Sunday, January 21, 2018

ಬಿಲ್ಲವರ ಗುತ್ತು ಮನೆತನಗಳು (ಅದಮ್ಮ ಗುತ್ತು)

ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದಲ್ಲಿ ಸುತ್ತು ಮುದಲಿನ ವಿಸ್ತಾರವಾದ ಮತ್ತು ಗಂಭೀರ ಲಕ್ಷಣಗಳನ್ನು ಹೊಂದಿರುವ ಅದಮ ಗುತ್ತು ಇದೆ. ಪ್ರಾಚೀನ ಮನೆಯನ್ನು ತೆರವು ಮಾಡಿ ಆ ಜಾಗದಲ್ಲಿ ಹೊಸ ಮನೆಯನ್ನು ೩/೪/೧೯೩೯ ರಲ್ಲಿ ಕಟ್ಟಿ ಗೃಹ ಪ್ರವೇಶ ನಡೆಸಿರುವುದಾಗಿ ಚಾವಡಿಯ ಮರದ ತೊಲೆಯಲ್ಲಿ ಕೆತ್ತಲಾಗಿದೆ. ಹಾಗಾದರೆ ಈಗಿನ ಮನೆಗೆ ಸುಮಾರು ೭೫ ವರ್ಷಗಳು ಸಂದು ಹೋಗಿವೆ. ವಿಶಾಲವಾದ ಚಾವಡಿಯಲ್ಲಿ ಸುಂದರವಾದ ಭೋದಿಗೆ ಕಂಬಗಳಿವೆ. ಗುತ್ತಿಗೆ ಘನ ಗಾಂಭೀರ್ಯವನ್ನು ಈ ಕಂಬಗಳು ತಂದು ಕೊಟ್ಟಿವೆ.

ಗುತ್ತಿನ ಈ ಚಾವಡಿ ಈ ಮನೆತನದ ಆಸ್ತಿ ಪಾಸ್ತಿ ಸಂಪತ್ತು ಮತ್ತು ಊರಿನಲ್ಲಿ ಗುತ್ತು ಮನೆತನದವರಿಗಿರುವ ಸಾಮಾಜಿಕ ಅಂತಸ್ತು ಗೌರವಗಳನ್ನು ದರ್ಶಿಸುತ್ತದೆ. ಮನೆಯ ಮುಂದಿನ ಉತ್ತರ ದಿಕ್ಕಿನಲ್ಲಿ ಪಡಿಪ್ಪಿರೆ ಇದೆ. ಈ ಪಡಿಪ್ಪಿರೆಯಿಂದ ಮನೆಯ ಬಹುದೊಡ್ಡ ಅಂಗಳವನ್ನು ಪ್ರವೇಶಿಸಿದಾಗ ಅಂಗಳದಲ್ಲಿ ಮುಖ್ಯ ಮನೆಯ ಬಾಗಿಲಿಗೆ ಎದುರಾಗಿ ಸ್ವಲ್ಪ ಎಡಕ್ಕೆ ಬೃಹತ್ತಾದ ತುಳಸಿ ಕಟ್ಟೆ ಇದೆ. ಇದು ದೊಡ್ಡ ಗುತ್ತು ಮನೆಗೆ ಮತ್ತದಕ್ಕೆ ತಕ್ಕುದಾದ ವಿಶಾಲ ಅಂಗಳಕ್ಕೆ ಒಪ್ಪುವ ತುಳಸಿ ಕಟ್ಟೆಯಾಗಿದೆ.

ಗುತ್ತು ಮನೆಯು ಉತ್ತರಾಭಿಮುಖವಾಗಿ ಪೂರ್ವ ಪಶ್ಚಿಮಕ್ಕೆ ಹರಡಿಕೊಂಡಿದ್ದು ಪೂರ್ವದ ಭಾಗವು ಉತ್ತರಕ್ಕೆ ಹೆಚ್ಚು ಉದ್ದವೂ ಪಶ್ಚಿಮದ ಭಾಗವೂ ಪಶ್ಚಿಮಕ್ಕೆ ಹೆಚ್ಚು ಉದ್ದವೂ ಆಗಿದೆ. ಅನೇಕ ಗುತ್ತು ಮನೆಗಳ ವಿನ್ಯಾಸವನ್ನು ಹೀಗೆಯೇ ಇರುತ್ತದೆ. ಅಂಗಳದಿಂದ ಚಾವಡಿ ಏರಲು ೫ ಮೆಟ್ಟಿಲುಗಳಿವೆ. ಪಶುಶಾಲೆಯು ಮನೆಯ ದಕ್ಷಿಣ ದಿಕ್ಕಿನಲ್ಲಿ ಇದೆ. ಇದು ಕೂಡ ಬಹುದೊಡ್ಡ ಹಟ್ಟಿಯಾಗಿದೆ. ನಾವು ಭೇಟಿ ಕೊಟ್ಟಂತಹ ಸಮಯದಲ್ಲಿ ಬಹಳ ಪ್ರಸಿದ್ಧ ಮತ್ತು ಪ್ರಭಾವಶಾಲೀ ವ್ಯಕ್ತಿಯಾದ ಬಲ್ನಾಡು ಬಟ್ಯಪ್ಪ ಪೂಜಾರಿಯವರು ಈ ಮನೆಯಲ್ಲಿದ್ದು ನಮಗೆ ಸಹಕರಿಸಿದರು.

ಇದು ಕರ್ಕೇರ ಬಳಿಯವರಿಗೆ ಸೇರಿದ ಗುತ್ತಿನ ಮನೆ. ಈ ಮನೆ ಮೊದಲು ಉಮ್ಮಾಲು ಎಂಬುವವರಿಗೆ ಸೇರಿತ್ತು. ಅವರಿಗೆ ಸಂತಾನವಿಲ್ಲದ ಕಾರಣ ಪುತ್ತು ಹೆಂಗಸು ಎಂಬುವವರಿಗೆ ಈ ಗುತ್ತು ಮನೆಯ ಆಡಳಿತವನ್ನು ಕೊಡಲಾಯಿತಂತೆ. ಪ್ರಾಯಶಃ ಉಮ್ಮಾಲು ಅವರ ಕುಟುಂಬದ ಅತೀ ಸಮೀಪದ ಬಂಧು ಪುತ್ತು ಆಗಿದ್ದಿರಬೇಕು. ಈಗ ಪುತ್ತು ಅವರ ಸಂತತಿ ಈ ಗುತ್ತಿನಲ್ಲಿ ಇದೆ. ಯಶೋಧ ಅವರು ಹಿರಿಯ ಮಹಿಳೆ. ಗುಮ್ಮಡ ಬೈದ್ಯ ಎಂಬುವವರು ಇಲ್ಲಿನ ಮೂಲ ಪುರುಷರಾಗಿದ್ದರು. ಈ ಗುತ್ತಿನ ಗಡಿ ನಾಮವೂ ಇದೇ ಆಗಿದೆ. ಊರಿನ ಸಾರ್ವಜನಿಕ ದೇವಸ್ಥಾನದಲ್ಲಿ ಈ ಗುತ್ತಿಗೆ ವಿಶೇಷ ಸ್ಥಾನಮಾನಗಳಿವೆ.

ಗ್ರಾಮ ದೈವಸ್ಥಾನದಲ್ಲಿ ಇವರಿಗೆ ಗುಮ್ಮಡ ಬೈದ್ಯರು ಎಂಬ ಕರೆ ಇದೆ. ಒಮ್ಮೆ ಬೈದ್ಯರು ಎಂದು ಕರೆದು ಗೌರವಿಸುತ್ತದ್ದಕ್ಕೆ ಕೆಲವರು ಆಕ್ಷೇಪಿಸಿ ನಂತರ ಬೈದ್ಯ ಎಂದು ಕರೆಯುವಂತೆ ಹೇಳಿಕೊಟ್ಟರಂತೆ. ಅ ವಿಷಯವಾಗಿ ಈ ಮನೆಯವರು ಅದನ್ನು ಪ್ರಶ್ನಿಸಿ ಇವರು ಕೋಪ ಮತ್ತು ಬೇಸರಗೊಂಡು ಮತ್ತೆ ಆ ದೈವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿದರಂತೆ. ಈಗ ಆ ಮನಸ್ಥಾಪ ದೂರ ವಾಗಿದೆ.

ಈ ಮನೆತನಕ್ಕೆ ಸುಮಾರು ೩೦ ಕ್ಕೂ ಹೆಚ್ಚು ಎಕ್ರೆ ಜಮೀನು ಇತ್ತು. ಅದಲ್ಲದೆ ಆನೆಪಲ್ಲ, ಬೈಲದಡ್ಕ, ಬೊಲೆಕಿಲ ಮುಂತಾದ ಕಡೆಗಳಲ್ಲಿ ಜಮೀನುಗಳು ಇದ್ದಿತು. ಆನೆ ಪಲ್ಲದ ಜಮೀನು ಮಡಿವಾಳರಿಗೆ, ಬೈಲದಡ್ಕದ ಜಮೀನು ಬಿಲ್ಲವರಿಗೆ, ಬೊಲೆಕಿಲದ ಜಮೀನು ಮುಸಲ್ಮಾನರಿಗೆ ಹೋಗಿ ಅದರಲ್ಲಿನ ಅರ್ಧ ಭಾಗ ಈ ಮನೆತನಕ್ಕೆ ಒದೆ. ಬಂಟ್ವಾಳ ತಾಲೂಕಿನಲ್ಲಿಯೂ ಇವರಿಗೆ ಜಮೀನು ಇದ್ದಿತು. ಎಲ್ಲವೂ ಈಗ ಭೂಮಸೂದೆಯಿಂದೆ ಕೈತಪ್ಪಿದೆ. ೧೯೬೬ ರಲ್ಲಿ ಈ ಮನೆಯಲ್ಲಿ ೧೬ ಮಂದಿ ಜನ ವಾಸಿಸುತ್ತಿದ್ದರು. ಈ ಕುಟುಂಬದ ಉಮ್ಮಲು ಮತ್ತು ದೇವಕ್ಕಿ ಪ್ರಸಿದ್ಧ ನಾಟಿ ವೈದ್ಯರಾಗಿದ್ದರು.

ಉಮ್ಮಾಲು ಅವರು ಕ್ಯಾನ್ಸರ್ ರೋಗಕ್ಕೂ ಮದ್ದು ನೀಡಿ ಗುಣಪಡಿಸುತ್ತಿದ್ದರೆಂಬ ಪ್ರತೀತಿ ಇದೆ. ಗುತ್ತಿನ ಚಾವಡಿಯಲ್ಲಿ ಲೆಕ್ಕೇಸಿರಿ, ಪಂಜುರ್ಲಿ, ಸತ್ಯಜಾವದೆ, ಕಲ್ಲುರ್ಟಿ, ದೈವಗಳಿವೆ. ಎರಡು ಹಿರಿಯಾಯ ದೈವಗಳ ಮೂರ್ತಿ ಇದೆ. ಇದರಲ್ಲಿ ಒಂದು ಅದಮ್ಮ ಗುತ್ತಿನ ಹಿರಿಯಾಯ ಇನ್ನೊಂದು ಹೇರೊಡಿಯ ಹಿರಿಯಾಯ. ಇಬ್ಬರು ಈ ಕುಟುಂಬದ ಒಂದೇ ಕವಲಿನವರು. ಸುಮಾರು ೩೦೦ ಜನರು ಇಲ್ಲಿಯ ವಾರ್ಷಿಕ ಸೇವೆಗೆ ಬಂದು ಸೇರುತ್ತಾರೆ.

ಈ ಗುತ್ತಿನ ಅನೇಕರು ಶಿಕ್ಷಿತರಾಗಿ ಉನ್ನತ ಹುದ್ದೆಯಲ್ಲಿ ಇದ್ದಾರೆ. ಕಬ್ಬಡ್ಡಿ ಕೋಚ್ ಪುರುಷೋತ್ತಮರು ಈ ಗುತ್ತಿನವರು. ಬಾಲಕೃಷ್ಣ ಕರ್ಕೇರ ನಿವೃತ್ತ ಎಜುಕೇಶನ್ ಆಫೀಸರ್, ಕೆ.ಇ ರಾಧಕೃಷ್ಣ ಸಿಂಡಿಕೇಟ್ ಬ್ಯಾಂಕಿನ ಅಸಿಸ್ಟೆಂಟ್ ಎಗ್ರಿಕಲ್ಚರಲ್ ಆಫೀಸರ್, ಡಾ. ಸುಕುಮಾರ್ ಚರ್ಮರೋಗ ತಜ್ಞರು, ರಾಜೇಶ್ ಇಂಜಿನಿಯರ್, ಎ. ವರದರಾಜ್ ಮಂಗಳೂರಿನಲ್ಲಿ ನ್ಯಾಯವಾದಿ ಮತ್ತು ನೋಟರಿ ಆಗಿದ್ದಾರೆ. ಡಾ. ಕರುಣರಾಜ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಹೀಗೆ ಈ ಮನೆತನ ದ ಅನೇಕರು ಉಚ್ಚ ಶಿಕ್ಷಣ ಪಡೆದು ಉನ್ನತ ಉದ್ದೆಯಲ್ಲಿ ಇದ್ದಾರೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) -ಸಂಕೇತ್ ಪೂಜಾರಿ

0 comments: