Friday, January 19, 2018

ಬಿಲ್ಲವರ ಗುತ್ತು ಮತ್ತು ಐತಿಹಾಸಿಕ ಮನೆತನಗಳು (ಪುತ್ತೂರು ಮನೆ)

ಕಾರ್ಕಳ ಕ್ರಮಿಸಿ ಜಾರ್ಕಳ(ಜಾರ್ಲ) ಮೂಂಡ್ಲಿಯ ತಂಗುದಾಣದಲ್ಲಿ ಇಳಿದು ಬಹಳ ದೂರ ನಡೆದ ನಮಗೆ ಸಿಕ್ಕಿದ ಅತೀ ಸುಂದರವಾದ ಮತ್ತು ದೇವಾಲಯದ ರೀತಿ ಗೋಚರಿಸುತ್ತಿದ್ದ ಸುತ್ತು ಮುದಲಿನ ಪುತ್ತೂರು ಮನೆ ನಿಜಕ್ಕೂ ತುಳುನಾಡಿನ ಪುರಾತನ ಅರಮನೆಯ ಶೈಲಿಯಂತೇ ಇತ್ತು. ಬಹಳ ವಿಶಾಲವಾದ ಈ ಮನೆ ಬರ್ಕೆ ಮನೆಯಾಗಿದ್ದರೂ ಸುತ್ತು ಮುತ್ತಲಿನಲ್ಲಿ ಪುತ್ತೂರು ಮನೆ (ಪುತ್ತೂರ್ದ ಇಲ್ಲ್) ಎಂದೇ ಪ್ರಸಿದ್ಧಿ.

ಪುತ್ತೂರು ಮನೆಯಲ್ಲಿ ಈಗ ಮೂಲ ಕುಟುಂಬ ಇಲ್ಲ. ಈಗ ಬೇರೊಂದು ಬಿಲ್ಲವರ ಕುಟುಂಬಕ್ಕೆ ಇದು ಹಸ್ತಾಂತರವಾಗಿದೆ. ಅಪರೂಪದಲ್ಲಿ ಅಪರೂಪವಾದ ಈ ಮನೆಯು ಮೂರು ಮಾಳಿಗೆಯನ್ನು ನಡುಚಾವಡಿಯಲ್ಲಿ ಹೊಂದಿದೆ. ಈ ಚಾವಡಿಯ ಮಾಳಿಗೆಯಲ್ಲಿ ಹಳೆಯ ಕಾಲದ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಅದಲ್ಲದೆ ಮಾಳಿಗೆ ಮೇಲೆ ಹಲವು ಕೋಣೆಗಳಿದ್ದು ಈ ಮನೆತದ ಶ್ರೀಮಂತಿಕೆಗೆ ಇದು ಮುಖ್ಯ ಸಾಕ್ಷಿಯಾಗಿದೆ. ಮನೆಗೆ ಪ್ರವೇಶ ಮಾಡುವ ಹೆಬ್ಬಾಗಿಲು ಬಹಳ ಸುಂದರವಾಗಿದೆ. ಒಳಗೆ ಪ್ರವೇಶಿಸುತ್ತಿದ್ದಂತೆ ಸುಂದರವಾದ ಕೆತ್ತನೆಗಳಿರುವ ಕಂಬಗಳು ನಮ್ಮನ್ನು ಸ್ವಾಗತಿಸುತ್ತದೆ. ಪ್ರವೇಶದ ಪೌಳಿಯಲ್ಲಿ ಈ ಕಂಬಗಳಿದ್ದು ಮೇಲ್ಭಾಗದ ಕೆತ್ತನೆಗಳು ಸುಂದರವಾಗಿದೆ.

ಪೌಳಿಯ ಎಡಭಾಗದಲ್ಲಿ ದೈವಗಳ ಗುಡಿ ಇದೆ. ಇದರೊಳಗೆ ದುಗ್ಗಲಾಯ, ಮೈಸಂದಾಯ ಮತ್ತು ಜೋಡು ಪಂಜುರ್ಲಿ ದೈವಗಳಿವೆ. ಹೊರ ಭಾಗದಲ್ಲಿ ವರ್ತೆ ಪಂಜುರ್ಲಿ , ಓಡಿಲ್ತಾಯ, ಪಂಜುರ್ಲಿ ದೈವಗಳಿವೆ. ಪೌಳಿಯಿಂದ ಇಳಿದು ಮುಂದೆ ಹೋದರೆ ಬೃಹತ್ ಗಾತ್ರದ ಬೋದಿಗೆ ಕಂಬಗಳುಳ್ಳ ನಡು ಚಾವಡಿ ಎದುರಾಗುತ್ತದೆ. ಈ ಮನೆಯಲ್ಲಿ ಒಟ್ಟಾಗಿ ಸುಮಾರು 21 ಕಂಬಗಳಿವೆ. ಚಾವಡಿಯ ಒಂದು ಕಪಾಟಿನಲ್ಲಿ ಮಮ್ಮಾಯಿ ದೇವಿಯ ಸಾನಿಧ್ಯವಿದೆ. ವರ್ಷಕ್ಕೊಂದು ಬಾರಿ ಇದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಚಾವಡಿಯಿಂದ ಒಳಕ್ಕೆ ಹೋಗ ದ್ವಾರವಿದ್ದು ಇದರ ಬೃಹತ್ ಗಾತ್ರದ ಬಾಗಿಲು ಸುಂದರವಾಗಿದೆ. ಒಳ ಹೋದಂತೆ ದೊಡ್ಡ ಗಾತ್ರದ ಕಲೆಂಬಿ ಎದುರಾಗುತ್ತದೆ. ಮತ್ತೂ ಒಳ ಹೊಕ್ಕಾಗ ಮನೆಯ ಹಿಂದಿನ ಪೌಳಿ ಸಿಗುತ್ತದೆ. ಇದು ಸಂಪೂರ್ಣವಾಗಿ ದನದ ಹಟ್ಟಿಗೆ ಮೀಸಲಾಗಿದೆ. ಹಟ್ಟಿಯ ತುಂಬಾ ದನ ಕರುಗಳಿದ್ದು ಮನೆಯ ಕೃಷಿ ಸಂಪತ್ತಿಗೆ ಸಾಕ್ಷಿಯಾಗಿದೆ.

ಈ ಮನೆಯ ಚಾವಡಿಯು ಮನೆಯ ಮಧ್ಯ ಭಾಗದಲ್ಲಿದ್ದು ಮನೆಯ ಹೊರ ಭಾಗದಿಂದ ಇದು ದೇವಸ್ಥಾನದಂತೆ ಕಾಣುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಆನೆಬಾಗಿಲು ಇದೆ. ಒಟ್ಟಾಗಿ ಈ ಮನೆಗೆ ಎರಡು ಪ್ರವೇಶ ದ್ವಾರಗಳಿವೆ. ಮನೆಯ ಅಡುಗೆ ಕೋಣೆಯಲ್ಲಿ ದೊಡ್ಡದಾದ ಅರೆಯುವ ಕಲ್ಲಿದೆ. ಮನೆಯಲ್ಲಿ ಎರಡು ಬೃಹತ್ ಗಾತ್ರದ ಬಾಮದ ಮಂಚವಿದೆ. ಅದರಲ್ಲಿ ಒಂದು ಶಿಥಿಲವಾಗಿದೆ. ಇನ್ನೊಂದು ಚಾವಡಿಯ ಬಲ ಭಾಗದ ಪಾಳಿಯಲ್ಲಿ ಇದೆ.

ಪುತ್ತೂರು ಮನೆಯ ಸಂಪೂರ್ಣ ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಇದು ಗುಡ್ಡೋಳಿ ರಾಮಪ್ಪ ಪೂಜಾರಿ ಎಂಬುವವರ ಭೂಮಿಯಾಗಿತ್ತು ಎಂಬ ಮಾಹಿತಿ ಇದೆ. ನಂತರ ಸಾಲದ ಹೊರೆಯಿಂದ ಅಡವಿಟ್ಟು ಇದು ಸೂ ಭಟ್ರು ಎಂಬುವರ ಪಾಲಾಗಿತ್ತು. ತದನಂತರ ಈ ಮನೆಯನ್ನು ನರಸು ನಾಯ್ಕರು ಖರೀದಿಸಿದರು. ನರಸು ನಾಯ್ಕರ ಕಾಲದಲ್ಲಿ ಸೇಸ ಪೂಜಾರಿಯವರನ್ನು ಈ ಮನೆಯಲ್ಲಿ ಕೂರಿಸಲಾಯಿತು. ಕೊನೆಗೆ ಭೂಮಸುದೆ ಕಾಯ್ದೆಯಲ್ಲಿ ಈ ಭೂಮಿ ಇವರಿಗೆ ಲಭಿಸುತ್ತದೆ. ಇದು 56 ಮುಡಿ ಜಮೀನು ಹೊಂದಿದೆ. ಸೇಸ ಪೂಜಾರಿಯವರಿಗೆ ಇಲ್ಲಿ ಬಾಮದ ಪಟ್ಟ ಅಗಿತ್ತು. ನಂತರ ಬಾಮ ಅಗಿಲ್ಲ. ಪಕ್ಕದಲ್ಲಿ ಇರುವಂತಹ ಗರಡಿಯಲ್ಲಿ ಈ ಮನೆತನಕ್ಕೆ ವಿಶೇಷ ಗೌರವಗಳಿವೆ. ಇದು ಗ್ರಾಮದ ನಾಲ್ಕನೇ ಮುಖ್ಯ ಮನೆಯಾಗಿದೆ. ಗರಡಿಯಲ್ಲಿ ಕುಜುಂಬ ಕಾಂಜ ದೈವದ ಮೂರ್ತಿಯನ್ನು ಹಿಡಿಯುವ ಅಧಿಕಾರ ಈ ಮನೆತನಕ್ಕೆ ಇದೆ. ಈ ಮನೆಯಲ್ಲಿ ಈ ಈಗಲೂ ಸುಮಾರು 25 ಜನ ವಾಸವಿದ್ದಾರೆ.

ಮನೆಯ ಈಗಿನ ಯಜಮಾನ ಕರಿಯಣ್ಣ ಪೂಜಾರಿಯವರು. ಇದು ಇವರ ಮೂಲ ಮನೆ ಅಗದಿರುವುದರಿಂದ ಇದು ಕುಟುಂಬದ ಮನೆಯಾಗಿ ಉಳಿದಿಲ್ಲ. ಆದರೆ ಇಲ್ಲಿ ಮೂಲತಃ ವಾಗಿ ಇದ್ದವರೂ ಬಿಲ್ಲವರೇ. ಕಾರ್ಕಳದ ಪ್ರಸಿದ್ದ ಬಿಲ್ಲವ ಮನೆತನವಾದ ಕಲ್ಯ ಮನೆಗೆ ಸೇರಿದ ಮೂಲ ಭೂಮಿ ಇದಾಗಿತ್ತು ಎಂಬ ಮಾಹಿತಿ ಇದೆ. ಮೊದಲು ಈ ಮನೆತನದ ಸದಸ್ಯರೇ ಇಲ್ಲಿ ಇದ್ದಿರಬಹುದು. ಈ ಮನೆಯಲ್ಲಿರುವ ಈಗಿನ ಕುಟುಂಬದ ಸೇಸ ಪೂಜಾರಿಯವರು ಮತ್ತು ಕರಿಯಣ್ಣ ಪೂಜಾರಿಯವರು ನಾಟಿ ವೈದ್ಯರಾಗಿದ್ದರು. ಈ ಕುಟುಂಬದ ಮೂಲ ಮನೆ ಕಾರ್ಯ ಎಂಬಲ್ಲಿದೆ. ಈ ಮನೆತನಕ್ಕೆ ಎರಡು ಕಂಬಳ ಗದ್ದೆಗಳಿವೆ. ಒಟ್ಟಿನಲ್ಲಿ ಈ ಮನೆತನದ ಗಾತ್ರ ಮತ್ತು ಸುಂದರತೆಯನ್ನು ನೋಡಿದಾಗ ಪ್ರಾಚೀನದಲ್ಲಿ ಬಹಳ ವೈಭವದಿಂದ ಮತ್ತು ಶ್ರೀಮಂತಿಕೆಯಿಂದ ಮೆರೆದ ಮನೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಮೂಲ ಇತಿಹಾಸ ಮರೆಯಾಗಿ ಎಲ್ಲವೂ ಕಾಲಾಂತರದಲ್ಲಿ ಹುದುಗಿಹೋಗಿದೆ.

ಸಹಕಾರ - ಶೈಲೇಶ್ ಬಿರ್ವ, ಸುಮನ್ ಪೂಜಾರಿ (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) ✍️ಸಂಕೇತ್ ಪೂಜಾರಿ.

0 comments: