Wednesday, January 24, 2018

ಬಿಲ್ಲವರ ಗುತ್ತು ಮನೆತನಗಳು : ಬಡಕೋಡಿ ದೇವಸ ಮನೆ

ಬೆಳ್ತಂಗಡಿಯ ಬಡಕೋಡಿ ಗ್ರಾಮದಲ್ಲಿ ಬಿಲ್ಲವರ ದೇವಸ ಮನೆ ಇದೆ. ದೇವಸ್ಥಾನಕ್ಕೆ ಉಂಬಳಿ ಬಿಟ್ಟ ಭೂಮಿಯನ್ನು ದೇವಸ ಅಥವಾ ದೇವಸ್ಯ ಮನೆ ಎಂದು ಹೇಳುತ್ತಾರೆ ಎಂಬ ಮಾಹಿತಿ ಇದೆ. ಬಡಕೋಡಿ ದೇವಸ ನಮಗೆ ಸಿಕ್ಕಿರುವ ಮೊದಲ ಬಿಲ್ಲವರ ಮನೆ.

ಮಹಾಬಲ ಪೂಜಾರಿಯವರು ಈ ದೇವಸ್ಯ ಮನೆಯ ಯಜಮಾನರು. ಈ ಮನೆತನದ ಭೂಮಿ ಪ್ರಾಚೀನ ಕಾಲದಲ್ಲಿ ಲಿಂಗಾಯುತರ ವಶದಲ್ಲಿ ಇದ್ದಿತು ಎನ್ನುವ ಹೇಳಿಕೆ ಇದೆ. ಆ ಕುಟುಂಬಕ್ಕೆ ಸಂತತಿ ಇಲ್ಲದಿದ್ದ ಕಾರಣ ಈಗಿನ ಬಿಲ್ಲವರ ಮನೆತನದ ಪೂರ್ವಜರಿಗೆ ಭೂಮಿ ಮತ್ತು ಮನೆಯನ್ನು ಕೊಟ್ಟು ಹೋದರಂತೆ. ಇದು ಗುಜರನ್ ಬಳಿಯವರ ಮೂಲಸ್ಥಾನ. ಹಿಂದಿನ ಕಾಲದಲ್ಲಿ ಮುಳಿ ಹುಲ್ಲಿನಿಂದ ಕೂಡಿದ್ದ ಸುತ್ತು ಮುದಲಿನ ಮನೆ ಇದಾಗಿತ್ತು. ೧೯೭೨ ರಲ್ಲಿ ಮನೆಯ ಮಾಡಿಗೆ ಹಂಚನ್ನು ಹೊದಿಸಲಾಗಿದೆ. ಈ ಮನೆತನಕ್ಕೆ ಸುಮಾರು ೪೦೦ ವರ್ಷಗಳ ಇತಿಹಾಸವಿರಬಹುದು ಎಂದು ಅಂದಾಜಿಸುತ್ತಾರೆ.

ನಾಪದ ಕಾಯಿ ಮರದ ಹಲಗೆಗಳಿಂದ ಮನೆಗೆ ಮುಚ್ಚಿಗೆ ಹಾಸಿದ್ದಾರೆ. ಉಪ್ಪರಿಗೆಯಲ್ಲಿ ಮಣ್ಣಿನ ನೆಲೆವಿದೆ. ಈ ಮನೆಗೆ ಉಪಯೋಗಿಸಿದ ನಾಪದ ಕಾಯಿಯ ಮರದ ಹಲಗೆಗಳಿಗೆ ಎಷ್ಟು ವರ್ಷಗಳು ಸಂದರೂ ಗೆದ್ದಲು ಹಿಡಿಯುವುದಿಲ್ಲವಂತೆ. ಅದು ಬಹಳ ಉತ್ಕೃಷ್ಟ ಮರವೆಂದು ಹೇಳುತ್ತಾರೆ. ಈ ಮನೆಗೆ ಸುಮಾರು ೪೦ ಎಕ್ರೆಯಷ್ಟು ಭೂಮಿ ಇತ್ತು. ಅದೆಲ್ಲಾ ಕುಟುಂಬದೊಳಗೆ ವಿಭಾಗವಾಗಿದೆ. ಈಗ ಸುಮಾರು ಏಳು ಎಕ್ರೆ ಜಮೀನು ಮನೆಯ ವಶದಲ್ಲಿದೆ. ಹಿಂದೆ ೧೦೦ ಕ್ಕೊ ಹೆಚ್ಚು ತಾಳೆ ಮರಗಳಿದ್ದವು. ಮನೆಯ ಹಿರಿಯರಾದ ಕಾಂತಪ್ಪ ಪೂಜಾರಿಯವರಿಗೆ ೧೯೭೩ ರಲ್ಲಿ ಆಳದಂಗಡಿ ಅರಮನೆಯಲ್ಲಿ ಗಡಿಪಟ್ಟವಾಗಿತ್ತು.

ಅದಕ್ಕೊ ಹಿಂದಿನವರು ಅಂದರೆ ಮೂಲದ ಗಡಿ ಆದವರು ಶಿವಪ್ಪ ಪೂಜಾರಿಯವರು. ಕಾಂತಪ್ಪ ಪೂಜಾರಿಯವರ ಕಾಲದಲ್ಲಿ ಈ ಮನೆಯಲ್ಲಿ ಊರಿನ ನ್ಯಾಯ ಪಂಚಾಯಿತಿ ನಡೆಯುತ್ತಿತ್ತು. ಈ ಮನೆತನದ ಬೋಗ್ರ ಪೂಜಾರಿಯವರು ಜಾನುವಾರುಗಳಿಗೆ ಔಷಧ ನೀಡುವುದರಲ್ಲಿ ಸುತ್ತಲ ಪರಿಸರದಲ್ಲಿ ಬಹಳ ಪ್ರಸಿದ್ದರಾಗಿದ್ದರು. ಹಸುಗಳ ಕಾಲು ತುಂಡಾದರೆ ಲೇಪ ಹಚ್ಚಿ ಜೋಡಿಸುತ್ತಿದ್ದರಂತೆ. ಆ ಲೇಪಕ್ಕೆ ಉಪಯೋಗಿಸುವ ಮರ ಇದೇ ಜಮೀನಿನಲ್ಲಿ ಇದೆ. ಅದರ ಹೆಸರೇನೆಂದು ಈ ಮನೆಯವರಿಗೆ ತಿಳಿದಿಲ್ಲ.

೧೯೭೨ ನೇ ಇಸವಿಯ ತನಕ ಈ ದೇವಸ ಮನೆ ಅವಿಭಕ್ತ ಕುಟುಂಬವಾಗಿತ್ತು. ಸುಮಾರು ೩೦ ಮಂದಿ ಕುಟುಂಬ ಸದಸ್ಯರು ಏಕತ್ರವಾಗಿ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿನ ದೇವಸ್ಯ ಮನೆಯ ಭೂತದ ಕಂಡ ಎಂಬ ಗದ್ದೆಯಲ್ಲಿ ಸುಗ್ಗಿ ತಿಂಗಳಲ್ಲಿ ಪರಿಶಿಷ್ಟ ವರ್ಗದ ಜನರು ಗದ್ದೆಗೆ ಇಳಿದು ಕಂಬಳದ ಸಂಪ್ರದಾಯ ನೆರೆವೇರಿಸುತ್ತಾರೆ. ಇವರಿಗೆ ದೇವಸ ಮನೆಯು ಕೊಡಮಣಿತ್ತಾಯ ದೈವ ಸೇವಾ ಪಾತ್ರಿಯ ಗೌರವವಿದೆ. ಈ ದೈವದ ಎಲ್ಲಾ ಸೇವೆಗಳಿಗೆ ಈ ಮನೆಯವರು ಸೇವಾಬದ್ಧರಾಗಿರಬೇಕು. ಈ ಮನೆಯಲ್ಲಿ ಕಾಳಾದ್ರಿ, ಪಂಜುರ್ಲಿ, ಕಲ್ಲುರ್ಟಿ, ಮಂತ್ರಜಾವದೆ, ಗುಳಿಗ, ಚಾಮುಂಡಿ-ಗುಳಿಗ, ಕುಪ್ಪೆಟ್ಟು ದೈವಗಳು, ಮುಂಡೂರು ಗುಳಿಗ ಮುಂತಾದ ೧೩ ದೈವಗಳಿವೆ.

ದೇವಸ ಮನೆಯ ಅಂಗಳದಲ್ಲಿ ಕೊನ್ನೊಟ್ಟು ಕಡ್ತ ಎಂಬ ದೈವದ ಕಲ್ಲು ಇದೆ. ಈ ಮನೆಯ ಕೆಲಸಕ್ಕೆ ಇದ್ದ ಕಡ್ತ ಎಂಬ ವ್ಯಕ್ತಿಯು ದೈವಗಳಿಗೆ ಬಿಟ್ಟ ಕೋಳಿಯನ್ನು ತಿಂದ ಪರಿಣಾಮ ಅವನು ಹುಲಿಯ ಬಾಯಿಗೆ ಸಿಕ್ಕಿ ಮರಣವನ್ನಪ್ಪತ್ತಾನೆ. ನಂತರ ಆತ ದೈವವಾಗಿ ಈ ಮನೆಯ ಅಂಗಳದಲ್ಲಿ ಮರದ ಬುಡದಲ್ಲಿ ನೆಲೆಸಿದ್ದಾನೆ. ಆತ ಕೊನ್ನೊಟ್ಟು ಎಂಬ ಊರಿನವನಾಗಿದ್ದರಿಂದ ಆತನನ್ನು ಕೊನ್ನೊಟ್ಟು ಕಡ್ತ ಎಂದು ಕರೆಯತ್ತಾರೆ. ಆತನ ಕಲ್ಲು ಮರದ ಬುಡದಲ್ಲಿದೆ. ಮನೆತನದಲ್ಲಿ ಏನಾದರೂ ಕಳ್ಳತನವಾದಾಗ ಈತನಿಗೆ ಹರಕೆ ಹೇಳಿಕೊಂಡರೆ ಅದು ಸಿಗುತ್ತದೆ ಎಂಬ ನಂಬಿಕೆ ಇದೆ.

ಮನೆಯಲ್ಲಿ ಬೃಹತ್ ಗಾತ್ರದ ಕಡೆಯುವ ಕಲ್ಲು ಇದೆ. ಇದು ಈ ಮನೆತನದ ಕೂಡು ಕುಟುಂಬದಲ್ಲಿ ಇದ್ದಂತಹ ಸದಸ್ಯರ ಸಂಖ್ಯೆಗೆ ಸಾಕ್ಷಿಯಾಗಿದೆ. ದೈವಗಳು ಇದ್ದಂತಹ ಹಳೆಯ ಕೋಣೆಯ ಒಳಗಡೆ ಬೃಹತ್ ಗಾತ್ರದ ಹುತ್ತ ಬೆಳೆದಿದ್ದು ಆ ಹುತ್ತುವನ್ನು ಈಗಲೂ ಕೆಡವದೆ ಹಾಗೆ ಇಟ್ಟಿದ್ದಾರೆ.

ಸಹಕಾರ :- Prashanth Salian Manjila guttu (ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ, ಸಂಕೇತ್ ಪೂಜಾರಿ) ಸಂಕೇತ್ ಪೂಜಾರಿ

0 comments: