******ಬಿಲ್ಲವ ಜನಾಂಗದಲ್ಲಿ ಇದ್ದ ಮದಿಮಾಲ್ ಮದಿಮೆ ಎನ್ನುವ ಆಚರಣೆ****
ತುಳುವರ ಬದುಕಿನಲ್ಲಿ ದಿನಕ್ಕೊಂದು ಆಚರಣೆ ದಿನಕ್ಕೊಂದು ಉತ್ಸವ. ಸಂಪ್ರದಾಯದ ನೆರಳಿನ ಆಶ್ರಯದಲ್ಲೆ ಉಸಿರಾಡುವವರು. ಸಂಪ್ರದಾಯ ಬಿಟ್ಟು ಬದುಕಿದವರು ಅಲ್ಲ. ಅದೆಷ್ಟೊ ಆಚರಣೆಗಳು ಇಂದು ಮೂಲ ಅರ್ಥಗಳನ್ನು ಕಳೆದುಕೊಂಡರು ಕೂಡ ಅಲ್ಲಲ್ಲಿ ಇನ್ನೂ ಕೂಡ ಸಣ್ಣಗೆ ಉಸಿರಾಡುತ್ತಿದೆ. ತುಳುವರಲ್ಲಿ ಅದರಲ್ಲೂ ಅಳಿಯ ಕಟ್ಟಿನ ಜನಾಂಗದಲ್ಲಿ ಹೆಣ್ಣಿಗಿದ್ದಷ್ಟು ಪ್ರಾಧಾನ್ಯತೆ ಯಾರಿಗೂ ಇಲ್ಲ. ಇವತ್ತಿಗೆ ಅಳಿಯ ಕಟ್ಟು ಎನಿಸಿಕೊಂಡಿದ್ದರು ಕೂಡ ಇಂದೊಮ್ಮೆ ಅದು ತಾಯಿ ಕಟ್ಟು(ಅಪ್ಪೆ ಕಟ್ಟ್ ) ಆಗಿದ್ದು ಯಾಕೆಂದರೆ ಅಳಿಯ ಎನ್ನುವ ಶಬ್ಧ ಅದು ಕನ್ನಡ ಶಬ್ಧ ಅದೇ ರೀತಿ ಪುರುಷ ಪ್ರಧಾನ ಸಮಾಜ ಅಧಿಕಾರದಿಂದ ಮೇಲೈಸಿದಾಗ ತಾಯಿ ಕಟ್ಟುವಿನ ಸ್ಥಾನವನ್ನು ಅಳಿಯ ಕಟ್ಟು ಎನ್ನುವ ಪುರುಷ ದೌಲತ್ತು ವ್ಯಾಪಿಸಿಕೊಂಡಿದೆ. ಬಿಲ್ಲವರಲ್ಲಿ ಹೆಣ್ಣು ಹೋಗಿ ಹೆಂಗಸು ಆದಾಗ ಅಂದರೆ ಒಂದು ಹುಡುಗಿ ಪ್ರಕೃತಿ ನಿಯಮದಂತೆ ಋತುಮತಿಯಾದಾಗ ಆಕೆಯನ್ನು ಮುಂದಿನ ಪ್ರಕೃತಿಯ ಹುಟ್ಟಿಗೆ ಪೂರಕವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ಆಚರಣೆಯೆ ಈ ಮದಿಮಾಲ್ ಮದ್ಮೆ ಎನ್ನುವ ಸಂಪ್ರದಾಯ. ಇಲ್ಲಿ ಹೆಣ್ಣಿನ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತೆ ಆಸ್ಥೆಯನ್ನು ಪ್ರಚುರಪಡಿಸುತ್ತೆ. ಹೆಣ್ಣು ಬಾಲ್ಯಾವಸ್ಥೆ ದಾಟಿ ಯೌವನಾವಸ್ಥೆಗೆ ಬರುವ ಸಮಯದಲ್ಲಿ ಆಕೆಯ ದೇಹದ ಆಕಾರದಲ್ಲಿ ಬದಲಾವಣೆಗಳು ಆಗುತ್ತದೆ. ಆಕೆ ಋತುಮತಿ ಆಗಿ ಮೂರನೇ ದಿವಸದಲ್ಲಿ ಗುರಿಕಾರ ಮನೆತನದ ಹೆಂಗಸರು ಅಥವ ಜಾತಿಯ ಹೆಂಗಸರು ಬಂದು ತಲೆಗೆ ನೀರೆರೆದು ಆಕೆಯನ್ನು ಮನೆಯ ಒಳಗೆ ಕುಳ್ಳಿರಿಸುತ್ತಾರೆ. ಇದು ಆದ ನಂತರ ಒಂದು ಒಳ್ಳೆಯ ದಿವಸ ನೋಡಿ ಮದಿಮಾಲ್ ಮದಿಮೆ ಎನ್ನುವ ಆಚರಣೆಗೆ ದಿವಸ ಗೊತ್ತು ಪಡಿಸುತ್ತಾರೆ. ಅವತ್ತು ಬೆಳಿಗ್ಗೆ ಮಡಿವಾಳ ಜಾತಿಯ ಹೆಂಗಸು ಬಂದು ಈ ಆಚರಣೆಗೆ ಸಿದ್ದತೆ ಮಾಡಿಕೊಳ್ಳುತ್ತಾರೆ. ಒಂದು ಮರದ ಮಣೆ ಇಟ್ಟು ಅದರ ಮೇಲೆ ಬಿಳಿ ಹಾಸನ್ನು ಹೊದಿಸುತ್ತಾರೆ. ತದನಂತರ 5 ಕಳಶದಲ್ಲಿ ನೀರು ಸಿದ್ದ ಪಡಿಸುತ್ತಾರೆ. ಗುರಿಕಾರ ಮನೆಯ ಹೆಂಗಸರ ಮುಂದಾಳತ್ವದಲ್ಲಿ 5 ಬಳಿಯ(ಬರಿ, ಗೋತ್ರ) ಹೆಂಗಸರು ಹೆಣ್ಣನ್ನು ಮರದ ಮಣೆಯಲ್ಲಿ ಕುಳ್ಳಿರಿಸಿ ಕ್ರಮ ಪ್ರಕಾರವಾಗಿ ನೀರೆರೆಯುತ್ತಾರೆ. ತದನಂತರ ನೀರಿನ ಶಾಸ್ತ್ರ ಆದ ಮೇಲೆ ಆಕೆಗೆ ಹೊಸ ಸೀರೆ ಉಡಿಸಿ ಮದುವಣಗಿತ್ತಿಯ ಶೃಂಗಾರ ಮಾಡುತ್ತಾರೆ. ಮೊದಲನೆಯ ಬಾರಿಗೆ ಅಂದು ಆಕೆಗೆ ಹಿಂಗಾರ ಮುಡಿಸುತ್ತಾರೆ( ಅಲ್ಲಿಯವರೆಗೆ ಆಕೆಗೆ ಹಿಂಗಾರ ಮುಡಿಯುವ ಹಕ್ಕು ಇರುವುದಿಲ್ಲ ) ತದನಂತರ ಶೃಂಗಾರ ಮುಗಿದ ಮೇಲೆ ಆಕೆಯನ್ನು ಕೊಡಿನಾಡು ಕಟ್ಟಿ ಅದರ ಅಡಿಯಲ್ಲಿ ಭತ್ತದ ಮುಡಿಯನ್ನಿಟ್ಟು ಅದರ ಮೇಲೆ ಬಿಳಿ ಹಾಸನ್ನು ಹೊದೆಸಿ ಅದರ ಮೇಲೆ ಹೆಣ್ಣನ್ನು ಕೂರಿಸಿ ದೃಷ್ಟಿ ತೆಗೆಸಿ 5 ಜನ ಹೆಂಗಸರು ಆರತಿಯನ್ನು ಬೆಳಗುತ್ತಾರೆ. ತದನಂತರ ಪ್ರತಿಯೊಬ್ಬರು ಬಂದು ದೇಸೆ (ಅಕ್ಷತೆ) ಹಾಕುತ್ತಾರೆ ಅದೇ ರೀತಿ ಹೆಣ್ಣಿನ ಕೈಯಲ್ಲಿ ಹಣ ಇಡುತ್ತಾರೆ (ಇದು ಕಡ್ಡಾಯವಲ್ಲ). ತದನಂತರ ಬಂದವರಿಗೆಲ್ಲ ಕೋಳಿಯೂಟ. ತದನಂತರ ಸೋದರ ಮಾವ ಸೊಸೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ. ಇಲ್ಲಿ ಹೆಚ್ಚಿನ ಜವಬ್ದಾರಿಯು ಸೋದರ ಮಾವನಿಗೆ ಇರೋದ್ರಿಂದ ಕರೆದುಕೊಂಡು ಹೋಗಿ ತನ್ನ ಮನೆಯಲ್ಲೆ ಇರಿಸಿ ಮದುವೆ ಮಾಡಿಕೊಡುತ್ತಾನೆ. ಮುಂದಕ್ಕೆ ಆಕೆ ದೈಹಿಕವಾಗಿ ಬಲಗೊಳ್ಳಲು ಅವಲಕ್ಕಿ ಒಣ ಕೊಬ್ಬರಿ ಮತ್ತು ಬೆಲ್ಲದಿಂದ ಮಾಡಿದ ವಿಶೇಷ ತಿನಸು ತಿನ್ನಿಸಿ ದೇಹ ಗಟ್ಟಿಗೊಳ್ಳುವಂತೆ ಮಾಡುತ್ತಾರೆ. ಇದು ಅವಳಿಂದ ಇನ್ನೊಂದು ಹುಟ್ಟು ನಡೆಯಬೇಕಾಗಿರೋದ್ರಿಂದ ಆ ಹುಟ್ಟಿಗೆ ಈಗಲೆ ಮಾಡುವ ಪೂರ್ವ ತಯಾರಿ. ಅದೇ ರೀತಿ ಪ್ರತಿ ತಿಂಗಳು ಆಕೆ ರಜಸ್ವಲೆಯಾದಾಗ ಆಕೆಗೆ ಸಂಪೂರ್ಣ ಕೆಲಸಗಳಿಂದ ವಿಶ್ರಾಂತಿ ನೀಡಿ ಆಕೆಗೆ ಕುಳಿತಲ್ಲಿಗೆ ಆಹಾರ ನೀಡುತ್ತಿದ್ದರು. ಯಾಕೆಂದರೆ ಆ ಸಮಯದಲ್ಲಿ ಆಕೆಯ ದೇಹದಿಂದ ಸ್ರವಿಸುವ ದ್ರವದ ಮೂಲಕ ಆಕೆಯ ಶಕ್ತಿ ನಷ್ಟವಾಗಿರುತ್ತೆ ಎನ್ನುವ ವೈಜ್ಞಾನಿಕ ಸತ್ಯ ಇರೋದ್ರಿಂದ. ಆದುದರಿಂದ ಆ ಸಮಯದಲ್ಲಿ ಆಕೆಗೆ ಸಂಪೂರ್ಣ ವಿಶ್ರಾಂತಿ. ಈ ಮದಿಮಾಲ್ ಮದಿಮೆ ಆಚರಣೆಯ ಇನ್ನೊಂದು ಉದ್ದೇಶವೇನೆಂದರೆ ಮನೆಯಲ್ಲಿ ಹುಡುಗಿಯೊಬ್ಬಳು ಮದುವೆಗೆ ತಯಾರು ಆಗಿದ್ದಾಳೆ ಎಂದು ಸಮಾಜಕ್ಕೆ ತೋರ್ಪಡಿಸುವುದು ಆಗಿದೆ. ಕಾಲಕ್ರಮೇಣ ಇಂತಹ ಆಚರಣೆಗಳೆ ಹೆಣ್ಣಿಗೆ ಶಾಪವಾಯಿತು. ಆಕೆ ದೈಹಿಕವಾಗಿ ಬಳಲಿರುವ ಸಮಯದಲ್ಲಿ ಸಮಾಜದ ಮುಟ್ಟಿಸಿಕೊಳ್ಳಲಾಗದ ಸಂಪ್ರದಾಯದಿಂದ ಮಾನಸಿಕವಾಗಿ ಆಕೆ ಕುಗ್ಗುವಂತಾಯಿತು. ಇಂತಹ ಸಮಯದಲ್ಲಿ ಆಕೆಯ 5 ದಿನದ ಬದುಕು ಎಲ್ಲರಿಂದ ದೂರವಾಗಿ ಯಾರೊಂದಿಗು ಬೆರೆಯದೆ ಧಾರ್ಮಿಕತೆಯ ನಂಬಿಕೆಯಲ್ಲಿ ಆಕೆ ಇನ್ನಷ್ಟು ಮುದುಡುವಂತಾಯಿತು. ರಾಮಾಯಣ ಮತ್ತು ಮಹಾಭಾರತದಲ್ಲಿ ಇದರ ಬಗ್ಗೆ ಉಲ್ಲೇಖವಿದೆ. ಸೀತೆಯು ರಾಮನ ಪಟ್ಟಾಭಿ಼ಷೇಕದ ಸಮಯದಲ್ಲಿ ರಜಸ್ವಲೆಯಾಗಿದ್ದಲು (ಎಲ್ಲೋ ಓದಿದ ನೆನಪು) ಆದರು ಆಕೆ ಧಾರ್ಮಿಕ ವಿಧಿ ವಿಧಾನದಲ್ಲಿ ಭಾಗಿಯಾಗಿದ್ದಲು ಎಂದು ಅದೇ ರೀತಿ ದ್ರೌಪದಿಯನ್ನು ದುಶ್ಯಾಸನ ಸಭೆಗೆ ಎಳೆದು ತರುವಾಗ ಆಕೆ ರಜಸ್ವಲೆಯಾಗಿ ತುಂಡುಡುಗೆಯಲ್ಲಿ ಇದ್ದಲು ಆ ಸಮಯದಲ್ಲಿ ಸಭೆಗೆ ಎಳೆದು ತರಬಾರದೆಂಬ ಕಟ್ಟು ಪಾಡು ಇದ್ದಿಲ್ಲ ಎನ್ನುವ ಸ್ಪಷ್ಟತೆ ಇಲ್ಲಿ ಸಿಗುತ್ತದೆ. ಒಂದು ಹುಟ್ಟಿಗೆ ಪೂರಕವಾದ ಈ ಪ್ರಕ್ರಿಯೆ ಯಾಕೆ ಹೆಣ್ಣಿಗೆ ಮುಟ್ಟಿಸಿಕೊಳ್ಳಲಾಗದ ಮತ್ತು ಧಾರ್ಮಿಕತೆಯ ಹೆಸರಿನಲ್ಲಿ ಬಂಧಿಯನ್ನಾಗಿ ಮಾಡಿದೆ ಎಂದು ಗೊತ್ತಿಲ್ಲ. ಒಂದು ವೇಳೆ ಮುಟ್ಟು ಎನ್ನುವಂತದ್ದು ಆಗದಿದ್ದಲ್ಲಿ ಅಲ್ಲಿ ಸೃಷ್ಟಿ ಕಾರ್ಯವೆ ನಿಂತು ಹೋಗುತ್ತೆ. ಆದರು ಸಮಾಜ ಇದರ ಬಗ್ಗೆ ತಿಳಿದುಕೊಳ್ಳದ್ದು ವಿಪರ್ಯಾಸ. ಈ ಮೇಲಿನ ಆಚರಣೆಗಳು ಸರ್ವೇ ಸಾಮಾನ್ಯ ಅಳಿಯ ಕಟ್ಟಿನ ಅಡಿಯಲ್ಲಿ ಬರುವ ಬಿಲ್ಲವ, ಬಂಟ, ಕುಲಾಲ, ಮಡಿವಾಳ ಇವರಲ್ಲಿ ಒಂದೇ ರೀತಿಯದಾಗಿದ್ದು ಅದೇ ರೀತಿ ಮಕ್ಕಳ ಕಟ್ಟಿನ ಜಾತಿಯಲ್ಲಿ ಬೇರೆಯೆ ರೀತಿಯಲ್ಲಿ ಇರುತ್ತದೆ. ಪುತ್ತೂರು ಮತ್ತು ಸುಳ್ಯ ಕಡೆ ಇಂದಿಗೂ ಕೂಡ ಸಂಪ್ರದಾಯಕ್ಕೆ ಚ್ಯುತಿ ಬರದ ರೀತಿಯಲ್ಲಿ ಕೆಲವು ಕಡೆ ಗೌಡ ಸಮುದಾಯದವರು ಈ ಆಚರಣೆಯನ್ನು ಮಾಡುತ್ತಾರೆ. ಆದರೆ ನಾರಾಯಣ ಗುರುಸ್ವಾಮಿಗಳು ಈ ಆಚರಣೆಯ ದುರ್ಬಳಕೆ ನೋಡಿಕೊಂಡು ಬಿಲ್ಲವ ಸಮುದಾಯದಲ್ಲಿ ಇದನ್ನು ನಿಲ್ಲಿಸಿದ್ದಾರೆ.
ಲೇಖನ: ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ
0 comments: