Monday, January 1, 2018

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಬಗ್ಗೆ ನಿಮಗೆಷ್ಟು ತಿಳಿದಿದೆ

ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಭೇಟಿಯಾದ ಸಾಹುಕಾರ ಕೊರಗಪ್ಪನವರ ತಂಡ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬಿಲ್ಲವರ ಪರಿಸ್ಥಿತಿಗಳನ್ನೆಲ್ಲಾ ವಿವರಿಸಿ, ತಮ್ಮ ಜನಾಂಗದ ಜಾರಪ್ಪ ನಾಯಕರಿಗೆ ಗೋಕರ್ಣದಲ್ಲಾದ ಅನುಭವ ಹಾಗೂ ಗೋಕರ್ಣ ಕ್ಷೇತ್ರದ ಪ್ರಧಾನ ಅರ್ಚಕರು ಹೇಳಿದ ದೇವಸ್ಥಾನ ಶುದ್ಧೀಕರಣ ಇತ್ಯಾದಿಗಳನ್ನು ವಿವರಿಸಿ ಇದಕ್ಕೆ ಪರಿಹಾರವನ್ನು ಯಾಚಿಸಿದರು. ನಾರಾಯಣ ಗುರುಗಳು ನಿಮಗೆ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ನೀವು ಹೋಗುವುದೂ ಬೇಡ. ಅಲ್ಲಿಗೆ ಹರಕೆ ಕಾಣಿಕೆಗಳನ್ನೂ ಸಲ್ಲಿಸುವುದೂ ಬೇಡ ಅರ್ಚಕರು ಹೇಳಿದ್ದ ಯಾವುದನ್ನೂ ಮಾಡುವುದು ಬೇಡ ಅದೇ ಗೋಕರ್ಣನಾಥನನ್ನು ನಾನೇ ನಿಮಗೆ ತಂದು ಒಪ್ಪಿಸುತ್ತೇನೆ. ಆತನಿಗೆ ನೀವೇ ನಿಮ್ಮದೇ ಆದ ಒಂದು ದೇವಸ್ಥಾನ ನಿರ್ಮಾಣ ಮಾಡಿ ಅನನ್ಯ ಭಕ್ತಿಯಿಂದ ಆರಾಧಿಸಿ ಈ ಕೆಲಸವನ್ನು ನಾನೇ ಸ್ವತ: ಬಂದು ನೆರೆವೇರಿಸುತ್ತೇನೆ ಎಂದು ಭರವಸೆ ಕೊಟ್ಟರು. ಕೊರಗಪ್ಪನವರ ತಂಡ ಅತ್ಯಂತ ಸಂತೋಷದಿಂದಲೇ ಮಂಗಳೂರಿಗೆ ಮರಳಿದರು.

ಮಂಗಳೂರು ನಗರದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಶೋಧನೆ ಮಾಡಿದ ಬಳಿಕ 1908 ರಲ್ಲಿ ಮಂಗಳೂರಿಗೆ ಆಗಮಿಸಿದ ಗುರುಗಳು ಕುದ್ರೋಳಿ ಎಂಬಲ್ಲಿನ ಸ್ಥಳವೇ ಅತ್ಯಂತ ಸೂಕ್ತವೆಂದು ಹೇಳಿದ ಪ್ರಕಾರ, ಸಾಹುಕಾರ್‍ ಕೊರಗಪ್ಪನವರೇ ಆರ್ಥಿಕವಾಗಿ ಹೆಚ್ಚಿನ ಜವಬ್ದಾರಿ ವಹಿಸಿ, ಇತರ ಶ್ರೀಮಂತರಿಂದಲೂ ದೇಣಿಗೆ ಸಂಗ್ರಹಿಸಿ ಈ ಸ್ಥಳವನ್ನು ಸಾಹುಕಾರ್‍ ಕೊರಗಪ್ಪನವರೇ ಖರೀದಿಸಿ, ದೇವಸ್ಥಾನಕ್ಕೊಪಿಸಿದರು. 1909 ರಲ್ಲಿ ನಾರಾಯಣ ಗುರುಗಳು ತಮ್ಮ ಶಿಷ್ಯ ಶ್ರೀ ಚ್ಯೆತನ್ಯ ಸ್ವಾಮಿಗಳ ಜತೆಗೆ ಮತ್ತೆ ಮಂಗಳೂರಿಗೆ ಆಗಮಸಿ, ದೇವಸ್ಥಾನದ ಶಿಲನ್ಯಾಸವನ್ನು ಮಾಡಿದರು. ಶ್ರೀ ಚೈತನ್ಯ ಸ್ವಾಮಿಗಳ ಉಸ್ತುವಾರಿಯಲ್ಲಿ ಕೇರಳ ವಾಸ್ತುಶಿಲ್ಪ ಮಾದರಿಯಲ್ಲಿ ದೇವಸ್ಥಾನ ನಿರ್ಮಾಣದ ಕಾಮಗಾರಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಮಂಗಳೂರಿಗೆ ಬಂದ ಗುರುಗಳು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೂ, ಶಿಷ್ಯರೊಂದಿಗೆ ಕಾಲ್ನಡಿಗೆಯಲ್ಲೇ ಕೊಲ್ಲೂರಿಗೆ ಹೋಗಿ ಮೂಕಾಂಬಿಕಾ ದೇವಸ್ಥಾನಕ್ಕೂ ಭೇಟಿ ನೀಡಿದ್ದರು.

ಸಾಹುಕಾರ್‍ ಕೊರಗಪ್ಪ ಮತ್ತವರ ತಂಡದವರ ತನು-ಮನ- ಧನದಿಂದ ಅರ್ಪಿತವಾದ ಸೇವೆಯಿಂದಾಗಿ ದೇವಸ್ಥಾನ ನಿರ್ಮಾನದ ಕೆಲಸ 1912 ರಲ್ಲಿ ಪುರ್ಣಗೊಂಡಿತು. ಮೂರನೆಯ ಬಾರಿಗೆ ಮಂಗಳೂರಿಗೆ ಆಗಮಿಸಿದ ಗುರುಗಳು 21-2-1912 ರ ಮಹಾಶಿವರಾತ್ರಿಯ ದಿನದಂದು ದೇವಸ್ಥಾನದಲ್ಲಿ ಪಂಚಾಯತನ ಮೂರ್ತಿಗಳ ಪ್ರತಿಷ್ಠೆ ಮಾಡಿದರು. ಗುರುಗಳ ಅಪೇಕ್ಷೆಯಂತೆ ಗಣಪತಿ, ಸುಭ್ರಹ್ಮಣ್ಯ, ಅನ್ನಪೂರ್ಣೇಶ್ವರ, ಭೈರವ, ನವಗ್ರಹ, ಶ್ರೀ ಕೃಷ್ಣ ಮುಂತಾದ ಉಪ ಪ್ರತಿಷ್ಠಾನಗಳೂ ನಡೆದವು. ಸವರ್ಣೀಯರ ಅಧೀನದಲ್ಲಿ ಇಂತಹ ದೇವಮೂರ್ತಿಗಳ ದೇವಸ್ಥಾನಗಳ ಪ್ರವೇಶವು ಒಂದೇ ದೇವಸ್ಥಾನದಲ್ಲಿ ಸಿಗಬೇಕೆಂಬ ಉದ್ದೇಶದಿಂದಲೇ ಗುರುಗಳು ಈ ವ್ಯವಸ್ಥೆ ಮಾಡಿದರು. ಯಾವ ಗೋಕರ್ಣದಲ್ಲಿ ಜಾತಿ, ಜನಾಂಗದ ವೈರುಧ್ಯದ ಕಾರಣದಿಂದ ಒಂದು ವರ್ಗದ ವ್ಯಕ್ತಿಗೆ ಅವಮಾನವಾಗುವ ಮೂಲಕ ಆ ಜನಾಂಗವೇ ಆಧ್ಯಾತ್ಮಿಕ ಜಾಗೃತಿ ಪಡೆಯಿತೋ ಅದೇ ಗೋಕರ್ಣನನ್ನೇ ಈ ಜನಾಂಗದವರು ಕುಲ ದೇವರನ್ನಾಗಿ ಆರಾಧಿಸಲಿ ಎಂಬ ಸಂಕಲ್ಪದಿಂದ ಗುರುಗಳು ಈ ದೇವಸ್ಥಾನವನ್ನು ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವೆಂದು ಕರೆದರು.

ಅಂದಿನಿಂದ ಇಂದಿನವರೆಗೂ ಕೇರಳೀಯ ಮಾದರಿಯ ಸರಳವಾದ ಪೂಜಾಪದ್ಧತಿಯಂತೆಯೇ ನಿತ್ಯಪೂಜೆ ಇತ್ಯಾದಿ ವೈದಿಕ ಆಚರೆಣೆಗಳು, ಶಿವಗಿರಿಯಲ್ಲಿ ತರಬೇತು ಪಡೆದ ಬಿಲ್ಲವ ಅರ್ಚಕರ ಮೂಲಕವೇ ನಡೆದು ಬರುತ್ತಿದೆ.

ನಾರಾಯಣ ಗುರುಗಳು, ಸಾಹುಕಾರ ಕೊರಗಪ್ಪ ಮತ್ತಿತರ ಮುಖಂಡರೊಂದಿಗೆ ಅಂಗಳದಲ್ಲಿ ಕುಳಿತ್ತಿದ್ದಾಗ ಜನ್ಮತಾ ಮೂಕಿಯಾಗ್ಗಿದ್ದ ಓರ್ವ ಬಾಲಕಿಯನ್ನು ಗುರುಗಳು ಹತ್ತಿರಕ್ಕೆ ಕರೆದು ತಂದರು. ಗುರುಗಳು ತಾವು ಕುಡಿದು ಉಳಿದಿದ್ದ ಕಾಫಿಯನ್ನು ಒಂದು ತೊಟ್ಟು ತೆಗೆದು ಗುರುಗಳೇ ಅವಳ ನಾಲಿಗೆಗೆ ಸವರಿದರು. ಅನಂತರ ನಿನ್ನ ಹೆಸರೇನು ತಾಯಿ ಎಂದು ಕೇಳಿದರು. ಆ ಹುಡುಗಿ ತಕ್ಷಣ ಮಾತನಾಡತೊಡಗದಳು. ಗುರುಗಳು ಅಪೇಕ್ಷೆಯಂತೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಒಂದೊಂದು ತೊಟ್ಟು ಕಾಫಿಯನ್ನು ಪ್ರಸಾದದಂತೆ ಸ್ವಾಮಿ ಗುರುಪ್ರಸಾದರೇ ಹಂಚಿದರು. ಕಾಫಿಯನ್ನೇ ಪ್ರಸಾದ ರೂಪವಾಗಿ ಗುರುಪೂಜೆಗೆ ಅರ್ಪಿಸುವುದನ್ನು ನಾವು ಇಂದಿಗೂ ಕಾಣುತ್ತಿದ್ದೇವೆ.

ಈ ಕ್ಷೇತ್ರದಲ್ಲಿ ಮಹಾಶಿವರಾತ್ರಿಗೆ 7 ದಿನಗಳ, ನವರಾತ್ರಿಗೆ 12 ದಿನಗಳ ದಸರಾ ಉತ್ಸವಗಳು ನಡೆಯುತ್ತವೆ. ಮೈಸೂರು ದಸರಾದಂತೆಯೇ ಈಗ ಮಂಗಳೂರು ದಸರಾ ಎಂಬ ಹೆಸರು ಗಳಿಸಿದ್ದೂ, ಜಾತಿ, ಮತ ಬೇಧವಿಲ್ಲದೆ ಲಕ್ಷಾಂತರ ಜನರು ಸೇರಿದ, ವಿಜೃಂಭಣೆಯ ಬಹುದೊಡ್ಡ ಉತ್ಸವವಾಗಿ ನಡೆಯುತ್ತಿದೆ. ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ರಾಮನವಮಿ, ದೀಪಾವಳಿ, ಶಂಕರಾಷ್ಟಮಿ, ಗುರುಜಯಂತಿ, ಮುಂತಾದ ಕಾರ್ಯಕ್ರಮಗಳೂ ಅದ್ದೂರಿಯಾಗಿ ಜರಗುತ್ತವೆ.

ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಪ್ರತಿಷ್ಠಾನಗೊಂಡ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ನವೀಕರಣ ಮತ್ತು 60 ಅಡಿ ಎತ್ತರ ರಾಜಗೋಪುರ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಲ್ಲೂ ಗೋಪುರ ನಿರ್ಮಾಣವಲ್ಲದೆ ಎಲ್ಲಾ ಗರ್ಭಗುಡಿಗಳ ಮತ್ತು ದೇವಳ ಒಳ ಅಂಗಣ, ಹೊರಾಂಗಣಗಳಿಗೆ ಅಮೃತ ಶಿಲಾ ಹೊದಿಕೆ ಮುಂತಾದ ಕಾಮಗಾರಿಗಳಿಗೆ ಬ್ರಹತ್ ಮೊತ್ತದ ಸಂಪನ್ಮೂಲಗಳ ಸಂಚಯನ ಸಮಾಜ ಒಗ್ಗಟಾಗಿ ನಡೆದ ಶ್ರಮದ ಫಲವೆಂದೇ ಹೇಳಬೇಕು. ಈಗ ಈ ದೇವಸ್ಥಾನ ಒಂದು ಬಹುಸುಂದರ, ಪ್ರಖ್ಯಾತ ದೇವಸ್ಥಾನವಾಗಿದ್ದು, ದೇಶ ವಿದೇಶಗಳಿಂದಲೂ ಮಂಗಳೂರಿಗೆ ಆಗಮಿಸಿದ ಯಾತ್ರಾರ್ಥಿಗಳು, ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ಸಂದರ್ಶಿಸದೆ ಹೋಗುವುದಿಲ್ಲ.

0 comments: