Thursday, December 7, 2017

ಬೈದೇರುಗಳ ನೇಮದಲ್ಲಿರುವ ವಿಶಿಷ್ಟ ಆಚರಣೆ ಏಟ್

ಬೈದೇರುಗಳ ಆರಾಧನೆಯು ದೈವಾರಾಧನೆಯಲ್ಲಿ ಒಂದು ರೀತಿಯ ವೈಶಿಷ್ಟ್ಯಪೂರ್ಣ ಆರಾಧನೆ. ಇಲ್ಲಿ ಅಬ್ಬರವಿಲ್ಲ ರೋಷಾವೇಶವಿಲ್ಲ ಸಂದರ್ಭಕ್ಕೆ ತಕ್ಕಂತಹ ಕುಣಿತ ಮತ್ತು ಅದೆಷ್ಟೋ ಕ್ರಮಗಳನ್ನು ಒಳಗೊಂಡ ಆರಾಧನೆ. ಬೈದೇರುಗಳ ಆರಾಧನೆಯಲ್ಲಿ ಪ್ರಾದೇಶಿಕ ಭಿನ್ನತೆಯು ಇದೆ. ಪೂರ್ವ ಪಶ್ಚಿಮ ಉತ್ತರ ದಕ್ಷಿಣ ನಾಲ್ಕು ಕಡೆಗಳಲ್ಲು ಪ್ರಾದೇಶಿಕ ಕ್ರಮಗಳು ಕಟ್ಟಲೆಯಾಗಿ ರೂಪಾಂತರಗೊಂಡಿದೆ. ಮೂಡಣ ಕಡೆ ಗರಡಿಗಳಲ್ಲಿ ಬೈದೇರುಗಳಿಗೆ ಮಾತ್ರ ಆರಾಧನೆ ಇದ್ದರೆ ಪಡುವಣ ಕಡೆಗಳಲ್ಲಿ ಗರಡಿ ಸಂಬಂಧಿಸಿದ ಪಿಲ್ಚಂಡಿ, ಶಿವರಾಯ, ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳಿಗೂ ಮೊದಲ ಆರಾಧನೆ ಇದೆ.

ನೇತ್ರಾವತಿ ಗರಡಿಗಳಲ್ಲಿ ಹುಟ್ಟಿನ ಕ್ರಮಗಳು ನಡೆದರೆ ಉಳಿದ ಗರಡಿಗಳಲ್ಲಿ ಕಟ್ಟಿನ(ಕ್ರಮದ) ನೇಮಗಳು ನಡೆಯುತ್ತವೆ. ಹಾಗಾಗಿ ಹುಟ್ಟು ಪವಿತ್ರ ಕಟ್ಟು ಸಂಪೂರ್ಣ ಎನ್ನುವ ಮಾತಿದೆ. ಯಾವತ್ತು ಉಡುಪಿ, ಕಾರ್ಕಳ, ಕುಂದಾಪುರ, ಮೂಡುಬಿದ್ರೆ ಈ ಕಡೆಗಳ ನೇಮ ಬೈದೇರುಗಳಿಗೆ ಸಂಪೂರ್ಣ ತೃಪ್ತಿ ಎನ್ನುವ ಮಾತಿದೆ ಆದರೆ ನೇತ್ರಾವತಿ ಗರಡಿಗಳ ನೇಮವು ಸಂಪೂರ್ಣ ತೃಪ್ತಿಯಲ್ಲ ಯಾಕೆಂದರೆ ಇಲ್ಲಿ ಹುಟ್ಟಿನ ಆರಾದನೆಯಲ್ಲಿ ಶುದ್ದಾಚಾರ ಅಧಿಕ ಎಲ್ಲಿಯಾದರು ಸ್ವಲ್ಪವಾದರು ಲೋಪವಾಗುತ್ತೆ ಎನ್ನುವ ನಂಬಿಕೆ. ಬೈದೇರುಗಳ ಆರಾಧನೆಯಲ್ಲಿ ಎದೆಗೆ ಏಟು ಹಾಕಿಕೊಳ್ಳುವುದು, ಸೇಟ್ ಅಥವಾ ಚೆಂಡು ಹಾಕಿಕೊಳ್ಳುವುದು ಎನ್ನುವ ಕ್ರಮ ಅತ್ಯಂತ ಭಕ್ತಿಯ ಮತ್ತು ಶುದ್ದಾಚಾರದ ಕಟ್ಟು. ಇಲ್ಲಿ ಒಂಚೂರು ಶುದ್ದಾಚಾರದಲ್ಲಿ ಚ್ಯುತಿ ಬಂದರು ಕೂಡ ಪಾತ್ರಿ ವರ್ಗದವರ ಪ್ರಾಣಕ್ಕೆ ಸಂಚಕಾರ. ಏಟು ಹಾಕಿಕೊಳ್ಳುವುದು ಎಂದರೆ ದೈವದ ಪಾತ್ರಿಗಳು ಬೆಳಗಿನ ಜಾವ ಸುಮಾರು ನಾಲ್ಕು ಘಂಟೆಗೆ ದರುಶನದಲ್ಲಿ(ಜೋಗದಲ್ಲಿ) ಸುರಿಯ ಎನ್ನುವ ಆಯುಧದಿಂದ ಹೊಟ್ಟೆ ಅಥವ ಎದೆಗೆ ಚುಚ್ಚಿಕೊಳ್ಳವುದಕ್ಕೆ ಏಟು ಎಂದು ಕರೆಯುವುದು ವಾಡಿಕೆ.

ಎಣ್ಮೂರ ಯುದ್ದ ಭೂಮಿಯಲ್ಲಿ ಪೆರ್ಮಾಲೆ ಬಲ್ಲಾಲ ಕುಜುಂಬದ ಮುದ್ಯರು ಮರೆಯಲ್ಲಿ ನಿಂತು ಬಿಟ್ಟ ಬಾಣ ಕೋಟಿ ಬೈದ್ಯರ ಬಲ ಅಲ್ಲೆಗೆ ( ಕೈಯ ಕಂಕುಳಿನಿಂದ ಕೆಳಗಡೆ ಸೊಂಟದಿಂದ ಮೇಲ್ಗಡೆ) ತಾಗಿ ಪ್ರಾಣ ಬಿಡುತ್ತಾರೆ. ಅದನ್ನೇ ಅಣುಕಾಗಿ ನೇಮದ ಆಚರಣೆಯಲ್ಲಿ ಏಟು ಎನ್ನುವ ಕ್ರಮದ ಮೂಲಕ ತೋರಿಸುತ್ತಾರೆ. ಏಟು ಎನ್ನುವ ಕಟ್ಟು ಈ ಮೊದಲು ಹೇಳಿದಂತೆ ಪ್ರದೇಶಕ್ಕಿಂತ ಪ್ರದೇಶಕ್ಕೆ ಭಿನ್ನತೆಯಿದೆ. ನೇತ್ರಾವತಿ ಹೊಳೆಯ ಒಳಗಿರುವ ಗರಡಿಗಳಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ಕ್ರಮ ಅಂದರೆ ಎದೆಗೆ ಸುರಿಯದ ಏಟು ಹಾಕಿಕೊಳ್ಳುವ ಕ್ರಮವಿದ್ದರೆ ಇದನ್ನು ದಾಟಿದರೆ ಬೇರೆಲ್ಲ ಗರಡಿಗಳಲ್ಲಿ ಹೊಟ್ಟೆಗೆ ಸುರಿಯ ಹಾಕಿಕೊಳ್ಳುವ ಕ್ರಮವಿದೆ. ನೇತ್ರಾವತಿ ಗರಡಿಗಳಲ್ಲಿ ದರುಶನ ಪಾತ್ರಿಗಳು ಮತ್ತು ನೇಮ ಕಟ್ಟಿದವರು ಕೂಡ ಸುರಿಯ ಹಾಕಿಕೊಳ್ಳುವ ಕ್ರಮವಿದೆ. ಆದರೆ ಉಳಿದ ಗರಡಿಗಳಲ್ಲಿ ದರುಶನ ಪಾತ್ರಿಗಳು ಮಾತ್ರ ಏಟು ಮಾಡಿಕೊಳ್ಳುವ ಕ್ರಮವಿದೆ. ಅದೇ ರೀತಿ ನೇತ್ರಾವತಿ ಗರಡಿಗಳಲ್ಲಿ ಮೂರು ಮಂದಿ ದರುಶನ ಪಾತ್ರಿಗಳು ಚೆಂಡು(ಏಟು) ಹಾಕಿಕೊಂಡರೆ ಉಳಿದ ಗರಡಿಗಳಲ್ಲಿ ಇಬ್ಬರು ಏಟು ಹಾಕಿಕೊಳ್ಳುವ ಸಂಪ್ರದಾಯವಿದೆ. ಅಪರೂಪವಾಗಿ ಕೆಲವು ಗರಡಿಗಳಲ್ಲಿ ಮೂರು ಮಂದಿಯ ಏಟು ಇದೆ.

ನೇತ್ರಾವತಿ ಗರಡಿಗಳಲ್ಲಿ ಏಟು ಹಾಕಿಕೊಳ್ಳುವ ಮುಂಚೆ ಕೋಟಿ ಬೈದ್ಯರ ಪಾತ್ರಿಯು ಶುದ್ದ ಸೋಮ(ಹೋಮ) ಇಟ್ಟು ತದನಂತರ ಬೈದೇರುಗಳ ಹುಟ್ಟುಕಟ್ಟುನ್ನು ರಾಗಬದ್ದವಾಗಿ ಹಾಡಿ ಆವೇಶ ಬರಿಸಿಕೊಳ್ಳುತ್ತಾರೆ ತದನಂತರ ಗಿಂಡೆ ನೀರಿನ ಪಾತ್ರಿಯು ದರುಶನ ಪಾತ್ರಿಗಳಿಗೆ ಸುರಿಯ ನೀಡುತ್ತಾರೆ ಅಲ್ಲಿಂದ ರಂಗಸ್ಥಳಕ್ಕೆ ಬೈದೇರುಗಳು ಬಂದು ಎಲ್ಲರಿಗೂ ಸುರಿಯದ ಅಭಯ ನೀಡಿ ತದನಂತರ ಸುರಿಯವನ್ನು ತಲೆಕೆಳಗೆ ಹಿಡಿಯಲು ಗರಡಿಗೆ ಹೋಗಿ ಬೆರ್ಮರ ಅಪ್ಪಣೆ ಪಡೆದು ಬಂದು ರಂಗಸ್ಥಳದಲ್ಲಿ ಒಂದು ಬಾರಿ ಎದೆಗೆ ಸುರಿಯದಿಂದ ಚುಚ್ಚಿಕೊಳ್ಳುತ್ತಾರೆ. ಸುರಿಯ ಚುಚ್ಚಿಕೊಂಡಾಗ ಹಿಂಬದಿಯಿಂದ ಅವರಿಗೆ ಆಧಾರವಾಗಿ ನಿಲ್ಲುತ್ತಾರೆ. ಎದೆಗೆ ಚುಚ್ಚಿಸಿಕೊಂಡೆ ಅವರು ಹೇಳುವ ಮಾತಿದೆ ಬೆರ್ಮೆರೆ ಅಪ್ಪಣೆ ಪಡೆಯೊಂಡ ಸುರಿಯದ ಮುನೆ ಪಿಜಿತೊಂಡ ಎಟು ಪಾಡೊಂಡ ಗಿಂಡೆದ ನೀರ್ ಪತ್ತಿಯ ಗಂಧ ಪಾಡೊಂಡ ಬೆರ್ಮೆರ ಸೇಟ್ ಬಲ್ಲಾಕುಲೆ ಸೇಟ್ ಸಂದಾಯಿತ ಮಂತೊಂಡ ಎಂಕುಲು ಅನ್ನಗ್ ಬಯಕಿದಿಜ ಆಹಾರಗ್ ಬಯಕಿದಿಜ ಒಂಜಿ ಎಡೆಕಟ್ಟುಗುಲ ಒಂಜಿ ಚಪ್ಪರಕೊಂಬುಗುಲ ಬಯಕಿದಿ ಬತ್ತಿ ಸತ್ಯೊಳು ಅಭಯದ ನುಡಿಯನ್ನು ಹೇಳಿ ಅವರಾಗಿಯೆ ಸುರಿಯ ತೆಗೆದು ವೀಳ್ಯದೆಲೆಗೆ ಪೂಸಿದ ಗಂಧ ಇಟ್ಟುಕೊಳ್ಳುತ್ತಾರೆ. ಅದೇ ರೀತಿ ನೇತ್ರಾವತಿ ಗರಡಿಯನ್ನು ಬಿಟ್ಟು ಉಳಿದ ಗರಡಿಗಳಲ್ಲಿ ಬೆರ್ಮರ ಗುಂಡದಿಂದ ಕೈಯನ್ನು ಸವರುವ ಭಂಗಿಯಲ್ಲಿ ಹೊರಗೆ ಬರುವ ಇಬ್ಬರು ಪಾತ್ರಿಗಳಿಗೆ ಗರಡಿ ಅರ್ಚಕರು ಸುರಿಯವನ್ನು ನೀಡುತ್ತಾರೆ.

ಅವರು ಸುರಿಯವನ್ನು ಸವರುವ ಭಂಗಿಯಲ್ಲಿ ಹಿಡಿದುಕೊಂಡು ಕೊಳಲ ಬಾಕ್ಯಾರಿಗೆ ಬಂದು ಮೂರು ಸಲ ಸುರಿಯದಿಂದ ಹೊಟ್ಟೆಗೆ ಚುಚ್ಚಿಕೊಳ್ಳುತ್ತಾರೆ. ಅರ್ಚಕರು ಹಿಂಬದಿಯಿಂದ ಹೋಗಿ ಸುರಿಯ ತೆಗೆದು ಅಲ್ಲಿಗೆ ಗಂಧ ಇಡುತ್ತಾರೆ. ನೇತ್ರಾವತಿ ಗರಡಿಗಳಲ್ಲಿ ಒಂದು ನಂಬಿಕೆಯಿದೆ ಸುರಿಯದಿಂದ ಚುಚ್ಚಿಸಿಕೊಂಡಾಗ ಬಿಳಿ ರಕ್ತ ಬರಬೇಕು ತಪ್ಪಿಯು ಕೆಂಪು ರಕ್ತ ಬರಬಾರದು ಎನ್ನುವ ನಂಬಿಕೆ. ಸುರಿಯ ಹಾಕಿಕೊಳ್ಳುವ ಸಮಯದಲ್ಲಿ ಎದೆಯಲ್ಲಿ ಚೆಂಡಿನ ಆಕಾರದ ಆಕೃತಿ ಬಂದ ಅನುಭವ ಪಾತ್ರಿಗಳಿಗೆ ಆಗುತ್ತಂತೆ ಆವಾಗ ಅವರು ಸುರಿಯ ಹಾಕಿಕೊಳ್ಳುವುದು. ಸುರಿಯ ಹಾಕಿದ ನಂತರ ನೇಮದ ಕಟ್ಟಿದ ಪಾತ್ರಿಗಳಿಗೆ ಸುರಿಯ ನೀಡುತ್ತಾರೆ. ಇಲ್ಲಿ ಕೂಡ ನೇತ್ರಾವತಿ ಗರಡಿಗಳನ್ನು ಬಿಟ್ಟು ಉಳಿದ ಕೆಲವು ಗರಡಿಗಳಲ್ಲಿ ನೇಮ ಕಟ್ಟಿದ ಪಾತ್ರಿಗಳು ಸುರಿಯ ಹಾಕಿಕೊಳ್ಳುತ್ತಾರೆ. ಕೆಲವು ಕಡೆ ಮೊಣಕಾಲೂರಿ ಸುರಿಯ ಹಾಕಿ ಗದ್ದೆಯ ಬದುವಿಗೆ ಬಡಿದದ್ದು ಇದೆ.

ಇವೆಲ್ಲಾ ಆ ಸಮಯದಲ್ಲಿನ ಆವೇಶ. ನೇತ್ರಾವತಿ ಗರಡಿಗಳಲ್ಲಿ ನೇಮದ ದಿವಸ ಮಾತ್ರ ಎಟು ಹಾಕಿಕೊಳ್ಳುವ ಕ್ರಮವಿದ್ದರೆ ಉಡುಪಿ ಕಡೆಗಳಲ್ಲಿ ಅಗೇಲು ಸೇವೆ, ಕೊಡಿ ತಿಂಗಳ ನೇಮ ಈ ಸಮಯದಲ್ಲೂ ಏಟು ಹಾಕಿಕೊಳ್ಳುವ ಸಂಪ್ರದಾಯವಿದೆ. ಏಟು ಹಾಕಿಕೊಳ್ಳುವ ಸಮಯದಲ್ಲಿ ಭಕ್ತ ವೃಂದ ಅತೀ ಭಕ್ತಿಯಿಂದ ನಿಂತಿರುವ ಕ್ಷಣವನ್ನು ಕಾಣಬಹುದು. ಈ ರೀತಿಯಾಗಿ ಬಹು ವಿಸ್ತಾರವಾದ ಮತ್ತು ಶುದ್ದಾಚಾರದ ಪ್ರಕ್ರಿಯೆ ಯಾವುದೇ ಲೋಪವಿಲ್ಲದೆ ಆಧುನಿಕತೆಯ ಗಾಳಿಯು ಬೀಸದೆ ಸಂಪ್ರದಾಯ ಬದ್ದವಾಗಿ ನಡೆಯುತ್ತಿದೆ.

ಬರಹ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ

0 comments: