9 ತಿಂಗಳು ಹೊತ್ತು ಹೆತ್ತಂತಹ ತಾಯಿ ಜನ್ಮ ಪಡೆದ ಮಗುವಿನ ಮುಖವನ್ನು ನೋಡುತ್ತ ತನ್ನ ನೋವನ್ನು ಮರೆಯುತ್ತಾಳೆ. ಹುಟ್ಟಿದ ಕ್ಷಣದಿಂದ ತನ್ನ ಮಗಳ ಬಗ್ಗೆ ಕನಸ್ಸು ಕಾಣುತ್ತಾಳೆ. ತಂದೆ , ತಾಯಿ ಇಬ್ಬರು ತಮ್ಮ ಸರ್ವಸ್ವವನ್ನು ಮಗಳಿಗಾಗಿ ತ್ಯಾಗ ಮಾಡುತ್ತಾರೆ. ಆಕೆ ಆ ಮನೆಯವರಿಗೆ ತಾವು ಕಂಡಂತಹ ಕನಸ್ಸಿನ ಭವಿಷ್ಯವಾಗಿರುತ್ತಾಳೆ. ಮಗಳು ಕೂಡ ಅತ್ಯುತ್ತಮ ಪ್ರತಿಭೆ. ಕ್ರೀಡೆಯಲ್ಲಿ ಸಾಧನೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡುತ್ತಾಳೆ. ಅವಳ ಸಾಧನೆಯನ್ನು ಕಂಡು ಪ್ರತಿಷ್ಟಿತ ಶಾಲೆಯವರು ಉಚಿತ ಶಿಕ್ಷಣ ಕೊಡುತ್ತೇವೆಂದು ತಮ್ಮ ಶಾಲೆಗೆ ಆಹ್ವಾನ ನೀಡುತ್ತಾರೆ. ಮಗಳ ಕ್ರೀಡಾ ಪ್ರತಿಭೆ ಬೆಳೆಯಬೇಕು , ಅವಳ ಸಾಧನೆಯ ಕನಸ್ಸು ನನಸ್ಸಾಗಬೇಕೆಂದು ಹೆತ್ತವರು ಅವಳನ್ನು 10ನೇ ತರಗತಿಗೆ ಅದೇ ಶಾಲೆಗೆ ಸೇರಿಸುತ್ತಾರೆ. ಮನೆಯಿಂದ ಹೋಗಿ ಬರಲು ಕಷ್ಟ ಎಂದು ಹಾಸ್ಟೇಲ್ ನಲ್ಲಿ ಇರಲು ವ್ಯವಸ್ಥೆಯು ಆಗುತ್ತದೆ. ಆಕೆಯ ಪ್ರತಿಭೆಗೆ ಶಾಲೆ ಮತ್ತು ಹಾಸ್ಟೇಲ್, ಶುಲ್ಕವಿಲ್ಲದೆ ಉಚಿತವಾಗಿ ಸಿಗುತ್ತದೆ. ಅದೊಂದು ದಿನ ಮನೆಯವರ ಕನಸ್ಸು ನುಚ್ಚು ನೂರಾದ ದಿನ. ಜುಲೈ 20ರಂದು ಆ ಪ್ರತಿಭಾನ್ವಿತ ಈ ಹುಡುಗಿ ಶಾಲೆಯ ಹಾಸ್ಟೇಲ್ ನಲ್ಲಿ ನೇಣು ಬಿಗಿದ ಸ್ದಿತಿಯಲ್ಲಿ ಪತ್ತೆಯಾಗುತ್ತಾಳೆ. ಮನೆಯವರ ಕೂಗು ಅಷ್ಟೀಷ್ಟಲ್ಲ. ಯಾಕೆಂದರೆ ತಮ್ಮ ವರ್ತಮಾನವನ್ನು ಮಗಳ ಭವಿಷ್ಯಕ್ಕಾಗಿ ತ್ಯಾಗ ಮಾಡಿದ ಅವರ ಕನಸ್ಸಿನ ಕೂಸು ಈ ಲೋಕವನ್ನು ಬಿಟ್ಟು ಹೋಗಿರುತ್ತಾಳೆ. ಸಾಯುವುದಕ್ಕಿಂತ ಮುಂಚೆ ಆಕೆ ಅವರಲ್ಲಿ ಮಾತನಾಡಿದ ರೀತಿ ಆಕೆಯ ಸಾವು ಆತ್ಮಹತ್ಯೆ ಅಲ್ಲ ಎಂಬುವುದನ್ನು ಆಕೆಯ ಹೆತ್ತಕರುಳು ಕೂಗಿ ಕೂಗಿ ಹೇಳುತ್ತದೆ. ಬೀದಿಗಿಳಿದು ನ್ಯಾಯಕ್ಕಾಗಿ ಬೊಬ್ಬೆ ಇಡುತ್ತದೆ. ಆಕೆಯ ಸಾವಿಗೆ ನ್ಯಾಯ ಮತ್ತು ಕಾರಣ ಇವತ್ತಿಗೂ ನಿಗೂಢವಾಗಿ ಉಳಿದಿದೆ. ರಾಜಕಾರಣಿಗಳಲ್ಲಿ ಕೇಳಲು ಹೋದರೆ ಪೋಲಿಸರು ನ್ಯಾಯ ನೀಡುತ್ತಾರೆಂದು ಹೇಳುತ್ತಾರೆ. ಅದೇ ರಾಜಕೀಯದ ವ್ಯಕ್ತಿಗಳು ಸತ್ತರೆ ಪೋಲಿಸರ ಮೇಲೆ ನಂಬಿಕೆ ಇಲ್ಲದೆ ನ್ಯಾಯಕ್ಕಾಗೆ ರಾಜಕಾರಣಿಳಿಂದರಲೆ ಪೋಲಿಸರ ವಿರುದ್ಧ ಪ್ರತಿಭಟನೆಗಳು ನಡೆಯುತ್ತದೆ.
ನಾವು ಜನರು ಕೂಡ ಸಾಮಾನ್ಯದವರಲ್ಲ ಮೊದ ಮೊದಲು ಬಹಳ ಆಸಕ್ತಿಯಿಂದ ಅಕೆಯ ಮನೆಯವರ ಕಣ್ಣೀರು ಒರೆಸಲು ಪ್ರಯತ್ನಿಸುತ್ತೇವೆ. ಆ ಮೇಲೆ ನಮ್ಮದೇ ಲೋಕದಲ್ಲಿ ಕಾರ್ಯನಿರತರಾಗಿರುತ್ತೇವೆ. ನಮ್ಮಷ್ಟಕ್ಕೆ ನಾವಿದ್ದರು ಪರವಾಗಿಲ್ಲ ಆ ಸಾವಿಗೆ ಹಲವಾರು ರೂಪು ರೇಷೆಗಳನ್ನು, ಹುಡುಗಿ ಮತ್ತು ಹುಡುಗಿಯ ಮನೆಯವರ ಮೇಲೆ ಎಲ್ಲ ಸಲ್ಲದ ಅರೋಪಗಳನ್ನು ಮಾಡುತ್ತೇವೆ. ಯಾಕೆಂದರೆ ಸತ್ತಿರುವ ಆ ಹುಡುಗಿ ನಮ್ಮ ಮನೆಗೆ ಸೇರಿದ ಹುಡುಗಿ ಅಲ್ಲ ತಾನೇ.
ಮಾಧ್ಯಮದವರಿಗೂ ಅದು ಅ ದಿನ ಬಿಸಿ ಬಿಸಿ ಸುದ್ಧಿ. ದಿನ ಕಳೆಯುತ್ತ ಹೊಸ ಸುದ್ಧಿ ಬಂದಾಗ ಹಳೆ ಸುದ್ಧಿ ಮಾಯವಾಗುತ್ತದೆ. ಆಕೆ ಸತ್ತು ಡಿಸೆಂಬರ್ 2 ಕ್ಕೆ 136 ದಿನ ಕಳೆದರು ಇನ್ನೂ ಪೋಲಿಸರಿಂದ ಹೇಳಿಕೆ ಮತ್ತುಯಾವುದೇ ಕ್ರಮ ಕೈಗೊಳ್ಳದಿರುವುದು ಇವರ ಕಣ್ಣಿನಿಂದ ಮರೀಚಿಕೆಯಾಗಿದೆ. ಶಾಲೆಯವರು ಕೂಡ ಪ್ರಶ್ನೇ ಮಾಡಿ ಕಾರಣ ತಿಳಿಯುವ ಗೋಜಿಗೆ ಹೋದಂತಿಲ್ಲ. ರಾಜಕೀಯ ಪಕ್ಷಗಳು ಕೇವಲ ತಮ್ಮ ಬೇಳೆಕಾಳು ಬೇಯಿಸುವಲ್ಲಿ ಮಗ್ನರಾಗಿದ್ದಾರೆ. ಮಹಿಳೆಯರಿಗೆ ಸಂಬಂಧ ಪಟ್ಟ ಸಂಘಟನೆಗಳು ಕೇವಲ ಹುಡುಗಿಯರು ಪಬ್ ಮತ್ತು ಹೋಂ ಸ್ಟೇ ಗಳಲ್ಲಿ ಮಜಾ ಮಾಡಿ ರಾದ್ದಂತ ಮಾಡಿದಾಗ ಮಾತನಾಡುವಂತಿದೆ. ಈ ಪ್ರತಿಭಾನ್ವಿತ ಹುಡುಗಿಯ ಸಾವು ಕಂಡು ಕಾಣದಂತೆ ಕುರುಡ ಸ್ಥಿತಿಯಲ್ಲಿದ ಅನುಭವ ನನಗಾಗುತ್ತಿದೆ.
ಓ ಹೆಣ್ಣೇ ನೀನೆಂದು ಬಡ ಮನೆಯಲ್ಲೆ ಹುಟ್ಟ ಬೇಡ. ನಿನ್ನ ಬಡತನ ನಿನ್ನ ಪ್ರಾಣಕ್ಕೂ ನ್ಯಾಯ ಕೊಡಿಸುವುದ್ದಿಲ್ಲ. ಸಮಾಜದಲ್ಲಿ ಇರುವ ಜನರು ಕೂಡ ಕೇವಲ ಅವರ ತಾಯಿ, ಅವರವರ ಅಕ್ಕ , ತಂಗಿ ಬಗ್ಗೆ ಯೋಚಿಸುತ್ತಾರೆ ಹೊರತು ನಿನ್ನ ಬಗ್ಗೆ ನೀನು ಕೂಡ ತನ್ನ ಅಕ್ಕ , ತಂಗಿ, ತಾಯಿಯಂತೆ ಹೆಣ್ಣು ಎಂಬುದನ್ನು ಯೋಚಿಸುವುದಿಲ್ಲ. ನಿನ್ನ ತಂದೆ, ತಾಯಿ, ಒಡ ಹುಟ್ಟಿದವರಿಗಾದ ನೋವು ಬೇರೆಯವರಿಗೆ ತಿಳಿಯಲು ಸಾಧ್ಯವಿಲ್ಲ. ಯಾಕೆಂದರೆ ಸಾವು ನಡೆದದ್ದು ನಿನ್ನ ಮನೆಯಲ್ಲಿ ತಾನೇ.
ತಂಗಿ ನಿನ್ನ ನೋಡಿ ನನಗೆ ಪರಿಚಯವಿಲ್ಲ.ನನಗೆ ಜನ್ಮ ನೀಡಿದ ತಾಯಿ ನನಗೇನಾದರು ಸಣ್ಣ ನೋವಾದಾಗ ನನ್ನ ಕಣ್ಣ ಮುಂದೆ ಕಣ್ಣೀರು ಹಾಕಿ ಅಳುತಿದ್ದಳು. ಆದರೆ ತಂಗಿ ನಿನ್ನನ್ನು ಕಳೆದು ಕೊಂಡ ನಿನ್ನ ತಾಯಿಯ ಕಣ್ಣೀರು , ಆ ನೋವು ನನಗೆ ಗೊತ್ತು. ನಿನ್ನಲ್ಲಿರುವ ಪ್ರತಿಭೆ ಬಗ್ಗೆ ತಿಳಿದು ಮತ್ತು ನಿನ್ನ ಹೆತ್ತವರ ಕಣ್ಣೀರಿಗಾಗಿ ನಿನ್ನ ಸಾವಿನ ನ್ಯಾಯಕ್ಕಾಗಿ ನಾನು ಕೈ ಜೋಡಿಸಿದೆ. ಯಾಕೆಂದರೆ ಇದೇ ಸಮಾಜದಲ್ಲಿ ನಾಳೆ ನಮ್ಮ ಮನೆಯ ಹೆಣ್ಣು ಮಕ್ಕಳು ಬದುಕಬೇಕು. ತಂಗಿ ಇವತ್ತು ನಿನ್ನ ಮನೆಯಲ್ಲಿ ನಡೆದ ಘಟನೆ ನಾಳೆ ನಮ್ಮ ಮನೆಯಲ್ಲಿ ನಡೆದಾಗ ಅಳುವ ಬದಲು ಇಂತಹ ಘಟನೆಗಳು ಇವತ್ತೀಗೆ ಕೊನೆಯಾಗಬೇಕು. ಬಡವರೆಂದರೆ ನ್ಯಾಯ ಕೂಡ ನಿಧಾನವಾಗಿ ಸಿಗುವುದಾದರೆ ಈ ಸಮಾಜದಲ್ಲಿ ಪ್ರಾಣಕ್ಕಿಂತ ದುಡ್ಡೆ ಪ್ರಧಾನವಾಗಿದೆ ಅಂತ ಕಾಣುತ್ತದೆ.
ದೀಪು ಶೆಟ್ಟಿಗಾರ್ ಮಂಗಳೂರು
0 comments: