Saturday, January 20, 2018

ಬಿಲ್ಲವರ ಗುತ್ತು ಮನೆತನಗಳು ( ಕೊಲ್ಲೂರು ಗುಡ್ಡೆ ಸಾನದ ಬರ್ಕೆ)

ಬಿಲ್ಲವರ ಪ್ರಾಚೀನ ಮನೆತನಗಳಲ್ಲಿ ಮೂಲ್ಕಿ ಸೀಮೆಯ ಗುಡ್ಡೆ ಸಾನ ಬರ್ಕೆ ಮನೆಗಳಿಗೆ ವಿಶೇಷ ಸ್ಥಾನಮಾನಗಳಿವೆ. ತುಳುನಾಡ ಜೈನ ಅರಸರ ಇತಿಹಾಸದಲ್ಲಿ ಮೂಲ್ಕಿ ಸೀಮೆಯ ಮಿತ್ತ ಗುಡ್ಡೆ ಸಾನ ಮತ್ತು ತಿರ್ತ ಗುಡ್ಡೆ ಸಾನ ಮನೆಗಳಿಗೆ ವಿಶೇಷ ಮಹತ್ವದ ನಿರ್ಣಾಯಕ ಪಾತ್ರಗಳಿದ್ದವು. ಬೇಸಾಯದ ನೂರಾರು ಮುಡಿ ವರ್ಗ ಭೂಮಿಯನ್ನು ಹೊಂದಿದ್ದ ಈ ಸೇನಾಧಿಪತಿಗಳ ಮನೆಗಳು ಮೂಲ್ಕಿ ಸೀಮೆಯ ಆಡಳಿತದಲ್ಲಿ ಸಕ್ರಿಯವಾಗಿದ್ದವು.

ಮೂಲ್ಕಿ ಸಾಮಂತರಸರ ಹೆಂಡತಿ ಪುಲ್ಲು ಪೆರ್ಗಡ್ತಿ ಸಂತಾನದ ಭಾಗ್ಯದ ಹರಿಕೆಗಾಗಿ ಕದ್ರಿ ಮಂಜುನಾಥನಲ್ಲಿಗೆ ಯಾತ್ರೆಗೆ ಹೋಗುತ್ತಿದ್ದಾಗ ಸುರುತಕಲ್ಲಿನಲ್ಲಿ(ಸುರತ್ಕಲ್) ಆಚು ಬೈದ್ಯೆತಿ ಎಂಬ ಸುಂದರ ಮತ್ತು ಚುರುಕು ಬುದ್ಧಿಯ ಬಾಲೆಯನ್ನು ಕಂಡು ಆಕೆಯ ಮಾವನಾದ ಜತ್ತಿಯವರಿಂದ ಅವಳನ್ನು ಪಡೆದು ತನ್ನ ಅರಮನೆಗೆ ಕೆರೆತಂದು ಆ ದತ್ತು ಮಗಳನ್ನು ಸಲಹುತ್ತಾಳೆ. ಕಾಲ ಕ್ರಮೇಣ ಪುಲ್ಲು ಪೆರ್ಗಡ್ತಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಆಚು ಬೈದ್ಯೆತಿಯು ಪ್ರಾಪ್ತ ವಯಸ್ಸಿಗೆ ಬಂದಾಗ ಉಳೆಪಾಡಿ ಕೊಲ್ಲೂರು ಬರ್ಕೆಯ ಕುಂದರ ಬನ್ನಾಯ ಬಳಿಯ ಕುಂದಯ ಬಾರೆಯೊಂದಿಗೆ ಮದುವೆ ಮಾಡಿಸುತ್ತಾರೆ. ಈ ದಂಪತಿಗಳಿಗೆ ಹುಟ್ಟಿದ ಅವಳಿ ಮಕ್ಕಳೇ ಮುಲ್ಕಿಯ ಇತಿಹಾಸ ಪ್ರಸಿದ್ಧ ನಾಯ್ಗರಾದ ಕಾಂತಬಾರೆ - ಬೂದಬಾರೆಯರು. ಕುಂದಯ ಬಾರೆಯ ವಂಶಸ್ಥರ ಮನೆಯೇ ಈ ೪೦೦ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಗುಡ್ಡೆಸಾನ ಬರ್ಕೆ.

ಮುಲ್ಕಿಯ ಸಾವಂತರಸರು ಉಳಿಪಾಡಿ ಗುಡ್ಡೆಸಾನದ ಮನೆಯ ಮರ್ದನಾಯ್ಗರಿಗೆ ಸೈನ್ಯಾಧಿಪತ್ಯವನ್ನು ಕೊಡುವುದರೊಂದಿಗೆ ನಾಯ್ಗ ಗಡಿ ಪಟ್ಟವನ್ನು ನೀಡಿದ್ದರು. ಮರ್ದನಾಯ್ಗರಿಗೆ ಬಾರೆಯವರು ನೂರೊಂದು ಮುಡಿ ಗದ್ದೆಯಿದ್ದ ಉಳಿಪಾಡಿ ಬೇಸಾಯದ ಭೂಮಿಯ ಒಡೆತನ ಕೊಡಿಸಿದ್ದರು. ಕಾಲಾಂತರದಲ್ಲಿ ಬಹುಪಾಲು ಜಮೀನು ಪರಾಧೀನವಾಗಿ ಅದರ ಕೆಲವಂಶ ಮಾತ್ರ ಈಗ ಉಳಿದು ಕೊಂಡಿದೆ.

ಸುಮಾರು ೧೭ ನೇ ಶತಮಾನದ ಮುಲ್ಕಿ ಸೀಮೆಯ ಏಳಿಂಜೆ ಗ್ರಾಮದ ಕೊಲ್ಲೂರಿನ ಉಳೆಪಾಡಿ ಗುಡ್ಡೆಸಾನದ ಮನೆ ಕಾಂತಬಾರೆ ಬೂದಬಾರೆಯರಿಗೆ ಸೇರಿದ್ದು‌. ಇಂದು ಈ ಬರ್ಕೆಯಲ್ಲಿ ಪ್ರಾಚೀನ ಕ್ರಮದಲ್ಲೇ ಪಟ್ಟಾಭಿಕ್ತರಾದ ಅನಂತ‌ನಾಯ್ಗರಿದ್ದಾರೆ. ಕೋಟಿ ಚೆನ್ನಯರಂತೆ ತುಳುನಾಡಿನ ವೀರ ಪರಂಪರೆಯ ಮುಲ್ಕಿ ಸೀಮೆಯ ೯ ಮಾಗಣಿಗಳಲ್ಲಿ ಗರಡಿ ಪೂಜೆಗೊಳಗಾದ ಕಾಂತಬಾರೆ- ಬೂದಬಾರೆ ತಂದೆ ಕುಂದರ್ ಬಳಿಯ ಕುಂದಯ ಬಾರೆ ಈ ಮನೆತನಕ್ಕೆ ಸೇರಿದವರು. ಗುಡ್ಡೆಸಾನದ ಮನೆಗೆ ೧೦೦ ಮುಡಿ ಹುಟ್ಡುವಳಿಯ ಬೇಸಾಯದ ಗದ್ದೆ ಇರುವ ಬಗೆಗೆ ಬಾರೆಯರ ಪಾಡ್ದನಗಳು ಹೇಳುತ್ತವೆ. ಈ ಭೂಮಿ ಈ ಮನೆತನಕ್ಕೆ ಅವರ ಸೇನಾ ನಾಯಕತ್ವಕ್ಕೆ ಸಂದ ಅಮರಮಾಗಣೆಯ ಭೂಮಿ ಎಂದು ಹೇಳುತ್ತವೆ ಪಾಡ್ದನ.

"ಆತ್ ಪೊರ್ತುಗು ಸೀಮೆದ ಅರಸುಲು ಕೊಲ್ಲೂರು ಗುಡ್ಡೆ ಸಾನದಿಲ್ಲಗ್ ಒಂಜಿ ಗಡಿ ಪಟ್ಟ ಕೊರ್ಪೆನ್ಪೆರ್.

ಗುಡ್ಡೆ ಸಾನದಿಲ್ಲ ಮರ್ದ ಬಿರುವಗ್ ಪಟ್ಟ ಆವಡ್, ಎಂಕುಲು ಸೀಮೆನ್ ಕಾತೊನುನ ಬೇಲೆ ಮಲ್ಪುವ ಅರಸುಲೆ. ಬಪ್ಪನಾಡ್ದ ಉಲ್ಲಾಳ್ದಿದ ಉಚ್ಚಯದ ಏಲ್ಕೆ ಎಕ್ಂಡ್‌ ಉಚ್ಚಯದಾನಿ ಸಾಮಂತರಸುಲು ಒಂರ್ಬ ಮಾಗಣೆ ಊರು ಪರ ಊರುದ ಸಾರ ಜನಮಾನಿ ಕಾಂತಬಾರೆ ಬೂದಬಾರೆ ಕೂಡ್ದಿ ಅಂಗಣೊಡು ಕೊಲ್ಲೂರು ಗುಡ್ಡೆ ಸಾನದ ಮರ್ದ ಬಿರುವಗ್ ನಾಯ್ಗ ಇನ್ಪಿ ಬಿರ್ದಾಲಿ ಕೊರ್ದು ಪಟ್ಟ ಕಟ್ಟಾಯೆರ್. ಒಪ್ಪ‌ಪುಟ್ಟಿ ತುಲಾಯ ನಾಯ್ಗ ಮರ್ದ ನಾಯ್ಗಗ್ ಇನೆ ಆದ್ ಉಂತುವೆ. ಸೀಮೆದ ಒಂರ್ಬ ಮಾಗಣೆ ಸೇರುನ ಕೊಡಿಯಡಿ ಗುಡ್ಡೆ ಸಾನದಿಲ್ಲ್ಂದ್ ನಡತ್‌ ಬರ್ಪುಂಡು. ಪಟ್ಟ ಆಯಿಂಚಿ ಮರ್ದ ನಾಯ್ಗೆರೆಗ್ ಕಾಂತಬಾರೆ ಬೂದಬಾರೆರ್ ಮಿತ್ತ ಗುಡ್ಡೆದ ನೂತ್ತೊಂಜಿ ಮುಡಿ ವರ್ಗ ಜಾಗ್ ದ ಕಂಡ ಮಲ್ಪಾದ್ ಕೊರ್ಪೆರ್. "

ಬಾರೆಯರ ಕಾಲದಿಂದಲೂ ಮುಲ್ಕಿ ಸೀಮೆಯ ಸೇನಾಧಿಪತಿಗಳಾಗಿ ಸಾಮಾಜಿಕ ರಾಜಕೀಯ ಕಾರ್ಯಕರ್ತರಾಗಿ ಗುಡ್ಡೆಸಾನದ ಮನೆಯವರಿಗೆ ನಾಯ್ಗ ಪಟ್ಟಾಭಿಷೇಕ ನಡೆಯುತ್ತಾ ಬಂದಿದೆ‌. ಈ ಪಟ್ಟಾಭಿಷೇಕ ವನ್ನು ೯ ಮಾಗಣೆಯ ಸಮಕ್ಷಮದಲ್ಲಿ ಅರಸರು ಮಾಡುವುದು ಸಂಪ್ರದಾಯ. ಯುದ್ದಕ್ಕೆ ಸನ್ನದ್ದರಾಗಿ ಹೊರಡುವ ಮುಂಚೆ ಮುಲ್ಕಿ ಸೀಮೆಯ ಸೈನ್ಯ ಈ ಗುಡ್ಡೆಸಾನದ ಬರ್ಕೆಯ ಬಾಕಿಮಾರಿನಲ್ಲಿ ಸೇರ್ಪಡೆಗೊಂಡು ನಾಯ್ಗರ ನಾಯಕತ್ವದಲ್ಲಿ ಅರಸರ ಅಪ್ಪಣೆಯ ಮೇರೆಗೆ ಯುದ್ಧ ಭೂಮಿಗೆ ಹೋಗುವುದು ಪದ್ಧತಿ ಯಾಗಿತ್ತು. ಕೊಲ್ಲೂರು ಗುಡ್ಡೆ ಸಾನ ಮನೆ ಒಂದು ಕಾಲದಲ್ಲಿ ನೂರು ಮಂದಿ ಒಂದೇ ಮಾಡಿನಡಿ ವಾಸವಾಗಿದ್ದ ವಿಶಾಲ ಮನೆಯಾಗಿತ್ತು.

ಈ ಮನೆಯ ಚಾವಡಿಯಲ್ಲಿ ಬಾರೆಯರ ಉಯ್ಯಾಲೆಗಳಿವೆ. ಅರಸು ಕಂಬಳದಂದು ಗುಡ್ಡೆಸಾನದ ಕೋಣಗಳು ಹೋಗಿ ಕಂಬಳಗದ್ದೆಗೆ ಮೊದಲು ಇಳಿಯುವುದು ಸಂಪ್ರದಾಯ ವಾಗಿತ್ತು. ಈ ಕ್ರಮ ಮೊದಲಿನ ಕಾಲದಲ್ಲಿ ನಡೆಯುತ್ತಿತ್ತು ಎಂದು ತಿರ್ತಗುಡ್ಡೆ ಮನೆಯಲ್ಲಿ ಹುಟ್ಟಿ ಬೆಳೆದಿದ್ದ ಶ್ರೀಮತಿ ನಾಗಮ್ಮ ಅವರು ತಿಳಿಸಿದರು. ಆದರೆ ಈಗಿನ ರೂಢಿಯಂತೆ ಮೂಲ್ಕಿ ಸೀಮೆಯ ಕಾಂತು ಸೇವೆಕಾರರೆಂಬ ಬಿಲ್ಲವ ಮನೆತನದ ಕೋಣಗಳು ಅರಸು ಕಂಬಳಕ್ಕೆ ಮೊದಲು ಇಳಿಯುವ ಕ್ರಮ ವಿದೆ. ಬಹುಶಃ ಈ ಮನೆತನದ ಹಿರಿಯರು ಕೊಲ್ಲೂರು ಮೂಲದವರಾಗಿರುವ ಸಾಧ್ಯತೆ ಇದೆ.

ಪ್ರಾಚೀನ ತುಳುನಾಡ ರಾಜನಾಗಿದ್ದ ಅಳುಪರಲ್ಲಿ ನಾಯ್ಗ ಎಂಬ ಅಧಿಕಾರಾಯುಕ್ತ ಪಟ್ಟ ನಾಮವಾಗಿತ್ತು. ನಾಯ್ಗರೆಂಬ ಅನೇಕ ಆಧಿಕಾರಗಳ ಉಲ್ಲೇಖ ಅಳುಪ ಶಿಲಾಶಾಸನ ಲೇಖನಗಳಲ್ಲಿ ಉಕ್ತವಾಗಿದೆ. ಅನೇಕ ಪಾಡ್ದನಗಳು ನಾಯ್ಗರೆಂದರೆ ಬಿಲ್ಲವರೆಂದು ಹೇಳುತ್ತದೆ. ನಾಯ್ಗ ಎನ್ನುವುದು ಬಿಲ್ಲವರಲ್ಲಿ ಪಟ್ಟದ ಆಡಳಿತರೂಡ ನಾಮವಾಗಿ ಇಂದೂ ಅನೇಕ ಕಡೆಗಳಲ್ಲಿ ಪ್ರಚಲಿತದಲ್ಲಿವೆ. ನಾಯ್ಗ ಹೆಸರಿನ ಬಿಲ್ಲವ ಮನೆತನಗಳೂ ಸಾಕಷ್ಟಿವೆ. ನಾಯ್ಗ ನಾಮಧಾರಿಗಳೂ ಅನೇಕರಿದ್ದಾರೆ. ಕುದ್ರೊಟ್ಟು ಬೈದೇರುಗಳ ಗರಡಿಯ ಅರ್ಚಕ ಮತ್ತು ಗರಡಿ ಮನೆ ಯವರು ಸದಾನಂದ ನಾಯ್ಗರು . ಮೂಲ್ಕಿಯ ಗುಡ್ಡೆಸಾನದ ಮನೆಯ ಕಾಂತಬಾರೆ ಬೂದಬಾರೆಯರ ವಂಶಸ್ಥರಾದ ಅನಂತ ನಾಯ್ಗರು ಸಂಪ್ರದಾಯ ಬದ್ಧರಾದ ಈಗಿನ ಪಟ್ಟಭಿಷಿಕ್ತ ನಾಯ್ಗರು.

ಜಾನಪದ ವಿದ್ವಾಂಸರು ಪಾಡ್ದನಗಳಲ್ಲಿನ ನಾಯ್ಗರು ಬಿಲ್ಲವರೆಂದು ಒಪ್ಪಿದ್ದಾರೆ. ಪೀಟರ್ ಜೆ. ಕ್ಲಾಸ್ ನಾಯ್ಗರನ್ನು ದು ದಾಖಲಿಸಿದ್ದಾರೆ. ಕಾಂತಬಾರೆ ಬೂದಬಾರೆಯವರನ್ನು ಮೂಲ್ಕಿ ಸಾಮಂತರು ನಾಯ್ಗರೆಂದು ಕರೆಯುತ್ತಿದ್ದರೆಂದು ಶೀನಪ್ಪ ಹೆಗ್ಗಡೆ, ಎಸ್.ಎನ್ ಕಿಲ್ಲೆ ಮುಂತಾದವರು ದಾಖಲಿಸಿದ್ದಾರೆ. ತುಳುನಾಡನ್ನು ಆಳಿದ ಪ್ರಾಚೀನ ಅಳುಪ ದೊರೆಗಳು ತಮ್ಮನ್ನು ನಾಯ್ಗೆರೆಂದು ಕರೆದುಕೊಂಡಿದ್ದಾರೆ. ಅಳುಪ ಶಾಸನದ ಒಂದರಲ್ಲಿ ಕಿರಿಯ ನಾಗದತ್ತನಿಗೆ ಪಾಂಡ್ಯ ನಾಯಗ ನೆಂದು ಪಟ್ಟದ ಹೆಸರು ಕೊಟ್ಟು ಮಂಗಳಪುರದ ಪಟ್ಟಾಭಿಷೇಕ ವನ್ನು ಮಾಡಿದರೆಂದಿದೆ. ನಾಯ್ಗರು ಪ್ರಾಚೀನ ತುಳುನಾಡಿನ ವಿವಿಧ ರಂಗಗಳಲ್ಲಿ ಅಗ್ರಗಣ್ಯರಾಗಿದ್ದರೆಂದು ಶಾಸನಗಳಲ್ಲಿ ಉಲ್ಲೇಖವಿದೆ.

ನಾಯಕ/ನಾಯ್ಗ ಎನ್ನುವುದು ಬಿಲ್ಲವರ ಪುರಾತನ ಕುಲನಾಮಗಳಳೊಂದು. ಬಿಲ್ಲವ ಸ್ತ್ರೀಯರನ್ನು ನಾಯಕೆದಿ/ನಾಯ್ಗೆದಿ ಎಂದು ಹೇಳುತ್ತಾರೆ. ನಾಯ್ಗರು ಬಿಲ್ಲವರ ಪ್ರಾಚೀನ ಇತಿಹಾಸದ ದಾಖಲೆಯ ಕೊಂಡಿಯಾಗಿದ್ದಾರೆ.

ಗುಡ್ಡೆಸಾನದಲ್ಲಿ ಬಾರೆಯರು ಬಳಸುತ್ತಿದ್ದ ಬಟ್ಟೆ ಬರೆ, ಆಭರಣ,ಆಯುಧಗಳನ್ನು ಕಾಯ್ದಿರಿಸಲಾಗಿದೆ. ಮುಲ್ಕಿಯ ಅರಸರನ್ನು ಬಾರೆಯರು ಮಾಮ ಎಂದು ಕರೆಯುತ್ತಿದ್ದರು. ಚೌಟರಸರಿಗೂ ಸಾಮಂತರಿಗೂ ಆದ ನಿರ್ಣಾಯಕ ಯುದ್ದದಲ್ಲಿ ಸಾಹಸದಿಂದ ಹೋರಾಡಿ ಸಾಮಂತರಿಗೆ ವಿಜಯವನ್ನು ದೊರಕಿಸಿ ಕೊಟ್ಡವರು ಬಾರೆಯವರು.

ಬಾರೆಯವರ ಜೀವಿತಕ್ಕೆ ಸಂಬಂಧಿಸಿದ ವಸ್ತುಗಳು ತಿರ್ತಗುಡ್ಡೆ ಮತ್ತು ಮಿತ್ತ ಗುಡ್ಡೆಸಾನದ ಮನೆಗಳಲ್ಲಿ ಇವೆ. ಈ ಎರಡು ಮನೆಗಳು ಎರಡು ಕಿ.ಮೀ ಅಂತರದಲ್ಲಿ ಇವೆ.

ಮಿತ್ತ ಗುಡ್ಡೆಯ ಸಾನದ‌ ಮನೆಗೆ ಮೂಲ ಪುರುಷ ಮರ್ದನಾಯ್ಗರು. ಮರ್ದ ನಾಯ್ಗರಿಗೆ ಊರಿನ ರಕ್ಷಣೆಯ ಒಡೆತನವನ್ನು ಸಾಮಂತರು ನೀಡುತ್ತಾರೆ. ಪಟ್ಟದ ನಾಯ್ಗರ ಕಾಲವಾದರೆ ಮನೆತನದ ಹಿರಿಯನಿಗೆ ಬಪ್ಪನಾಡು ದೇವಿಯ ಸನ್ನಿಧಿಯಲ್ಲಿ ಅರಸರಿಂದ ನಾಯ್ಗ ಪಟ್ಟಾಭಿಷೇಕ ಇಂದೂ ಆಗುತ್ತದೆ. ತಿಮ್ಮ ನಾಯ್ಗ ಮತ್ತು ಅಂತ ನಾಯ್ಗ ಇವು ತಲತಲಾಂತರದಿಂದ ಬಂದ ಪಟ್ಟದ ಪರ್ಯಾಯ ಹೆಸರುಗಳು. ಸಾವಂತರಂತೆ ಇವರೂ ಕುಂದರ್ ಬಳಿಯವರು. ಮುಲ್ಕಿ ಸೀಮೆಯಲ್ಲಿ ಪಟ್ಟವಾಗುವ ೩ ನಾಯ್ಗ ಮನೆತನಗಳಿವೆ.

ಬಂಕಿ ನಾಯ್ಗರ ಮನೆತನ ಸುರತ್ಕಲ್ಲಿನಲ್ಲಿದೆ‌. ಮಾಗಂದಡಿ ಗೋಪಾಲ ನಾಯ್ಗರ ಮನೆತನ ಕಾರ್ನಾಡಿನಲ್ಲಿದೆ. ಈ ಮೂರು ಮನೆತನಗಳು ಮೂಲ್ಕಿ ೯ ಮಾಗಣೆಗೆ ಸಂಬಂಧಪಟ್ಟವುಗಳು. ಪಟ್ಟವಾದ ನಾಯ್ಗರನ್ನು ಹಿಂದಿನ ಕಾಲದಲ್ಲಿ ಎಲ್ಲಾ ಜಾತಿಯವರು ನೇಮ, ಕೋಲ, ಉತ್ಸವ ಮುಂತಾದ ಶುಭ ಕಾರ್ಯಗಳಿಗೆ ಕರೆಯುವ ಸಂಪ್ರದಾಯ ಇದ್ದಿತೆಂದು ಗುಡ್ಡೆಸಾನದ ನಾಯ್ಗ ಮನೆತನದವರು ಹೇಳುತ್ತಾರೆ. ಹಾಗೇ ಕೆರೆಯುವಾಗ ಕೊಂಬು, ಕಹಳೆ ಮುಂತಾದ ವಾದ್ಯಗಳೊಂದಿಗೆ ಸಂಭ್ರಮದಿಂದ ಎದುರುಗೊಂಡು ಪಾದ ಕಾಣಿಕೆಗಳನ್ನು ಅರ್ಪಿಸುವುದು ಹಿಂದಿನ ಪದ್ಧತಿ.

ನಾಕೆ ಎಂದರೆ ಬಿಲ್ಲವ ಜನಾಂಗದವರನ್ನು ಕೊರಗ ಸಮಾಜದವರು ಸಾಂಪ್ರದಾಯಿಕವಾಗಿ ನಿರ್ದೇಶಿಸುವ ಪದ. (Members of Billava community as traditionally referred by the members of the Koraga community ‌ )

ನಾಕೆದಿ/ ನಾಕೆತಿ ಎಂದರೆ ಬಿಲ್ಲವ ಹೆಂಗಸರನ್ನು ಕೊರಗ‌ ಜನಾಂಗದವರು ಸಾಂಪ್ರದಾಯಿಕವಾಗಿ ನಿರ್ದೇಶಿಸುವ ಪದ ಎನ್ನುತ್ತವೆ ತುಳು ಶಬ್ಧಕೋಶ. ಮಾಯಂದಾಲೆ ಪಾಡ್ದನದ ಆಲಿಬಾಲಿ ನಾಯ್ಗರು ಮೊದಲಾಗಿ ಅನೇಕ ನಾಯ್ಗರನ್ನು ಪಾಡ್ದನಗಳು ಪ್ರಸ್ತಾಪಿಸಿವೆ. ಮೂಲ್ಕಿ ಸೀಮೆಯ ನಾಯ್ಗರ ಮನೆತನಗಳು ಪ್ರಾಚೀನ ನಾಯ್ಗರ ಪಟ್ಟದ ಪರಂಪರೆಯನ್ನು ಇಂದೂ ಕೂಡ ಜೀವಂತವಾಗಿ ಉಳಿಸಿ ಕೊಂಡುಬಂದಿವೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) -ಸಂಕೇತ್ ಪೂಜಾರಿ. PC - Anagha studio Kaikamba, BC road

0 comments: