುರುಗಳ ತತ್ವ ಬೇಡ, ಮೂರ್ತಿಯಲ್ಲಿ ಮೌನವಾಗಿ ಕುಳಿತ ಗುರು ಬೇಕು ! ಅಲ್ಲವೇ? ಏಡಿಗಳಿಗೆ ಒಂದು ಗುಣವಿದೆ, ಅವೆಲ್ಲಾ ಒಟ್ಟಿಗಿದ್ದರೆ ಒಂದರ ಕಾಲನ್ನು ಒಂದು ಎಳೆದು ಯಾರನ್ನೂ ಮೇಲೆ ಬರಲು ಬಿಡುವುದಿಲ್ಲ, ಅದೇ ಗುಣ ನಮ್ಮಲ್ಲೇಕಿದೆ ? ಅವರೊಬ್ಬ ಹಿರಿಯರು ತಮ್ಮ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯೂ ಇರದವರು, ಅಸ್ಪೃಶ್ಯತೆಯನ್ನು ಮೆಟ್ಟಿ ನಿಂತವರು, ನಿಮ್ಮದೇ ಸಮಾಜದವರು, ದಲಿತರಿಗೆ ಗೋಕರ್ಣನಾಥನನ್ನು ಮುಟ್ಟಿಸಿದವರು, ಏನು ಮಾಡಿದಿರಿ ನೀವು ಅವರಿಗೆ?

ಮಾನವನಿಗಿಂತ ಪಕ್ಷ ಮಿಗಿಲೇ? ಮನುಷ್ಯತ್ವಕ್ಕಿಂತ ಸಿದ್ದಾಂತ ಮಿಗಿಲೇ? ಹೋಗಲಿ ಬಿಡಿ!! ಯಾವ ಪಕ್ಷದಲ್ಲಿ ನಿಮ್ಮ ಜಾತಿಯ ಎಷ್ಟು ಸಂಸದ, ಶಾಸಕರಿದ್ದಾರೆ ಹೇಳಿ? ಯಾವ ಪಕ್ಷದಲ್ಲಿ ಎಷ್ಟು ಜಿಲ್ಲಾ, ತಾಲೂಕು, ವಲಯ ಮಟ್ಟಗಳಲ್ಲಿ ನಿಮ್ಮ ಜಾತಿಯವರು ಅಧ್ಯಕ್ಷರಾಗಿದ್ದಾರೆ? ಬಹುಸಂಖ್ಯಾತರೇ ನೀವು!! ಎಲ್ಲಾ ಕುರುಡು! ಬೀದಿ ಹಾದಿಯಲಿ ನಿನ್ನ ತಂಗಿಯ ಅತ್ಯಾಚಾರವಾಯಿತು. ಯಾವುದೋ ಕೋಮು ದ್ವೇಷದಿಂದ ನಿನ್ನ ಅಣ್ಣ ಸತ್ತ. ನೂರಾರು ನಿನ್ನ ಭಾಂದವರು ಜೈಲಲ್ಲಿ ಕೊಳೆಯುತ್ತಿದ್ದಾರೆ, ಆದರೆ ನಿನ್ನ ಅಮ್ಮ ಮಾತ್ರ ಇಂದಿಗೂ ಆ ಬೀಡಿಯ ಸೂಪು ಹಿಡಿದು, ತಂಬಾಕಿನ ಘಾಟಿಗೆ ಕೆಮ್ಮುತ್ತಾ, ಹರಕು ಬಟ್ಟೆಯಲ್ಲಿ ತನ್ನ ಹೊಟ್ಟೆಪಾಡಿಗಾಗಿ ಸೊಂದುತ್ತಿದ್ದಾಳೆ!! ಇದಲ್ಲವೇ ಬಹುಸಂಖ್ಯಾತರ ತಾಕತ್ತು? ಸುರಿಯ ಹಿಡಿದ ಬಿಸಿ ನೆತ್ತರ ವೀರ ಪುರುಷರ ಕುಲವಲ್ಲವೇ ನಮ್ಮದು? ಆದರೆ ಅವರ ಆದರ್ಶಗಳು ಮಾತ್ರ ಅವರೊಂದಿಗೇ ಮಾಯವಾಯಿತು.

ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದರು ಗುರುಗಳು, ಗುಲಾಮರೇ! ಎಷ್ಟು ವಿದ್ಯೆ ಪಡೆದಿರಿ ನೀವು? ಬಹುಸಂಖ್ಯಾತರೇ! ಎಷ್ಟು IAS, IPS, Doctors ನಿಮ್ಮವರು? ಯಾರಿಗಾಗಿ ಕಾಯುತ್ತಿರುವಿರಿ? ನಾರಾಯಣನಿಗೋ? ಅಥವಾ ಕಾಂಗ್ರೇಸ್, ಬಿ.ಜೆ.ಪಿ, ಜೆ.ಡಿ.ಯಸ್ ಕೊಳಚೆಗೋ?? ಮಂದ ಬುದ್ಧಿಯ ಬಿರುವರೇ, ಬಲ್ಲವರಾಗುವ ಕಾಲ ಬಂದಿದೆ! ಬೇರೆಯವರ ಬಣ್ಣದ ಮಾತುಗಳಿಗೆ ಮರುಳಾಗದಿರಿ. ನಿಮಗೆ ಹಿರಿಯರು ನೀಡಿದ ದಾರಿಯಿದೆ. ನಿಮಗೆ ಕಿರಿಯರನ್ನು ಸನ್ಮಾರ್ಗದಲ್ಲಿ ನಡೆಸುವ ಜವಾಬ್ದಾರಿಯಿದೆ. ಯುವಕರೇ ನೆನಪಿಡಿ ರಾಜಕೀಯ ಪುಡಾರಿಗಳು ನಿಮ್ಮ ಚಟ್ಟ ಹೊರಲು ಮಾತ್ರ ಬರುತ್ತಾರೆ! ಎಚ್ಚರಗೊಳ್ಳಿ!!!ಬಿಲ್ಲವರು ಬಲ್ಲವರು ಆಗುವುದೆಂತು:-ಮಹೇಶ್ ಪೂಜಾರಿ ಮೂಲ್ಕಿ

0 comments: