'ನಾನೊಮ್ಮೆ ಬಂಗಾರಪ್ಪ ಅವರನ್ನು ಇಂದಿರಾಗಾಂಧಿಯವರಿಗೆ ಪರಿಚಯ ಮಾಡುವ ಸಂದರ್ಭ ಇಂದಿರಾಗಾಂಧಿ 'ಹೂ ಈಸ್ ದ್ಯಾಟ್ ಬಂಗಾರಪ್ಪ' ಎಂದು ಕೇಳಿದ್ದರು. ಅವರು 'ದೇವರಾಜ ಅರಸರ ಕ್ಯಾಬಿನೆಟ್‌ನಲ್ಲಿದ್ದಾರೆ' ಎಂದು ಹೇಳಿ ಪರಿಚಯಿಸಿದ್ದೆ. ಇದಾದ ಬಳಿಕ 1980ರ ಕಾಲಘಟ್ಟದಲ್ಲಿ ಚುನಾವಣೆಗಿಂತ ಮೊದಲು ಗುಂಡೂರಾಯರನ್ನು ರಾಜ್ಯಕ್ಕೆ ಎಲೆಕ್ಷನ್ ಕಮಿಟಿ ಚೇರ್‌ಮನ್ ಆಗಿ ನೇಮಿಸಿ ಪ್ರಕಟಣೆ ಮಾಡಿದರು. ಅಷ್ಟರವರೆಗೆ ಬಂಗಾರಪ್ಪಗೆ ಮುಖ್ಯಮಂತ್ರಿಯಾಗುವ ಕನಸಿತ್ತು. ಈಗ ಗುಂಡೂರಾಯರನ್ನು ನೇಮಕ ಮಾಡಿದ್ದು ಅವರಿಗೆ ಶಾಕ್ ಹೊಡೆದಂತಾಯಿತು. ಈ ಸಂದರ್ಭ ಇಂದಿರಾಗಾಂಧಿಯನ್ನು ಕೆಟ್ಟಮಾತುಗಳಿಂದ ಬೈದರು.
ಆಗ ಸಮಾಧಾನ ಹೇಳಿ ಸ್ವಲ್ಪ ದಿನ ಬಿಟ್ಟು ನಾನೊಮ್ಮೆ ಇಂದಿರಾಗಾಂಧಿ ಬಳಿ ಬಂಗಾರಪ್ಪ ಅವರನ್ನು ಕರೆದುಕೊಂಡು ಹೋದೆ. ಹೋದ ಕೂಡಲೇ ಬಂಗಾರಪ್ಪರು ಆರ್ಭಟ ಮಾಡಿದ್ದು, ನನಗೆ ಬಹಳ ಬೇಸರವಾಯಿತು. ಈ ಸಂದರ್ಭ ಇಂದಿರಾಗಾಂಧಿಯವರಿಗೆ ಹೊಡೆಯಲು ಹೋದರು. ನನಗೆ ಆಘಾತವಾಯಿತು. ಕೂಡಲೇ ಬಂಗಾರಪ್ಪರನ್ನು ಹಿಡಿದು ಹಿಂದಕ್ಕೆ ಎಳೆದೆ. ಇಂದಿರಾ ಹೆದರಿ ನಡುಗುತ್ತಿದ್ದರು. ಏನಾಗಿದೆ ನಿಮಗೆ? ತಲೆ ಸರಿ ಉಂಟಾ? ಹೋಗಿ ಹೊರಗೆ ನಿಲ್ಲಿ ಎಂದು ಹೇಳಿದೆ. ಆ ಬಳಿಕ ಇಂದಿರಾಗಾಂಧಿ ನನ್ನಲ್ಲಿ 'ನನ್ನ ಮಕ್ಕಳು ಕೂಡಾ ಈ ರೀತಿ ಮಾಡಲಿಲ್ಲ. ಈ ರೀತಿ ಮಾಡಬಾರದಿತ್ತು,' ಎಂದು ನೊಂದುಕೊಂಡರು.
ಇದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರು ಶುಕ್ರವಾರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಬಿಡುಗಡೆ ಮಾಡಿದ ತಮ್ಮ ಆತ್ಮಕಥೆ 'ಸಾಲಮೇಳದ ಸಂಗ್ರಾಮ'ದಲ್ಲಿ ತೆರೆದಿಟ್ಟ ಸ್ಫೋಟಕ ಸತ್ಯ.
ಶುದ್ಧ ಚಾರಿತ್ರ್ಯದ ರಾಜಕಾರಣಿ, ನೇರ ನಡೆನುಡಿಯ ವ್ಯಕ್ತಿತ್ವ, ನಿಷ್ಠುರವಾದಿ, ರಾಷ್ಟ್ರ, ರಾಜ್ಯದಲ್ಲೇ ಪಕ್ಷನಿಷ್ಠೆ ಪ್ರಾಮಾಣಿಕ ಎಂದೇ ಹೆಸರು ಸಂಪಾದಿಸಿದ ಕೇಂದ್ರದ ಮಾಜಿ ವಿತ್ತ ಸಹಾಯಕ ಸಚಿವ ಜನಾರ್ದನ ಪೂಜಾರಿ ಅವರ ಆತ್ಮಕಥೆ 'ಸಾಲ ಮೇಳದ ಸಂಗ್ರಾಮ' ಶುಕ್ರವಾರ ಲೋಕಾರ್ಪಣೆಗೊಂಡಿದೆ.
ಅತ್ಯಂತ ಕುತೂಹಲ ಕೆರಳಿಸಿದ್ದ ಸಾಲಗ್ರಾಮ ಲಕ್ಷ್ಮಣ ಕೊಡಸೆ, ಹರಿಕೃಷ್ಣ ಬಂಟ್ವಾಳ್ ಸಂಪಾದಕತ್ವದಲ್ಲಿ ಸಂಗ್ರಾಮ ಕ್ರೌನ್ ಒನ್ ಫೋರ್ಥ್ ಸೈಝ್‌ನ 216 ಪುಟಗಳ ಗ್ರಂಥದೊಳಗೆ ರಾಜ್ಯ ರಾಜಕಾರಣಕ್ಕಿಂತ ರಾಷ್ಟ್ರ ರಾಜಕೀಯ ಬದುಕಿನ ಬಗ್ಗೆಯೇ ಹೆಚ್ಚು ಪ್ರಸ್ತಾಪಿಸಿದ ಪೂಜಾರಿಯವರು ಬದುಕಿನ ಸಿಹಿ ಕಹಿಗಳ ಅನುಭವಗಾಥೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಪೂಜಾರಿಯವದ ಬಾಲ್ಯದ ಬಡತನದಿಂದ ಹಿಡಿದು ಪ್ರಸ್ತುತ ರಾಜಕೀಯ ವಿದ್ಯಮಾನಗಳೆಲ್ಲವನ್ನೂ ಪೂಜಾರಿಯವರು ತಮ್ಮ ಆತ್ಮಕಥನದಲ್ಲಿ ತೆರೆದಿಟ್ಟಿದ್ದಾರೆ. ಮೌಲ್ಯಗಳು ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪೂಜಾರಿಯವರ ಆತ್ಮಕಥನ ಹಳ್ಳಿಮನೆಯ ಚೇತನವೊಂದು ದಿಲ್ಲಿಯವರೆಗೆ ಬೆಳೆದ ಪರಿಯನ್ನು ತೆರೆದಿಟ್ಟಿದೆ. ಚಾರಿತ್ರ್ಯವಂತ ರಾಜಕಾರಣಿಯಲ್ಲಿರಬೇಕಾದ ಸ್ವಾಭಿಮಾನ, ಆತ್ಮಗೌರವ ಬಗ್ಗೆ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ.
ಮನ್‌ಮೋಹನ್ ಸಿಂಗ್‌ರನ್ನೇ ತರಾಟೆ: ಪಿ.ವಿ. ನರಸಿಂಗ್ ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು. ಒಮ್ಮೆ ನಾನು ನರಸಿಂಹರಾವ್ ಜತೆ ಇದ್ದಾಗ ಮನಮೋಹನ್ ಸಿಂಗ್ ಅವರು ಬಂದರು. ಅವರನ್ನು ನೋಡುತ್ತಲೇ ನಾನು 'ಈ ಮನುಷ್ಯನ ಮಾತು ಕೇಳಿದರೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ' ಎಂದು ಪ್ರಧಾನಿ ಅವರಿಗೆ ಹೇಳಿದ್ದನ್ನು ಕಂಡ ಮನಮೋಹನ್ ಸಿಂಗ್ ಕೋಪದಿಂದ 'ಮತ್ತೆ ಸಾಲ ಮೇಳ ಮಾಡಬೇಕಿತ್ತೇ?' ಎಂದು ವ್ಯಂಗ್ಯವಾಡಿದ್ದರು. ಮನ ಮೋಹನ್ ಸಿಂಗ್ ವ್ಯಂಗ್ಯದ ಮಾತು ಕೇಳಿ ಮೈ ಉರಿಯಿತು. 'ಮಿ.ಸಿಂಗ್ ನಾನು ಸಾಲ ಮೇಳ ಮಾಡಿದ್ದರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅದಿಲ್ಲದಿದ್ದರೆ ಪಕ್ಷ ಸಂಪೂರ್ಣ ನಾಶ ಆಗುತ್ತಿತ್ತು. ಅದು ನಿಮ್ಮ ಗಮನದಲ್ಲಿರಲಿ' ಎಂದು ಬಿರುಸಾಗಿಯೇ ಹೇಳಿ. ಬಳಿಕ ನರಸಿಂಹರಾವ್ ನನ್ನನ್ನು ಸಮಾಧಾನಪಡಿಸಿದರು.
ಸೋತ ಪ್ರಣಬ್ ಮಂತ್ರಿಯಾದರು ! ನಾನು ಎಂಪಿಯಾಗಿ ಮೂರು ವರ್ಷ ಆಗಿರಲಿಲ್ಲ. ಆಗಲೇ ಇಂದಿರಾಗಾಂಧಿ ಅವರಿಗೆ ಆಪ್ತನಾಗಿದ್ದೆ. ಪಶ್ಚಿಮಬಂಗಾಳದಲ್ಲಿ ಪ್ರಣಬ್ ಮುಖರ್ಜಿ ಸೋತರು. ಅವರು ವಿತ್ತ ಸಚಿವರಾಗಿದ್ದವರು. ಚುನಾವಣೆಯಲ್ಲಿ ಸೋತ ಬಳಿಕ ನನಗೆ ಕರೆ ಮಾಡಿ ಬರಲು ಹೇಳಿದರು. ಸೋಲಿನ ಬಗ್ಗೆ ಹತಾಶೆ ಭಾವನೆ ವ್ಯಕ್ತಪಡಿಸಿದ್ದಕ್ಕೆ 'ಸೋತವರು ಕ್ಯಾಬಿನೆಟ್ ಸೇರಬಹುದಲ್ಲಾ ಎಂದೆ. ಆದರೆ ಇಂದಿರಾ ಗಾಂಧಿಗೆ ಯಾರು ಹೇಳೋದು ಎಂದರು. ನಾನೇ ಹೇಳುತ್ತೇನೆ ಅಂದೆ.
ಆ ಬಳಿಕ ನೇರ ಇಂದಿರಾ ಗಾಂಧಿ ಮನೆಗೆ ಹೋಗಿ 'ಪ್ರಣಬ್ ನಿಮ್ಮ ನಂಬಿಗಸ್ಥರು. ಚಿಕ್ಕಮಗಳೂರು ಚುನಾವಣೆಗೆ ದುಡಿದಿದ್ದಾರೆ. ಅವರನ್ನು ಕ್ಯಾಬಿನೆಟ್‌ಗೆ ಸೇರಿಸಿ' ಎಂದೆ. ಅದಕ್ಕೆ ಇಂದಿರಾಜೀ 'ಅವರು ಸೋತವರು' ಎಂದು ಹೇಳಿದ್ದಕ್ಕೆ 'ಸೋತವರನ್ನು ನೀವೇ ಹಿಂದೆ ಮಂತ್ರಿ ಮಾಡಿದ್ದೀರಿ' ಎಂದು ನೆನಪು ಮಾಡಿಕೊಟ್ಟೆ. ನನಗೆ ಮಂತ್ರಿ ಪದವಿ ಬೇಡ, ಅವರಿಗೆ ನೀಡಿ ಎಂದು ಕಾಲಿಗೆ ಬಿದ್ದೆ. ಅದಕ್ಕೆ ತಕ್ಷಣ ತಬ್ಬಿಬ್ಬಾದ ಇಂದಿರಾಜೀ 'ಎದ್ದೇಳಿ, ಅವರಿಗೆ ತಯಾರಾಗಲು ಹೇಳಿ'ಎಂದು. ಅದನ್ನು ಪ್ರಣಬ್ ಅವರಿಗೆ ಹೇಳಿದೆ.
ಐತಿಹಾಸಿಕ ಮೇಡನ್ ಸ್ಪೀಚ್ : 1977ರಲ್ಲಿ ಕಾಂಗ್ರೆಸ್ ಸೋತು ಜಯಪ್ರಕಾಶ್ ನಾರಾಯಣ ನೇತೃತ್ವದ ಜನತಾ ಪಾರ್ಟಿ ಅಧಿಕಾರದಲ್ಲಿತ್ತು. ಪಾರ್ಲಿಮೆಂಟ್‌ನಲ್ಲಿ ಎಲ್ಲರೂ ಇಂದಿರಾಗಾಂಧಿಯವರನ್ನು ಟೀಕೆ ಮಾಡುತ್ತಿದ್ದರು. ಆಡಳಿತ ಪಕ್ಷದ ಟೀಕೆಗೆ ಕಾಂಗ್ರೆಸ್‌ನವರು ಒಬ್ಬರೂ ಎದುರು ಮಾತನಾಡುತ್ತಿರಲಿಲ್ಲ. ಪಾರ್ಲಿಮೆಂಟ್‌ನಲ್ಲಿ ಒಂದು ನಿಯಮವಿತ್ತು, ಈಗಲೂ ಇದೆ. ಮೇಡನ್ ಸ್ಪೀಚ್ ಎಂಬ ನಿಯಮದಡಿ ಎಷ್ಟು ಬೇಕಾದರೂ ಮಾತನಾಡಬಹುದು. ಹೊಸದಾಗಿ ಆಯ್ಕೆಯಾದ ಸದಸ್ಯರಿಗಿದ್ದ ಅವಕಾಶ ಇದು. ಆಗ ಕೆ.ಎಸ್. ಹೆಗ್ಡೆ ಸ್ಪೀಕರ್. ಮೇಡನ್ ಸ್ಪೀಚ್‌ನಲ್ಲಿ ನಾನು ಮಾತನಾಡುತ್ತೇನೆಂದು ಹೇಳಿದೆ. 45ನಿಮಿಷಗಳ ಕಾಲ ಇಂದಿರಾಗಾಂಧಿ ಸಮರ್ಥಿಸಿ ಮಾತನಾಡಿದೆ. ಇಡೀ ಪಾರ್ಲಿಮೆಂಟ್ ನಿಶ್ಶಬ್ದವಾಗಿತ್ತು. ಎಲ್ಲರೂ ಮೇಜಿ ಕುಟ್ಟಿ ಸ್ವಾಗತಿಸಿದರು. ಸ್ಟೀಫನ್ ವಿರೋಧ ಪಕ್ಷದ ನಾಯಕರು. ಅವರು ಬಂದು 'ನೀವು ಅತ್ಯುತ್ತಮ ವಾಗ್ಮಿ' ಎಂದು ಹೇಳಿ ಅಪ್ಪಿಕೊಂಡರು. ಅಂದು ನಾನು ಮಾಡಿದ ಮೇಡನ್ ಸ್ಪೀಚ್ ಈಗಲೂ ಪಾರ್ಲಿಮೆಂಟ್ ಪ್ರೊಸಿಡಿಂಗ್‌ನಲ್ಲಿದೆ. ಇಂದಿರಾಗಾಂಧಿ ಆಗ ಎಂಪಿ ಆಗಿರಲಿಲ್ಲ. ಆದರೆ ಅವರಿಗೆ ವಿಚಾರವನ್ನು ಕೇಳಿ ತಿಳಿದುಕೊಂಡರು.
ದೇವೇಗೌಡರ ವಚನಭಂಗ : 1996ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ, ಬಹುಮತವಿರಲಿಲ್ಲ. ಬಿಜೆಪಿಯವನ್ನು ದೂರವಿಟ್ಟು ಸಂಯುಕ್ತ ರಂಗದ ಮುಖಂಡರು ಕಾಂಗ್ರೆಸ್ ಬೆಂಬಲ ಪಡೆದು ಸರ್ಕಾರ ರಚಿಸಲು ಮುಂದೆ ಬಂದರು. ದೇವೇಗೌಡರು ಆಗ ಕರ್ನಾಟಕ ಮುಖ್ಯಮಂತ್ರಿಯಾಗಿದ್ದು ಅವರ ನೇತೃತ್ವದ ಜನತಾ ದಳದಿಂದ ಹೆಚ್ಚು ಸಂಖ್ಯೆಯ ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಸಂಯುಕ್ತ ರಂಗದ ಮುಖಂಡರು ದೇವೇಗೌಡರನ್ನು ಮುಖಂಡರನ್ನಾಗಿ ಆಯ್ಕೆ ಮಾಡಿದರು. ಬಳಿಕ ನನ್ನನ್ನು ಭೇಟಿಯಾದ ದೇವೇಗೌಡರು 'ನಾನು ಕರ್ನಾಟಕದ ಮಣ್ಣಿನ ಮಗ. ಪ್ರಧಾನಿಯಾಗುವ ಅವಕಾಶ ಬಂದಿದೆ. ಅದು ನಿಮ್ಮಿಂದ ಸಾಧ್ಯವಿದೆ' ಎಂದು ಹೇಳಿದರು. ಅದಕ್ಕೆ ಒಂದು ಕಂಡೀಷನ್ ಇದೆ ಎಂದದಕ್ಕೆ ಏನು ಎಂದು ಕೇಳಿದರು. ನೀವು ಪ್ರಧಾನಿಯಾದ ಒಂದು ತಿಂಗಳೊಳಗೆ ಕುದ್ರೋಳಿ ದೇವಸ್ಥಾನಕ್ಕೆ ಬರಬೇಕು ಎಂದು ಹೇಳಿದ್ದರೆ. ಅದಕ್ಕೆ ದೇವೇಗೌಡರು ಒಪ್ಪಿದರು. ಆದರೆ ದೇವೇಗೌಡರು ಮಾತ್ರ ಹೇಳಿದ ಮಾತು ಉಳಿಸದೆ ವಚನಭಂಗ ಮಾಡಿದರು.
ಬೆಂಚು ತಂದ ಆಸ್ಕರ್ ಸಂಸದ ! 1980ರಲ್ಲಿ ಲೋಕಸಭೆ ಚುನಾವಣೆ ಬಂದಾಗ ಆಸ್ಕರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ಅಲ್ಲಿಗೆ ನಾನು ಹೋದಾಗ ಸಭೆ ಭರ್ತಿ ಆಗಿತ್ತು. ಸಣ್ಣ ಹಾಲ್, ಹಿರಿಯರೆಲ್ಲ ನಿಂತಿದ್ದರು. ಯಾರಾದರೂ ಚೇರ್ ತನ್ನಿ ಎಂದು ಹೇಳುವಷ್ಟರಲ್ಲಿ, ಆಸ್ಕರ್ ಎಲ್ಲೋ ರಸ್ತೆ ದಾಟಿ ಓಡಿ ಹೋಗಿ ಬೆಂಚನ್ನು ತಂದು ಇಟ್ಟರು. ಇವರೇ ನಿಜವಾದ ಫೀಲ್ಡ್ ವರ್ಕರ್ ಎಂದು ಗೊತ್ತಾಯಿತು.
ಉಡುಪಿಯಲ್ಲಿ ಟಿಎಪೈ ಕಾಂಗ್ರೆಸ್ ಬಿಟ್ಟು ಹೋಗಿದ್ದು, ಅವರ ವಿರುದ್ಧ ನಿಲ್ಲಲು ಅಭ್ಯರ್ಥಿ ಬೇಕಿತ್ತು. ಈ ಬಗ್ಗೆ ಇಂದಿರಾಗಾಂಧಿ ಬಳಿ ಆಸ್ಕರ್ ಅವರಲ್ಲಿ ಹೆಸರು ಪ್ರಸ್ತಾಪ ಮಾಡಿದೆ. ಇದೇ ವೇಳೆ ದೆಹಲಿಯಲ್ಲಿ ಪಾರ್ಲಿಮೆಂಟ್ ಬೋರ್ಡ್ ಸಭೆ ನಡೆಯುತ್ತಿತ್ತು. ಏಳು ಮಂದಿ ಸದಸ್ಯರಲ್ಲಿ ಗುಂಡೂರಾಯರು ಒಬ್ಬರು. ರಾಜ್ಯದಿಂದ ಅವರೊಬ್ಬರೇ ಬೋರ್ಡ್‌ನಲ್ಲಿದ್ದರು. ಇಂದಿರಾಗಾಂಧಿಗೂ ಆಪ್ತರು. ಉಡುಪಿ ಕ್ಷೇತ್ರಕ್ಕೆ ವಿಚಾರಕ್ಕೆ ಬಂದಾಗ ಕೆ.ಜೆ. ಜಾರ್ಜ್ ಹೆಸರು ಪ್ರಸ್ತಾಪವಾಯಿತು. ಆಗ ಇಂದಿರಾಗಾಂಧಿ 'ಪೂಜಾರಿ ಆಸ್ಕರ್ ಹೆಸರು ಹೇಳಿದ್ದಾರೆ' ಎಂದಾಗ ಸಿಡಿಮಿಡಿಗೊಂಡ ಗೂಂಡುರಾಯರು ಸಭೆ ಹೊರಗೆ ಬಂದು ನನ್ನಲ್ಲಿ 'ಏನ್ರೀ ನೀವು? ಆಸ್ಕರ್ ಫರ್ನಾಂಡೀಸ್ ಅವರನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ಹೇಳ್ತೀರಲ್ಲ, ಟಿಎಪೈ ಏಜೆಂಟ್ ಅವರು' ಎಂದರು. ಆದರೆ ನಾನು ಸಮರ್ಥನೆ ಮಾಡಿದರು. ಆಗ ಗುಂಡೂರಾಯರು 'ನೋಡಿ ಪೂಜಾರಿಯವರೇ, ನೀವು ನನ್ನ ಕ್ಷೇತ್ರದವರು. ನಿಮ್ಮ ಓಟರ್ ನಾನು. ನಿಮ್ಮನ್ನು ಏನು ಮಾಡ್ತೇನೆ ನೋಡಿ. ರಾಜಕೀಯವಾಗಿ ಮುಗಿಸುತ್ತೇನೆ' ಎಂದು ಗುಡುಗಿದರು. ಚುನಾವಣೆ ನಡೆಯಿತು, ಆಸ್ಕರ್ ಗೆದ್ದರು.
ಸಂಕಷ್ಟವೇ ಸಮಾಜಮುಖಿಯಾಗಿಸಿತು : ಪೂಜಾರಿ ಬದುಕಿನ ಮನಕಲಕುವ ಘಟನಾವಳಿಗಳ ಬಗ್ಗೆಯೂ ಈ ಗ್ರಂಥ ಆದ್ರ್ರವಾಗಿ ಬಯಲಾಗಿಸಿದ್ದಾರೆ. ಬದುಕು ಕಟ್ಟಿಕೊಳ್ಳುವುದಕ್ಕಾಗಿ ನಡೆಸಿದ ಹೋರಾಟ, ಕೆಲಸ ಕೇಳುವುದಕ್ಕಾಗಿ ಪಟ್ಟ ಪಡಿಪಾಟಲುಗಳನ್ನೂ ಅಕ್ಷರವಾಗಿಸಿದ ರೈಲಿಗೆ ಸಿಲುಕಿ ಜೀವ ಕಳೆದುಕೊಳ್ಳಬೇಕಾಗಿ ಬಂದಿದ್ದ ಸಂದರ್ಭ ಅದಾರೋ ಅಪರಿಚಿತ ಹುಡುಗಿಯೊಬ್ಬಳು ರಕ್ಷಿಸಿದ್ದರೆ ಸಾಲಮೇಳದ ಯಶಸ್ಸಿನ ಹೊಟ್ಟೆ ಉರಿಯಿಂದ ರಾಜಕೀಯ ಕಾರಣಕ್ಕೆ ಪೂಜಾರಿ ಜೀವ ತೆಗೆಯುವುದಕ್ಕೆ ಹೊಂಚು ಹಾಕಿದಾಗ ಬೆಂಬಲಿಗರು ರಕ್ಷಣೆ ನೀಡಿದ್ದನ್ನೂ ಹೇಳಿಕೊಂಡಿದ್ದಾರೆ. ಸಾಲ ಸಂಗ್ರಾಮದ ವೇಳೆ ಬಿಸ್ಕೆಟ್ ತಿಂದು ದಿನ ಕಳೆದ ಕ್ಷಣಗಳನ್ನೂ ಕಣ್ಮುಂದೆ ನಿಲ್ಲಿಸಿದ್ದಾರೆ.
ಬಿಸ್ಕತ್ತು ತಿಂದು ಬದುಕಿದ್ದೆ: ಸಾಲ ಮೇಳ ಮಾಡಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿದ್ದಾಗ ಬಿಸ್ಕತ್ತು ಮಾತ್ರ ನನ್ನ ಆಹಾರವಾಗಿತ್ತು. ನನ್ನ ಕಾರಲ್ಲಿ ಕೂತವರಿಗೆ ನಾನೇ ಬಿಸ್ಕತ್ತು, ನೀರು ನೀಡುತ್ತಿದ್ದೆ. ಇಡೀ ದಿನ ಅದೇ ಆಹಾರ. ಎಂಪಿ, ಎಂಎಲ್‌ಎಗಳಿಗೆ ಇದರಿಂದ ಬಿಸಿಯಾಯಿತು. ಇಂದಿರಾ ಗಾಂಧಿಗೆ ದೂರು ನೀಡಿದರು. ಅರ್ಥ ಖಾತೆಯಿಂದ ತೆಗೆಯಬೇಕು ಎಂದು ಮನವಿ ಮಾಡಿದರು. ಆದರೂ ಇಂದಿರಾ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ.
ನಾಲ್ಕು ಬಾರಿ ಒಲಿದು ಬಂದ ಸಿಎಂ ಪಟ್ಟ ! ರಾಜ್ಯ ರಾಜಕಾರಣದಲ್ಲಿ ಪೂಜಾರಿ ಅವರಿಗೆ ಸಿಎಂ ಪಟ್ಟ ಒದಗದೇ ಇರುವ ಬಗ್ಗೆ ಅನೇಕರಲ್ಲಿ ಅನೇಕ ಬಗೆಯ ಪ್ರಶ್ನೆಗಳಿವೆ. ಪೂಜಾರಿ ಆ ಸಂದೇಹಕ್ಕೆ ಹೈಕಮಾಂಡ್ ಒತ್ತಾಯಕ್ಕೆ ಮಣಿಯದೆ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳದ ಬಗೆಯನ್ನು ವಿವರಿಸುತ್ತಲೇ ಇಲ್ಲಿ ಹೀಗೆ ಉತ್ತರಿಸಿದ್ದಾರೆ
'4 ಬಾರಿ ಮುಖ್ಯಮಂತ್ರಿಯಾಗುವ ಅವಕಾಶಗಳು ಬಂದಿದ್ದವು. ಮೊದಲ ಅವಕಾಶ ನೀಡುವಾಗಲೇ 'ಪಾರ್ಟಿ ಫಂಡ್' ಸಂಗ್ರಹಿಸಿ ಕೊಡುವ ಕಲೆ ನನಗೆ ಗೊತ್ತಿಲ್ಲ, ಅದು ಆಗುವ ಕೆಲಸವಲ್ಲ ಎಂಬ ಕಾರಣಕ್ಕೆ ಸಿಎಂ ಹುದ್ದೆಯನ್ನು ನಯವಾಗಿಯೇ ತ್ಯಜಿಸಿದೆ. ಮೊದಲ ಬಾರಿ ಸಿಎಂ ಪಟ್ಟ ಒಲಿದಾಗ ಆಗೊಲ್ಲ ಹೇಳಿದೆ. ರಾಮಕೃಷ್ಣ ಹೆಗಡೆ ಅವಕಾಶ ಲಭಿಸಿತು, ಗುಂಡೂರಾವ್ ಬಳಿಕ ಅವಕಾಶ ಒದಗಿತು. 1969ರಲ್ಲಿ ನಡೆದ ಚುನಾವಣೆಯಲ್ಲಿ ಅವಕಾಶ ಸಿಕ್ಕರೂ ಬಿಟ್ಟುಕೊಟ್ಟೆ, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು, ಭ್ರಷ್ಟಾಚಾರಕ್ಕೆ ಬಂಗಾರಪ್ಪ ತಲೆದಂಡವಾಗುವಾಗ ಅವಕಾಶ ಬಂತು. ಆದರೆ ನಾನು ಒಪ್ಪಲಿಲ್ಲ. ಅದೇ ಪೂಜಾರಿ ಅವರು ಇಂದಿರಾಗಾಂಧಿಯವರು ಪಾರ್ಟಿ ಫಂಡ್ ಬಯಸಿದಾಗ ಒಟ್ಟುಗೂಡಿಸುವಲ್ಲಿ ಶ್ರಮಿಸಿರುವಲ್ಲಿ ಪಾರ್ಟಿಯ ಹಿತದೃಷ್ಟಿ ಮುಖ್ಯದ್ದಾಗುತ್ತದೆ. ಆ ಬಗ್ಗೆ ಯೂ ಮಾಹಿತಿ ತೆರೆದಿಟ್ಟಿದ್ದು ಹೀಗೆ.
ಇಂದಿರಾಗಾಂಧಿ ಧರ್ಮಸ್ಥಳ ಗೆಸ್ಟ್ ಹೌಸ್‌ಗೆ ನನ್ನನ್ನು ಕರೆದು 'ಪೂಜಾರಿಜೀ ನಾನು ಚುನಾವಣಾ ಅಭ್ಯರ್ಥಿ. ಪ್ರಚಾರದ ಖರ್ಚಿಗೆ ದೇವರಾಜ ಅರಸು ಹಣ ಕೊಡುತ್ತಿಲ್ಲ' ಎಂದು ದೂರಿದರು. ಈ ಬಗ್ಗೆ ನಾನು ಇನ್ನೊಂದು ಗೆಸ್ಟ್‌ಹೌಸ್‌ನಲ್ಲಿದ್ದ ದೇವರಾಜ ಅರದು ಅವರಲ್ಲಿ ಕೇಳಿದಾಗ 'ನನ್ನ ಇಡೀ ಸರಕಾರವೇ ಅವರ ಹಿಂದೆ ಪ್ರಚಾರಕ್ಕೆ ನಿಂತಿದೆ. ಎಲ್ಲ ಖರ್ಚುಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ' ಎಂದು ಹೇಳಿ ತಪ್ಪಿಸಿಕೊಂಡರು. ಆದರೆ ಇಂದಿರಾಗಾಂಧಿ ಹೇಳಿದ ಮಾತು ನನ್ನ ಮನಸ್ಸು ಕೊರೆಯುತ್ತಿತ್ತು. ನೇರ ಮಂಗಳೂರಿಗೆ ಬಂದೆ, ನನ್ನ ಆಪ್ತರು, ಆರ್ಥಿಕವಾಗಿ ಸುದೃಢ ಇದ್ದವರನ್ನು ಕರೆದೆ. ಕಂಕನಾಡಿಯ ರಾಮಪ್ಪರೂ ಕೂಡಾ ಇದ್ದರು. 'ಇಂದಿರಾಗಾಂಧಿಯವರಿಗೆ ಚುನಾವಣೆಗೆ ಫಂಡ್ ಇಲ್ಲ ಅಂತ ಬಾಯಿ ಬಿಟ್ಟು ಕೇಳಿದ್ದಾರೆ. ನೀವು ಕಲೆಕ್ಷನ್ ಮಾಡಿ ಕೊಡಿ ಅಂತ ಕೇಳಿಲ್ಲ. ಆದರೆ ನಾವು ಒಟ್ಟು ಮಾಡಿಕೊಡುವುದು ಧರ್ಮ' ಎಂದೆ. ಅವರು ಒಟ್ಟು 90ಸಾವಿರ ರೂ. ಮಾಡಿದರು. ಆಗ ಅದು ದೊಡ್ಡ ಮೊತ್ತವಾಗಿತ್ತು. ಅದನ್ನು ಇಂದಿರಾಗಾಂಧಿಗೆ ಕೊಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದೆ. ಮತದಾನ ನಡೆದು, ಇಂದಿರಾಗಾಂಧಿ 77333ಮತದಿಂದ ಗೆದ್ದರು.
ಕುದ್ರೋಳಿಯಲ್ಲಿ ಭಾರಿ ಜನಸ್ತೋಮ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಅವರ ಆತ್ಮಕಥೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಒಂದು ರೀತಿಯಲ್ಲಿ ನವರಾತ್ರಿಯ ಸಂಭ್ರಮವನ್ನು ನೆನಪಿಸಿತ್ತು. ವಾಹನಗಳ ದಟ್ಟಣೆಯಿಂದ ಮುಖ್ಯ ಪ್ರವೇಶ ದ್ವಾರದಲ್ಲೇ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ದೇವಸ್ಥಾನದ ಪರಿಸರದ ಪಾರ್ಕಿಂಗ್ ಜಾಗ ಭರ್ತಿಯಾಗಿ ಕುದ್ರೋಳಿ ಅಳಕೆ ರಸ್ತೆಯ ಇಕ್ಕೆಲೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಜನಾರ್ದನ ಪೂಜಾರಿ ಆತ್ಮಕಥೆ ಪುಸ್ತಕ ಬಿಡುಗಡೆಗೂ ಮೊದಲು ಸಂಚಲನ ಸೃಷ್ಟಿಸಿದ್ದ ಕಾರಣಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ -viiajayakarnataka
0 comments: