Friday, January 26, 2018

ಬಿಲ್ಲವರ ಗುತ್ತು ಮನೆತನಗಳು ( ಆರುವಾರ ಗುತ್ತು)

ಈ ಭೂಮಿಯು ಕೊಡಂಗೆ ಗುತ್ತಿನಲ್ಲಿ ನೆಲೆನಿಲ್ಲಲು ಕಾರಣರಾದ ಅಬ್ಬಕ್ಕನ ಕುಟುಂಬದ ಇನ್ನೊಂದು ಶಾಖೆಯಾಗಿದೆ. ಅರುವರ ದಲ್ಲಿ ಖರೀದಿಸಿದ ಜಮೀನು ಕ್ರಮೇಣ ಅಭಿವೃದ್ಧಿ ಹೊಂದಿ ಗುತ್ತಿನ ಮನೆಯ ಗೌರವದೊಂದಿಗೆ ಬಾಳಿತು. ಈ ಗುತ್ತು ಮನೆಯು ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದಲ್ಲಿದೆ. ನಾಲ್ಕು ಸುತ್ತಿನ ವಿಶಾಲ ಮನೆಯ ಅವಶೇಷಗಳು ಈಗಲೂ ಕಾಣಸಿಗುತ್ತವೆ. ಈಗಿನ ಮನೆಯೂ ಎಲ್ ಆಕಾರದಲ್ಲಿದ್ದು ಬಹಳ ಪುರಾತನ ಮನೆಯಾಗಿದೆ. ಗುತ್ತಿನ ಮನೆಯ ಚಾವಡಿಯೂ ಸುಂದರವಾದ ಬೋಧಿಗೆ ಕಂಬಗಳಿಂದ ಮನೋಹರವಾಗಿದೆ. ಈ ಕಂಬದಲ್ಲಿ ಮನೆಯ ನವೀಕರಣದ ಇಸವಿಯನ್ನು ಬರೆಯಲಾಗಿದ್ದು ಅದು 1938 ಎಂದು ಇದೆ.

ಈ ಮನೆಯ ಚಾವಡಿಯಲ್ಲಿ ಊರಿನ ನ್ಯಾಯ ಪಂಚಾಯಿತಿಗಳೂ ಆಗುತ್ತಿತ್ತು. ನೆಲಪಾಲು ಎಂಬಲ್ಲಿಯೂ ಈ ಮನೆತನದ ಒಂದು ಶಾಖೆ ಇದೆ. ಈ ಮನೆಯ ರಿಕಾರ್ಡ್ ನಲ್ಲಿ ಈಗಲೂ ಜಾಕು ಯಾನೆ ದೇವಕಿ ಎಂಬ ಹೆಸರಿದೆ. ಕೊಡಂಗೆ ಗುತ್ತಿನ ಅಬ್ಬಕ್ಕನ ಕುಟುಂಬದ ಸಹೊದರಿ ಇಲ್ಲಿ ನೆಲೆ ನಿಂತವರು. ಈ ಮನೆತನಕ್ಕೆ ಸಂಬಂಧಿಸಿದ ವಿಶಾಲವಾದ ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿ ಸಮೃದ್ಧಗೊಳಿಸಿದರು.

ನಾವು ಭೇಟಿ ನೀಡಿದ ಸಮಯದಲ್ಲಿ ಈ ಮನೆಯವರಾದ ವೃತ್ತಿಯಲ್ಲಿ ವಕೀಲರಾದ ಮನೋಹರ ಪೂಜಾರಿಯವರು ಹಾಜರಿದ್ದು ಮಾಹಿತಿ ನೀಡಿದರು. ಸುತ್ತಮುತ್ತಲೂ ಹಚ್ಚ ಹಸುರಿನ ಕೋಟೆಯಂತಿರುವ ಈ ಮನೆಯನ್ನು ಸುಸ್ಥಿತಿಯಲ್ಲಿ ಇರಿಸಿಕೊಂಡಿದ್ದಾರೆ. ಮನೆಯ ಮಾಳಿಗೆಗೆ ಹೋಗಲು ಮೆಟ್ಟಿಲುಗಳಿವೆ. ಮಾಳಿಗೆಯಲ್ಲಿ ಮತ್ತು ಚಾವಡಿಯ ಬಲಬದಿಯ ಕೋಣೆಯಲ್ಲಿ ಹಳೆಕಾಲದ ವಸ್ತುಗಳನ್ನು ಶೇಖರಿಸಿ ಇಟ್ಟಿದ್ದಾರೆ. ಬೆಳ್ಳಿಯ ಮುಚ್ಚಿಗೆ ಇರುವ ಹಳೆಕಾಲದ ಕಡ್ಸಲೆಯೂ ಇದೆ. ಹಾಗೆ 1832ನೇ ಇಸವಿಯ ಕೆಲವು ನಾಣ್ಯಗಳು ಇವೆ. ಚಾವಡಿಯಲ್ಲಿ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಸತ್ಯಜಾವದೆ, ಕುಂಟಲ್ತಾಯ, ಮಯ್ಯಂತಿ ಮುಂತಾದ ದೈವಗಳಿವೆ. ಹೊರಗೆ ಚಾಮುಂಡಿ, ಗುಳಿಗ, ಮುಗೇರ್ಲು, ಮುಗೇರ ಪಂಜುರ್ಲಿ, ಗುಳಿಗ ಮುಂತಾದ ದೈವಗಳಿವೆ. ಮುಗೇರರು ವರ್ಷಕ್ಕೊಮ್ಮೆ ಇಲ್ಲಿ ಬಂದು ಹೋಗಬೇಕೆಂಬ ಸಂಪ್ರದಾಯ ಇದೆ. ಹಿಂದಿನ ಕಾಲದಲ್ಲಿ ಇಲ್ಲಿ ಇದ್ದ ಮುಗೇರರ ಮದುವೆ ಖರ್ಚನ್ನು ಈ ಮನೆಯವರೇ ಭರಿಸಬೇಕೆಂಬ ಸಂಪ್ರದಾಯ ಇತ್ತು. ಸುಮಾರು ೪೦ ಎಕ್ರೆಗಿಂತಲೂ ಹೆಚ್ಚು ಭೂಮಿ ಈ ಮನೆತನಕ್ಕೆ ಇತ್ತು. ಈಗ ೨೭ ಎಕ್ರೆ ಭೂಮಿ ಇದೆ. ೯೦ ಸೆಂಟ್ಸ್ ಭೂಮಿ ದೈವಗಳ ಹೆಸರಿನಲ್ಲಿ ಇದೆ. ಇದು ಸಾಲ್ಯಾನ್ ಬಳಿಯವರ ಮೂಲಸ್ಥಾನವಾಗಿದೆ.

ಎ. ಮನೋಹರ್ ರವರು ವಕೀಲರಾಗಿ ವೃತ್ತಿನಿರತರಾಗಿದ್ದರೂ ದೈವಗಳನ್ನು ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ವಾರ್ಷಿಕ ಪರ್ಬ, ಚೌತಿ, ಸೋಣದ ಶನಿವಾರ ಮುಂತಾದ ಎಲ್ಲಾ ಹಬ್ಬ ಹರಿದಿನಗಳಲ್ಲಿ ಇಲ್ಲಿ ಸೇವೆಗಳು ನಡೆಯುತ್ತದೆ. ಚಾವಡಿಯಲ್ಲಿ ದುರ್ಗೆ ಹಾಗು ವೆಂಕಟರಮಣ ದೇವರ ಆರಾಧನೆ ಇದೆ. ಮುಡಿಪು ಒಯ್ಯುವ ಸಂದರ್ಭದಲ್ಲಿ ಹರಿಸೇವೆ ನಡೆಯುತ್ತದೆ.

ಈ ಗುತ್ತು ಮನೆಯು ಹಿಂದೆ ನ್ಯಾಯ ಚಾವಡಿಯಾಗಿ ಪ್ರಸಿದ್ಧಿ ಹೊಂದಿತ್ತು. ತ್ಯಾಂಪ ಪೂಜಾರಿ ಮತ್ತು ತಿಮ್ಮಪ್ಪ ಪೂಜಾರಿ ಎಂಬುವವರು ಮಂತ್ರವಾದಿಗಳಾಗಿ ಪ್ರಸಿದ್ಧಿಗಳಿಸಿದವರು. ಗ್ರಾಮ ದೈವವಾದ ಶಿರಾಡಿ ದೈವಸ್ಥಾನದ ಮುಕೇಸ್ತರರಲ್ಲಿ ಈ ಗುತ್ತಿನವರು ಒಬ್ಬರಾಗಿದ್ದಾರೆ. ಹಿಂದೆ ಮನೋಹರರವರ ದೊಡ್ಡಮ್ಮನಿಗೆ ಅವೇಶ ಬರುತ್ತಿತ್ತಂತೆ. ಅವರ ಕುಟುಂಬದವರೊಬ್ಬರು ಸೇನೆಯಲ್ಲಿ ಕೆಲಸಕ್ಕಿದ್ದರು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಇಲ್ಲಿ ದೊಡ್ಡಮ್ಮನಿಗೆ ಆವೇಶವಾಗಿ ಅಲ್ಲಿ ನಡೆದ ಘಟನೆಗಳನ್ನು ಕಣ್ಣಾರೆ ಕಂಡಂತೆ ವಿವರಿಸುತ್ತಿದ್ದರಂತೆ. ಅದು ಎಲ್ಲರಿಗೂ ವಿಸ್ಮಯದ ಸಂಗತಿಯಾಗಿತ್ತಂತೆ. ಇಂದಿಗೂ ಈ ಮನೆಗೆ ಬೀಗ ಹಾಕುವಂತಿಲ್ಲ. ಇಲ್ಲಿನ ದೈವ ದೇವರುಗಳು ಮನೆಯ ರಕ್ಷಕರಾಗಿದ್ದಾರೆಂಬ ದೃಢವಾದ ವಿಶ್ವಾಸ ಈ ಗುತ್ತು ಮನೆಯವರಿಗಿದೆ.

ಈ ಗುತ್ತಿನ ಕುಟುಂಬದವರು ಆಧುನಿಕ ಶಿಕ್ಷಣವನ್ನು ಪಡೆದು ದೇಶ-ವಿದೇಶಗಳಲ್ಲಿ ವೃತ್ತಿನಿರತರಾಗಿದ್ದಾರೆ. ಕಿರಣ್ ಕುಮಾರ್ ಸಂಗೀತಗಾರರಾಗಿ, ಪ್ರವೀಣ್ ಕುಮಾರ್ ಆಳ್ವಾಸ್ ಕಾಲೇಜಿನಲ್ಲಿ ಫಿಸಿಕಲ್ ಡೈರೆಕ್ಟರ್ ಆಗಿ, ಮಮತ ಮತ್ತು ಮನೋಹರ್ ವಕೀಲರಾಗಿ, ಸೌಜನ್ಯ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬದ ಮಹಿಳೆಯರು ಕೂಡ ಸುಶಿಕ್ಷಿತರಾಗಿ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವೃತ್ತಿ ನಿರತರಾಗಿದಗದ್ದಾರೆ. ದೈವಭಕ್ತಿಯನ್ನು ಉಳಿಸಿಕೊಂಡೇ ಆಧುನಿಕ ಜೀವನ ಶೈಲಿಯಲ್ಲಿ ಬದುಕನ್ನು ಸಾಧಿಸಿಕೊಂಡಿರುವುದ್ದಕ್ಕೆ ಈ ಕುಟುಂಬವು ಆದರ್ಶವಾಗಿದೆ.

(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ.) -ಸಂಕೇತ್ ಪೂಜಾರಿ

0 comments: