Friday, January 19, 2018

ಬಿಲ್ಲವರ ಗುತ್ತು ಮನೆತನಗಳು ( ಅಂಬ್ಡೇಲು ಗುತ್ತು)

ಬಂಟ್ವಾಳ ತಾಲೂಕಿನ ಬಡಗ ಕಜೆಕಾರಿನಲ್ಲಿರುವ ಬಂಗೇರ ಬಳಿಯವರ ಅಂಬ್ಡೇಲು ಗುತ್ತು ಸುಮಾರು ೪೦೦ ವರ್ಷಗಳಷ್ಟು ಪುರಾತನ ಇತಿಹಾಸ ಇರುವಂತಹ ಬಹು ಸುಂದರವಾದ ಸುತ್ತು ಮುದಲಿನ ಪ್ರಸಿದ್ಧ ಮನೆತನ. ನೆಲ ಮಟ್ಟದಿಂದ ಸುಮಾರು ೧೦ ಅಡಿ ಎತ್ತರದಲ್ಲಿ ಎದುರಿನ ಪಡಿಪ್ಪಿರೆ ಇದ್ದು ಸುಮಾರು ೧೦ ಮೆಟ್ಟಿಲುಗಳನ್ನು ಹತ್ತಿ ಗುತ್ತಿನ ಹೆಬ್ಬಾಗಿಲು ಪ್ರವೇಶಿಸಬೇಕು‌‌. ಗುತ್ತಿಗೆ ಪ್ರವೇಶಿಸುವಾಗ ಬಹುದೊಡ್ಡದಾದ ಆನೆಬಾಗಿಲು ನಮ್ಮನ್ನು ಎದುರುಗೊಳ್ಳುತ್ತದೆ‌. ಮೊಗಸಾಲೆ ಸುಂದರತೆಯಿಂದ ಕೂಡಿದ್ದು ಗುತ್ತಿಗೆ ಇನ್ನಷ್ಟು ಮೆರುಗನ್ನು ತಂದಿದೆ.

ಇದರ ಮೇಲೆ ಉಪ್ಪರಿಗೆಯ ವ್ಯವಸ್ಥೆಯೂ ಇದೆ‌. ಹೆಬ್ಬಾಗಿಲು ಪ್ರವೇಶಿಸಿ ಒಳಹೊಕ್ಕಾಗ ಮಾಳಿಗೆಯುಳ್ಳ ವಿಶಾಲ ಚಾವಡಿ ಎದುರಾಗುತ್ತದೆ. ಚಾವಡಿಯಲ್ಲಿ ಆಕರ್ಷಕವಾದ ಭೋದಿಗೆ ಕಂಬಗಳಿದ್ದು ಚಾವಡಿಗೆ ಇನ್ನಷ್ಷು ಶೋಭೆಯನ್ನು ತಂದಿವೆ‌.

ಚಾವಡಿಯ ಎಡಭಾಗದಲ್ಲಿ ದೊಡ್ಡದಾದ ಮರದ‌ ಕಲೆಂಬಿ ಇದ್ದು ಇದರಲ್ಲಿ ದೈವಗಳ ಭಂಡಾರವಿದೆ‌. ಚಾವಡಿಯ ಮಧ್ಯಭಾಗದಲ್ಲಿ ಸುಂದರವಾದ ಒಂದು ಉಯ್ಯಾಲೆ ಇದ್ದು ನೇಮದ ಸಂದರ್ಭದಲ್ಲಿ ದೈವಗಳ ಮೊಗ ಮೂರ್ತಿಯನ್ನು ಇದರಲ್ಲಿ ಇಡುತ್ತಾರೆ. ಬಲಭಾಗದಲ್ಲಿ ಅಂಬ್ಡೇಲು ಗುತ್ತಿನ ಪ್ರಧಾನ ದೈವ‌ ಪಟ್ಟದ‌ ಪಂಜುರ್ಲಿಯ ಮಣೆಮಂಚ ಇರುವ ಕೋಣೆ ಇದೆ‌‌. ಈ ಪಂಜುರ್ಲಿಯನ್ನು ಅಂಬ್ಡೇಲು ಪಂಜುರ್ಲಿ ಎಂದೂ‌ ಕರೆಯುತ್ತಾರೆ. ಈ ದೈವ‌ದ ಸುಂದರವಾದ ಬೆಳ್ಳಿಯ ಮೊಗ ಮಂಚದ ಮಧ್ಯಭಾಗದಲ್ಲಿ ಇದೆ‌. ಇದಲ್ಲದೆ ಅಕ್ಕ ಪಕ್ಕದಲ್ಲಿ ಹರಕೆಯ ರೂಪದಲ್ಲಿ ಬಂದಂತಹ ಕೆಲವು ಮೊಗಮೂರ್ತಿಗಳೂ ಇದ್ದು ಚಿತ್ತಾಕರ್ಷಕವಾಗಿದೆ‌. ಬೆಳ್ಳಿಯ ಸುಂದರವಾದ ಗುರಾಣಿಯೂ ಇದರಲ್ಲಿ ಇದೆ‌. ಪಟ್ಟದ‌ ಪಂಜುರ್ಲಿಯು ಇಲ್ಲಿ ರಾಜನ್ ದೈವವಾಗಿ ಆರಾಧನೆ ಪಡೆಯುತ್ತಿದೆ‌.

ಅಂಬ್ಡೇಲು ಪಂಜುರ್ಲಿ ದೈವವು ಅಂಬ್ಡೇಲು ಗುತ್ತಿನ ಮೂಲ ಪುರುಷರಾದ ದಂಡು ದೇವು ಬೈದ್ಯರ ಕಾಲದಲ್ಲಿ ಗುತ್ತಿಗೆ ಬಂದು ನೆಲೆಯಾಯಿತು ಎಂದು ಈ ದೈವದ ಪಾಡ್ದನದಿಂದ ತಿಳಿದು ಬರುತ್ತದೆ. ಪಾಡ್ದನದ ಪ್ರಕಾರ ಸುಳ್ಳ ಮಲೆಯ ಅರಸರು ಮತ್ತು ಬಳ್ಳ ಮಲೆಯ ಅರಸರು ತಮ್ಮ ತಂದೆ ತಾಯಿಗಳ ಉತ್ತಾರಾಧಿ ಕ್ರಿಯೆಗಳ ಸಮಾಪ್ತಿಗೆ ತೆನಕಾನ ಕಾಶಿ ಬಡಕಾಯಿ ಗಂಗೆಗೆ ಹೋದಂತಹ ಸಂದರ್ಭದಲ್ಲಿ ಗಂಗೆಯಲ್ಲಿ ನರಂಗಾಯಿ ಎಂಬ ಹುಳಿ ಕಾಯಿಯ ರೂಪದಲ್ಲಿ ದೈವ ಇವರಿಗೆ ಸಿಗುತ್ತದೆ. ಆ ದೈವವನ್ನು ನಂತರ ಸುಳ್ಳಮಲೆ ಮಠದಲ್ಲಿ ತಂದು ಆರಾಧಿಸುತ್ತಾರೆ. ಕಾಲಕ್ರಮೇಣ ದೈವ ಪ್ರಸರಣಗೊಂಡು ಕೊಡಾಲ ಗುತ್ತು, ಕಡೇಶಿವಾಲಯ ದೇವಸ್ಥಾನ, ತಿಂಗಳಾಡಿ ಗುತ್ತು, ಬೇನೇಪು ಬೀಡು, ಊರ್ಲದ ಬರ್ಕೆ ಮುಂತಾದ ಪ್ರದೇಶಗಳಲ್ಲಿ ನೆಲೆಯಾಗಿ ಕೊನೆಗೆ ದೈವಕ್ಕೆ ಅಬ್ಡೇಲು ಗುತ್ತು ಕಾಣಸಿಗುತ್ತವೆ. ಆ ಸಂದರ್ಭದಲ್ಲಿ ಗುತ್ತಿನ ಯಜಮಾನರಾಗಿದ್ದ ದಂಡು ದೇವು ಬೈದ್ಯರಿಗೆ ಕನಸಿನಲ್ಲಿ ದೈವ ಗೋಚರವಾಗಿ ಅಂಬ್ಡೇಲು ಗುತ್ತಿನ ಚಾವಡಿಯಲ್ಲಿ ನೆಲೆಯಾಗುತ್ತದೆ.

ದಂಡು ದೇವು ಬೈದ್ಯರು ಪೂರ್ವದಲ್ಲಿ ತಮ್ಮ ಸೋದರಮಾವನೊಂದಿಗೆ ತಿಂಗಳಾಡಿ ಗುತ್ತಿನಲ್ಲಿ ಇದ್ದರು‌‌. ಸೋದರಮಾವನು ತನ್ನ ಮಗಳಾದ "ಅಸು"ಎಂಬಾಕೆಯನ್ನು ದಂಡು ದೇವು ಬೈದ್ಯರಿಗೆ ಕೊಟ್ಟುಮದುವೆಮಾಡಿ ಇಬ್ಬರನ್ನೂ ಮಗಳ ಮೂಲ ಮನೆಯಾದ ಸಾವ್ಯ ಬರ್ಕೆಗೆ ಕಳುಹಿಸುತ್ತಾರೆ. ಹೀಗೆ ಕಳುಹಿಸುವಾಗ ಅವರಿಗೆ ಬೇಕಾದಷ್ಟು ಧನಕನಕಗಳನ್ನು ಹಸು ಕರುಗಳನ್ನೂ ಕೊಟ್ಟು ನೀವು ಇನ್ನು ಸಾವ್ಯ ಬರ್ಕೆಯಲ್ಲಿ ನೆಲೆಸಿ ಎಂದು ಹೇಳುತ್ತಾರೆ. ಅದರಂತೆ ದೇವು ಬೈದ್ಯರು ಹೆಂಡತಿಯನ್ನು ಕೂಡಿಕೊಂಡು ಸಾವ್ಯ ಬರ್ಕೆಗೆ ಹೋಗುವಾಗ ಈಗಿನ ಅಂಬ್ಡೇಲು ಗುತ್ತಿನ ಪಕ್ಕದಲ್ಲಿ ಬರುವಾಗ ಅಲ್ಲಿಗೆ ಬಂದಂತಹ ಪಂಜುರ್ಲಿ ದೈವವು ದೇವು ಬೈದ್ಯರ ಕನಸಿನಲ್ಲಿ ಬಂದು ನೀವು ಸಾವ್ಯ ಬರ್ಕೆಗೆ ಹೋಗುವುದು ಬೇಡ‌ ನನ್ನನ್ನು ನಂಬಿಕೊಂಡು ಇಲ್ಲೇ ನೆಲೆಸಿ ಎಂದು ಹೇಳುತ್ತದೆ. ಆಗ ಸೂಕ್ತ ಸ್ಥಳ ಯಾವುದು ಎಂದು ಹುಡುಕುವಾಗ ಇವರೊಂದಿಗೆ ಇದ್ದ ಒಂದು ಕಪಿಲೆ‌ (ಕಬುಲ್ತಿ) ದನವು ಒಂದು ಪೊದೆಯ ಒಳಗೆ ಹೋಗಿ "ಅಂಬೇ‌"ಎಂದು ಕೂಗುತ್ತದೆ.

ಅದಕ್ಕೆ ಆ ಪ್ರದೇಶ ಅಂಬ್ಡೇಲು ಎಂದು ಹೆಸರಾಗುತ್ತದಂತೆ. ಅಲ್ಲೇ ನಂತರ ಅಂಬ್ಡೇಲು ಗುತ್ತಿನ ನಿರ್ಮಾಣವಾಗಿ ಅದರಲ್ಲಿ ದಂಡು ದೇವು ಬೈದ್ಯರು ಮತ್ತು ಮಡದಿ ಅಸು ದೈವವನ್ನು ನಂಬಿಕೊಂಡು ಬರುತ್ತಾರೆ. ಕೆಲವು ಸಮಯದ ನಂತರ ಒಮ್ಮೆ ತಿಂಗಳಾಡಿಯಿಂದ ಜೈನ ಧರ್ಮಕ್ಕೆ ಸೇರಿದ ಚಿಕ್ಕ ಪ್ರಾಯದ ಇಬ್ಬರು ಅಕ್ಕ‌ತಂಗಿಯರು ತಿರ್ತ (ಕೆಳಗಿನ) ಅಂಬ್ಡೇಲಿನಲ್ಲಿದ್ದ ತಮ್ಮ‌ ಕುಟುಂಬಿಕರ‌ ಮನೆಗೆ ಬರುತ್ತಾರೆ. ಹೀಗೆ ಬರುವಾಗ ಅವರು ಅಂಬ್ಡೇಲು ಗುತ್ತಿನ ಪಕ್ಕದಿಂದ ಹೋಗುವಾಗ ದಂಡು ದೇವು ಬೈದ್ಯರು ‌ಇವರನ್ನು ಕಂಡು ಈ ಸಂಜೆಯ ಇಳಿ ಹೊತ್ತಿನಲ್ಲಿ ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳುತ್ತಾರೆ. ಅದಕ್ಕೆ ಆ ಮಕ್ಕಳು ತಾವು ಕೆಳಗಿನ ಅಂಬ್ಡೇಲಿಗೆ ಹೋಗುತ್ತಿದ್ದೇವೆ ಎಂದು ಹೇಳಿ ಅಲ್ಲಿಗೆ ಹೋಗಲು ಇನ್ನು ಎಷ್ಟು ದೂರವಿದೆ ಎಂದು ಕೇಳುತ್ತಾರೆ.

ಆಗ ದೇವು ಬೈದ್ಯರು‌ ನೀವು ಬಂದಷ್ಟೇ ದೂರ ಇದೆ. ನೀವು ಅಲ್ಲಿಗೆ ಹೋಗುವಾಗ ಕತ್ತಲಾಗುತ್ತದೆ ಆದ್ದರಿಂದ ನೀವು ಅಂಬ್ಡೇಲು ಗುತ್ತಿಗೆ ಹೋಗಿ ಅಲ್ಲಿ ತಂಗಿ ಮರುದಿನ ಬೆಳಗ್ಗೆ ಹೋದರಾಯ್ತು ಎಂದು ಹೇಳುತ್ತಾರೆ. ಅದರಂತೆ ಈ ಇಬ್ಬರೂ ಅಕ್ಕ ತಂಗಿಯರು ಅಂಬ್ಡೇಲು ಗುತ್ತಿನಲ್ಲಿ ಒಂದು ರಾತ್ರಿ ವಾಸ್ತವ್ಯ ಮಾಡುತ್ತಾರೆ. ಬೈದ್ಯರ ಮಡದಿ ಇವರಿಗೆ ರಾತ್ರಿ ಊಟದ ವ್ಯವಸ್ಥೆ ಮಾಡುತ್ತಾಳೆ. ಈ ಅಕ್ಕ ತಂಗಿಯರು ಊಟ ಮಾಡುವಾಗ ಅಕ್ಕ ಉಪ್ಪು ಹಾಕಿ ಊಟ ಮಾಡುತ್ತಾಳೆ ಆದರೆ ತಂಗಿ ಕೋಳಿಯ ಸಾರಿನೊಂದಿಗೆ ಊಟ ಮಾಡುತ್ತಾಳೆ. ಇಲ್ಲಿ ಇವರು ಸಣ್ಣ ಪ್ರಾಯದ ಮಕ್ಕಳಾದ್ದರಿಂದ ತಮ್ಮ ಜಾತಿಯ ಕಟ್ಟು ಪಾಡಿನ ತಿಳುವಳಿಕೆ ಇಲ್ಲದಿದ್ದರಿಂದ ತಂಗಿಯಾದವಳು ಕೋಳಿ ಸಾರಿನೊಂದಿಗೆ ಊಟ ಮಾಡಿರಬಹುದು.

ರಾತ್ರಿ ಊಟವಾದ ಮೇಲೆ ಮರುದಿನ ಬೆಳಿಗ್ಗೆ ಬೇಗನೆ ಎದ್ದು ತಿರ್ತ( ಕೆಳಗಿನ) ಅಂಬ್ಡೇಲಿಗೆ ಹೊರಡುತ್ತಾರೆ. ಅಲ್ಲಿ ಬೆಳಗಿನ ಜಾಗದಲ್ಲಿ ಬಂದ ಈ ಇಬ್ಬರನ್ನು ಕಂಡ ಮನೆಯವರು ನೀವು ತಿಂಗಾಡಿಯಿಂದ ಇಷ್ಟು ಬೇಗ ಹೇಗೆ ಬಂದಿರೆಂದು ಕೇಳುತ್ತಾರೆ. ಅದಕ್ಕೆ ಅವರು "ನಾವು ಈ ಊರಿಗೆ ನಿನ್ನೆ ಸಂಜೆಯ ವೇಳೆಯಲ್ಲಿ ತಲುಪಿದ್ದೆವು ತಂಬಾ ತಡವಾದ್ದರಿಂದ ಅಂಬ್ಡೇಲು ಗುತ್ತಿನಲ್ಲಿ ತಂಗಿದ್ದೆವು. ಅಲ್ಲಿಂದ ಈಗ ತಾನೇ ಇಲ್ಲಿಗೆ ಬಂದಿದ್ದೇವೆ" ಎಂದು ಹೇಳುತ್ತಾರೆ.

ಆಗ ಈ ಕೆಳಗಿನ ಅಂಬ್ಡೇಲಿನ ಜೈನರು " ನೀವು ಅಲ್ಲಿ ಏನು ಊಟ ಮಾಡಿದಿರಿ" ಎಂದು ಕೇಳುತ್ತಾರೆ. ಅದಕ್ಕೆ ಅಕ್ಕ ತಾನು ಉಪ್ಪು ಹಾಕಿ ಊಟ ಮಾಡಿದೆ ಎಂದೂ ತಂಗಿಯಾದವಳು ತಾನು ಕೋಳಿ ಸಾರಿನಲ್ಲಿ ಊಟ ಮಾಡಿದೆ‌ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕೆಳಗಿನ ಅಂಬ್ಡೇಲಿನವರು ಕೋಳಿ ಸಾರಿನಲ್ಲಿ ಊಟ ಮಾಡಿದವಳನ್ನು ಮನೆಗೆ ಸೇರಿಸಿ ಕೊಳ್ಳದೆ ಪುನಃ ಅಂಬ್ಢೇಲು ಗುತ್ತಿಗೆ ಕಳುಹಿಸುತ್ತಾರೆ. ಅಕ್ಕನನ್ನು ಮನೆಗೆ ಸೇರಿಸಿಕೊಳ್ಳುತ್ತಾರೆ. ತನ್ನ ಜಾತಿಗೆ ವಿರುದ್ಧವಾಗಿ ನಡೆದುಕೊಂಡ ಪರಿಣಾಮ ತಂಗಿಯು ಅಂಬ್ಡೇಲು ಗುತ್ತಿಗೆ ಹಿಂತಿರುಗಿ ಬರುತ್ತಾಳೆ. ಅಂಬ್ಡೇಲು ಗುತ್ತಿನ ದಂಡು ದೇವು ಬೈದ್ಯರು ಬಂದವಳನ್ನು ಮನೆಗೆ ಸೇರಿಸಿಕೊಳ್ಳುತ್ತಾರೆ. ಹೀಗೆ ಹಿಂತಿರುಗಿ ಬಂದವಳ ಹೆಸರೇ ಮಂಗಲ್ದಿ. ಈಕೆಯ ಅಕ್ಕನ ಹೆಸರು ಅಂದರೆ ಕೆಳಗಿನ ಅಂಬ್ಟೇಲಿನಲ್ಲಿದ್ದವಳ ಹೆಸರು ಏನೆಂಬುದು ತಿಳಿದು ಬಂದಿಲ್ಲ

ಮಂಗಲ್ದಿಯು ತನ್ನ ಕುಟುಂಬದಿಂದ ಹೊರಹಾಕಲ್ಪಟ್ಟವಳೆಂದು ತಿಳಿದ ದಂಡು ದೇವು ಬೈದ್ಯರು ಆಕೆಯನ್ನು ನಂತರದಲ್ಲಿ ಮದುವೆಯಾಗುತ್ತಾರೆ. ಇದರಿಂದಾಗಿ ದಂಡು ದೇವು ಬೈದ್ಯರಿಗೆ ಇಬ್ಬರು ಹೆಂಡತಿಯರಾಗುತ್ತಾರೆ. ಮೊದಲನೆಯವಳು ಅಸು ಎರಡನೆಯವಳು ಮಂಗಲ್ದಿ . ಅಸು ಬಿಲ್ಲವಳಾಗಿದ್ದರೆ ಮಂಗಲ್ದಿ ಮೂಲತಃ ಜೈನ ಧರ್ಮದವಳಾಗಿರುತ್ತಾಳೆ‌. ನಂತರದಲ್ಲಿ ಅಸು- ಮಂಗಲ್ದಿಯರಿಗೆ ಮಕ್ಕಳಾಗಿ ಸ್ವಲ್ಪ ದೊಡ್ಡವರಾದ ಮೇಲೆ 'ಅಸು' ಮಕ್ಕಳಿಗೆ ಊಟ ಬಡಿಸುವ ಸಂದರ್ಭದಲ್ಲಿ ತನ್ನ ಮಕ್ಕಳಿಗೆ ಬಿಸಿಯಾದ ಒಳ್ಳೆಯ ಅನ್ನವನ್ನು ಬಡಿಸಿ ಮಂಗಲ್ದಿಯ ಮಕ್ಕಳಿಗೆ ತಂಗಳನ್ನವನ್ನು ಬಡಿಸುತ್ತಾಳೆ‌.

ಇದರಿಂದ ಇಬ್ಬರಲ್ಲೂ ಮನಃಸ್ತಾಪ ಉಂಟಾಗುತ್ತದೆ‌. ತನ್ನ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ನೆನೆದು ಮಂಗಲ್ದಿ ಕಣ್ಣೀರಿಡುತ್ತಾಳೆ. ಆಗ ಗುತ್ತಿನ ದೈವ ಪಟ್ಟದ ಪಂಜುರ್ಲಿಯು ಕನಸಿನಲ್ಲಿ ಬಂದು "ನೀನು ಕಣ್ಣೀರು ಹಾಕಬೇಡ, ನೀನು ಅಂಬ್ಡೇಲು ಗುತ್ತಿನದ್ದೇ ಭೂಮಿಯಾದ ತಿರ್ತ ಪೈರುಗೆ ಹೋಗಿ ಅಲ್ಲಿ ನೀನು ನಿನ್ನ ಮಕ್ಕಳೊಂದಿ‌ಗೆ ವಾಸ‌ಮಾಡು" ಎಂದು ಹೇಳುತ್ತದೆ‌. ನಂತರ ಮಂಗಲ್ದಿಯು ನಡೆದ ಎಲ್ಲಾ ವಿಷಯವನ್ನು ತನ್ನ ಗಂಡನಾದ ದಂಡು ದೇವು ಬೈದ್ಯರಲ್ಲಿ ಹೇಳಿ ನಂತರ ತನ್ನ ಗಂಡನ ಹೇಳಿದಂತೆಯೇ ತಿರ್ತ ಪೈರುಗೆ ಹೋಗಿ ಅಲ್ಲಿ ವಾಸ ಮಾಡುತ್ತಾಳೆ‌.

(ಕೆಳಗಿನ) ತಿರ್ತ ಪೈರು ನಲ್ಲಿ ಮಂಗಲ್ದಿಯ ವಂಶ ಬೆಳೆದು ಕುಟುಂಬವಾಗುತ್ತದೆ. ಅಂಬ್ಡೇಲು ಗುತ್ತಿನಲ್ಲಿ ಪಂಜುರ್ಲಿ ದೈವದ ನೇಮವಾಗಿ ನಂತರ ಅಂಬ್ಡೇಲು ಗುತ್ತಿನಿಂದ ಭಂಡಾರ ಇಳಿದು ತಿರ್ತ ಪೈರು ಮಂಗಲ್ದಿಯ ಮನೆಗೆ ಭಂಡಾರ ಹೋಗಿ ನೇಮವಾಗುತ್ತಿತ್ತು. ಆದರೆ ಈಗ ತಿರ್ತ ಪೈರು ಭೂಮಸೂದೆ ಕಾಯ್ದೆಯ ಸಲುವಾಗಿ ಸಂಪೂರ್ಣವಾಗಿ ಪರಾಧೀನವಾಗಿದೆ. ಆದ್ದರಿಂದ ಭಂಡಾರ ಹೋಗಿ ನೇಮವಾಗುವುದು ನಿಂತುಹೋಗಿದೆ‌. ಈ ದೈವದ ಭಂಡಾರ ಹೋಗುವಾಗ ದರಿ ಹಾಕುವ ಸಂಪ್ರದಾಯ ಕೂಡ ಇತ್ತು. ಮಂಗಲ್ದಿಯ ವಂಶಸ್ಥರು ಈಗ ಅಂಬ್ಡೇಲು ಗುತ್ತಿಗೆ ಬಂದು ದೈವಗಳ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೇ ತಿರ್ತ ಅಂಬ್ಡೇಲು ಮೂಲತಃವಾಗಿ ಜೈನರಾಗಿದ್ದು ಕಾಲಕ್ರಮೇಣ ಜೈನ ಸಂತತಿ ನಾಶವಾಗಿ ತಿರ್ತ ಅಂಬ್ಡೇಲು ಕೂಡ ಅಂಬ್ಡೇಲು ಗುತ್ತಿನ ವಶಕ್ಕೆ ಬರುತ್ತದೆ. ನಂತರದಲ್ಲಿ ಅಂಬ್ಡೇಲು ಗುತ್ತಿನಲ್ಲಿ ಹೆಣ್ಣು ಸಂತಾನ ಕಡಿಮೆಯಾಗಾದ ಬಂಗೇರ ಬಳಿಯ ಹೆಣ್ಣನ್ನೇ ದತ್ತು ಪಡೆಯುತ್ತಾರೆ. ನಂತರ ಅವಳಿಗೆ ಹುಟ್ಟಿದ ಮಕ್ಕಳಿಗೆ ತಿರ್ತ ಅಂಬ್ಡೇಲನ್ನು ಕೊಡಲಾಗುತ್ತದೆ. ಅದ್ದರಿಂದ ತಿರ್ತ ಅಂಬ್ಡೇಲು ಬಿಲ್ಲವರ ಪಾಲಾಗುತ್ತದೆ.

ಇಲ್ಲಿಗೂ ಹಿಂದಿನ ಕಾಲದಲ್ಲಿ ಅಂಬ್ಡೇಲು ಗುತ್ತಿನಿಂದ ಪಂಜುರ್ಲಿಯ ಭಂಡಾರ ಹೋಗಿ ನೇಮವಾಗುತ್ತಿತ್ತು. ಆದರೆ ಕಾರಣಾಂತರಗಳಿಂದ ಈ ಪದ್ಧತಿ ನಿಂತುಹೋಗಿ ಕೆಳಗಿನ ಅಂಬ್ಡೇಲಿನಲ್ಲಿ ಪ್ರತ್ಯೇಕವಾಗಿ ಪಂಜುರ್ಲಿ ದೈವವನ್ನು ನಂಬಿ ಅರಾಧಿಸಿಕೊಂಡು ಬರುತ್ತಿದ್ದಾರೆ. ಈ ಎರಡು ಮನೆತನಗಳಿಗೆ ಮುಡಿಪು ಬೇರೆ ಬೇರೆ ಆಗಿದ್ದು ತಿರ್ತ ಅಂಬ್ಡೇಲಿನ ಮುಡಿಪು ತಿರುಪತಿಗೆ ಕೊಂಡೊಯ್ಯುವ ಕ್ರಮ ಇದೆ‌‌. ಆದರೆ ಅಂಬ್ಡೇಲು ಗುತ್ತಿನಲ್ಲಿ ಈ ಕ್ರಮ ಇಲ್ಲ‌.

ರಾಜ ಗಾಂಭೀರ್ಯದ ಶೋಭೆಯುಳ್ಳ ಅಂಬ್ಡೇಲು ಗುತ್ತಿಗೆ ಹಿಂದೆ ಬಹಳಷ್ಟು ಭೂಮಿ ಹಾಗೂ ಆಸ್ತಿ ಪಾಸ್ತಿಗಳಿದ್ದು ಸುಮಾರು ೪೦೦ ಎಕ್ರೆ ಭೂಮಿಯ ಒಡೆತನ ಈ ಗುತ್ತಿಗೆ ಇತ್ತು ಎಂದು‌‌ ಇದರ ಚರಿತ್ರೆ ಹೇಳುತ್ತದೆ. ಈಗ ಹಲವು ಜಮೀನು ಪಾಲು ಪಟ್ಟಿಯ ಹಾಗೂ ಒಕ್ಕಲು ಮಸೂದೆಯಿಂದ ಪರಾಧೀನವಾಗಿ ೨೩ ಎಕ್ರೆ‌ ಜಮೀನು ಸ್ವಾದೀನದಲ್ಲಿದೆ‌. ಅಂಬ್ಡೇಲು ಗುತ್ತಿಗೆ ಮೂಲ ಪುರುಷರಾದ ದಂಡು ದೇವು ಬೈದ್ಯರು ಬಹಳ ಸಾಹಸಿ ಮತ್ತು ಪರಾಕ್ರಮಿಯೇ ಆಗಿದ್ದರು ಎಂದು ಹೇಳಬಹುದು. ಆದ್ದರಿಂದಲೇ ಇವರನ್ನು ದಂಡು ದೇವು ಬೈದ್ಯರು ಎಂದು ಕರೆಯುತ್ತಾರೆ .

ಇವರು ಸೇನಾಧಿಪತಿಗಳಾಗಿ ಮೆರೆದಿರಬಹುದು. ತುಳುವಿನಲ್ಲಿ ದಂಡು ಎಂದರೆ ಯುದ್ಧ ಎಂದು ಅರ್ಥವಿದೆ‌‌. ಗುತ್ತಿನ ಚಾವಡಿಯಲ್ಲಿ ದಂಡು ದೇವು ಬೈದ್ಯರ ಬಲು ಸುಂದರವಾದ ಅಕರ್ಷಣೀಯವಾದ ಅಪರೂಪದ ಲೋಹದ ಮೂರ್ತಿ ಇದೆ‌. ಒಂದು ಕೈಯಲ್ಲಿ ಖಡ್ಗ ಹಿಡಿದು ಇನ್ನೊಂದ ಕೈಯಲ್ಲಿ ಬಾಣ ಹಿಡಿದು ನಿಂತ ಭಂಗಿಯಲ್ಲಿ ಈ ಮೂರ್ತಿ ಇದೆ‌. ಇದರ ಪಕ್ಕದಲ್ಲೇ ಇವರ ನಂತರ ಗುತ್ತಿನಲ್ಲಿ ಗಡಿ ಪಟ್ಟವಾಗಿ ಮೆರೆದವರ ಸುಂದರ ಮೂರ್ತಿಗಳಿವೆ‌. ನೂರು ವರ್ಷಗಳ ಹಿಂದೆ ವೆಂಕಪ್ಪ ಪೂಜಾರಿ ಎಂಬುವವರಿಗೆ ಗಡಿ ಪಟ್ಟವಾಗಿತ್ತು. ಅವರ ನಂತರ ಗಡಿ ಪಟ್ಟವಾಗಿಲ್ಲ‌. ಇನ್ನು ಗಡಿ ಪಟ್ಟವಾಗಬೇಕಿದ್ದರೆ ವೆಂಕಪ್ಪ ಪೂಜಾರಿಯವರ ಮೂರ್ತಿ ಮಾಡಿಸಿದ ನಂತರ ಗಡಿ ಪಟ್ಟವಾಗಬೇಕು. ಇಲ್ಲಿನ ಗಡಿನಾಮವೂ "ದಂಡು ದೇವು ಬೈದ್ಯ" ಎಂದೇ ಇದೆ‌. ಈ ಗುತ್ತಿನ ಹಿರಿಯರು ಅಂದಿನ ಕಾಲದಲ್ಲಿ ಯೋಧರಾಗಿ ಸೇನಾಧಿಪತಿಗಳಾಗಿ ಪ್ರಸಿದ್ಧರಾಗಿದ್ದಿರಬಹುದು. ಆದ್ದರಿಂದಲೇ ಅವರ ಮೂರ್ತಿಗಳಲ್ಲಿ ಕತ್ತಿ, ಗುರಾಣಿ, ಬಿಲ್ಲುಬಾಣಗಳು ಮಾಡಿಸಲ್ಪಟ್ಟಿದೆ.

ಗುತ್ತಿನಲ್ಲಿ ಈಗ ಗೋಪಾಲ ಪೂಜಾರಿ ಮತ್ತು ಕುಟುಂಬ ವಾಸವಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಗೋಪಾಲ ಪೂಜಾರಿಯವರ ತಾಯಿ ಚೆನ್ನಕ್ಕನವರು ದೈವಾಧೀನರಾದರು. ಆಗ ಇವರಿಗೆ ಸುಮಾರು ೯೨ ವರ್ಷಗಳಷ್ಟು ಪ್ರಾಯವಾಗಿತ್ತು. ಇವರ ತಾಯಿಯ ಹೆಸರು ಚೆಲುವಮ್ಮ ಎಂದು. ಇವರೂ ಈ ಮನೆಯಲ್ಲಿ‌ಯೇ ಬಾಳಿದವರು‌. ಅಂಬ್ಡೇಲು ಗುತ್ತಿನ ಚಾವಡಿಯ ಕೋಣೆಯಲ್ಲಿ ಪಟ್ಟದ ಪಂಜುರ್ಲಿ ಇದ್ದಂತೆ ಚಾವಡಿಯ ಉಪ್ಪರಿಗೆಯ ಕೋಣೆಯಲ್ಲಿ ಅರಸು ದೈವದ ಉಯ್ಯಾಲೆ ಇದೆ. ಹೆಬ್ಬಾಗಿಲು ಇರುವ ಪೌಳಿಯ ಬಲಭಾಗದ ಕೋಣೆಯಲ್ಲಿ ಕಲ್ಲುರ್ಟಿ ದೈವ ಇದ್ದು ಇದರೊಂದಿಗೆ ಒಂದು ದೇವಿಯ ಮೂರ್ತಿಯೂ ಇದೆ. ಹೊರಗಿನಿಂದ ಲೆಕ್ಕೇಸಿರಿ, ಗುಳಿಗ ಮತ್ತು ಜುಂಬುರ್ಲಿ ದೈವಗಳಿವೆ. ಜುಂಬುರ್ಲಿ ದೈವಕ್ಕೆ ಇಲ್ಲಿ ಮೂರು ಕೋಳಿ ಮತ್ತು ಎರಡು ಮೊಟ್ಟೆಯ ಅಗೇಲು ನಡೆಯುತ್ತದೆ.

ಹಿಂದೆ ಇಲ್ಲಿ ವಾರ್ಷಿಕವಾಗಿ ಪಂಜುರ್ಲಿ ದೈವಕ್ಕೆ ನೇಮ ನಡೆಯುತ್ತಿದ್ದು ಪ್ರಸ್ತುತ ಎರಡು ವರ್ಷಕ್ಕೊಮ್ಮೆ ನೇಮ ನಡೆಯುತ್ತದೆ. ಗುತ್ತಿನ ಪ್ರಧಾನ ದೈವವಾದ ಈ ಪಟ್ಟದ ಪಂಜುರ್ಲಿಗೆ ಬಸವ, ಹಸುರು ಕೊಡೆ, ಪಂಚ ದೀವಟಿಗೆ, ದರಿ ಸೇವೆ ಹಾಗೂ ಮುಂತಾದ ಸೇವೆಗಳು ಇಲ್ಲಿ ನಡೆಯುತ್ತದೆ. ಗುತ್ತಿನ ಚಾವಡಿಯ ದೈವದ ಕೋಣೆಯನ್ನು ನೇಮದಂದು ಮತ್ತು ಕೆಲವೊಂದು ನಿರ್ದಿಷ್ಟ ದಿನಗಳಂದು ಮಾತ್ರ ತೆಗೆಯಲಾಗುತ್ತದೆ. ನೇಮಕ್ಕೆ ಮೊದಲು ಅಸ್ರಣ್ಣರು ಬಂದು ಕವಡೆ ಹಾಕಿ ಮುಹೂರ್ತ ಇಡುತ್ತಾರೆ.

ನಂತರದಲ್ಲಿ ದೈವ ದೇವರ ಕಾರ್ಯ ಆರಂಭಿಸುತ್ತಾರೆ. ಕಲಾಯ ಗುತ್ತಿನ ಗಡಿ ಹಿಡಿದವರಾದ ಜಾರಪ್ಪ ಪೂಜಾರಿಯವರು ಪ್ರಸ್ತುತ ಇಲ್ಲಿನ ದೈವಗಳ ಕಾರ್ಯಗಳನ್ನು ನೆರವೇರಿಸಿ ಕೊಡುತ್ತಿದ್ದಾರೆ. ಮುಹೂರ್ತ ಇಟ್ಟ ದಿನದಂದು ಇವರು ಇಲ್ಲಿಗೆ ಬಂದು ದೈವಗಳ ಕೋಣೆಯ ಬಾಗಿಲನ್ನು ತೆರೆಯುತ್ತಾರೆ.

ಪಂಜುರ್ಲಿಯ ನೇಮದಂದು ಉಪ್ಪರಿಗೆಯಿಂದ ಅರಸು ದೈವದ ಭಂಡಾರ ಇಳಿದು ಪರ್ವ ನಡೆಯುತ್ತದೆ. ನಂತರ ಹರ್ಸಾಯೊ ಸೇವೆ ನಡೆಯುತ್ತದೆ. ಹರ್ಸಾಯಕ್ಕೆ ದಾಸಯ್ಯನವರು ಬಂದು ಬಾಳೆ ದಿಂಡಿನಲ್ಲಿ ಜೋಡುಗುಂಡ ನಿರ್ಮಾಣ ಮಾಡುತ್ತಾರೆ. ನಂತರ ಆವೇಶವಾಗಿ ಕುಟುಂಬಿಕರೆಲ್ಲಾ ಬಂದು ಮುಡಿಪು ಹಣ ಒಪ್ಪಿಸುತ್ತಾರೆ.

ಅಂಬ್ಡೇಲು ಗುತ್ತಿನ ಒಂದು ವಿಶೇಷವೆಂದರೆ ಇಲ್ಲಿ ಸಂದಾಯವಾದ ಮುಡಿಪು ಹಣವನ್ನು ತಿರುಪತಿಗೆ ಕೊಂಡು ಹೋಗುವ ಸಂಪ್ರದಾಯ ಇಲ್ಲಿಲ್ಲ‌. ಬದಲಾಗಿ ಮುಡಿಪು ಹಣವನ್ನು ಪಂಜುರ್ಲಿ ದೈವದ ಆಭರಣಗಳಿಗೆ ಬಳಸಲಾಗುತ್ತದೆ. ಇಲ್ಲಿ ದೈವಕ್ಕೆ ಬೆಳೆಬಾಳುವ ಆಭರಣಗಳಿವೆ. ಇದಲ್ಲದೆ ಈ ಗುತ್ತಿನಲ್ಲಿ ಗಡಿ ಪಟ್ಟವಾದವರು ತಿರುಪತಿಗೆ ಹೋಗುವುದಾಗಲಿ ಅಲ್ಲಿನ ಪ್ರಸಾದ ಸ್ವೀಕರಿಸುವುದಾಗಲಿ ಮಾಡುವಂತಿಲ್ಲ. ಇಲ್ಲಿನ ಪಂಜುರ್ಲಿ ದೈವಕ್ಕೆ ತುಳಸಿ ಕಟ್ಟೆ ನಿಷಿದ್ಧ ವಾಗಿರುವುದರಿಂದ ಅನಾದಿಕಾಲದಿಂದಲೂ ಇಲ್ಲಿ ತುಳಸಿ ಕಟ್ಟೆ ಇಲ್ಲ.

ಇದಕ್ಕೆ ಮುಖ್ಯ ಕಾರಣಗಳೇನೆಂಬುದು ತಿಳಿದಿಲ್ಲ‌‌. ಇಲ್ಲಿ ಪಂಜುರ್ಲಿ ದೈವದ ನೇಮ ಅಗುವುದಿದ್ದರೆ ನೇಮ ಕಟ್ಟುವ ನಲಿಕೆ ಜನಾಂಗದವರಿಗೆ ತೆಂಬರೆ ಒಂದು ಬಿಟ್ಟು ಉಳಿದೆಲ್ಲವನ್ನು ಈ ಗುತ್ತಿನ ಮನೆಯವರೇ ಕೊಡಬೇಕೆಂಬ ಪದ್ಧತಿ ಇದೆ. ಇಲ್ಲಿ ವಾರ್ಷಿಕ ಪರ್ವದಂದು ಚಾವಡಿಯಲ್ಲಿರುವ ದಂಡು ದೇವು ಬೈದ್ಯ ಮತ್ತು ಇತರ ಹಿರಿಯರಿಗೆ ದೊಸೆ ಮತ್ತು ಕೋಳಿಯ ಅಡುಗೆ ಮಾಡಿ ಬಡಿಸುವ ಕ್ರಮ ಇದೆ. ಅಷ್ಟೇ ಅಲ್ಲದೆ ಈ ಗುತ್ತಿನಲ್ಲಿ ಜೈನ ಎಡೆ ಕೂಡ ಇದ್ದು ಏಳು ಎಲೆ ಹಾಕಿ ಇಲ್ಲಿನ ಜೈನ ಹಿರಿಯರಿಗೆ ಸಸ್ಯಾಹಾರದ ಅಗೇಲು ಬಡಿಸುವ ಕ್ರಮ ಇದೆ. ಇದು ಮಂಗಲ್ದಿಯ ವಂಶಸ್ಥರಲ್ಲಿ ಸಂದು ಹೋದ ಹಿರಿಯರಿಗೆ ಬಡಿಸುವ ಕ್ರಮವಾಗಿದೆ ಎಂದು ಗೋಪಾಲ ಪೂಜಾರಿಯವರು ತಿಳಿಸಿದರು.

ಅಂಬ್ಡೇಲು ಗುತ್ತಿಗೆ ಪುಲಕೆತ್ಯಾರು ಮತ್ತು ಬೇಂಗೆತ್ಯಾರು ಎಂಬ ಎರಡು ಕಂಬುಳ ಗದ್ದೆಗಳಿವೆ. ಪುಲಕೆತ್ಯಾರಿನಲ್ಲಿ ಬಾಳೆ ಹಾಕಿ ಕಂಬಳ ನಡೆದರೆ ಬೇಂಗೆತ್ಯಾರಿನಲ್ಲಿ ಪೂಕರೆ ಹಾಕಿ ಕಂಬಳ ನಡೆಯುತ್ತದೆ. ಈ ಸಂದರ್ಭದಲ್ಲಿ ನಲಿಕೆ ಸಮಾಜದವರು ಕಂಬಳತ್ತಾಯ ಬಂಟ ದೈವದ ವೇಷ ಹಾಕಿ ಪ್ರದಕ್ಷಿಣೆ ಬರುತ್ತಿದ್ದರು. ಸುಮಾರು ೩೦ ಜೋಡಿ ಕೋಣಗಳು ಕಂಬಳಕ್ಕೆ ಬರುತ್ತಿದ್ದವು‌. ಈಗ ಯಾವುದೇ ಕಂಬಳಗಳು ಇಲ್ಲಿ ನಡೆಯುತ್ತಿಲ್ಲ. ಇಲ್ಲಿ ಸುಂದರವಾದ ಕೆತ್ತನೆಗಳುಲ್ಲ ಪುರಾತನ ನೊಗ ಮತ್ತು ಕನೆಪಲಾಯಿಗಳನ್ನೂ ಈಗಲೂ ಸಂರಕ್ಷಿಸಿಕೊಂಡು ಬರಲಾಗಿದ್ದು ಇದು ಗುತ್ತಿನ ಕಂಬಳದ ಶ್ರೀಮಂತಿಕೆಯಗೆ ಹಿಡಿದಿರುವ ಕೈಗನ್ನಡಿಯಾಗಿದೆ.  ಅಂಬ್ಡೇಲು ಗುತ್ತಿಗೆ ಪಾಂಡ್ರಕಲ್ಲು ಬೈದ್ಯೇರುಗಳ ಗರಡಿಯಲ್ಲಿ ವಿಶೇಷ ಸ್ಥಾನಮಾನಗಳಿವೆ.

ನೇಮದ ಸಂದರ್ಭದಲ್ಲಿ ದರಿ ಸೇವೆ ಯನ್ನು ಕೊಡುವ ಗೌರವ ಈ ಮನೆತನಕ್ಕೆ ಇದೆ‌. ಹಾಗೇಯೆ ಇಲ್ಲಿನ ದೈವಗಳನ್ನು ಇವರನ್ನು "ದಂಡು ದೇವು ಬೈದ್ಯರ ಸಂಸಾರ " ವೆಂದು ಕರೆಯುತ್ತವೆ. ಈ ಗುತ್ತಿನಲ್ಲಿ ನಡೆಯುವ ನಾಗರ ಪಂಚಮಿಯ ಹಾಲೆರೆಯುವ ಕಾರ್ಯಕ್ರಮಕ್ಕೆ ಸುಮಾರು ೫೦೦ ಕ್ಕೂ ಮಿಕ್ಕಿ ಕುಟುಂಬಸ್ಥರು ಸೇರುತ್ತಾರೆ. ಅನೇಕರು ಈ ಕುಟುಂಬದಲ್ಲಿ ವಿದ್ಯಾವಂತರಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ. ಹೀಗೆ ಅಂಬ್ಡೇಲು ಗುತ್ತು ಅನೇಕ ಇತಿಹಾಸಗಳನ್ನೊಳಗೊಂಡಿರುವ ಪ್ರಸಿದ್ದ ಮನೆತನವಾಗಿದೆ‌.

ಮಾಹಿತಿ : ಗೋಪಾಲ ಪೂಜಾರಿಅಂಬ್ಡೇಲು ಗುತ್ತು (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) -ಸಂಕೇತ್ ಪೂಜಾರಿ.

0 comments: