Thursday, November 2, 2017

ದೈವಾರಾಧನೆಯ ಮೂಲ ಪರಂಪರೆಯನ್ನು ಮರುಕಳಿಸಿದ ಸುಬ್ಬೊಟ್ಟು ಸುವರ್ಣ ಕುಟುಂಬಿಕರು

ಬರಹ - ಸಂಕೇತ್ ಪೂಜಾರಿ

ತುಳುನಾಡಿನ ದೈವಗಳಿಗೆ ಪ್ರತಿಷ್ಠೆ ಎಂಬುವುದಿಲ್ಲ‌. ಅವುಗಳು ಚರ. ದೈವಗಳನ್ನು ನಂಬುವುದು ಎಂಬ ಮಾತು ಇಂದಿಗೂ ಬಳಕೆಯಾಗುವ ಪದ‌. ಆದರೆ‌ ಈಗ ಇದು 'ದೈವಗಳ ಪ್ರತಿಷ್ಠೆ' ಎಂಬ ಪದದೊಂದಿಗೆ ಬದಲಾಗಿರುವುದು ನಿಜಕ್ಕೂ ವಿಪರ್ಯಾಸ. ಉಳ್ಳವರು ಮಾಡಿಸುವ ದೈವಗಳ ಬ್ರಹ್ಮ ಕಲಶ‌ ಈಗ ಬಡವರಿಗೂ ಮಾಡಲೇ ಬೇಕಾದ ಪರಿಸ್ಥಿತಿ ಬಂದೊದಗಿದೆ. ನಮ್ಮ ಹಿರಿಯರೇ ಕಲ್ಲು ಹಾಕಿ ಅಥವಾ ಮೂರ್ತಿ ಒಪ್ಪಿಸಿ ನಂಬಿದ ದೈವಗಳನ್ನು ಈಗ ನವೀಕರಣದ ಹೆಸರಿನಲ್ಲಿ ಆಡಂಬರ ಮಾಡಿ, ದೈವಗಳಿಗೆ ಅಗತ್ಯವಿಲ್ಲದ ಬ್ರಹ್ಮ ಕಲಶ, ಅಭಿಶೇಕಾಧಿ ಹೋಮಗಳನ್ನು ಮಾಡಿಸುವ ತುಳುವರು, ಸತ್ಯಾಂಶವನ್ನು ಲೆಕ್ಕಿಸದೆ ದೈವಗಳನ್ನು ನಂಬುವ ಪ್ರಾಚೀನ ವಿಧಿಯನ್ನು ಮರೆತು ಅದರ ನಾಶಕ್ಕೆ ಕಾರಣರಾಗುತ್ತಿದ್ದಾರೆ. ಇವುಗಳ ಮಧ್ಯೆ ಚೆನೈತ್ತೋಡಿನ ಸುಬ್ಬೊಟ್ಟು ಸುವರ್ಣ ಕುಟುಂಬಿಕರು ಯಾವುದೇ ವೈದಿಕ ಕ್ರಿಯೆಗಳಿಲ್ಲದೆ ತುಳುವರ ಮೂಲ ಪರಂಪರೆಯಂತೆ ದೈವ ಮುಕ್ಕಾಲ್ದಿ ಮತ್ತು ದೈವದ ಪೂಜಾರಿಗಳ ಮುಖಾಂತರ ತಮ್ಮ ಕುಟುಂಬದ ದೈವಗಳನ್ನು ನೂತನ ಕುಟುಂಬದ ಮನೆಯಲ್ಲಿ ನಂಬುವ ಕ್ರಿಯೆಯನ್ನು ಮಾಡಿ ಹೊಸ ನಾಂದಿ ಹಾಡಿದ್ದಾರೆ.

ಹಲವು ವರ್ಷಗಳ ಕಾಲ ಈ ಕುಟುಂಬದ ದೈವಗಳ ಸಾನಿದ್ಯವು ಅಜೀರ್ಣಾವಸ್ಥೆಯಲ್ಲಿ ಇದ್ದಿತು. ತಾಂಬೂಲ ಪ್ರಶ್ನೆಯಲ್ಲಿ ದೈವಗಳ ನವೀಕರಣ ಆಗಬೇಕು ಎಂದು ತೋರಿ ಬಂತು ಅದರಂತೆ ಕುಟುಂಬದವರ ಮನಸ್ಸಿಗೆ ಬಂದ ಸಂಕಲ್ಪದಿಂದ ಮುಂದೆ ಯಾವುದೇ ಪ್ರಶ್ನೆ, ಅಷ್ಟಮಂಗಲ ಇಡದೆ ದೈವದ ಮುಂದೆ ಪ್ರಾರ್ಥನೆ ಮಾಡಿ ಕೇಪುಳ ಹೂವು ತೆಗೆದು ದೈವದ ಅಪ್ಪಣೆ ಪಡೆದು ದೈವಗಳ ಚಾವಡಿ ಮತ್ತು ಕುಟುಂಬದ ಮನೆಯ ನವೀಕರಣಕ್ಕೆ ಮುಂದಾದರು. ಮಂತ್ರಜಾವದೆ ಮತ್ತು ಪೊಟ್ಟ ಪಂಜುರ್ಲಿ ದೈವಗಳನ್ನು ಕುಟುಂಬದ ಮನೆಯೊಳಗೆ ನಂಬುವ ಬಗ್ಗೆ ಇದ್ದ ಅನುಮಾನ ಗೊಂದಲಗಳನ್ನೂ ದೈವದ ಮುಂದೆ ಕೇಪುಳ ಹೂವು ತೆಗೆದು ನೋಡುವ ವಿಧಿಯ ಮೂಲಕವೇ ಪರಿಹರಿಸಿದ್ದು ಈ ಕುಟುಂಬಿಕರು ದೈವಗಳ ಮೇಲೆ ಇಟ್ಟಿರು ನಂಬಿಕೆಗೆ ಕೈಗನ್ನಡಿ.

ದೈವಗಳ ನವೀಕರಣ ಮತ್ತು ಅವುಗಳನ್ನು ಚಾವಡಿಯಲ್ಲಿ ನಂಬುವ ಬಗ್ಗೆ ಒಂದು ಸಭೆ‌ ಕರೆದು ಕುಟುಂಬಿಕರು ಎಲ್ಲರೂ ಒಟ್ಟಾದರು. ಈ ಕುಟುಂಬದ ವಿದ್ಯಾವಂತ ‌ಮತ್ತು ತುಳು ಸಂಸ್ಕ್ರತಿ ಆಚಾರಗಳ ಬಗ್ಗೆ ಅಪಾರ‌ ಒಲವು ಹೊಂದಿರುವ ಹಾಗೂ ಈ ಕುಟುಂಬದ ನವೀಕರಣದ ಮುಖ್ಯ ರುವಾರಿಯಾದ ಯುವಕ ಶ್ರೀ ದಿನೇಶ್ ಸುವರ್ಣರು ದೈವಗಳನ್ನು ‌ತುಳು ಅವೈದಿಕ ‌ಪದ್ದತಿಯಲ್ಲೇ ಒಕ್ಕಲು ಮಾಡಿ‌ ನಂಬುವ ಬಗ್ಗೆ ಕುಟುಂಬದ ಹಿರಿಯರಲ್ಲಿ ಕೇಳಿಕೊಂಡರು‌. ಆದರೆ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಕೊನೆಗೆ ದೈವಗಳನ್ನು ನಂಬುವ ಮತ್ತು ಒಕ್ಕಲು ಮಾಡುವ ನಿಜವಾದ ಪದ್ದತಿಯನ್ನು ದಿನೇಶ್ ರವರು ಎಲ್ಲರಿಗೂ ಅರ್ಥಮಾಡಿಸುವಲ್ಲಿ ಸಫಲರಾದರು. ನಂತರ ತುಳುವಿನಲ್ಲೇ ಆಮಂತ್ರಣ ಪತ್ರಿಕೆ ಮುದ್ರಿಸಲಾಯಿತು. ಇದಕ್ಕೆ ಟೈಮ್ಸ್ ಆಪ್ ಕುಡ್ಲ ದಿನ ಪತ್ರಿಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿತು. ಈಗ ಶುದ್ಧಾಚಾರ, ಮಡಿ ಮೈಲಿಗೆ ಎಂಬ ಅನಗತ್ಯ ಮಾತಿನಿಂದ ಮನೆಯ ದೈವಗಳು ಹೊರ ಬಿದ್ದು ದೈವಸ್ಥಾನಗಳಲ್ಲಿ ನೆಲೆನಿಂತಿವೆ. ಆದರೆ ಈ ಕುಟುಂಬವು ಇದನ್ನು ಅರಿತು ದೈವಸ್ಥಾನಗಳನ್ನು ಕಟ್ಟದೆ ಕುಟುಂಬದ ಮನೆಯನ್ನೇ ಕಟ್ಟಿ ಹಂಚಿನ ಮಾಡು ಹೊದಿಸಿ ಚಾವಡಿ, ಅಡುಗೆ ಕೋಣೆ ಇತ್ಯಾದಿಗಳನ್ನು ನಿರ್ಮಿಸಿ ದೈವಗಳನ್ನು ನೆಲೆಗೊಳಿಸಲು ತೀರ್ಮಾನಿಸಿದರು‌.

ನಂತರ ದೈವಗಳನ್ನು ತೆಂಗಿನಕಾಯಿಗಳ ಮೂಲಕ ಆವಾಹಿಸಿ, ಪ್ರಕೃತಿಯ ನಡುವೆ ದೈವಗಳಿಗೆ ಕಟ್ಟೆಗಳನ್ನು ನಿರ್ಮಿಸಿ ಮನೆಯ ಒಕ್ಕಲು ಕಾರ್ಯಕ್ರಮವನ್ನು ನಡೆಸಲಾಯಿತು. ದೇವರ ಸೇವೆಯಾಗಿ ಗಣ ಹೋಮ ಮತ್ತು ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ತುಳಸಿ ಕಟ್ಟೆಯ ಬಳಿ ದೈವಗಳ ಮಣೆ ಮಂಚಗಳನ್ನು ಇಟ್ಟು ಕುಟುಂಬದ ಕಲ್ಲುರ್ಟಿ ಪಂಜುರ್ಲಿ ದೈವಗಳ ಮಾನ್ಯೆಚ್ಚಿ ಬರಿಸಿ, ದೈವದ ಪೂಜಾರಿಯವರಾದ ರಾಯಿ ಕೊರಗ ಪೂಜಾರಿಯವರ ದಿವ್ಯ ಹಸ್ತದಿಂದ ದೈವಗಳಿಗೆ ಕಲಶ ಕಟ್ಟಿ ಶುದ್ಧ ಮುದ್ರಿಕೆ ಇಟ್ಟು, ಮಾನ್ಯೆಚ್ಚಿಯ ಮೂಲಕ ದೈವಗಳನ್ನು ನೂತನ ಚಾವಡಿಗೆ ಪ್ರವೇಶಿಸಿ ಅಲ್ಲಿ ಒಕ್ಕಲು ಮಾಡಲಾಯಿತು. ಅಲ್ಲಿ ಮಣೆ ಮಂಚಗಳನ್ನು ಪ್ರತಿಷ್ಢಾಪಿಸಿ ದೈವಗಳನ್ನು ಮಣೆ ಮಂಚದಲ್ಲಿ ನೆಲೆಗೊಳಿಸಲಾಯಿತು. ದೈವಗಳ ಮೊಗ ಮೂರ್ತಿ ಆಯುಧಗಳಿಗೆ ಹಾಲು ಎಳನೀರು ಸಮರ್ಪಿಸಿ ಶುದ್ಧಗೊಳಿಸುವ ಮೂಲಕ ಒಕ್ಕಲು ಮಾಡುವ ವಿಧಿಯನ್ನು ಪೂರ್ಣಗೊಳಿಸಲಾಯಿತು. ಇದಲ್ಲದೆ ಇದಕ್ಕೆ ಮುಂಚಿತವಾಗಿ ದಾಸಯ್ಯರನ್ನು ಕರೆಸಿ ಗುಂಡ ಕಟ್ಟಿ ಹರ್ಸಾಯೋ ಮಾಡಿ ಒಕ್ಕಲಿನ ದಿನದಂದು ಪಾನಕ ಪೂಜೆಯನ್ನು ನೆರವೇರಿಸಿ ಕುಟುಂಬದ ಮುಡಿಪು ಸಲ್ಲಿಸಲಾಯಿತು. ಅಂದು ಸಂಜೆ ದೈವಗಳಿಗೆ ಅಗೇಲು ಪರ್ವ ಸೇವೆಯನ್ನೂ ನೆರವೇರಿಸಲಾಯಿತು. ದೈವಗಳು ಸಂತೃಪ್ತಿಗೊಂಡು ನೀಡಿದಂತಹ ಸೇವೆಗೆ ಪರಿಪೂರ್ಣವಾಗಿ ಒಲಿದು ಬಂದು ಈ ಕುಟುಂಬವನ್ನು ಹರಿಸಿದ ಅನುಭವ ಈ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಆಗಿದೆ. ಹೀಗೆ ಯಾವುದೇ ಆಡಂಬರವಿಲ್ಲದೆ, ದುಂದುವೆಚ್ಚವಿಲ್ಲದೆ ತುಳು ಸಂಪ್ರದಾಯದ ಮೂಲಕ ದೈವಗಳನ್ನು ಒಕ್ಕಲು ಮಾಡಿ ನಂಬಿಕೊಂಡು ಬಂದ ಈ ಕುಟುಂಬದ ಈ ಮಹತ್ಕಾರ್ಯ ಇನ್ನು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಮಾಹಿತಿ - ದಿನೇಶ್ ಸುವರ್ಣ ರಾಯಿ.

0 comments: