ಅಲ್ಲಿಪಾದೆ ಜಂಕ್ಷನ್ ನ ಪಶ್ಚಿಮದ ಬದಿಯ ತಗ್ಗಿನ ರಸ್ತೆಯಲ್ಲಿ ದಕ್ಷಿಣಕ್ಕೆ ತಿರುಗಿ ಮುಂದೆ ಸಾಗಿದರೆ ಉಜ್ರಾಡಿ ಗುತ್ತು ಕಾಣಸಿಗುತ್ತದೆ. ಆವರಣವನ್ನು ಪ್ರವೇಶಿಸುವಾಗಲೇ ದೂರದಿಂದ ಗುತ್ತಿನ ನೋಟ ಕಾಣುತ್ತದೆ. ಇದು ಹಳೆಯ ಕಾಲದ ಅರಮನೆಯಂತೆ ಭವ್ಯವಾಗಿದೆ. ಕಂಬಳ ಗದ್ದೆ ದಾಟಿದರೆ ಎತ್ತರ ಪಡಿಪಿರೆ ಇದೆ. ಮುಖ ಮಂಟಪ ಇದೆ. ಮೆಟ್ಟಿಲೇರಿ ಒಳಹೊಕ್ಕರೆ ಮೊಗಸಾಲೆ ಇದೆ. ಅದರ ಒಳಗೆ ಪ್ರವೇಶಿಸಿದರೆ ಸುತ್ತುಮುದಲಿನ ಮನೆಯನ್ನು ಕಾಣುತ್ತೇವೆ. ಪೂರ್ವಕ್ಕೆ ಅಭಿಮುಖವಾದ ಚಾವಡಿ ವಿಶಾಲವಾಗಿದೆ. ಇದು ಕೋಟ್ಯಾನ್ ಬಳಿಯವರ ಮೂಲಸ್ಥಾನ. ಈಗ ಗುತ್ತಿನ ಯಜಮಾನರು ಶೀನ ಪೂಜಾರಿಯವರು.
ಈ ಗುತ್ತಿನ ಮನೆಗೆ ಸುಮಾರು 300 ವರ್ಷಗಳಾಗಿರಬಹುದು. ಸುಮಾರು 100 ಎಕ್ರೆ ಭೂಮಿ ಈ ಗುತ್ತಿಗೆ ಇತ್ತು. ಅಲ್ಲಿಪಾದೆ ಇಗರ್ಜಿಗೆ ಮತ್ತು ಶ್ರೀರಾಮ ಮಂದಿರಕ್ಕೆ ಭೂಮಿಯನ್ನು ಉಜ್ರಾಡಿ ಗುತ್ತಿನವರು ದಾನ ಮಾಡಿದ್ದಾರೆ. ಈ ಗುತ್ತಿನ ಮೂಲ ಪುರುಷ ಮುತ್ತಪ್ಪ ಪೂಜಾರಿ. ಅವರು ಬಹಳ ದೀಮಂತರು, ಜನಾನುರಾಗಿಯೂ ಆಗಿ ಬಾಳಿದವರು. ಗುತ್ತಿನಲ್ಲಿ ಅವರ ಕಾಲದಲ್ಲಿ ಧರ್ಮನೇಮವನ್ನು ಮಾಡಿಸಿದ್ದರು. ಈ ಮನೆತನದ ಐತಪ್ಪ ಪೂಜಾರಿ, ಕಾಂತಪ್ಪ ಪೂಜಾರಿ, ಬಾಲಪ್ಪ ಪೂಜಾರಿ ಮುಂತಾದವರು ಒಂದಲ್ಲ ಒಂದು ಒನಹಿತ ಕಾರ್ಯಗಳಿಂದ ಪ್ರಸಿದ್ಧರಾದವರು. ಕಾಂತಪ್ಪ ಪೂಜಾರಿಯವರು ಕಳೆದ ಶತಮಾನದಲ್ಲಿ ಕುದ್ರೋಳಿ ದೇವಸ್ಥಾನದ ಸ್ಥಾಪನೆ ಆಗುತ್ತಿದ್ದ ಕಾಲದಲ್ಲಿ ಅದಕ್ಕೆ ಬಹಳ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ದೈವದ ಭಂಡಾರಮನೆಯಲ್ಲಿ ಅರಸು ದೈವ, ಮೈಸಂದಾಯ, ಕಲ್ಲುರ್ಟಿ, ಕೊಡಮಣಿತ್ತಾಯ, ಕುಪ್ಪೆಟ್ಟು ಪಂಜುರ್ಲಿ, ಕೊರಗ ಬೈದ್ಯ, ಮತ್ತು ಜಾಗದ ಪಂಜುರ್ಲಿ ದೈವಗಳಿವೆ. ಗ್ರಾಮ ದೈವ ಪೆರಿಯಪಾದೆ ಅರಸು ದೈವದ ಭಂಡಾರ ಈ ಗುತ್ತಿನಲ್ಲಿದ್ದು ನೇಮವಾಗುವಾಗ ಇಲ್ಲಿಂದ ಭಂಡಾರ ಇಳಿದು ಹೋಗುತ್ತದೆ. ಮಂಚದಲ್ಲಿ ಉದ್ದದ ಬಿರು ಪಗರಿಗಳಿವೆ. ಹಾಗೆ ಕಿರುವಾಳು ಕಡ್ತಲೆಗಳಿವೆ. ಹತ್ತಿರದಲ್ಲೇ ಕುಟುಂಬದ ನಾಗ ಬನವಿದೆ. ಈ ಗುತ್ತಿನಲ್ಲಿ ಹಳೆಯ ಕಾಲದ ಕೆಲವು ವಸ್ತುಗಳಿಗೆ.1946 ನೇ ಇಸವಿಯ ಮರದ ಕಪಾಟು ಮತ್ತು ದೊಡ್ಡ ಕಲೆಂಬಿ ಇದೆ. ಉತ್ತರದಲ್ಲಿ ಮುಕ್ತ ಜಾಗವಿದೆ. ಅದರ ಪೂರ್ವದಲ್ಲಿ ಒಂದು ಮುಚ್ಚಿದ ಬಾಗಿಲ ಕೋಣೆ ಇದೆ. ಅದರ ತಳ ಅಂತಸ್ತಿನಲ್ಲಿ ಒಂದು ರಹಸ್ಯ ಕೋಣೆ ಇದೆ. ಹಳೆಯ ವೈಭವದ ಸಾಕ್ಷಿಯಾಗಿ ಈ ಗುತ್ತು ಕೆಲವೊಂದು ವಸ್ತುಗಳನ್ನು ಉಳಿಸಿಕೊಂಡಿದೆ.
(ಆಕರ - ಗರುತು. ಬಿಲ್ಲವರ ಗುತ್ತುಗಳು . ಮಾಹಿತಿ ಸಂಗ್ರಹ ಮತ್ತು ಗ್ರಂಥ ಸಂಪಾದಕರುಗಳು- ಬಾಬು ಶಿವ ಪೂಜಾರಿ, ಬಿ.ಎಂ ರೋಹಿಣಿ, ರಮಾನಾಥ್ ಕೋಟೆಕಾರ್, ಮುದ್ದು ಮೂಡುಬೆಳ್ಳೆ. . ಸಹಕಾರ ಬಿ. ತಮ್ಮಯ್ಯ.) ಸಂಕೇತ್ ಪೂಜಾರಿ
0 comments: