Sunday, December 31, 2017

ಬಿಲ್ಲವರ ಗುತ್ತು ಮನೆತನಗಳು

ಕಲ್ಕರಬೆಟ್ಟು ಗುತ್ತು:ಬಂಟ್ವಾಳ ತಾಲೂಕಿನ ಕಾವಳ ಪಡೂರು ಗ್ರಾಮದ ಮದ್ವ ಪರಿಸರದಲ್ಲಿ ಕಲ್ಕರಬೆಟ್ಟು ಗುತ್ತು ಇದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸುಮಾರು ಒಂದು ಕಿಲೋ ಮೀಟರಿನಷ್ಟು ದಟ್ಟ ಹಸಿರನ್ನು ಹೊದ್ದು ನಿಂತ ಗುಡ್ಡದ ಬದಿಯಲ್ಲಿ ಈ ಮನೆಯಿದೆ. ಪುರಾತನ ಸುತ್ತು ಮುದಲಿನ ಮನೆಯ ಅರ್ಧದಷ್ಟು ಅವಶೇಷ ಮಾತ್ರ ಉಳಿದಿದೆ. ಹಳೆಯ ಗುತ್ತಿನ ಮನೆಯ ಚಾವಡಿಯಲ್ಲಿದ್ದ ದೈವಗಳನ್ನು ಈಗ ಗುತ್ತ್ತಿನ ಅಂಗಳದಲ್ಲಿ ಹೊಸ ಗುಡಿ ಕಟ್ಟಿ ಅದರಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಗುತ್ತಿನಲ್ಲಿದ್ದ ಹಿರಿಯವರಾದ ಮೋನಪ್ಪ ಪೂಜಾರಿ ಮತ್ತು ಲತೀಶ್ ಅವರು ನೀಡಿದ ಮಾಹಿತಿಯಂತೆ ಈ ಮನೆಗೆ 500 ವರ್ಷಗಳ ಇತಿಹಾಸವಿದೆ. ವಿಜಯ ನಗರದ ಅರಸರೊಬ್ಬರು ಬಂಟ್ವಾಳ ಕಾರಿಂಜೇಶ್ವರ ದೇವಸ್ಥಾನಕ್ಕೆ ಅಗಮಿಸಿದ್ದಾಗ ರಾಜ ಮರ್ಯಾದೆಯಾಗಿ ಈ ಮನೆತನದ ಹಿರಿಯರು ಒಂದು ಮುಟ್ಟಾಳೆ ಚಿನ್ನದ ವರಹಗಳನ್ನು ಅವರ ಪಾದಕ್ಕೆ ಸಮರ್ಪಿಸಿ ಮಹಾರಾಜರ ಪ್ರಶಂಸೆಗೆ ಮತ್ತು ಗೌರವಕ್ಕೆ ಪಾತ್ರರಾದರೆಂದು ಈ ಮನೆತನದ ಹಿರಿಯರು ಹೇಳುತ್ತಾರೆ.

ಸುಮಾರು 500 ವರ್ಷಗಳ ಹಿಂದೆ ತುಳುನಾಡಿನಲ್ಲಿ ಗುತ್ತು ಬರ್ಕೆಗಳು ಇದ್ದ ದಾಖಲಾತಿ ಇಲ್ಲ. ನಾಯ್ಗರು ಒಕ್ಕಲುತನದ ಮುಖ್ಯಸ್ಥರಾಗಿದ್ದ ಬಗ್ಗೆ ಅಳುಪರ ಉದ್ಯಾವರ ಶಾಸನ ಹೇಳುತ್ತದೆ. ನಾಯ್ಗರು ಬಿಲ್ಲವರಾಗಿದ್ದರು. ಅದರೆ 500-600 ವರ್ಷಗಳ ಹಿಂದಿನದ್ದೆನ್ನಲಾದ ಕೋಟಿ-ಚೆನ್ನಯರ ಪಾಡ್ದನ ಗುತ್ತು ಬರ್ಕೆಗಳ ಬಗ್ಗೆ ಹೇಳುತ್ತದೆ.

ದೇವಸ್ಯ ಪಡೂರು, ದೇವಸ್ಯ ಮೂಡೂರು, ಕಾವಲು ಪಡೂರು ಈ ಗ್ರಾಮಗಳಿಗೆ ಸೇರಿದ ಕಾರಿಂಜೇಶ್ವರ ದೇವಸ್ಥಾನದಲ್ಲಿರುವ ಪಾರ್ವತಿ ದೇವಸ್ಥಾನದ ಎದುರುಗಡೆ ಇರುವ ಕಟ್ಟೆ ಕಲ್ಕರಬೆಟ್ಟು ಗುತ್ತಿಗೆ ಸೇರಿದ್ದು. ಜಾತ್ರೆಯ ಸಮಯದಲ್ಲಿ ಉತ್ಸವ ಮೂರ್ತಿಯ ಕಟ್ಟೆ ಪೂಜೆಯನ್ನು ಮಾಡಿಸುವ ಮೊತ್ತ ಮೊದಲ ಗೌರವ ಕಲ್ಕರಬೆಟ್ಟು ಗುತ್ತಿನದ್ದು. ಕಾರಿಂಜೇಶ್ವರನ ಸನ್ನಿದಿಯಿಂದ ಕೆಳಗಿನ ಪಾರ್ವತಿಯ ದೇವಸ್ಥಾನಕ್ಕೆ ಬರುವ ದಾರಿಯಲ್ಲಿ ಬಂಡೆ ಕಲ್ಲಿನ ಮೆಟ್ಟಿಲುಗಳನ್ನು ಕೆತ್ತಿಸಿದ ಕೀರ್ತಿ ಈ ಗುತ್ತಿನ ಹಿರಿಯರಿಗೆ ಸೇರಿದ್ದು. ಈಗ ಗುತ್ತು ಮನೆಗೆ ಸುಮಾರು 15 ಎಕ್ರೆ ವರ್ಗ ಭೂಮಿ ಮಾತ್ರ ಉಳಿದಿದೆ. ಈಗಲೂ ಈ ಭೂಮಿಯಲ್ಲಿ ಬೇಸಾಯ ಮಾಡುತ್ತಾರೆ. ಕುಟುಂಬಸ್ಥರೇ ಸೇರಿ ಕೃಷಿ ಕೆಲಸ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಕಂಬಳ ಕೋಣಗಳನ್ನು ಸಾಕುತ್ತಿದ್ದರು. ಕಾಂತಪ್ಪ ಪೂಜಾರಿಯವರ ಯಜಮಾನಿಕೆಯ ಕಾಲದಲ್ಲಿ ಈ ಗುತ್ತಿನ ಕೋಣಗಳಿಗೆ ಅನೇಕ ಬಹುಮಾನಗಳು ಲಭಿಸಿದ್ದವು.

ಈ ಗುತ್ತಿನವರು ನಾಟಿ ವೈದ್ಯರಾಗಿಯೂ ಪ್ರಸಿದ್ಧಿ ಪಡೆದವರು. ತಿಮ್ಮಣ್ಣ ಪೂಜಾರಿ, ಬಾಬು ಪೂಜಾರಿ, ಕಾಂತಪ್ಪ ಪೂಜಾರಿ ಮುಂತಾದವರು ಆಯುರ್ವೇದ ಔಷಧಿ ತಯಾರಿಸಿ ರೋಗಿಗಳ ಚಿಕಿತ್ಸೆ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ವೈದ್ಯರು. ಬಾಬು ಪೂಜಾರಿಯವರು 24-4-1906 ರಿಂದ 22-7-2013ರ ತನಕ ಅಂದರೆ 107 ವರ್ಷ ಬಾಳಿದವರು. ಇವರ ತಮ್ಮ 98 ವರ್ಷಗಳ ದೀರ್ಘ ಬದುಕನ್ನು ಬಾಳಿ 30-9-2013 ರಂದು ನಿಧನರಾದರು. ಈ ಇಬ್ಬರು ಸಹೋದರರು ತಮ್ಮ ಗುತ್ತಿನ ಮನೆಯ ಗೌರವಕ್ಕೆ ಕುಂದಿಲ್ಲದಂತೆ ಬಾಳಿ ಕೀರ್ತಿ ಶೇಷರಾದವರು. ಗುಮ್ಮಣ್ಣ ಪೂಜಾರಿಯವರ ಕಾಲದಲ್ಲಿ ಊರಿನ ನ್ಯಾಯ ತೀರ್ಮಾನ ಈ ಗುತ್ತಿನ ನ್ಯಾಯ ಚಾವಡಿಯಲ್ಲಿ ನಡೆಯುತ್ತಿದ್ದು ಗ್ರಾಮದ ಒಂದನೇ ಗುರಿಕಾರ ಮನೆಯಾಗಿದೆ. ಗ್ರಾಮದ ದೈವ ಕೊಡಮಣಿತ್ತಾಯನ ನೇಮದಂದು ಕಲ್ಲರ್ಟಿ-ಪಂಜುರ್ಲಿ ದೈವಗಳ ಭಂಡಾರ ಈ ಗುತ್ತಿನಿಂದಲೇ ಹೋಗುತ್ತದೆ.

ಈ ಮನೆಯ ಗುಡಿಯಲ್ಲಿ ಲೆಕ್ಕೇಸಿರಿ, ಕಾರಂದ್ರಾಯ, ಮೈಯ್ಯೊಂತಿ, ಕುಪ್ಪೆಟ್ಟು ಪಂಜುರ್ಲಿ ಕಲ್ಲುರ್ಟಿ, ಹಿರಿಯಜ್ಜ ಮೊದಲಾದ ದೈವಗಳಿವೆ. ಅದರ ಪಕ್ಕದ ಕೋಣೆಯಲ್ಲಿ ದೇವಿಯ ಆರಾಧನೆ ಇದೆ. ನವರಾತ್ರಿಯ ಸಮಯದಲ್ಲಿ ಮೂರು ದಿನಗಳ ಕಾಲ ದೇವಿ ಆರಾಧನೆ ನಡೆಯುತ್ತದೆ. ಕೆಲವು ವರ್ಷಗಳ ಹಿಂದೆ ದೇವಿಗೆ ಪೂಜೆ ನಡೆಯದೇ ಇದ್ದಾಗ ಮನೆಯ ಅಂಗಳದಲ್ಲಿ ಹುಲಿ ಬಂದು ನಿಂತಿತ್ತು ಎಂದು ಹಿರಿಯರು ಹೇಳುತ್ತಾರೆ. ಇದು ಗಡಿ ಹಿಡಿದವರ ಮನೆಯಾಗಿದ್ದು ಈ ಹಿಂದೆ ಅನೇಕರಿಗೆ ಗಡಿ ಪಟ್ಟವಾಗಿತ್ತು. ಈಗ ಅನೇಕ ವರ್ಷಗಳಿಂದ ಯಾರಿಗೂ ಗಡಿ ಪಟ್ಟ ವಾಗಿಲ್ಲ. ಪ್ರತೀ ವರ್ಷ ಕಿರು ಷಷ್ಠಿಯಂದು ಕುಟುಂಬಸ್ಥರೆಲ್ಲಾ ಸೇರಿ ದೈವಗಳಿಗೆ ಅಗೇಲು ಮತ್ತು ಪರ್ವಗಳನ್ನು ನಡೆಸುತ್ತಾರೆ. ನಾಗತಂಬಿಲ ಮುಗಿದ ನಂತರ ದೈವಗಳಿಗೆ ಆರಾಧನೆ ನಡೆಯುತ್ತದೆ. (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ)

ವಿನಂತಿ : ತುಳುನಾಡಿನ ಬಿಲ್ಲವರ ಗುತ್ತು, ಬಕೆ೯ಹಾಗೂ ಪ್ರತಿಷ್ಠಿತ ಮನೆತನಗಳ ಬಗ್ಗೆ ಮುಂಬಯಿ ಬಾಬು ಶಿವಪೂಜಾರಿಯವರ ಮುಂದಾಳುತ್ವದಲ್ಲಿ ಅಧ್ಯಯನ ನಡೆಯುತ್ತಿದ್ದು ಈಗಾಗಲೇ ಸುಮಾರು ೨೦೦ ಕ್ಕೂ ಹೆಚ್ಚು ಮನೆಗಳ ಬಗ್ಗೆ ದಾಖಲೀಕರಣ ವಾಗಿದೆ. ಇನ್ನೂ ಕೆಲವೇ ಸಮಯದೊಳಗೆ ಗ್ರಂಥ ರಚನೆಯಾಗಿ ಬಿಡುಗಡೆಗೊಳ್ಳಲಿದೆ. ಅದಕ್ಕಾಗಿ ಇಂತಹ ಮನೆತನಗಳ ಬಗ್ಗೆ ಯಾರಿಗಾದರು ತಿಳಿದಿದ್ದರೆ ತಿಳಿಸಿ ಧನ್ಯವಾದಗಳು- ಸಂಕೇತ್ ಪೂಜಾರಿ.

0 comments: